Search
  • Follow NativePlanet
Share
» »ಸೂರ್ಯದ ಸದಾಶಿವರುದ್ರ ದೇವಸ್ಥಾನ

ಸೂರ್ಯದ ಸದಾಶಿವರುದ್ರ ದೇವಸ್ಥಾನ

By Vijay

ಏನಿದು....ಹೆಸರು ವಿಚಿತ್ರವಾಗಿದೆ ಎಂದನಿಸುತ್ತಿದೆಯಲ್ಲವೆ? ಹೌದು, ಇದೊಂದು ವಿಶಿಷ್ಟ ದೇವಸ್ಥಾನ. ಈ ದೇವಸ್ಥಾನವಿರುವುದು ಕರ್ನಾಟಕದಲ್ಲಿಯೆ ಹಾಗೂ ಇಲ್ಲಿ ಹರಕೆ ಈಡೇರಿದ ನಂತರ ದೇವರಿಗೆ ವಿಶಿಷ್ಟ ರೀತಿಯ ಉಡುಗೊರೆಗಳನ್ನೇ ಅರ್ಪಿಸಬೇಕು. ಅಷ್ಟೊಂದು ಪ್ರಭಾವಶಾಲಿ ಅಥವಾ ಶಕ್ತಿಶಾಲಿಯಾಗಿದೆಯಂತೆ ಈ ದೇವಸ್ಥಾನ, ಅಂತ ಇಲ್ಲಿಗೆ ನಡೆದುಕೊಳ್ಳುವ ಭಕ್ತರ ಅಚಲವಾದ ನಂಬಿಕೆ.

ನಿಮಗಿಷ್ಟವಾಗಬಹುದಾದ : ಕಲ್ಲೂರು ಮಹಾಲಕ್ಷ್ಮಿ : ಬಯಸಿದನು ಹರಸುವಾಕೆ

ಈ ದೇವಸ್ಥಾನವನ್ನು ಸದಾಶಿವ ರುದ್ರನ ದೇವಸ್ಥಾನ ಎಂದು ಕರೆಯಲಾಗುತ್ತದೆ ಹಾಗೂ ಮಾಧ್ವ ಸಂಪ್ರದಾಯದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ಬ್ರಾಹ್ಮಣ ಕುಲದ ಮಾಧ್ವ ಸಮುದಾಯದವರು ವೈಷ್ಣವ ಪಂಗಡಕ್ಕೆ ಸೇರಿದವರಾಗಿದ್ದು ಇವರು ಶಿವನನ್ನು ರುದ್ರನೆಂದು ಸಂಭೋದಿಸಿ ಪೂಜಿಸುತ್ತಾರೆ. ಹೀಗಾಗಿ ಇದೊಂದು ಮಾಧ್ವ ಸಂಪ್ರದಾಯದ ಶಿವನ ವಿಶೇಷ ದೇವಸ್ಥಾನವೆಂದೆ ಹೇಳಬಹುದು.

ಸೂರ್ಯದ ಸದಾಶಿವರುದ್ರ ದೇವಸ್ಥಾನ

ಚಿತ್ರಕೃಪೆ: M.S.Sunil

ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿಯಿರುವ ನಾಡಗ್ರಾಮದ ಸೂರ್ಯ ಎಂಬ ಸ್ಥಳದಲ್ಲಿದೆ. ಧರ್ಮಸ್ಥಳದ ಉತ್ತರಕ್ಕೆ ಕೇವಲ 15 ಕಿ.ಮೀ ದೂರದಲ್ಲಿ ಉಜಿರೆಯಿದ್ದು ಇಲ್ಲಿಂದ ಈ ದೇವಸ್ಥಾನ ಕೇವಲ ಐದು ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿಯಿಂದ ಉಜಿರೆಗೆ ಹೋಗುವ ಮಾರ್ಗದಲ್ಲಿ ಎಡ ತಿರುವು ಪಡೆದು ನಾಡಗ್ರಾಮ ತಲುಪಿ ಅಲ್ಲಿಂದ ಈ ದೇವಸ್ಥಾನಕ್ಕೆ ತಲುಪಬಹುದು.

ದೇವಸ್ಥಾನವು ಚೊಕ್ಕವಾಗಿ ನಿರ್ಮಾಣವಾಗಿದ್ದು ಹಚ್ಚ ಹಸಿರಿನ ಮಧ್ಯೆ ನೆಲೆಸಿದ್ದು ಕಣ್ಣಿಗೆ ತಂಪನ್ನೆರೆಯುತ್ತದೆ. ಸುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ. ದೇವಾಲಯ ಆವರಣದಲ್ಲಿರುವ ಕಲ್ಯಾಣಿಯಂತೂ ನೀಲ ವರ್ಣದ ಜಲದಿಂದ ತುಂಬಿದ್ದು ಅತ್ಯದ್ಭುತವಾಗಿ ಕಾಣುತ್ತದೆ.

