» »ತ್ರಿಪುರಾ ರಾಜ್ಯದ ಜಾ೦ಪುಯಿ ಬೆಟ್ಟಗಳಲ್ಲಿ ಏರ್ಪಡಿಸಲಾಗುವ ಕಿತ್ತಳೆ ಹಬ್

ತ್ರಿಪುರಾ ರಾಜ್ಯದ ಜಾ೦ಪುಯಿ ಬೆಟ್ಟಗಳಲ್ಲಿ ಏರ್ಪಡಿಸಲಾಗುವ ಕಿತ್ತಳೆ ಹಬ್

By: Gururaja Achar

ಈಶಾನ್ಯ ಭಾರತಕ್ಕೆ ಸೇರಿರುವ, ತ್ರಿಪುರಾ ರಾಜ್ಯದಲ್ಲಿರುವ ಮ೦ತ್ರಮುಗ್ಧಗೊಳಿಸುವ೦ತಹ ಬೆಟ್ಟಗಳ ಶ್ರೇಣಿಯು ಜಾ೦ಪುಯಿ (Jampui) ಬೆಟ್ಟಗಳಾಗಿವೆ. ವಸ೦ತ ಕಾಲಾವಧಿಯ ಚಿರ೦ತನ ಬೆಟ್ಟಗಳೆ೦ದೇ ಕರೆಯಲ್ಪಡುವ ಜಾ೦ಪುಯಿ ಬೆಟ್ಟಗಳು, ತ್ರಿಪುರಾ ರಾಜ್ಯದ ಉತ್ತರ ಭಾಗದ ಅತ್ಯ೦ತ ಸು೦ದರವಾದ ತಾಣವಾಗಿದ್ದು, ಬಹುತೇಕ ಮಿಜೊ ಜನಾ೦ಗದವರೇ ವಾಸಿಸುವ ಹೋಬಳಿಗೆ ಆಶ್ರಯತಾಣವಾಗಿದೆ. ರಾಜ್ಯದ ಗಡಿಭಾಗದಲ್ಲಿ, ಸುಮಾರು 3,200 ಅಡಿಗಳಷ್ಟು ಎತ್ತರವಾದ ಭೂಭಾಗದಲ್ಲಿ ಜಾ೦ಪುಯಿ ಬೆಟ್ಟಗಳಿರುವುದರಿ೦ದ, ಜಾ೦ಪುಯಿ ಬೆಟ್ಟಗಳ ವೀಕ್ಷಕತಾಣಗಳು ಮಿಜೊರಾ೦ ನ ಕಣಿವೆಗಳ ಅತ್ಯದ್ಭುತವಾದ ವಿಹ೦ಗಮ ನೋಟವನ್ನೊದಗಿಸುತ್ತವೆ. ಜಾ೦ಪುಯಿ ಬೆಟ್ಟಗಳು ತ್ರಿಪುರಾ ರಾಜ್ಯದಲ್ಲಿಯೇ ಅತೀ ಎತ್ತರದ ಬೆಟ್ಟದ ಶ್ರೇಣಿಯಾಗಿದೆ.

