Search
  • Follow NativePlanet
Share
» »ಬಿಸಿಯಲ್ಲೂ ಕಣ್ಮನ ತಂಪಾಗಿಸುವ ಬಿಜಾಪುರದ ಪ್ರವಾಸ

ಬಿಸಿಯಲ್ಲೂ ಕಣ್ಮನ ತಂಪಾಗಿಸುವ ಬಿಜಾಪುರದ ಪ್ರವಾಸ

By Vijay

ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಹಾಗು ಬೆಂಗಳೂರಿನ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಬಯಲು ಸೀಮೆ ಪ್ರದೇಶವಾದ ಬಿಜಾಪುರ ಜಿಲ್ಲೆಯು ಅದ್ಭುತ ಸ್ಮಾರಕಗಳುಳ್ಳ ಒಂದು ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾಗಿದೆ. ಹೆಚ್ಚು ಬಿಸಿಲಿನ ವಾತಾವರಣವನ್ನು ಹೊಂದಿರುವ ಈ ಪಟ್ಟಣದಲ್ಲಿ ಪ್ರವಾಸ ಮಾಡುವುದು ಸ್ವಲ್ಪ ಕಷ್ಟವೆನಿಸಿದರೂ ಇಲ್ಲಿ ನೋಡಬಹುದಾದಂತಹ ಆಕರ್ಷಕ ಸ್ಮಾರಕಗಳು ನಿಮ್ಮ ಕಣ್ಮನಗಳಿಗೆ ಸಂತೃಪ್ತಿಯ ಭಾವನೆಯನ್ನು ತರುವಲ್ಲಿ ಯಶಸ್ವಿಯಾಗುತ್ತವೆ. ನಮ್ಮಲ್ಲಿ ಬಹು ಜನರಿಗೆ ಇತಿಹಾಸವನ್ನು ಪುಸ್ತಕದಲ್ಲಿ ಕಲಿಯುವುದೆಂದರೆ ತುಂಬ ಬೇಸರವಾದರೂ ಅದಕ್ಕೆ ಸಂಬಂಧಿಸಿದ ಹಲವು ಸ್ಮಾರಕಗಳು ಹಾಗು ಅವುಗಳ ವಿಶೇಷತೆಗಳನ್ನು ಖುದ್ದಾಗಿ ಭೇಟಿ ನೀಡಿ ಅವಲೋಕಿಸುವುದೆಂದರೆ ಎಲ್ಲಿಲ್ಲದ ಸಂತಸ ಉಂಟಾಗುತ್ತದೆ.

ಹಿರಿಯರು ಹೇಳಿರುವಂತೆ "ದೇಶ ಸುತ್ತಿ ನೋಡು ಕೋಶ ಓದಿ ನೋಡು" ಎಂಬ ನಾಣ್ಣುಡಿಯು ಖಂಡಿತವಾಗಿಯೂ ನಾವೆಲ್ಲರು ಅನುಸರಿಸಲೇಬೇಕಾದ ಒಂದು ಕಾರ್ಯ. ಇದರಿಂದ ನಮಗೆ ಬುದ್ಧಿಮತ್ತೆ ಅಲ್ಲದೆ ಜ್ಞಾನವೂ ಕೂಡ ವೃದ್ಧಿಯಾಗುತ್ತದೆ. ಹೊಸ ಹೊಸ ಪ್ರದೇಶಗಳ ಅನುಭವ, ವಿವಿಧ ಸಂಸ್ಕೃತಿಗಳ ಪರಿಚಯ ನಾವು ಆವಾಗಾವಾಗ ಪ್ರವಾಸ ಮಾಡುವುದರಿಂದ ಖಂಡಿತವಾಗಿಯೂ ಲಭಿಸುತ್ತದೆ. ಉತ್ತರಕರ್ನಾಟಕದ ಆಹಾರ ಪದ್ಧತಿ, ಸಂಸ್ಕೃತಿ, ನಡೆ ನುಡಿಯ ಕುರಿತು ತಿಳಿಯುವ ಆಸೆ ನಿಮಗಿದ್ದರೆ ಬಿಜಾಪುರ ಪಟ್ಟಣವು ಒಂದು ಉತ್ತಮ ಆಯ್ಕೆ ಆಗಬಲ್ಲದು.

