Search
  • Follow NativePlanet
Share
» »ರೂಪಕುಂಡ ಎಂಬ ರಹಸ್ಯ ಕೆರೆ

ರೂಪಕುಂಡ ಎಂಬ ರಹಸ್ಯ ಕೆರೆ

By Vijay

ಅದೆಷ್ಟೊ ಸ್ಥಳಗಳು ತಮ್ಮಲ್ಲಿರುವ ಕೆಲ ಅಸಾಮಾನ್ಯ ಸಂಗತಿ ಅಥವಾ ವಿಷಯಗಳಿಂದ ಸಾಕಷ್ಟು ಜನರನ್ನು ಆಕರ್ಷಿಸುತ್ತವೆ. ಬೆಳೆಯುತ್ತಿರುವ ಬಸವಣ್ಣನಿರಬಹುದು ಅಥವಾ ಕುಗ್ಗುತ್ತಿರುವ ಶಿವಲಿಂಗವಿರಬಹುದು ಹೀಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು, ಸ್ವಾರಸ್ಯಗಳನ್ನು ಹೊತ್ತ ಸಾಕಷ್ಟು ಸ್ಥಳಗಳು ನಮ್ಮ ದೇಶದಲ್ಲಿವೆ.

ಇಂತಹ ವಿಚಿತ್ರ ಸ್ಥಳಗಳ ಪಟ್ಟಿಯಲ್ಲಿ ಒಂದಾಗಿದೆ ರೂಪಕುಂಡ ಎಂಬ ರಹಸ್ಯ ಕೆರೆ. ರೂಪಕುಂಡ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ಸ್ಥಿತವಿರುವ ಒಂದು ಹಿಮನದಿಯಾಗಿದ್ದು, ಉತ್ತರಾಖಂಡ ರಾಜ್ಯದಲ್ಲಿ ಕಂಡುಬರುತ್ತದೆ. ಈ ಕೆರೆಯ ಅಂಚುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮನುಷ್ಯನ ಅಸ್ಥಿಪಂಜರಗಳು ದೊರೆತಿದ್ದರಿಂದ ಇದು ಹೆಸರುವಾಸಿಯಾಗಿದೆ. ಕೆರೆಯು ಸುತ್ತಲು ಹಿಮ ಪರ್ವತಗಳಿಂದ ಸುತ್ತುವರೆದಿದ್ದು, ಉತ್ತಮ ಚಾರಣ ಸ್ಥಳವೂ ಸಹ ಆಗಿದೆ.

ನೀವು ಓದಲು ಬಯಸಬಹುದಾದ ಲೇಖನ: ಭಾರತದ ರಹಸ್ಯಮಯ ಹಾಗು ಪಿಶಾಚಗ್ರಸ್ತ ಸ್ಥಳಗಳು

ಚಿತ್ರಕೃಪೆ: Schwiki

ಕೇವಲ ಎರಡು ಮೀಟರುಗಳಷ್ಟು ಆಳ ಹೊಂದಿರುವ ಈ ಹಿಮಗಡ್ಡೆ ಕೆರೆ ಕರಗಿದಾಗ ಅದರ ತಳದಲ್ಲಿ ಅಸ್ಥಿಪಂಜರಗಳು ಸ್ಪಷ್ಟವಾಗಿ ಗೋಚರಿಸುವುದರಿಂದ ಭೇಟಿ ನೀಡುವವರಿಗೆ ಇದು ಕುತೂಹಲ ಕೆರಳಿಸುತ್ತದೆ. 9 ನೇಯ ಶತಮಾನಕ್ಕೆ ಸಂಬಂಧಿಸಿದ ಈ ಅಸ್ಥಿಪಂಜರಗಳ ಉಪಸ್ಥಿತಿಯ ಕುರಿತು ಅನೇಕ ಹಿನ್ನಿಲೆ, ವ್ಯಾಖ್ಯಾನಗಳನ್ನು ವೈಜ್ಞಾನಿಕ ತಳಹದಿಯಿಂದ ಹಿಡಿದು ಆಧ್ಯಾತ್ಮಿಕನೆಲೆಯವರೆಗೂ ನೀಡಲಾಗಿದೆ.

