Search
  • Follow NativePlanet
Share
» »ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ

ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ

By Arshad Hussain

ಹಿಮಾಚಲ ಪ್ರದೇಶ, ಹೆಸರೇ ಸೂಚಿಸುವಂತೆ ಹಿಮಾಲಯದ ತಪ್ಪಲಿನಲ್ಲಿರುವ ಅದ್ಭುತ ಪ್ರದೇಶವಾಗಿದ್ದು ಭಾರತದ ಅತ್ಯಂತ ಸುಂದರ ತಾಣಗಳಲ್ಲಿ ಒಂದಾಗಿದೆ. ಉತ್ತರದತ್ತ ಸಾಗುತ್ತಿದ್ದರೆ ಹಿಮಾಚ್ಛಾದಿತ ಬೆಟ್ಟಗಳು ತಮ್ಮ ಒಡಲಲ್ಲಿ ಆಳವಾದ ಕಣಿವೆಗಳು ಮತ್ತು ದಟ್ಟ ಅರಣ್ಯಗಳನ್ನು ಹೊಂದಿವೆ. ಇವು ಎಷ್ಟು ಸುಂದರ ಎಂದರೆ ಸ್ವರ್ಗದ ಒಂದು ತುಣುಕನ್ನೇ ಇಲ್ಲಿ ಇಳಿಸಲಾಗಿದೆ ಎಂದು ಅನ್ನಿಸುತ್ತದೆ. ಬಹುತೇಕ ಎಲ್ಲಾ ಪ್ರವಾಸಿಗಳು ಭೇಟಿ ನೀಡಬಯಸುವ ಪಟ್ಟಿಯಲ್ಲಿ ಹಿಮಾಚಲ ಪ್ರದೇಶವೂ ಇರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಹಿಂದೆ ಸವಲತ್ತುಗಳು ಕಡಿಮೆ ಇದ್ದ ಕಾರಣ ಈ ರಮಣೀಯ ತಾಣಗಳು ಪ್ರವಾಸಿಗರ ಪಾಲಿಗೆ ಅಪರಿಚಿತವಾಗಿಯೇ ಉಳಿದಿದ್ದವು. ಆದರೆ ಇಂದು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರವಾಸಿಗರಿಗೆ ಹೆಚ್ಚಿನ ತಾಣಗಳಲ್ಲಿ ಉತ್ತಮ ಸೌಲಭ್ಯ ಹಾಗೂ ಪ್ರಯಾಣದ ಅವಕಾಶಗಳನ್ನು ಒದಗಿಸಿದೆ. ಇವುಗಳಲ್ಲಿ ಬಹುತೇಕ ನಿಸರ್ಗ ರಮಣೀಯ ತಾಣಗಳಾಗಿವೆ. ಅಂತೆಯೇ ಐತಿಹಾಸಿಕ ಮಹತ್ವವುಳ್ಳ ಪ್ರದೇಶಗಳೂ ಇವೆ. ಹಿಮಾಲಯದಲ್ಲಿ ಹುಟ್ಟಿ ದಕ್ಷಿಣದತ್ತ ಧಾವಿಸಿ ಬರುವ ನೂರಾರು ನದಿಗಳು ಮತ್ತು ಉಪನದಿಗಳು ದಾರಿಯಲ್ಲಿ ಹಲವಾರು ರಮ್ಯ ಜಲಪಾತಗಳನ್ನು ಸೃಷ್ಟಿಸಿವೆ. ಈ ಜಲಪಾತಗಳ ಬಳಿ ಸಾಗಲು ಇಂದು ಉತ್ತಮ ಸೌಲಭ್ಯಗಳಿವೆ.

