Search
  • Follow NativePlanet
Share
» »ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!

ಮಾಡಲೇಬೇಕೊಮ್ಮೆ ಕೊಲ್ಹಾಪುರ ಪ್ರವಾಸ!

ಮಹಾರಾಷ್ಟ್ರದ ಕೊಲ್ಹಾಪುರ ಶಕ್ತಿಪೀಠ ಕ್ಷೇತ್ರವು ಒಂದು ಮಹಾಲಕ್ಷ್ಮಿಯು ನೆಲೆಸಿರುವ ಶಕ್ತಿಶಾಲಿ ದೇವಾಲಯದಿಂದಾಗಿ ಸಾಕಷ್ಟು ಪ್ರಸಿದ್ಧಿಗಳಿಸಿದೆ

By Vijay

ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲೊಂದಾಗಿದೆ ಕೊಲ್ಹಾಪುರ ನಗರ. ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಕೊಲ್ಹಾಪುರ ನಗರವು ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹಾಗೂ ಧಾರ್ಮಿಕತೆಯ ಪ್ರಭಾವವನ್ನೂ ಅನಾವರಣಗೊಳಿಸುವ ಅದ್ಭುತ ನಗರವಾಗಿದೆ.

ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಸಾಕಷ್ಟು ಗಮನಸೆಳೆವ ಸುಂದರ ನಗರವಾಗಿದೆ ಕೊಲ್ಹಾಪುರ. ಸಹ್ಯಾದ್ರಿ ಪರ್ವತ ಶ್ರೇಣಿಗಳ ವ್ಯಾಪ್ತಿಯಲ್ಲಿ ಬರುವ ಈ ನಗರವು ಮರಾಠಿ ಸಂಸ್ಕೃತಿಯ ಹೆಮ್ಮೆಯಾಗಿರುವುದು ಮಾತ್ರವಲ್ಲದೆ ಐತಿಹಾಸಿಕ ಕೋಟೆಗಳು ಹಾಗೂ ಧಾರ್ಮಿಕವಾಗಿ ಪ್ರಭಾವಶಾಲಿಯಾಗಿರುವ ಪ್ರಾಚೀನ ದೇವಾಲಯಗಳಿಗಾಗಿಯೂ ಸಾಕಷ್ಟು ಪ್ರಸಿದ್ಧಿಗಳಿಸಿದೆ.

ಕೊಲ್ಹಾಪುರದ ಬಲು ಪ್ರಮುಖ ಗಮನಾರ್ಹ ಅಂಶವಾಗಿದೆ, ಇಲ್ಲಿರುವ ಅಂಬಾಬಾಯಿ ಸನ್ನಿಧಾನ. ಹೌದು ಪ್ರಖ್ಯಾತ ಮಹಾಲಕ್ಷ್ಮಿ ದೇವಾಲಯವು ಕೊಲ್ಹಾಪುರದ ಮುಖ್ಯ ಪ್ರವಾಸೋದ್ಯಮದ ಹಾಗೂ ಭಕ್ತಿಯ ಪರಮ ಅಂಗವಾಗಿದೆ. ನಂಬಿಕೆಯೆಂತೆ ತಿರುಪತಿಯ ಬಾಲಾಜಿ ದರ್ಶನ ಪಡೆದ ನಂತರ ಕೊಲ್ಹಾಪುರದ ಮಹಾಲಕ್ಷ್ಮಿ ದರ್ಶನ ಪಡೆದ ನಂತರವಷ್ಟೆ ಶತ ಪ್ರತಿಶತದಷ್ಟು ತೀರ್ಥಯಾತ್ರೆ ಪೂರ್ಣಗೊಂಡು ಫಲ ಸಿಗುತ್ತದಂತೆ!

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಕೊಲ್ಹಾಪುರ ಹಾಗೂ ಅದರ ಆಸುಪಾಸಿನಲ್ಲಿರುವ ಅದ್ಭುತ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿಯನ್ನು ಪಡೆಯೋಣ. ಕರ್ನಾಟಕದ ವಾಯವ್ಯ ದಿಕ್ಕಿಗಿರುವ ಬೆಳಗಾವಿ ನಗರದಿಂದ ಕೊಲ್ಹಾಪುರವು ಕೇವಲ 110 ಕಿ.ಮೀ ಗಳಷ್ಟು ದೂರದಲ್ಲಿದೆ.

