Search
  • Follow NativePlanet
Share
» »ಮರುಳು ಮಾಡುವ ಮುರುಡೇಶ್ವರ ಪ್ರವಾಸ

ಮರುಳು ಮಾಡುವ ಮುರುಡೇಶ್ವರ ಪ್ರವಾಸ

By Vijay

ನೀಳ ವರ್ಣದ ನಯನ ಮನೋಹರ ಕಡಲ ಹಾಸಿಗೆಯ ಹಿನ್ನಿಲೆಯಲಿ ಗಾಢ ಪ್ರಭಾವ ಬೀರುವ ಧ್ಯಾನ ಮೊಗದ ಪರಶಿವನ ವಿಶಾಲ ಕಾಯ ನೋಡಿದಾಕ್ಷಣ ಮನದ ಒತ್ತಡಗಳೆಲ್ಲವೂ ನಿರ್ನಾಮವಾಗಿ ಅಧ್ಯಾತ್ಮಿಕತೆಯ ದಿವ್ಯ ಭಾವ ಉಕ್ಕಿ ಹರಿಯುವಂತೆ ಮಾಡುವಂತಿದೆ ಮುರುಡೇಶ್ವರ.

ಹೌದು, ಮುರುಡೇಶ್ವರ ಗ್ರಾಮದ ಸೆಳೆತವೆ ಹಾಗಿದೆ. ನಿಜವಾಗಿಯೂ ಕರ್ನಾಟಕದಲ್ಲಿ ಯಾರೆ ಆಗಲಿ ಒಂದೊಮ್ಮೆ ನೋಡಲೇಬೇಕಾದ ಅದ್ಭುತ ತಾಣ ಇದಾಗಿದೆ. ಒಂದೆಡೆ ಸುಂದರ ಸಮುದ್ರ ತೀರದ ಅಲೆಗಳು ಕೈ ಬಿಸಿ ಕರೆಯುತ್ತಿದ್ದರೆ ಇನ್ನೊಂದೆಡೆ ಕರ್ನಾಟಕದಲ್ಲೆ ಅತ್ಯಂತ ಎತ್ತರವಾದ ರಾಜಗೋಪುರ ಹಾಗೂ ವಿಶಾಲವಾದ ಶಿವನ ಪ್ರತಿಮೆ ನೋಡುಗರ ಮನದಲ್ಲಿ ಕುತೂಹಲ ಕೆರಳಿಸುತ್ತದೆ.

ನಿಮಗಿಷ್ಟವಾಗಬಹುದಾದ : ಅರಸೀಕೆರೆ ಹಾಗೂ ಸುತ್ತಮುತ್ತ

ಮುರುಡೇಶ್ವರವು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಕೌಟುಂಬಿಕ ಯಾತ್ರಾ ಕೇಂದ್ರವಾಗಿದೆ. ಬೆಂಗಳೂರಿನಿಂದ ಮುರುಡೇಶ್ವರ ಸುಮಾರು 515 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ಮುರುಡೇಶ್ವರ ತನ್ನದೆ ಆದ ರೈಲು ನಿಲ್ದಾಣ ಹೊಂದಿದ್ದು ಮಂಗಳೂರು-ಮುಂಬೈ ಕೊಂಕಣ ರೈಲು ಮಾರ್ಗದಲ್ಲಿ ನಿಲುಗಡೆ ಹೊಂದಿದೆ.

ಇನ್ನೊಂದು ಗಮನಿಸಬೆಕಾದ ಅಂಶವೆಂದರೆ ಒಂದೊಮ್ಮೆ ಮುರುಡೇಶ್ವರಕ್ಕೆ ಹೊರಟರೆ ಅದರ ಸುತ್ತಮುತ್ತಲಿರುವ ಕೆಲವು ಇತರೆ ತಾಣಗಳಿಗೂ ಭೇಟಿ ನೀಡುವುದು ಒಳಿತು. ಏಕೆಂದರೆ ಇದರ ಸುತ್ತಮುತ್ತಲು ಶಿರಸಿ, ಗೋಕರ್ಣ, ಕೊಲ್ಲೂರಿನಂತಹ ಅದ್ಭುತ ತಾಣಗಳಿವೆ. ಅಲ್ಲದೆ ಇವುಗಳ ಮಧ್ಯದ ದೂರವು ಅತಿ ಕಡಿಮೆಯಾಗಿದ್ದು ಸುಲಭವಾಗಿ ಭೇಟಿ ನೀಡಲು ಅನುಕೂಲಕರವಾಗಿವೆ.

ಬನ್ನಿ, ಪ್ರಸ್ತುತ ಲೇಖನದ ಮೂಲಕ ಮುರುಡೇಶ್ವರದ ಕುರಿತು ಹಲವು ಆಸಕ್ತಿಕರ ವಿಷಯ ತಿಳಿಯಿರಿ. ಈ ವಿಷಯಗಳು ಖಂಡಿತವಾಗಿಯೂ ನಿಮ್ಮನ್ನು ಮುರುಡೇಶ್ವರಕ್ಕೆ ಭೇಟಿ ನೀಡುವುದಕ್ಕೆ ಹುರುದುಂಬಿಸುತ್ತವೆ.

