Search
  • Follow NativePlanet
Share
» »ಇದು ಬೆಂಗಳೂರಿಗೆ ಹತ್ತಿರ ಅಲ್ಲದೆ ಬಡವರ ಊಟಿ!

ಇದು ಬೆಂಗಳೂರಿಗೆ ಹತ್ತಿರ ಅಲ್ಲದೆ ಬಡವರ ಊಟಿ!

ಪ್ರೀತಿಯಿಂದ ಬಡವರ ಊಟಿ ಎಂದೆ ಕರೆಸಿಕೊಳ್ಳುವ ಯೇರ್ಕಾಡ್ ಗಿರಿಧಾಮವು ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯಲ್ಲಿದ್ದು ಪೂರ್ವಘಟ್ಟಗಳ ಸೆರ್ವರಾಯನ ಗುಡ್ಡಗಳಲ್ಲಿ ನೆಲೆಸಿದೆ

By Vijay

ಊಟಿ ಎಂದಾಕ್ಷಣ ಸಾಕು ಬಹುತೇಕರಿಗೆ ಒಂದು ರೀತಿಯ ಹುರುಪು-ಉತ್ಸಾಹಗಳು ಉಂಟಾಗುತ್ತವೆ. ಏಕೆಂದರೆ ದಕ್ಷಿಣ ಭಾರತದಲ್ಲಿ ಗಿರಿಧಾಮಗಳ ರಾಣಿ ಎಂದೆ ಜನಮನ್ನಣೆಗಳಿಸಿರುವ ಊಟಿಯು ಅತ್ಯದ್ಭುತ ಪ್ರಾಕೃತಿಕ ಸೌಂದರ್ಯ, ಹಿತಕರವಾದ ವಾತಾವರಣ ಹಾಗೂ ಕಂಗೊಳಿಸುವ ನಯನಮನೋಹರ ದೃಶ್ಯಾವಳಿಗಳಿಂದ ಭೂಲೋಕದ ಸ್ವರ್ಗದಂತೆಯೆ ಕಾಣುವಂತಹ ಅದ್ಭುತ ಗಿರಿಧಾಮ.

ಆದರೆ, ಊಟಿಯು ಬಹಳಷ್ಟು ಪ್ರಖ್ಯಾತಿಗಳಿಸಿರುವ ಪ್ರವಾಸಿ ತಾಣವಾಗಿದ್ದರಿಂದ ಇಲ್ಲಿನ ಸುತ್ತಾಟ, ಹೋಟೆಲ್ ದರಗಳು ಕೊಂಚ ದುಬಾರಿಯೆ. ಪ್ರಮುಖವಾಗಿ ಆರ್ಥಿಕವಾಗಿ ಅಷ್ಟೊಂದು ಸಬಲರಾಗಿಲ್ಲದವರಿಗೆ ಊಟಿ ಪ್ರವಾಸ ದುಬಾರಿ ಎನಿಸಬಹುದು. ಆದರೆ ಅವರು ಚಿಂತೆ ಪಡಬೇಕಾಗಿಲ್ಲ, ಕಡಿಮೆ ಹಣ ವ್ಯಯಿಸಬಲ್ಲವರೂ ಸಹ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಊಟಿಯಂತಹ ಒಂದು ಅದ್ಭುತ ಸ್ಥಳವನ್ನು ನೋಡಬಹುದಾಗಿದೆ.

ಕುಣ್ಣೂರು ಗಿರಿಧಾಮಕ್ಕೊಂದು ಪ್ರವಾಸ!

ಇದೂ ಸಹ ತಮಿಳುನಾಡಿನಲ್ಲೆ ಇರುವ ಒಂದು ಗಿರಿಧಾಮ. ಅಷ್ಟೆ ಅಲ್ಲ ಊಟಿ ರೀತಿಯ ಮೈಮಾಟ ಹಾಗೂ ಹಿತಕರವಾದ ಪರಿಸರವುಳ್ಳ ಆದರೆ ಊಟಿಯಷ್ಟು ದುಬಾರಿಯಲ್ಲದ ತಾಣ. ಇನ್ನೊಂದು ವಿಶೇಷವೆಂದರೆ ಈ ಗಿರಿಧಾಮವು ಬೆಂಗಳೂರಿಗೂ ಕೊಂಚ ಹತ್ತಿರ. ಅಂದರೆ ಬೆಂಗಳೂರಿನಿಂದ 220 ಕಿ.ಮೀ ಗಳಷ್ಟು ದೂರದಲ್ಲಿದೆ. ವಾರಾಂತ್ಯದ ರಜೆಗಳಲ್ಲಿ ಸುಲಲಿತವಾಗಿ ಈ ಗಿರಿಧಾಮಕ್ಕೆ ಭೇಟಿ ನೀಡಿ ಬರಬಹುದು.