ಕಿರು ಇತಿಹಾಸ

1518 ರಲ್ಲಿ ಬಹುಮನಿ ಸಾಮ್ರಾಜ್ಯವು ಐದು ಭಾಗಗಳಲ್ಲಿ ವಿಭಜನೆ ಹೊಂದಿ ಡೆಕ್ಕನ್ ಸಾಮ್ರಾಜ್ಯಗಳೆಂದು ಕರೆಯಲ್ಪಟ್ಟವು. ಅವುಗಳಲ್ಲಿ ಒಂದಾಗಿತ್ತು ಬಿಜಾಪುರ ಸಾಮ್ರಾಜ್ಯ. ಬಿಜಾಪುರ ಪಟ್ಟಣದ ನಿರ್ಮಾತೃ ಎಂದೆ ಬಿಂಬಿಸಲಾಗುವ ಯುಸುಫ್ ಆದಿಲ್ ಶಾಹನ ಕೊಡುಗೆ ಈ ಪ್ರದೇಶಕ್ಕೆ ಅಪಾರವಾಗಿದೆ. ಈ ಸಾಮ್ರಾಜ್ಯದ ಆಡಳಿತವು ಮುಘಲ್ ದೊರೆ ಔರಂಗಜೇಬನಿಂದಾಗಿ 1686 ರಲ್ಲಿ ಕೊನೆಗೊಂಡಿತು. ನಂತರ ಹೈದರಾಬಾದ ನಿಜಾಮರ ಪಾಲಾದ ಪಟ್ಟಣವು ತದನಂತರ ಮರಾಠಾ ಪೇಶ್ವಾಗಳ ಕೈ ಸೇರಿತು. ಕೊನೆಯದಾಗಿ ಬ್ರಿಟೀಷರ ಪಾಲಾದ ಬಿಜಾಪುರವು 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬಾಂಬೆ (ಮುಂಬೈ) ರಾಜ್ಯದ ಭಾಗವಾಗಿತ್ತು. ಅಂತಿಮವಾಗಿ 1956 ರಲ್ಲಾದ ರಾಜ್ಯಗಳ ಪುನರ್ವಿಂಗಡನೆಯಲ್ಲಿ ಇಂದಿನ ಕರ್ನಾಟಕ (ಅಂದಿನ ಮೈಸೂರು ರಾಜ್ಯ) ರಾಜ್ಯಕ್ಕೆ ಸೇರಿತು.

ಹಲವು ಅದ್ಭುತ ವಾಸ್ತುಶಿಲ್ಪ ಸ್ಮಾರಕಗಳನ್ನು ಹೊಂದಿರುವ ಬಿಜಾಪುರ ಪಟ್ಟಣವನ್ನು ರೈಲು ಹಾಗು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿರುವ ಬಿಜಾಪುರ ಪಟ್ಟಣವು ಬೆಂಗಳೂರಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ.

ತೆರಳುವ ಬಗೆ:

ಇನ್ನು ರಸ್ತೆಯ ಮುಖಾಂತರ ಬೆಂಗಳೂರಿನಿಂದ ಈ ಕೆಳಗಿನ ಮಾರ್ಗಗಳ ಮೂಲಕ ಸುಲಭವಾಗಿ ಬಿಜಾಪುರವನ್ನು ತಲುಪಬಹುದು.

