ತಿರುಪತಿ ತಿರುಮಲ ದೇವಸ್ಥಾನ (TTD) ಸೆಪ್ಟೆಂಬರ್ 9ರಂದು 2026ರ ಬ್ರಹ್ಮೋತ್ಸವದ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 15ರಿಂದ 23ರವರೆಗೆ ಸಾಲಕಟ್ಲ ಬ್ರಹ್ಮೋತ್ಸವ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಈ ಧಾರ್ಮಿಕ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗರುಡ ಸೇವೆ ಸೆಪ್ಟೆಂಬರ್ 19ರ ಶನಿವಾರ ಜರುಗಲಿದೆ. ಸೆಪ್ಟೆಂಬರ್ 20ರ ಭಾನುವಾರ ಸ್ವರ್ಣ ರಥೋತ್ಸವ, ಸೆಪ್ಟೆಂಬರ್ 22ರ ಮಂಗಳವಾರ ಮಹಾ ರಥೋತ್ಸವ ಹಾಗೂ ಸೆಪ್ಟೆಂಬರ್ 23ರ ಬುಧವಾರ ಚಕ್ರಸ್ನಾನ ನೆರವೇರಲಿದೆ. ಬ್ರಹ್ಮೋತ್ಸವಕ್ಕೆ ತೆರಳಲು ಬಯಸುವ ಕರ್ನಾಟಕದ ಭಕ್ತರು ಈಗಲೇ ತಮ್ಮ ಪ್ರಯಾಣದ ಟಿಕೆಟ್, ಕೊಠಡಿ ಬುಕಿಂಗ್ ಮತ್ತು ವೇಳಾಪಟ್ಟಿಯನ್ನು ಕಾಯ್ದಿರಿಸಿಕೊಳ್ಳುವುದು ಒಳ್ಳೆಯದು.
ವಿಶೇಷ ದಿನಗಳಲ್ಲಿ ಹೆಚ್ಚಲಿರುವ ಜನಸಂದಣಿಯನ್ನು ನಿಯಂತ್ರಿಸಲು ದೇವಸ್ಥಾನ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರತಿದಿನ ಬೆಳಿಗ್ಗೆ 8ರಿಂದ 10 ಹಾಗೂ ಸಂಜೆ 7ರಿಂದ 9 ಗಂಟೆಯವರೆಗೆ ವಾಹನ ಸೇವೆಗಳು ನಡೆಯಲಿವೆ. ಇನ್ನು ಸೆಪ್ಟೆಂಬರ್ 18ರ ರಾತ್ರಿ 9 ಗಂಟೆಯಿಂದ ಸೆಪ್ಟೆಂಬರ್ 20ರ ಬೆಳಿಗ್ಗೆ 6 ಗಂಟೆಯವರೆಗೆ ತಿರುಮಲ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸರು ಮತ್ತು TTD ವಿಶೇಷ ಟ್ರಾಫಿಕ್ ಹಾಗೂ ಪಾರ್ಕಿಂಗ್ ಯೋಜನೆಗಳನ್ನು ಸಿದ್ಧಪಡಿಸಿದ್ದು, ಭಕ್ತರು ಈ ಸಮಯವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸಬೇಕಿದೆ.

TTD Brahmotsavam 2026: ಕರ್ನಾಟಕ ಭಕ್ತರ ಪ್ರಯಾಣದ ಪ್ಲಾನ್ ಮತ್ತು ಗರುಡ ಸೇವೆ ಮಾಹಿತಿ
ಬೆಂಗಳೂರಿನಿಂದ ಪ್ರಯಾಣಿಸುವ ಭಕ್ತರು ಸೆಪ್ಟೆಂಬರ್ 19ರ ಬೆಳಗಿನ ಜಾವವೇ (ಅಂದರೆ ಬೆಳಿಗ್ಗೆ 3ರಿಂದ 5 ಗಂಟೆಯೊಳಗೆ) ತಿರುಪತಿ ತಲುಪುವಂತೆ ಯೋಜಿಸುವುದು ಸೂಕ್ತ. ರಾತ್ರಿ ಸಂಚರಿಸುವ ಬಸ್ ಅಥವಾ ರೈಲುಗಳು ಇದಕ್ಕೆ ಉತ್ತಮ ಆಯ್ಕೆ. TTD ಮಾಹಿತಿ ಪ್ರಕಾರ, ಬೆಂಗಳೂರಿನಿಂದ ತಿರುಪತಿಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಲು ಸುಮಾರು ಐದು ಗಂಟೆ ಬೇಕಾಗುತ್ತದೆ. ಇನ್ನು ಮೈಸೂರಿನ ಭಕ್ತರು ಸಂಚಾರ ವಿಳಂಬವನ್ನು ಲೆಕ್ಕಾಚಾರಕ್ಕೆ ತೆಗೆದುಕೊಂಡು ಕೊಂಚ ಬೇಗನೇ ಹೊರಡುವುದು ಒಳ್ಳೆಯದು. ಹುಬ್ಬಳ್ಳಿಯಿಂದ ಬರುವವರು ಬೆಂಗಳೂರು ಮಾರ್ಗವಾಗಿ ರಾತ್ರಿ ಸಂಚರಿಸುವ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