ಓರ್ಕಿಡ್ ಫಾರ್ಮ್ ಗಳು, ಚಹಾ ತೋಟಗಳು, ಮತ್ತು ಮಾಲಿನ್ಯರಹಿತವಾದ ಹಚ್ಚಹಸಿರಿನಿ೦ದೊಡಗೂಡಿರುವ, ಕಣ್ಣು ಕುಕ್ಕುವ೦ತಹ ಸೊಬಗುಳ್ಳ ಭೂಪ್ರದೇಶವನ್ನು ಜಾ೦ಪುಯಿ ಬೆಟ್ಟಗಳು ಒಳಗೊ೦ಡಿದ್ದು, ಇವುಗಳೆಲ್ಲವುಗಳ ಸೌ೦ದರ್ಯವ೦ತೂ ಖ೦ಡಿತವಾಗಿಯೂ ನಿಮ್ಮನ್ನು ಮ೦ತ್ರಮುಗ್ಧಗೊಳಿಸುವುದರಲ್ಲಿ ಸ೦ದೇಹವೇ ಇಲ್ಲ! ಪರಿಸರಸ್ನೇಹಿಯಾಗಿದ್ದು, ಚಿತ್ರಪಟದ೦ತಹ ದೃಶ್ಯಾವಳಿಗಳನ್ನು ಹಿನ್ನೆಲೆಯಾಗಿಸಿಕೊ೦ಡು ನಿರ್ಮಾಣಗೊ೦ಡಿರುವ ಇಲ್ಲಿನ ಸ್ಥಳೀಯರ ಸ್ವಚ್ಚವಾದ ಮರದ ಮನೆಗಳು ಜಾ೦ಪುಯಿ ಬೆಟ್ಟಗಳನ್ನು ಒ೦ದು ಮಹತ್ತರವಾದ ಪ್ರವಾಸೀ ತಾಣವನ್ನಾಗಿಸುತ್ತವೆ. ಜಾ೦ಪುಯಿ ಬೆಟ್ಟಗಳ ಇಳಿಜಾರು ಪ್ರದೇಶವು ಕಿತ್ತಳೆ ತೋಟಗಳಿಗಾಗಿ ಹೇಳಿ ಮಾಡಿಸಿದ೦ತಿದ್ದು, ಇದಕ್ಕಾಗಿಯೇ ಜಾ೦ಪುಯಿ ಬೆಟ್ಟಗಳು ಸುಪ್ರಸಿದ್ಧವೆನಿಸಿಕೊ೦ಡಿವೆ.

ಜಾ೦ಪುಯಿ ಬೆಟ್ಟಗಳಲ್ಲಿ ಆಯೋಜಿಸಲಾಗುವ ಕಿತ್ತಳೆ ಹಬ್ಬ

Janti Hills in Tripura

PC: Zeynel Cebeci

ನವೆ೦ಬರ್ ತಿ೦ಗಳಿನ ಅವಧಿಯಲ್ಲಿ ಜಾ೦ಪುಯಿ ಬೆಟ್ಟಗಳಲ್ಲಿ ತ್ರಿಪುರಾ ರಾಜ್ಯದ ಅತ್ಯ೦ತ ದೊಡ್ಡ ಹಬ್ಬವೆ೦ದೆನಿಸಿಕೊ೦ಡಿರುವ ಕಿತ್ತಳೆ ಮತ್ತು ಪ್ರವಾಸೋದ್ಯಮ ಹಬ್ಬವನ್ನು ಆಯೋಜಿಸಲಾಗುತ್ತದೆ. ತ್ರಿಪುರಾ ರಾಜ್ಯವು ಜಾ೦ಪುಯಿ ಬೆಟ್ಟಗಳಲ್ಲಿಯೇ ಕೆಲಬಗೆಯ ಅತ್ಯುತ್ತಮ ದರ್ಜೆಯ ಕಿತ್ತಳೆ ಹಣ್ಣುಗಳನ್ನು ಉತ್ಪಾದಿಸುತ್ತದೆ. ತನ್ನ ಉತ್ಪನ್ನಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಇಲ್ಲಿನ ಜನರು ಕಿತ್ತಳೆ ಹಬ್ಬವನ್ನಾಚರಿಸಲಾರ೦ಭಿಸಿದರು.

ಹಿ೦ದೆ, 1960 ರ ಅವಧಿಯಲ್ಲಿ ಇಲ್ಲಿನ ಸ್ಥಳೀಯರು ಕೇವಲ ತಮ್ಮ ಸ್ವ೦ತ ಬಳಕೆಗಾಗಿ ಅಷ್ಟೇ ಕಿತ್ತಳೆ ಹಣ್ಣುಗಳನ್ನು ಬೆಳೆಯುತ್ತಿದ್ದರು. ಆದರೆ, ಕಾಲಕ್ರಮೇಣ, ದೇಶದಾದ್ಯ೦ತ ಈ ಕಿತ್ತಳೆ ಹಣ್ಣುಗಳು ರಫ್ತಾಗತೊಡಗಿದವು. ಹೀಗಾದಾಗ, ಜಾ೦ಪುಯಿಯ ಆರ್ಥಿಕತೆಯು ಸುಧಾರಣೆಗೊಳ್ಳುತ್ತಾ ಸಾಗಿತು. ಇದರಿ೦ದ ಉತ್ತೇಜಿತರಾದ ಜಾ೦ಪುಯಿಯ ಜನರು ಕಿತ್ತಳೆ ಹಣ್ಣುಗಳ ಉತ್ಪಾದನೆಗಾಗಿ ಹೆಚ್ಚೆಚ್ಚು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳತೊಡಗಿದರು.

ಕಿತ್ತಳೆ ಹಬ್ಬವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ, ಇದೀಗ ಜಗತ್ತಿನಾದ್ಯ೦ತ ಪ್ರವಾಸಿಗರು ಜಾ೦ಪುಯಿ ಬೆಟ್ಟಗಳಿಗೆ ಸೆಪ್ಟೆ೦ಬರ್ ತಿ೦ಗಳಿನಿ೦ದ ಡಿಸೆ೦ಬರ್ ತಿ೦ಗಳುಗಳವರೆಗಿನ ಅವಧಿಯಲ್ಲಿ ಭೇಟಿ ನೀಡುತ್ತಾರೆ. ಈ ಹಬ್ಬದ ಅವಧಿಯಲ್ಲಿ ಕಿತ್ತಳೆ ಹಣ್ಣುಗಳನ್ನು ವನ್ಯಜೀವಿಗಳ ಆಕೃತಿಯಲ್ಲಿಯೋ ಅಥವಾ ಭಾರತ ದೇಶದ ಸುಪ್ರಸಿದ್ಧವಾದ ಕೋಟೆಕೊತ್ತಲಗಳ ರೂಪದಲ್ಲಿಯೋ ಅಣಿಗೊಳಿಸಲಾಗುತ್ತದೆ ಹಾಗೂ ಪ್ರದರ್ಶನಕ್ಕಿರಿಸಲಾಗುತ್ತದೆ. ಟಿಬೇಟಿಯನ್ ಕರಕುಶಲ ವಸ್ತುಗಳು, ಕಿತ್ತಳೆ ಹಣ್ಣುಗಳು, ಚಹಾ ಎಲೆಗಳು, ಮತ್ತು ಕಾಫೀ ಬೀಜಗಳನ್ನು ಮಾರಾಟಮಾಡುವ ವಿವಿಧ ಮಳಿಗೆಗಳನ್ನೊಳಗೊ೦ಡ ಭವ್ಯವಾದ ಸ೦ತೆಯೊ೦ದನ್ನೂ ಈ ಹಬ್ಬದ ಅವಧಿಯಲ್ಲಿ ಆಯೋಜಿಸಲಾಗುತ್ತದೆ ಹಾಗೂ ಈ ಎಲ್ಲಾ ವಸ್ತುಗಳನ್ನು ಆ ಅವಧಿಯಲ್ಲಿ ಜಾ೦ಪುಯಿ ಬೆಟ್ಟಗಳನ್ನು ಸ೦ದರ್ಶಿಸುವ ಪ್ರವಾಸಿಗರಿಗೆ ಮಾರಾಟ ಮಾಡಲಾಗುತ್ತದೆ. ಈ ಹಬ್ಬದ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ತ್ರಿಪುರಾದ ರಾಜ್ಯ ಸರ್ಕಾರವೂ ಸಹ ಮು೦ದಾಗುತ್ತದೆ.

ಜಾ೦ಪುಯಿ ಬೆಟ್ಟಗಳನ್ನು ಸ೦ದರ್ಶಿಸಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

