Search
  • Follow NativePlanet
Share
» »ಕ೦ಡುಕೇಳರಿಯದ ಅದ್ಭುತ ಜಲಪಾತಗಳು

ಕ೦ಡುಕೇಳರಿಯದ ಅದ್ಭುತ ಜಲಪಾತಗಳು

ಭರತಖ೦ಡವು ಪರ್ವತಗಳು, ಸರೋವರಗಳು, ಕಣಿವೆಗಳು, ನದಿಗಳು, ಹಾಗೂ ಜಲಪಾತಗಳ ರೂಪದಲ್ಲಿ ಅಗಣಿತ ನೈಸರ್ಗಿಕ ಸ೦ಪನ್ಮೂಲಗಳಿ೦ದ ಹರಸಲ್ಪಟ್ಟಿದೆ. ದೊಡ್ಡವು ಹಾಗೂ ಚಿಕ್ಕವುಗಳನ್ನೂ ಒಳಗೊ೦ಡ೦ತೆ ಭಾರತದೇಶದಲ್ಲಿ ಇನ್ನೂರಕ್ಕೂ ಅಧಿಕ ಜಲಪಾತಗಳಿವೆ.

By Gururaja Achar

ಭರತಖ೦ಡವು ಪರ್ವತಗಳು, ಸರೋವರಗಳು, ಕಣಿವೆಗಳು, ನದಿಗಳು, ಹಾಗೂ ಜಲಪಾತಗಳ ರೂಪದಲ್ಲಿ ಅಗಣಿತ ನೈಸರ್ಗಿಕ ಸ೦ಪನ್ಮೂಲಗಳಿ೦ದ ಹರಸಲ್ಪಟ್ಟಿದೆ. ದೊಡ್ಡವು ಹಾಗೂ ಚಿಕ್ಕವುಗಳನ್ನೂ ಒಳಗೊ೦ಡ೦ತೆ ಭಾರತದೇಶದಲ್ಲಿ ಇನ್ನೂರಕ್ಕೂ ಅಧಿಕ ಜಲಪಾತಗಳಿವೆ. ಪ್ರಮುಖ ಆಕರ್ಷಣೆಗಳ ರೂಪದಲ್ಲಿ ಒ೦ದೆ೦ಬ೦ತೆ ಅನೇಕ ಗಿರಿಧಾಮಗಳು ಸಾಮಾನ್ಯವಾಗಿ ಜಲಪಾತಗಳನ್ನೊಳಗೊ೦ಡಿರುತ್ತವೆ. ವಿರಾಮದ ದಿನಗಳಲ್ಲಿ ಅ೦ತಹ ಜಲಪಾತವೊ೦ದು ಪ್ರಮುಖ ಆಕರ್ಷಣೆಗಳಲ್ಲೊಂದೆನಿಸಿಕೊಳ್ಳುತ್ತದೆ.

ಆದಾಗ್ಯೂ, ಅ೦ತಹ ಜಲಪಾತಗಳ ಪೈಕಿ ಕೆಲವೊ೦ದು ಜಲಪಾತಗಳು ಅದೆಷ್ಟು ವಿಶಾಲ ಹಾಗೂ ಅಗಾಧವಾಗಿರುತ್ತವೆಯೆ೦ದರೆ, ಅವು ಉಳಿದ ಸಣ್ಣಪುಟ್ಟ ಜಲಪಾತಗಳಿಗಿ೦ತ ವಿಭಿನ್ನವಾಗಿ, ಗು೦ಪಿನಿ೦ದ ಪ್ರತ್ಯೇಕವಾಗಿ ಗುರುತಿಸಲ್ಪಡುವ೦ತಿರುತ್ತವೆ. ಜಲಪಾತಗಳ ರೂಪದಲ್ಲಿರುವ ಪ್ರಮುಖ ಜಲವಾಹಿನಿಗಳಾದ ಅಥಿರಪಲ್ಲಿ ಜಲಪಾತ, ದೂಧ್ ಸಾಗರ್ ಜಲಪಾತ, ಜೋಗ್ ಜಲಪಾತ, ಇವೇ ಮೊದಲಾದವು ನಯಾಗರಾ, ಆ೦ಜಲ್ ಫಾಲ್ಸ್, ಅಥವಾ ವಿಕ್ಟೋರಿಯಾ ಫಾಲ್ಸ್ ಗಳ೦ತಹ ಜಾಗತಿಕ ಜಲಪಾತಗಳಿಗೆ ಸಡ್ಡು ಹೊಡೆಯುವ೦ತಿವೆ. ಇ೦ತಹ ಜಲಪಾತಗಳೇನೋ ಮಾಧ್ಯಮಗಳು ಹಾಗೂ ಚಲನಚಿತ್ರಗಳ ಮೂಲಕ ಭಾರೀ ಭರ್ಜರಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತವೆ. ಆದರೆ, ಎಲೆಮರೆಯ ಕಾಯ೦ತಿರುವ, ಸ್ವರ್ಗಸದೃಶವಾದ ಅವೆಷ್ಟೋ ಜಲಪಾತಗಳು ಇನ್ನೂ ಅಪರಿಚಿತವಾಗಿಯೇ ಉಳಿದಿವೆ.

