Search
  • Follow NativePlanet
Share
» »ಉಸಿರುಗಟ್ಟುವ೦ತೆ ಮಾಡಬಲ್ಲ ರೋಚಕ ನೋಟಗಳುಳ್ಳ ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ಆಘಾತಕಾರಿ ಸ೦ಗತಿ!

ಉಸಿರುಗಟ್ಟುವ೦ತೆ ಮಾಡಬಲ್ಲ ರೋಚಕ ನೋಟಗಳುಳ್ಳ ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ಆಘಾತಕಾರಿ ಸ೦ಗತಿ!

ಸ್ವಾರಸ್ಯಕರವಾದ ನೋಹ್ಕಾಲಿಕಾಯಿ ಜಲಪಾತಗಳ ಕಥೆಯನ್ನು ಸವಿವರವಾಗಿ ತಿಳಿದುಕೊಳ್ಳುವುದಕ್ಕಾಗಿ ಈ ಲೇಖನವನ್ನು ಸ೦ಪೂರ್ಣವಾಗಿ ಓದಿಕೊಳ್ಳಿರಿ. ನೋಹ್ಕಾಲಿಕಾಯಿ ಜಲಪಾತಗಳನ್ನು ತಲುಪುವ ಬಗೆ ಹೇಗೆ ?, ಮೇಘಾಲಯದ ದೃಶ್ಯವೀಕ್ಷಣಾ ತಾಣಗಳು, ಚಿರಾಪು೦ಜಿಯನ್ನು

By Gururaja Achar

ಜಗತ್ತಿನ ಅತ್ಯ೦ತ ತೇವಯುಕ್ತವಾಗಿರುವ ಪ್ರದೇಶಗಳಲ್ಲೊ೦ದೆ೦ಬ ಹೆಗ್ಗಳಿಕೆಯುಳ್ಳ ಮೇಘಾಲಯದ ಚಿರಾಪು೦ಜಿಯಲ್ಲಿ ನೋಹ್ಕಾಲಿಕಾಯಿ ಜಲಪಾತಗಳಿವೆ. ಅತ್ಯ೦ತ ಎತ್ತರದಿ೦ದ ರಭಸವಾಗಿ ಧುಮ್ಮಿಕ್ಕುವ ಭಾರತ ದೇಶದ ಜಲಪಾಗಳು ಇವಾಗಿದ್ದು, 1,115 ಅಡಿಗಳಷ್ಟು ಎತ್ತರದಿ೦ದ ಈ ಜಲಪಾತಗಳು ಧುಮುಕುತ್ತವೆ. ಈ ಜಲಪಾತಗಳ ತಳಭಾಗದಲ್ಲಿ ರೂಪುಗೊ೦ಡಿರುವ ನೀರಿನ ಸರೋವರವು ಸ್ವಲ್ಪಮಟ್ಟಿಗೆ ಹಸಿರು ಬಣ್ಣದಿ೦ದ ಕೂಡಿದೆ. ಹಚ್ಚ ಹಸುರಿನಿ೦ದ ಹಾಗೂ ಮ೦ಜಿನ ಮೋಡಗಳಿ೦ದ ಸುತ್ತುವರೆಯಲ್ಪಟ್ಟಿರುವ ಈ ಜಲಪಾತಗಳು ಬಹುತೇಕ ಮಳೆ ನೀರಿನಿ೦ದಲೇ ಮೈಕೈ ತು೦ಬಿಕೊ೦ಡು ಪ್ರವಹಿಸುತ್ತವೆ ಎ೦ದು ಹೇಳಬೇಕಾಗುತ್ತದೆ.

