Search
  • Follow NativePlanet
Share
» »ಸಕಲೇಶಪುರದ ಸುತ್ತ ಒಂದು ಟ್ರೆಕ್

ಸಕಲೇಶಪುರದ ಸುತ್ತ ಒಂದು ಟ್ರೆಕ್

ಸಕಲೇಶಪುರವು ಕರ್ನಾಟಕದ ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣವಾಗಿದ್ದು ಸಾಕಷ್ಟು ಹಸಿರಿನಿಂದ ಕಂಗೊಳಿಸುತ್ತದೆ. ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿ ಬರುವ ಈ ಪಟ್ಟಣವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು ಚಾರಣ ಮಾರ್ಗಗಳಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ.

ಬೆಂಗಳೂರು, ಮೈಸೂರಿನಂತಹ ಮಹಾ ನಗರಗಳಿಂದ ವಿವಿಧ ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಯುವ ಜನಾಂಗದವರಲ್ಲಿ ಸಕಲೇಶಪುರದ ಚಾರಣ ಮಾರ್ಗಗಳು ನೆಚ್ಚಿನ ಸ್ಥಳಗಳಾಗಿದ್ದು ವಾರಾಂತ್ಯ ರಜೆಗಳಲ್ಲಿ ಕೈಬಿಸಿ ಕರೆಯುತ್ತವೆ. ಅಂತೆಯೆ ಇಲ್ಲಿ ರಜಾ ಸಮಯಗಳಲ್ಲಿ ಚಾರಣ ಚಟುವಟಿಕೆಗಳು ಪ್ರಗತಿಯಲ್ಲಿರುವುದನ್ನು ಆಗಾಗ ಕಾಣಬಹುದು.

ಕಣ್ಮನ ತಂಪಾಗಿಸುವ ಬಿಸಿಲೆ ಘಾಟ್ ನಿಂದ ಕಾಣುವ ದೃಶ್ಯ

ಚಿತ್ರಕೃಪೆ: Ashwin Kumar

ಸಕಲೇಶಪುರ ಪಟ್ಟಣವು ಜೀವವೈವಿಧ್ಯತೆಯ ಕೇಂದ್ರವೂ ಆಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿರುವುದರಿಂದ ಹಿತಕರವಾದ ವಾತಾವರಣವನ್ನು ಸಾಮಾನ್ಯವಾಗಿ ವರ್ಷಪೂರ್ತಿ ಇಲ್ಲಿ ಕಾಣಬಹುದು. ಇದು ಹಸಿರು ಬೆಟ್ಟಗಳ ನಡುವೆ ಕಾಫಿ, ಏಲಕ್ಕಿ, ಮೆಣಸು, ಅಡಕೆ, ತೆಂಗು, ಬಾಳೆಯ ತೋಟಗಳಿಂದ ಆವೃತವಾಗಿದ್ದು ಇಲ್ಲಿನ ಸುತ್ತಾಟ ನಮ್ಮನ್ನು ಪ್ರಕೃತಿಯೊಂದಿಗೆ ಭಾವುಕವಾಗಿ ಬೆಸೆಯುತ್ತದೆ.

ಸಕಲೇಶಪುರದ ಹವಾಮಾನವು ವರ್ಷಪೂರ್ತಿ ಹಿತಕರವಾಗಿರುತ್ತದೆ. ಬೇಸಿಗೆಯ ಸಮಯದಲ್ಲಿ (ಏಪ್ರಿಲ್,ಮೇ) ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ ಜೊತೆಗೆ ಗಿರಿ ಪ್ರದೇಶವಾಗಿರುವುದರಿಂದ ಹಿತಕರವಾದ ತಂಗಾಳಿಯೂ ಇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ.

ಚಿತ್ರಕೃಪೆ: Vinayak Shankar Rao

ಜೂನ್ ತಿಂಗಳಿನಿಂದ ಆರಂಭವಾಗುವ ಮುಂಗಾರು ಮಳೆಯೂ ಸೆಪ್ಟಂಬರ್ ನಡುವಿನವರೆಗೂ ಎಡಬಿಡದೆ ಸುರಿಯುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತದೆ. ಅಕ್ಟೊಬರ್ ನಿಂದ ಮಾರ್ಚ್ ವರೆಗೂ ಚಳಿಗಾಲದ ವಾತವರಣವಿರುತ್ತದೆ. ಡಿಸೆಂಬರ್ ಮತ್ತು ಜೆನವರೀ ತಿಂಗಳಲ್ಲಿ ಹೆಚ್ಚು ಚಳಿ ಇರುತ್ತದೆ.

