ಬೆಂಗಳೂರಿನ ಐದು ಪ್ರಮುಖ ಫ್ಲೈಓವರ್‌ಗಳಲ್ಲಿ ಸೆಪ್ಟೆಂಬರ್ 4 ರಿಂದ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಹೊಸ ನಿರ್ಬಂಧ ಜಾರಿಯಾಗುತ್ತಿದೆ. ಬಿಜಿಎಸ್ (ಸಿರ್ಸಿ ಸರ್ಕಲ್), ಪೀಣ್ಯ ಎಲಿವೇಟೆಡ್, ಸಿಲ್ಕ್ ಬೋರ್ಡ್–ರಾಗಿಗುಡ್ಡ ಡಬಲ್ ಡೆಕ್ಕರ್ ಹಾಗೂ ಸಂಜೀವ್ ನಗರ ಕ್ರಾಸ್‌ನಿಂದ ವಿದ್ಯಾಶಿಲ್ಪ್ ಜಂಕ್ಷನ್‌ವರೆಗಿನ ಏರ್‌ಪೋರ್ಟ್ ಎಲಿವೇಟೆಡ್ ರಸ್ತೆಯಲ್ಲಿ ಈ ನಿಯಮ ಅನ್ವಯವಾಗಲಿದೆ. ಇದರಲ್ಲಿ ಏರ್‌ಪೋರ್ಟ್ ಫ್ಲೈಓವರ್‌ನಲ್ಲಿ ದ್ವಿಚಕ್ರ ವಾಹನ ಮತ್ತು ಆಟೋರಿಕ್ಷಾಗಳಿಗೆ 24 ಗಂಟೆಯೂ ನೋ ಎಂಟ್ರಿ! ಸರಕು ವಾಹನಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಸಂಚಾರ ನಿಷೇಧಿಸಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್‌ನಲ್ಲೂ ಸೆಪ್ಟೆಂಬರ್ 11 ರಿಂದ ಇದೇ ಮಾದರಿಯ ನಿಯಮ ಜಾರಿಗೆ ಬರಲಿದೆ.
ಯಾವ ಫ್ಲೈಓವರ್‌ನಲ್ಲಿ ಏನೇನು ನಿಯಮಗಳಿವೆ ನೋಡಿ: ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ಸರಕು ವಾಹನಗಳಿಗೆ ದಿನಪೂರ್ತಿ ನಿಷೇಧವಿದ್ದರೆ, ಲಘು ಸರಕು ವಾಹನಗಳಿಗೆ ಬೆಳಿಗ್ಗೆ 7 ರಿಂದ 11 ಹಾಗೂ ಸಂಜೆ 4 ರಿಂದ ರಾತ್ರಿ 10 ರವರೆಗೆ ನಿರ್ಬಂಧ ಇರಲಿದೆ. ಪೀಣ್ಯ ಎಲಿವೇಟೆಡ್ ಹಾದಿಯಲ್ಲಿ ಪ್ರಯಾಣಿಕರ ಹಾಗೂ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ಪ್ರವೇಶವಿಲ್ಲ; ಪೀಕ್ ಹವರ್ಸ್‌ನಲ್ಲಿ ಭಾರಿ ಮತ್ತು ಮಧ್ಯಮ ಸರಕು ವಾಹನಗಳಿಗೂ ಕಟ್ಟುನಿಟ್ಟಿನ ತಡೆ ಇದೆ. ಸಿಲ್ಕ್ ಬೋರ್ಡ್–ರಾಗಿಗುಡ್ಡ ಡಬಲ್ ಡೆಕ್ಕರ್‌ನಲ್ಲಿ ಭಾರಿ ಸರಕು ವಾಹನಗಳಿಗೆ ಇಡೀ ದಿನ ನೋ ಎಂಟ್ರಿ. ಹಾಗೆಯೇ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಬೈಕ್ ಮತ್ತು ಆಟೋಗಳಿಗೆ ದಿನಪೂರ್ತಿ ನಿಷೇಧವಿದ್ದು, ಗೂಡ್ಸ್ ವಾಹನಗಳಿಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಬ್ರೇಕ್ ಹಾಕಲಾಗಿದೆ.