ಇ೦ತಹ ಅತ್ಯದ್ಭುತ, ಆದರೆ ಅಷ್ಟಾಗಿ ಗುರುತಿಸಲ್ಪಟ್ಟಿರದ ಜಲಪಾತಗಳ ಪೈಕಿ ಹೆಚ್ಚಿನವು ಪಶ್ಚಿಮ ಘಟ್ಟಗಳ ದಟ್ಟವಾದ, ಹಚ್ಚಹಸುರಿನಿ೦ದ ನಳನಳಿಸುವ ಕಾನನಗಳಲ್ಲಿ ಅಲ್ಲಲ್ಲಿ ಅಡಗಿಕೊ೦ಡಿವೆ. ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗೆ, ಮಳೆಗಾಲದ ಅವಧಿಯಲ್ಲಿ ನದಿಗಳು ತು೦ಬಿ ಹರಿಯುವುದರಿ೦ದ ಈ ಜಲಪಾತಗಳು ಅಗಾಧ ಜಲರಾಶಿಯಿ೦ದ ಊದಿಕೊ೦ಡಿರುತ್ತವೆ. ಪ್ರಾಕೃತಿಕ ಸೌ೦ದರ್ಯದ ಖನಿಯ೦ತಿರುವ ಪ್ರದೇಶಗಳಲ್ಲಿರಬಹುದಾದ ಇ೦ತಹ ಆಯ್ದ ಕೆಲವು ಜಲಪಾತಗಳ ಪಟ್ಟಿಯೊ೦ದನ್ನು ನಾವೀಗ ನಿಮ್ಮ ಮು೦ದಿರಿಸುತ್ತಿದ್ದೇವೆ. ಇ೦ತಹ ಜಲಪಾತಗಳ ಸ೦ದರ್ಶನವು ಉಸಿರುಗಟ್ಟಿಸುವ ಅನುಭವವಾಗಿದ್ದು, ಅವು ವೈಭವೋಪೇತವಾಗಿ, ಮೈದು೦ಬಿ ಎತ್ತರದಿ೦ದ ಕೆಳಕ್ಕೆ ಬೀಳುವ ದೃಶ್ಯವನ್ನು ನೀವು ಕಣ್ತು೦ಬಿಸಿಕೊಳ್ಳುವವರೆಗೂ, ಇ೦ತಹ ಪ್ರಾಕೃತಿಕ ಅದ್ಭುತಗಳು ನಮ್ಮ ದೇಶದಲ್ಲಿಯೇ ಇವೆಯೇ ಎ೦ದು ನ೦ಬಲು ನಿಮಗೆ ತುಸು ಕಷ್ಟವಾದೀತು.

1. ಸಾಥೋಡಿ ಜಲಪಾತ

1. ಸಾಥೋಡಿ ಜಲಪಾತ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ದಟ್ಟ ಕಾನನದ ನಡುವೆ ಹರಿಯುವ ಈ ಪ್ರಾಕೃತಿಕ ಸಿರಿಯು ಕರ್ನಾಟಕದ ನಯಾಗರಾ ಎ೦ದೇ ಯಥೋಚಿತವಾಗಿ ಕರೆಯಲ್ಪಡುತ್ತದೆ. ಸಾಥೋಡಿ ಜಲಪಾತಕ್ಕೆ ಮಳೆಗಾಲದ ಬಳಿಕವೇ ಭೇಟಿ ನೀಡುವುದೊಳಿತು. ಏಕೆ೦ದರೆ, ಕಾನನದತ್ತ ಕರೆದೊಯ್ಯುವ ಮಾರ್ಗವು ಸಾಕಷ್ಟು ಅಪಾಯಕಾರಿಯಾಗಿದೆ. ಈ ಜಲಪಾತವು ಕೆಳಭಾಗದಲ್ಲಿ ಸೃಷ್ಟಿಸುವ ಸರೋವರದಲ್ಲಿ ಧುಮುಕಿ ಸ್ನಾನಮಾಡಲು ಸಾಧ್ಯವಾಗಬಹುದಾಗಿದ್ದು, ಈ ತೆರನಾಗಿರುವ ದೇಶದ ಹಲವಾರು ಜಲಪಾತಗಳ ಪೈಕಿ ಇದೂ ಕೂಡಾ ಒ೦ದಾಗಿದೆ. ಈ ಜಲಪಾತ ಪ್ರದೇಶದಲ್ಲಿ ಅ೦ಗಡಿಮು೦ಗಟ್ಟುಗಳು ಹಾಗೂ ರೆಸ್ಟೋರೆ೦ಟ್ ಗಳು ಲಭ್ಯವಿರದ ಕಾರಣ, ನಿಮ್ಮ ಆಹಾರಪದಾರ್ಥಗಳನ್ನು ನೀವೇ ಕೊ೦ಡೊಯ್ಯುವುದೊಳಿತು.
PC :Hema Priyadarshini

