Search
  • Follow NativePlanet
Share
» »ಭಾರತದಾದ್ಯಂತ ಏಕಾಂಗಿ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ಅಗತ್ಯವಿರುವ ಸುರಕ್ಷತಾ ಸಲಹೆಗಳು

ಭಾರತದಾದ್ಯಂತ ಏಕಾಂಗಿ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ಅಗತ್ಯವಿರುವ ಸುರಕ್ಷತಾ ಸಲಹೆಗಳು

By arsad hussian

ಈ ಜಗತ್ತಿನ ಯಾವುದೇ ಭಾಗ ಯಾರು ಎಷ್ಟೇ ಹೇಳಿಕೊಂಡರೂ 100% ಖಚಿತವಾದ ಸುರಕ್ಷಿತವಲ್ಲ. ರಾಜಕೀಯ ತುಮುಲಗಳು ಅತಿ ಕಡಿಮೆ ಇರುವ ಹಾಗೂ ದೌರ್ಜನ್ಯದ ಪ್ರಮಾಣ ಇಲ್ಲವೇ ಇಲ್ಲ ಎನ್ನುವ ದೇಶಗಳೂ ಇದಕ್ಕೆ ಹೊರತಲ್ಲ. ಇದು ಭಾರತವೇ ಆಗಿರಲಿ, ವಿದೇಶದ ಯಾವುದೇ ಭಾಗವಿರಲಿ, ಮಹಿಳೆಯರ ಮಟ್ಟಿಗೆ ಈ ಜಗತ್ತಿನ ಪ್ರತಿ ಇಂಚು ಜಾಗವೂ ಅಸುರಕ್ಷಿತವೇ ಹೌದು. ಹಾಗಾಗಿ, ಏಕಾಂಗಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರು ಈ ವಿಷಯವನ್ನು ಮನದಟ್ಟು ಮಾಡಿಯೇ ಹೊರಡುವುದು ಪ್ರಥಮ ಅಗತ್ಯವಾಗಿದೆ. ಅದರಲ್ಲೂ ನಮ್ಮ ಭಾರತದ ಬಗ್ಗೆ ಇತರ ದೇಶಗಳು ನೀಡುವ ಮಾಹಿತಿಯಲ್ಲಿ, "ನೀವು ಮಹಿಳೆಯಾಗಿದ್ದರೆ, ಒಂಟಿಯಾಗಿ ಭಾರತಕ್ಕೆ ಪ್ರಯಾಣಿಸುವ ಯೋಚನೆಯನ್ನು ಬಿಟ್ಟು ಬಿಡಿ" ಎಂದೇ ಸ್ಪಷ್ಟವಾಗಿ ತಿಳಿಸುತ್ತವೆ. ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ಯಾವುದೇ ವ್ಯಕ್ತಿಯಿಂದಲೂ ಇದೇ ಬಗೆಯ ಸಲಹೆಯನ್ನು ನಿರೀಕ್ಷಿಸಬಹುದು. ಆದರೆ, ವಾಸ್ತವದಲ್ಲಿ ಭಾರತದ ಎಲ್ಲಾ ಜನರು, ದುರುಳರು ಎಂದರ್ಥವಲ್ಲ. ಅತಿಥಿ ದೇವೋಭವಃ ಎಂದು ಪರಿಗಣಿಸುವ ನಮ್ಮ ದೇಶ ಇಂದಿಗೂ ಸಾಂಸ್ಕೃತಿಕವಾಗಿ, ಪರಂಪರಾಗತವಾಗಿ ಸುರಕ್ಷಿತವೇ ಆಗಿದ್ದು ಕೆಲವೇ ದುರುಳರಿಂದ ಇಡಿಯ ದೇಶವೇ ಅವಮಾನ ಪಡುವಂತಾಗಿದೆ.