1. ಬೆಂಗಳೂರು - ತುಮಕೂರು - ಚಿತ್ರದುರ್ಗ - ದಾವಣಗೆರೆ - ಬಾಗಲಕೋಟೆ - ಬಿಜಾಪುರ (ಒಟ್ಟು 521 ಕಿ.ಮೀ)
2. ಬೆಂಗಳೂರು - ಹಿಂದುಪುರ - ಅನಂತಪುರ - ಬಳ್ಳಾರಿ - ಹೊಸಪೇಟ - ಇಳಕಲ್ - ಬಿಜಾಪುರ (ಒಟ್ಟು 575 ಕಿ.ಮೀ)
3. ಬೆಂಗಳೂರು - ಹಿಂದುಪುರ - ಅನಂತಪುರ - ಅದೋನಿ - ಸಿರಗುಪ್ಪ - ಸಿಂಧನೂರು - ಮುದ್ಗಲ್ - ಬಿಜಾಪುರ (ಒಟ್ಟು 606 ಕಿ.ಮೀ)

ಇನ್ನು ತಡವೇಕೆ? ಬಿಜಾಪುರದ ಪ್ರವಾಸ ಯೋಜನೆಯನ್ನು ಹಾಕಿ ಹಾಗು ಈ ಕೆಳಗಿನ ಸ್ಲೈಡುಗಳಲ್ಲಿ ತೋರಿಸಲಾಗಿರುವ ಪಟ್ಟಣ ಹಾಗು ಸುತ್ತಲಿನ ಎಲ್ಲ ಪ್ರವಾಸಿ ಆಕರ್ಷಣೆಗಳನ್ನು ತಪ್ಪದೆ ನೋಡಿ ಬನ್ನಿ.

ಗೋಲ ಗುಮ್ಮಟ/ಗುಂಬಜ

ಗೋಲ ಗುಮ್ಮಟ/ಗುಂಬಜ

ಬಿಜಾಪುರಿನ ವಿಶ್ವ ಪ್ರಖ್ಯಾತ ಹೆಗ್ಗುರುತಾಗಿದೆ ಈ ಭವ್ಯ ಬೃಹತ್ ಸ್ಮಾರಕ. 1659 ರಲ್ಲಿ ಮೊಹಮ್ಮದ್ ಆದಿಲ್ ಶಾಹ್ ಹಾಗು ಕುಟುಂಬದವರಿಂದ ನಿರ್ಮಿಸಲ್ಪಟ್ಟ ಈ ಅದ್ಭುತ ರಚನೆಯು ಅರ್ಧ ಗೋಲಾಕಾರದ ಬೃಹತ್ ಗುಮ್ಮಟವನ್ನು ಹೊಂದಿದ್ದು, ಜಗತ್ತಿನಲ್ಲೆ ಎರಡನೇಯ ದೊಡ್ಡ ಖಂಬಗಳ ಆಧಾರವಿಲ್ಲದ ಗುಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮೊದಲನೆಯದು ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀಟರ್ಸ್. ಈ ರಚನೆಯು ಎಷ್ಟೊಂದು ಅದ್ಭುತವಾಗಿದೆಯೆಂದರೆ ಸುಮಾರು 38 ಮೀ ಗಳಷ್ಟು ದೂರದಲ್ಲೂ ಕೂಡ ಒಂದು ಸೂಜಿಯು ಬಿದ್ದ ಸಪ್ಪಳವನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ ಇಲ್ಲಿನ ವ್ಹಿಸ್ಪರಿಂಗ್ ಗ್ಯಾಲರಿಯಲ್ಲಿ. ಅಲ್ಲದೆ ಒಮ್ಮೆ ಚಪ್ಪಾಳೆಯನ್ನು ಹೊಡೆದರೆ ಹತ್ತು ಬಾರಿ ಅದು ಪ್ರತಿಧನಿಸುತ್ತದೆ.