ಮಹಾಲಕ್ಷ್ಮಿ

ಮಹಾಲಕ್ಷ್ಮಿ

ಕೊಲ್ಹಾಪುರಕ್ಕೆ ಬಂದ ತಕ್ಷಣ ಎಲ್ಲರೂ ಮೊದಲು ಭೇಟಿ ನೀಡಲು ಬಯಸುವುದು ಶ್ರೀ ಅಮ್ಮನವರು ದರುಶನ ಕೊಡುವ ಸ್ಥಳ. ಹೌದು ಅದೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ನಗರದ ರೈಲು ಹಾಗೂ ಕೇಂದ್ರ ಬಸ್ಸು ನಿಲ್ದಾಣದಿಂದ ಕ್ರಮವಾಗಿ 4 ಮತ್ತು 3 ಕಿ.ಮೀ ಗಳಷ್ಟು ದೂರದಲ್ಲಿದೆ ಈ ದೇವಸ್ಥಾನ. ಟ್ಯಾಕ್ಸಿ ಹಾಗೂ ರಿಕ್ಷಾಗಳು ಇಲ್ಲಿಂದ ದೇವಸ್ಥಾನಕ್ಕೆ ತೆರಳಲು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: tanny

ಕೋಲಾಸುರ

ಕೋಲಾಸುರ

ಪೌರಾಣಿಕ ಹಿನ್ನಿಲೆಯ ಪ್ರಕಾರ, ಹಿಂದೆ ಕೊಲಾಸುರನೆಂಬ ಅಸುರನು ದೇವತೆಗಳಿಗೆ ಬಲು ಕಷ್ಟ ನೀಡುತ್ತಿದ್ದನು. ಅವನ ಕ್ರೌರ್ಯತೆಯಿಂದ ಪಾರು ಮಾಡುವಂತೆ ದೇವತೆಗಳು ಮೊರೆಯಿಟ್ಟಾಗ ದೇವಿಯು ಭೂಮಿಗೆ ಬಂದು ಆತನನ್ನು ವಧಿಸಿದಳು ಹಾಗೂ ವಧಿಸಿದ ಸ್ಥಳವೆ ತೀರ್ಥವಾಗಿ ರೂಪಗೊಂಡಿತು. ನಂತರ ದೇವಿಯು ಸ್ಥಿರವಾಗಿ ಇಲ್ಲಿಯೆ ನೆಲೆಸಿದಳು ಹಾಗೂ ಈ ಸ್ಥಳಕ್ಕೆ ಕೊಲ್ಲಾಪುರ ಎಂಬ ಹೆಸರು ಬಂದಿತು.

ಚಿತ್ರಕೃಪೆ: kolhapurtourism

ಮಹಾದ್ವಾರ

ಮಹಾದ್ವಾರ

ದೇವಾಲಯದ ಮಹಾದ್ವಾರವು ಪಶ್ಚಿಮ ದಿಕ್ಕಿನಲ್ಲಿದೆ. ಮಹಾದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆಯೆ ದೀಪ ಸ್ಥಂಬಗಳನ್ನು ನಂತರದಲ್ಲಿ ಗರುಡ ಸ್ಥಂಬವನ್ನು ಕಾಣಬಹುದು. ದೇವಸ್ಥಾನವು ಪ್ರತಿದಿನ ಬೆಳಿಗ್ಗೆ 5 ಘಂಟೆಗೆ ತೆರೆದು ರಾತ್ರಿ 10.30 ಘಂಟೆಗೆ ಮುಚ್ಚಲ್ಪಡುತ್ತದೆ. ದಿನದಲ್ಲಿ ಐದು ಬಾರಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಹುಣ್ಣಿಮೆ ದಿನ ಹಾಗೂ ಪ್ರತಿ ಶುಕ್ರವಾರಗಳಂದು ದೇವಿಯ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲಾಗುತ್ತದೆ.

