ಈ ದೇವಸ್ಥಾನವು ಸೂರಿಯಾನರ‍್ ಕೋಯಿಲ್‌ನಲ್ಲಿದೆ. ಶಿವಸೂರ್ಯನಾರಾಯಣ ದೇವಸ್ಥಾನವು ಸೂರ್ಯನಿಗೆ ಅರ್ಪಿಸಲ್ಪಟ್ಟಿದೆ. ತಮಿಳುನಾಡಿನಲ್ಲಿರುವ ನವಗ್ರಹ ದೇವಸ್ಥಾನಗಳಲ್ಲಿ ಇದೂ ಒಂದು. ಇತರ ಎಂಟು ಗ್ರಹಗಳ ದೇವರೂ ಈ ದೇವಸ್ಥಾನದಲ್ಲಿವೆ. ಐತಿಹ್ಯಗಳ ಪ್ರಕಾರ, ಕಲವ ಮುನಿವರ‍್ ಇಲ್ಲಿ ಭವಿಷ್ಯವನ್ನು ಕೇಳಲು ಬಂದಾಗ ತಾನು ಕ್ಷಯರೋಗಕ್ಕೆ ತುತ್ತಾಗುತ್ತೇನೆ ಎಂಬುದು ತಿಳಿಯಿತು. ಹೀಗಾಗಿ ರೋಗದಿಂದ ತನ್ನನ್ನು ರಕ್ಷಿಸುವಂತೆ ನವಗ್ರಹಗಳನ್ನು ಪ್ರಾರ್ಥಿಸಿದನಂತೆ. ಈತನ ಕೋರಿಕೆಯನ್ನು ನವಗ್ರಹಗಳು ಮನ್ನಿಸಿದವು. ಕಲವ ಮುನಿವರ‍್ ಆರೋಗ್ಯವನ್ನು ಯಾರೂ ಬದಲಾಯಿಸಲಾಗದು ಎಂದು ನವಗ್ರಹಗಳು ಹರಸಿದ್ದು ಬ್ರಹ್ಮ ದೇವನಿಗೆ ತಿಳಿದು ಸಿಟ್ಟಾದ. ಕಲವ ಮುನಿವರ್‌ಗೆ ತಗುಲಬೇಕಿದ್ದ ಅನಾರೋಗ್ಯವನ್ನು ನವಗ್ರಹಗಳೂ ಹಂಚಿಕೊಳ್ಳಬೇಕು ಎಂದು ಆದೇಶಿಸಿದ.
ಇದರಿಂದ ಭೀತಗೊಂಡ ನವಗ್ರಹಗಳು ಬ್ರಹ್ಮನಲ್ಲಿ ಮೊರೆಯಿಟ್ಟವು. ತಮ್ಮನ್ನು ಕ್ಷಮಿಸಬೇಕೆಂದು ಕೇಳಿಕೊಂಡವು. ಆಗ ತಿರುಮಂಗಲಕುಡಿಗೆ ಭೇಟಿ ನೀಡಿ ಪ್ರಾಣನಾದೇಶ್ವರನನ್ನು ಪ್ರಾರ್ಥಿಸಿದರೆ ನಿಮ್ಮ ಕ್ಷಯರೋಗ ಗುಣವಾಗುತ್ತದೆ ಎಂದು ಬ್ರಹ್ಮ ಹೇಳಿದ. ಪ್ರಾಣನಾದೇಶ್ವರರ‍್ ಮತ್ತು ಮಂಗಲಾಂಬಿಕೆಯನ್ನು ಪ್ರಾರ್ಥಿಸಿದ ನಂತರ ಗಣಪತಿ ವಿಗ್ರಹದ ಸಮೀಪದ ನವಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬ್ರಹ್ಮನ ಆಶೀರ್ವಾದದಿಂದ ನವಗ್ರಹಗಳಿಗೆ ಶಾಪವಿಮೋಚನೆಯಾಯಿತು ಎಂದು ಹೇಳಲಾಗುತ್ತದೆ.
ತನ್ನನ್ನು ರೋಗದಿಂದ ಮುಕ್ತಿಗೊಳಿಸಿದ್ದಕ್ಕೆ ಕಲವ ಮುನಿವರ‍್ ನವಗ್ರಹಗಳಿಗೆಂದು ಇಲ್ಲಿ ದೇವಸ್ಥಾನವನ್ನು ನಿರ್ಮಿಸಿದ. ಈ ದೇವಸ್ಥಾನದಲ್ಲಿನ ಪ್ರಮುಖ ದೇವರೆಂದರೆ ಶಿವಸೂರ್ಯನಾರಾಯಣನಾಗಿದ್ದು ಪ್ರತ್ಯೂಷ ಮತ್ತು ಉಶೆಯ ಜೊತೆಗೆ ಈತ ಪಲ್ಲಕ್ಕಿಯಲ್ಲಿ ಕುಳಿತ ಪ್ರತಿಮೆ ಇಲ್ಲಿದೆ. ವಿಜಯ ದಶಮಿ ಮತ್ತು ರಥ ಸಪ್ತಮಿಯಂದು ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸಿಕೊಳ್ಳುತ್ತಾರೆ.


Click it and Unblock the Notifications