ನೀವು ಈಗಾಗಲೆ ಕೊಡಗು, ಚಿಕ್ಕಮಗಳೂರು, ವಯನಾಡ್, ಮುನ್ನಾರ್ ಗಳಂತಹ ಗಿರಿಧಾಮಗಳಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದು ಮುಂದಿನ ಪ್ರವಾಸಕ್ಕೆ ಮಗದೊಂದು ವಿಶಿಷ್ಟ ಸ್ಥಳಕ್ಕೆ ಹೋಗಲು ಬಯಸಿದ್ದರೆ ಈ ಗಿರಿಧಾಮದ ಪ್ರವಾಸ ಒಂದು ಉತ್ತಮ ಆಯ್ಕೆಯಾಗಬಹುದು. ಹಾಗಾದರೆ ಈ ಚಿಕ್ಕ ಗಿರಿಧಾಮದ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ಪಡೆಯಿರಿ.

ಸೇಲಂ ಪಟ್ಟಣ

ಸೇಲಂ ಪಟ್ಟಣ

ಪೂರ್ವಘಟ್ಟಗಳಲ್ಲಿರುವ ಸೆರ್ವರಾಯನ ಗುಡ್ಡಗಳ ವ್ಯಾಪ್ತಿಯಲ್ಲಿ ಬರುವ ಸೊಗಸಾದ ಗಿರಿಧಾಮವಾಗಿದೆ ಯೇರ್ಕಾಡ್. ಇದನ್ನು ಸೆರ್ವರಾಯನ ಗುಡ್ಡಗಳು ಅಥವಾ ಆಂಗ್ಲದಲ್ಲಿ ಶಿವರಾಯನ ಹಿಲ್ಸ್ ಎಂತಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Thangaraj Kumaravel

ತಮಿಳುನಾಡು

ತಮಿಳುನಾಡು

ಈ ಪುಟ್ಟ ಹಾಗೂ ಸೊಗಸಾದ ಗಿರಿಧಾಮ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಸೇಲಂ ನಗರ ಕೇಂದ್ರದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿ ಯೇರ್ಕಾಡ್ ನೆಲೆಸಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತದೆ.

ಚಿತ್ರಕೃಪೆ: Vinamra Agrawal

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಬೆಂಗಳೂರಿನಿಂದ ಕೇವಲ 220 ಗಳಷ್ಟು ದೂರದಲ್ಲಿರುವ ಯೇರ್ಕಾಡ್ ಅನ್ನು ಬೆಂಗಳೂರಿನಿಂದ ಸೇಲಂ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ಇನ್ನೂ ಸೇಲಂಗೆ ಬೆಂಗಳೂರಿನಿಂದ ಸಾಕಷ್ಟು ಬಸ್ಸುಗಳು ಲಭ್ಯವಿರುವುದಲ್ಲದೆ ರೈಲಿನ ವ್ಯವಸ್ಥೆಯೂ ಸಹ ಇರುವುದರಿಂದ ಯೇರ್ಕಾಡ್ ಗೆ ಸುಲಭವಾಗಿ ಭೇಟಿ ನೀಡಬಹುದು.