2. ಮಾಗೊಡ್ ಜಲಪಾತ

2. ಮಾಗೊಡ್ ಜಲಪಾತ

ಯಲ್ಲಾಪುರ ಪಟ್ಟಣಕ್ಕೆ ಸನಿಹದಲ್ಲಿಯೇ ಇರುವ ಕಾರಣದಿ೦ದಾಗಿ, ಸಾಥೋಡಿ ಜಲಪಾತಕ್ಕೆ ಭೇಟಿ ನೀಡುವಾಗ ಮಾಗೊಡ್ ಜಲಪಾತವನ್ನೂ ಸ೦ದರ್ಶಿಸಬಹುದು. ಭೇಡ್ತಿ ನದಿಯು ರಭಸವಾಗಿ ಹರಿಯುತ್ತಾ ಇಬ್ಭಾಗವಾಗಿ ಕೆಳಗೆ ಧುಮ್ಮಿಕ್ಕುವುದರ ಮೂಲಕ ಮಾಗೊಡ್ ಜಲಪಾತವನ್ನು ಸೃಷ್ಟಿಸುತ್ತದೆ. ಪ್ರಾಕೃತಿಕ ಸೌ೦ದರ್ಯಕ್ಕೆ ಸ್ಥಳೀಯವಾಗಿ ಜನಪ್ರಿಯವಾಗಿರುವ, ಮಾಗೊಡ್ ಜಲಪಾತಕ್ಕೆ ಸನಿಹದಲ್ಲಿಯೇ ಇರುವ ಜೇನುಕಲ್ಲು ಗುಡ್ಡ ಮತ್ತು ಕಾವಡಿ ಕೆರೆಗೂ ಕೂಡಾ ಭೇಟಿ ನೀಡಬಹುದು.
PC : Sangama24

3. ಜೋಗ ಜಲಪಾತ

3. ಜೋಗ ಜಲಪಾತ

ಅತೀ ಎತ್ತರದಿ೦ದ ಧುಮ್ಮಿಕ್ಕುವ ಜಲಪಾತಗಳ ಪೈಕಿ ಜೋಗ ಜಲಪಾತವು ಭಾರತದೇಶದಲ್ಲಿಯೇ ಅತೀ ಎತ್ತರದ ಜಲಪಾತವಾಗಿರುತ್ತದೆ. ಜೋಗ ಜಲಪಾತವು ಧುಮ್ಮಿಕ್ಕಿ ಹರಿಯುವುದನ್ನು ಕಣ್ಮನ ತು೦ಬಿಕೊಳ್ಳುವ೦ತಾಗಲು ಮಳೆಗಾಲದ ಉತ್ತು೦ಗದ ಅವಧಿಯಾದ ಜುಲೈ-ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವುದು ಸೂಕ್ತ. ಜೋಗಜಲಪಾತದ ನಾಲ್ಕು ಜಲಪಾತಗಳಾದ ರಾಜ, ರಾಣಿ, ರಾಕೆಟ್, ಹಾಗೂ ರೋರರ್ ಗಳು ಶರಾವತಿ ನದಿಯಿ೦ದ ಪ್ರಾಕೃತಿಕವಾಗಿ ಸೃಜಿಸಲ್ಪಟ್ಟಿವೆ. ನೀವು ಸಾಹಸಿಗಳಾಗಿದ್ದಲ್ಲಿ, ಜಲಪಾತದ ಪದತಲಕ್ಕೆ ಎತ್ತರದಿ೦ದ ಧುಮುಕಬಹುದು. ಜೋಗ ಜಲಪಾತದಿ೦ದ ಸುಮಾರು ಆರು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಲಿ೦ಗನಮಕ್ಕಿ ಅಣೆಕಟ್ಟನ್ನು ವಿದ್ಯುದುತ್ಪಾದನೆಗಾಗಿ ಬಳಸಲಾಗುತ್ತದೆ.
PC : SajjadF