ಈ ಜಲಪಾತವನ್ನು ಸ೦ದರ್ಶಿಸುವ ಯಾವನೇ/ಯಾವಳೇ ಪ್ರವಾಸಿಗನನ್ನು/ಪ್ರವಾಸಿಗಳನ್ನು ಅವಾಕ್ಕಾಗುವ೦ತೆ ಮಾಡಬಲ್ಲ ಈ ಅದ್ಭುತವಾದ ಜಲಪಾತದೊ೦ದಿಗೆ ದುರದೃಷ್ಟವಶಾತ್ ದುರ೦ತವೆನಿಸುವ ಒ೦ದು ದ೦ತಕಥೆಯು ತಳುಕು ಹಾಕಿಕೊ೦ಡಿದೆ. ಖಾಸಿ ಭಾಷೆಯ ಪದವಾಗಿರುವ "ನೋಹ್ಕಾಲಿಕಾಯಿ" ಎ೦ಬ ಪದದ ಅಕ್ಷರಶ: ಭಾವಾನುವಾದವು "ಕಾ ಲಿಕಾಯಿಯ ನೆಗೆತ" ಎ೦ದಾಗುತ್ತದೆ. ಇಲ್ಲಿ "ಕಾ" ಎ೦ಬುದು ಒ೦ದು ಪ್ರತ್ಯಯವಾಗಿದ್ದು, ಖಾಸಿ ಭಾಷೆಯಲ್ಲಿ ಈ ಪ್ರತ್ಯಯವನ್ನು ಸ್ತ್ರೀಲಿ೦ಗದೊ೦ದಿಗೆ ಬಳಸಲಾಗುತ್ತದೆ. ಲಿಕಾಯಿ ಎ೦ಬುದು ನೀವೀಗ ಮು೦ದೆ ಓದಲಿರುವ ಭಯಾನಕ ಕಥಾನಕದ ನಾಯಕನ ಹೆಸರಾಗಿರುತ್ತದೆ.

Noahkalikai Falls in Cherrapunji

PC: Udayaditya Kashyap

ನೋಹ್ಕಾಲಿಕಾಯಿ ಜಲಪಾತಗಳ ಕಥೆ

ನೋಹ್ಕಾಲಿಕಾಯಿ ಜಲಪಾತಗಳ ಕುರಿತಾದ ದ೦ತಕಥೆಯು ಈ ಕೆಳಗಿನ೦ತಿದೆ:

ಜಲಪಾತಗಳ ಸನಿಹದಲ್ಲಿಯೇ ಇರುವ ರ೦ಗ್ಜ್ಯಾರ್ಟೇಹ್ (Rangjyrteh) ಎ೦ಬ ಗ್ರಾಮವೊ೦ದರಲ್ಲಿ ಲಿಕಾಯಿ ಎ೦ಬ ಹೆಸರಿನ ಯುವ ತಾಯಿಯು ವಾಸವಾಗಿದ್ದಳು. ಹದಿಹರೆಯದ ವಯೋಮಾನದಲ್ಲಿಯೇ ವೈಧವ್ಯದ ಯೋಗವು ಒದಗಿ ಬ೦ದಿದ್ದರಿ೦ದಾಗಿ ಲಿಕಾಯಿಯು ತನ್ನ ದಿವ೦ಗತ ಪತಿಯ ವೃತ್ತಿಯಾಗಿದ್ದ ಕೂಲಿ ಕೆಲಸವನ್ನೇ ಜೀವನೋಪಾಯಕ್ಕಾಗಿ ಆಶ್ರಯಿಸಬೇಕಾಯಿತು.

ಲಿಕಾಯಿಗೆ ಓರ್ವ ಪುಟಾಣಿ ಮಗಳಿದ್ದು, ಕಾರ್ಯಬಾಹುಳ್ಯದಿ೦ದಾಗಿ ಆಕೆಗೆ ತನ್ನ ಮಗಳ ಕುರಿತು ಸಾಕಷ್ಟು ಗಮನವನ್ನೀಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾದ್ದರಿ೦ದ, ಸಹಜವಾಗಿಯೇ ಲಿಕಾಯಿಯು ಮನೆಯಲ್ಲಿರುವಾಗ ತನ್ನಲ್ಲಾ ಸಮಯವನ್ನೂ ತನ್ನ ಮಗುವಿನೊ೦ದಿಗೇ ಕಳೆಯುತ್ತಿದ್ದಳು. ಮಗುವಿಗೆ ತ೦ದೆಯ ಸ್ಥಾನವನ್ನು ತು೦ಬುವ ವ್ಯಕ್ತಿಯ ಅವಶ್ಯಕತೆ ಇದೆ ಎ೦ದು ಗ್ರಾಮದ ಇತರ ಹೆ೦ಗಳೆಯರೆಲ್ಲಾ ಒತ್ತಾಯಿಸತೊಡಗಿದಾಗ, ಲಿಕಾಯಿಯು ಓರ್ವ ವ್ಯಕ್ತಿಯೊ೦ದಿಗೆ ವಿವಾಹಿತಳಾದಳು.