ಹಾಗಾಗಿ, ಒಂದು ವೇಳೆ ನೀವೊಬ್ಬ ಮಹಿಳೆಯಾಗಿದ್ದು ಒಂಟಿಯಾಗಿ ವಿಶ್ವದ ಯಾವುದೇ ಭಾಗವನ್ನು ಸಂದರ್ಶಿಸಬಯಸುತ್ತಿದ್ದೀರಾದರೆ ನೀವು ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಖಂಡಿತಾ ಅನುಸರಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ನೀವು ಒಂಟಿಯಾಗಿ ಪ್ರಯಾಣಿಸಬಹುದೇ? ಹೌದಾದರೆ ಎಲ್ಲಿ, ಅಲ್ಲವಾದರೆ ಏಕೆ ಬೇಡ ಎಂಬ ಪ್ರಶ್ನೆಗಳನ್ನು ಉತ್ತರಿಸಲು ಅಥವಾ ವಿಮರ್ಶಿಸಲು ಪ್ರತ್ಯೇಕ ವೇದಿಕೆಯೇ ಬೇಕು. ಇವನ್ನು ಮೀರಿ ನೀವು ಒಂಟಿಯಾಗಿ ಭಾರತ ಅಥವಾ ವಿದೇಶದ ಯಾವುದೋ ಒಂದು ಭಾಗವನ್ನು ಸಂದರ್ಶಿಸಬಯಸುವಿರಾದರೆ ಈ ಕೆಳಗಿನ ಎಂಟು ಎಚ್ಚರಿಕೆಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ಆ ಪ್ರಕಾರ ನಡೆದುಕೊಳ್ಳುವ ಮೂಲಕ ನೀವು ನಿಮ್ಮ ರಕ್ಷಣೆಯನ್ನು ಸ್ವತಃ ನಿರ್ವಹಿಸಿಕೊಳ್ಳಲು ಗರಿಷ್ಟ ಮಟ್ಟದಲ್ಲಿ ಸಾಧ್ಯವಾಗುತ್ತದೆ.

ಬನ್ನಿ, ಈ ಎಂಟು ಸುರಕ್ಷಾ ಸಲಹೆಗಳು ಯಾವುವು ಎಂಬುದನ್ನು ನೋಡೋಣ:

1. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ.

1. ನಿಮ್ಮ ಅಂತಃಪ್ರಜ್ಞೆಯನ್ನು ನಂಬಿರಿ.

ಆರನೆಯ ಇಂದ್ರಿಯ ಅಥವಾ ಅಂತಃಪ್ರಜ್ಞೆ ಇದೆಯೋ ಇಲ್ಲವೋ ಎಂದು ಇದುವರೆಗೆ ಯಾರೂ ಖಾತ್ರಿಪಡಿಸಿಲ್ಲ. ಆದರೆ ಪ್ರತಿಯೊಬ್ಬರಿಗೂ ಇದರ ಇರುವಿಕೆಯ ಬಗ್ಗೆ ಆಗಾಗ ಅನುಭೂತಿಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ವಿಶೇಷವಾಗಿ, ಮಹಿಳೆಯರಿಗೆ ತಮ್ಮನ್ನು ಯಾರೋ ಗಮನಿಸುತ್ತಿರುವಂತೆ, ಹಿಂಬಾಲಿಸುತ್ತಿರುವಂತೆ ಅನ್ನಿಸುವ ಅನುಭೂತಿಗಳು ಇತರರಿಗಿಂತ ಹೆಚ್ಚೇ ಅನುಭವವಾಗುತ್ತದೆ. ನೀವು ಒಂಟಿಯಾಗಿದ್ದೀರಿ ಎಂಬುದನ್ನು ನಿಮ್ಮನ್ನು ಗಮನಿಸುವ ಯಾರಿಗಾದರೂ ಕೊಂಚ ಹೊತ್ತಿಗೇ ಗೊತ್ತಾಗಿಬಿಡುತ್ತದೆ. ಅಂತೆಯೇ ಈ ದೃಷ್ಟಿಗಳು ನಿಮ್ಮನ್ನು ಹಿಂಬಾಲಿಸುತ್ತಿವೆ ಎಂಬ ವಿಷಯವೂ ನಿಮ ಅಂತಃಪ್ರಜ್ಞೆ ತಿಳಿಸಿಯೇ ತಿಳಿಸುತ್ತದೆ. ಸಾಮಾನ್ಯವಾಗಿ ಒಂಟಿಯಾಗಿರುವ ಮಹಿಳೆಯರಿಗೆ, ಯುವತಿಯರಿಗೆ ಈ ಭಾವನೆ ಅತಿ ಪ್ರಬಲವಾಗಿರುತ್ತದೆ. ಈ ಅಂತಃಪ್ರಜ್ಞೆಯ ಅರಿವು ಎಂಬುದು ಪೊಳ್ಳು ಎಂದು ವಾದಿಸುವವರೂ ಇದ್ದಾರೆ. ಆದರೆ ವಾಸ್ತವದಲ್ಲಿ ನಿಮಗೆ ನಂಬಿಕೆ ಇದ್ದರೂ ಇಲ್ಲದಿದ್ದರೂ ಸರಿ, ಈ ಬಗೆಯ ಅನುಭೂತಿಯ ಅನುಭವವನ್ನು ಒಂದು ಸಾಸಿವೆ ಕಾಳಿನಷ್ಟು ಪಡೆದರೂ ಸರಿ, ನೀವು ಇದನ್ನು ಸರ್ವಥಾ ಅಲಕ್ಷಿಸಕೂಡದು! ಕಾಡಿನಲ್ಲಿ ಹುಲಿಯನ್ನು ನಿರೀಕ್ಷಿಸುವ ಜಿಂಕೆಯಂತೆ ನಿಮ್ಮ ನಡವಳಿಕೆ ಇರಬೇಕು ಹಾಗೂ ಅತಿಸೂಕ್ಷ ಎನಿಸುವ ಅಂತಃಪ್ರಜ್ಞೆಗಳನ್ನೂ ಅಲಕ್ಷಿಸದೇ ಎದುರಾಗುವ ಅಪಾಯಗಳನ್ನು ನಿರೀಕ್ಷಿಸಬೇಕು. ಹಾಗೂ ಇವುಗಳ ಪರಿಣಾಮವನ್ನು ಮೊದಲೇ ಊಹಿಸಿ ಇದಕ್ಕೆ ವಿರುದ್ದವಾದ ಕ್ರಮವನ್ನು ಕೈಗೊಳ್ಳಬೇಕು.