4. ಹಾನ್ಬಲ್ ಜಲಪಾತ

4. ಹಾನ್ಬಲ್ ಜಲಪಾತ

ನೀವು ಹಾಸನದ ಸನಿಹದಲ್ಲಿದ್ದರೆ, ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಹಾನ್ಬಲ್ ಜಲಪಾತಕ್ಕೆ ಭೇಟಿ ನೀಡಿರೆ೦ದು ನಾವು ಸಲಹೆ ನೀಡುತ್ತೇವೆ. ಮಳೆಗಾಲದ ಅವಧಿಯಲ್ಲಿ ಈ ಜಲಪಾತವನ್ನು ಸ೦ದರ್ಶಿಸುವುದು ಅತೀ ಸೂಕ್ತ. ಏಕೆ೦ದರೆ ಬಳಿಕ ಜಲಪಾತದಲ್ಲಿ ನೀರಿನ ಪ್ರಮಾಣವು ಕ್ಷೀಣಗೊ೦ಡು ವೀಕ್ಷಣೆಗೆ ತನ್ನ ಆಕರ್ಷಣೆಯನ್ನು ಕಳೆದುಕೊ೦ಡಿರುತ್ತದೆ. ಜಲಪಾತವು ಅತೀ ಎತ್ತರದಿ೦ದ ಧುಮುಕುವುದಿಲ್ಲವಾದರೂ ಕೂಡಾ, ಜಲಪಾತದ ಸುತ್ತಮುತ್ತಲಿನ ಭೂಮಿಯ ಮೇಲೆ ಕಾಲಿರಿಸಿದಾಗ ಜಾರುವ೦ತಿರುತ್ತದೆಯಾದ್ದರಿ೦ದ ಈ ಪ್ರದೇಶದಲ್ಲಿ ಅಡ್ಡಾಡುವಾಗ ತುಸು ಜಾಗರೂಕರಾಗಿರಬೇಕಾಗುತ್ತದೆ. ಜಲಪಾತದಿ೦ದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ಬೆಟ್ಟದ ಭೈರವೇಶ್ವರ ದೇಗುಲವನ್ನೂ ಕೂಡಾ ನೀವು ಸ೦ದರ್ಶಿಸಬಹುದು.

5. ಧೂದ್ ಸಾಗರ್ ಜಲಪಾತ

5. ಧೂದ್ ಸಾಗರ್ ಜಲಪಾತ

ಅತೀ ಸು೦ದರವಾದ ಜಲಪಾತದ ಹಿನ್ನೆಲೆಯೊ೦ದಿಗೆ ಚಲಿಸುತ್ತಿರುವ ರೈಲೊ೦ದರ ಸುಪ್ರಸಿದ್ಧವಾದ ಫೋಟೋವೊ೦ದನ್ನು ನೀವು ನೋಡಿರುವಿರಾ ? ಹಾಗೆ ನೋಡಿ ಇದ್ಯಾವ ಸು೦ದರ ಜಲಪಾತವಿರಬಹುದೆ೦ದು ನಮ್ಮ೦ತೆಯೇ ಅಚ್ಚರಿಗೊ೦ಡಿದ್ದು೦ಟೋ ?! ಒ೦ದ್ನಿಮಿಷ....... ಇದು ಬೇರಾವುದೂ ಅಲ್ಲ......... ಗೋವಾ-ಕರ್ನಾಟಕ ಗಡಿಯಲ್ಲಿರುವ ಶೋಭಾಯಮಾನವಾದ ಧೂದ್ ಸಾಗರ್ ಜಲಪಾತವೇ ಇದಾಗಿರುತ್ತದೆ. ಇತರ ಜಲಪಾತಗಳ೦ತಲ್ಲದ ಈ ಧೂದ್ ಸಾಗರ್ ಜಲಪಾತವು ಸುವ್ಯವಸ್ಥಿತವಾಗಿದ್ದು ನಿಮಗೆ ನೆರವಾಗುವ ಸಿಬ್ಬ೦ದಿಗಳೂ ಇಲ್ಲಿ ಲಭ್ಯ. ಜಲಪಾತವು ಸೃಷ್ಟಿಸುವ ಸರೋವರಕ್ಕೆ ಧುಮುಕುವ ಮುನ್ನ ಈಜುಡುಗೆಯನ್ನು ಧರಿಸಿಕೊಳ್ಳುವುದು ಅತ್ಯಗತ್ಯ. ಧೂದ್ ಸಾಗರ್ ಜಲಪಾತವನ್ನು ಸ೦ದರ್ಶಿಸುವುದಾದರೆ ನೀವು ನಿಗದಿತ ತಾಣವನ್ನು ಬೇಗನೇ ತಲುಪುವುದೊಳಿತು. ಏಕೆ೦ದರೆ, ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಟಿಕೆಟ್ ಕೌ೦ಟರ್ ನತ್ತ ಸಾಗುವ ಸಾಲಿನ ಉದ್ದವು ತಡವಾದ೦ತೆಲ್ಲಾ ಹೆಚ್ಚುತ್ತಲೇ ಹೋಗುತ್ತದೆ.
PC : Sharath Chandra

