Search
  • Follow NativePlanet
Share
» »ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಕರ್ನಾಟಕದ ಕೋಲಾರ ಜಿಲ್ಲೆಯ ಅವನಿ ಹಳ್ಳಿಯಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯವು ಒಂದು ಪುರಾಣ ಪ್ರಸಿದ್ಧ ದೇಗುಲವಾಗಿದ್ದು ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ

By Divya

ನಮ್ಮ ನಾಡಿನ ಒಂದು ಶ್ರೀಮಂತಿಕೆಯ ವಿಚಾರವೆಂದರೆ ಸುಂದರ ಕಲಾಕೃತಿಯನ್ನು ಹೊಂದಿರುವ ದೇವಾಲಯಗಳನ್ನು ಹೊಂದಿರುವುದು. ಅಂತಹ ಒಂದು ಶ್ರೀಮಂತಿಕೆ ಕಾರಣವಾದ ದೇಗುಲಗಳಲ್ಲಿ ಕೋಲಾರದಲ್ಲಿರುವ ರಾಮಲಿಂಗೇಶ್ವರ ದೇಗುಲವೂ ಒಂದು. ಬೆಟ್ಟದ ಮೇಲಿರುವ ಈ ದೇಗುಲ ವಿಶಿಷ್ಟವಾದ ವಾಸ್ತು ಶಿಲ್ಪವನ್ನು ಹೊಂದಿದೆ. ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿರುವ ಈ ದೇಗುಲಕ್ಕೆ ವಾರದ ರಜೆಯಲ್ಲಿ ಹೋಗಬಹುದು.

ರಾಮಲಿಂಗೇಶ್ವರ ದೇಗುಲ

ಬೆಟ್ಟ ಹತ್ತುವ ಉತ್ಸಾಹ ಇದ್ದವರು ಈ ದೇಗುಲಕ್ಕೆ ಭೇಟಿ ನೀಡಲೇ ಬೇಕು. ಹಳ್ಳಿಯ ಸೊಗಡನ್ನು ಮೈದುಂಬಿಕೊಂಡು ಹಸಿರು ವನಗಳ ಮಧ್ಯೆ ಇರುವ ಈ ದೇಗುಲ ರಾಮಾಯಣ ಕಾಲದ ಕಥೆಯನ್ನು ಹೇಳುತ್ತದೆ. ಗಂಗರು, ಚೋಳರು, ಚಾಲುಕ್ಯರು, ವಿಜಯನಗರ ಅರಸರು ಹಾಗೂ ಮೈಸೂರು ಒಡೆಯರ ಕಾಲದ ಕೆತ್ತನೆಗಳನ್ನು ಇಲ್ಲಿ ಕಾಣಬಹುದು.

ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಚಿತ್ರಕೃಪೆ: abhishekwanderer

ಈ ದೇವಾಲಯಕ್ಕೆ ದಕ್ಷಿಣ ಹಾಗೂ ಪೂರ್ವ ದಿಕ್ಕಿನಲ್ಲಿ ಬಾಗಿಲಿರುವುದು ವಿಶೇಷ. ದೇಗುಲದ ಮುಖ್ಯ ದ್ವಾರದಲ್ಲಿ ಎರಡು ಗರುಡ ಗಂಬ, ಮಧ್ಯದಲ್ಲಿ ಪಾರ್ವತಿ ದೇವಿಯ ದೇಗುಲ, ಪಶ್ಚಿಮ ಭಾಗದಲ್ಲಿ ರಾಮೇಶ್ವರ. ಲಕ್ಷ್ಮಣೇಶ್ವರ, ಭರತೇಶ್ವರ ದೇಗುಲವಿದ್ದರೆ ಪೂರ್ವಕ್ಕೆ ಶತೃಘ್ನೇಶ್ವರ, ಆಂಜನೇಶ್ವರ, ಸುಗ್ರೀವೇಶ್ವರ, ಅಂಗದೇಶ್ವರ ದೇವಾಲಯವಿದೆ.