ವಿಶಾಲವಾದ ಹೊರಾಂಗಣ ಹಾಗು ಸುಂದರವಾದ ಉದ್ಯಾನವನ್ನು ಹೊಂದಿರುವ ಈ ಗುಮ್ಮಟವನ್ನು ಬಿಜಾಪುರಿನ ಬಸ್ ನಿಲ್ದಾಣ ಹಾಗು ರೈಲು ನಿಲ್ದಾಣಗಳಿಂದ ರಿಕ್ಷಾ ಹಾಗು ಟಾಂಗಾ(ಕುದುರೆ ಗಾಡಿ)ಗಳ ಮೂಲಕ ಸುಲಭವಾಗಿ ತಲುಪಬಹುದು. ಶುಕ್ರವಾರವೊಂದನ್ನು ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಘಂಟೆಯವರೆಗೆ ತೆರೆದಿರುವ ಈ ಸ್ಮಾರಕಕ್ಕೆ ಪ್ರವೇಶಿಸಲು ಪ್ರತಿ ತಲೆಗೆ ರೂ. 2 ಶುಲ್ಕವನ್ನು ಕೊಡಬೇಕಾಗುತ್ತದೆ (15 ವರ್ಷ ಮೇಲ್ಪಟ್ಟವರಿಗೆ ಮಾತ್ರ).

ಬಸಂತ ವನ:

ಬಸಂತ ವನ:

ಬಿಜಾಪುರ ನಗರದಿಂದ 3 ಕಿ.ಮೀ ದೂರದಲ್ಲಿ ಉಕ್ಕಲಿ ರಸ್ತೆಯಲ್ಲಿರುವ ರಂಬಾಪುರ ಹಳ್ಳಿಯಲ್ಲಿ ಕಾಣಬಹುದಾಗಿದೆ 85 ಅಡಿಗಳಷ್ಟು ಎತ್ತರದ ಸಿಮೆಂಟ್ ಹಾಗು ಉಕ್ಕಿನಿಂದ ಮಾಡಲಾದ ಈ ಬೃಹತ್ ಶಿವ ಪ್ರತಿಮೆಯನ್ನು. ಇದನ್ನು 26 ನೇಯ ಫೆಬ್ರುವರಿ 2006 ರ ಶಿವರಾತ್ರಿಯ ದಿನದಂದು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಈ ಶಿವ ಪ್ರತಿಮೆಯ ಕೆಳಬದಿಯಲ್ಲಿ ಪುಟ್ಟ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಲಾಗಿದ್ದು ಸುತ್ತಲಿರುವ ಗೋಡೆಗಳ ಮೇಲೆ ಶಿವ ಚರಿತೆಯನ್ನು ಕನ್ನಡದಲ್ಲಿ ಕೆತ್ತಲಾಗಿದೆ.

ಬಸಂತ ಸ್ಮಾರಕ/ಬಸವನ ಬಾಗೇವಾಡಿ:

ಬಸಂತ ಸ್ಮಾರಕ/ಬಸವನ ಬಾಗೇವಾಡಿ:

12 ನೇಯ ಶತಮಾನದಲ್ಲಿದ್ದ ಕ್ರಾಂತಿಕಾರಿ ಸಮಾಜ ಸುಧಾರಕ ಹಾಗು ಸಂತ ಬಸವಣ್ಣನವರು ಜನಿಸಿದ್ದು ಬಿಜಾಪುರ ಜಿಲ್ಲೆಯ ಪುಟ್ಟ ಹಳ್ಳಿಯಾದ ಬಾಗೇವಾಡಿಯಲ್ಲಿ. ಆದ್ದರಿಂದ ಇದು ಬಸವನ ಬಾಗೇವಾಡಿ ಎಂದೆ ಹೆಸರು ಪಡೆದಿದೆ. ಅಲ್ಲದೆ ಇದನ್ನು ಇಂಗಳೇಶ್ವರ ಬಾಗೇವಾಡಿ ಎಂದೂ ಕೂಡ ಕರೆಯಲಾಗುತ್ತದೆ. ಲಿಂಗಾಯತ ಸಮುದಾಯದವರ ದೈವವಾಗಿರುವ ಬಸವಣ್ಣನವರ ಈ ಕ್ಷೇತ್ರವು ಒಂದು ಧಾರ್ಮಿಕ ಪ್ರವಾಸಿ ಕ್ಷೇತ್ರವಾಗಿದ್ದು, ಬಿಜಾಪುರ ಪಟ್ಟಣದ ಆಗ್ನೇಯ ದಿಕ್ಕಿಗೆ ಸುಮಾರು 43 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇಲ್ಲಿಗೆ ತೆರಳಲು ಬಿಜಾಪುರ ಬಸ್ ನಿಲ್ದಾಣದಿಂದ ಬಸ್ ಲಭ್ಯವಿರುತ್ತದೆ.