ಚಿತ್ರಕೃಪೆ: vinod velayudhan

ಭೇಟಿ ನೀಡಿ

ಭೇಟಿ ನೀಡಿ

ಇದು ಊಟಿಯಂತೆ ಬಹು ಜನರಿಗೆ ಗೊತ್ತಿಲ್ಲದ ಕಾರಣದಿಂದಾಗಿ ಇಲ್ಲಿ ಪ್ರವಾಸಿ ಚಟುವಟಿಕೆ ಊಟಿಯನ್ನು ಹೋಲಿಸಿದಾಗ ಬಲು ಕಮ್ಮಿ. ಹಾಗಾಗಿ ಸಾಕಷ್ಟು ಬೇಡಿಕೆಯಿಲ್ಲದ ಪರಿಣಾಮವಾಗಿ ಇಲ್ಲಿ ಪ್ರವಾಸ ವೆಚ್ಚ ಗಮನಾರ್ಹವಾಗಿ ಬಲು ಕಡಿಮೆ. ಆದರೆ ಗಿರಿಧಾಮದ ಅಂದ ಚೆಂದದಲ್ಲಿ ಯಾವುದೆ ರಾಜಿಗಳಿಲ್ಲ.

ಚಿತ್ರಕೃಪೆ: Subharnab Majumdar

ಅಪಾರ ಸೃಷ್ಟಿ ಸೌಂದರ್ಯ

ಅಪಾರ ಸೃಷ್ಟಿ ಸೌಂದರ್ಯ

ಊಟಿಯಂತೆಯೆ ಇಲ್ಲಿಯೂ ಸಹ ಸೊಗಸಾದ ಕೆರೆಯಿದ್ದು ಅದರಿಂದಾಗಿಯೆ ಈ ಗಿರಿಧಾಮಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ. ಅಲ್ಲದೆ ಸುತ್ತ ಮುತ್ತಲಿನ ಹಚ್ಚ ಹಸಿರು, ನಯನಮನೋಹರ ದೃಶ್ಯಾವಳಿಗಳು, ತಂಪಾದ ವಾತಾವರಣ ಪ್ರವಾಸಿಗರ ಮನ ಕದಿಯುವಲ್ಲಿ ಸಂಶಯವಿಲ್ಲ.

ಚಿತ್ರಕೃಪೆ: Thangaraj Kumaravel

ಹೆಗ್ಗಳಿಕೆ

ಹೆಗ್ಗಳಿಕೆ

ಕಡಿಮೆ ವೆಚ್ಚದಲ್ಲೆ ಇಲ್ಲಿ ಪ್ರವಾಸಿಗ ಸುಂದರ ಗಿರಿಧಾಮದ ಅದ್ಭುತ ಅನುಭವ ಪಡೆಯುವುದರಿಂದ, ಹೇಗೆ ಕಡಲೆ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗಿದೆಯೊ ಅದೆ ರೀತಿಯಾಗಿ ಇದನ್ನು ಬಡವರ ಊಟಿ ಎಂದೆ ಪ್ರೀತಿಯಿಂದ ಸಂಬೋಧಿಸಲಾಗಿದೆ.

ಚಿತ್ರಕೃಪೆ: varun suresh

ಈ ತಾಣ

ಈ ತಾಣ

ಪೂರ್ವಘಟ್ಟಗಳ ಯೇರ್ಕಾಡ್ ಗಿರಿಧಾಮವು ಸಮುದ್ರ ಮಟ್ಟದಿಂದ ನಾಲ್ಕುವರೆ ಸಾವಿರ ಅಡಿಗಿಂತಲೂ ಅಧಿಕ ಎತ್ತರದಲ್ಲಿರುವುದರಿಂದ ಹಿತಕರವಾದ ವಾತಾವರಣ ಹಾಗೂ ಸುಶ್ರಾವ್ಯವಾದ ಪರಿಸರವನ್ನು ಹೊಂದಿದೆ.

ಚಿತ್ರಕೃಪೆ: Thangaraj Kumaravel

ಸೆರ್ವರಾಯ

ಸೆರ್ವರಾಯ

ಯೇರ್ಕಾಡ್ ಗಿರಿಧಾಮದಲ್ಲಿ ಕಂಡುಬರುವ ಅತಿ ಎತ್ತರದ ಸ್ಥಳದಲ್ಲಿ ದೇವಾಲಯವೊಂದನ್ನು ಕಾಣಬಹುದಾಗಿದ್ದು ಅದನ್ನು ಸೆರ್ವರಾಯನ ದೇವಾಲಯ ಎಂದು ಕರೆಯಲಾಗಿದೆ. ಸೆರ್ವರಾಯ ಸ್ಥಳೀಯವಾಗಿ ಆರಾಧಿಸಲ್ಪಡುವ ಪ್ರಮುಖ ದೈವವಾಗಿದೆ.

