Search
  • Follow NativePlanet
Share
» »ಮರೆಯಲಾಗದ ಉತ್ತರ ಕರ್ನಾಟಕದ ಸ್ಥಳಗಳು

ಮರೆಯಲಾಗದ ಉತ್ತರ ಕರ್ನಾಟಕದ ಸ್ಥಳಗಳು

By Vijay

ಅಖಂಡ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರುವ ಉತ್ತರ ಕರ್ನಾಟಕ ಪ್ರದೇಶವು ತನ್ನದೆ ಆದ ವಿಶಿಷ್ಟ ಸಂಸ್ಕೃತಿ-ಸಂಪ್ರದಾಯಗಳಿಂದ ಸಂಪದ್ಭರಿತವಾಗಿದ್ದು ವಿಭಿನ್ನವಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ "ಗಂಡು ಮೆಟ್ಟಿದ ನಾಡು" ಎಂದೇ ಪ್ರೀತಿಯಿಂದ ಸಂಭೋದಿಸಲಾಗುವ ಈ ಭಾಗವು ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ.

ಅಷ್ಟೆ ಅಲ್ಲ, ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕರು, ಸಂಗೀತಗಾರರು, ಸಾಹಿತಿಗಳು, ಕಲಾವಿದರು ಹೀಗೆ ಅನೇಕ ಗಣ್ಯವ್ಯಕ್ತಿಗಳು ಈ ಭಾಗದಿಂದ ಬಂದಿದ್ದು ದೇಶದಲ್ಲೆ ಪ್ರಸಿದ್ಧರಾಗಿದ್ದಾರೆ. ಇನ್ನೂ ಭವ್ಯ ವಾಸ್ತುಶಿಲ್ಪ, ಇತಿಹಾಸ, ಪ್ರವಾಸೋದ್ಯಮವನ್ನು ಗಮನಿಸಿದರೆ ಉತ್ತರ ಕರ್ನಾಟಕದ ಸಾಕಷ್ಟು ಸ್ಥಳಗಳು ಕೇವಲ ರಾಜ್ಯವಲ್ಲದೆ ದೇಶದಲ್ಲೆ ಪ್ರಸಿದ್ಧಿ ಪಡೆದ ಪ್ರದೇಶಗಳಾಗಿವೆ.

ಬಾಗಲಕೋಟೆಯ ಬಾದಾಮಿಯಾಗಿರಬಹುದು, ಗದಗಿನ ಲಕ್ಕುಂಡಿಯಾಗಿರಬಹುದು, ಕನ್ನಡ ಭಾಷಾ ಪರಂಪರೆಯ ಹೊಳಪಿರುವ ತಿರುಳುಗನ್ನಡ ನಾಡು ಎಂದೆ ಕರೆಯಲಾಗುವ ಲಕ್ಷ್ಮೇಶ್ವರವಿರಬಹುದು, ಪ್ರೀತಿಯಿಂದ ಉತ್ತರ ಕರ್ನಾಟಕದ "ನಯಾಗ್ರಾ" ಜಲಪಾತ ಎಂದೇ ಕರೆಯಲಾಗುವ ಗೋಕಾಕ್ ಜಲಪಾತವಿರಬಹುದು, ವಿಶ್ವವಿಖ್ಯಾತ ಏಳು ಸಲ ಪ್ರತಿಧ್ವನಿಸುವ ವಿಜಯಪುರದ ಗೋಲಗುಮ್ಮಟವಿರಬಹುದು ಎಲ್ಲವೂ ಇರುವುದು ಉತ್ತರ ಕರ್ನಾಟಕದಲ್ಲೆ.

ನಿಮಗಿಷ್ಟವಾಗಬಹುದಾದ : ದಕ್ಷಿಣ ಭಾರತದಲ್ಲಿರುವ ಸಮಗ್ರ ಪ್ರಮುಖ ಪ್ರವಾಸಿ ತಾಣಗಳು

ಬಾಗಲಕೋಟೆ ಜಿಲ್ಲೆಯ ಐಹೊಳೆಯನ್ನು ಹಿಂದು ವಾಸ್ತುಶಿಲ್ಪದ ತೊಟ್ಟಿಲು ಎಂದೆ ಕರೆಯಲಾಗುತ್ತದೆ. ಇನ್ನೂ ಬಳ್ಳಾರಿ ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿಯು ವಿಜಯನಗರದ ಗತವಾದ ಭವ್ಯ ಪರಂಪರೆಯ ನೆನಪನ್ನು ಇಂದಿಗೂ ಜೀವಂತವಾಗಿಟ್ಟಿರುವ ಉತ್ತರ ಕರ್ನಾಟಕದ ಅದ್ಭುತ ಐತಿಹಾಸಿಕ ಪ್ರವಾಸಿ ಸ್ಥಳವಾಗಿದೆ.

ಪ್ರಸ್ತುತ ಲೇಖನದ ಮೂಲಕ ಉತ್ತರ ಕರ್ನಾಟಕದ ಐತಿಹಾಸಿಕ ಶ್ರೀಮಂತಿಕೆ, ಪ್ರವಾಸಿ ಆಕರ್ಷಣೆಯುಳ್ಳ ವೈವಿಧ್ಯಮಯ ಸ್ಥಳಗಳು, ಅಲ್ಲಿನ ಆಚಾರ-ವಿಚಾರ ಹಾಗೂ ಭಾಷಾ ವೈವಿಧ್ಯತೆಯ ಕುರಿತು ಚುಟುಕಾಗಿ ತಿಳಿಯಿರಿ ಹಾಗೂ ಸಮಯಾವಕಾಶ ದೊರೆತರೆ ಖಂಡಿತವಾಗಿಯೂ ಈ ಸ್ಥಳಗಳಿಗೊಮ್ಮೆ ಭೇಟಿ ನೀಡಲು ಪ್ರಯತ್ನಿಸಿ.

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಮೂಲತಃ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಅರೆ ಶುಷ್ಕ ವಾತಾವರಣವನ್ನು ಹೊಂದಿದ್ದು ಬಹುತೇಕ ಬಯಲು ಪ್ರದೇಶ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದೆ. ಹೆಚ್ಚಾಗಿ ಗಿಡ ಮರಗಳಿಲ್ಲದ ಒಂದು ಕಾರಣದಿಂದಾಗಿಯೂ ಹೆಚ್ಚು ಸುಡು ಬಿಸಿಲನ್ನು ಹೊಂದಿರುವ ಪ್ರದೇಶಗಳಾಗಿವೆ. ಇದಕ್ಕೆ ಅಪವಾದವೆಂಬಂತೆ,

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬೆಳಗಾವಿ ನಗರವು ಸ್ವಲ್ಪ ಮಟ್ಟಿಗಿನ ಹಸಿರು ಪ್ರದೇಶಗಳನೊಳಗೊಂಡಿದ್ದು ಹಿತಕರವಾದ ವಾತಾವರಣ ಹೊಂದಿದೆ. ಇದಕ್ಕೆ ಕಾರಣ ಬೆಳಗಾವಿಯ ಕೆಲ ಭಾಗವು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಟ್ಟಿದ್ದು ಸಮುದ್ರ ಮಟ್ಟದಿಂದ ಸ್ವಲ್ಪ ಎತ್ತರವಾಗಿರುವುದಾಗಿದೆ. ಬೆಳಗಾವಿಯು ಉತ್ತರ ಕರ್ನಾಟಕದ ವಿಭಾಗೀಯ ಜಿಲ್ಲಾ ಕೇಂದ್ರವಾಗಿದ್ದು ಹಿಂದೆ ವೇಣುಗ್ರಾಮ ಎಂದು ಕರೆಯಲ್ಪಡುತ್ತಿತ್ತು. ಬೆಳಗಾವಿಯು ಕೆಲವು ಪುರಾತನ ಹಾಗೂ ದೇವಾಲಯಗಳಿಗೆ ತವರಾಗಿದೆ. ಬೆಳಗಾವಿಯ ಕಿಲ್ಲಾ ಕೆರೆಯ ಒಂದು ಸುಂದರ ನೋಟ.

