Search
  • Follow NativePlanet
Share
» »ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ

ಶ್ರೀಶೈಲಂ ಆಣೆಕಟ್ಟು : ಮೂರನೇಯ ದೊಡ್ಡ ಜಲವಿದ್ಯುತ್ ಉತ್ಪಾದಕ

By Vijay

ಹೌದು ಧಾರ್ಮಿಕ ಪ್ರಖ್ಯಾತಿಯ ಶ್ರೀಶೈಲಂ ಬಳಿ ಈ ಅದ್ಭುತ ಜಲವಿದ್ಯುತ್ ಉತ್ಪಾದನಾ ಆಣೆಕಟ್ಟನ್ನು ಕಾಣಬಹುದು. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಆಣೆಕಟ್ಟು ದೇಶದಲ್ಲೆ ಮೂರನೇಯ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುವ ಆಣೆಕಟ್ಟು ಎಂಬ ಖ್ಯಾತಿಗೆ ಒಳಗಾಗಿದೆ. ಇಲ್ಲಿ ಉತ್ಪಾದನೆಗೊಳ್ಳುವ ವಿದ್ಯುತ್ತಿನ ಒಟ್ಟು ಸಾಮರ್ಥ್ಯ 1670 ಮೆಗಾ ವಾಟ್ (MW).

476 ಅಡಿಗಳಷ್ಟು ಎತ್ತರ, 1680 ಅಡಿಗಳಷ್ಟು ಉದ್ದವನ್ನು ಹೊಂದಿರುವ ಈ ವಿಶಾಲಕಾಯದ ಆಣೆಕಟ್ಟು ನಲ್ಲಮಲ ಪರ್ವತ ಶ್ರೇಣಿಗಳಲ್ಲಿ ನಿರ್ಮಿತವಾಗಿದ್ದು ಒಂದು ಬದಿಯಲ್ಲಿ ತೆಲಂಗಾಣ ರಾಜ್ಯದ ಗಡಿ ಇನ್ನೊಂದು ಬದಿಯಲ್ಲಿ ಆಂಧ್ರಪ್ರದೇಶ ರಾಜ್ಯದ ಗಡಿಗಳಿಗೆ ಹೊಂದಿಕೊಂಡಂತೆ ನೆಲೆಸಿದೆ.

ವಿಶಾಲಕಾಯದ ಶ್ರೀಶೈಲಂ ಆಣೆಕಟ್ಟು

ಚಿತ್ರಕೃಪೆ: Chintohere

ಈ ಅಗಾಧವಾದ ಜಲಾಶಯವು ಹೈದರಾಬಾದ್ ನಗರದಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿ ಸ್ಥಿತವಿದ್ದು, ಇಂದು ಪ್ರದೇಶದ ಉತ್ತಮ ಪ್ರವಾಸಿ ಆಕರ್ಷಣೆಯಾಗಿ ಜನರನ್ನು ಸೆಳೆಯುತ್ತಿದೆ. ಈ ಆಣೆಕಟ್ಟಿನ ನಿರ್ಮಾಣ ಕಾಮಗಾರಿಯನ್ನು 1960 ರಲ್ಲಿ ಪ್ರಾರಂಭಿಸಲಾಯಿತು ಹಾಗೂ ಇದು ಪೂರ್ಣಗೊಂಡು ಕಾರ್ಯಾರಂಭ ಮಾಡಿದ್ದು 1981 ರಲ್ಲಿ. ಇಪ್ಪತ್ತು ವರ್ಷಗಳಷ್ಟು ಸುದೀರ್ಘ ಕಾಲಾವಧಿಯನ್ನು ತೆಗೆದುಕೊಂಡಿದ್ದೂ ಸಹ ಇದರ ಅಗಾಧತೆಗೆ ಹಿಡಿದಿರುವ ಒಂದು ಕೈಗನ್ನಡಿಯಾಗಿದೆ.