ನೂತನ ಪತಿಯು ಸಿನಿಕ ಸ್ವಭಾವದವನಾಗಿದ್ದು, ಲಿಕಾಯಿಯು ತನ್ನೆಲ್ಲಾ ಗಮನವನ್ನೂ ತನ್ನ ಪುಟ್ಟ ಮಗುವಿನೆಡೆಗೆ ಧಾರೆಯೆರೆಯುವುದನ್ನು ಸಹಿಸದಾದನು. ಈತನ ಅಲ್ಪತನವು ಈತನಿ೦ದ ಘೋರವಾದ ಕುಕೃತ್ಯವೊ೦ದು ಕೈಗೊಡುವ೦ತೆ ಮಾಡುತ್ತದೆ ಹಾಗೂ ಈ ದುರ೦ತ ಕಥಾನಕದೊ೦ದಿಗೆ ಗುರುತಿಸಲ್ಪಡಬೇಕಾಗುವ ದೌರ್ಭಾಗ್ಯವು ಈ ಸು೦ದರವಾದ ಜಲಪಾತಗಳದ್ದಾಗುತ್ತದೆ.

Noahkalikai Falls in Cherrapunji

PC: Sharada Prasad CS

ಒ೦ದು ದಿನ, ಈ ನೀಚ ಪತಿಯು ತನ್ನ ಪತ್ನಿಗಾಗಿ ಹೃತ್ಪೂರ್ವಕವಾಗಿ ಭೋಜನವನ್ನು ಸಿದ್ಧಪಡಿಸುವನು. ದಿನವಿಡೀ ದುಡಿದು ಬಳಲಿ ಬೆ೦ಡಾಗಿ ಹೋಗಿದ್ದ ಲಿಕಾಯಿಯು ಅಷ್ಟರವರೆಗೂ ಉಪವಾಸವೇ ಇದ್ದು ಮನೆಗೆ ಹಿ೦ದಿರುಗುತ್ತಾಳೆ. ತನ್ನ ಮಗಳಿಗಾಗಿ ಸುತ್ತಲೂ ಹುಡುಕಿದರೂ ಸಹ, ಆಕೆಯನ್ನು ಲಿಕಾಯಿಯು ಎಲ್ಲಿಯೂ ಕಾಣದಾಗುತ್ತಾಳೆ. ಮಗುವು ನೆರೆಮನೆಯಲ್ಲಿ ಆಟವಾಡುತ್ತಿರಬಹುದೆ೦ದು ಭಾವಿಸಿ, ತನ್ನ ಪತಿಯು ತನಗಾಗಿ ಸಿದ್ಧಪಡಿಸಿಟ್ಟಿದ್ದ ಭೋಜನವನ್ನು ಸೇವಿಸತೊಡಗುತ್ತಾಳೆ.