ಚಿತ್ರಕೃಪೆ: Mahant025

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬೆಳಗಾವಿಯಲ್ಲಿ ಐತಿಹಾಸಿಕ ಶ್ರೀಮಂತಿಕೆಯುಳ್ಳ ಕೋಟೆ ಹಾಗೂ ಕಮಲ ಮತ್ತು ಚಿಕ್ಕ ಬಸದಿಗಳಿವೆ. ಕೋಟೆಯೊಳಗೆಯೆ ಜೈನರ ಕಮಲ ಬಸದಿಯಿದ್ದು ಅದರ ಅದರ ಪಕ್ಕದಲ್ಲೆ ಚಿಕ್ಕ ಬಸದಿಯಿದೆ. ಇದಕ್ಕೂ ಮುಂಚೆ ಕೋಟೆಯೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ದುರ್ಗೆಯ ದೇವಾಲಯವಿದ್ದು ಅಲ್ಲಿ ದರ್ಶನ ಪಡೆದು ಮುಂದೆ ಸಾಗಬಹುದು. ಕಮಲ ಹಾಗೂ ಚಿಕ್ಕ ಬಸದಿಗಳ ನಂತರ ಮನಸ್ಸಿಗೆ ಅತ್ಯಂತ ಆನಂದ ನೀಡುವ ಹಾಗೂ ಅತ್ಯಂತ ಶಾಂತಿಯುತ ಪ್ರದೇಶದಲ್ಲಿ ರಾಮಕೃಷ್ಣ ಆಶ್ರಮವಿದೆ. ಇದರ ಆವರಣದಲ್ಲಿ ಕೊಠಡಿಯೊಂದಿದ್ದು ಅಲ್ಲಿ ಹಿಂದೆ ಸ್ವಾಮಿ ವಿವೇಕಾನಂದರು ತಂಗಿದ್ದರು. ಚಿತ್ರದಲ್ಲಿರುವುದು ಕಮಲ ಬಸದಿ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹಲಸಿ ಖಾನಾಪುರ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದ್ದು ಬೆಳಗಾವಿಯಿಂದ ಸುಮಾರು 40 ಕಿ.ಮೀ ಗಳಷ್ಟು ದೂರದಲ್ಲಿದೆ. ಹಳಸಿಯು ಪ್ರಮುಖವಾಗಿ ತನ್ನಲ್ಲಿರುವ ಅತಿ ಪುರಾತನ ಭೂವರಾಹಸ್ವಾಮಿ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ತನ್ನ ಸುತ್ತ ಮುತ್ತಲಿರುವ ಹಸಿರು ಪರಿಸರದಿಂದಾಗಿಯೂ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಇತಿಹಾಸದ ಪ್ರಕಾರ, ಇಲ್ಲಿರುವ ಭೂವರಾಹಸ್ವಾಮಿ ದೇವಾಲಯವು ಐದನೇಯ ಶತಮಾನದಲ್ಲಿ ನಿರ್ಮಿತವಾದ ಕದಂಬ ಶೈಲಿಯ ಎರಡು ಗರ್ಭ ಗೃಹವುಳ್ಳ ಒಂದು ಸುಂದರ ಪುರಾತನ ದೇವಾಲಯವಾಗಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ನಿರ್ವಹಿಸಲ್ಪಡುವ ಈ ದೇವಾಲಯದಲ್ಲಿ ನಿಂತ ಭಂಗಿಯಲ್ಲಿರುವ ವಿಷ್ಣುವಿನ ಹಾಗೂ ಅದರ ಎದುರು ಬದಿಯಲ್ಲೆ ವರಾಹಸ್ವಾಮಿಯೆ ವಿಗ್ರಹವುಳ್ಳ ಗರ್ಭಗೃಹಗಳಿರುವುದು ವಿಶೇಷ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಗೋಕಾಕ್ : ಬೆಳಗಾವಿ ನಗರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಗೋಕಾಕ್ ಪಟ್ಟಣ ಆಸಕ್ತಿ ಹುಟ್ಟಿಸುವ ಒಂದು ಪ್ರವಾಸಿ ಕೇಂದ್ರವಾಗಿದೆ. ಸುಪ್ರಸಿದ್ಧ ಗೋಕಾಕ್ ಜಲಪಾತವಿರುವ ತಾಣ. ಪಟ್ಟಣ ಕೆಂದ್ರದಿಂದ ಆರು ಕಿ.ಮೀ ದೂರದಲ್ಲಿ ಈ ಪ್ರಖ್ಯಾತ ಜಲಪಾತವಿದ್ದು ಘಟಪ್ರಭಾ ನದಿಯಿಂದ ರೂಪಗೊಂಡಿದೆ.

ಚಿತ್ರಕೃಪೆ: Shishirmk

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ತೂಗು ಸೇತುವೆಯೊಂದು ಘಟಪ್ರಭಾ ನದಿ ಅಡ್ಡಲಾಗಿ ನಿರ್ಮಿಸಲಾಗಿದ್ದು ಇಂದಿಗೂ ಆ ಸೇತುವೆ ಕೆಲವು ನವೀಕರಣಗಳೊಂದಿಗೆ ವ್ಯಾಪಕವಾಗಿ ಬಳಸಲ್ಪಡುತ್ತದೆ. ಮುಖ್ಯವಾಗಿ ಸೇತುವೆಯ ಇನ್ನೊಂದು ಭಾಗದಲ್ಲಿ ವಸತಿ ಪ್ರದೇಶವಿದ್ದು ಅಲ್ಲಿ ಒಂದು ಪುರಾತನ ದೇಗುಲವನ್ನೂ ಸಹ ಕಾಣಬಹುದು. ಆ ಪ್ರದೇಶದಲ್ಲಿ ನೆಲೆಸಿರುವ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಗೋಕಾಕ್ ತಲುಪಬೇಕಾಗಿದ್ದು ಇದೆ ಸೇತುವೆಯನ್ನು ಬಳಸುತ್ತಾರೆ. ಇದು ತೂಗು ಸೇತುವೆ ಹಾಗೂ ಹೆಚ್ಚು ಅಗಲ ಆಗಿಲ್ಲದಿರುವು ಕಾರಣ ಕೆಲವರಿಗೆ ಇದರ ಮೇಲೆ ನಡೆದಾಡುವಾಗ ಭಯವಾಗುವುದು ಸಹಜ.

ಚಿತ್ರಕೃಪೆ: Shil.4349

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಗೋಕಾಕ್ ಜಲಪಾತ ತಾಣದಿಂದ ಮೂರ್ನಾಲ್ಕು ಕಿ.ಮೀ ದೂರ ಸಾಗಿದರೆ ಮತ್ತೊಂದು ಸುಂದರ ಜಲಪಾತ ದೊರೆಯುತ್ತದೆ. ಅದೆ ಗೊಡಚಿನಮಲ್ಕಿ ಜಲಪಾತ. ಈ ಜಲಪಾತದ ವಿಶೇಷವೆಂದರೆ ಇದು ಹೆಚ್ಚು ಎತ್ತರವಿಲ್ಲ ಹಾಗೂ ಜಲಪಾತವು ಹೆಚ್ಚು ಅಗಲವಾಗಿದೆ.