ಇನ್ನು ಚಾರಣದ ವಿಷಯಕ್ಕೆ ಬಂದರೆ ಬಿಸಿಲೆ ಘಾಟ್, ಹಸಿರುಪಥ ಮುಂತಾದ ಉತ್ಸಾಹ ಹಾಗೂ ಸಾಹಸಭರಿತ ಚಾರಣ ಮಾರ್ಗಗಳನ್ನು ಇಲ್ಲಿ ಕಾಣಬಹುದು. ಹಸಿರು ಪಥವು ರೈಲು ಕಂಬಿಗಳ ಮೇಲೆಯೆ ನಡೆಯುತ್ತ ಸಾಗುವ ಚಾರಣ ಮಾರ್ಗವಾಗಿದ್ದು ಹೆಚ್ಚಿನ ರೋಮಾಂಚನವನ್ನುಂಟು ಮಾಡುತ್ತದೆ.

ವಿಶೇಷ ಲೇಖನ : ಹಸಿರುಪಥದಲ್ಲಿ ಟ್ರೆಕ್ಕಿಂಗ್

ಹಸಿರು ಪಥದಲ್ಲಿ ಸೇತುವೆಯ ಮೂಲಕ ರೈಲು ಸಾಗುವಾಗ

ಚಿತ್ರಕೃಪೆ: snapper san

ಚಾರಣದ ಪ್ರಾರಂಭಿಕ ತಾಣವಾಗಿ ಮೊದಲಿಗೆ ಸಕಲೇಶಪುರದಿಂದ ಸುಮಾರು ಎಂಟು ಕಿ.ಮೀ ಗಳಷ್ಟು ದೂರವಿರುವ ದೊಣಿಗಾಲ್ ರೈಲು ನಿಲ್ದಾಣಕ್ಕೆ ಆಗಮಿಸಬೇಕು. ಚಾರಣವನ್ನು ಸಾಮಾನ್ಯವಾಗಿ ದೊಣಿಗಾಲ್ ನಿಂದ ಪ್ರಾರಂಭಿಸಿ ಕುಕ್ಕೆ ರೈಲು ನಿಲ್ದಾಣದಲ್ಲಿ ಸಮಾಪ್ತಗೊಳಿಸಲಾಗುತ್ತದೆ. ಮುಖ್ಯವಾಗಿ ಈ ಪಥವು ಪಶ್ಚಿಮ ಘಟ್ಟಗಳ ಮಧ್ಯದಿಂದ ಸಾಗುವುದರಿಂದ ಇದಕ್ಕೆ ಹಸಿರು ಪಥ ಎಂದು ಕರೆಯಲಾಗಿದೆ.

ವಿಶೇಷ ಲೇಖನ : ಕೊಂಕಣ ರೈಲು ಮಾರ್ಗ

ಈ ಚಾರಣ ಪಥವು ಸುಮಾರು 60 ಕಿ.ಮೀ ಗಳಷ್ಟು ಉದ್ದವಿದ್ದು 50 ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸುರಂಗ ಮಾರ್ಗಗಳನ್ನು, 109 ಸೇತುವೆಗಳನ್ನು ಹಾಗೂ 25 ಜಲಪಾತಗಳನ್ನು ಹೊಂದಿದೆ. ನಡೆಯುವಾಗ ಸಾಕಷ್ಟು ಜಾಗರೂಕತೆಯಿಂದ ಸಾಗಬೇಕು. ಅಲ್ಲಲ್ಲಿ ಅತಿ ಆಳದ ಪ್ರಪಾತಗಳು, ಕಂದಕಗಳಿರುವುದರಿಂದ, ಅಲ್ಲದೆ ರೈಲಿನ ಸಂಚಾರವೂ ಸಹ ಇರುವುದರಿಂದ ಜಾಗರೂಕತೆ ವಹಿಸಬೇಕಾಗುತ್ತದೆ. ಈ ಚಾರಣ ಹೊರಡುವುದರ ಮುಂಚೆ ಸಂಬಂಧಿಸಿದ ಇಲಾಖೆಯಲ್ಲಿ ಅನುಮತಿಯ ಕುರಿತು ವಿಚಾರಿಸುವುದು ಉತ್ತಮ.

ಸಾಗುವಾಗ ಮೈಯೆಲ್ಲಾ ಕಣ್ಣಾಗಿರಲಿ...ಹಾವಿನ ಮರಿ

ಚಿತ್ರಕೃಪೆ: Sajith T S

ಸಕಲೇಶಪುರದ ಸುತ್ತಲಿನ ಪ್ರದೇಶವು ಬಿಸಿಲೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ದಕ್ಷಿಣ ಶ್ರೇಣಿಯನ್ನು ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯ ವಿಷಯದಲ್ಲಿ ವಿಶ್ವದ 18 ಅತ್ಯಂತ ವೈವಿಧ್ಯಮಯ ತಾಣಗಳಲ್ಲಿ ಒಂದೆಂದು ಪಟ್ಟಿಮಾಡಲಾಗಿದೆ. ಸದಾ ತೇವಾಂಶವಿರುವ ಉಪ ಉಷ್ಣವಲಯದ ಈ ಪ್ರದೇಶದಲ್ಲಿ ಬೀಳುವ ಉತ್ತಮ ಮಳೆಯು ಜೀವ ವೈಧ್ಯತೆಯ ಏಳಿಗೆಗೆ ಪೂರಕವಾಗಿರುವುದಲ್ಲದೆ ಸಹಾಯಕವೂ ಆಗಿದೆ.