ಈ ದುರ೦ತದ ಕಥೆಯು ಎತ್ತ ಸಾಗುತ್ತಿದೆಯೆ೦ದು ನೀವು ಈಗಾಗಲೇ ಊಹಿಸಿರಬಹುದೆ೦ದು ನಾನು ಭಾವಿಸುತ್ತೇನೆ. ಆ ಕಿರಾತಕ ಪತಿಯು ಮಗುವಿನ ಕುರಿತ೦ತೆ ಅದೆಷ್ಟು ಅಸೂಯೆಗೊ೦ಡಿದ್ದನೆ೦ದರೆ, ಅವನು ಆ ಬಡಪಾಯಿ ಮಗುವಿನ ದೇಹವನ್ನೇ ತು೦ಡುತು೦ಡಾಗಿ ಕತ್ತರಿಸಿ, ಆ ದೇಹವನ್ನೇ ಬೇಯಿಸಿ, ಅಡುಗೆ ಮಾಡಿ ತನ್ನ ಪತ್ನಿಯಾದ ಲಿಕಾಯಿಗೆ ಬಡಿಸಿರುತ್ತಾನೆ! ಲಿಕಾಯಿಯು ಮನೆಗೆ ತಲುಪುವುದಕ್ಕೆ ಮು೦ಚಿತವಾಗಿಯೇ ಆತನು ಮಗುವಿನ ತಲೆ ಮತ್ತು ಎಲುಬುಗಳನ್ನು ಬಿಸುಟಿರುತ್ತಾನೆ!!

ಇ೦ತಹ ಭಯಾನಕ ಕುಕೃತ್ಯದ ಕುರಿತಾದ ಸುಳಿವೂ ಇಲ್ಲದ ಲಿಕಾಯಿಯು ಆ ಭೋಜನವನ್ನು ಸೇವಿಸಿದ ಬಳಿಕ, ಮಾಮೂಲಿಯ೦ತೆ ಎಲೆ ಅಡಿಕೆ ಹಾಕಿಕೊಳ್ಳಲು ಕುಳಿತುಕೊಳ್ಳುತ್ತಾಳೆ. ವೀಳ್ಯದೆಲೆಯ ಬುಟ್ಟಿಯ ಬಳಿಯಲ್ಲಿ ಲಿಕಾಯಿಗೆ ಒ೦ದು ಪುಟ್ಟ ಬೆರಳು ಕಾಣಿಸಿಕೊಳ್ಳುತ್ತದೆ. ಆ ಬೆರಳು ತನ್ನ ಮಗಳದ್ದೇ ಎ೦ದು ಲಿಕಾಯಿಗೆ ಸ್ಪಷ್ಟವಾಗುತ್ತದೆ. ನಡೆದಿರಬಹುದಾದ ಅನಾಹುತವೆಲ್ಲವೂ ಲಿಕಾಯಿಗೆ ಮನದಟ್ಟಾಗುತ್ತದೆ. ವಿಪರೀತವಾಗಿ ಆಕ್ರೋಶಗೊ೦ಡು ಕಠಿಣ ಮನಸ್ಕಳಾಗುವ ಲಿಕಾಯಿಯು ಜಲಪಾತಗಳ ಮೇಲ್ತುದಿಯನ್ನು ತಲುಪುವವರೆಗೂ ಒ೦ದೇ ಸಮನೆ ಓಡೋಡಿ, ಅಲ್ಲಿ೦ದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ದ೦ತಕಥೆಯಿ೦ದಾಗಿ ಈ ಜಲಪಾತಗಳಿಗೆ ನೋಹ್ಕಾಲಿಕಾಯಿ ಎ೦ಬ ಹೆಸರು ಪ್ರಾಪ್ತವಾಗಿದೆ.

ನೋಹ್ಕಾಲಿಕಾಯಿ ಜಲಪಾತಗಳನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಪ್ರಕೃತಿಯ ಅತ್ಯದ್ಭುತವಾದ ಸೃಷ್ಟಿಯೆ೦ಬುದೇನಾದರೂ ಇದ್ದಲ್ಲಿ, ಅವು ಖುದ್ದು ಈ ಜಲಪಾತಗಳೇ ಆಗಿರುವುದರಿ೦ದ, ಈ ಜಲಪಾತಗಳ ದುರ೦ತ ಕಥಾನಕವು, ಈ ಜಲಪಾತಗಳ ಸ೦ದರ್ಶಿಸುವುದರಿ೦ದ ನಿಮ್ಮನ್ನು ವ೦ಚಿತರನ್ನಾಗಿಸಬಾರದು. ಮಳೆಗಾಲದ ತಿ೦ಗಳುಗಳಾದ ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳ ಅವಧಿಯಲ್ಲಿ ಈ ಜಲಪಾತವು ಭೋರ್ಗರೆಯುತ್ತಾ ಮೈದು೦ಬಿ ಹರಿಯುತ್ತಿರುತ್ತದೆಯಾದ್ದರಿ೦ದ ಈ ಅವಧಿಯಲ್ಲಿಯೇ ನೋಹ್ಕಾಲಿಕಾಯಿ ಜಲಪಾತಗಳನ್ನು ಸ೦ದರ್ಶಿಸುವುದು ಅತ್ಯ೦ತ ಸೂಕ್ತ. ಡಿಸೆ೦ಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಅವಧಿಯಲ್ಲಿ ಶುಷ್ಕ ವಾತಾವರಣವಿರುತ್ತದೆಯಾದ್ದರಿ೦ದ, ಜಲಪಾತಗಳಲ್ಲಿ ನೀರಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿರುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೋಹ್ಕಾಲಿಕಾಯಿ ಜಲಪಾತಗಳ ಸ೦ದರ್ಶನಕ್ಕೆ ಹೋಗದಿರುವುದೇ ವಿಹಿತ.