ಈ ಜಲಪಾತಗಳು ನಿಸರ್ಗದ ಚೆಲುವನ್ನೇ ಮೊಗೆಮೊಗೆದು ಆಗಸದಿಂದ ನೆಲಕ್ಕೆ ಚಿಮ್ಮಿಸುತ್ತಿವೆಯೇ ಎಂದೆನಿಸುವ ಒಂದಕ್ಕಿಂತ ಒಂದು ಸುಂದರ ಹಾಗೂ ಬಳಿ ಸಾಗಿದರೆ ಹಿಂದಿರುಗಲು ಮನಸ್ಸೇ ಬಾರದಷ್ಟು ಶುಭ್ರ ಮತ್ತು ತಣ್ಣನೆಯ ತಾಣಗಳಾಗಿವೆ. ಒಂದು ವೇಳೆ ಹಿಮಾಚಲ ಪ್ರದೇಶಕ್ಕೆ ನೀವಿನ್ನೂ ಹೋಗಿಲ್ಲವಾದರೆ ಈ ಜಲಪಾತಗಳ ಬಗ್ಗೆ ಅರಿತ ಬಳಿಕ ಈ ಬಗ್ಗೆ ಯೋಚಿಸುವಂತೆ ಮಾಡುವುದಂತೂ ಖಂಡಿತ! ಬನ್ನಿ, ಈ ಜಲಪಾತಗಳು ಯಾವುವು ನೋಡೋಣ:

1) ಭಾಗ್‍ಸುನಾಗ್ ಜಲಪಾತ:

1) ಭಾಗ್‍ಸುನಾಗ್ ಜಲಪಾತ:

PC- Denniss

ಹಿಮಾಚಲದ ಪ್ರಮುಖ ಪಟ್ಟಣವಾದ ಧರ್ಮಶಾಲಾದಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಈ ಸುಂದರ ಜಲಪಾತ ಈ ಪ್ರದೇಶದ ಅತಿ ಎತ್ತರದಿಂದ ಬೀಳುವ ಜಲಪಾತವೂ ಆಗಿದೆ. ಸುಮಾರು ಅರವತ್ತೈದು ಅಡಿ ಎತ್ತರದಿಂದ ಎರಡು ಧಾರೆಗಳಾಗಿ ಬೀಳುತ್ತದೆ. ಒಂದು ದೊಡ್ಡದಿದ್ದರೆ ಎರಡನೆಯದು ಚಿಕ್ಕದಾಗಿದೆ. ಮೇಲಿನಿಂದ ಒಂದೇ ಭಾಗದಿಂದ ಬೀಳುವ ನೀರು ಕೆಳಕ್ಕೆ ಬರುತ್ತಿದ್ದಂತೆ ಅಗಲವಾಗುತ್ತಾ ನೆಲಮುಟ್ಟುವಷ್ಟರಲ್ಲಿ ವಿಶಾಲವಾಗಿ ಹರಡಿ ಬೆಳ್ಳಗಿನ ಸೀರೆಯ ಸೆರಗು ಭೂದೇವಿನ ಭುಜದಿಂದ ನಲಕ್ಕೆ ತಾಕುತ್ತಿರುವಂತೆ ಅನ್ನಿಸುತ್ತದೆ.

ಈ ಜಲಪಾತಕ್ಕೆ ಸ್ಥಳೀಯರು ಭಾಗ್ಸು ಜಲಪಾತ ಎಂದೂ ಕರೆಯುತ್ತಾರೆ. ಭಗವಾನ್ ಶಿವನ ದೇವಾಲಯವಾದ ಭಾಗ್‍ಸುನಾಗ್ ದೇವಾಲಯ ಈ ಜಲಪಾತದ ಅನತಿ ದೂರದಲ್ಲಿರುವ ಕಾರಣ ಶಿವಭಕ್ತರಿಗೆ ಈ ಜಲಪಾತ ಧಾರ್ಮಿಕ ಮಹತ್ವವನ್ನೂ ನೀಡಿದೆ. ಖ್ಯಾತ ಮ್ಯಾಕ್ ಲಿಯೋಡ್ ಗಂಜ್ ಲಾಡ್ಜ್ ನಿಂದ ಸುಮಾರು ಎರಡು ಕಿ.ಮೀ ದೂರದಲ್ಲಿದ್ದು ಚಾರಣದ ಮೂಲಕ ತಲುಪಿದರೆ ಅತ್ಯುತ್ತಮ ಅನುಭವ ದೊರಕುತ್ತದೆ. ಚಾರಣ ಸಾಧ್ಯವಿಲ್ಲದವರಿಗೆ ವಾಹನದ ಮೂಲಕ ಜಲಪಾತದ ಬಳಿಯವರೆಗೂ ಹೋಗಬಹುದು. ಬೇಸಿಗೆಯಲ್ಲಿ ಕೊಂಚ ಸೊರಗುವ ಜಲಪಾತ ಮಳೆಗಾಲ ಮತ್ತು ಮಳೆಗಾಲದ ನಂತರದ ದಿನಗಳಲ್ಲಿ ಅತ್ಯಂತ ಸುಂದರವಾಗಿರುತ್ತದೆ. ಕಳೆದ ಐದು ವರ್ಷಗಳಲ್ಲಿ ಇಲ್ಲಿ ತಲುಪುವ ಸೌಲಭ್ಯ ಹೆಚ್ಚಿರುವ ಕಾರಣ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ.