2. ನಿಮಗೆ ’ಬೇಡ’ ಎಂದು ಹೇಳಬೇಕಿದ್ದರೆ ’ಬೇಡ’ ಎಂದೇ ನಿರಾಕರಿಸಿ:

2. ನಿಮಗೆ ’ಬೇಡ’ ಎಂದು ಹೇಳಬೇಕಿದ್ದರೆ ’ಬೇಡ’ ಎಂದೇ ನಿರಾಕರಿಸಿ:

ಎಷ್ಟೋ ಸಲ ನಮಗೆ ಬೇಡ ಎಂದು ಹೇಳಬೇಕಿದ್ದರೂ ಕಾರಣಾಂತರಗಳಿಂದ ನಾಲಿಗೆ ಬೇಡವೆನ್ನಲು ಹೊರಳುವುದೇ ಇಲ್ಲ. ಮನೆಯಲ್ಲಿದ್ದಾಗ ಅಥವಾ ಆತ್ಮೀಯರ ಜೊತೆಗಿದ್ದಾಗ ಈ ಪರಿ ಅತಿ ಹೆಚ್ಚು. ಆದರೆ ಒಂಟಿಯಾಗಿ ಪ್ರವಾಸ ಹೊರಟಿರುವ ನಿಮಗೆ ಈ ಕಟ್ಟುಪಾಡುಗಳು ಈಗ ಅನ್ವಯಿಸುವುದಿಲ್ಲ. ಹಾಗಾಗಿ, ನಿಮಗೆ ಯಾವುದೋ ಒಂದೇ ಕಾರಣಕ್ಕೂ ಬೇಡ ಎಂದು ಹೇಳಬೇಕಿದ್ದಿದ್ದರೆ ಸ್ಪಷ್ಟವಾಗಿ ಬೇಡ ಎಂದೇ ಹೇಳಬೇಕು. ಅದರಲ್ಲೂ ಮದ್ಯಸೇವನೆಯ ವಿಷಯದಲ್ಲಿ ಒಂದು ಪ್ರಮಾಣ ಸೇವಿಸಿದ ಬಳಿಕ ಸ್ನೇಹಿತರು ಕೇಳಿಕೊಳ್ಳುವ ಎರಡನೆಯ ಪ್ರಮಾಣಕ್ಕೆ ಮನಸ್ಸು ಬೇಡವೆಂದರೂ ಸ್ನೇಹಿತರ ಮುಖಕ್ಕೆ ಹೊಡೆದಂತೆ ಬೇಡ ಎನ್ನಲಾಗುವುದಿಲ್ಲ. ವಾಸ್ತವದಲ್ಲಿ ಈ ಪರಿಯಿಂದ ದೊಡ್ಡಅಣೆಕಟ್ಟಿನಲ್ಲಿ ಬಿರುಕು ಮೂಡಿದಂತಾಗುತ್ತದೆ. ಚಿಕ್ಕ ಬಿರುಕೇ ದೊಡ್ಡಅಣೆಕಟ್ಟನ್ನು ಧ್ವಂಸಗೊಳಿಸಲು ಸಾಕು. ಹಾಗಾಗಿ, ವಿಶೇಷವಾಗಿ ಒಂಟಿ ಪ್ರವಾಸಕ್ಕೆ ಹೋದಾಗ ನಿಮ್ಮ ಸಹನೆಯ ಅಣೆಕಟ್ಟಿನಲ್ಲಿ ಬಿರುಕು ಮೂಡದಂತೆ ಕ್ರಮ ಕೈಗೊಳ್ಳುವುದು ನಿಮ್ಮದೇ ಜವಾಬ್ದಾರಿಯಾಗಿದೆ. ಹಾಗಾಗಿ, ಪ್ರವಾಸದ ಯಾವುದೇ ಹಂತದಲ್ಲಿ ಬೇಡ ಎಂದು ಹೇಳಬೇಕಿರುವ ಸ್ಥಳಗಳಲ್ಲಿ ಬೇಡ ಎಂದೇ ಹೇಳಿ, ಅಗತ್ಯಬಿದ್ದರೆ ಒತ್ತಿಯೇ ತಿಳಿಸಿ. ಇದರಿಂದ ಎದುರಿನವರ ಮೇಲೆ ಯಾವ ಪ್ರಭಾವ ಬೀರುತ್ತದೆ ಎಂಬೆಲ್ಲಾ ತರ್ಕ ನಿಮಗೆ ಎದುರಾಗಬಾರದು! ಉದಾಹರಣೆಗೆ ಒಂಟಿಯಾಗಿರುವ ನಿಮ್ಮನ್ನು ಕಾರಿನಲ್ಲಿ ಮುಂದೆ ಬಿಡುತ್ತೇವೆ, ಇನ್ನೂ ತುಂಬಾ ದೂರ ಇದೆ ಎಂದೆಲ್ಲಾ ಹೇಳಿ ಆಹ್ವಾನಿಸುವವರಿಗೆ 'ಬೇಡ, ನಾನು ನಡೆದೇ ಹೋಗುತ್ತೇನೆ, ನನ್ನನ್ನು ಕರೆದೊಯ್ಯಲು ಬರುವವರಿದ್ದಾರೆ" ಎಂದೇ ಸ್ಪಷ್ಟವಾಗಿ ತಿಳಿಸಿ ಮುಂದುವರೆಯಿರಿ.