ಚಿತ್ರಕೃಪೆ: Shil.4349

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಇನ್ನೂ ಗೋಕಾಕ್ ತನ್ನಲ್ಲಿ ದೊರಕುವ ಕರದಂಟ್ ಎಂಬ ಸಿಹಿ ಖಾದ್ಯಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ. ಗೋಕಾಕಿಗೆ ಭೆಟಿ ನೀಡಿದಾಗ ಕರದಂಟ್ ತಿನ್ನದೆ ಇರಲು ಸಾಧ್ಯವೆ ಇಲ್ಲ.

ಚಿತ್ರಕೃಪೆ: Manuhubli

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಸೌದತ್ತಿ : ಬೆಳಗಾವಿಯಿಂದ 78 ಕಿ.ಮೀ ದೂರದಲ್ಲಿರುವ ಸೌದತ್ತಿಯು ಒಂದು ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸಿ ಕೇಂದ್ರವಾಗಿದೆ. ಎಲ್ಲಮ್ಮನ ಗುಡ್ಡ ಎಂತಲೂ ಕರೆಯಲ್ಪಡುವ ರೇಣುಕಾ ದೇವಿಯ ದೇವಾಲಯ ಕರ್ನಾಟಕದಲ್ಲೆ ಪ್ರಸಿದ್ಧ ದೇವಾಲಯಗಳ ಪೈಕಿ ಒಂದಾಗಿದೆ. ಸೌದತ್ತಿಯ ಗುಡ್ಡದ ಮೇಲೆ ರೇಣುಕಾದೇವಿಯ ಈ ದೇವಾಲಯ ಸ್ಥಿತವಿದ್ದು ಪ್ರತಿ ವರ್ಷ ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಎಲ್ಲಮ್ಮನ ಗುಡ್ಡದ ಕೆಳ ಭಾಗದಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪ್ರಖ್ಯಾತ ಪ್ರವಾಸಿ ಕೇಂದ್ರವಾದ ನವೀಲುತೀರ್ಥಕ್ಕೆ ತಲುಪಬಹುದು. ಮಲಪ್ರಭಾ ನದಿಯಿಂದ ರೂಪಿತವಾದ ರೇಣುಕಾ ಸಾಗರ ಜಲಾಶಯವನ್ನು ಇಲ್ಲಿ ಕಾಣಬಹುದು. ಇದೊಂದು ಪ್ರಸಿದ್ಧ ಪಿಕ್ನಿಕ್ ತಾಣವಾಗಿಯೂ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಈ ಸ್ಥಳದ ಕುರಿತು ಹೇಳಬೇಕಾದ ಇನ್ನೊಂದು ವಿಷಯವೆಂದರೆ, ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮೀಜಿರವರು 1932 ರಲ್ಲಿ ಇಲ್ಲಿ ಧ್ಯಾನ ಮಾಡಿ ರೇಣುಕಾ ದೇವಿಯ ಕೃಪಾ ಕಟಾಕ್ಷದಿಂದ ಸಿದ್ಧಿ ಪಡೆದಿದ್ದರು. ನಂತರ ತಮ್ಮ ಧ್ಯಾನ-ಯೋಗಗಳನ್ನು ಮುಂದುವರೆಸಿ ನಿರ್ವಾಣ ಹೊಂದಿದರು.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ವಿಜಯಪುರ : ಹಿಂದೆ ಬಿಜಾಪುರ ಎಂದೆ ಗುರುತಿಸಿಕೊಂಡಿರುವ ಇಂದಿನ ವಿಜಯಪುರವು ಉತ್ತರ ಕರ್ನಾಟಕ ಭಾಗದ ಒಂದು ಐತಿಹಾಸಿಕ ಪ್ರವಾಸಿ ಕೇಂದ್ರವಾಗಿದ್ದು ಆದಿಲ್ ಶಾಹಿ ಸುಲ್ತಾನ ಕಾಲದ ಅನೇಕ ರಚನೆಗಳನ್ನೊಳಗೊಂಡಿದೆ. ಇವುಗಲಲ್ಲಿ ಪ್ರಮುಖವಾಗಿ ನೋಡಲ್ಪಡುವ ಆಕರ್ಷಣೆಯೆಂದರೆ ಗೋಲಗುಮ್ಮಟ. ಒಂದು ರೀತಿಯಲ್ಲಿ ತಾಜ್ ಮಹಲ್ ನಂತೆಯೆ ಬೃಹದಾಕಾರ ಹೊಂದಿರುವ ಈ ಗುಮ್ಮಟವು ಬಹುತೇಕ ವಿಜಯಪುರ ನಗರದ ಎಲ್ಲ ಮನೇಗಳ ಮೇಲಿನಿಂದ ನೋಡಿದಾಗ ಕಂಡುಬರುತ್ತದೆ.

ಚಿತ್ರಕೃಪೆ: Amith

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

1659 ರಲ್ಲಿ ಮೊಹಮ್ಮದ್ ಆದಿಲ್ ಶಾಹ್ ಹಾಗು ಕುಟುಂಬದವರಿಂದ ನಿರ್ಮಿಸಲ್ಪಟ್ಟ ಈ ಅದ್ಭುತ ರಚನೆಯು ಅರ್ಧ ಗೋಲಾಕಾರದ ಬೃಹತ್ ಗುಮ್ಮಟವನ್ನು ಹೊಂದಿದ್ದು, ಜಗತ್ತಿನಲ್ಲೆ ಎರಡನೇಯ ದೊಡ್ಡ ಖಂಬಗಳ ಆಧಾರವಿಲ್ಲದ ಗುಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲನೆಯದು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್. ಈ ರಚನೆಯು ಎಷ್ಟೊಂದು ಅದ್ಭುತವಾಗಿದೆಯೆಂದರೆ ಸುಮಾರು 38 ಮೀ ಗಳಷ್ಟು ದೂರದಲ್ಲೂ ಕೂಡ ಒಂದು ಸೂಜಿಯು ಬಿದ್ದ ಸಪ್ಪಳವನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ ಇಲ್ಲಿನ ವ್ಹಿಸ್ಪರಿಂಗ್ ಗ್ಯಾಲರಿಯಲ್ಲಿ. ಅಲ್ಲದೆ ಒಮ್ಮೆ ಚಪ್ಪಾಳೆಯನ್ನು ಹೊಡೆದರೆ ಹತ್ತು ಬಾರಿ ಅದು ಪ್ರತಿಧನಿಸುತ್ತದೆ.

ಚಿತ್ರಕೃಪೆ: Krishnams

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬಸಂತ ವನ: ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ.