2) ರಿಹಾಲಾ ಜಲಪಾತ

2) ರಿಹಾಲಾ ಜಲಪಾತ

ಹಿಮಾಚಲ ಪ್ರದೇಶದ ಎರಡು ಪರ್ವತಧಾಮಗಲಾದ ಲೇಹ್ ಮತ್ತು ಮನಾಲಿ ಪಟ್ಟಣಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಇದು ಮನಾಲಿಯಿಂದ ಸುಮಾರು ಹದಿನೈದು ಕಿ.ಮೀ ದೂರದಲ್ಲಿ ಹಾದಿಪಕ್ಕದಲ್ಲಿಯೇ ಸಿಗುತ್ತದೆ. ಬೆಟ್ಟಗಳ ಮೇಲಿಂದ ಇಳಿಜಾರಿನಲ್ಲಿ ಓಡೋಡಿ ಬರುತ್ತಿರುವಂತೆ ಮತ್ತು ಕಲ್ಲುಬಂಡೆಗಳ ಮೇಲೆ ಕುಣಿಯುತ್ತಾ ಕೆಳಕ್ಕೆ ಧಾವಿಸುವಂತೆ ಕಾಣುವ ಈ ಜಲಪಾತ ಅಷ್ಟೊಂದು ರಭಸದ ನೀರನ್ನು ಹೊಂದಿಲ್ಲವಾದರೂ ಕುಣಿಕುಣಿದು ಧಾವಿಸುವ ಪರಿಯೇ ಅತ್ಯಂತ ಸುಂದರವಾಗಿದೆ. ಹೀಗೇ ಇದು ಕುಪ್ಪಳಿಸುತ್ತಾ ಕೆಳಗಿನ ದೇವದಾರು ವೃಕ್ಷಗಳ ಅರಣ್ಯವನ್ನು ಹಸಿರುಗೊಳಿಸುತ್ತಾ ಕೆಳಗಿನ ಕಣಿವೆಗೆ ಧಾವಿಸುತ್ತದೆ. ಹೀಗೆ ಚಿಗುರಿರುವ ಹಸಿರನ್ನು ಛಾಯಾಚಿತ್ರಗಳ ಮೂಲಕ ಸೆರೆಹಿಡಿಯಲು ವಿಫುಲ ಅವಕಾಶಗಳಿವೆ. ಜಲಪಾತದ ಪಕ್ಕದಲ್ಲಿಯೇ ನಡೆಯುತ್ತಾ ಎಚ್ಚರಿಕೆಯಿಂದ ಮೇಲ್ಮುಖವಾಗಿ ಹೋಗಲೂ ಅವಕಾಶವಿದೆ. ಆದರೆ ಇದಕ್ಕೆ ಚಾರಣದ ಅನುಭವ ಅಗತ್ಯ. ಕಡಿದಾದ ಕಲ್ಲುಗಳೂ ಇದ್ದು ಇದನ್ನು ಹತ್ತಿ ಬೆಟ್ಟದ ಮೇಲೇರಲು ವೃತ್ತಿಪರ ಸಾಹಸಿಗರೂ ಆಗಮಿಸುತ್ತಾರೆ. ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಕಾರಣ ಈ ದಾರಿಯ ಮೂಲಕ ಹೋಗುವವರೂ ಜಲಪಾತದ ಬಳಿ ಕೊಂಚ ಹೊತ್ತಾದರೂ ನಿಂತೇ ಹೋಗುತ್ತಾರೆ. ಕೆಳದ ಕೆಲವು ವರ್ಷಗಳಲ್ಲಿ ಇದು ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ. ಬೇಸಿಗೆಯಲ್ಲಿ ಕೊಂಚ ಸೊರಗುವ ಜಲಪಾತ ಮಳೆಗಾಲದ ಬಳಿಕ ಭೋರ್ಗರೆಯುತ್ತದೆ. ಹಾಗಾಗಿ ಇದನ್ನು ಸಂದರ್ಶಿಸಲು ಅತ್ಯುತ್ತಮ ಸಮಯವೆಂದರೆ ಮಾರ್ಚ್ ನಿಂದ ನವೆಂಬರ್.