ಜಾಮಾ/ಜುಮ್ಮಾ ಮಸೀದಿ:

ಜಾಮಾ/ಜುಮ್ಮಾ ಮಸೀದಿ:

ನಗರದಲ್ಲಿರುವ ಈ ಭವ್ಯ ಮಸೀದಿಯು ಭಾರತದಲ್ಲಿರುವ ಉತ್ತಮ ಮಸೀದಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. 1,16,300 ಚ.ಮೀ ಗಳಷ್ಟು ವಿಸ್ತಾರವಾದ ಆವರಣ ಹೊಂದಿರುವ ಈ ಮಸೀದಿಯನ್ನು ಒಂದನೇಯ ಅಲಿ ಆದಿಲ್ ಶಾಹ್ (1557 - 80) ನಿರ್ಮಿಸಿದ್ದಾನೆ. 2250 ಜನ ಒಟ್ಟಾಗಿ ಕುಳಿತು ಪ್ರಾರ್ಥಿಸುವ ಜಾಗವನ್ನು ಹೊಂದಿರುವ ಈ ಮಸೀದಿಯ ಲತಾಮಂಟಪದಲ್ಲಿ ಸುವರ್ಣ ಅಕ್ಷರಗಳಲ್ಲಿ ಖುರಾನ್ ಬರೆದ್ದಿದ್ದನ್ನು ಕಾಣಬಹುದಾಗಿದೆ.

ಮಲಿಕ್ - ಎ - ಮೈದಾನ್:

ಮಲಿಕ್ - ಎ - ಮೈದಾನ್:

ಭೂಪ್ರದೇಶದ ಒಡೆಯ ಎಂಬ ಅಕ್ಷರಶಃ ಅರ್ಥ ಕೊಡುವ ಇದು ಒಂದು ಬೃಹತ್ತಾದ ಸಿಡಿ ಮದ್ದಿನ ತೋಪು. 4 ಮೀ ಉದ್ದ, 1.5 ಮೀ ವ್ಯಾಸ ಹೊಂದಿರುವ ಈ ತೋಪು 55 ಟನ್ ಗಳಷ್ತು ತೂಗುತ್ತದೆ. 400 ಎತ್ತುಗಳು, 10 ಆನೆಗಳು ಹಾಗು ಹಲವು ಯೋಧರು ಪಾಲ್ಗೊಂಡಿದ್ದ ಯುದ್ಧದಲ್ಲಿ ಜಯಗಳಿಸಿದ ನಂತರ 17 ನೇಯ ಶತಮಾನದಲ್ಲಿ ಅಹ್ಮದ್ ನಗರದಿಂದ ಇದನ್ನು ಇಲ್ಲಿಗೆ ಮರು ತರಲಾಯಿತು.