TTD Brahmotsavam 2026: ಎಸ್‌ಎಸ್‌ಡಿ ಟೋಕನ್ ಹಾಗೂ ಸೇವೆಗಳ ರದ್ದು ಮಾಹಿತಿ
ಉಚಿತ ದರ್ಶನ ಪಡೆಯಲು ಬಯಸುವವರು ಸ್ಲಾಟೆಡ್ ಸರ್ವ ದರ್ಶನ (SSD) ಟೋಕನ್‌ಗಳನ್ನು ಆದಷ್ಟು ಬೇಗ ಪಡೆದುಕೊಳ್ಳಿ. ಶ್ರೀನಿವಾಸಂ, ವಿಷ್ಣು ನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ನಲ್ಲಿ ಟೋಕನ್ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ. TTD ಅಧಿಕೃತ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುವ ಸ್ಲಾಟ್‌ಗಳ ಮಾಹಿತಿ ನಿರಂತರವಾಗಿ ಅಪ್‌ಡೇಟ್ ಆಗುತ್ತಿದ್ದು, ಟೋಕನ್‌ಗಳು ವೇಗವಾಗಿ ಖಾಲಿಯಾಗುತ್ತಿವೆ. ಬ್ರಹ್ಮೋತ್ಸವದ ಸಮಯದಲ್ಲಿ ವಿಐಪಿ ಬ್ರೇಕ್ ದರ್ಶನ, ವಿಶೇಷ ಆದ್ಯತೆಯ ದರ್ಶನಗಳು ಮತ್ತು ಪ್ರಮುಖ ಆರ್ಜಿತ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಈ ಎಲ್ಲ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಕಡ್ಡಾಯವಾಗಿ ಮೂಲ ಗುರುತಿನ ಚೀಟಿ (Original ID) ಜೊತೆಯಲ್ಲಿಟ್ಟುಕೊಳ್ಳಿ.
TTD Brahmotsavam 2026: ವಸತಿ ವ್ಯವಸ್ಥೆ ಮತ್ತು ಸ್ಥಳೀಯ ಉಪಯುಕ್ತ ಸಲಹೆಗಳು
ತಿರುಮಲದಲ್ಲಿ ಕೊಠಡಿಗಳು ಸಿಗದಿದ್ದರೆ ಸೆಂಟ್ರಲ್ ರಿಸೆಪ್ಷನ್ ಆಫೀಸ್‌ನಲ್ಲಿ (CRO) ನೋಂದಾಯಿಸಿಕೊಳ್ಳಬಹುದು; ಈಗ ಸಬ್-ಎನ್‌ಕ್ವೈರಿ ಕಚೇರಿಗಳ ಮೂಲಕ ಕೊಠಡಿಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಭಕ್ತರ ದಂಡೇ ಹರಿದುಬರುವುದರಿಂದ ಬೆಟ್ಟದ ಮೇಲೆ ವಸತಿ ಲಭ್ಯತೆ ಕಡಿಮೆಯಿರುತ್ತದೆ ಎಂದು TTD ಎಚ್ಚರಿಸಿದೆ. ಆದ್ದರಿಂದ ಟೋಕನ್ ಕೌಂಟರ್‌ಗಳಿರುವ ತಿರುಪತಿಯಲ್ಲೇ ತಂಗುವುದು ಸುರಕ್ಷಿತ ಪರ್ಯಾಯ ಆಯ್ಕೆ. ರಾತ್ರಿ ವೇಳೆ ಅಥವಾ ಬೆಳಗಿನ ಜಾವ ಸಂಚರಿಸಲು TTDಯ ಉಚಿತ ಬಸ್‌ಗಳು, ಲಗೇಜ್ ಲಾಕರ್‌ಗಳು ಮತ್ತು ಅನ್ನಪ್ರಸಾದ ಕೇಂದ್ರಗಳ ಸೌಲಭ್ಯವನ್ನು ಭಕ್ತರು ಬಳಸಿಕೊಳ್ಳಬಹುದು.


Click it and Unblock the Notifications















