Search
  • Follow NativePlanet
Share
ಮುಖಪುಟ » ಸ್ಥಳಗಳು » ಬಿಷ್ಣುಪುರ್ » ಹವಾಮಾನ

ಬಿಷ್ಣುಪುರ್ ಹವಾಮಾನ

ಬಿಷ್ಣುಪುರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಒಕ್ಟೋಬರ್‌ನಿಂದ ಫೆಬ್ರವರಿ. ಮಳೆ ಮುಗಿದು ಚಳಿಗಾಲ ಆರಂಭವಾಗುವ ತಿಂಗಳಾದ ಒಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿನ ವಾತಾವರಣ ಬಹಳ ಅದ್ಭುತವಾಗಿರುತ್ತದೆ. ಒಂದು ವೇಳೆ ಅಲ್ಲಿನ ಸೌಂದರ್ಯಕ್ಕೆ ಮನಸೋತು, ಮಾರ್ಚ್‌ವರೆಗೆ ಅಲ್ಲೇ ಉಳಿದಿರೆಂದಾದರೆ ’ಯಶೋವಾಂಗ್’ ಹಬ್ಬದ ಸಂಭ್ರಮವನ್ನು ಕೂಡಾ ಸವಿಯಬಹುದಾಗಿದೆ. ಹೀಗಾಗಿ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ತನ್ನ ಮಡಿಲಲ್ಲಿ ಬೆಚ್ಚಗೆ ಮಲಗಿಸಿಕೊಂಡು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ ಬಿಷ್ಣುಪುರ. ಸುತ್ತಮುತ್ತಲಿನ ಪ್ರದೇಶಗಳಿಗೇ ಟ್ರಿಪ್ ಹೋಗಿ, ಬೋರ್ ಹೊಡೆದಿದ್ದರೆ, ಭಾರತದ ಉತ್ತರ ರಾಜ್ಯಗಳತ್ತ ಕೂಡ ತೆರಳಿ ಪ್ರವಾಸದ ಆನಂದವನ್ನು ಅನುಭವಿಸಬಹುದು.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲವು ಶಾಖ ಮತ್ತು ತೇವಾಂಶದಿಂದ ಕೂಡಿರುತ್ತದೆ. ಇಲ್ಲಿ ದಾಖಲಾದ ಗರಿಷ್ಠ ತಾಪಮಾನ 34-35’ ಸೆಲ್ಸಿಯಸ್. ಆದ್ದರಿಂದ ಬೇಸಿಗೆ ಕಾಲದಲ್ಲಿ ಬಿಷ್ಣುಪುರಕ್ಕೆ ಭೇಟಿ ಕೊಡುವುದು ಸೂಕ್ತವಲ್ಲ. ಲೋಕ್ತಾಕ್ ಸರೋವರ ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಕೂಡಾ ಬೇಸಿಗೆಯಲ್ಲಿ ಉತ್ತಮ ವಾತಾವರಣ ಇಲ್ಲದೇ ಇರುವುದರಿಂದಾಗಿ ಬೇಸಿಗೆಯಲ್ಲಿ ಇಲ್ಲಿಗೆ ತೆರಳುವುದನ್ನು ಮುಂದಿನ ಹವಾಮಾನಕ್ಕೆ ಮುಂದೂಡಬಹುದು.

ಮಳೆಗಾಲ

ಇನ್ನು ಮಳೆಗಾಲದ ವಿಷಯಕ್ಕೆ ಬಂದರೆ ಇಲ್ಲಿ ವಾರ್ಷಿಕ ಸರಾಸರಿ 1200-1400 ಮಿ.ಮೀ ಮಳೆ ಬೀಳುತ್ತದೆ. ಮಳೆಗಾಲ ಬಿಷ್ಣುಪುರದ ಪಾಲಿಗೆ ವಸಂತ ಕಾಲ. ಧೋ ಎಂದು ಸುರಿಯುವ ಮಳೆ ಇಲ್ಲಿನ ವಾತಾವರಣವನ್ನು ತಂಪುಗೊಳಿಸಿ, ಇಲ್ಲಿನ ಧೂಳು, ಕೊಳೆಗಳನ್ನು  ನಿವಾರಿಸುತ್ತದೆ. ಮಳೆಗಾಲ ಇಲ್ಲಿನ ಗಿರಿ ಶಿಖರಗಳಲಿ, ನದಿ ತೊರೆಗಳಲ್ಲಿ ಹೊಸ ಚೈತನ್ಯವನ್ನೇ ತುಂಬುತ್ತದೆ.  ತೇಲುವ ಜೌಗು ಸಸ್ಯಗಳೂ ಕೂಡಾ ಹೊಸದಾಗಿ ಹುಟ್ಟಿಕೊಂಡು ನಳನಳಿಸುತ್ತವೆ. ಹೀಗಾಗಿ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಪ್ರವಾಸದ ಉತ್ತಮ ಅನುಭೂತಿ ನಿಮ್ಮಲ್ಲಿ ಉಂಟಾಗಬಹುದು.

ಚಳಿಗಾಲ

ಚಳಿಗಾಲದಲ್ಲಿ ಬಿಷ್ಣುಪುರದಲ್ಲಿ ವಾತಾವರಣ ಹಿತವಾಗಿರುತ್ತದೆ. ಮಧ್ಯಮ ಮಟ್ಟದ ತೇವಾಂಶ ಚಳಿಗಾಲದಲ್ಲಿ ಇಲ್ಲಿರುತ್ತದೆ. ಕೆಲವು ವೇಳೆಗೆ ತಾಪಮಾನ 0 ಡಿಗ್ರಿ ಸೆಲ್ಸಿಯಸ್‌ಗೆ ಕೂಡಾ ಇಳಿದಂತಹ ಉದಾಹರಣೆಗಳಿವೆ. ಆದರೂ ಸಾಮಾನ್ಯವಾಗಿ 0 ಯಿಂದ 2 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ನಾವು ಚಳಿಗಾಲದಲ್ಲಿ ಕಾಣಬಹುದಾಗಿದೆ. ಬೇಸಿಗೆ ಕಾಲ ಮಳೆಗಾಲ ಎರಡನ್ನೂ ಗಮನಿಸಿದರೆ ಇಲ್ಲಿಗೆ ಭೇಟಿ ಕೊಡಲು ಚಳಿಗಾಲವೇ ಸೂಕ್ತ. ಈ ವೇಳೆಗೆ ರಸ್ತೆಯ ಸ್ಥಿತಿಗತಿಗಳೂ ಕೂಡಾ ಉತ್ತಮವಾಗಿರುತ್ತವೆ.