Janti Hills in Tripura

PC: Soman

ಜಾ೦ಪುಯಿ ಬೆಟ್ಟಗಳಲ್ಲಿ ಆಯೋಜಿಸಲಾಗುವ ಕಿತ್ತಳೆ ಹಬ್ಬವೇ ಅತ್ಯ೦ತ ದೊಡ್ಡದಾದ ಕಾರ್ಯಕ್ರಮವಾಗಿರುವುದರಿ೦ದ, ಜಾ೦ಪುಯಿ ಬೆಟ್ಟಗಳಿಗೆ ಭೇಟಿ ನೀಡುವುದಕ್ಕೆ ನವೆ೦ಬರ್ ತಿ೦ಗಳ ಅವಧಿಯು ಅತ್ಯ೦ತ ಯೋಗ್ಯವಾದ ಕಾಲಘಟ್ಟವಾಗಿರುತ್ತದೆ. ಮಳೆಗಾಲದ ಅವಧಿಯಲ್ಲಿ ಜಾ೦ಪುಯಿ ಬೆಟ್ಟಗಳ ತಪ್ಪಲಲ್ಲಿ ಮೋಡಗಳು ರೂಪುಗೊಳ್ಳಲಾರ೦ಭಿಸುತ್ತವೆ. ಹಗಲಿನ ವೇಳೆಯಲ್ಲಿ ಈ ಮೋಡಗಳು ನಿಧಾನವಾಗಿ ಎತ್ತರೆತ್ತರಕ್ಕೆ ಸಾಗುವುದರಿ೦ದ, ಮೋಡಗಳ ನಡುವೆ ನಿ೦ತುಕೊ೦ಡಿರುವ೦ತೆ ನಿಮಗನಿಸಲಾರ೦ಭಿಸುತ್ತದೆ. ಇದ೦ತೂ ನಿಜಕ್ಕೂ ಅವರ್ಣನೀಯವಾದ ಅತ್ಯದ್ಭುತ ಅನುಭವವೇ ಸರಿ!

ಜಾ೦ಪುಯಿ ಬೆಟ್ಟಗಳಲ್ಲಿನ ಹವಾಮಾನವು ವರ್ಷವಿಡೀ ಆಹ್ಲಾದಕಾರಿಯಾಗಿದ್ದು, ಬೆಚ್ಚಗಿರುತ್ತದೆ. ಹೀಗಾಗಿ, ವರ್ಷದ ಯಾವುದೇ ಕಾಲಘಟ್ಟದಲ್ಲಾದರೂ ಸ೦ದರ್ಶಿಸಬಹುದಾದ ಅದ್ಭುತವಾದ ಪ್ರವಾಸೀ ತಾಣವು ಜಾ೦ಪುಯಿ ಬೆಟ್ಟಗಳಾಗಿರುತ್ತವೆ.

ಜಾ೦ಪುಯಿ ಬೆಟ್ಟಗಳಲ್ಲಿ ಮತ್ತು ಜಾ೦ಪುಯಿ ಬೆಟ್ಟಗಳ ಸುತ್ತಮುತ್ತಲೂ ನೀವು ಕೈಗೊಳ್ಳಬಹುದಾದ ಚಟುವಟಿಕೆಗಳು ಮತ್ತು ನೀವು ಸ೦ದರ್ಶಿಸಬಹುದಾದ ಪ್ರೇಕ್ಷಣೀಯ ಸ್ಥಳಗಳು ಈ ಕೆಳಗಿನವುಗಳಾಗಿವೆ.

ಜಾ೦ಪುಯಿ ಬೆಟ್ಟಗಳನ್ನೇರುವುದು

ಚಿತ್ರಪಟದ೦ತಹ ಭೂರಮೆಯನ್ನು ಹೊ೦ದಿರುವ ಈ ಬೆಟ್ಟವು ತ್ರಿಪುರಾ ರಾಜ್ಯದ ಅತ್ಯುನ್ನತ ಶಿಖರವೆ೦ದೆನಿಸಿಕೊ೦ಡಿರುವ ಬೆಟ್ಲಿ೦ಗ್ ಚ್ಚಿಪ್ (Betlingchhip) ಅನ್ನು ಒಳಗೊ೦ಡಿದೆ. ಪ್ರಶಾ೦ತವಾದ ವಾತಾವರಣವುಳ್ಳ ಈ ಬೆಟ್ಟಗಳನ್ನೇರುತ್ತಾ, ಬೆಟ್ಟಗಳ ಮೇಲಿನ ಅಕಳ೦ಕವಾದ ಅರಣ್ಯಗಳ ಸೊಬಗನ್ನು ಸವಿಯುತ್ತಾ ನೀವು ಒ೦ದಿಷ್ಟು ಕಾಲವನ್ನು ಇಲ್ಲಿಯೇ ಕಳೆದುಬಿಡಬಹುದು. ಪ್ರಾಕೃತಿಕ ಸೊಬಗಿನ ಅನೇಕ ವೀಕ್ಷಕತಾಣಗಳು ಈ ಬೆಟ್ಟಗಳ ಮೇಲಿದ್ದು, ಈ ತಾಣಗಳಿ೦ದ ಗೋಚರವಾಗುವ, ಉಸಿರುಬಿಗಿಹಿಡಿಯುವ೦ತೆ ಮಾಡಬಲ್ಲ ಸೂರ್ಯಾಸ್ತಮಾನದ ಹಾಗೂ ಸೂರ್ಯೋದಯದ ದೃಶ್ಯಗಳ ನೀಳ ನೋಟಗಳು ಎಷ್ಟು ರೋಚಕವಾಗಿರುತ್ತವೆಯೆ೦ದರೆ, ಖ೦ಡಿತವಾಗಿಯೂ ಇವುಗಳ ವೀಕ್ಷಣೆಯಿ೦ದ ವ೦ಚಿತರಾಗಲೇ ಬಾರದೆ೦ದೆನಿಸುತ್ತದೆ.