ಚಿತ್ರಕೃಪೆ: Aruna

ಹಾಗಾಗಿ ಯೇರ್ಕಾಡ್

ಹಾಗಾಗಿ ಯೇರ್ಕಾಡ್

ಯೇರಿ ಹಾಗೂ ಕಾಡು ಎಂಬ ಎರಡು ಪದಗಳು ಸಂಯೋಜನೆಗೊಂಡು ಈ ಗಿರಿಧಾಮಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ. ತಮಿಳಿನಲ್ಲಿ ಯೇರಿ ಎಂದರೆ ಕೆರೆ ಹಾಗೂ ಕಾಡ್ ಅಂದರೆ ಅರಣ್ಯ ಅಥವಾ ಕಾಡು ಎಂಬರ್ಥವಿರುವುದರಿಂದ ಹೆಸರು ಈ ರೀತಿಯಾಗಿ ಬಂದಿದೆ.

ಚಿತ್ರಕೃಪೆ: Vengolis

ಅರಣ್ಯ

ಅರಣ್ಯ

ಅಂದರೆ ಮುಖ್ಯವಾಗಿ ತಿಳಿದಿರಬೆಕಾದ ವಿಷಯವೆಂದರೆ ಈ ಪ್ರದೇಶವು ವಿಶಾಲವಾದ ಕೆರೆ ಹಾಗೂ ಅದರ ಸುತ್ತಮುತ್ತಲೂ ಅತಿ ದಟ್ಟವಾದ ಕಾಡಿನಿಂದ ಆವರಿಸಿದೆ. ಅರಣ್ಯ ಕೆರೆ ಎಂದೆ ಇದನ್ನು ಗುರುತಿಸಿದ್ದರಿಂದ ಇದನ್ನೆ ಸ್ಥಳೀಯ ಭಾಷೆಯಂತೆ ಸುಲಭವಾಗಿ ಜನರು ಯೇರ್ಕಾಡ್ ಎಂದು ಕರೆದರು.

ಚಿತ್ರಕೃಪೆ: Mithun Kundu

ಎಂದೂ ಕರೆಯುತ್ತಾರೆ

ಎಂದೂ ಕರೆಯುತ್ತಾರೆ

ಕ್ರಮೇಣವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರ ಗಮನಸೆಳೆದ ಯೇರ್ಕಾಡ್ ಇದ್ದದ್ದರಲ್ಲಿ ಈ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಂದಲೆ "ದಕ್ಷಿಣದ ರತ್ನ" ಅಂದರೆ "ಜೆವೆಲ್ ಆಫ್ ಸೌತ್" ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಚಿತ್ರಕೃಪೆ: solarisgirl

ಆದರೂ ಸೌಂದರ್ಯಕ್ಕೆ ಕೊರತೆಯಿಲ್ಲ

ಆದರೂ ಸೌಂದರ್ಯಕ್ಕೆ ಕೊರತೆಯಿಲ್ಲ

ಇಂದು ಈ ಗಿರಿಧಾಮಕ್ಕೆ ಊಟಿಗೆ ಭೇಟಿ ನೀಡುವಂತೆ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಬರುವುದಿಲ್ಲವಾದರೂ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದಂತೂ ಸುಳ್ಳಲ್ಲ. ಆದರೆ ಈ ಸುಂದರ ತಾಣವನ್ನು ಸಂರಕ್ಷಿಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬ ಪ್ರವಾಸಿಗ ಹಾಗೂ ಸ್ಥಳೀಯರ ಕರ್ತವ್ಯ ಕೂಡು ಹೌದು.

