Search
  • Follow NativePlanet
Share
» »ಬೆಂಗಳೂರಿನ ‘ಕಲಾಸಿಪಾಳ್ಯ’ ದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು…

ಬೆಂಗಳೂರಿನ ‘ಕಲಾಸಿಪಾಳ್ಯ’ ದ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು…

ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಜನಪ್ರಿಯ ಮಾರುಕಟ್ಟೆ 'ಕಲಾಸಿಪಾಳ್ಯ'. ಇದನ್ನು 'ಕಲಾಸಿಪಾಳ್ಯಂ' ಎಂದೂ ಸಹ ಉಚ್ಚರಿಸಲಾಗುತ್ತದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಈ ಮಾರುಕಟ್ಟೆ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಒಂದಾಗಿದೆ. ಬೆಂಗಳೂರು ಕೋಟೆ, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಇರುವುದು ಕೂಡ ಇದೇ ಕಲಾಸಿಪಾಳ್ಯದಲ್ಲಿ. 18 ನೇ ಶತಮಾನದ ಉತ್ತರಾರ್ಧದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಕಲಾಸಿಪಾಳ್ಯವನ್ನು ವಿಸ್ತರಿಸಲಾಯಿತು ಎಂದು ಹೇಳಲಾಗುತ್ತದೆ.

ಸರಿಸುಮಾರು 1920 ರಲ್ಲಿ ಸ್ಥಾಪಿತವಾದ ಕಲಾಸಿಪಾಳ್ಯ ಮಾರುಕಟ್ಟೆಯು ಕೆಆರ್ ಮಾರುಕಟ್ಟೆಗಿಂತಲೂ ಹಳೆಯದಾಗಿದೆ. ಎಸ್ ಎಲ್ ಎನ್ ಸಂಸ್ಥೆ, ನಾಯ್ಡು ಹೋಟೆಲ್ ಇಲ್ಲಿ ಭಾರಿ ಫೇಮಸ್. ಅನಾಥರಿಗೆ ಇದು ಒಂದು ರೀತಿಯ ಆಶ್ರಯ ತಾಣ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಕಲಾಸಿಪಾಳ್ಯದ ಜನಜೀವನ ಹಿಂದೆ ಹೇಗಿತ್ತು ಗೊತ್ತಾ?, ಇಲ್ಲಿದೆ ನೋಡಿ ಮಾಹಿತಿ...

ಕಲಾಸಿಪಾಳ್ಯದಲ್ಲಿ ಮೊದಲಿದ್ದವರು…

ಕಲಾಸಿಪಾಳ್ಯದಲ್ಲಿ ಮೊದಲಿದ್ದವರು…

ಸದ್ಯ ಕೇಂದ್ರ ಭಾಗದಲ್ಲಿದ್ದ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಬೆಂಗಳೂರು ನಗರದ ಹೊರವಲಯದಲ್ಲಿರುವ ಆನೇಕಲ್ ಸಮೀಪದ ಗೂಳಿಮಂಗಲ ಗ್ರಾಮಕ್ಕೆ ಶಿಫ್ಟ್ ಮಾಡಿ, ಅಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಕಲಾಸಿಪಾಳ್ಯ ಮಾರುಕಟ್ಟೆ ಈ ಹಿಂದೆ ಹೇಗಿತ್ತು ಎನ್ನುವುದನ್ನು ನೋಡುವುದಾದರೆ ಕಲಾಸಿಪಾಳ್ಯದಲ್ಲಿ ಮೊದಲು ಅಂದರೆ ಹೈದರನ ಕಾಲದಲ್ಲಿ ಇಲ್ಲಿ ಪಾತ್ರೆಗಳಿಗೆ ಕಲಾಯಿ ಹಾಕುವವರು, ಚಾಪೆ, ಬುಟ್ಟಿ ಹೆಣೆಯುವವರು, ತಾಮ್ರದ ಸಾಮಾನು ಮಾರುವವರು ಹೆಚ್ಚಾಗಿ ಇದ್ದರು. ಅಂದರೆ ಮೇದರು, ಕೊರಚರು, ಕೊರಮರು ಹೆಚ್ಚಾಗಿ ಇದ್ದರು. ಸಂಪಿಗೆಹಳ್ಳಿ ಅಭಿವೃದ್ಧಿಯಾದ ಮೇಲೆ ಇವರೆಲ್ಲಾ ಆ ಭಾಗಕ್ಕೆ ಹೋದರು.