3) ಚಾಡ್ವಿಕ್ ಜಲಪಾತ

3) ಚಾಡ್ವಿಕ್ ಜಲಪಾತ

ಶಿಮ್ಲಾ ನಗರದ ಹೊರವಲಯದಲ್ಲಿರುವ ಬೆಟ್ಟಗಳ ಕಡಿದಾದ ಅಂಚಿನಲ್ಲಿ ಧುತ್ತನೇ ಮೇಲಿನಿಂದ ಬೀಳುವ ಇದು ನಡುವೆ ಕೆಲವು ಹೆಬ್ಬಂಡೆಗಳ ಮೇಲೆ ಬಿದ್ದು ಬಳಿಕ ಸುಮಾರು ಕಾಲುಭಾಗದಷ್ಟು ಹಾದಿಯನ್ನು ಗಾಳಿಯಲ್ಲಿಯೇ ಇಳಿಯುತ್ತದೆ. ವರ್ಷದ ಹನ್ನೆರಡು ತಿಂಗಳೂ ಈ ಜಲಪಾತದ ನೀರು ಅತ್ಯಂತ ತಣ್ಣಗಿರುವುದು ಒಂದು ವಿಶೇಷವಾಗಿದೆ. ತುದಿಯಿಂದ ನೆಲದವರೆಗಿನ ಸುಮಾರು 380 ಅಡಿ ಎತ್ತರವನ್ನು ಕ್ರಮಿಸುವ ಈ ನೀರು ಕೆಳಗಿನ ಪುಟ್ಟ ಕೆರೆಯಂತಿರುವ ಭಾಗದಲ್ಲಿ ತುಂತುರು ತುಂತುರಾಗಿ ಬೀಳುತ್ತದೆ. ಸುತ್ತ ಹರಡಿರುವ ಹಸಿರು ಈ ಸ್ಥಳವನ್ನು ಸ್ವರ್ಗ ಸಮಾನವಾಗಿಸುತ್ತವೆ. ನೀರಿನ ಮೇಲೆ ತುಂತುರಾಗಿ ಬೀಳುವ ದನಿ ಮತ್ತು ಮೇಲಿನ ಬಂಡೆಗಳ ಮೇಲೆ ಜಾರುವಾಗ ಆಗುವ ದನಿ ಇವೆರಡೂ ಮೇಳೈಸಿದ ಬಳಿಕ ಇಲ್ಲಿ ಆಗಮಿಸುವ ಪ್ರವಾಸಿಗರಿಗೆ ಅದ್ಭುತ ಅನುಭವ ನೀಡುತ್ತದೆ. ಈ ಸದ್ದಿಗೆ ಮನವನ್ನು ಸಂತೈಸುವ ಮತ್ತು ಅಪಾರವಾದ ಶಾಂತಿಯನ್ನು ನೀಡುವ ವಿಶೇಷ ಗುಣವಿದೆ.

