ದುರ್ಗಿಯಾನ ಮಂದಿರದ ವಾಯವ್ಯ ಮೂಲೆಯಲ್ಲಿ ಹನುಮಾನ ಮಂದಿರವಿದೆ. ಇದು ಹಿಂದೂಗಳು ಭೇಟಿ ಕೊಡಲೇಬೇಕಾದ ಮಂದಿರ. ಈ ಮಂದಿರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಈ ಸುಂದರವಾದ ಮಂದಿರವಿರುವ ಸ್ಥಳದಲ್ಲಿ ಶ್ರೀರಾಮನು ಅಶ್ವಮೇಧ ಯಾಗ ಮಾಡಿದ್ದ ಎಂಬ ಪ್ರತೀತಿಯಿದೆ. ಈ ಗುಡಿ ಭಕ್ತರು ಮಾಡುವ ಲಂಗೂರ್ ನೃತ್ಯಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಇದನ್ನು ಲಂಗೂರ್ ವಾಲಾ ಮೇಳದ ಸಂದರ್ಭದಲ್ಲಿ ಭಕ್ತಾದಿಗಳು ಲಂಗೂರ್ ಡಾನ್ಸ್ ಮಾಡುತ್ತಾರೆ.
ಈ ಮಂದಿರ ಬಾರಾ ಹನುಮಾನ ಮಂದಿರವೆಂದೇ ಜನಪ್ರಿಯತೆ ಗಳಿಸಿದೆ. ಬೃಹತ್ತಾದ ಕುಳಿತ ಭಂಗಿಯಲ್ಲಿರುವ ಹನುಮಾನನ ಪ್ರತಿಮೆ ಆಕರ್ಷಕವಾಗಿದೆ. ಇಲ್ಲಿರುವ ಭಕ್ತರ ಪ್ರಕಾರ, ಪ್ರತಿನಿತ್ಯ ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದರಿಂದ ಎಲ್ಲ ಇಚ್ಛೆಗಳು ಪೂರೈಸುತ್ತವೆ ಎಂಬ ನಂಬಿಕೆಯಿದೆ. ದಂಪತಿಗಳು ಬಂದು ಮಂದಿರದ ಆವರಣದಲ್ಲಿರುವ ದೊಡ್ಡ ಆಲದ ಮರಕ್ಕೆ ಗಂಡು ಸಂತಾನದ ಹರಕೆ ಹೊತ್ತು ದಾರವನ್ನು ಕಟ್ಟುತ್ತಾರೆ. ಅವರ ಇಚ್ಛೆ ಪೂರೈಸಿದ ನಂತರ ನವರಾತ್ರಿಯ ಸಂದರ್ಭದಲ್ಲಿ ತೆಗೆಯುತ್ತಾರೆ. ಗಂಡು ಮಗುವಿಗೆ ಲಂಗೂರ್ ನಂತೆ ದಿರಿಸನ್ನು ತೊಡಿಸಿ ಒಂಬತ್ತು ದಿನಗಳ ನಂತರ ನವರಾತ್ರಿ ಮುಗಿಯುತ್ತಿದ್ದಂತೆ ಆ ದಿರಿಸನ್ನು ಆಲದ ಮರದ ಬಳಿ ಕಳಚುತ್ತಾರೆ.