ಅದ್ಭುತ ಹಣಕಾಸಿನ ಮಾರುಕಟ್ಟೆ

ಅದ್ಭುತ ಹಣಕಾಸಿನ ಮಾರುಕಟ್ಟೆ

ಕಲಾಸಿಪಾಳ್ಯ ಫಾಸ್ಟ್ ಫೈನಾನ್ಶಿಯಲ್ ಗ್ರೋಯಿಂಗ್ ಮಾರ್ಕೆಟ್ ಅಂತಲೇ ಖ್ಯಾತಿ ಪಡೆದಿದೆ. ಕಲಾಸಿಪಾಳ್ಯಕ್ಕಿಂತ ಅದ್ಭುತ ಹಣಕಾಸಿನ ಮಾರುಕಟ್ಟೆ ಮತ್ತೊಂದಿಲ್ಲ. ಇಲ್ಲಿನ ಹಣಕಾಸಿನ ವ್ಯವಹಾರ ಸ್ವಿಸ್ ಬ್ಯಾಂಕ್ ಗಿಂತ ಜೋರಾಗಿ ನಡೆಯುತ್ತದೆ. ಇಲ್ಲಿನ ವ್ಯಾಪಾರಿಗೆ ಬೆಳಗ್ಗೆ 80 ರೂ. ಕೊಟ್ಟರೆ ಸಂಜೆ 100 ರೂ. ಕೊಡುತ್ತಾರೆ. ಕಲಾಸಿಪಾಳ್ಯದಲ್ಲಿ ಗಾರೆ ಕೆಲಸ ಮಾಡೋರು ಕೂಡ ಹೆಚ್ಚು ಕಂಡುಬರುತ್ತಾರೆ. ಹಾಗೆಯೇ ರೇಶನ್ ಅಂಗಡಿಗಳು, ಹೋಲ್ ಸೆಲ್ ಮಾರ್ಕೆಟ್'ಗೆ ಕಲಾಸಿಪಾಳ್ಯ ಬಹಳ ಫೇಮಸ್ ಅಂತಲೇ ಅನ್ನಬಹುದು.

‘ಕಲಾಸಿಪಾಳ್ಯ’ ಎನ್ನಲು ಕಾರಣ…

‘ಕಲಾಸಿಪಾಳ್ಯ’ ಎನ್ನಲು ಕಾರಣ…

ಪಾತ್ರೆಗೆ ಕಲಾಯಿ ಹಾಕೊರು ಇಲ್ಲಿಗೆ ಬರುತ್ತಿದ್ದರು. ಹಾಗೆಯೇ ಸಂಪಿಗೆಹಳ್ಳಿ, ಪಾವರ್ತಿಪುರ ಎಲ್ಲದಕ್ಕೂ ಇದು ಪಾಳ್ಯ ಆಗಿತ್ತು. ಊರಿನ ಅಂಚಿನಲ್ಲಿರುವ ಪ್ರದೇಶವನ್ನು ಪಾಳ್ಯ ಎಂದು ಕರೆಯಲಾಗುತ್ತದೆ. ಕಲಾಯಿ ಹಾಕೊರು ಇದ್ದುದರಿಂದ ಹಾಗೂ ಇದು ಪಾಳ್ಯವಾಗಿದ್ದರಿಂದ ಕಲಾಸಿ ಪಾಳ್ಯ ಎಂಬ ಹೆಸರು ಬಂದಿರಬಹುದು ಎಂದು ಕೂಡ ಹೇಳಲಾಗುತ್ತದೆ. ಇವತ್ತಿಗೂ ಇಲ್ಲಿ ಎಲ್ಲಾ ಸಮದಾಯದವರು ವಾಸಿಸುತ್ತಿರುವುದನ್ನು ಕಾಣಬಹುದಾಗಿದ್ದು, ಕೊರಚರ ಕೊಡುಗೆ ಜಾಸ್ತಿ ಎನ್ನಲಾಗುತ್ತದೆ.