ಸೂರ್ಯದ ಸದಾಶಿವರುದ್ರ ದೇವಸ್ಥಾನ

ಚಿತ್ರಕೃಪೆ: M.S.Sunil

ಇಲ್ಲಿನ ಇನ್ನೊಂದು ವಿಶೇಷವೆಂದರೆ ಮಣ್ಣಿನ ಬೊಂಬೆಗಳು. ಹೌದು, ನಿಮ್ಮ ಇಚ್ಛೆ ಈಡೇರಿದರೆ ನೀವು ವ್ಯಯಕ್ತಿಕವಾಗಿ ಇಲ್ಲಿಗೆ ಭೇಟಿ ನೀಡಿ ನಿಮ್ಮ ಇಚ್ಛೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಣ್ಣಿನ ಬೊಂಬೆಯನ್ನು ಕೊಂಡು ದೇವಸ್ಥಾನದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅದನ್ನು ದೇವರಿಗೆಂದು ಅರ್ಪಿಸಬೇಕು. ನಂತರ ಈ ಉಡುಗೊರೆಗಳನ್ನು ಒಂದು ಕೊಣೆಯಲ್ಲಿ ಇಡಲಾಗುತ್ತದೆ. ಇದನ್ನು ಪ್ರಾರ್ಥನಾ ಮಂದಿರವೆಂದು ಕರೆಯುತ್ತಾರೆ.

ಪ್ರರ್ಥನಾ ಮಂದಿರದಲ್ಲಿ ನೀವು ದೇವರನ್ನು ಪ್ರಾರ್ಥಿಸಿ ಅವನಿಗೆ ಕೃತಜ್ಞತೆಗಳನ್ನು ಅರ್ಪಿಸಬಹುದು ಹಾಗೂ ಬೇಕಿದ್ದರೆ ಮತ್ತೆ ಏನಾದರೂ ಹರಕೆ ಹೊತ್ತುಕೊಳ್ಳಬಹುದು. ಇಲ್ಲಿರುವ ಅಪಾರ ಸಂಖ್ಯೆಯ ವೈವಿಧ್ಯಮಯ ಮಣ್ಣಿನ ಬೊಂಬೆಗಳು ಇಟ್ಟಿರುವುದನ್ನು ನೋಡಿದಾಗ ಈ ಕ್ಷೇತ್ರದ ಮಹಿಮೆಯನ್ನು ಊಹಿಸಿಕೊಳ್ಳಬಹುದು.

ಸೂರ್ಯದ ಸದಾಶಿವರುದ್ರ ದೇವಸ್ಥಾನ

ಚಿತ್ರಕೃಪೆ: M.S.Sunil

ಮೇಜು, ಕುರ್ಚಿಗಳಿಂದ ಹಿಡಿದು ಮನುಷ್ಯನ ವಿವಿಧ ಅಂಗಾಂಗಗಳು, ದೇಹ, ಗಣಕಯಂತ್ರ, ವಾಹನಗಳು, ವೈದ್ಯಕೀಯ ಉಪಕರಣಗಳು ಹೀಗೆ ಹಲವಾರು ವೈವಿಧ್ಯಮಯ ಮಣ್ಣಿನ ರಚನೆಗಳು ದೇವರಿಗೆ ಸಮರ್ಪಿಸಲು ದೊರೆಯುತ್ತವೆ. ಉದಾಹರಣೆಗೆ, ಯಾರಿಗಾದರು ಆರೋಗ್ಯ ಕೆಟ್ಟು, ಆ ಕುರಿತು ದೇವರಲ್ಲಿ ಪ್ರಾರ್ಥಿಸಿ ನಂತರ ಗುಣಮುಖ ಹೊಂದಿದರೆ ಅವರು ದೇಹದ ಮಣ್ಣಿನ ಬೊಂಬೆಯನ್ನು ಸಮರ್ಪಿಸಬೇಕು.

ಹೀಗೆ ಕೈ, ಕಾಲು, ಮಕ್ಕಳು, ಹೃದಯ, ಕಿವಿಗಳು, ಕಣ್ಣುಗಳು, ಇಲಿ, ಕೋಳಿ, ನಾಯಿ, ಪುಸ್ತಕ, ಪೆನ್ನು, ನೋಟು, ದ್ವಿಚಕ್ರ ವಾಹನ ಹಾಗೂ ಇನ್ನೂ ಅನೇಕ ಬಗೆಯ ಮಣ್ಣಿನ ರಚನೆಗಳು ಹರಕೆಯ ಉಡುಗೊರೆಗಳಾಗಿ ದೊರೆಯುತ್ತವೆ. ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಬಯಕೆ ಈಡೇರಿದ್ದಲ್ಲಿ ಮಾತ್ರವೆ ನೀವು ಉಡುಗೊರೆಗಳನ್ನು ಒಪ್ಪಿಸಲು ಅರ್ಹರು.

ನಿಮಗಿಷ್ಟವಾಗಬಹುದಾದ : ಸುಂದರ ಶಿಲ್ಪಕಲೆಯ ಬಳ್ಳಿಗಾವಿ

ಕರ್ನಾಟಕದ ಇತರೆ ಭಾಗಗಳಿಂದ ಇಲ್ಲಿಗೆ ಬರಲಿಚ್ಛಿಸುವವರು ರೈಲು ಹಾಗೂ ಬಸ್ಸುಗಳ ಮೂಲಕ ಮಂಗಳೂರು ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸ್ಥಳೀಯವಾಗಿ ಬಾಡಿಗೆಗೆ ದೊರಕುವ ಜೀಪು ಹಾಗೂ ಖಾಸಗಿ ಬಸ್ಸುಗಳ ಮೂಲಕ ಧರ್ಮಸ್ಥಳ ತಲುಪಿ ಇಲ್ಲವೆ ಉಜಿರೆ ತಲುಪಿ ಅಲ್ಲಿಂದ ರಿಕ್ಷಾಗಳ ಮೂಲಕ ಇಲ್ಲಿಗೆ ತಲುಪಬಹುದು.

ಮಂಗಳೂರಿಗಿರುವ ರೈಲುಗಳು

ಕುಕ್ಕೆಗಿರುವ ರೈಲುಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X