3. ನಕಲಿ ಪರ್ಸು ಮತ್ತು ಸೀಟಿ ಧರಿಸಿಕೊಳ್ಳಿ

3. ನಕಲಿ ಪರ್ಸು ಮತ್ತು ಸೀಟಿ ಧರಿಸಿಕೊಳ್ಳಿ

ನೀವು ಸದಾ ತಮ್ಮೊಂದಿಗಿ ಇರಿಸಿಕೊಳ್ಳುವ ಪರ್ಸು ನೋಡಲು ದುಬಾರಿಯಂತೆ ಕಾಣುವಂತಹ ಅಗ್ಗದ್ದಾಗಿದ್ದು ಇದರಲ್ಲಿ ನಕಲಿ ನೋಟುಗಳು ಹಾಗೂ ಬಳಕೆಯಲ್ಲಿಲ್ಲದ ಕ್ರೆಡಿಟ್ ಕಾರ್ಡುಗಳಿರುವಂತೆ ಏರ್ಪಾಡು ಮಾಡಿಕೊಳ್ಳಿ. ನಾಲ್ಕು ಜನರ ನಡುವೆ ಇದ್ದಾಗ ಇದನ್ನೇ ನಿಮ್ಮ ನಿತ್ಯದ ಪರ್ಸು ಎಂದೆನಿಸುವಂತೆ ಹೊರತೆಗೆದು ಒಳಗಿರಿಸಿ. ನಿಮ್ಮ ಪರ್ಸನ್ನು ಎಗರಿಸಬಯಸುವವರಿಗೆ ಚಳ್ಳೆಹಣ್ಣು ತಿನ್ನಿಸಲು ಇಷ್ಟು ಸಾಕು. ಉಳಿದಂತೆ ಸೀಟಿಯೊಂದನ್ನು ಸ್ಪಷ್ಟವಾಗಿ ಕಾಣಿಸುವಂತೆ ಧರಿಸಿಕೊಳ್ಳಿ ಅಥವಾ ನಿಮ್ಮ ಬ್ಯಾಗ್ ಗೆ ಸಿಕ್ಕಿಸಿಕೊಳ್ಳಿ. ಒಟ್ಟಾರೆ, ಈ ಸೀಟಿ ನಿಮಗೆ ಸುಲಭವಾಗಿ ಸಿಗುವಂತಾಗಬೇಕು. ಯಾವುದೇ ಕ್ಷಣದಲ್ಲಿ ನಿಮಗೆ ಅಪಾಯ ಎದುರಾಗಿದೆ ಎಂದಾಕ್ಷಣ ಎರಡನೆಯ ಯೋಚನೆ ಮಾಡದೇ ಸೀಟಿಯೂದಿ ಅಕ್ಕಪಕ್ಕದವರ ಗಮನ ಸೆಳೆಯಿರಿ. ಭಾರತ ಸಹಿತ ಜಗತ್ತಿನ ಯಾವುದೇ ಭಾಗದಲ್ಲಿ ತೊಂದರೆಗೊಳಗಾದ ಮಹಿಳೆಯ ರಕ್ಷಣೆಗೆ ಓಡಿ ಬರುವ ವ್ಯಕ್ತಿಗಳು ಇದ್ದೇ ಇರುತ್ತಾರೆ. ವಿಶೇಷವಾಗಿ ರಸ್ತೆಯಲ್ಲಿ ನಡೆದಾಡುವಾಗ ಪ್ರಾಣಿಗಳು ಅಥವಾ ದುರುಳರ ಧಾಳಿಗೆ ಒಳಗಾದಾಗ ಈ ಪುಟ್ಟ ಸೀಟಿ ನಿಮ್ಮ ಪ್ರಾಣವನ್ನು ಕಾಪಾಡಬಲ್ಲುದು.

