ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೆಂಗಳೂರು ಒಂದು ರಭಸವಾಗಿ ಬೆಳೆಯುತ್ತಿರುವ ಆಧುನಿಕ ಶಹರ. ಈ ಶೀಘ್ರಗತಿಯ ಬೆಳವಣಿಗೆಯು ಕಳೆದ ಎರಡು ದಶಕಗಳಲ್ಲಿ ಕೇವಲ ನಗರದ ರೂಪುರೇಶೆಗಳನ್ನಷ್ಟೆ ಅಲ್ಲದೆ, ನಮ್ಮ ಉಡುಗೆ ತೊಡುಗೆ, ಜೀವನ ನಿರ್ವಹಣಾ ಶೈಲಿ ಅದರಲ್ಲೂ ವಿಶೇಷವಾಗಿ ಆಹಾರಪದ್ಧತಿಗಳಲ್ಲೂ ಕೂಡ ಸಾಕಷ್ಟು ಬದಲಾವಣೆಗಳನ್ನು ತಂದಿದೆ ಎಂದರೆ ತಪ್ಪಾಗಲಾರದು.
70, 80 ಅಷ್ಟೇ ಏಕೆ 90 ರ ದಶಕದಲ್ಲೂ ಕೂಡ ಎಲ್ಲರೂ ಬೆಳಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಟಿಫಿನ್ ಮಾಡಲು ಸಿದ್ಧರಾಗುತ್ತಿದ್ದರು. ಶುಚಿ ರುಚಿ ಯಾದ ಬಿಸಿ ಬಿಸಿ, ಇಡ್ಲಿ, ವಡೆ ಸಾಂಬಾರ್, ದೋಸೆ, ಉಪ್ಪಿಟ್ಟು(ಖಾರಾ ಬಾತ್), ಶಾವಿಗೆ ಬಾತ್ ಗಳನ್ನು ಬಾಯಿ ಚಪ್ಪರಿಸುತ್ತ ತಿಂದು ಫ್ರೆಶ್ ಆಗಿ ಮನೆಯಿಂದ ಹೊರಡುತ್ತಿದ್ದರು.
ಪ್ರಸ್ತುತ ಈಗಲೂ ಕೂಡ ಬೆಳಗಿನ ಉಪಹಾರ ಸಾಕಷ್ಟು ಮಟ್ಟಿಗೆ ಇಡ್ಲಿ, ವಡೆ ಸಾಂಬಾರ್, ದೋಸೆಗಳಾದರೂ ಕೂಡ ನಿಧಾನವಾಗಿ ಪಾಶ್ಚಿಮಾತ್ಯದ ಖಾದ್ಯಗಳಾದ ಪಿಜ್ಜಾ, ಬರ್ಗರ್, ಸ್ಯಾಂಡ್‍ವಿಚ್ ಗಳಂತಹ ಜಂಕ್ ಫುಡ್‍ಗಳು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿವೆ. ಅದೇನೆ ಇರಲಿ ಇಂದಿಗೂ ಕೂಡ ನಮ್ಮ ಬೆಂಗಳೂರಿನಲ್ಲಿ ಶುಚುಯಾಗಿ, ರುಚಿಯಾಗಿ ಮಾಡಲಾದ ಸಾಂಪ್ರದಾಯಿಕ ತಿಂಡಿಗಳ ಕೆಲವು ಉಪಹಾರ ಕೇಂದ್ರಗಳಿವೆ. ಇಲ್ಲಿನ ಖಾದ್ಯಗಳು ತುಂಬಾ ಜನಪ್ರಿಯ. ಹಾಗಾದರೆ ಬನ್ನಿ ಒಮ್ಮೆ ಬೆಂಗಳೂರಿನಲ್ಲಿ ಒಂದು ದಿನ ಸುತ್ತಾಡುತ್ತ ಕೆಲವು ಅನನ್ಯ ಉಪಹಾರ ಕೇಂದ್ರಗಳ ಪರಿಚಯ ಮಾಡಿಕೊಳ್ಳೊಣ.