ವರ್ಷದಲ್ಲಿ ಒಂದು ತಿಂಗಳಗಳ ಕಾಲ ಈ ಹಿಮಕೆರೆಯು ಕರಿಗಿದ್ದ ಸಂದರ್ಭದಲ್ಲಿ ಈ ಅಸ್ಥಿಪಂಜರಗಳನ್ನು ವೀಕ್ಷಿಸಬಹುದಾಗಿದೆ. ಕೇವಲ ಅಸ್ಥಿಪಂಜರಗಳಲ್ಲದೆ, ಚರ್ಮದ ಪಾದರಕ್ಷೆಗಳು, ರಿಂಗುಗಳು, ಯುದ್ಧೋಪಕರಣಗಳು ಹಾಗೂ ಇತರೆ ಪಾತ್ರೆ, ಪಗಡೆಗಳನ್ನು ಸಹ ಈ ಕೆರೆಯಲ್ಲಿ ಶೋಧಿಸಲಾಗಿದೆ. ನ್ಯಾಷನಲ್ ಜಿಯಾಗ್ರಾಫಿಕ್ ನಿಯತಕಾಲಿಕೆಯ ತಂಡವೊಂದು ಈ ಕೆರೆಯಿಂದ ಸುಮಾರು 30 ಅಸ್ಥಿಪಂಜರಗಳನ್ನು ಹೊರತೆಗೆದಿದ್ದರು. ವಿಶೇಷವೆಂದರೆ ಈ ಅಸ್ಥಿಪಂಜರಗಳ ಪೈಕಿ ಕೆಲವೊಂದಕ್ಕೆ ಅಲ್ಲಲ್ಲಿ ಇನ್ನೂ ಮಾಂಸ ಖಂಡಗಳು ಅಂಟಿಕೊಂಡಿರುವುದು ಕಂಡುಬಂದಿತ್ತು.

ನಂತರ ನಡೆಸಲಾದ ಅಧ್ಯಯನದಲ್ಲಿ ತಿಳಿದುಬಂದ ವಿಷಯವೆಂದರೆ ಇವು ಅಸ್ಥಿಪಂಜರಗಳು 9 ನೇಯ ಶತಮಾನಕ್ಕೆ ಸಂಬಂಧಿಸಿದ್ದು, ಭಾರತೀಯರ ಅಸ್ಥಿಪಂಜರುಗಳು ಇದಾಗಿದೆ ಎಂದು. ಮುಂಚೆ ಚೀನಿಯರ ಅಸ್ಥಿಪಂಜರಗಳು ಇವಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಅಲ್ಲದೆ ಇದೊಂದು ಸಾಮುಹಿಕ ಪ್ರಾಣ ತ್ಯಾಗ ಇಲ್ಲವೆ ಹತ್ಯಾಕಾಂಡ ಎಂದು ಹೇಳಲಾಗಿದೆ.

ಚಿತ್ರಕೃಪೆ: Schwiki

ಸ್ಥಳೀಯವಾಗಿ ಚಾಲ್ತಿಯಲ್ಲಿರುವ ದಂತಕಥೆಯ ಪ್ರಕಾರ, ಹಿಂದೆ ಕನೌಜ್ ಪ್ರದೇಶದ ಅರಸನಾಗಿದ್ದ ರಾಜಾ ಜಸ್ಧಾವಲ್ ಎಂಬಾತನು ತನ್ನ ಬಸುರಿ ಹೆಂಡತಿ, ಸೇವಕರು, ನೃತ್ಯಗಾರರು ಹೀಗೆ ಹಲವರ ಗುಂಪು ಕಟ್ಟಿಕೊಂಡು ನಂದಾ ದೇವಿಯ ದರ್ಶನ ಕೋರಿ ತೆರಳುತ್ತಿದ್ದಾಗ ಭಯಂಕರವಾದ ಹಿಮಗಾಳಿಗೆ ಸಿಲುಕಿ ಸಂಪೂರ್ಣ ತಂಡವು ರೂಪಕುಂಡ ಕೆರೆಯಲ್ಲಿ ನಶಿಸಿ ಹೋದರು.