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಇವುಗಳಲ್ಲದೆ ಇನ್ನೂ ಅನೇಕ ಐತಿಹಾಸಿಕ ರಚನೆಗಳನ್ನು ವಿಜಯಪುರದಲ್ಲಿ ಕಾಣಬಹುದು. ಇನ್ನೂ ವಿಜಯಪುರದಿಂದ ಸುಮಾರು 70 ಕಿ.ಮೀ ದೂರದಲ್ಲಿ ಆಲಮಟ್ಟಿ ಜಲಾಶಯಕ್ಕೆ ತೆರಳಬಹುದು. ವಿಶೇಷವಾಗಿ ಜಲಾಶಯದ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ರಾಕ್ ಗಾರ್ಡನ್ ಬಹು ಜನಪ್ರೀಯ ಪಿಕ್ನಿಕ್ ಕೇಂದ್ರವಾಗಿದೆ. ರಜಾ ಸಮಯಗಳಲ್ಲಿ ವಿಜಯಪುರ ನಗರ ಕೇಂದ್ರದಿಂದ ಸಾಕಷ್ಟು ಜನರು ಈ ಅದ್ಭುತ ಉದ್ಯಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಸುಂದರವಾದ ಹಾಗೂ ವಿಶಾಲವಾದ ಉದ್ಯಾನ, ನೀರಿನ ಮೂಲ ಹಾಗೂ ದೋಣಿ ವಿಹಾರವಿರುವ ಈ ಉದ್ಯಾನವು ಕುಟುಂಬದವರೊಂದಿಗೆ ಸುಂದರವಾದ ಸಮಯ ಕಳೆಯಲು ಆದರ್ಶಮಯ ಸ್ಥಳವಾಗಿದೆ.

ಚಿತ್ರಕೃಪೆ: Murughendra

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಅಲ್ಲದೆ ಉದ್ಯಾನದಲ್ಲಿ ಗ್ರಾಮ/ಹಳ್ಳಿ ಜೀವನ ಬಿಂಬಿಸುವ ಮಾನವ ಗಾತ್ರದ ಸಿರಾಮಿಕ್ ನಿಂದ ನಿರ್ಮಿಸಲಾದ ಶಿಲ್ಪ ಕಲಾಕೃತಿಗಳಿವೆ. ಗುಡಿಸಲು ಮನೆ, ಉಳುಮೆ ಮಾಡುತ್ತಿರುವ ರೈತ, ಕೃಷಿ ಕೆಲಸದಲ್ಲಿ ನಿರತರಾದ ಹಳ್ಳಿಗರು ನಿಜವಾಗಿ ನೋಡುತ್ತಿರುವೆವೋ ಏನೋ ಎಂಬಂತೆ ಭಾಸವಾಗುತ್ತದೆ.

ಚಿತ್ರಕೃಪೆ: Murughendra

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕೂಡಲ ಸಂಗಮ: ಲಿಂಗಾಯತ ಸಮುದಾಯದವರಿಗೆ ಕೂಡಲ ಸಂಗಮವು ಪವಿತ್ರವಾದಂತಹ ಯಾತ್ರಾ ಕ್ಷೇತ್ರವಾಗಿದೆ. ಏಕೆಂದರೆ ಇದು ಬಸವಣ್ಣನವರು ಐಕ್ಯವಾದ ಸ್ಥಳವಾಗಿದೆ ಹಾಗು ಕೃಷ್ಣಾ ಹಾಗು ಘಟಪ್ರಭಾ ನದಿಗಳಿ ಇಲ್ಲಿ ಸಂಗಮ ಹೊಂದಿ ಆಂಧ್ರದ ಶ್ರೀಶೈಲಂ ಕಡೆಗೆ ಹರಿಯುತ್ತದೆ. ಆಲಮಟ್ಟಿ ಜಲಾಶಯದಿಂದ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಈ ಕ್ಷೇತ್ರ.

ಚಿತ್ರಕೃಪೆ: Damaru

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹಿಂದೆ ಗುಲಬರ್ಗಾ ಎಂದು ಕರೆಯಲ್ಪಡುತ್ತಿದ್ದ ಇಂದಿನ ಕಲಬುರಗಿಯು ಉತ್ತರ ಕರ್ನಾಟಕದ ಒಂದು ಭಾಗವಾಗಿದೆ. ಇಲ್ಲಿಯೂ ಸಹ ಕೆಲವು ಐತಿಹಾಸಿಕ ಮಹತ್ವ ಪಡೆದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಅವುಗಳಲ್ಲಿ ಒಂದಾಗಿದೆ ಕಲಬುರಗಿ ಕೋಟೆ. ಹಿಂದೆ ವಾರಂಗಲ್ ಪ್ರಾಂತ್ಯವನ್ನು ಆಳುತ್ತಿದ್ದ ರಾಜಾ ಗುಲ್ಚಂದ್ ನಿಂದ ಈ ಕೋಟೆಯ ನಿರ್ಮಾಣವಾಗಿದ್ದು ಕಲಬುರಗಿ ನಗರ ಕೇಂದ್ರದಲ್ಲೆ ಸ್ಥಿತವಿದೆ.

ಚಿತ್ರಕೃಪೆ: Naidugari Jayanna

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕಲಬುರಗಿಯ ಮತ್ತೊಂದು ಪ್ರಮುಖ ದಾರ್ಶನಿಕ ಸ್ಥಳವೆಂದರೆ ಶ್ರೀ ಶರಣ ಬಸವೇಶ್ವರರ ದೇವಾಲಯ. ವಚನ ಕವಿ ಹಾಗೂ ಸಂತರಾದ ಬಸವೇಶ್ವರರಿಗೆ ಮುಡಿಪಾದ ದೇವಾಲಯ ಇದಾಗಿದ್ದು ಇದರ ಪಕ್ಕದಲ್ಲೆ ಕೊಳವೊಂದಿದೆ. ಪ್ರತಿ ವರ್ಷ ಅದ್ದೂರಿಯಾಗಿ ಇಲ್ಲಿ ಜಾತ್ರೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಭಕ್ತರು/ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Manjunath Doddamani Gajendragad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಉತ್ತರ ಕರ್ನಾಟಕ ಭಾಗದ ಒಂದು ಪ್ರದೇಶವಾಗಿದೆ ಬೀದರ್. ಪ್ರವಾಸಿ ದೃಷ್ಟಿಯಿಂದಲೂ ಸಾಕಷ್ಟು ಮಹತ್ವ ಪಡೆದಿದೆ ಬೀದರ್. ಬೀದರ್ ಕೋಟೆ, ನಾನಕ್ ಝೀರಾ ಸಾಹಿಬ್ ಗುರುದ್ವಾರಾ ಹಾಗೂ ಝರಣಿ ನರಸಿಂಹಸ್ವಾಮಿ ದೇವಾಲಯಗಳಂತಹ ಅದ್ಭುತ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು. ಬೀದರ್ ಕೋಟೆ.

ಚಿತ್ರಕೃಪೆ: Santosh3397

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಇಲ್ಲಿರುವ ಶ್ರೀಕ್ಷೇತ್ರ ಝರಣಿ ನರಸಿಂಹ ಗುಹಾ ದೇವಾಲಯ ಅತಿ ಪ್ರಮುಖ ದೇವಸ್ಥಾನವೆಂದೆ ಹೇಳಬಹುದು. ಇದೊಂದು ಸುರಂಗ ಮಾರ್ಗ ಹೊಂದಿರುವ ಕೊನೆಯಲ್ಲಿ ಗೋಡೆಯ ಮೇಲೆ ಸ್ವಯಂಭೂ ನರಸಿಂಹನಿರುವ ದೇವಾಲಯವಾಗಿದೆ. ಒಟ್ಟಾರೆ ಸುರಂಗ ಮಾರ್ಗವು 300 ಮೀ. ಗಳಷ್ಟು ಉದ್ದವಿದೆ. ಇನ್ನೊಂದು ವಿಶೇಷವೆಂದರೆ ಈ ಸುರಂಗ ಮಾರ್ಗದಲ್ಲಿ ನೂರಾರು ವರ್ಷಗಳಿಂದ ನೀರಿನ ಮೂಲವೊಂದು ಹರಿದಿರುವುದು ಹಾಗೂ ಈ ನೀರಿನಲ್ಲೆ ನಡೆದುಕೊಂಡು ಹೋಗಿ ದೇವರ ದರುಶನ ಪಡೆಯಬೇಕು. ಇದೊಂದು ನೋಡಲೇಬೇಕಾದ ಅದ್ಭುತ ದೇವಾಲಯ.