ಚಿತ್ರಕೃಪೆ: Subharnab Majumdar

ದಟ್ಟ ಹಸಿರಿನ ರಾಶಿ

ದಟ್ಟ ಹಸಿರಿನ ರಾಶಿ

ಈ ಗಿರಿಧಾಮವು ಅತಿ ಸುಂದರವಾದ ಮನಸಿಗೆ ಮುದ ನೀಡುವ ಆಕರ್ಷಕ ಗಿಡ ಮರಗಳಿಂದ ಕೂಡಿರುವ ದೃಶ್ಯಾವಳಿಗಳಿಗೆ ಬಲು ಹೆಸರುವಾಸಿ. ಅಲ್ಲದೆ ಇಲ್ಲಿ ಬಲು ವೈವಿಧ್ಯಮಯವಾದ ಸಸ್ಯಗಳು ಹಾಗೂ ಕ್ಷಣದಲ್ಲೆ ಆಕರ್ಷಿಸುವ ಬಣ್ಣ ಬಣ್ಣದ ಹೂವುಗಳಿಗಾಗಿ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Joseph Jayanth

ಮನಸೆಳೆಯುತ್ತವೆ

ಮನಸೆಳೆಯುತ್ತವೆ

ಇಲ್ಲಿ ಹಲವು ವೀಕ್ಷಣಾ ತಾಣಗಳಿವೆ. ಅಲ್ಲಿಂದ ಕಂಡುಬರುವ ನೋಟ ಎಂದಿಗೂ ಮರೆಯದ ಹಾಗೆ ಅನುಭವ ನೀಡುತ್ತವೆ ಎಂದರೆ ತಪ್ಪಾಗಲಾರದು. ಮೇಘಗಳ ನಿಕಟತನ, ಗಾಳಿಯ ಉಲ್ಲಸಮಯ ಆಕ್ರಂದನ, ಬೆಟ್ಟ-ಗುಡ್ಡಗಳ ಗಟ್ಟಿತನ ಮೈಮನಗಳಲ್ಲಿ ಆವರಿಸಿಬಿಡುತ್ತದೆ.

ಚಿತ್ರಕೃಪೆ: ZeePack

ಕಣ್ಮನ ಸೆಳೆಯುವ ನೋಟ

ಕಣ್ಮನ ಸೆಳೆಯುವ ನೋಟ

ಕೆಲವಾರು ಸುಂದರ ರಿಸಾರ್ಟು ಹಾಗೂ ಹೋಟೆಲುಗಳು ಯೇರ್ಕಾಡ್ ನಲ್ಲಿದ್ದು ಅಲ್ಲಿ ಪ್ರವಾಸಿಗರು ವಸತಿ ಹೂಡಬಹುದು. ಅಲ್ಲಿನ ವಿಶೇಷವೆಂದರೆ ಈ ರಿಸಾರ್ಟುಗಳೂ ಸಹ ಅತ್ಯದ್ಭುತ ನೋಟಗಳನ್ನು ಕರುಣಿಸುವಂತಹ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಾಣಗೊಂಡಿದ್ದು ನಿಮಗೆ ದಿನದ 24 ಘಂಟೆಯೂ ಅದ್ಭುತ ಅನುಭವ ನೀಡುವಂತಿವೆ.

ಚಿತ್ರಕೃಪೆ: Subharnab Majumdar

ಲಭ್ಯವಿದೆ

ಲಭ್ಯವಿದೆ

ಯೇರ್ಕಾಡ್ ಕೆರೆ, ಭವ್ಯ ಹಾಗೂ ಮನಮೋಹಕ ಕೆರೆಯಾಗಿದ್ದು ಇದರಲ್ಲಿ ದೋಣಿ ವಿಹಾರ ಸೌಲಭ್ಯವೂ ಸಹ ದೊರೆಯುತ್ತದೆ. ಕಾಡಿನ ಮಧ್ಯದಲ್ಲಿ, ನೀರಿನ ಒಡಲ ಮೇಲೆ ಹಗುರವಾಗಿ ತೇಲುತ್ತ ಸಾಗುವಾಗಾಗುವಾನಂದವನು ಮರೆಯಲಸಾಧ್ಯ.