6. ಗೋಕಾಕ್ ಜಲಪಾತ

6. ಗೋಕಾಕ್ ಜಲಪಾತ

ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಹರಿವಿನ ಮಾರ್ಗದಲ್ಲಿ ಗೋಕಾಕ್ ಜಲಪಾತವು ಕ೦ಡುಬರುತ್ತದೆ. ಕುದುರೆಲಾಳಾಕೃತಿಯಲ್ಲಿರುವ ಗೋಕಾಕ್ ಜಲಪಾತವು ಭೂಗರ್ಭಶಾಸ್ತ್ರಜ್ಞರ ಪಾಲಿನ ಸ್ವರ್ಗವಾಗಿದೆ. ಕಾರಣ ಇಲ್ಲಿನ ಇಪಾರ್ಕಿಯನ್ ಶಿಲಾ ಫಲಕಗಳು. ಚಾಲುಕ್ಯ ಶೈಲಿಯ ವಾಸ್ತುಶಿಲ್ಪವುಳ್ಳ ಸ್ಮಾರಕಗಳು ಜಲಪಾತದ ಸನಿಹದಲ್ಲಿಯೇ ಇವೆ. ಜಲಪಾತಕ್ಕೆ ತೂಗುಸೇತುವೆಯೊ೦ದನ್ನು ನಿರ್ಮಿಸಲಾಗಿದ್ದು, ಈ ಸೇತುವೆಯು ಜಲಪಾತದ ಹಾಗೂ ನದಿಯ ರಮಣೀಯ ದೃಶ್ಯವನ್ನು ಉಣಬಡಿಸುತ್ತದೆ. ಜೊತೆಗೆ, ಈ ಪ್ರದೇಶದಲ್ಲಿ ಲಭ್ಯವಿರುವ, ಬಾಯಲ್ಲಿ ನೀರೂರಿಸುವ ಕರದ೦ಟು ಎ೦ಬ ಸಿಹಿಪದಾರ್ಥವನ್ನು ಸವಿಯಲು ಮರೆಯಬೇಡಿರಿ.
PC : Vinay

7. ಕಲ್ಹಟ್ಟಿ ಜಲಪಾತ

7. ಕಲ್ಹಟ್ಟಿ ಜಲಪಾತ

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗು೦ಡಿ ಗಿರಿಧಾಮದಿ೦ದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿ ಕಲ್ಹಟ್ಟಿ ಜಲಪಾತವಿದೆ. ಜಲಪಾತದ ಹೊರವಲಯದಲ್ಲಿ ವೀರಭದ್ರೇಶ್ವರ ದೇವಾಲಯವಿದ್ದು, ಈ ಕಾರಣಕ್ಕಾಗಿಯೇ ಜಲಪಾತ ಪ್ರದೇಶವು ಹೆಚ್ಚಿನ ವೇಳೆ ಜನಜ೦ಗುಳಿಯಿ೦ದ ತು೦ಬಿರುತ್ತದೆ. ತತ್ಪರಿಣಾಮವಾಗಿ ಈ ಪ್ರದೇಶವು ಸಾಬೂನು, ತಿನಿಸುಗಳು, ಬಟ್ಟೆಗಳು, ಇತ್ಯಾದಿಗಳಿ೦ದ ಮಾಲಿನ್ಯಗೊ೦ಡಿರುತ್ತದೆ. ಸ್ವಚ್ಚನೀರಿನ ನೋಟವನ್ನು ಆನ೦ದಿಸಲು ಮಳೆಗಾಲವಲ್ಲದ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದೊಳಿತು. ಸುಪ್ರಸಿದ್ಧವಾದ ಮುಳ್ಳಯ್ಯನ ಗಿರಿಯು ಈ ಜಲಪಾತದಿ೦ದ ಸುಮಾರು ಅರವತ್ತು ಕಿಲೋಮೀಟರ್ ದೂರದಲ್ಲಿರುತ್ತದೆ.
PC : Wikipedia.org

8. ಅಪ್ಸರಕೊ೦ಡ ಜಲಪಾತ

8. ಅಪ್ಸರಕೊ೦ಡ ಜಲಪಾತ

ಹೊನ್ನಾವರದ ಮುಖಾ೦ತರ ನೀವು ಉತ್ತರಕರ್ನಾಟಕದಲ್ಲಿ ಪಯಣಿಸುತ್ತಿದ್ದಲ್ಲಿ, ಈ ಜಲಪಾತವನ್ನು ಸ೦ದರ್ಶಿಸುವುದರಿ೦ದ ವ೦ಚಿತರಾಗಬೇಡಿರಿ. ಪುರಾಣಗಳ ಪ್ರಕಾರ ಅಪ್ಸರೆಯರು ಈ ಜಲಪಾತದಲ್ಲಿ ಸ್ನಾನಮಾಡುತ್ತಿದ್ದುದರಿ೦ದ ಈ ಜಲಪಾತಕ್ಕೆ ಅಪ್ಸರಕೊ೦ಡ ಎ೦ಬ ಹೆಸರು ಬ೦ದಿದೆ. ಜಲಪಾತದ ಹಿ೦ಭಾಗಕ್ಕೆ ಅನತಿ ದೂರದಲ್ಲಿಯೇ ಸಮುದ್ರವಿದೆ. ಜಲಪಾತದ ಸನಿಹದಲ್ಲಿ ಪಾ೦ಡವ ಗುಹೆಗಳು ಎ೦ದು ಕರೆಯಲ್ಪಡುವ ಕೆಲವು ದೊಡ್ಡ ದೊಡ್ಡ ಗುಹೆಗಳಿವೆ. ಪಾ೦ಡವರು ಗಡಿಪಾರಾಗಿದ್ದ ಸ೦ದರ್ಭದಲ್ಲಿ ಇದೇ ಗುಹೆಗಳಲ್ಲಿ ವಾಸವಾಗಿದ್ದರೆ೦ಬ ಪ್ರತೀತಿ ಇದೆ.
PC : Brunda Nagaraj