ಚಿತ್ರಕೃಪೆ: epuja.co.in

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಬಾಗಲಕೋಟೆಯು ಪ್ರಖ್ಯಾತ ಐತಿಹಾಸಿಕ ಪ್ರವಾಸಿ ಸ್ಥಳವಾಗಿದ್ದು ಅನೇಕ ಆಕರ್ಷಣೆಗಳನ್ನು ಹೊಂದಿದೆ. ಅವುಗಳಲ್ಲೊಂದಾಗಿದೆ ಬಾದಾಮಿ. ಬಾದಾಮಿಯನ್ನು ರೈಲಿನ ಮೂಲಕ ಬೆಂಗಳೂರು - ಗೋಲ ಗುಂಬಜ್ ರೈಲು ಇಲ್ಲವೆ ಬಾಗಲಕೋಟೆ, ಬಿಜಪುರ ಹಾಗೂ ಹುಬ್ಬಳ್ಳಿಯಿಂದ ಬಸ್ಸುಗಳ ಮೂಲಕ ತಲುಪಬಹುದಾಗಿದೆ. ಹುಬ್ಬಳ್ಳಿಯಿಂದ 130 ಕಿ.ಮೀ ಗಳಷ್ಟು ದೂರವಿರುವ ಬಾದಾಮಿ ಬೆಂಗಳೂರಿನಿಂದ 520 ಕಿ.ಮೀ ಗಳಷ್ಟು ದೂರವಿದೆ.

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹಿಂದೆ ಬಾದಾಮಿಯು ವಾತಾಪಿ ಎಂದು ಕರೆಯಲ್ಪಡುತ್ತಿತ್ತು. ಬಾದಾಮಿ ಚಾಲುಕ್ಯರ, ರಾಜಧಾನಿಯಾಗಿ ಮೆರೆದಿದ್ದ ಈ ಸ್ಥಳದಲ್ಲಿ ಅನೇಕ ಐತಿಹಾಸಿಕ ಪ್ರಸಿದ್ಧ ರಚನೆಗಳನ್ನು ಕಾಣಬಹುದಾಗಿದೆ. ಗುಹಾ ದೇವಾಲಯಗಳು, ಹೊಂಡಗಳು, ಭೂತನಾಥ ದೇವಾಲಯ ಸಂಕೀರ್ಣಗಳಿಗೆ ಇದು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sanyam Bahga

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬಾದಾಮಿಯಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳ ಮಲ್ಲಿಕಾರ್ಜುನ ದೇವಾಲಯಗಳ ಸಂಕೀರ್ಣ. ಈ ದೇವಾಲಯಗಳು ನಕ್ಷತ್ರದಾಕಾರದ ರಚನೆಗೆ ಹೆಸರುವಾಸಿಯಾಗಿದ್ದು ಸುಮಾರು 11 ನೆಯ ಶತಮಾನದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ರಚನೆಗಳಾಗಿವೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಭೂತನಾಥ ದೇವಾಲಯ ಸಂಕೀರ್ಣ. ಕೆರೆಯ ದಂಡೆಯ ಮೇಲೆ ಸ್ಥಿತವಿರುವ ಈ ಸಂಕೀರ್ಣದಲ್ಲಿ ಎರಡು ದೇವಾಲಯಗಳನ್ನು ನೋಡಬಹುದಾಗಿದೆ. ಒಂದು ಕೆರೆಯ ಪೂರ್ವಕ್ಕಿದ್ದರೆ ಇನ್ನೊಂದು ಕೆರೆಯ ಈಶಾನ್ಯ ದಿಕ್ಕಿನಲ್ಲಿದೆ. ಕಲ್ಯಾಣಿ ಚಾಲುಕ್ಯರ ಮನಮೋಹಕವಾದ ಅಷ್ಟೆ ಕಲಾತ್ಮಕವಾದ ವಾಸ್ತು ಶಿಲ್ಪವನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Nilmoni Ghosh

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬನಶಂಕರಿ ಅಮ್ಮನವರ ದೇವಸ್ಥಾನ. ಭಕ್ತರ ದೃಷ್ಟಿಯಿಂದ ನೋಡಿದಾಗ ಬಾದಾಮಿಯು ಪ್ರಮುಖವಾಗಿ ಬನಶಂಕರಿ ಅಮ್ಮನವರ ದೇವಸ್ಥಾನದಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಉತ್ತರ ಕರ್ನಾಟಕದ ಅದೆಷ್ಟೊ ಕುಟುಂಬಗಳ ದೇವತೆಯಾಗಿ ಬನಶಂಕರಿ ದೇವಿಯು ಹರಸುತ್ತಿದ್ದಾಳೆ. ಪ್ರತಿ ವರ್ಷದ ಜನವರಿ ಸಂದರ್ಭ ಅಂದರೆ ಬನದ ಹುಣ್ಣಿಮೆಯ ಸಂದರ್ಭದಲ್ಲಿ ಇಲ್ಲಿ ಅದ್ದೂರಿಯಾಗಿ ದೇವಿಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Nvvchar