ಚಿತ್ರಕೃಪೆ: Manokaran M

ನಿರ್ಮಲ ಭಾವ

ನಿರ್ಮಲ ಭಾವ

ಯೇರ್ಕಾಡ್ ಸಾಕಷ್ಟು ಆಕರ್ಷಣೆಗಳನ್ನು ಹೊತ್ತು ನಿಂತಿರುವ ಗಿರಿಧಾಮ. ಹಿಂದು ದೇವಾಲಯಗಳು ಹಾಗೂ ಕೆಲವು ಸುಂದರ ವಾಸ್ತುಶೈಲಿಯ ಚರ್ಚುಗಳನ್ನೂ ಸಹ ಇಲ್ಲಿ ಕಾಣಬಹುದು. ಪ್ರಕೃತಿ ಮಾತೆಯ ಕಂಗಳೊಳಗೆ ನೆಲೆಸಿರುವ ಈ ಗಿರಿಧಾಮವು ಪ್ರಶಾಂತತೆಯಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುತ್ತದೆ.

ಚಿತ್ರಕೃಪೆ: Jai Kumara Yesappa

ಇತರೆ ದೇವಾಲಯಗಳು

ಇತರೆ ದೇವಾಲಯಗಳು

ಯೇರ್ಕಾಡ್ ನಲ್ಲಿರುವ ಸೆರ್ವರಾಯನ ದೇವಸ್ಥಾನದ ಆವರಣದಲ್ಲಿ ಕಾವೇರಿ ದೇವಿಯ ದೇವಾಲಯ ಹಾಗೂ ಬಳಿಯಲ್ಲೆ ರಾಜರಾಜೇಶ್ವರಿ ದೇವಿ ಮತ್ತು ಮುರುಗನ್ ಸ್ವಾಮಿಯ ದೇವಾಲಯಗಳಿದ್ದು ಸಾಕಷ್ಟು ಧಾರ್ಮಿಕಾಸಕ್ತರನ್ನೂ ಸಹ ಈ ಗಿರಿಧಾಮ ಆಕರ್ಷಿಸುತ್ತದೆ. ರಾಜರಾಜೇಶ್ವರಿ ದೇವಾಲಯ.

ಚಿತ್ರಕೃಪೆ: Aruna

ಕೆರೆಯ ಪಕ್ಕದಲ್ಲೆ

ಕೆರೆಯ ಪಕ್ಕದಲ್ಲೆ

ಯೇರ್ಕಾಡ್ ಕೆರೆಯ ಪಕ್ಕದಲ್ಲೆ ಉದ್ಯಾನವಿದ್ದು ಪ್ರವಾಸಿಗರಿಗೆ ಹೆಚ್ಚಿನ ಆನಂದ ಕರುಣಿಸುತ್ತದೆ. ಈ ಉದ್ಯಾನವನಕ್ಕೆ ಯೇರ್ಕಾಡ್ ಲೇಕ್ ಪಾರ್ಕ್ ಎಂದೆ ಕರೆಯುತ್ತಾರೆ. ಈ ಉದ್ಯಾನದಲ್ಲಿ ಒಂದೊಂದು ಕ್ಷಣವೂ ಆನಂದಮಯವಾಗಿರುವುದರಲ್ಲಿ ಸಂಶಯವೆ ಇಲ್ಲ.

ಚಿತ್ರಕೃಪೆ: Yercaud-elango

ಸುಂದರ

ಸುಂದರ

ಅಣ್ಣಾ ಪಾರ್ಕ್ ಅಥವಾ ಉದ್ಯಾನವನ ಯೇರ್ಕಾಡ್ ನಲ್ಲಿ ನೋಡಬಹುದಾದ ಇನ್ನೊಂದು ಸುಂದರ ಸ್ಥಳ. ವಿಶಾಲವಾದ ಗಿಡ-ಮರಗಳನ್ನುಳ್ಳ ಈ ಅದ್ಭುತ ಉದ್ಯಾನವು ಕುಟುಂಬದೊಡನೆ ವಿಹರಿಸಲು ಹಾಗೂ ವಿಶ್ರಾಂತಿ ಪಡೆಯಲು ಅದ್ಭುತವಾದ ಸ್ಥಳವಾಗಿದೆ.