ಚಿತ್ರಕೃಪೆ: jalinder jag

ಲಕ್ಷ್ಮಿ ಕೋಪ

ಲಕ್ಷ್ಮಿ ಕೋಪ

ಇನ್ನೊಂದು ದಂತಕಥೆಯಂತೆ, ಭೃಗು ಮಹರ್ಷಿಯು ವಿಷ್ಣುವಿಗೆ ಅವಮಾನವಾಗುವ ರೀತಿಯಲ್ಲಿ ತನ್ನ ಕಾಲನು ಅವನ ಮೇಲಿರಿಸಿದಾಗ ಮಡದಿಗೆ ಎಲ್ಲಿಲ್ಲದ ಕೋಪ ಉಂಟಾಯಿತು. ಆದರೂ ಶ್ರೀಮನ್ನಾರಾಯಣನು ಋಷಿಗೆ ಏನೂ ಮಾಡಲಿಲ್ಲ. ಇದರಿಂದ ಬೇಸರಗೊಂಡ ಲಕ್ಷ್ಮಿಯು ನೇರವಾಗಿ ಕೊಲ್ಹಾಪುರಕ್ಕೆ ಬಂದು ನೆಲೆಸಿದಳು ಎಂಬ ಪ್ರತೀತಿಯಿದೆ.

ಚಿತ್ರಕೃಪೆ: Ankur P

ಪದ್ಮಾವತಿಯೊಡನೆ

ಪದ್ಮಾವತಿಯೊಡನೆ

ತದನಂತರ ವಿಷ್ಣು ಲಕ್ಷ್ಮಿಯನ್ನು ಅರಸುತ್ತ ಮರೆವು ಉಂಟಾಗಿ ಪದ್ಮಾವತಿಯನ್ನು ಮದುವೆಯಾಗಿ ತದ ನಂತರ ಲಕ್ಷ್ಮಿಯ ಕುರಿತು ಎಲ್ಲವೂ ತಿಳಿದು ಕೊಲ್ಹಾಪುರಕ್ಕೆ ಬಂದು ಅವಳನ್ನು ಮತ್ತೆ ಸ್ವೀಕರಿಸುತ್ತಾನೆ. ಹಾಗಾಗಿ ಸ್ವತಃ ಬಾಲಾಜಿಗೆ ಇಷ್ಟವಾಗುವ ಸ್ಥಳ ಕೊಲ್ಹಾಪುರವಾಗಿದ್ದು ತಿರುಪತಿ ಬಾಲಾಜಿ ದರ್ಶನ ಪಡೆಯುವವರು ನಂತರದಲ್ಲಿ ಕೊಲ್ಹಾಪುರಕ್ಕೆ ತೆರಳಿ ಲಕ್ಷ್ಮಿಯ ದರ್ಶನ ಪಡೆದಾಗ ಮಾತ್ರ ಅವರಿಗೆ ದರ್ಶನದ ಸಂಪೂರ್ಣ ಲಾಭ ಹಾಗೂ ಫಲಗಳು ಸಿಗುತ್ತವೆಂದು ನಂಬಲಾಗುತ್ತದೆ.

ಚಿತ್ರಕೃಪೆ: Ankur P

ವಿಗ್ರಹ

ವಿಗ್ರಹ

ಇನ್ನೂ ಇಲ್ಲಿರುವ ಮಹಾಲಕ್ಷ್ಮಿಯ ವಿಗ್ರಹವಂತೂ ನೋಡಿದರೆ ಸಾಕು, ಮೈಯೆಲ್ಲೆಲ್ಲ ವಿದ್ಯುತ್ ಸಂಚಾರ ಪ್ರವಹಿಸಿದಂತಾಗುತ್ತದೆ. ಅತ್ಯಂತ ಪ್ರಾಚೀನತೆಯ ಅಮೂಲ್ಯವಾದ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ ಲಕ್ಷ್ಮಿಯನ್ನು. ಲಕ್ಷ್ಮಿಯ ವಿಗ್ರಹ ಜನರನ್ನು ಅಪಾರವಾಗಿ ಆಕರ್ಷಿಸುತ್ತದೆ. ಏನಿಲ್ಲವೆಂದರೂ ಸುಮಾರು ಆರು ಸಾವಿರ ವರ್ಷಗಳಷ್ಟು ಪುರಾತನವಾದ ವಿಗ್ರಹ ಇದಾಗಿದೆ. ಸತಿ ದೇವಿಯ ಕಣ್ಣುಗಳು ಬಿದ್ದ ಶಕ್ತಿಪೀಠವಾಗಿ ಕೊಲ್ಹಾಪುರ ಕ್ಷೇತ್ರವು ಗಮನಸೆಳೆಯುತ್ತದೆ. ಹದಿನೆಂಟು ಮಹಾ ಶಕ್ತಿಪೀಠಗಳಲ್ಲಿ ಇದೂ ಸಹ ಒಂದು.