ಈ ಕೆರೆಯ ಕುರಿತು ನಡೆಸಲಾದ ವಜ್ಞಾನಿಕ ಪರೀಕ್ಷೆಗಳ ಅನುಸಾರ, ಇಲ್ಲಿ ದೊರೆತಿರುವ ಅಸ್ಥಿಪಂಜರಗಳು 850+30 ಅಥವಾ 850-30 ಶತಮಾನಕ್ಕೆ ಸಂಬಂಧಿಸಿದೆ; ಅಸ್ಥಿಪಂಜರಗಳಲ್ಲಿ ಕೆಲವು ಕುಳ್ಳಗಾಗಿದ್ದು ಸ್ಥಳೀಯ ಮಾರ್ಗದರ್ಶಕರಾಗಿದ್ದಿರಬಹುದು; ಇನ್ನುಳಿದ ಅಸ್ಥಿಪಂಜರಗಳ ಡಿಎನ್‍ಎ ಅಧ್ಯಯನವು ಇವು ಕೊಂಕಣಸ್ಥ ಬ್ರಾಹ್ಮಣರಾಗಿದ್ದಿರಬಹುದೆಂದು ಹೇಳುತ್ತದೆ. ಆದರೆ ಈ ಪ್ರದೇಶದಲ್ಲಿ ಯಾವುದೆ ವ್ಯಾಪಾರ ವಹಿವಾಟುಗಳಿಗೆ ತೆರಳಬಹುದಾದ ಯಾವುದೆ ಮಾರ್ಗಗಳಿಲ್ಲದಿರುವುದರಿಂದ ಇಷ್ಟು ಜನರ ಗುಂಪು ಎಲ್ಲಿಗೆ ತೆರಳಿದ್ದರು ಎಂಬುದು ಅಚ್ಚರಿ ಮೂಡಿಸುತ್ತದೆ.

ರೂಪಕುಂಡ ಎಂಬ ರಹಸ್ಯ ಕೆರೆ

ಚಿತ್ರಕೃಪೆ: Djds4rce

ಇನ್ನು, ಚಾರಣಕ್ಕೆ ರೂಪಕುಂಡ ಕೆರೆಯು ಅದ್ಭುತವಾದ ಸ್ಥಳವಾಗಿದೆ. ಇಲ್ಲಿನ ಹಿಮ ಪರ್ವತಗಳ ಪ್ರಕೃತಿ ಮೈಸಿರಿಯು ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿ ಬಿಡುತ್ತದೆ. ಗಡ್ವಾಲ್ ಹಿಮಾಲಯ ಪ್ರದೇಶದ ಗಮನಾರ್ಹ ಪ್ರವಾಸಿ ತಾಣವಾಗಿಯೂ ರೂಪಕುಂಡ ಪ್ರಸಿದ್ಧಿ ಪಡೆದಿದೆ.

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ದೂರದ ಮೂಲೆಯೊಂದರಲ್ಲಿ ನೆಲೆಸಿರುವ ರೂಪಕುಂಡ ಕೆರೆಯು ವರ್ಷದ ಬಹು ಸಮಯ ಹಿಮಪಾತದಿಂದ ಕೂಡಿರುತ್ತದೆ. ಅಲ್ಲದೆ ವಾತಾವರಣವೂ ಸಹ ಕ್ಲಿಷ್ಟಕರವಾಗಿರುವುದರಿಂದ ಮುಂಜಾಗೃತೆಯಿಂದ ಇಲ್ಲಿ ತೆರಳುವುದು ಉತ್ತಮ. ವಾನ್ ಹಳ್ಳಿ ವಾಹನ ಚಲಾಯಿಸಬಹುದಾದ ಕೊನೆಯ ಹಳ್ಳಿಯಾಗಿದ್ದು ಇಲ್ಲಿಂದ 23 ಕಿ.ಮೀ ಟ್ರೆಕ್ ಮೂಲಕ ಮಾತ್ರವೆ ರೂಪಕುಂಡಕ್ಕೆ ತೆರಳಬಹುದು. ಸೆಪ್ಟಂಬರ್, ಅಕ್ಟೋಬರ್ ಉತ್ತಮ ಸಮಯವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X