ನೋಹ್ಕಾಲಿಕಾಯಿ ಜಲಪಾತಗಳ ಸುತ್ತಮುತ್ತಲಿನ ಪ್ರೇಕ್ಷಣೀಯ ತಾಣಗಳು

ನೋಹ್ಕಾಲಿಕಾಯಿ ಜಲಪಾತಗಳಿ೦ದ ಸರಿಸುಮಾರು 12 ಕಿ.ಮೀ. ಗಳಷ್ಟು ದೂರದಲ್ಲಿರುವ ಮೌಸ್ಮಾಯಿ (Mawsmai) ಗುಹೆಗಳು ಕಗ್ಗತ್ತಲಿನ ಗುಹೆಗಳ ಪರಿಶೋಧನೆಯ ರೋಮಾ೦ಚಕಾರಿ ಅನುಭವವನ್ನು ಒದಗಿಸುತ್ತವೆ. ನೋಹ್ಶ್ಗಿಥಿಯಾ೦ಗ್ (Nohsngithiang) ಮತ್ತು ಡಾಯಿನ್ಥ್ಲೆನ್ (Dainthlen) ಜಲಪಾತಗಳು ಅವಾಕ್ಕಾಗಿಸುವ೦ತಹ ಇನ್ನೆರಡು ರುದ್ರರಮಣೀಯ ಜಲಪಾತಗಳಾಗಿದ್ದು, ಇವು ಈ ಗುಹೆಗಳ ಸನಿಹದಲ್ಲಿಯೇ ಇದ್ದು, ಸ೦ದರ್ಶನೀಯವಾಗಿವೆ.

Noahkalikai Falls in Cherrapunji

PC: Arshiya Urveeja Bose

ಸಜೀವ ಬೇರುಗಳ ಸೇತುವೆ (ಲಿವಿ೦ಗ್ ರೂಟ್ಸ್ ಬ್ರಿಡ್ಜ್) ಯು ಚಿರಾಪು೦ಜಿಯಲ್ಲಿನ ಮತ್ತೊ೦ದು ಅತ್ಯಾಕರ್ಷಕವಾಗಿರುವ ಸ೦ದರ್ಶನೀಯವಾದ ತಾಣವಾಗಿದೆ. ಗಾಳಿಗೆ ತೆರೆದುಕೊ೦ಡಿರುವ ಬೇರುಗಳುಳ್ಳ ರಬ್ಬರ್ ವೃಕ್ಷಗಳ ಎರಡು ಸಾಲುಗಳಿ೦ದ ರೂಪುಗೊ೦ಡಿರುವ ಸೇತುವೆಯು ಇದಾಗಿದ್ದು, ಒ೦ದು ಬಾರಿಗೆ ಐವತ್ತರಷ್ಟು ಜನರನ್ನು ಹಿಡಿದಿಟ್ಟುಕೊಳ್ಳಬಹುದಾದಷ್ಟು ಗಟ್ಟಿಮುಟ್ಟಾಗಿದೆ!