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಬಾದಾಮಿಯ ನಂತರ ಅಲ್ಲಿಂದ ಕೇವಲ 15 ಕಿ.ಮೀ ಗಳಷ್ಟು ದೂರವಿರುವ ಮಹಾಕೂಟಕ್ಕೆ ತೆರಳಬಹುದು. ಮಹಾಕೂಟ ದೇವಾಲಯ ಸಂಕೀರ್ಣದಲ್ಲಿ ಹಲವಾರು ದೇಗುಲಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ಮಹಾಕೂಟೇಶ್ವರ ದೇವಸ್ಥಾನ ಹಾಗು ಮಾಲಿಕಾರ್ಜುನ ದೇವಾಲಯಗಳು ದೊಡ್ಡ ರಚನೆಗಳಾಗಿವೆ. ಪರಮೇಶ್ವರನ ರೂಪವೆನ್ನಲಾಗುವ ಸಂಗಮೇಶ್ವರನ ದೇವಾಲಯವು ಇಲ್ಲಿರುವ ಮತ್ತೊಂದು ದೇಗುಲವಾಗಿದ್ದು ನಗರ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಮಹಾಕೂಟ ದೇವಾಲಯಗಳ ದರ್ಶನದ ನಂತರ ಅಲ್ಲಿಂದ 12 ಕಿ.ಮೀ ಗಳಷ್ಟು ದೂರವಿರುವ ಪಟ್ಟದಕಲ್ಲಿಗೆ ತೆರಳಬಹುದು. ಇದೊಂದು ವಿಶ್ವ ಪಾರಂಪರಿಕ ತಾಣವಾಗಿದ್ದು, ಮಲಪ್ರಭಾ ನದಿಯ ಎಡ ದಂಡೆಯ ಮೇಲೆ ನೆಲೆಸಿದೆ. ಇಲ್ಲಿ ಸಾಕಷ್ಟು ಪ್ರಖ್ಯಾತವಾದ ಸ್ಮಾರಕ ರಚನೆಗಳನ್ನು ಕಾಣಬಹುದಾಗಿದೆ. ಇಲ್ಲಿ ಯಾವೇಲ್ಲ ದೇವಾಲಯಗಳಿವೆ ಎಂಬುದನ್ನು ಮುಂದಿನ ಸ್ಲೈಡುಗಳ ಮೂಲಕ ತಿಳಿಯಿರಿ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಜೈನ ನಾರಾಯಣ ದೇವಾಲಯ. ಬಾದಾಮಿ - ಪಟ್ಟದಕಲ್ಲು ರಸ್ತೆಯ ಮೇಲಿರುವ ಒಂದು ಅತ್ಯಾಕರ್ಷಕ ಕೆತ್ತನೆಗಳ ದೇಗುಲವಾಗಿದೆ. ಒಂಬತ್ತನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯದ ನಿರ್ಮಾತೃ ರಾಷ್ಟ್ರಕೂಟರ ಒಂದನೆಯ ಅಮೋಘವರ್ಷ ಇಲ್ಲವೆ ಅವನ ಮಗನಾದ ಎರಡನೆಯ ಕೃಷ್ಣನೆಂದು ತಿಳಿಯಲಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಪಟ್ಟದಕಲ್ಲಿನ ಇತರೆ ಇನ್ನೂ ಕೆಲವು ರಚನೆಗಳಿದ್ದು ಸಮಯಾವಕಾಶವಿದ್ದರೆ ನೋಡಬಹುದು. ಒಂದೊಮ್ಮೆ ಪಟ್ಟದಕಲ್ಲನ್ನು ತೊರೆದ ನಂತರ ನೇರವಾಗಿ 15 ಕಿ.ಮೀ ಕ್ರಮಿಸಿ ಮತ್ತೊಂದು ಪ್ರಖ್ಯಾತ ಪ್ರೇಕ್ಷಣೀಯ ಸ್ಥಳವಾದ ಐಹೊಳೆಯನ್ನು ತಲುಪಬಹುದು. ಇನ್ನು ಐಹೊಳೆಯ ಕೆಲ ಪ್ರಮುಖ ಸ್ಮಾರಕ ದೇಗುಲಗಳ ಕುರಿತು ತಿಳಿಯಿರಿ. ದುರ್ಗಾ ದೇವಾಲಯ ಶುಭಮಂಟಪ ಹಾಗೂ ಮುಖಮಂಟಪ ಹೊಂದಿರುವ ಸುಂದರವಾಗಿ ಕಂಡುಬರುವ ಐಹೊಳೆಯ ದೇವಾಲಯವಾಗಿದೆ. ದುರ್ಗಾ ದೇವಿಗೆ ಸಮರ್ಪಿತವಾದ ಈ ದೇವಾಲಯವು ಏಳನೆಯ ಶತಮಾನದ ಅಂತ್ಯ ಅಥವಾ ಎಂಟನೆಯ ಶತಮಾನದಲ್ಲಿ ನಿರ್ಮಾಣವಾದುದೆನ್ನಲಾಗಿದೆ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಲಾಡ್ ಖಾನ್ ದೇವಾಲಯ : ಶಿವನಿಗೆ ಮುಡಿಪಾದ ಶಿವಲಿಂಗವಿರುವ ಈ ದೇವಾಲಯವು ತನ್ನ ವಿಶಿಷ್ಟ ಹೆಸರಿನಿಂದ ಜನಪ್ರೀಯವಾಗಿದೆ. ಲಾಡ್ ಖಾನ್ ಎಂಬ ಜನರಲ್ ಒಂದು ಕಾಲದಲ್ಲಿ ಇಲ್ಲಿ ವಾಸಿಸುತ್ತಿದ್ದರಿಂದ ಇದಕ್ಕೆ ಲಾಡ್ ಖಾನ್ ಎಂಬ ಹೆಸರು ಬಂದಿರಬಹುದೆಂದು ನಂಬಲಾಗಿದೆ. ಇದರ ವಾಸ್ತುಶಿಲ್ಪವೂ ಸಹ ತುಸು ಭಿನ್ನವಾಗಿರುವುದನ್ನು ಗಮನಿಸಬಹುದಾಗಿದೆ.

ಚಿತ್ರಕೃಪೆ: Sanyam Bahga

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ರಾವಣ ಫಡಿ ಗುಹಾ ದೇವಾಲಯ : ಐಹೊಳೆಯಲ್ಲಿ ಕಂಡುಬರುವ ಪುರಾತನ ಬಂಡೆಯೊಂದರಲ್ಲಿ ಕೆತ್ತಲ್ಪಟ್ಟ ಸುಂದರ ದೇವಾಲಯವಾಗಿದೆ ಇದು. ಸುಮಾರು ಆರನೆಯ ಶತಮಾನದಲ್ಲಿ ನಿರ್ಮಿತವಾದ ಈ ಗುಹಾ ದೇವಾಲಯದಲ್ಲಿ ನರ್ತಿಸುವ ಶಿವನ ಚಿತ್ರವನ್ನು ಕೆತ್ತಲಾಗಿದ್ದು ಆಕರ್ಷಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹುಚ್ಚಪ್ಪಯ್ಯ ಮಠ : ಐಹೊಳೆಯ ಪಶ್ಚಿಮ ದಿಕ್ಕಿನಲ್ಲಿ ಈ ದೇಗುಲವಿರುವುದನ್ನು ಕಾಣಬಹುದಾಗಿದೆ. ಇಲ್ಲಿ ತ್ರಿಮೂರ್ತಿ ವಿಗ್ರಹ ಹಾಗೂ 1067 ರ ಶಾಸನವೊಂದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Mukul Banerjee

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕೊಪ್ಪಳ ಜಿಲ್ಲೆ 1-4-1998 ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿರುವುದಲ್ಲದೆ ಹೈ.ಕರ್ನಾಟಕದ ಒಂದು ಐತಿಹಾಸಿಕ ಪ್ರವಾಸಿ ಜಿಲ್ಲೆಯಾಗಿದೆ. ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Ravibhalli

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಅಶೋಕನ ಶಿಲಾಶಾಸನ: ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿರುವ ಒಂದು ಬೆಟ್ಟದ ತುದಿಯಲ್ಲಿ ಚಕ್ರವರ್ತಿ ಅಶೋಕನು ಬರಿಸಿದ್ದೆನ್ನಲಾದ ಶಿಲಾ ಶಾಸನಗಳು ಒಂದು ರಾಷ್ಟ್ರೀಯ ಸ್ಮಾರಕವಾಗಿದೆ. ಈ ತಾಣವನ್ನು ಗವಿನಾಥ ಹಾಗೂ ಪಾಲ್ಕಿಗುಂಡು ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Ravibhalli