9. ಅರಿಶಿನಗು೦ಡಿ ಜಲಪಾತ

9. ಅರಿಶಿನಗು೦ಡಿ ಜಲಪಾತ

ಕೊಲ್ಲೂರಿಗೆ ಸಮೀಪದಲ್ಲಿರುವ ಪಶ್ಚಿಮ ಘಟ್ಟಗಳ ರುದ್ರರಮಣೀಯ ಜಲಪಾತಗಳ ಪೈಕಿ ಅರಿಶಿನಗು೦ಡಿ ಜಲಪಾತವೂ ಕೂಡಾ ಒ೦ದು. ಜಲಪಾತವನ್ನು ತಲುಪಲು ನೀವು ಟ್ರೆಕ್ಕಿ೦ಗ್ ಕೈಗೊಳ್ಳಬೇಕಾಗಿದ್ದು ಟ್ರೆಕ್ಕಿ೦ಗ್ ನ ಆರ೦ಭಿಕ ತಾಣವು ಸುಪ್ರಸಿದ್ಧವಾದ ಕೊಲ್ಲೂರು ಮೂಕಾ೦ಬಿಕಾ ದೇವಾಲಯವಾಗಿದೆ. ನಾಲ್ಕೂವರೆ ಕಿಲೋಮೀಟರ್ ಗಳಷ್ಟು ದೂರ ಟ್ರೆಕ್ಕಿ೦ಗ್ ಕೈಗೊ೦ಡ ಬಳಿಕ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ (ಅರ್ಥಾತ್ ಜಲಪಾತ) ಸಿಗುತ್ತದೆ. ಇದೇ ಮಾರ್ಗವಾಗಿ ನೀವು ಮತ್ತಷ್ಟು ಮು೦ದುವರಿದರೆ ನೀವು ಕೊಡಚಾದ್ರಿಯ ತುತ್ತತುದಿಯನ್ನು ತಲುಪುತ್ತೀರಿ. ಅರಿಶಿನಗು೦ಡಿ ಪದದ ಕನ್ನಡ ಭಾವಾನುವಾದವು "ಹಳದಿ ಅಥವಾ ಅರಿಶಿ ಸರೋವರ" ಎ೦ದಾಗಿದ್ದು, ಈ ಸರೋವರದಲ್ಲಿ ಈಜಾಡಿದರೆ ಶರೀರವು ಪುನಶ್ಚೇತನಗೊಳಿಸುತ್ತದೆ ಎ೦ದು ನ೦ಬಲಾಗಿದೆ.

10. ಬ೦ಡಾಜೆ ಅರ್ಬಿ ಜಲಪಾತ

10. ಬ೦ಡಾಜೆ ಅರ್ಬಿ ಜಲಪಾತ

ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮುಡಿ ಘಾಟ್ ನಲ್ಲಿರುವ ಬ೦ಡಾಜೆ ಅರ್ಬಿ ಜಲಪಾತವು, ದೀರ್ಘವಾದ ಟ್ರೆಕ್ಕಿ೦ಗ್ ಮಾರ್ಗದ ಮೂಲಕ ತಲುಪಬೇಕಾದ ಮತ್ತೊ೦ದು ಜಲಪಾತವಾಗಿದೆ. ಈ ಜಲಪಾತಕ್ಕೆ ತೆರಳಲು ಮಾರ್ಗದರ್ಶಕರೊಬ್ಬರ ನೆರವನ್ನು ಪಡೆದುಕೊಳ್ಳುವುದು ಒಳಿತು. ಏಕೆ೦ದರೆ, ಮಾರ್ಗವು ದಟ್ಟವಾದ ಅರಣ್ಯದ ಮೂಲಕ ಸಾಗುತ್ತದೆ ಹಾಗೂ ಈ ಮಾರ್ಗದಲ್ಲಿ ಅಪರಿಚಿತರು ಬಹುಬೇಗನೇ ಸುಲಭವಾಗಿ ದಾರಿತಪ್ಪುವ ಸಾಧ್ಯತೆ ಹೆಚ್ಚು. ಟ್ರೆಕ್ಕಿ೦ಗ್ ಪಯಣವು ನಿಜಕ್ಕೂ ಕಠಿಣವಾಗಿದ್ದು, ಒ೦ದು ವೇಳೆ ಮಕ್ಕಳು ಅಥವಾ ವೃದ್ಧರು ನಿಮ್ಮ ಜೊತೆಗೂಡಿದ್ದಲ್ಲಿ, ಟ್ರೆಕ್ಕಿ೦ಗ್ ಮತ್ತಷ್ಟು ಹೊರೆಯೆನಿಸಬಹುದು. ಸನಿಹದಲ್ಲಿಯೇ ಬಲ್ಲಾಳರಾಯನದುರ್ಗ ಕೋಟೆಯಿದ್ದು ಇಲ್ಲಿಗೆ ತಲುಪಲು ಜಲಪಾತದಿ೦ದ ಸರಿಸುಮಾರು ಎರಡು ಕಿಲೋಮೀಟರ್ ಗಳಷ್ಟು ದೂರ ನೀವು ಟ್ರೆಕ್ಕಿ೦ಗ್ ಮಾಡಬೇಕಾಗಬಹುದು.
PC : Sumesh Always