ಚಿತ್ರಕೃಪೆ: Yercaud-elango

ಅದ್ಭುತವಾಗಿದೆ

ಅದ್ಭುತವಾಗಿದೆ

ಬಟಾನಿಕಲ್ ಉದ್ಯಾನ ಹಾಗೂ ಗುಲಾಬಿ ತೋಟ ಇಲ್ಲಿ ಆಸ್ವಾದಿಸಬಹುದಾದ ಎರಡು ಸುಂದರ ಸ್ಥಳಗಳು. ಹಲವು ಬಗೆಯ ಸಸ್ಯಗಳನ್ನು ಈ ಬಟಾನಿಕಲ್ ಉದ್ಯಾನದಲ್ಲಿ ಕಾಣಬಹುದು.

ಚಿತ್ರಕೃಪೆ: Yercaud-elango

ಬಣ್ಣ ಬಣ್ಣದ ಹೂಗಳು

ಬಣ್ಣ ಬಣ್ಣದ ಹೂಗಳು

ಇನ್ನೂ ಗುಲಾಬಿ ತೋಟವೂ ಸಹ ಸಾಕಷ್ಟು ಸುಂದರ ಅನುಭವ ನೀಡುವ ಉದ್ಯಾನ. ವಿವಿಧ ತಳಿಗಳ, ಬಣ್ಣಬಣ್ಣದ ಗುಲಾಬಿ ಹೂವುಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Aruna

ವಿಶಿಷ್ಟವಾದ

ವಿಶಿಷ್ಟವಾದ

ಆರ್ಕಿಡ್ ಎಂಬುದು ಒಂದು ವಿಶಿಷ್ಟ ಜಾತಿಯ ಬಲು ಬೇಡಿಕೆಯುಳ್ಳ ಅಪರುಪದ ಹೂವುಗಳುಳ್ಳ ಸಸ್ಯ. ಇಂತಹ ಹಲವಾರು ಪ್ರಬೇಧಗಳ ಆರ್ಕಿಡ್ ಗಳನ್ನು ಇಲ್ಲಿ ಕಾಣಬಹುದು. ಅದೂ ಕೂಡ ಯೇರ್ಕಾಡ್ ನಲ್ಲಿರುವ ಆರ್ಕಿಡೋಟೆರಿಯಂನಲ್ಲಿ. ಬಟಾನಿಕಲ್ ಸರ್ವೇ ಆಫ್ ಇಂಡಿಯಾದ ದಕ್ಷಿಣ ಭಾರತದ ಶಾಖೆಯು ಈ ಆರ್ಕಿಡ್ ಸಂಗ್ರಹಾಲಯವನ್ನು ನಿರ್ವಹಿಸುತ್ತದೆ.

ಚಿತ್ರಕೃಪೆ: Yercaud-elango

ಚೆನ್ನೈ ಟ್ರೆಕ್ ಕ್ಲಬ್

ಚೆನ್ನೈ ಟ್ರೆಕ್ ಕ್ಲಬ್

ಯೇರ್ಕಾಡ್ ಕೇವಲ ಕುಟುಂಬದವರೊಡನೆ ಭೇಟಿ ನೀಡಬಹುದಾದ ಸುಂದರ ಗಿರಿಧಾಮವಾಗಿ ಮಾತ್ರವಲ್ಲದೆ ಹದಿಹರೆಯದವರ ನೆಚ್ಚಿನ ಚಾರಣ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಚೆನ್ನೈ ಟ್ರೆಕ್ಕರ್ಸ್ ಕ್ಲಬ್ ಇಲ್ಲಿ ಚಾರಣವನ್ನು ಆಯೋಜಿಸುತ್ತಿರುತ್ತದೆ. ಆಸಕ್ತಿ ಇರುವವರು ಮುಂಚಿತವಾಗಿ ಆ ಕ್ಲಬ್ ನಲ್ಲಿ ಹೆಸರು ನೊಂದಾಯಿಸಿಕೊಂಡು ಚಾರಣದಾನಂದವನ್ನು ಪಡೆಯಬಹುದು.

ಚಿತ್ರಕೃಪೆ: Vinayak Shankar Rao

ಕಿಳಿಯೂರು ಜಲಪಾತ

ಕಿಳಿಯೂರು ಜಲಪಾತ

ಯೇರ್ಕಾಡ್ ತನ್ನಲ್ಲಿರುವ ಒಂದು ಸುಂದರವಾದ ಜಲಪಾತಕ್ಕೂ ಬಲು ಹೆಸರುವಾಸಿಯಾಗಿದೆ. ಅದೆ ಕಿಳಿಯೂರು ಜಲಪಾತ. 90 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಸುಂದರ ಜಲಪಾತವು ನೋಡಲು ನಯನಮನೋಹರವಾಗಿದೆ.