ವಿದ್ಯಾರ್ಥಿ ಭವನ:
ಬೆಂಗಳೂರಿನ ಬಸವನಗುಡಿ ಪ್ರದೇಶದ ಪ್ರಸಿದ್ಧ ಗಾಂಧಿ ಬಜಾರ್ ಬೀದಿಯಲ್ಲಿರುವ ಈ ಹಳೆಯ ಉಪಹಾರಗೃಹ ತನ್ನಲ್ಲಿ ದೊರಕುವ ರುಚಿ ರುಚಿಯಾದ ಇಡ್ಲಿ ವಡೆ ಸಾಂಬಾರ್, ಮಸಾಲಾ ದೋಸೆಗಳಿಗೆ ಅತಿ ಪ್ರಸಿದ್ಧವಾಗಿದೆ. ಹೆಸರಾಂತ ಗಣ್ಯ ವ್ಯಕ್ತಿಗಳಾದ ಕೈಲಾಸಂ, ಡಿ.ವಿ.ಜಿಯವರು ಇಲ್ಲಿಯೆ ಕುಳಿತು ದೋಸೆಯನ್ನು ತಿನ್ನುತ್ತಿದ್ದರು ಎಂಬುದು ಇದರ ವಿಶೇಷ. ಶುಕ್ರವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಈ ಕೇಂದ್ರವು ಬೆಳಿಗ್ಗೆ 6.30 ರಿಂದ 11.30 ವರೆಗೆ, ಮಧ್ಯಾಹ್ನ 2 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ತೆರೆದಿರುತ್ತದೆ.
ವಿಳಾಸ: 42, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು
ದೂರವಾಣಿ ಸಂಖ್ಯೆ : 080 - 26677588

ಸಿ.ಟಿ.ಆರ್ ಅಥವಾ ಶ್ರೀಸಾಗರ್, ಮಲ್ಲೇಶ್ವರಂ
ಮಲ್ಲೇಶ್ವರಂ ಆಟದ ಮೈದಾನದ ಬದಿಯ ರಸ್ತೆಯ ಮೂಲೆಯಲ್ಲಿರುವ ಶ್ರೀ ಸಾಗರ್ ಅಥವಾ ಸಿ.ಟಿ.ಆರ್ ಎಂದೂ ಕರೆಯಲ್ಪಡುವ ಈ ಹೋಟೆಲ್ ಪ್ರದೇಶದ ಅತಿ ಜನಪ್ರಿಯ ಹೋಟೆಲ್. ಗರಿ ಗರಿಯಾದ ಬೆಣ್ಣೆ ಮಸಾಲೆ ದೋಸೆಗಳಿಗೆ ಪ್ರಖ್ಯಾತವಾದ ಈ ಹೋಟೆಲ್ ಹಲವು ದಶಕಗಳಿಂದಿದ್ದು ಇಂದಿಗೂ ತನ್ನ ರುಚಿಯ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ. ಇಂದಿಗೂ ಕೂಡ ಸಾಂಪ್ರದಾಯಿಕ ಪದ್ಧತಿಯಲ್ಲೆ ಹಿಟ್ಟನ್ನು ರುಬ್ಬಿ ದೋಸೆಯನ್ನು ತಯಾರಿಸಲಾಗುತ್ತದೆ.
