Search
  • Follow NativePlanet
Share
» »ತೊಮ್ಮನಕುತು ಸುಮ್ಮನೆ ಹೊಕ್ಕು!

ತೊಮ್ಮನಕುತು ಸುಮ್ಮನೆ ಹೊಕ್ಕು!

ಇಡುಕ್ಕಿ ಜಿಲ್ಲೆಯ ತೊಡಪುಳಾ ಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿ ತೊಮ್ಮನಕುತು ಒಂದು ಸಂರಕ್ಷಿತ ಪ್ರದೇಶವಾಗಿದ್ದು ತನ್ನಲ್ಲಿರುವ ಅದ್ಭುತ ಜಲಪಾತಕ್ಕೆ ಹೆಸರುವಾಸಿಯಾಗಿದೆ

By Vijay

ಈ ಸ್ಥಳವಿರುವುದೆ ಹಾಗೆ. ನಗರದಿಂದ ಬಲು ದೂರದಲ್ಲಿದೆ. ಬಹು ಜನರು ಇಲ್ಲಿ ಅಷ್ಟೊಂದಾಗಿ ಓಡಾಡಲ್ಲ, ಅಂದರೆ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅಶ್ಟೊಂದಾಗಿ ಪ್ರವಾಸಿಗರು ಇಲ್ಲಿ ಬರಲ್ಲ. ಆದರೆ ಶಾಂತಯುತವಾದ ಕಾಡಿನ ಮಧ್ಯದಲ್ಲೊಂದು ಅವಿತು ಕುಳಿತಿರುವ ಪ್ರದೇಶ ಇದಾಗಿದೆ. ಇಲ್ಲಿ ನೀವೊಮ್ಮೆ ಭೇಟಿ ನೀಡಿದರೆ ಅಲ್ಲಿಂದ ಮತ್ತೆ ಮರಳಿ ಬರಲು ನಿಮಗೆ ಮನಸ್ಸೆ ಆಗುವುದಿಲ್ಲ ಎಂದರೂ ತಪ್ಪಲ್ಲ.

ಈ ಸುಂದರ ಹಾಗೂ ಆಕರ್ಷಕ ಸ್ಥಳವೆ ತೊಮ್ಮನಕುತು. ಏನೂ ಯೋಚಿಸದಿರು ಗುರು, ಸುಮ್ಮನೆ ಒಮ್ಮೆ ಒಳಹೊಕ್ಕು ಎಂದು ಹೇಳಿಯೇ ಬಿಡುವಂತೆ ಮಾಡುತ್ತದೆ ಇಲ್ಲಿನ ನಯನಮನೋಹರ ಪರಿಸರ. ಇದೊಂದು ಸಂರಕ್ಷಿತ ಪ್ರದೇಶವೆಂದು ಗಮನದಲ್ಲಿರಲಿ. ಈ ಸ್ಥಳಕ್ಕೆ ಹೆಸರು ಬಂದಿದ್ದೂ ಒಂದು ಅದ್ಭುತ ಕಥೆಯಾಗಿದೆ.

ತೊಮ್ಮನಕುತು ಸುಮ್ಮನೆ ಹೊಕ್ಕು!

ಚಿತ್ರಕೃಪೆ: Amjithps

ಹಿಂದೆ 1920 ರ ಸಂದರ್ಭದಲ್ಲಿ ತೊಮ್ಮಚೆನ್ ಕುರುವಿನಕುನ್ನೇಲ್ ಎಂಬ ಬೇಟೆಗಾರನೊಬ್ಬನಿದ್ದ. ಅವನು ಎಂದಿನಂತೆ ಕಾಡಿನಲ್ಲಿ ಬೇಟೆಯಾಡುವ ಒಂದು ಸಂದರ್ಭದಲ್ಲಿ ಅಕಸ್ಮಾತಾಗಿ ಹರಿಯುವ ನೀರೊಂದರಲ್ಲಿ ಬಿದ್ದು ದಂಡೆಗೆ ಬರಲಾಗದೆ ಅದರ ಮೂಲಕವೆ ಸಾಗುತ್ತ ಒಂದು ಜಲಪಾತದ ತಾಣಕ್ಕೆ ಬಂದು ಬಿದ್ದ.

ಹೀಗೆ ಅವನಿಂದ ಮೊದಲ ಬಾರಿಗೆ ಆ ಕಾಡು ಪ್ರದೇಶದಲ್ಲಿ ಜಲಪಾತವೊಂದನ್ನು ಶೋಧಿಸಲಾಯಿತು. ಆ ಜಲಪಾತ ಶೋಧನೆಯ ಗೌರವಾರ್ಥವಾಗಿ ಆ ಜಲಪಾತಕ್ಕೆ ತೊಮ್ಮಚೆನ್ ಎಂದು ಹೆಸರಿಡಲಾಯಿತು. ಕಾಲ ಕ್ರಮೇಣ ಆ ಹೆಸರೆ ಇಂದು ತೊಮನಕುತು ಎಂದಾಗಿದೆ.