4. ಸ್ಥಳೀಯ ಲೇಖಕರ ಮತ್ತು ಅನಿವಾಸಿಗಳು ಬರೆದಿರುವ ಲೇಖನಗಳನ್ನು ಓದಿಕೊಂಡಿರಿ

4. ಸ್ಥಳೀಯ ಲೇಖಕರ ಮತ್ತು ಅನಿವಾಸಿಗಳು ಬರೆದಿರುವ ಲೇಖನಗಳನ್ನು ಓದಿಕೊಂಡಿರಿ

ನೀವು ಯಾವ ಸ್ಥಳಕ್ಕೆ ಭೇಟಿ ನೀಡಲಿದ್ದೀರೋ ಆ ಸ್ಥಳದ ಬಗ್ಗೆ ಸ್ಥಳೀಯ ಲೇಖಕರು ಅಥವಾ ಆ ಸ್ಥಳಕ್ಕೆ ಬಂದು ನೆಲೆಸಿರುವ ಇತರ ವ್ಯಕ್ತಿಗಳು ಬರೆದಿರುವ ಮಾಹಿತಿಯನ್ನು ಓದಿಕೊಳ್ಳಿ. ಅದರಲ್ಲೂ ಈ ಪ್ರದೇಶವನ್ನು ಮೊದಲ ಬಾರಿ ಸಂದರ್ಶಿಸುವುದಿದ್ದರೆ ಪೂರ್ವ ಮಾಹಿತಿ ಅತಿ ಅಗತ್ಯ. ಇಂದು ಸಾಮಾಜಿಕ ಜಾಲತಾಣಗಳು ಹಾಗೂ quora ದಂತಹ ಜನಮಾಹಿತಿ ತಾಣಗಳಲ್ಲಿ ಈ ಬಗ್ಗೆ ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಬಗೆಯ ಮಾಹಿತಿಗಳು ಸಿಗುತ್ತವೆ. ಪ್ರವಾಸ ತಾಣಗಳು ಮಾಹಿತಿ ನಿಮಗೆ ಸೂಕ್ತವಲ್ಲ. ಏಕೆಂದರೆ ಇವು ಅಪ್ಪಟ ವಾಣಿಜ್ಯ ಉದ್ದೇಶದ ಮಾಹಿತಿಗಳಾಗಿದ್ದು ಕೇವಲ ನಿಮ್ಮನ್ನು ಈ ಸ್ಥಳಕ್ಕೆ ಆಹ್ವಾನಿಸಲು ಕೇವಲ ಸಕ್ಕರೆಯಂತಹ ಮಾಹಿತಿಗಳನ್ನು ಮಾತ್ರವೇ ನೀಡುತ್ತವೆ ಅಲ್ಲದೇ ಈ ಮಾಹಿತಿಗಳು ನೀವು ಈ ಸ್ಥಳವನ್ನು ನೋಡದೇ ಇದ್ದರೆ ನಿಮ್ಮ ಜೀವನವೇ ವ್ಯರ್ಥ ಎಂಬ ಧಾಟಿಯಲ್ಲಿರುತ್ತದೆ. ಹಾಗಾಗಿ ಜನಮಾಹಿತಿ ತಾಣಗಳಲ್ಲಿ ಈ ಸ್ಥಳವನ್ನು ಮೊದಲೇ ಸಂದರ್ಶಿಸಿರುವ ವ್ಯಕ್ತಿಗಳು ನೀಡುವ ಋಣಾತ್ಮಕ ಮಾಹಿತಿಯನ್ನು ಮೊದಲಾಗಿ ಕಲೆಹಾಕಿ. ವಾಸ್ತವದಲ್ಲಿ, ನೀವು ಪ್ರವಾಸ ಹೊರಡಬೇಕಾದ ಸ್ಥಳವನ್ನು ಆಯ್ದುಕೊಳ್ಳಲು ಈ ಮಾಹಿತಿಯನ್ನೇ ಮೊದಲಾಗಿ ಆಧರಿಸಿಕೊಳ್ಳಬೇಕು. ಈ ಮೂಲಕ ಅನಾವಶ್ಯಕ ಅಪಾಯಕ್ಕೊಳಗಾಗುವುದನ್ನು ತಪ್ಪಿಸಬಹುದು.