ವಿಶಾಲಕಾಯದ ಶ್ರೀಶೈಲಂ ಆಣೆಕಟ್ಟು

ಚಿತ್ರಕೃಪೆ: Kashyap joshi

ಈ ವಿಶಾಲವಾದ ಆಣೆಕಟ್ಟು ತನ್ನಲ್ಲೆ ತಾನು ಒಂದು ವಿಶಿಷ್ಟ ರಚನೆಯಾಗಿದ್ದು, ನಲ್ಲಮಲ ಪರ್ವತ ಶ್ರೇಣಿಗಳ ಎರಡು ಬೆಟ್ಟಗಳ ಸಂದಿನಲ್ಲಿ ಆಕರ್ಷಕವಾಗಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಅದ್ಭುತವಾಗಿ ನಿರ್ಮಾಣಗೊಂಡಿದೆ. ನಿಜ ಹೇಳಬೇಕೆಂದರೆ, ಆಣೆಕಟ್ಟು ತಂತ್ರಜ್ಞಾನದ ಒಂದು ಭಾಗವಾಗಿದ್ದು ಸದುದ್ದೇಶದಿಂದ ನಿರ್ಮಾಣಗೊಂಡಿದೆ. ಜನರು ಈ ಆಕರ್ಷಕ ತಾಣಕ್ಕೆ ಆಣೆಕಟ್ಟು ನೋಡಬೇಕೆಂಬ ಬಯಕೆಗಿಂತಲೂ ಅಧಿಕವಾಗಿ ಇದರ ಸುತ್ತಮುತ್ತಲಿನ ಸೌಂದರ್ಯ ಹಾಗೂ ನೀಲಿ ಬಣ್ಣ ಹೊತ್ತು ಕಂಗೊಳಿಸುವ ಕೃಷ್ಣಾ ನದಿಯ ವಿಹಂಗಮ ನೋಟ ಸವಿಯಲು ಬರುತ್ತಾರೆ.

ವಿಶಾಲಕಾಯದ ಶ್ರೀಶೈಲಂ ಆಣೆಕಟ್ಟು

ಚಿತ್ರಕೃಪೆ: Srikar Kashyap

ಅಲ್ಲದೆ ಪ್ರದೇಶದಲ್ಲಿರುವ ಶ್ರೀಶೈಲಂ, ದೇಶದ 12 ಪವಿತ್ರ ಜ್ಯೋತಿರ್ಲಿಂಗ ಧಾಮಗಳ ಪೈಕಿ ಒಂದಾಗಿದ್ದು ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಪ್ರಖ್ಯಾತಿ ಪಡೆದಿದೆ. ಈ ಪ್ರಮುಖ ದೇವಸ್ಥಾನದ ಹೊರತಾಗಿ ಇಲ್ಲಿ ಹೇಮರೆಡ್ಡಿ ಮಲ್ಲಮನ ದೇವಸ್ಥಾನ ಹಾಗೂ 12 ನೇಯ ಶತಮಾನದ ಪ್ರಸಿದ್ಧ ಕವಿಯತ್ರಿ ಹಾಗೂ ವಚನಗಾರ್ತಿಯಾಗಿದ್ದ ಕರ್ನಾಟಕದ ಅಕ್ಕಮಹಾದೇವಿಯ ಗುಹೆಗಳನ್ನು ನೋಡಬಹುದಾಗಿದೆ. ಈ ಎರಡೂ ಪವಿತ್ರ ಸ್ಥಳಕ್ಕೆ ದರುಶನ ಕೋರಿಯೂ ಸಾಕಷ್ಟು ಭಕ್ತಾದಿಗಳು ಸುತ್ತಮುತ್ತಲಿನ ಸ್ಥಳಗಳಿಂದ ಇಲ್ಲಿಗೆ ಆಗಮಿಸುತ್ತಾರೆ.