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕುಕ್ನೂರು ಕೊಪ್ಪಳ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಪ್ರಸಿದ್ಧ ಪಟ್ಟಣ. ಇಲ್ಲಿ 9 ನೆಯ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಿಸಲಾದ ನವಲಿಂಗ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಕುಕ್ನೂರು ಬಳಿಯಿರುವ ಇಟಗಿಯೂ ಸಹ ಒಂದು ಐತಿಹಾಸಿಕ ಆಕರ್ಷಣೆಯಾಗಿದೆ. ಮಹದೇವ ದೇವಸ್ಥಾನಕ್ಕೆ ಇಟಗಿಯು ಜನಪ್ರಿಯ. ಇದನ್ನು ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ನಂಬಿಕೆಯ ಪ್ರಕಾರ ಮಹದೇವ ದೇವಸ್ಥಾನದ ತೀರ್ಥವು ಪವಿತ್ರವಾದದ್ದು. ಇಲ್ಲಿರುವ ಕನ್ನಡ ಶಿಲಾಶಾಸನಗಳು ಚಾಲುಕ್ಯ ರಾಜರ ಬಗ್ಗೆ ತಿಳಿಸುತ್ತವೆ. ಮಹದೇವ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸಲಾದ ಲಿಂಗದ ಜೊತೆಗೆ ಸುಮಾರು 13 ಮೂರ್ತಿಗಳಿವೆ. ಈ ದೇವಸ್ಥಾನವನ್ನು ಸುಮಾರು 1112ರಲ್ಲಿ ಚಾಲುಕ್ಯರಿಂದ ನಿರ್ಮಿಸಲಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹೈ.ಕರ್ನಾಟಕದ ಜಿಲ್ಲೆಗಳ ಪೈಕಿ ಒಂದಾಗಿರುವ ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಪ್ರಮುಖ ಜಿಲ್ಲೆಯೂ ಹೌದು. ರಾಯಚೂರು ಜಿಲ್ಲೆಯಲ್ಲಿ ಐದು ತಾಲೂಕುಗಳಿದ್ದು ಅವುಗಳೆಂದರೆ ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ ಮತ್ತು ಲಿಂಗಸೂಗೂರು. ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Amit Rawat

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು. ಕಾಕತೀಯ ದೊರೆ ರುದ್ರನಿಂದ 12 ನೆಯ ಶತಮಾನದಲ್ಲಿ ಈ ಕೋಟೆಯ ನಿರ್ಮಾಣವಾಗಿದೆ.

ಚಿತ್ರಕೃಪೆ: Tanzeelahad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ರಾಯಚೂರು ನಗರದಲ್ಲಿರುವ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ ಆಮ್ ತಲಾಬ್ ಅಥವಾ ಮಾವಿನ ಕೆರೆ. ಇದೊಂದು ಜನಪ್ರೀಯ ಪಿಕ್ನಿಕ್ ತಾಣವಾಗಿದ್ದು ವಾರಾಂತ್ಯದ ರಜೆಗೆಂದು ಸುತ್ತ ಮುತ್ತಲಿನ ಪ್ರದೇಶಗಳ ಜನರು ಇಲ್ಲಿಗೆ ಬರುತ್ತಿರುತ್ತಾರೆ. ವಿಶೇಷವಾಗಿ ಸಂಜೆ ಸಮಯದ ವಾಯು ವಿಹಾರಕ್ಕೆ ಇದು ಪ್ರಶಸ್ತ ಸ್ಥಳವಾಗಿದೆ. ಅಲ್ಲದೆ ದಂಡೆಯಗುಂಟ ಉದ್ದವಾಗಿ ಕಟ್ಟೆಯನ್ನು ನಿರ್ಮಿಸಲಾಗಿದ್ದು ಅಲ್ಲಲ್ಲಿ ಕುಳಿತುಕೊಳ್ಳಲು ಬೆಂಚುಗಳನ್ನೂ ಸಹ ಹಾಕಲಾಗಿದೆ. ಇನ್ನೂ ಹಾಯಾಗಿ ಕೆರೆಯ ನೋಟ ನೋಡುತ್ತ, ಹರಟಿಸುತ್ತ ಬಾಯಿ ಚಪ್ಪರಿಸಲು ಕುರುಕಲು ತಿಂಡಿಗಳು ದೊರೆಯುತ್ತವೆ. ಈ ಕೆರೆಯು ಮಾವಿನ ಕಾಯಿಯ ಆಕಾರದಲ್ಲಿ ರಚಿತವಾಗಿರುವುದರಿಂದ ಇದಕ್ಕೆ ಮಾವಿನ ಕೆರೆ ಅಥವ ಆಮ್ ತಾಲಾಬ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: Tanzeelahad

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

"ಚೋಟಾ ಬಾಂಬೆ" ಎಂದು ಜನಪ್ರೀಯವಾಗಿ ಕರೆಯಲ್ಪಡುವ ನಗರ ಹುಬ್ಬಳ್ಳಿ. ಕರ್ನಾಟಕ ರಾಜ್ಯದಲ್ಲಿರುವ ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಹೆಗ್ಗುರುತು ಎಂದೆ ಹೇಳಬಹುದು. ಭಾರತದಲ್ಲಿ ಯಾವ ರೀತಿಯಾಗಿ ಮುಂಬೈ ನಗರವು ಅತ್ಯಂತ ರಭಸದ ಜೀವನ, ಉಲುವು, ಜೀವ ಕಳೆ ಹಾಗೂ ವಾಣಿಜ್ಯ ಕೇಂದ್ರವಾಗಿ ಮಿಂಚುತ್ತದೆಯೋ ಅದೇ ರೀತಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹುಬ್ಬಳ್ಳಿ ಮೊದಲಿನಿಂದಲೂ ಅತ್ಯಂತ ಕ್ರಿಯಾಶೀಲ, ಚಟುವಟಿಕೆಯುಕ್ತ ನಗರವಾಗಿದ್ದುದರಿಂದ ಇದಕ್ಕೆ ಚೋಟಾ ಬಾಂಬೆ ಅಥವಾ ಚಿಕ್ಕ ಬಾಂಬೆ (ಇಂದಿನ ಮುಂಬೈ) ಪಟ್ಟಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Syed Zohaibullah

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಹುಬ್ಬಳ್ಳಿಯಿಂದ 8 ಕಿ.ಮೀ ದೂರದಲ್ಲಿದೆ ಅಮರಗೋಳ ಎಂಬ ಹಳಿ. (ಇದು ಹುಬ್ಬಳ್ಳಿ ಬಳಿಯ ಅಮರಗೋಳ). ಧಾರವಾಡ ತಾಲೂಕಿನಲ್ಲಿರುವ ಈ ಪುಟ್ಟ ಗ್ರಾಮವು ಬನಶಂಕರಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. 13 ನೆಯ ಶತಮಾನದಲ್ಲಿ ನಿರ್ಮಿತವಾದ ಈ ಬನಶಂಕರಿ ದೇವಸ್ಥಾನವು ನಗರ ಶೈಲಿಯ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿದ್ದು ವಜ್ರಾಕೃತಿಯ ರಚನೆಗಳಿಗೆ ಹೆಸರುವಾಸಿಯಾಗಿದೆ. ಇದರ ಸನಿಹದಲ್ಲೆ ಜಕಣಾಚಾರಿಯಿಂದ ನಿರ್ಮಿತವಾದ ಶಂಕರಲಿಂಗ ದೇಗುಲವನ್ನೂ ಸಹ ಕಾಣಬಹುದು.