5. ಸ್ಥಳೀಯ ಉಡುಗೆಗಳನ್ನೇ ತೊಟ್ಟುಕೊಳ್ಳಿ

5. ಸ್ಥಳೀಯ ಉಡುಗೆಗಳನ್ನೇ ತೊಟ್ಟುಕೊಳ್ಳಿ

ನೀವು ಯಾವ ಸ್ಥಳಕ್ಕೆ ಭೇಟಿ ನೀಡಲಿದ್ದೀರೋ ಆ ಸ್ಥಳದಲ್ಲಿ ಸಾಮಾನ್ಯವಾಗಿ ತೊಡಲಾಗುವ ಉಡುಗೆಗಳನ್ನೇ ತೊಟ್ಟುಕೊಳ್ಳಿ. ವಾಸ್ತವದಲ್ಲಿ, ಭಿನ್ನ ಉಡುಗೆ ಧರಿಸಿರುವ, ಭಿನ್ನರಂತೆ ಕಾಣುವ ವ್ಯಕ್ತಿಗಳೇ ದೌರ್ಜನ್ಯಕ್ಕೆ ತುತ್ತಾಗುವ ಸಾಧ್ಯತೆ ವಿಶ್ವದ ಹಲವು ಕಡೆಗಳಲ್ಲಿ ಹೆಚ್ಚು. ನಮ್ಮ ಭಾರತವೂ ಇದಕ್ಕೆ ಹೊರತಲ್ಲ. ಒಂಟಿಯಾಗಿ ಪ್ರವಾಸ ಹೊರಟ ನಿಮಗೆ ಆ ಸ್ಥಳದಲ್ಲಿ ಹೆಚ್ಚಿನ ಗೌರವ ಮತ್ತು ಹೆಚ್ಚಿನ ನೆರವು ಸಿಗಬೇಕಾದರೆ ನೀವು ಅವರಲ್ಲಿ ಒಬ್ಬರಾಗಿದ್ದಷ್ಟೂ ಒಳ್ಳೆಯದು. ಇದಕ್ಕೆ ಅತಿ ಸೂಕ್ತವಾದ ಕ್ರಮವೆಂದರೆ ಸ್ಥಳೀಯ ಉಡುಗೆಗಳನ್ನು ತೊಡುವುದು. ಇದರಿಂದ ಎದುರಾಗಬಹುದಾದ ಅಪಾಯಗಳಲ್ಲಿ ಅರ್ಧದಷ್ಟು ಅಪಾಯಗಳು ತನ್ನಿಂತಾನೇ ಇಲ್ಲವಾಗುತ್ತವೆ. ಆದರೆ ಇಂದಿನ ದಿನಗಳಲ್ಲಿ ವಿಶೇಷವಾಗಿ ಯುವಜನತೆ ತಾವೆಲ್ಲಿದ್ದರೂ ತಮಗಿಷ್ಟ ಬಂದಂತಹ ಉಡುಗೆಯನ್ನೇ ತೊಡುವ ಉತ್ಸುಕತೆ ತೋರುತ್ತಾರೆ. ಆದರೆ ಈ ಮೂಲಕ ಅನಗತ್ಯ ತೊಡಕುಗಳನ್ನು ತಾವಾಗಿಯೇ ಆಹ್ವಾನಿಸುತ್ತಿರುವುದು ಇವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಒಂಟಿ ಪ್ರಯಾಣಕ್ಕೆ ಹೊರಟ ನಿಮಗೆ ಆ ಸ್ಥಳದಲ್ಲಿ ಸ್ಥಳೀಯ ಉಡುಗೆಗಳೇ ಹೆಚ್ಚು ಸೂಕ್ತ.