ಇತಿಹಾಸ

ಇಲ್ಲಿರುವ ವಾಲ್ಮೀಕಿ ಬೆಟ್ಟದ ತುದಿಯಲ್ಲಿ ಸೀತೆ ಹಾಗೂ ಪಾರ್ವತಿ ದೇವಿಯ ಗುಡಿಯಿದೆ. ಶ್ರೀರಾಮನು ವನವಾಸ ಮುಗಿಸಿ ರಾಜ್ಯಕ್ಕೆ ಹಿಂದಿರುಗಿದಾಗ ಅಗಸ ಕೇಳಿದ ಪ್ರಶ್ನೆಗೆ ಉತ್ತರವಾಗಿ ಸೀತೆಯನ್ನು ತ್ಯಜಿಸುತ್ತಾನೆ. ಆ ಸಂದರ್ಭದಲ್ಲಿ ಸೀತಾ ಮಾತೆ ವಾಲ್ಮೀಕಿಯ ಆಶ್ರಮಕ್ಕೆ ಬಂದು ನೆಲೆಸುತ್ತಾಳೆ. ತುಂಬು ಗರ್ಭಿಣಿಯಾಗಿದ್ದ ಸೀತೆ ತನ್ನ ಎರಡು ಮಕ್ಕಳಿಗೆ ಇಲ್ಲಿಯೇ ಜನ್ಮ ನೀಡಿದ್ದಾಳೆ. ಅಲ್ಲದೇ ತಂದೆ ಮಕ್ಕಳು(ರಾಮ ಮತ್ತು ಲವಕುಶ) ಯುದ್ಧಮಾಡಿದ್ದು ಸಹ ಇದೇ ಜಾಗದಲ್ಲಿ ಎನ್ನುವ ಕತೆಯನ್ನು ಹೇಳಲಾಗುತ್ತದೆ. ಅವನಿ ಸುತೆ ಎಂದು ಕರೆಸಿಕೊಂಡ ಸೀತಾ ಮಾತೆ ದೀರ್ಘ ಕಾಲ ಇಲ್ಲಿಯೇ ನೆಲೆಸಿದ್ದಳು ಹಾಗಾಗಿಯೇ ಈ ಜಾಗಕ್ಕೆ ಆವನಿ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ.

ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಚಿತ್ರಕೃಪೆ: Dineshkannambadi

ನಂಬಿಕೆ

ಮಕ್ಕಳಿಲ್ಲದವರು ಈ ಬೆಟ್ಟದ ಮೇಲಿರುವ ದೇಗುಲಕ್ಕೆ ಬಂದು, ಕಲ್ಲನ್ನು ಒಂದರ ಮೇಲೊಂದನ್ನು ಇಟ್ಟುಕೊಡುತ್ತೇನೆ ಎಂದು ಹರಕೆ ಹೇಳಿಕೊಂಡರೆ ಅವರಿಗೆ ಮಗುವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗೆ ಮಾಡಿರುವವರು ಎಷ್ಟೋ ಜನ ಸಂತಾನ ಫಲವನ್ನು ಅನುಭವಿಸಿದ್ದಾರೆ ಎನ್ನುವುದು ಇಲ್ಲಿಯ ಜನರ ಹೇಳಿಕೆ. ಇದಕ್ಕೆ ಪೂರಕ ಎನ್ನುವಂತೆ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಮಕ್ಕಳ ಆಟಕ್ಕೆಂದು ಕಟ್ಟಿಕೊಳ್ಳುವಂತಹ ಚಿಕ್ಕ-ಪುಟ್ಟ ಮನೆಗಳಿರುವುದನ್ನು ನೋಡಬಹುದು.

ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!

ಚಿತ್ರಕೃಪೆ: Kuberappapujar

ಇನ್ನೂ ಏನೇನಿದೆ?

ಈ ಗುಡ್ಡದ ಮೇಲೆ ವಾಲ್ಮೀಕಿ ಗುಹೆ, ಲಕ್ಷ್ಮಣ ತನ್ನ ಅತ್ತಿಗೆಗಾಗಿ(ಸೀತೆ) ನಿರ್ಮಿಸಿದ ಧನುಷ್ಕೋಟಿ ತೀರ್ಥ, ಕಷಾಯ ತೀರ್ಥಇದೆ. ಬೆಟ್ಟದ ತಿದಿಯಲ್ಲಿರುವ ಸೀತಾ ದೇವಿಯ ದೇಗುಲಕ್ಕೆ ಹೋಗುವಾಗ ದಾರಿಯಲ್ಲಿ ಲವ-ಕುಶರಿಗೆ ಜನ್ಮನೀಡಿದ ಗುಯೆಯಿದೆ. ಅದರ ಪಕ್ಕದಲ್ಲೇ ವಾಲ್ಮೀಕಿಯ ಗುಹೆಯೂ ಇದೆ. ಇವೆಲ್ಲವನ್ನು ನೋಡುತ್ತಾ ಗಿರಿಯ ತುದಿಗೆ ತಲುಪಿದ ಮೇಲೆ ನಿಂತು ಸುತ್ತಲ ಪ್ರಪಂಚವನ್ನು ನೋಡುತ್ತಿದ್ದರೆ ಆಗುವ ಸಂತೋಷದ ಪರಿವೇ ಬೇರೆ.

ಕೋಲಾರಿನ ಚಿನ್ನದಂತಹ ಪ್ರವಾಸ ತಾಣಗಳು

ದೂರ

ಬೆಂಗಳೂರಿನಿಂದ 92.5 ಕಿ.ಮೀ. ದೂರದಲ್ಲಿರುವ ಕೋಲಾರದ ಅವನಿ ಬೆಟ್ಟಕ್ಕೆ ಎರಡು ತಾಸುಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X