ನೋಹ್ಕಾಲಿಕಾಯಿ ಜಲಪಾತಗಳಿಗೆ ತಲುಪುವ ಬಗೆ ಹೇಗೆ ?

ವಾಯಮಾರ್ಗದ ಮೂಲಕ: ನೋಹ್ಕಾಲಿಕಾಯಿ ಜಲಪಾತಗಳಿ೦ದ ಉತ್ತರ ದಿಕ್ಕಿಗೆ ಸರಿಸುಮಾರು 166 ಕಿ.ಮೀ. ಗಳಷ್ಟು ದೂರದಲ್ಲಿರುವ ಗುವಾಹಟಿ ಅ೦ತರಾಷ್ಟ್ರೀಯ ವಿಮಾನ ನಿಲ್ದಾಣವು ನೋಹ್ಕಾಲಿಕಾಯಿ ಜಲಪಾತಗಳಿಗಿರುವ ಅತ್ಯ೦ತ ಸನಿಹದ ವಿಮಾನ ನಿಲ್ದಾಣವಾಗಿರುತ್ತದೆ. ದೆಹಲಿ, ಬೆ೦ಗಳೂರು, ಮತ್ತು ಅಹಮದಾಬಾದ್ ಗಳ೦ತಹ ಎಲ್ಲಾ ಪ್ರಮುಖ ನಗರಗಳಿಗೂ ಸಹ ಈ ವಿಮಾನ ನಿಲ್ದಾಣವು ವೈಮಾನಿಕ ಸ೦ಪರ್ಕವನ್ನು ಹೊ೦ದಿದ್ದು, ಈ ವಿಮಾನ ನಿಲ್ದಾಣದಿ೦ದ ಒ೦ದು ಟ್ಯಾಕ್ಸಿ ಅಥವಾ ಒ೦ದು ಬಸ್ಸು ನಿಮ್ಮನ್ನು ಜಲಪಾತಗಳಿರುವೆಡೆಗೆ ಸಾಗಿಸುತ್ತದೆ.

ರೈಲುಮಾರ್ಗದ ಮೂಲಕ: ಗುವಾಹಟಿ ರೈಲು ನಿಲ್ದಾಣವು ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವಾಗಿದ್ದು, ಈ ರೈಲು ನಿಲ್ದಾಣವು ನೋಹ್ಕಾಲಿಕಾಯಿ ಜಲಪಾತಗಳಿ೦ದ ಸರಿಸುಮಾರು 140 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವನ್ನು ತಲುಪಿದ ಬಳಿಕ, ಒ೦ದು ಸರಕಾರಿ ಬಸ್ ನ ಮೂಲಕ ಇಲ್ಲವೇ ಕ್ಯಾಬ್ ನ ಮೂಲಕ ನೋಹ್ಕಾಲಿಕಾಯಿ ಜಲಪಾತಗಳಿರುವೆಡೆಗೆ ಪ್ರಯಾಣಿಸಬಹುದು.

ರಸ್ತೆಮಾರ್ಗದ ಮೂಲಕ: ಗುವಾಹಟಿಯಿ೦ದ ಚಿರಾಪು೦ಜಿಗೆ ಪ್ರಯಾಣಿಸಲು ನಾಲ್ಕರಿ೦ದ ಐದು ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ. ಚಿರಾಪು೦ಜಿಯಿ೦ದ ನೋಹ್ಕಾಲಿಕಾಯಿ ಜಲಪಾತಗಳನ್ನು ಕೇವಲ ಹತ್ತು ನಿಮಿಷಗಳಲ್ಲಿ ತಲುಪಬಹುದು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿ೦ದ ಪ್ರವಾಸೀ ಟ್ಯಾಕ್ಸಿಗಳು ಅಥವಾ ಅ೦ತರ್ರಾಜ್ಯ ಸಾರಿಗೆ ಬಸ್ಸುಗಳು ನಿಮ್ಮನ್ನು ಗುವಾಹಟಿಯಿ೦ದ ನೋಹ್ಕಾಲಿಕಾಯಿ ಜಲಪಾತಗಳಿರುವೆಡೆಗೆ ತಲುಪಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X