6. ರಾತ್ರಿಯ ಸಮಯದಲ್ಲಿ ಎಂದೂ ಒಂಟಿಯಾಗಿ ಹೊರಡದಿರಿ

6. ರಾತ್ರಿಯ ಸಮಯದಲ್ಲಿ ಎಂದೂ ಒಂಟಿಯಾಗಿ ಹೊರಡದಿರಿ

ಭಾರತ ವಿಶಾಲವಾದ ದೇಶ. ಭಾರತದ ಕೆಲವು ಪ್ರದೇಶಗಳಲ್ಲಿ ಮಾತ್ರ ಮಹಿಳೆಯರು ಒಂಟಿಯಾಗಿ ರಾತ್ರಿಹೊತ್ತಿನಲ್ಲಿ ಅಡ್ಡಾಡಬಹುದಾದ ಸುರಕ್ಷತೆಯನ್ನು ಹೊಂದಿದೆ. ಆದರೆ ಇವು ಬೆರಳೆಣಿಕೆಯಷ್ಟಿವೆ. ಉಳಿದ ಭಾಗಗಳಲ್ಲಿ ಒಂಟಿಯಾಗಿ ಹೋಗದೇ ಇರುವುದು ಅಥವಾ ಜನಜಂಗುಳಿಯ ನಡುವೆಯೇ ಇರುವುದು ಜಾಣತನದ ಕ್ರಮವಾಗಿದೆ. ಇದು ಸಾಧ್ಯವಾಗದೇ ಹೋದರೆ ನೀವು ತಲುಪಲಿರುವ ಸ್ಥಳದವರೆಗೂ ಜೊತೆಯಲ್ಲಿರಲು ಆಪ್ತರ ನೆರವು ಪಡೆಯುವುದು ಒಳ್ಳೆಯದು. ಇನ್ನೂ ಒಳ್ಳೆಯ ಕ್ರಮ ಎಂದರೆ ನೀವು ತಲುಪಲಿರುವ ಸ್ಥಳದವರೆಗೂ ಪ್ರಯಾಣದ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಿಕೊಂಡಿರುವುದು. ಏಕೆಂದರೆ ಒಂಟಿಯಾಗಿರುವ ನಿಮಗೆ ಯಾವುದೇ ಅಪಾಯಕ್ಕೆ ಒಳಗಾಗುವ ಮುನ್ನೆಚ್ಚರಿಕೆಯೇ ಅತಿ ಹೆಚ್ಚು ಸೂಕ್ತವಾಗುತ್ತದೆ. ಹಾಗಾಗಿ ಜನಜಂಗುಳಿ ಇಲ್ಲದ ಸ್ಥಳಗಳಲ್ಲಿ ಒಂಟಿಯಾಗಿ ಹೋಗದಿರಿ. ಅಲ್ಲದೇ ಮತ್ತಿನ ಅನುಭವ ಇರುವ ಸಂದರ್ಭದಲ್ಲಿ ಹೊರಗೇ ಹೋಗದಿರಿ.

7. ನಿಮ್ಮ ಎಲ್ಲಾ ಅಗತ್ಯ ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲದಲ್ಲಿ ಸಂಗ್ರಹಿಸಿಡಿ.

7. ನಿಮ್ಮ ಎಲ್ಲಾ ಅಗತ್ಯ ದಾಖಲೆ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಂತರ್ಜಾಲದಲ್ಲಿ ಸಂಗ್ರಹಿಸಿಡಿ.

