ಚಂಬಲ್ ವನ್ಯಧಾಮವನ್ನು ಸುತ್ತಾಡಲು ಹಲವಾರು ಮಾರ್ಗೋಪಾಯಗಳಿವೆ. ಅದಕ್ಕಾಗಿ ನೀವು ಒಂಟೆ ಅಥವಾ ಜೀಪ್ ಸಫಾರಿಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಜೀಪ್ ಸಫಾರಿಯು ನಿಮ್ಮನ್ನು ಅಡ್ಡಾ-ದಿಡ್ಡಿಯಾಗಿ ಸಾಗುವ ಕೊರಕಲುಗಳ ರಸ್ತೆ, ನದಿ ದಂಡೆಗಳು, ಪೊದೆಗಳು, ಹಳ್ಳಿಗಳು ಹಾಗು ಕೋಟೆ ಮತ್ತು ಕಾಡು ಹಾದಿಯಲ್ಲಿ ಕರೆದೊಯ್ಯುತ್ತದೆ.
ಈ ಜೀಪ್ ಸಫಾರಿಯಲ್ಲಿ ನೀವು ನದಿಯಲ್ಲಿ ವಿಹರಿಸುತ್ತಿರುವ ಮೊಸಳೆಗಳನ್ನು, ಗಾಂಗೇಟಿಕ್ ಡಾಲ್ಫಿನ್‍ಗಳನ್ನು ನೋಡುವ ಅವಕಾಶ ಸಿಗುತ್ತದೆ. ಅಲ್ಲದೆ ಈ ವನ್ಯಧಾಮವು 300ಕ್ಕೂ ಅಧಿಕ ಸಂಖ್ಯೆಯ ದೇಶೀಯ ಮತ್ತು ವಿದೇಶೀಯ ವಲಸೆ ಪಕ್ಷಿಗಳಿಗೆ ಆಶ್ರಯವನ್ನೊದಗಿಸಿರುತ್ತದೆ. ಇದು ಪ್ರತಿ ವರ್ಷವು ಹೆಚ್ಚಾಗುತ್ತಲೇ ಇದೆ. ಉನ್ನತ ಹಿಮಾಲಯ ಮತ್ತು ಆರ್ಕಟಿಕ್ ಪ್ರಾಂತ್ಯದ ಪಕ್ಷಿಗಳು ಸಹ ಇಲ್ಲಿಗೆ ವಲಸೆ ಬರುತ್ತಿರುತ್ತವೆ. ಹಾಗಾಗಿ ಈ ವನ್ಯಧಾಮವನ್ನು IN 122 ಎಂಬ ಪ್ರಮುಖ ಪಕ್ಷಿ ಪ್ರದೇಶವಾಗಿ ಗುರುತಿಸಲಾಗಿದೆ.
ಇದರ ಜೊತೆಗೆ ಜೀಪ್ ಸಫಾರಿಯು ನಿಮ್ಮನ್ನು ಯಮುನಾ ನದಿ ತೀರದಲ್ಲಿರುವ ಬತೇಶ್ವರದಲ್ಲಿರುವ ಪ್ರಾಚೀನ ದೇವಾಲಯ ಸಂಕೀರ್ಣಕ್ಕು ಕೊಂಡೊಯ್ಯುತ್ತದೆ. ಇಲ್ಲಿ ಶಿವನಿಗಾಗಿ ನಿರ್ಮಿಸಲಾದ ನೂರಕ್ಕು ಅಧಿಕ ದೇವಾಲಯಗಳನ್ನು ನಾವು ಕಾಣಬಹುದು.


Click it and Unblock the Notifications