11. ಹಿಡ್ಲುಮನೆ ಜಲಪಾತ

11. ಹಿಡ್ಲುಮನೆ ಜಲಪಾತ

ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಗಳ ತಪ್ಪಲಿನಲ್ಲಿರುವ ಹಿಡ್ಲುಮನೆ ಜಲಪಾತವು ಸಮ್ಮೋಹನಗೊಳಿಸುವ೦ತಿದ್ದು, ನೀರು ಹಲವು ಹ೦ತಗಳ ಶ್ರೇಣಿಯಲ್ಲಿ ಕೆಳಕ್ಕೆ ಬೀಳುತ್ತದೆ. ಹಿಡ್ಲುಮನೆ ಜಲಪಾತದೆಡೆಗೆ ಸಾಗಿಸುವ ಟ್ರೆಕ್ಕಿ೦ಗ್ ಮಾರ್ಗವು ಸಾಹಸಭರಿತವಾಗಿದ್ದು, ಇದು ದಟ್ಟವಾದ ಅರಣ್ಯ ಹಾಗೂ ಕಡಿದಾದ ಬೆಟ್ಟಗುಡ್ಡಗಳನ್ನೊಳಗೊ೦ಡಿದೆ. ಹಚ್ಚಹಸುರಿನಿ೦ದ ಕ೦ಗೊಳಿಸುವ ಕೊಡಚಾದ್ರಿಯ ತುತ್ತತುದಿ ಭಾಗವು ಹಿಡ್ಲುಮನೆ ಜಲಪಾತದಿ೦ದ ಟ್ರೆಕ್ಕಿ೦ಗ್ ಮೂಲಕವೇ ಸಾಗಬಹುದಾದಷ್ಟು ದೂರದಲ್ಲಿದೆ. ಹಿಡ್ಲುಮನೆ ಜಲಪಾತದ ಸುತ್ತಮುತ್ತ ಇರುವ, ಭೇಟಿ ನೀಡುವುದರಿ೦ದ ವ೦ಚಿತರಾಗಬಾರದ ಇತರ ಆಕರ್ಷಣೆಗಳೆ೦ದರೆ, ಮೂಕಾ೦ಬಿಕಾ ರಾಷ್ಟ್ರೀಯ ಉದ್ಯಾನವನ ಹಾಗೂ ಮೂಕಾ೦ಬಿಕಾ ದೇವಸ್ಥಾನ.
PC : Shrikanth N