ಹಿಮಾಚಲ ಪ್ರದೇಶ ಸರ್ಕಾರ ಅರಣ್ಯಗಳಲ್ಲಿ ಪ್ರವಾಸಿಗರು, ಅದರಲ್ಲೂ ಮಕ್ಕಳು ಅರಣ್ಯದ ಒಳ ಸಾಗದಂತೆ ಕೆಲವು ಗಡಿಗಳನ್ನು ನಿರ್ಮಿಸಿದ್ದು ಕೆಲವಾರು ಜಲಪಾತಗಳನ್ನು ಕೇವಲ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಮತ್ತು ಚಾರಣದ ಮೂಲಕ ಮಾತ್ರವೇ ನೋಡಬಹುದು. ಆದರೆ ಈ ಜಲಪಾತಕ್ಕೆ ಉತ್ತಮ ರಸ್ತೆ ಸೌಕರ್ಯವಿದೆ ಹಾಗೂ ಸುರಕ್ಷಿತವಾಗಿದ್ದು ನಿಸರ್ಗದ ರಮಣೀಯತೆಯನ್ನು ಸವಿಯಬಹುದು. ಈ ಜಲಪಾತದ ಬುಡದಲ್ಲಿ ಖ್ಯಾತ ವಿಜ್ಞಾನಿ ಚಾಡ್ವಿಕ್ ರವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಗುಮಾನಿಯಿಂದಾಗಿ ಈ ಜಲಪಾತಕ್ಕೆ ಈ ಹೆಸರು ಬಂದಿದೆ.

4) ಜೋಗಿನಿ ಜಲಪಾತ

4) ಜೋಗಿನಿ ಜಲಪಾತ

ನಮ್ಮ ಜೋಗ ಜಲಪಾತಕ್ಕೆ ಹೆಣ್ಣಿನ ಹೆಸರಿಟ್ಟರೆ ಹೇಗಿರಬಹುದು? ಉತ್ತರ ಜೋಗಿನಿ ಜಲಪಾತ. ನಮ್ಮ ಜೋಗಕ್ಕೆ ನಾಲ್ಕು ಧಾರೆಗಳಿದ್ದರೆ ಜೋಗಿನಿಗೆ ಒಂದೇ ಧಾರೆ, ಆದರೆ ಇದು ಮೂರು ಹಂತಗಳಲ್ಲಿ ಕೆಳಬೀಳುತ್ತದೆ. ಮನಾಲಿ ಪಟ್ಟಣದ ಬಳಿ ಇರುವ ವಶಿಷ್ಟ ದೇವಾಲಯದಿಂದ ಸುಮಾರು ನಾಲ್ಕು ಕಿಮೀ ಯಷ್ಟು ದೂರವಿದ್ದು ಇಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಆದರೆ ಬೆಟ್ಟಕ್ಕೆ ಅಭಿಮುಖವಾಗಿ ಏರುಗತಿಯಲ್ಲಿ ಸಾಗುವ ಈ ದಾರಿಯ ಇಕ್ಕೆಲದಲ್ಲಿಯೂ ಹರಡಿರುವ ಹಸಿರು ಮತ್ತು ತಂಗಾಳಿ ನಾಲ್ಕು ಕಿಮೀ ಬಂದಿರುವುದನ್ನೇ ಮರೆಸುತ್ತದೆ.

ತುದಿಯಿಂದ ಬುಡದವರೆಗೆ ಈ ನೀರು ಸುಮಾರು ನೂರೈವತ್ತು ಅಡಿ ಎತ್ತರವನ್ನು ಹೊಂದಿದ್ದು ಪ್ರತಿ ಐವತ್ತು ಅಡಿಯಲ್ಲಿ ಒಂದೊಂದು ಹಂತವನ್ನು ದಾಟುತ್ತದೆ. ಹಾಗಾಗಿ, ಕುಟುಂಬವರ್ಗ ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯಲು ಇದು ಅತ್ಯಂತ ಸೂಕ್ತ ತಾಣವಾಗಿದ್ದು ಕೆಲವು ಘಂಟೆಗಳವರೆಗೆ ಇರಬಹುದಾದ ತಾಣವಾಗಿದೆ.