ಚಿತ್ರಕೃಪೆ: Abhijeet Rane

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಗದಗ್ ಜಿಲ್ಲೆಯಲ್ಲಿರುವ ಗಜೇಂದ್ರಗಡವು ಖಂಡಿತವಾಗಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಉತ್ತರ ಕರ್ನಾಟಕ ಭಾಗದ ಸುಂದರ ಪ್ರವಾಸಿ ಆಕರ್ಷಣೆಯಾಗಿದೆ. ವೀರ ಮದಕರಿಯ ಜೊತೆಗೆ ಹಲವು ಕನ್ನಡ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಈ ಸ್ಥಳವು (ಗಜೇಂದ್ರಗಡ) ಪ್ರಧಾನವಾಗಿ ತನ್ನಲ್ಲಿರುವ ಕಾಲಕಾಲೇಶ್ವರ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಇದನ್ನು ದಕ್ಷಿಣ ಕಾಶಿ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಬೃಹತ್ ಬೆಟ್ಟದ ಮೇಲೆ ಕೆತ್ತಲಾದ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಗಜೇಂದ್ರಗಡದಿಂದ ಮತ್ತೆ ಪ್ರಯಾಣವನ್ನು ಗದಗ ಪಟ್ಟಣದೆಡೆ ಮುಂದುವರೆಸಿ ಗದಗ್ ತಲುಪಿ ಅಲ್ಲಿಂದ ಮುಂದೆ ಬಿಂಕದಗಟ್ಟಿ, ಹುಲಗೇರಿ ಮಾರ್ಗವಾಗಿ ಒಟ್ಟಾರೆಯಾಗಿ 78 ಕಿ.ಮೀ ಕ್ರಮಿಸಿದರೆ ಸಿಗುವ ಸ್ಥಳವೆ ಅಣ್ಣಿಗೇರಿ. ಕನ್ನಡದ ಆದಿಕವಿ ಪಂಪನ ಜನ್ಮ ಸ್ಥಳವಾದ ಅಣ್ಣಿಗೇರಿಯು ತನ್ನಲ್ಲಿರುವ 11 ನೆಯ ಶತಮಾನದ ದ್ರಾವಿಡ ಶೈಲಿಯ ಅಮೃತೇಶ್ವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಲಕ್ಷ್ಮೇಶ್ವರ ಎಂಬುದು ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿರುವ ಒಂದು ಪುಟ್ಟ ಪಟ್ಟಣ. ಆದರೆ ಕನ್ನಡದ ಕಂಪನ್ನು ಎಳೆ ಎಳೆಯಾಗಿ ಪಸರಿಸಿರುವುದರಲ್ಲಿ ಈ ಸ್ಥಳದ ಕೊಡುಗೆ ಅಪಾರ. ಕನ್ನಡದ ಆದಿಕವಿಯಾದ ಪಂಪನು ತನ್ನ ಪ್ರಸಿದ್ಧ ಕವನವನ್ನು ಲಕ್ಷ್ಮೇಶ್ವರದಲ್ಲೆ ಬರೆದ ಎಂಬ ಪ್ರತೀತಿಯಿದೆ. ಅಲ್ಲದೆ ಸಾಕಷ್ಟು ಕನ್ನಡದ ಶಿಲಾ ಶಾಸನಗಳು ಈ ಸ್ಥಳದಲ್ಲಿ ಕಂಡುಬರುತ್ತವೆ. ಕನ್ನಡ ಸಂಸ್ಕೃತಿ, ಸಾಹಿತ್ಯದ ಸಿರಿವಂತಿಕೆಗೆ ಸಾಕ್ಷಿಯಾಗಿರುವ ಲಕ್ಷ್ಮೇಶ್ವರವನ್ನು ತಿರುಳುಗನ್ನಡನಾಡು ಎಂದೂ ಸಹ ಪ್ರೀತಿಯಿಂದ ಕರೆಯಲಾಗುತ್ತದೆ. ಲಕ್ಷ್ಮೇಶ್ವರದಲ್ಲಿರುವ ಸೋಮೇಶ್ವರ ದೇವಸ್ಥಾನ.

ಚಿತ್ರಕೃಪೆ: Manjunath Doddamani

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಭಾಗದ ಬಳ್ಳಾರಿಯು ಐತಿಹಾಸಿಕವಾಗಿ ಬಹು ಪ್ರಮುಖವಾದ ಜಿಲ್ಲೆಯಾಗಿದೆ. ಐತಿಹಾಸಿಕ ಅದ್ಭುತ ಶಿಲ್ಪ ಕಲೆಯಿಂದ ಜಗತ್ತೆ ತಿರುಗಿ ನೋಡುವಂತೆ ಮಾಡಿದ ಪ್ರಖ್ಯಾತ ಪ್ರವಾಸಿ ಸ್ಥಳವಾದ ಹಂಪಿಯು ಇರುವುದು ಬಳ್ಳಾರಿ ಜಿಲ್ಲೆಯಲ್ಲೆ. ಅಲ್ಲದೆ ಬಳ್ಳಾರಿ ಪಟ್ಟಣವೂ ಸಹ ಸಾಕಷ್ಟು ಆಕರ್ಷಣೆಗಳನ್ನು ಒಳಗೊಂಡಿದೆ ಮತ್ತು ಭೇಟಿ ನೀಡಲು ಬಳ್ಳಾರಿ ಕೋಟೆಯು ಸಹ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Pradeep Javedar

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಇನ್ನೂ ಬಳ್ಳಾರಿ ಜಿಲ್ಲೆಯ ಹಂಪಿ ಸಾಕಷ್ಟು ಕುತೂಹಲ ಕೆರಳಿಸುವ ಅದ್ಭುತ ಪ್ರವಾಸಿ ತಾಣವಾಗಿದೆ. ಸರ್ವೆಗಳ ಪ್ರಕಾರ ಒಂದೊಮ್ಮೆ ಗೂಗಲ್ ಸರ್ಚ್ ಎಂಜಿನ್ ನಲ್ಲಿ ಹಂಪಿಯು ಕರ್ನಾಟಕದಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಸ್ಥಳವಾಗಿದೆ. ಇದರಿಂದಲೆ ಈ ತಾಣಕ್ಕಿರುವ ಮಹತ್ವವನ್ನು ಅರಿಯ ಬಹುದು. ಇಲ್ಲಿ ಸಾಕಷ್ಟು ಆಕರ್ಷಣೆಗಳಿದ್ದರೂ ಕೆಲ ಗುರುತರವಾದ ಮುಖ್ಯ ಆಕರ್ಷಣೆಗಳ ಕುರಿತು ಮುಂದಿನ ಸ್ಲೈಡುಗಳಲ್ಲಿ ತಿಳಿಯಿರಿ. ಅಂದರೆ ನೀವು ಹಂಪಿಗೆ ಭೇಟಿ ನೀಡಿದಾಗ ಈ ಆಕರ್ಷಣೆಗಳನ್ನು ನೋಡಲೇಬೇಕೆಂದರ್ಥ.

ಚಿತ್ರಕೃಪೆ: Bjørn Christian Tørrissen

ಉತ್ತರ ಕರ್ನಾಟಕದ ಸೊಗಡು:

ಉತ್ತರ ಕರ್ನಾಟಕದ ಸೊಗಡು:

ಗದಗ್ ಜಿಲ್ಲೆಯಲ್ಲಿರುವ ಲಕ್ಕುಂಡಿಯು ಐತಿಹಾಸಿಕ ಆಕರ್ಷಣೆಯುಳ್ಳ ಪುಟ್ಟ ಗ್ರಾಮವಾಗಿದೆ. ಗದಗಿನಿಂದ ಹಂಪಿಗೆ ತೆರಳುವ ಮಾರ್ಗದಲ್ಲಿ ಪೂರ್ವಕ್ಕೆ ಕೇವಲ 11 ಕಿ.ಮೀ ದೂರದಲ್ಲಿ ದೊರೆಯುವ ಈ ಸ್ಥಳವು ಚಾಲುಕ್ಯ ಶೈಲಿಯ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಕಾಶಿವಿಶ್ವೇಶ್ವರ ದೇವಾಲಯವು ಅತ್ಯದ್ಭುತ ಶಿಲ್ಪ ಕಲಾ ಕೆತ್ತನೆಗೆ ಹೆಸರುವಾಸಿಯಾಗಿದ್ದು ನೋಡಲೇಬೇಕಾದ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Dineshkannambadi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X