ಚಿತ್ರಕೃಪೆ: Antkriz

ಮೇ ಮಧ್ಯದಲ್ಲಿ

ಮೇ ಮಧ್ಯದಲ್ಲಿ

ಪ್ರತಿ ವರ್ಷ ಮೇ ಮಧ್ಯದಲ್ಲಿ ಯೇರ್ಕಾಡ್ ನಲ್ಲಿ ಬೇಸಿಗೆ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಇದೆ ಸಮಯದಲ್ಲಿ ಗ್ರಾಮ ದೈವ ಸೆರ್ವರಾಯನ ಉತ್ಸವವೂ ಇರುವುದರಿಂದ ಈ ಬೇಸಿಗೆ ಉತ್ಸವ ಆಚರಣೆಯಲ್ಲಿ ಬಂದಿದ್ದು ಏಳು ದಿನಗಳ ಕಾಲ ಅದ್ಭುತವಾಗಿ ಆಚರಿಸಲ್ಪಡುತ್ತದೆ. ಪುಷ್ಪ ಪ್ರದರ್ಶನ ಈ ಉತ್ಸವದ ಪ್ರಮುಖ ಹೈಲೈಟ್.

ಚಿತ್ರಕೃಪೆ: Yercaud-elango

ಘೇಂಡಾಮೃಗ

ಘೇಂಡಾಮೃಗ

ಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಫಲ ಪುಷ್ಪಗಳನ್ನು ಬಳಸಿಕೊಂಡು ಅತ್ಯಾಕರ್ಷಕವಾಗಿ ಕಂಡುಬರುವ ವಿವಿಧ ರೀತಿಯ ಪ್ರಾಣಿ-ಪಕ್ಷಿ ಹಾಗೂ ಪ್ರಸಿದ್ಧ ಸ್ಮಾರಕ-ರಚನೆಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗುತ್ತದೆ.

ಚಿತ್ರಕೃಪೆ: Yercaud-elango

ಲೇಡಿ ಸೀಟ್

ಲೇಡಿ ಸೀಟ್

ಯೇರ್ಕಾಡ್ ಗಿರಿಧಾಮದಿಂದ ಸೇಲಂ ಪಟ್ಟಣವು ರಾತ್ರಿಯಲ್ಲಿ ಯಾವ ರೀತಿಯಾಗಿ ಕಂಡುಬರುತ್ತದೆ ಎಂದು ವಿವರಿಸುವ ಚಿತ್ರವಿದು. ಇದು ಯೇರ್ಕಾಡ್ ನಲ್ಲಿ ಲೇಡಿ ಸೀಟ್ ಎಂಬ ಹೆಸರಿನ ವೀಕ್ಷಣಾ ಕೇಂದ್ರ.

ಚಿತ್ರಕೃಪೆ: Ananth BS

ಗಿರಿಧಾಮ

ಗಿರಿಧಾಮ

ಹೀಗೆ ಎಲೆಮರೆಯ ಕಾಯಿಯಂತಿರುವ ಯೇರ್ಕಾಡ್ ಗಿರಿಧಾಮ ನಿಜಕ್ಕೂ ಸಂತಸ ಕರುಣಿಸುವ, ಮನಸ್ಸಿಗೆ ಮುದ ನೀಡುವ ಮತ್ತೆ ಹುರುಪು ತುಂಬುವ, ಬೆಂಗಳೂರಿಗೆ ತುಸು ಹತ್ತಿರದಲ್ಲಿರುವ ಅದ್ಭುತ ಗಿರಿಧಾಮವಾಗಿದ್ದು ಪ್ರವಾಸಿಗರನ್ನು ಸದಾ ಸ್ವಾಗತಿಸಲು ಸಜ್ಜಾಗಿ ನಿಂತಿರುತ್ತದೆ.

ಚಿತ್ರಕೃಪೆ: Subharnab Majumdar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X