ಸಮಯ : 7.30 ರಿಂದ 11.30 ವರೆಗೆ, ಮಧ್ಯಾಹ್ನ 3.30 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ
ವಿಳಾಸ: 7 ನೇಯ ಕ್ರಾಸ್, 3 ನೇಯ ಮೇನ್, ಮಾರ್ಗೋಸಾ ರಸ್ತೆ ಮಲ್ಲೇಶ್ವರಂ, ಬೆಂಗಳೂರು
ದೂರವಾಣಿ: 080 - 23317531
ತಿಂಡಿ ಬೀದಿ/ಫುಡ್ ಸ್ಟ್ರೀಟ್, ವಿವಿ ಪುರಂ
ಬೆಂಗಳೂರಿನ ವಿವಿ ಪುರಂನಲ್ಲಿರುವ ಸಜ್ಜನರಾವ್ ವೃತ್ತದ ಬಳಿಯಲ್ಲಿದೆ ಈ ಪ್ರಖ್ಯಾತ ತಿಂಡಿ ಬೀದಿ. ಯಾವಾಗಲೂ ಜನಸಂದಣಿಯಿಂದ ಕೂಡಿರುವ ಈ ಪ್ರದೇಶಕ್ಕೆ ರಿಕ್ಷಾ ಅಥವಾ ದ್ವಿಚಕ್ರ ವಾಹನದ ಮೂಲಕ ತೆರಳಿದರೆ ಉತ್ತಮ. ಇಡ್ಲಿ ವಡೆಗಳಿಂದ ಹಿಡಿದು, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ ಹಾಗು ಚಾಟ್ ಗಳ ವರೆಗೆ ದೊರೆಯುವ ಹಲವು ತಿಂಡಿಗಳು ನಿಮ್ಮ ಬಾಯಲ್ಲಿ ನೀರೂರಿಸದೆ ಇರಲಾರದು.
ವಿಳಾಸ : ತಿಂಡಿ ಬೀದಿ/ಫುಡ್ ಸ್ಟ್ರೀಟ್, ಸಜ್ಜನರಾವ್ ವೃತ್ತ, ವಿವಿ ಪುರಂ, ಬೆಂಗಳೂರು (ಹೆಗ್ಗುರುತು: ವಿ.ಬಿ ಬೇಕರಿ)
ಹಳ್ಳಿ ಮನೆ, ಮಲ್ಲೇಶ್ವರಂ
ಮಲ್ಲೇಶ್ವರಂ ನ ಸಂಪಿಗೆ ರಸ್ತೆಯಲ್ಲಿರುವ ಹಳ್ಳಿ ಮನೆ ಹೋಟೆಲ್, ಒಂದು ಅನನ್ಯ ವಿನ್ಯಾಸದ ಹೋಟೆಲ್ ಆಗಿದ್ದು, ವಿಶೇಷವಾಗಿ ಹಳ್ಳಿಗಳಲ್ಲಿ ಕಂಡುಬರುವ ವಾತವರಣವನ್ನು ಯಥಾವತ್ತಾಗಿ ಪ್ರತಿಬಿಂಬಿಸುತ್ತದೆ. ವಿವಿಧ ಬಗೆಯ ಸಾಂಪ್ರದಾಯಿಕ ಖಾದ್ಯಗಳು ದೊರಕುವ ಈ ಹೋಟೆಲ್ ಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.
ಸಮಯ : ಬೆಳಿಗ್ಗೆ6.30 ರಿಂದ ರಾತ್ರಿ 10.30 ವರೆಗೆ.
ವಿಳಾಸ: 3 ನೇಯ ಕ್ರಾಸ್, ಸಂಪಿಗೆ ರಸ್ತೆ ಮಲ್ಲೇಶ್ವರಂ, ಬೆಂಗಳೂರು
ದೂರವಾಣಿ: 080 - 41279754, 080 - 65611222

ಮಾವಳ್ಳಿ ಟಿಫಿನ್ ರೂಮ್ (ಎಂ.ಟಿ.ಆರ್), ಲಾಲ್‍ಬಾಗ್ ರಸ್ತೆ
ಗರಿ ಗರಿಯಾದ ದೋಸೆ, ಬಿಸಿ ಬಿಸಿಯಾದ ಇಡ್ಲಿ, ಉಪಮಾ, ವಡೆಗಳು, ರುಚಿ ರುಚಿಯಾದ ಚಟ್ನಿ ಹಾಗು ಸಾಂಬಾರ್ ಅದರ ಮೇಲೆ ಬಿಸಿ ಬಿಸಿಯಾದ ಕಾಫಿ....ಅಬ್ಬಾ ಬೆಳಗ್ಗಿನ ಟಿಫಿನ್ ಸಂತೃಪ್ತಿ. ಈ ಸಂತೃಪ್ತಿ ಬೇಕಾದರೆ ಭೇಟಿ ನೀಡಿರಿ ಒಮ್ಮೆ ಲಾಲ್‍ಬಾಗ್ ರಸ್ತೆಯಲ್ಲಿರುವ ಎಂ.ಟಿ.ಆರ್ ಅರ್ಥಾತ್ ಮಾವಳ್ಳಿ ಟಿಫಿನ್ ರೂಮ್ ಗೆ.