ಚಿತ್ರಕೃಪೆ: kolhapurtourism

ವಿಶೇಷತೆಯಿದೆ

ವಿಶೇಷತೆಯಿದೆ

ಲಕ್ಷ್ಮಿಯು ನೆಲೆಸಿರುವ ಗರ್ಭಗೃಹವನ್ನು ಕಟ್ಟಿದ ಬಗೆ ನೋಡಿದಾಗ ಅಚ್ಚರಿಯುಂಟಾಗುತ್ತದೆ. ಏಕೆಂದರೆ ವರ್ಷದಲ್ಲಿ ಮೂರು ದಿನಗಳಂತೆ ಎರಡು ಬಾರಿ ಸೂರ್ಯ ದೇವರೂ ಸಹ ತಾಯಿಯನ್ನು ನಮಿಸುತ್ತಾನೆ. ಅದನ್ನು ಕಿರಣ ಉತ್ಸವ ಎಂದು ಆಚರಿಸಲಾಗುತ್ತದೆ. ಇದು ವರ್ಷದಲ್ಲಿ ಎರಡು ಬಾರಿ ಮೂರು ದಿನಗಳ ಕಾಲ ನಡೆಯುತ್ತದೆ.

ಚಿತ್ರಕೃಪೆ: Ankur P

ಮೂರೂ ದಿನಗಳು!

ಮೂರೂ ದಿನಗಳು!

ಮೊದಲನೇಯ ದಿನ ಸಾಯಂಕಾಲದ ಸಮಯದಲ್ಲಿ ಸೂರ್ಯನು ಅಸ್ತವಾಗುವುದಕ್ಕೂ ಮುಂಚೆ ತನ್ನ ಕೊನೆಯೆ ಕಿರಣಗಳನ್ನು ದೇವಿಯ ಪಾದಾರವಿಂದಗಳಿಗೆ ಸಪ್ಮರ್ಪಿಸುತ್ತಾನೆ. ಎರಡನೆಯ ದಿನದಂದು ಸೂರ್ಯನ ಕಿರಣಗಳು ದೇವಿಯ ಮಧ್ಯ ಭಾಗದಲ್ಲಿರುತ್ತವೆ ಹಾಗೂ ಮೂರನೆಯ ದಿನದಂದು ಸೂರ್ಯಕಿರಣಗಳು ದೇವಿಯ ಮುಖದ ಮೇಲೆ ಬಿದ್ದು ಪ್ರಕಾಶಿಸತೊಡಗುತ್ತವೆ. ಈ ಸಂದರ್ಭಗಳು ಪ್ರತಿ ವರ್ಷ ಜನವರಿ31, ಫಬ್ರುವರಿ 1 ಹಾಗೂ2 ರಂದು ಮತ್ತೆ ನವಂಬರ್ 9, 10 ಹಾಗೂ 11 ರಂದು ಜರುಗುತ್ತವೆ.

ಚಿತ್ರಕೃಪೆ: Ankur P

ಇನ್ನೊಂದು ವಿಶೇಷ

ಇನ್ನೊಂದು ವಿಶೇಷ

ಕೊಲ್ಹಾಪುರದಲ್ಲಿ ನೋಡಬಹುದಾದ ಇನ್ನೊಂದು ಕುತೂಹಲಕರ ಪ್ರವಾಸಿ ಆಕರ್ಷಣೆ ಇದಾಗಿದೆ. ಈ ಮಂಟಪವು ಶಿವಾಜಿ ಮಹಾರಾಜನಿಂದ ನಿರ್ಮಿಸಲ್ಪಟ್ಟಿದ್ದು ಅವನ ಕುಟುಂಬದವರು ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ತುಳಜಾ ಭವಾನಿ ದೇವಿಯ ಮೂರ್ತಿಯನ್ನು ಕಾಣಬಹುದು. ದಂತಕಥೆಯ ಪ್ರಕಾರ, ತುಳಜಾ ಭವಾನಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಹೋದರಿಯಾಗಿದ್ದು ಈ ನಗರದಲ್ಲಿ ಅತಿಥಿಯಾಗಿದ್ದಾಳೆ. ಈ ಮಂಟಪವು ಮಹಾಲಕ್ಷ್ಮಿ ದೇವಸ್ಥಾನದ ಹಿಂಬದಿಯಲ್ಲೆ ನೆಲೆಸಿದೆ.