ತೊಮ್ಮನಕುತು ಸುಮ್ಮನೆ ಹೊಕ್ಕು!

ಚಿತ್ರಕೃಪೆ: Joshy

ಅಂದರೆ ನಿಮಗೆ ಗೊತ್ತಾಗಿರಬೇಕಲ್ಲವೆ? ಈ ತೊಮ್ಮನಕುತು ಸಂರಕ್ಷಿತ ಪ್ರದೇಶವು ಪ್ರಮುಖವಾಗಿ ತನ್ನಲ್ಲಿರುವ ಬಲು ನಯನಮನೋಹರವಾದ ಜಲಪಾತಕ್ಕೆ ಹೆಸರುವಾಸಿಯಾಗಿದೆ. ಈ ಜಲಪಾತವು ಎತ್ತರದಿಂದ ಧುಮುಕುವಂತಹ ಜಲಪಾತವೇನಲ್ಲ. ಬದಲಾಗಿ ಅತ್ಯಂತ ಕಡಿಮೆ ಎತ್ತರದಿಂದ ಹಲವು ಸ್ತರಗಳಲ್ಲಿ ಇಂಪಾಗಿ ನಾದ ಹೊರಡಿಸುತ್ತ ಭುವಿಗೆ ಧುಮುಕುವ ಜಲಧಾರೆಯಾಗಿದೆ.

ಇನ್ನೊಂದು ವಿಶೇಷವೆಂದರೆ ಈ ಕಾಡಿನಲ್ಲಿ ಟ್ರೆಕ್ ಮಾಡಲು ಅವಕಾಶವಿದೆ. ಹಾಗೆ ಸುಮ್ಮನೆ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳು ಹಾಗೂ ಅರಣ್ಯ ಸಮ್ಪತ್ತನ್ನು ವೀಕ್ಷಿಸುತ್ತ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ಚಾರಣ ಮಾಡಬಹುದಾಗಿದೆ. ಮಧ್ಯ ಮಧ್ಯದಲ್ಲಿ ಬಂಡೆಗಲ್ಲುಗಳಿದ್ದು ಅವುಗಳನ್ನು ಏರುತ್ತ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ವಾನರನಂತೆ ನೆಗೆಯುತ್ತ ನಡೆಯುವುದೆ ಒಂದು ಚೆಂದದ ಅನುಭವ.

ತೊಮ್ಮನಕುತು ಸುಮ್ಮನೆ ಹೊಕ್ಕು!

ಚಿತ್ರಕೃಪೆ: Amjithps

ತೊಮ್ಮನಕುತು ಸಂರಕ್ಷಿತ ಪ್ರದೇಶವಾಗಿರುವುದರಿಂದ ಇಲ್ಲಿ ಪ್ರವೇಶಕ್ಕೆ ನಿರ್ಬಂಧನೆಯಿದ್ದು ಕೇವಲ ಬೆಳಿಗ್ಗೆ 8 ರಿಂದ ಸಂಜೆ 6 ಘಂಟೆಯವರೆಗಿನ ಮಧ್ಯದ ಸಮಯದಲ್ಲಿ ಮಾತ್ರವೆ ಪ್ರವೇಶಿಸಬಹುದಾಗಿದೆ. ಅಲ್ಲದೆ ಈ ಪ್ರದೇಶಕ್ಕೆ ಪ್ರವೇಶಿಸಲು ನಿಗದಿತ ಶುಲ್ಕವಿದ್ದು ಅದನ್ನು ಪಾವತಿಸುವುದರ ಮೂಲಕ ಈ ಪ್ರದೇಶದಲ್ಲಿ ನಿಮ್ಮ ಅನ್ವೇಷಣೆ ಪ್ರಾರಂಭಿಸಬಹುದು.

ಇಡುಕ್ಕಿ ಭೇಟಿ ನೀಡಿದರೆ ಏನೇನು ನೋಡಬಹುದು?

ತೊಮ್ಮನಕುತು ಇಡುಕ್ಕಿ ಜಿಲ್ಲೆಯಲ್ಲಿದೆ. ಇಡುಕ್ಕಿ ಜಿಲ್ಲೆಯ ತೊಡಪುಳಾ ಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿ ತೊಮ್ಮನಕುತು ಸ್ಥಳವಿದೆ. ತೊಡಪುಳಾದಿಂದ ರಸ್ತೆಯ ಮೂಲಕ ಕರಿಮಣ್ಣೂರಿಗೆ ತೆರಳಿ ಅಲ್ಲಿಂದ ಸರಿಯಾದ ತಿರುವು ಪಡೆದು ಮುಂದೆ ಹತ್ತು ಕಿ.ಮೀ ಸಾಗುತ್ತ ತೊಮ್ಮನಕುತು ಪ್ರವೇಶಿಸಬಹುದು. ತೊಡಪುಳಾಗೆ ಕೊಚ್ಚಿ ನಗರದಿಂದ ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X