ಬೆಂಗಳೂರು ಫ್ಲೈಓವರ್ ಬ್ಯಾನ್: ಏರ್‌ಪೋರ್ಟ್‌ಗೆ ಹೋಗುವವರಿಗೆ ಟೈಮಿಂಗ್ಸ್ ಮತ್ತು ಪರ್ಯಾಯ ಮಾರ್ಗಗಳು
ನೀವು ಬೈಕ್‌ನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರೆ, ಎಲಿವೇಟೆಡ್ ಫ್ಲೈಓವರ್ ಬಳಸಬೇಡಿ. ಅದರ ಬದಲಿಗೆ ಬಳ್ಳಾರಿ ರಸ್ತೆಯ ಕೆಳಗಿನ ರಸ್ತೆಯಲ್ಲೇ (ಸರ್ಫೇಸ್ ಲೇನ್) ಪ್ರಯಾಣಿಸಿ, ಜೊತೆಗೆ ಕೈಯಲ್ಲಿ 20 ರಿಂದ 30 ನಿಮಿಷ ಹೆಚ್ಚುವರಿ ಸಮಯವಿಟ್ಟುಕೊಳ್ಳಿ. ಬಿಎಂಟಿಸಿಯ 'ವಾಯು ವಜ್ರ' ಬಸ್‌ಗಳು ಸಹ ಅತ್ಯುತ್ತಮ ಪರ್ಯಾಯ ಆಯ್ಕೆ. ನಗರದಾದ್ಯಂತ ಲಭ್ಯವಿರುವ ಈ ಬಸ್‌ಗಳಲ್ಲಿ ಪ್ರಯಾಣಿಸಿದರೆ ಫ್ಲೈಓವರ್ ನಿರ್ಬಂಧದ ಚಿಂತೆ ಇರುವುದಿಲ್ಲ. ಮನೆಯಿಂದ ಹೊರಡುವ ಮುನ್ನ ಕೆಐಎಎಸ್ (KIAS) ಅಧಿಕೃತ ಪೋರ್ಟಲ್‌ನಲ್ಲಿ ಬಸ್‌ಗಳ ಸಮಯ ಹಾಗೂ ಬೋರ್ಡಿಂಗ್ ಪಾಯಿಂಟ್‌ಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ರೂಲ್ಸ್: ಆಫೀಸ್‌ಗೆ ಹೋಗುವವರು ಹಾಗೂ ವೀಕೆಂಡ್ ಟ್ರಿಪ್ ಮಾಡುವವರಿಗೆ ಗೈಡ್
ಸೆಪ್ಟೆಂಬರ್ 11 ರಿಂದ ದ್ವಿಚಕ್ರ ವಾಹನ ಸವಾರರು ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಬಳಸುವಂತಿಲ್ಲ. ಹೊಸೂರು ರಸ್ತೆಯ ಕೆಳಗಿನ ರಸ್ತೆಯಲ್ಲೇ (ಸರ್ಫೇಸ್ ಲೇನ್) ಸಂಚರಿಸಬೇಕಾಗುತ್ತದೆ. ಇನ್ನು ದಕ್ಷಿಣ ಹಾಗೂ ಪಶ್ಚಿಮ ಬೆಂಗಳೂರಿನಿಂದ ಬರುವ ಪ್ರಯಾಣಿಕರು ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಹೋಗದೆ, ನೇರವಾಗಿ 'ನೈಸ್ ರಸ್ತೆ' (NICE Road) ಹಿಡಿದು ಎಲೆಕ್ಟ್ರಾನಿಕ್ ಸಿಟಿ, ಕನಕಪುರ ರಸ್ತೆ ಅಥವಾ ಮೈಸೂರು ರಸ್ತೆಯನ್ನು ತಲುಪಬಹುದು. ವೀಕೆಂಡ್‌ನಲ್ಲಿ ಪ್ರಯಾಣಿಸುವವರಿಗೆ ಹೊಸೂರು ರಸ್ತೆ ಮತ್ತು ಮೈಸೂರು ರಸ್ತೆಯ ನೈಸ್ ಇಂಟರ್‌ಚೇಂಜ್‌ಗಳು ಬಹಳ ನೆರವಾಗಲಿವೆ (ಸಾಮಾನ್ಯ ಟೋಲ್ ದರ ಅನ್ವಯಿಸುತ್ತದೆ). ಆದರೆ ಪೀಕ್ ಅವರ್‌ನಲ್ಲಿ ಸಂಚರಿಸುವವರು ಸ್ವಲ್ಪ ಮುಂಚಿತವಾಗಿಯೇ ಹೊರಡುವುದು ಒಳಿತು.
ಒಂದು ವೇಳೆ ಪೊಲೀಸರು ನಿಮ್ಮ ವಾಹನ ತಡೆದರೆ, ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಇನ್ಶೂರೆನ್ಸ್ ಹಾಗೂ ಮಾಲಿನ್ಯ ಪ್ರಮಾಣಪತ್ರಗಳನ್ನು (ಪೊಲ್ಯೂಷನ್ ಸರ್ಟಿಫಿಕೇಟ್) ಕೈಯಲ್ಲಿ ಸಿದ್ಧವಾಗಿಟ್ಟುಕೊಳ್ಳಿ. ಡಿಜಿಲಾಕರ್ (DigiLocker) ಅಥವಾ ಎಂಪರಿವಾಹನ್ (mParivahan) ಆಪ್‌ನಲ್ಲಿರುವ ಡಿಜಿಟಲ್ ದಾಖಲೆಗಳೂ ದೇಶಾದ್ಯಂತ ಮಾನ್ಯವಾಗಿರುತ್ತವೆ. ರಸ್ತೆ ಸಂಚಾರದ ಲೈವ್ ಅಪ್‌ಡೇಟ್ ಪಡೆಯಲು ಹಾಗೂ ನಿಯಮ ಉಲ್ಲಂಘನೆ ದೂರು ನೀಡಲು ಬೆಂಗಳೂರು ಟ್ರಾಫಿಕ್ ಪೊಲೀಸರ 'ASTraM' ಆಪ್ ಬಳಸಿ. ಯಾವುದೇ ತುರ್ತು ಸಂದರ್ಭ ಎದುರಾದರೆ 112 ಗೆ ಕರೆ ಮಾಡಿ ಮತ್ತು ಫ್ಲೈಓವರ್ ಎಂಟ್ರಿ-ಎಕ್ಸಿಟ್‌ಗಳಲ್ಲಿ ಹಾಕಲಾಗಿರುವ ಸಂಚಾರ ಸೂಚನೆಗಳನ್ನು ಪಾಲಿಸಿ.


Click it and Unblock the Notifications