5) ಜಾನಾ ಜಲಪಾತ

5) ಜಾನಾ ಜಲಪಾತ

ಹಿಮಾಚಲ ಪ್ರದೇಶದ ಎರಡು ಪ್ರಮುಖ ನಗರಳಾದ ಕುಲ್ಲು ಮತ್ತು ಮನಾಲಿ ನಗರಗಳಿಗೆ ಸುಮಾರು ಸಮಾನಾಂತರದಲ್ಲಿರುವ ಅಂದರೆ ಮನಾಲಿಯಿಂದ 32 ಕಿ.ಮೀ ಮತ್ತು ಕುಲ್ಲು ವಿನಿಂದ 33.5 ಕಿ.ಮೀ ದೂರವಿರುವ ಈ ಜಲಪಾತ ನಗ್ಗರ್ ಎಂಬ ಪಟ್ಟಣದಿಂದ ಹನ್ನೆರಡು ಕಿಮೀ ದೂರವಿದೆ. ಬೆಟ್ಟದ ಅಂಚಿನ ನಡುವೆ ಇರುವ ಈ ಜಲಪಾತ ಬೆಟ್ಟದ ತುದಿಯಲ್ಲಿ ಯಾರೋ ಒಂದು ದೊಡ್ಡ ಪೈಪಿನಿಂದ ನೀರನ್ನು ಹೊರಬಿಡುತ್ತಿದ್ದಾರೆಯೋ ಎಂಬಂತೆ ದೊಡ್ಡ ಧಾರೆಯಾಗಿ ಬೆಟ್ಟದ ನಡುವೆ ಬಿದ್ದು ಕೊಂಚ ದೂರ ಕ್ರಮಿಸಿ ಮತ್ತೆ ಇನ್ನೊಂದು ಧಾರೆಯಾಗಿ ಕೆಳಧುಮುತ್ತದೆ. ಇವೆರಡೂ ಧಾರೆಗಳ ನಡುವೆ ಕೊಂಚ ದೂರ ಕ್ರಮಿಸುವಲ್ಲಿ ಪುಟ್ಟ ಸೇತುವೆಯನ್ನು ಕಟ್ಟಲಾಗಿದ್ದು ಜಲಪಾತದ ನೇರವಾದ ನೋಟ ಲಭ್ಯವಿದೆ. ಬೆಟ್ಟದ ತುದಿಯತ್ತ ನೋಡಿದರೆ ಹಿಮಾಚ್ಛಾದಿತ ಬೆಟ್ಟದಿಂದ ಕರಗಿ ಬರುವ ನೀರೇ ಇದು ಎಂದು ಖಾತ್ರಿಯಾಗುತ್ತದೆ. ಇದಕ್ಕೆ ಈ ನೀರು ಸದಾ ಐಸಿನಷ್ಟು ತಣ್ಣಗಿರುವುದೇ ಸಾಕ್ಷಿ. ಛಾಯಾಚಿತ್ರಕಾರರಿಗೆ ತಮ್ಮ ಜೀವನದ ಅತ್ಯುತ್ತಮ ಚಿತ್ರಗಳನ್ನು ತೆಗೆಯಲು ಇದು ಅತ್ಯುತ್ತಮ ತಾಣವಾಗಿದೆ.

ಕೆಳಕ್ಕೆ ಬಿದ್ದ ನೀರು ಪುಟ್ಟ ಕೆರೆಯನ್ನು ನಿರ್ಮಿಸಿದ್ದು ಇಲ್ಲಿ ಹೆಚ್ಚು ಆಳವಿಲ್ಲದ ಕಾರಣ ಈಜಲೂ ಸೂಕ್ತವಾಗಿದೆ. ನಗ್ಗರ್ ಪಟ್ಟಣದಿಂದ ಈ ಜಲಪಾತವಿರುವ ಬೆಟ್ಟದ ಬುಡದವರೆಗೂ ವಾಹನ ಸೌಕರ್ಯವಿದೆ. ಇಲ್ಲಿಂದ ಸುಮಾರು ಹತ್ತು ಹದಿನೈದು ನಿಮಿಷ ನಡೆಯಬೇಕಾಗುತ್ತದೆ. ಚಾರಣಿಗರು ಜಲಪಾತದ ಪಕ್ಕದಲ್ಲಿರುವ ಬೆಟ್ಟದ ತುದಿಗೂ ತಲುಪಬಹುದು ಹಾಗೂ ಜಲಪಾತದ ಇನ್ನೊಂದು ನೋಟವನ್ನೂ ಸವಿಯುವ ಅವಕಾಶವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X