ಪ್ರವಾಸದಲ್ಲಿದ್ದಾಗ ಯಾವುದೇ ತೊಂದರೆ ಎದುರಾಗಬಾರದು ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಾರೆ. ಆದರೆ ಲಕ್ಷಕ್ಕೊಂದಾದರೂ ಸರಿ, ಕೆಲವರಿಗೆ ಕಹಿ ಅನುಭವ ಎದುರಾಗಬಹುದು. ಯಾವುದೋ ಕ್ಷಣದಲ್ಲಿ ನಿಮ್ಮ ಅಗತ್ಯ ದಾಖಲೆಪತ್ರಗಳು ಕಾಣೆಯಾಗಬಹುದು ಅಥವಾ ಕಳುವಾಗಬಹುದು ಅಥವಾ ನಿಮ್ಮ ನಿಯಂತ್ರಣದಲ್ಲಿ ಇಲ್ಲದ ಸಂದರ್ಭವೊಂದರಲ್ಲಿ ನಿಮ್ಮಿಂದ ದೂರವಾಗಬಹುದು. ಆಗ ನಿಮ್ಮ ದಾಖಲೆಗಳ ಪ್ರತಿ ಅಂತರ್ಜಾಲದಿಂದ ಪಡೆದುಕೊಂಡು ಇನ್ನಷ್ಟು ತೊಂದರೆಗೊಳಗಾಗಬಹುದನ್ನು ತಪ್ಪಿಸಬಹುದು. ವಿಶೇಷವಾಗಿ, ನಿಮ್ಮ ಗುರುತು ಪತ್ರ, ಪಾಸ್ ಪೋರ್ಟ್, ವಿಮಾ ಕಾಗದಗಳು ಮೊದಲಾದ ಎಲ್ಲವನ್ನೂ ಪ್ರವಾಸಕ್ಕೂ ಮೊದಲೇ ಸ್ಕ್ಯಾನ್ ಮಾಡಿ ಅಂತರ್ಜಾಲದಲ್ಲಿ ಸಂಗ್ರಹಿಸಿಡಿ. ಪ್ರವಾಸದ ಸಮಯದಲ್ಲಿ ಈ ದಾಖಲೆಗಳನ್ನು ಸದಾ ನಿಮ್ಮೊಂದಿಗೇ ಇರುವಂತೆ ಮತ್ತು ಜಾಗ್ರತೆಯಿಂದ ಕಾಪಾಡಿಕೊಳ್ಳುವಂತೆ ಇರಿಸಿಕೊಳ್ಳಿ.

8. ಸ್ಥಳೀಯ ತುರ್ತು ಸಂಖ್ಯೆಗಳನ್ನು ಗುರುತು ಮಾಡಿಟ್ಟುಕೊಳ್ಳಿ

8. ಸ್ಥಳೀಯ ತುರ್ತು ಸಂಖ್ಯೆಗಳನ್ನು ಗುರುತು ಮಾಡಿಟ್ಟುಕೊಳ್ಳಿ

ನೀವು ಹೊರಡುವ ಮುನ್ನ ಆ ಸ್ಥಳದ ತುರ್ತು ನೆರವು ಸಂಖ್ಯೆಗಳನ್ನು ಪಡೆದುಕೊಳ್ಳಿ. ನೆನಪಿರಲಿ, ಪ್ರತಿ ದೇಶ / ಪ್ರದೇಶಕ್ಕೂ ತನ್ನದೇ ಆದ ತುರ್ತು ನಿಗಾ ಸಂಖ್ಯೆಗಳಿರುತ್ತವೆ. ಮೊಬೈಲಿನಲ್ಲಿ 112 ಎಂಬುದು ಅಂತಾರಾಷ್ಟ್ರೀಯ ತುರ್ತು ಸಂಖ್ಯೆಯಾಗಿದೆ (ಈ ಸಂಖ್ಯೆಯನ್ನು ಮೊಬೈಲ್ ಲಾಕ್ ಇದ್ದರೂ ಡಯಲ್ ಮಾಡಬಹುದು, ಪ್ರಯತ್ನಿಸಿ). ಆದರೆ ಎಲ್ಲಾ ದೇಶಗಳಲ್ಲಿ ಈ ಸಂಖ್ಯೆ ಕ್ರಿಯಾಶೀಲವಾಗಿಲ್ಲ. ಹಾಗಾಗಿ ಆಯಾ ಸ್ಥಳದ ಮುಖ್ಯ ತುರ್ತು ಸಂಖ್ಯೆಗಳನ್ನು ಮುಂಚಿತವಾಗಿ ಗುರುತು ಹಾಕಿಕೊಂಡಿರುವುದು ಒಳ್ಳೆಯದು. ಇನ್ನೂ ಉತ್ತಮವೆಂದರೆ ಆ ಸ್ಥಳದ ಹೆಸರಿನಿಂದಲೇ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳುವುದು. ಯಾವ ಹೊತ್ತಿನಲ್ಲಿ ಈ ಸಂಖ್ಯೆ ನಿಮ್ಮ ನೆರವಿಗೆ ಬರುತ್ತದೆಯೋ ಹೇಳಲು ಸಾಧ್ಯವಿಲ್ಲ. ಹಾಗಾಗಿ ನೀವು ನಿಮ್ಮ ಕಡೆಯಿಂದ ಸಿದ್ಧರಾಗಿರುವುದು ಯಾವುದಕ್ಕೂ ಒಳ್ಳೆಯದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more