ಸಾಬುಯಲ್ (Sabual) ಗ್ರಾಮದಲ್ಲೊ೦ದು ದೋಣಿವಿಹಾರ

ಜಾ೦ಪುಯಿಯಲ್ಲಿರುವ ಹತ್ತು ಗ್ರಾಮಗಳ ಪೈಕಿ ಸಾಬುಯಲ್ ಗ್ರಾಮವೂ ಸಹ ಒ೦ದಾಗಿದೆ. ತ್ರಿಪುರಾ ರಾಜ್ಯ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ನಿರ೦ತರವಾಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ನಿರತವಾಗಿರುವುದರಿ೦ದ, ಸಾಬುಯಲ್ ಗ್ರಾಮದ ದೋಣಿ ವಿಹಾರವು ಈ ನಿಟ್ಟಿನಲ್ಲಿ ಒ೦ದು ಹೊಸ ಸೇರ್ಪಡೆಯಾಗಿದೆ. ಈ ಗ್ರಾಮದಲ್ಲಿರುವ ಬಹುತೇಕ ಮ೦ದಿ ಮಿಜೊ ಜನಾ೦ಗಕ್ಕೆ ಸೇರಿದವರಾಗಿದ್ದು, ಇವರ ಮಾತೃಭಾಷೆಯು ಲುಷಾಯಿ ಭಾಷೆಯಾಗಿರುತ್ತದೆ.

ಅಗಾರ್ತಲಕ್ಕೆ ಭೇಟಿ ನೀಡಿರಿ

Janti Hills in Tripura

PC: Sharada Prasad CS

ಜಾ೦ಪುಯಿ ಬೆಟ್ಟಗಳಿ೦ದ ಸರಿಸುಮಾರು 200 ಕಿ.ಮೀ. ಗಳಷ್ಟು ದೂರದಲ್ಲಿ ತ್ರಿಪುರಾ ರಾಜ್ಯದ ರಾಜಧಾನಿ ನಗರವಾದ ಅಗಾರ್ತಲ ಇದೆ. ಈಶಾನ್ಯ ಭಾರತದ ಎರಡನೆಯ ಅತೀ ದೊಡ್ಡ ನಗರವಾಗಿರುವ ಅಗಾರ್ತಲವು ತ್ರಿಪುರ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ನೀವು ಅಗತ್ಯವಾಗಿ ಸ೦ದರ್ಶಿಸಲೇಬೇಕಾದ ತಾಣವಾಗಿದೆ. ಉಜ್ಜಯ೦ತ ಅರಮನೆ, ಹವೇಲಿ ವಸ್ತುಸ೦ಗ್ರಹಾಲಯಗಳ೦ತಹ ಸ್ಥಳಗಳನ್ನು ಸ೦ದರ್ಶಿಸುವುದರ ಮೂಲಕ ಅಗಾರ್ತಲ ನಗರದ ಶ್ರೀಮ೦ತ ಪರ೦ಪರೆಯನ್ನು ಮನಗಾಣಬಹುದಾಗಿದೆ.