ಟೈರ್ ರಿಸೆಟ್ ಮಾಡುವುದರಲ್ಲಿ ನಿಷ್ಣಾತರು

ಟೈರ್ ರಿಸೆಟ್ ಮಾಡುವುದರಲ್ಲಿ ನಿಷ್ಣಾತರು

ಕಾರ್ ಬಸ್ ಟೈರ್ ಕ್ಷಣಾರ್ಧದಲ್ಲಿ ಹೊಸದರಂತೆ ಮಾಡಿಕೊಡುವ ಪದ್ಧತಿ ಬೇರೆಡೆ ಇಲ್ಲ. ಆದರೆ ಅದನ್ನು ರಿಸೆಟ್ ಮಾಡುವುದರಲ್ಲಿ ಕಲಾಸಿಪಾಳ್ಯದಲ್ಲಿರುವ ಕೆಲಸಗಾರರು ತುಂಬಾ ನಿಷ್ಣಾತರು ಎಂದು ಹೇಳಲಾಗುತ್ತದೆ. ಇಡೀ ದೇಶದಲ್ಲೇ ಈ ತರಹ ಟೈರ್ ಗೆ ರೂಪು ಕೊಡೊರು ಯಾರು ಇರಲಿಲ್ಲ. ಈಗೆಲ್ಲಾ ಟೈರ್ ಉಪಯೋಗಿಸಿ ಬಿಸಾಕುತ್ತಾರೆ.ಆದರೆ ಹಿಂದೆ ಹಾಗಿರಲಿಲ್ಲ. ಎತ್ತಿನ ಗಾಡಿ, ಟ್ರಾಕ್ಟರ್ ಇದಕ್ಕೆಲ್ಲಾ ಟೈರ್ ಕಲಾಸಿಪಾಳ್ಯದಿಂದಲೇ ರೆಡಿ ಆಗುತ್ತಿತ್ತು. ಈ ರೀತಿ ಕೆಲಸ ಮಾಡುವವರು ಇಂದಿಗೂ ಇಲ್ಲಿ ಕಂಡುಬರುತ್ತಾರೆಯಾದರೂ ಅವರ ಸಂಖ್ಯೆ ಕಡಿಮೆ. ಈಗಿಲ್ಲಿ 7-8 ಕುಟುಂಬವಷ್ಟೇ ಇಂತಹ ಕೆಲಸ ಮಾಡುವುದಂತೆ.

ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರ

ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರ

ಕಲಾಸಿಪಾಳ್ಯ ಒಂದು ಮಾರುಕಟ್ಟೆ ಕೇಂದ್ರವಾಗಿದ್ದು, ಕೆ.ಆರ್. ಮಾರುಕಟ್ಟೆಗೆ ಹೊಂದಿಕೊಂಡಿದೆ. ಕಲಾಸಿಪಾಳ್ಯವು ಮೊದಲಿನಿಂದಲೂ ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾಗಿದೆ. ಇಲ್ಲಿ ನಿಲ್ದಾಣವನ್ನು 1920 ರ ದಶಕದಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಆಗ ಕುದುರೆ ಗಾಡಿಗಳು, ಬಸ್'ಗಳನ್ನು ಕಲಾಸಿಪಾಳ್ಯದಲ್ಲಿ ಮಾರ್ಕೆಟ್ ಹತ್ತಿರ ನಿಲ್ಲಿಸಲಾಗುತ್ತಿತ್ತು. ಉದಯರಂಗ ಬಸ್ (ಇದು ಕೊಳ್ಳೆಗಾಲದ ಬಸ್ ), ಜಯರಂಗ ಬಸ್, ಶ್ರೀರಾಮ ಬಸ್ ಗಳು ಬಹಳ ಜನಪ್ರಿಯ. ಇಡೀ ಬೆಂಗಳೂರು ಸಾರಿಗೆ ಇದರ ಮೇಲೆ ನಿಂತಿತ್ತು. ಆಗ ಮೆಜೆಸ್ಟಿಕ್'ಗೆ ಯಾರು ಹೋಗುತ್ತಿರಲಿಲ್ಲ. ದೂರದಿಂದ ನಡೆದುಬರುವವರು ಕಲಾಸಿಪಾಳ್ಯಕ್ಕೆ ಬರುತ್ತಿದ್ದರು. ಇದರ ನಂತರ ಮೆಜೆಸ್ಟಿಕ್, ಶಿವಾಜಿನಗರ ಹೀಗೆ ಬೇರೆ ಬೇರೆ ಕಡೆ ನಿಲ್ದಾಣಗಳು ವಿಸ್ತಾರವಾಗುತ್ತಾ ಹೋದವು.

ಬಿರಿಯಾನಿ, ಸಮೋಸಾ ಬಹಳ ಜನಪ್ರಿಯ

ಬಿರಿಯಾನಿ, ಸಮೋಸಾ ಬಹಳ ಜನಪ್ರಿಯ

ಇಲ್ಲಿನ ಬಿರಿಯಾನಿ, ಸಮೋಸಾ ತುಂಬಾ ಜನಪ್ರಿಯ ಹಾಗೂ ವಿಶೇಷವಾದ ಖಾದ್ಯಗಳು. ಬೆಂಗಳೂರಿನ ಸುತ್ತಮುತ್ತಲಿನಿಂದ ಜನರು ಇದನ್ನು ಆಸ್ವಾದಿಸುವುದಕ್ಕೆ ಇಲ್ಲಿಗೆ ಬರುತ್ತಿದ್ದರು. ದಿಲ್ ಪಸಂದ್ ಅನ್ನು ಹಿಂದೆ ತೆಂಗಿನ ರೊಟ್ಟಿ ಎಂದು ಕರೆಯಲಾಗುತ್ತಿತ್ತು. ಅದನ್ನು ಸವಿಯುವುದಕ್ಕೋಸ್ಕರವೇ ಇಲ್ಲಿಗೆ ಜನರು ಬರುತ್ತಿದ್ದರು. ಗರ್ಭಿಣಿಯರು ಕೂಡ ಇಲ್ಲಿಗೆ ಬರುತ್ತಿದ್ದರು ಎಂದರೆ ನೀವೇ ಲೆಕ್ಕ ಹಾಕಿ ಅದರ ರುಚಿ ಹೇಗಿರಬಹುದೆಂದು. "10 ರೂ.ಗೆ ಹೊಟ್ಟೆ ತುಂಬಾ ಊಟ ಸಿಗುತಿತ್ತು. 25 ರೂ.ಗೆ ನಾನ್ ವೆಜ್ ಲಭ್ಯವಿತ್ತು. ಅದೆಲ್ಲಾ ಈಗ ಕಣ್ಮರೆಯಾಗಿಯಾದೆ. ಆ ಹಳೆಯ ಸೊಬಗನ್ನು ಈಗ ಕಟ್ಟಿಕೊಡೋಕೆ ಆಗುವುದಿಲ್ಲ. ಇಂತಹ ಪ್ರಸಿದ್ಧ ಪ್ರದೇಶವನ್ನು ಹಳೆಯ ದಿಲ್ಲಿಯ ತರಹ ಉಳಿಸಿಕೊಳ್ಳಬೇಕು ಎನ್ನುತ್ತಾರೆ" ಹಿರಿಯ ಪತ್ರಕರ್ತರಾದ ಡಾ.ಎಂ.ಎಸ್.ಮಣಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X