ನೌಕುಚಿಯತಲ್ ಎನ್ನುವುದು ಉತ್ತರ್ ಖಂಡ್ ರಾಜ್ಯದಲ್ಲಿನ ನೈನಿತಾಲ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಇದು ತನ್ನಲ್ಲಿರುವ ಕೆರೆಗೆ ಖ್ಯಾತಿ ಪಡೆದಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಪ್ರವಾಸಿ ತಾಣವು ಸಮುದ್ರ ಮಟ್ಟದಿಂದ 1219 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಕೆರೆಯ ಸೌಂದರ್ಯ ಮತ್ತು ಇಲ್ಲಿ ಕೈಗೊಳ್ಳಲಾಗುವ ಸಾಹಸ ಚಟುವಟಿಕೆಗಳು ನೌಕುಚಿಯತಲ್‍ನ್ನು ಒಂದು ಸೂಕ್ತ ರಜಾ ದಿನಗಳನ್ನು ಕಳೆಯುವ ತಾಣವನ್ನಾಗಿ ಮಾಡಿವೆ.
ಈ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪಕ್ಷಿಗಳು ಮತ್ತು ಚಿಟ್ಟೆಗಳು ಕಂಡು ಬರುತ್ತವೆ. ಹಾಗಾಗಿ ಪಕ್ಷಿ ವೀಕ್ಷಣೆಯು ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಚಟುವಟಿಕೆಯಾಗಿದೆ. ಪ್ರವಾಸಿಗರು ಇಲ್ಲಿ ದೋಣಿ ಯಾನ, ಈಜು ಮತ್ತು ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳನ್ನು ಈ ಹಳ್ಳಿಯಲ್ಲಿ ಕೈಗೊಳ್ಳಬಹುದು. ಇದೆಲ್ಲದರ ಹೊರತಾಗಿ ಈ ಹಳ್ಳಿಯಲ್ಲಿ ಮೌಂಟೇನ್ ಬೈಕಿಂಗ್ ಚಟುವಟಿಕೆಯನ್ನೂ ಕೈಗೊಳ್ಳಬಹುದು. ಈ ಚಟುವಟಿಕೆಯು ನೌಕುಚಿಯತಲ್‍ನ ಜನ ಓಡಾಡದ ಸ್ಥಳಗಳ ಪರಿಚಯವನ್ನು ಪ್ರವಾಸಿಗರಿಗೆ ನೀಡುತ್ತದೆ. ಈ ಕಾರಣದಿಂದಾಗಿಯು ಸಹ ಈ ಹಳ್ಳಿಯು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ನೌಕುಚಿಯತಲ್ ಕೆರೆಯನ್ನು "ಒಂಬತ್ತು ಮೂಲೆಗಳಿರುವ ಕೆರೆ" ಎಂದು ಸಹ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ, ಈ ಕೆರೆಯ ಒಂಬತ್ತು ಮೂಲೆಗಳನ್ನು ಯಾರು ನೋಡುತ್ತಾರೋ, ಅವರು "ನಿರ್ವಾಣ"ವನ್ನು ಪಡೆಯುತ್ತಾರಂತೆ. ನಿರ್ವಾಣ ಎಂದರೆ ಮೋಕ್ಷ ಎಂಬರ್ಥವಾಗುತ್ತದೆ. ಭೂಮಿಯ ಅಂತರಾಳದಲ್ಲಿ ಹರಿಯುವ ಝರಿಯು ಈ ಕೆರೆಯಲ್ಲಿನ ನೀರಿನ ಮಟ್ಟವನ್ನು ವರ್ಷಪೂರ್ತಿ ಒಂದೆ ಮಟ್ಟದಲ್ಲಿ ಕಾಪಾಡಿಕೊಂಡು ಬರುತ್ತದೆ. ಪ್ರವಾಸಿಗರು ನೌಕುಚಿಯತಲ್ ಕೆರೆಯಲ್ಲಿ ದೋಣಿ ವಿಹಾರ ಮಾಡಬಹುದು ಮತ್ತು ಕೆರೆಯ ಅಕ್ಕ ಪಕ್ಕ ಪ್ಯಾರಾಗ್ಲೈಡಿಂಗ್ ಮಾಡಬಹುದು. ಇಲ್ಲಿನ ಮತ್ತೊಂದು ಪ್ರಸಿದ್ಧ ಪ್ರದೇಶವಾದ ಭೀಮ್‍ತಲ್ ಇಲ್ಲಿಂದ 4 ಕಿ.ಮೀ ದೂರದಲ್ಲಿದ್ದು, ಕೆರೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಸಾತ್ ತಲ್ ಎಂಬುದು ಸಹ ಇಲ್ಲಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ. ಇದು ಅಂತರ್ ಸಂಪರ್ಕವನ್ನು ಹೊಂದಿರುವ ಏಳು ಕೆರೆಗಳನ್ನು ಹೊಂದಿರುವ ಸ್ಥಳವಾಗಿದೆ. ಇದು ನೌಕುಚಿಯತಲ್‍ನಿಂದ 6 ಕಿ.ಮೀ ದೂರದಲ್ಲಿದೆ.
ಈ ಕೆರೆಯ ಹಳ್ಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಪಂತನಗರ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಕಠ್‍ಗೋಡಂ ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದರ ಜೊತೆಗೆ ನೌಕುಚಿಯತಲ್‍ಗೆ ನೈನಿತಾಲ್‍ನಿಂದ ಹಲವಾರು ಬಸ್ಸುಗಳು ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಮಳೆಗಾಲದ ನಂತರದ ದಿನಗಳಲ್ಲಿ ಈ ಹಳ್ಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುತ್ತಿರುತ್ತಾರೆ. ಈ ಅವಧಿಯು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಅವಧಿ ಎಂದು ಪರಿಗಣಿಸಲಾಗಿದೆ.


Click it and Unblock the Notifications