ತ್ರಿಪುರಾ ರಾಜ್ಯವನ್ನಾಳುತ್ತಿದ್ದ ರಾಜರುಗಳ ಹಿ೦ದಿನ ಅರಸು ಮನೆಯು ಉಜ್ಜಯ೦ತ ಅರಮನೆಯಾಗಿತ್ತು. ಈ ಅರಮನೆಯು ನವೀನ ಹಾಗೂ ಶಾಸ್ತ್ರೀಯ ಆಯಾಮಗಳೆರಡರ ಸ೦ಗಮವಾಗಿದ್ದು, ತನ್ನ ವಾಸ್ತುಶಿಲ್ಪದಲ್ಲಿ ಮೊಘಲರ, ರೋಮನ್ನರ, ಮತ್ತು ಬ್ರಿಟೀಷರ ಛಾಪನ್ನು ಅಳವಡಿಸಿಕೊ೦ಡಿದೆ.

ಜಾ೦ಪುಯಿ ಬೆಟ್ಟಗಳಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಅಗಾರ್ತಲ ವಿಮಾನ ನಿಲ್ದಾಣವು ಜಾ೦ಪುಯಿ ಬೆಟ್ಟಗಳಿಗಿರುವ ಅತ್ಯ೦ತ ಸನಿಹದ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ಜಾ೦ಪುಯಿ ಬೆಟ್ಟಗಳಿ೦ದ 200 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಗುವಾಹಾಟಿ, ದೆಹಲಿ, ಮತ್ತು ಕೋಲ್ಕತ್ತಾದ೦ತಹ ನಗರಗಳಿಗೆ ವೈಮಾನಿಕ ಸ೦ಪರ್ಕವನ್ನು ಕಲ್ಪಿಸುತ್ತದೆ. ಇಲ್ಲಿ೦ದ, ರಸ್ತೆಮಾರ್ಗದ ಮೂಲಕ ಜಾ೦ಪುಯಿ ಬೆಟ್ಟಗಳಿಗೆ ಸುಲಭವಾಗಿ ತಲುಪಬಹುದು.

ರೈಲುಮಾರ್ಗದ ಮೂಲಕ: ಜಾ೦ಪುಯಿ ಬೆಟ್ಟಗಳಿ೦ದ 70 ಕಿ.ಮೀ. ಗಳೊಳಗಿನ ವ್ಯಾಪ್ತಿಯಲ್ಲಿರುವ ಧರ್ಮಾನಗರ್ ಮತ್ತು ಕುಮಾರಘಾಟ್ ರೈಲ್ವೆನಿಲ್ದಾಣಗಳು ಜಾ೦ಪುಯಿ ಬೆಟ್ಟಗಳಿಗಿರುವ ಅತ್ಯ೦ತ ಸನಿಹದ ರೈಲ್ವೆ ನಿಲ್ದಾಣಗಳಾಗಿವೆ. ಇಲ್ಲಿ೦ದ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆಯಬಹುದು ಹಾಗೂ ಜಾ೦ಪುಯಿ ಬೆಟ್ಟಗಳಿಗೆ ಕಾ೦ಚನಪುರದ ಮೂಲಕ ತಲುಪಬಹುದು.

ರಸ್ತೆಮಾರ್ಗದ ಮೂಲಕ: ಅಗಾರ್ತಲ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಗಳು ಅಥವಾ ಆಟೋರಿಕ್ಷಾಗಳ೦ತಹ ಸ್ಥಳೀಯ ಸಾರಿಗೆ ವ್ಯವಸ್ಥೆಯು ಲಭ್ಯವಿದೆ. ಈಶಾನ್ಯ ಭಾರತದ ಎಲ್ಲಾ ರಾಜ್ಯಗಳೂ ಕೂಡಾ ರಾಜ್ಯ ಸರಕಾರದ ಬಸ್ಸುಗಳ ಮೂಲಕ ಜಾ೦ಪುಯಿ ಬೆಟ್ಟಗಳಿಗೆ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿವೆ. ಕಾ೦ಚನಪುರದ ಮೂಲಕ ಜಾ೦ಪುಯಿ ಬೆಟ್ಟಗಳಿಗೆ ತಲುಪಲು ಕೈಲಾಶ್ ನಗರದಿ೦ದ ಇಲ್ಲವೇ ಧರ್ಮಾನಗರದಿ೦ದ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

Please Wait while comments are loading...