ಸಮಯ : ಬೆಳಿಗ್ಗೆ6.30 ರಿಂದ ರಾತ್ರಿ 11 ವರೆಗೆ, 11.30 ರಿಂದ 2.30 ರ ವರೆಗೆ, ಮಧ್ಯಾಹ್ನ 3.30 ರಿಂದ ರಾತ್ರಿ 8.30 ಘಂಟೆಯವರೆಗೆ (ಶನಿವಾರ ಹಾಗು ಭಾನುವಾರದಂದು ಮಧ್ಯಾಹ್ನ 3.30 ರಿಂದ ರಾತ್ರಿ 7.30 ಘಂಟೆಯವರೆಗೆ). (ಕೇವಲ ಶನಿವಾರ ಹಾಗು ಭಾನುವಾರದಂದು ರಾತ್ರಿ 7.45 ರಿಂದ 9 ಘಂಟೆಯವರೆಗೆ ಊಟ ಲಭ್ಯವಿರುತ್ತದೆ). ಸೋಮವಾರ ರಜೆ.
ವಿಳಾಸ: 14, ಲಾಲ್‍ಬಾಗ್ ರಸ್ತೆ, ಬೆಂಗಳೂರು (ಉರ್ವಶಿ ಚಿತ್ರಮಂದಿರದ ಬಳಿ)
ದೂರವಾಣಿ: 080 - 22230471, 080 - 22220022

ಬ್ರಾಹ್ಮಣರ ಕಾಫಿ ಕೇಂದ್ರ
ಬೆಂಗಳೂರಿನ ಶಂಕರಪುರಂ ನಲ್ಲಿರುವ ಈ ಪುಟ್ಟ ಉಪಹಾರಗೃಹ ತನ್ನಲ್ಲಿ ದೊರಕುವ ಉತ್ತಮ ಗುಣಮಟ್ಟದ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಮಿತವಾದ ಸಂಖ್ಯೆಯಲ್ಲಿ ದೊರೆಯುವ ತಿಂಡಿಗಳು ಬೆಳಗಿನ ಉಪಹಾರ ಅಥವಾ ಸಂಜೆಯ ಮಿತವಾದ ಆಹಾರಕ್ಕೆ ಪ್ರಶಸ್ತವಾಗಿದೆ. ಬಾಳೆ ಹಣ್ಣು, ಪೈನ್ ಆಪಲ್ ಗಳಿಂದ ಕೂಡಿದ ಕೇಸರಿ ಬಾತ್ ಅಂತೂ ಬಾಯಲ್ಲಿ ನೀರೂರಿಸದೆ ಇರಲಾರದು.
ಸಮಯ : 6 ರಿಂದ 12 ವರೆಗೆ, ಮಧ್ಯಾಹ್ನ 3 ಘಂಟೆಯಿಂದ ರಾತ್ರಿ 7 ಘಂಟೆಯವರೆಗೆ
ವಿಳಾಸ: ಸಂಖ್ಯೆ 3, ರಂಗಾ ರಾವ್ ರಸ್ತೆ, ಶಂಕರಮಠದ ಬಳಿ, ಶಂಕರಪುರಂ, ಬೆಂಗಳೂರು (ಹೆಗ್ಗುರುತು: ಉಮಾ ಚಿತ್ರಮಂದಿರ, ಚಾಮರಾಜಪೇಟೆ)


Click it and Unblock the Notifications
