ಇಬ್ರಾಹಿಮ್ ರೋಜಾ:

ಇಬ್ರಾಹಿಮ್ ರೋಜಾ:

ನಗರದಲ್ಲಿರುವ ಈ ಸ್ಮಾರಕವನ್ನು ಎರಡನೇಯ ಇಬ್ರಾಹಿಮ್ ಆದಿಲ್ ಶಾಹ್ ನಿರ್ಮಿಸಿದ್ದಾನೆ. ಆಕರ್ಷಕವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ಸ್ಮಾರಕದಲ್ಲಿ ಆಯತಾಕಾರದ ಪ್ರಾರ್ಥನಾ ಮಂದಿರವಿರುವುದನ್ನು ಗಮನಿಸಬಹುದು.

 ಉಪ್ಪಲಿ ಬುರುಜ:

ಉಪ್ಪಲಿ ಬುರುಜ:

ಬಿಜಾಪುರ ನಗರದಲ್ಲಿರುವ ಈ ರಚನೆಯು ಒಂದು ಎತ್ತರವಾದ ಗೋಪುರವಾಗಿದೆ. 1584 ರಲ್ಲಿ ಹೈದರ್ ಖಾನ್ ನಿಂದ ನಿರ್ಮಿತವಾದ ಇದು 80 ಅಡಿಗಳಷ್ಟು ಎತ್ತರವಿದ್ದು ಮೆಟ್ಟಿಲುಗಳನ್ನು ಹೊಂದಿದೆ.

ಬಾರಾಕಮಾನ:

ಬಾರಾಕಮಾನ:

ಇದೊಂದು ಸಂಪೂರ್ಣಗೊಳ್ಳದ ಎರಡನೇಯ ಅಲಿ ಆದಿಲ್ ಶಾಹನ ಭವ್ಯ ಸಮಾಧಿ. ಅಲಿ ಆದಿಲ್ ಶಾಹನು ಹೋಲಿಸಲಸಾಧ್ಯವಾದಂತಹ ಭವ್ಯ ರಚನೆಯನ್ನು ನಿರ್ಮಿಸಲು ಆಶಿಸಿದ್ದನು. ಯೋಜನೆಯ ಪ್ರಕಾರ, 12 (ಹಿಂದಿಯಲ್ಲಿ ಬಾರಾ ಎಂದರೆ 12) ಕಮಾನುಗಳನ್ನು ಉದ್ದವಾಗಿಯೂ ಅಗಲವಾಗಿಯೂ ನಿರ್ಮಿಸಬೇಕಾಗಿತ್ತು. ಆದರೆ ಇದರ ನಿರ್ಮಾಣ ಕಾರ್ಯವು ಏತಕ್ಕೆ ಸಂಪೂರ್ಣಗೊಳ್ಳಲಿಲ್ಲ ಎಂಬುದು ತಿಳಿದು ಬಂದಿಲ್ಲ.

ತಾಜ ಬಾವಡಿ:

ತಾಜ ಬಾವಡಿ:

ಬಿಜಾಪುರಿನ ದೊರೆ ಎರಡನೇಯ ಇಬ್ರಾಹಿಮ್ ನ ಮೊದಲನೇಯ ಪತ್ನಿಯಾದ ತಾಜ್ ಸುಲ್ತಾನಾಳ ಗೌರವಾರ್ಥ ಈ ಕೊಳವನ್ನು ನಿರ್ಮಿಸಲಾಯಿತು. ಅಷ್ಟ ಭುಜಗಳುಳ್ಳ ಎರಡು ರಚನೆಗಳನ್ನು ಇಲ್ಲಿ ನೋಡಬಹುದಾಗಿದ್ದು ಇದರ ಪೂರ್ವ ಹಾಗು ಪಶ್ಚಿಮಕ್ಕೆ ವಿಶಾಲವಾದ ವಿರಾಮ ಕೊಠಡಿಗಳಿವೆ.

ಸಂಗೀತ ಮಹಲ್:

ಸಂಗೀತ ಮಹಲ್:

ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ ತೊರವಿ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ಬಿಜಾಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ.