ಚಿತ್ರಕೃಪೆ: Vijayshankar.munoli

ಆಕರ್ಷಕ

ಆಕರ್ಷಕ

ನಗರದಲ್ಲಿರುವ ರಂಕಾಲಾ ಚೌಪಾಟಿ ಎಂಬ ಸ್ಥಳವು ಜನರ ನೆಚ್ಚಿನ ವಿರಾಮ ಕೇಂದ್ರವಾಗಿದೆ. ಸ್ವಾಭಾವಿಕವಾಗಿ ರೂಪಗೊಂಡ ದೊಡ್ಡ ಕೆರೆ ಇದಾಗಿದ್ದು ಸುತ್ತಲೂ ಕಟ್ಟೆ ಹಾಗೂ ಉದ್ಯಾನವನ್ನು ನಿರ್ಮಿಸಲಾಗಿದೆ. ವಿಶ್ರಾಂತಿ ಪಡೆಯುತ್ತ ಕೊಂಚ ಸಮಯ ಕಳೆಯಲು ಇದೊಂದು ಆದರ್ಶಮಯ ಸ್ಥಳವಾಗಿದೆ.

ಚಿತ್ರಕೃಪೆ: Ajinkya A Shinde

ಹೆಸರುವಾಸಿ

ಹೆಸರುವಾಸಿ

ಭಾರತದಲ್ಲಿ ಕುಸ್ತಿ ಕ್ರೀಡೆಗಳಗೆ ಸಂಬಂಧಿಸಿದಂತೆ ಕೊಲ್ಹಾಪುರವು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಇಲ್ಲಿರುವ ಖಾಸ್ ಬಾಗ್ ಮೈದಾನವು ಅದ್ಭುತವಾದ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುವ ವಿಶಾಲ ಮೈದಾನವಾಗಿದೆ. ಸುಮಾರು ಎರಡು ಸಾವಿರದಷ್ಟು ಜನರು ಕುಳಿತು ಕುಸ್ತಿ ವೀಕ್ಷಿಸಬಹುದಾದ ಮೈದಾನ ಇದಾಗಿದ್ದು ಕೊಲ್ಹಾಪುರದ ಸಂಸ್ಕೃತಿಯ ಛಾಪು ಎದ್ದು ಕಾಣುತ್ತದೆ.

ಚಿತ್ರಕೃಪೆ: kolhapurtourism.org

ಏಕೈಕ

ಏಕೈಕ

ಕೊಲ್ಹಾಪುರದ ರಾಜಕುಮಾರಿಯಾದ ಶ್ರೀಮಂತ ಶಾಲಿನಿ ರಾಜೆ ಅವರಿಗೆಂದು ನಿರ್ಮಿಸಲಾದ ಅರಮನೆ ಇದಾಗಿದ್ದು ಸಾಕಷ್ಟು ಅದ್ದೂರಿತನದಿಂದ ಕೂಡಿದೆ. ಪ್ರಸ್ತುತ ಇದನ್ನು ತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು ಮಹಾರಾಷ್ಟ್ರದಲ್ಲಿರುವ ಏಕೈಕ ಅರಮನೆ ಹೋಟೆಲ್ ಇದಾಗಿದೆ.