ವಿಶಾಲಕಾಯದ ಶ್ರೀಶೈಲಂ ಆಣೆಕಟ್ಟು

ಚಿತ್ರಕೃಪೆ: Santoshtherock

ಸಾಮಾನ್ಯವಾಗಿ ಮಳೆಯಿಂದ ಹರಿದು ಬರುವ ನೀರು ಈ ಆಣೆಕಟ್ಟಿನ ಜಲಾಶಯದಲ್ಲಿ ಸಂಗ್ರಹಗೊಳ್ಳುತ್ತದೆ. ಒಂದು ವೇಳೆ ಆ ನೀರಿನ ಪ್ರಮಾಣ ಜಾಸ್ತಿಯಾದಲ್ಲಿ ನೀರನ್ನು ಕ್ರೆಸ್ಟ್ ಗೇಟುಗಳ ಮೂಲಕ ಹರಿದು ಬಿಡಲಾಗುತ್ತದೆ. ಇದು ಮುಂದೆ ಹರಿಯುತ್ತ ನಾಗಾರ್ಜುನ ಸಾಗರ ಜಲಾಶಯಕ್ಕೆ ತೆರಳುತ್ತದೆ. ನೀವು ಅದೃಷ್ಟಶಾಲಿಗಳಾಗಿದ್ದರೆ ಇಲ್ಲಿ ನೀರು ಬಿಡುವಾಗ ಕಂಡುಬರುವ ಆ ನೋಟ ಎಂತಹವರಾದರೂ ಸರಿ ಅವರ ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ಅಲ್ಲದೆ ಕೃಷ್ಣಾ ನದಿಯೂ ಸಹ ಪವಿತ್ರವಾಗಿರುವುದರಿಂದ ಇಲ್ಲಿ ಹರಿದಿರುವ ಆ ನದಿಯಲ್ಲಿ ಸಾಕಷ್ಟು ಜನ ಭಕ್ತಾದಿಗಳು ಸ್ನಾನ ಮಾಡಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.

ವಿಶಾಲಕಾಯದ ಶ್ರೀಶೈಲಂ ಆಣೆಕಟ್ಟು

ಚಿತ್ರಕೃಪೆ: Amit Chattopadhyay

ಇನ್ನು ಶ್ರೀಶೈಲಂಗೆ ತೆರಳಲು ಸಾಕಷ್ಟು ಬಸ್ಸುಗಳು ಹೈದರಾಬಾದ್ ನಗರದಿಂದ ದೊರೆಯುತ್ತವೆ. ತೆರಳುವ ಬಗೆಯ ಕುರಿತು ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಆದರೆ ಒಂದು ಗಮನದಲ್ಲಿಡಬೇಕಾದ ಅಂಶವೆಂದರೆ ಹೈದರಾಬಾದ್ - ಶ್ರೀಶೈಲಂ ರಸ್ತೆಯಲ್ಲಿ ರಾತ್ರಿಯಲ್ಲಿ ಹೊರಡುವುದನ್ನು ತ್ಯಜಿಸಿ. ಏಕೆಂದರೆ ಈ ರಸ್ತೆಯು ರಾತ್ರಿಯ ಸಮಯದಲ್ಲಿ ಮುಚ್ಚಿರುತ್ತದೆ. ಶ್ರೀಶೈಲಂ ಆಣೆಕಟ್ಟು ಪ್ರವಾಸಿಗರಿಗಾಗಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ತೆರೆದಿರುತ್ತದೆ. ನವಂಬರ್ ನಿಂದ ಜನವರಿ, ಫೆಬ್ರುವರಿಯವರೆಗೂ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ನಿಮಗಿಷ್ಟವಾಗಬಹುದಾದ ಲೇಖನಗಳು:

ಹೈದರಾಬಾದ್ ನಗರದ ಮುತ್ತಿನಂತಹ ಆಕರ್ಷಣೆಗಳುಹೈದರಾಬಾದ್ ನಗರದ ಮುತ್ತಿನಂತಹ ಆಕರ್ಷಣೆಗಳು

ಕರ್ನಾಟಕದಲ್ಲಿರುವ ಆಕರ್ಷಕ ಆಣೆಕಟ್ಟುಗಳುಕರ್ನಾಟಕದಲ್ಲಿರುವ ಆಕರ್ಷಕ ಆಣೆಕಟ್ಟುಗಳು

ಕೇರಳದಲ್ಲಿರುವ ಅದ್ಭುತ ಜಲಾಶಯಗಳುಕೇರಳದಲ್ಲಿರುವ ಅದ್ಭುತ ಜಲಾಶಯಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X