ಅಸರ್ ಮಹಲ್:

ಅಸರ್ ಮಹಲ್:

ಮೊಹಮ್ಮದ್ ಆದಿಲ್ ಶಾಹ್ ನಿಂದ 1646 ರಲ್ಲಿ ನಿರ್ಮಿಸಲಾದ ಅಸರ್ ಮಹಲ್ ನ್ಯಾಯ ಬಗೆಹರಿಸುವ ಆಲಯವಾಗಿತ್ತು. ಇಲ್ಲಿ ಮೂರು ಹೊಂಡಗಳನ್ನು ಕಾಣಬಹುದು. ಮಧ್ಯದಲ್ಲಿರುವ ಹೊಂಡವು 15 ಅಡಿಗಳಷ್ಟು ಆಳವನ್ನು ಹೊಂದಿದ್ದು ಉಳಿದೆರಡ ಹೊಂಡಗಳಿಗಿಂತ ದೊಡ್ಡದಾಗಿದೆ. ಇಲ್ಲಿ ಪ್ರಾಫೆಟ್ ಮೊಹಮ್ಮದರ ಎರಡು ಎಳೆ ಕೂದಲನ್ನು ಇರಿಸಲಾಗಿದೆ ಎಂದು ಹೇಳಲಾಗಿದೆ.

ಕೂಡಲ ಸಂಗಮ:

ಕೂಡಲ ಸಂಗಮ:

ಲಿಂಗಾಯತ ಸಮುದಾಯದವರಿಗೆ ಕೂಡಲ ಸಂಗಮವು ಪವಿತ್ರವಾದಂತಹ ಯಾತ್ರಾ ಕ್ಷೇತ್ರವಾಗಿದೆ. ಏಕೆಂದರೆ ಇದು ಬಸವಣ್ಣನವರು ಐಕ್ಯವಾದ ಸ್ಥಳವಾಗಿದೆ ಹಾಗು ಕೃಷ್ಣಾ ಹಾಗು ಘಟಪ್ರಭಾ ನದಿಗಳಿ ಇಲ್ಲಿ ಸಂಗಮ ಹೊಂದಿ ಆಂಧ್ರದ ಶ್ರೀಶೈಲಂ ಕಡೆಗೆ ಹರಿಯುತ್ತದೆ. ಆಲಮಟ್ಟಿ ಜಲಾಶಯದಿಂದ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಈ ಕ್ಷೇತ್ರ.

ಆಲಮಟ್ಟಿ ಡ್ಯಾಮ್:

ಆಲಮಟ್ಟಿ ಡ್ಯಾಮ್:

ಬಿಜಾಪುರಿನ ಜನರಲ್ಲಿ ಇದೊಂದು ಪ್ರಖ್ಯಾತವಾದ ಪಿಕ್ನಿಕ್ ಸ್ಪಾಟ್. ಈ ಆಣೆಕಟ್ಟು ಸುಂದರವಾದಂತಹ ಉದ್ಯಾನವನವನ್ನೂ ಸಹ ಹೊಂದಿದ್ದು ವಾರಾಂತ್ಯದ ರಜಾ ದಿನಗಳಲ್ಲಿ ಕುಟುಂಬ ಸಮೇತ ದಿನ ಕಳೆಯ ಬಯಸುವವರಿಗೆ ಇದು ಒಂದು ಆದರ್ಶಮಯ ಸ್ಥಳವಾಗಿದೆ. ಬಿಜಾಪುರಿನ ಆಗ್ನೇಯ ಭಾಗಕ್ಕೆ ಸುಮಾರು 65 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವನ್ನು ಸರ್ಕಾರಿ ಬಸ್ ಅಥವಾ ಖಾಸಗಿ ಟ್ಯಾಕ್ಸಿಗಳನ್ನು ಬಿಜಾಪುರಿನಿಂದ ಬಾಡಿಗೆಗೆ ಪಡೆದು ಸುಲಭವಾಗಿ ತಲುಪಬಹುದು.

Read more about: bijapur karnataka tourism
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X