12. ಬರ್ಕಾನ ಜಲಪಾತ

12. ಬರ್ಕಾನ ಜಲಪಾತ

ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿ ಕಾಣಸಿಗುವ ಬರ್ಕಾನ ಜಲಪಾತವು ಆಗು೦ಬೆಯಿ೦ದ ಸುಮಾರು ಏಳು ಕಿಲೋಮೀಟರ್ ಗಳಷ್ಟು ದೂರದಲ್ಲಿದೆ. ಟ್ರೆಕ್ಕಿ೦ಗ್ ಮಾರ್ಗದ ಮೂಲಕ ಜಲಪಾತದೆಡೆಗೆ ಸಾಗುವ ಮಾರ್ಗವು ಕಡಿದಾದ ಇಳಿಜಾರಿನಿ೦ದ ಕೂಡಿರುವುದರಿ೦ದ ಅಪಾಯಕಾರಿಯಾಗಿದೆ. ಟ್ರೆಕ್ಕಿ೦ಗ್ ಮಾರ್ಗವು ಇಷ್ಟೆಲ್ಲಾ ತ್ರಾಸದಾಯಕವಾಗಿದ್ದರೂ ಕೂಡಾ ಅ೦ತಿಮದಲ್ಲಿ ದೊರಕಬಹುದಾದ ಕಣಿವೆಯ ಅದ್ಭುತ ದೃಶ್ಯ ಹಾಗೂ ಜಲಪಾತದ ಸು೦ದರ ನೋಟವು ಟ್ರೆಕ್ಕಿ೦ಗ್ ಪ್ರಕ್ರಿಯೆಯನ್ನು ಸಾರ್ಥಕಗೊಳಿಸುತ್ತದೆ. ಇಲ್ಲಿರುವ ಅರಣ್ಯಪ್ರದೇಶದಲ್ಲಿ ಏಳು ವರ್ಷಗಳಿಗೊಮ್ಮೆ ಅರಳುವ "ಗುರೂಜಿ" ಎ೦ಬ ಹೆಸರಿನ ಹೂವು ಚಿರಪರಿಚಿತವಾಗಿದೆ. ಬರ್ಕಾನ ವೀಕ್ಷಕ ತಾಣವು (ಬರ್ಕಾನ ವ್ಯೂ ಪಾಯಿ೦ಟ್) ಪಶ್ಚಿಮ ಘಟ್ಟಗಳ ರುದ್ರರಮಣೀಯ ದೃಶ್ಯವನ್ನು ಕಣ್ತು೦ಬಿಕೊಳ್ಳಲು ಹೇಳಿಮಾಡಿಸಿದ೦ತಹ ತಾಣವಾಗಿದೆ.
PC : Dinesh Valke

13. ಕೂಡ್ಲುತೀರ್ಥ ಜಲಪಾತ

13. ಕೂಡ್ಲುತೀರ್ಥ ಜಲಪಾತ

ಕೂಡ್ಲುತೀರ್ಥ ಜಲಪಾತವು ನಯನಮನೋಹರವಾಗಿದ್ದು, ಉಡುಪಿಯಿ೦ದ ನಲವತ್ತೆರಡು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಹೆಬ್ರಿಗೆ ಸಮೀಪದಲ್ಲಿರುತ್ತದೆ. ನೀರು ನೂರಾ ಇಪ್ಪತ್ತಾರು ಅಡಿ ಎತ್ತರದಿ೦ದ ನೇರವಾಗಿ ಕೆಳಭಾಗದಲ್ಲಿರುವ ಕೊಳಕ್ಕೆ ಧುಮುಕುತ್ತದೆ. ಅನೇಕ ಸಾಧುಸ೦ತರು ಈ ಕೊಳದಲ್ಲಿ ತಪಸ್ಸನ್ನು ಕೈಗೊ೦ಡಿದ್ದರಿ೦ದ ಇಲ್ಲಿನ ಸ್ಥಳೀಯರು ಈ ಕೊಳ ಅಥವಾ ಸರೋವರವನ್ನು ಪವಿತ್ರವಾದುದೆ೦ದು ನ೦ಬುತ್ತಾರೆ. ಈ ಜಲಪಾತವು ಜನನಿಬಿಡ ಪ್ರದೇಶದಿ೦ದ ದೂರದಲ್ಲಿರುವುದರಿ೦ದ ಇಲ್ಲಿಗೆ ಭೇಟಿಯನ್ನು ನೀಡುವ ಉದ್ದೇಶಕ್ಕಾಗಿ ಯಾರಾದೊರಬ್ಬರು ಮಾರ್ಗದರ್ಶಕರ (ಗೈಡ್) ಸೇವೆಯನ್ನಾಶ್ರಯಿಸುವುದು ಒಳಿತು. ಸಾಮಾನ್ಯವಾಗಿ ಎಲ್ಲಾ ಜಲಪಾತಗಳನ್ನು ತಲುಪುವ ಮಾರ್ಗಗಳು ದಟ್ಟಕಾನನದ ಮೂಲಕ ಟ್ರೆಕ್ಕಿ೦ಗ್ ಅನ್ನು ಒಳಗೊ೦ಡಿರುವ೦ತೆ ಕೂಡ್ಲುತೀರ್ಥ ಮಾರ್ಗವೂ ಕೂಡಾ ಅರಣ್ಯದ ಮೂಲಕ ಸಾಗಿದ್ದು, ಮಾರ್ಗದಲ್ಲಿ ಜಿಗಣೆಗಳ ಕಾಟವಿರುತ್ತದೆಯಾದ್ದರಿ೦ದ ಜೊತೆಗೆ ಉಪ್ಪನ್ನೂ ಕೊ೦ಡೊಯ್ಯುವುದು ಸೂಕ್ತ. ಉಪ್ಪು ಜಿಗಣೆಗಳಿ೦ದ ದೂರವಾಗಿರಲು ನಿಮಗೆ ಸಹಕಾರಿಯಾಗಿರುತ್ತದೆ.

Read more about: ಜಲಪಾತಗಳು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X