ನಿಮ್ಮ ಬರುವಿಕೆಗೆ ಕಾಯುತಿವೆವು

ಚಿತ್ರಕೃಪೆ: shrikant rao

ಬಿಸಿಲೆ ಅರಣ್ಯ ವ್ಯಾಪ್ತಿಯ ಎಡಕುಮರಿ, ದೋಣಿಗಾಲ್, ಜೇನುಕಲ್ಲು ಬೆಟ್ಟ (ಕರ್ನಾಟಕದ ಮೂರನೆಯ ಅತಿ ಎತ್ತರದ ಶಿಖರ ಶೃಂಗ) ಮತ್ತು ಕೆಂಪುಹೊಳೆ ಪ್ರದೇಶಗಳು ಚಾರಣಕ್ಕೆ ಯೋಗ್ಯವಾದುವುಗಳಾಗಿದ್ದು, ಸಾಹಸಪ್ರಧಾನವೂ ಸಹ ಆಗಿವೆ. ಸಾಮಾನ್ಯವಾಗಿ ಬಿಸಿಲೆ ಮಾರ್ಗವಾಗಿ ಚಾರಣಕ್ಕೆ ಹೊರಟು ಕುಮಾರಪರ್ವತ ದಲ್ಲಿ ಚಾರಣವನ್ನು ಕೊನೆಗೊಳಿಸುವ ಪರಿಪಾಠವಿದೆ. ಆಳವಾದ ಕಣಿವೆಗಳು, ರಭಸವಾಗಿ ಹರಿಯುವ ನದಿಗಳು ಚಾರಣಿಗರಿಗೆ ಸವಾಲೊಡ್ಡುತ್ತದೆ.

ವಿಶೇಷ ಲೇಖನ : ಚಾರ್ಮಡಿ ಘಾಟ್ ಸುತ್ತಿದ್ದೀರಾ?

ಕರ್ನಾಟಕದ ಮೂರನೆಯ ಎತ್ತರದ ಶಿಖರ ಜೇನುಕಲ್ಲು ಗುಡ್ಡ

Sakleshpur hub of thrilling trekking trails

ಚಿತ್ರಕೃಪೆ: L. Shyamal

ಈ ಸಂದರ್ಭದಲ್ಲಿ ಚಾರಣಿಗರು ತಮಗೆ ಬೇಕಾದ ಅವಶ್ಯಕವಾದ ಸಾಮಾನು ಸರಂಜಾಮುಗಳನ್ನು ಮುಂಚಿತವಾಗಿಯೆ ಇಟ್ಟುಕೊಂಡಿರುವುದು ಅವಶ್ಯ. ಅಲ್ಲದೆ ದಟ್ಟವಾದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಾಕಷ್ಟು ತಗ್ಗು ದಿಣ್ಣೆ ಪ್ರದೇಶಗಳು, ಚಿಕ್ಕ ಪುಟ್ಟ ಕೊಳಗಳು, ವಿವಿಧ ಕ್ರಿಮಿ ಕೀಟಗಳು, ಹಾವುಗಳು ಇರುವುದರಿಂದ ಬಲು ಎಚ್ಚರಿಕೆಯಿಂದ ಸಾಗಬೇಕು.

ತಲುಪುವ ಬಗೆ:

ಬೆಂಗಳೂರಿನಿಂದ ಸಕಲೇಶಪುರ ಒಟ್ಟು 221 ಕಿ.ಮೀ ಗಳಷ್ಟು ದೂರದಲ್ಲಿದೆ.

ಬಸ್ಸುಗಳ ಮೂಲಕ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಸಕಲೇಶಪುರದಲ್ಲಿ ನಿಲುಗಡೆಯನ್ನು ಹೊಂದಿವೆ.
ರೈಲಿನ ಮೂಲಕ : ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲ ರೈಲುಗಳು ಇಲ್ಲಿ ನಿಲುಗಡೆಯನ್ನು ಹೊಂದಿವೆ.
ವಿಮಾನ : ಹತ್ತಿರದ ವಿಮಾನ ನಿಲ್ದಾಣ ಬಜ್ಪೆಯ ಮಂಗಳೂರು ವಿಮಾನ ನಿಲ್ದಾಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X