ಚಿತ್ರಕೃಪೆ: kolhapurtourism.org

20 ಕಿ.ಮೀ ದೂರದಲ್ಲಿ

20 ಕಿ.ಮೀ ದೂರದಲ್ಲಿ

ಕೊಲ್ಲಾಪುರಿನ ವಾಯವ್ಯಕ್ಕೆ ಕೇವಲ 20 ಕಿ.ಮೀ ದೂರದಲ್ಲಿ ಸಾಗಿದರೆ ಸಿಗುವ ಅದ್ಭುತ ತಾಣವೆ ಪನ್ಹಾಲಾ. ಪನ್ಹಾಲಾ ತನ್ನ ಕೋಟೆ ಹಾಗೂ ಕಣಿವೆಯಿಂದಾಗಿ ಹೆಸರುವಾಸಿಯಾಗಿದೆ. ಕೊಲ್ಲಾಪುರದಿಂದ ಇಲ್ಲಿಗೆ ತೆರಳಲು ಸಾಕಷ್ಟು ಬಸ್ಸುಗಳು ಹಾಗೂ ಬಾಡಿಗೆ ರಿಕ್ಷಾಗಳು ನಿರಾಯಾಸವಾಗಿ ದೊರೆಯುತ್ತವೆ. ಅಲ್ಲದೆ ವಾರಾಂತ್ಯದ ರಜಾ ದಿನಗಳಲ್ಲಿ ಭೇಟಿ ನೀಡಲು ತುಂಬ ಸೂಕ್ತವಾದ ಸ್ಥಳವೆಂದೆ ಹೇಳಬಹುದು.

ಚಿತ್ರಕೃಪೆ: kolhapurtourism

ರುಚಿಕರ ಮಿಸಲ್ ಪಾವ್

ರುಚಿಕರ ಮಿಸಲ್ ಪಾವ್

ಇನ್ನು, ಕೊಲ್ಲಾಪುರದಲ್ಲಿ ಏನೇನೆಲ್ಲ ಮಾಡಬಹುದು? ಹೌದು ಕೆಲ ಅಂಶಗಳು ಈ ನಗರದಲ್ಲಿ ವಿಶೇಷವಾಗಿವೆ ಅವುಗಳೆಂದರೆ ಕೊಲ್ಲಾಪುರ ವಿಶೇಷ ತಿಂಡಿ ತಿನಿಸುಗಳು, ಕೊಲ್ಲಾಪುರಿ ಚಪ್ಪಲಿಗಳು ಹಾಗೂ ಕೊಲ್ಲಾಪುರಿ ಮಾಂಸಾಹಾರಿ ಖಾದ್ಯಗಳು. ನೀವೇನಾದರೂ ಈ ನಗರಕ್ಕೆ ಭೇಟಿ ನೀಡಿದರೆ ಇವುಗಳನ್ನು ಆಸ್ವಾದಿಸಲು ಮರೆಯದಿರಿ (ಚಪ್ಪಲಿಗಳನ್ನು ಕೊಳ್ಳಿರಿ). ಚಿತ್ರದಲ್ಲಿರುವುದು ಮಿಸಲ್ ಪಾವ್. ಬಾಯಿ ತುಂಬ ನೀರೂರಿಸುವಂತಹ ತಿಂಡಿ. ಆದರೆ ಎಚ್ಚರ ತುಂಬ ಖಾರವಾಗಿರುತ್ತದೆ ಈ ತಿಂಡಿ.

ಚಿತ್ರಕೃಪೆ: shankar s.

ಚಪ್ಪಲಿಗಳು

ಚಪ್ಪಲಿಗಳು

ಕೊಲ್ಲಾಪುರಿ ಚಪ್ಪಲಿಗಳು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ದೇಶದಲ್ಲೆ ಹೆಸರುವಾಸಿಯಾಗಿವೆ. ಸಾಂಪ್ರದಾಯಿಕೆ ಕಲೆಯಿಂದ, ಶುದ್ಧ ಚರ್ಮವನ್ನು ಬಳಸಿ ಈ ಚಪ್ಪಲಿಗಳನ್ನು ವಿಶಿಷ್ಟವಾದ ವಿನ್ಯಾಸದಲ್ಲಿ ನಿರ್ಮಿಸಲಾಗುತ್ತದೆ. ಈ ಚಪ್ಪಲಿಗಳು ಅತಿ ಸದೃಢವಾಗಿದ್ದು, ಬೇಸಿಗೆ ಹಾಗು ಚಳಿಗಾಲದ ಸಮಯದಲ್ಲಿ ಬಳಸಬಹುದಾಗಿದೆ ಅಲ್ಲದೆ ಬಹಳ ಕಾಲ ಬಾಳಿಕೆಯೂ ಬರುತ್ತವೆ.

ಚಿತ್ರಕೃಪೆ: kolhapurtourism

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X