ಮನಾಲಿಗೆ ಬರುವ ಬಹುತೇಕ ಪ್ರವಾಸಿಗರು ಇಷ್ಟಪಟ್ಟು ಪಾಲ್ಗೊಳ್ಳುವ ಕ್ರೀಡೆ ರಿವರ್ ರಾಫ್ಟಿಂಗ್. ಮನಾಲಿ ಭಾಗದಲ್ಲಿ ಜನರಿಗೆ ವಿಪರೀತ ಥ್ರಿಲ್ ನೀಡುವ ಕ್ರೀಡೆಯೂ ಇದೇ ಆಗಿದೆ. ಹಿಮಾಲಯದ ಬಹುತೇಕ ಎಲ್ಲಾ ತೊರೆ, ಹೊಳೆಯ ನೀರನ್ನು ಸೇರಿಸಿಕೊಂಡು ಹರಿಯುವ ಬಿಯಸ್ ನದಿ ಈ ರಿವರ್ ರಾಫ್ಟಿಂಗ್ಗೆ ಅತ್ಯಂತ ಪ್ರಶಸ್ತ ವಾತಾವರಣ ಹೊಂದಿದೆ. ಇಲ್ಲಿನ ಮಂಕಿಯಿಂದ ಜೀರಿವರೆಗಿನ ಸಂಚಾರ ಅತ್ಯಂತ ಖುಶಿನೀಡುತ್ತದೆ. ಈ ನದಿ ಪ್ರಯಾಣ ಸಾಮಾನ್ಯವಾಗಿ ಆರಂಭವಾಗುವುದು ಮೊಹಾಲ್ನಿಂದ. ಇದು ಆರಂಭವಾದ ಒಂದೂವರೆ ಗಂಟೆ ನಂತರ ಮುಕ್ತಾಯವಾಗುತ್ತದೆ. ಏಪ್ರಿಲ್ ಮಧ್ಯಕಾಲದಿಂದ ಜೂನ್ ಮಧ್ಯದವರೆಗೆ ಈ ಜಲ ಕ್ರೀಡೆಗೆ ತೆರಳಬಹುದು. ಇದು ಹೊಸದೊಂದು ಅನುಭವಕ್ಕೆ ನಾಂದಿ ಹಾಡುತ್ತದೆ.
ಸಾಕಷ್ಟು ಪ್ರವಾಸ ಆಯೋಜಕರು ಈ ಭಾಗದಲ್ಲಿ ರಿವರ್ ರಾಫ್ಟಿಂಗ್ಗೆ ತೆರಳುವವರಿಗೆ ಪ್ರಾಥಮಿಕ ತರಬೇತಿ ಮೊದಲು ನೀಡುತ್ತಾರೆ. ಇದು ಜಲ ಕ್ರೀಡೆಗೆ ಅನಿವಾರ್ಯ ಕೂಡ.