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಕಂದುಕ ಬೆಟ್ಟದ ಮೇಲಿರುವ ಶಿವ ದೇವಾಲಯದ ಭವ್ಯ ಹಾಗೂ ಅತಿ ಎತ್ತರದ ರಾಜ ಗೋಪುರ. ಇದರ ಎತ್ತರ ಸುಮಾರು 237.5 ಅಡಿಗಳು. ಮುರುಡೇಶ್ವರ ಪ್ರವೇಶಿಸುವ ಮುಂಚೆಯೆ ಈ ಭವ್ಯ ಗೋಪುರವು ಅಮೋಘವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Pvnkmrksk

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ದೇವಸ್ಥಾನ ಆಡಳಿತ ಮಂಡಳಿಯು ಲಿಫ್ಟ್ ಸೇವೆಯನ್ನು ಒದಗಿಸಿದ್ದು ಇದರ ಮುಖಾಂತರ ಗೋಪುರದ ಮೇಲೆ ತೆರಳಿ ಅಲ್ಲಿಂದ ನಯನ ಮನೋಹರವಾದ ಧ್ಯಾನ ಮುದ್ರೆಯಲ್ಲಿರುವ ಶಿವನ ಅಮೋಘ ಪ್ರತಿಮೆಯನ್ನು ಕಣ್ಣಾರೆ ನೋಡಿ ಆನಂದಿಸಬಹುದು. ಈ ಪ್ರತಿಮೆಯು ದೇಶದಲ್ಲಿರುವ ಶಿವನ ಅತಿ ದೊಡ್ಡ ಪ್ರತಿಮೆಗಳ ಪೈಕಿ ಒಂದಾಗಿದ್ದು ಸುಮಾರು 123 ಅಡಿಗಳಷ್ಟು ಎತ್ತರವಿದೆ.

ಚಿತ್ರಕೃಪೆ: Vamshireddy

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಇನ್ನೂ ಈ ಪ್ರದೇಶಕ್ಕೆ ಮುರುಡೇಶ್ವರ ಎಂಬ ಹೆಸರು ಹೇಗೆ ಬಂದಿತು? ಇದರ ಹಿನ್ನಿಲೆ ಏನು ಎಂಬುದರ ಕುರಿತು ಚುಟುಕವಾಗಿ ತಿಳಿಯಿರಿ. ಪುರಾಣ ಪುಣ್ಯ ಕಥೆಗಳಲ್ಲಿ ವಿವರಿಸಲಾಗಿರುವಂತೆ ದೇವಾನು ದೇವತೆಗಳು ಶಿವನ ಆತ್ಮ ಲಿಂಗವನ್ನು ಭಕ್ತಿ ಶೃದ್ಧೆಗಳಿಂದ ಪೂಜಿಸಿ ಅಮರ ಹಾಗೂ ಅಜೇಯರಾದವರು. ಈ ಸತ್ಯವನ್ನರಿತಿದ್ದ ಲಂಕಾಧೀಶ ರಾವಣನು ತಾನು ಅವಿನಾಶಿ ಆಗಬೇಕೆಂಬ ಆಸೆ ಹೊಂದಿದ್ದ.

ಚಿತ್ರಕೃಪೆ: Abhiramk.pnr

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಆದರೆ ಆ ರೀತಿಯಾಗಲು ಅವನು ಆತ್ಮಲಿಂಗವನ್ನು ಪೂಜಿಸಬೇಕಿತ್ತು ಹಾಗೂ ಆತ್ಮಲಿಂಗವು ಶಿವನ ಬಳಿಯಿತ್ತು. ಹೀಗಾಗಿ ರಾವಣನು ಶಿವನನ್ನು ಕುರಿತು ಅತಿ ಕಠಿಣ ತಪ್ಪಸ್ಸನ್ನಾಚರಿಸಲು ಪ್ರಾರಂಭಿಸಿದ. ಅವನ ತಪಸ್ಸು ಎಷ್ಟು ಕಠಿಣವಾಗಿತ್ತೆಂದರೆ ಸ್ವತಃ ಶಿವನೆ ಪ್ರಸನ್ನನಾಗಿ ರಾವಣನಿಗೆ ವರದಾನ ಕೇಳಲು ಹೇಳಿದ. ಮುರುಡೇಶ್ವರ ದೇವಸ್ಥಾನದ ಪ್ರವೇಶ ದ್ವಾರದಲ್ಲಿರುವ ಆನೆಗಳು.

ಚಿತ್ರಕೃಪೆ: Макс Вальтер

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಸಂತೋಷಭರಿತನಾದ ರಾವಣ ಶಿವನನ್ನು ಕುರಿತು ಪೂಜಿಸಲು ಆತ್ಮಲಿಂಗವನ್ನು ಕೊಡಬೇಕಾಗಿ ವಿನಂತಿಸಿಕೊಂಡ. ಸ್ವಲ್ಪ ಹೊತ್ತು ಯೋಚಿಸಿದ ಶಿವ ಸಂತಸದಿಂದ ಆತ್ಮಲಿಂಗವನ್ನು ರಾವಣನಿಗೆ ನೀಡಿ ಲಂಕೆಗೆ ತೆರಳುವವರೆಗೆ ಭೂಮಿಯ ಮೇಲಿದನ್ನಿಡಕೂಡದೆಂದು ಶರತ್ತು ವಿಧಿಸಿ ಕಳುಹಿಸಿದ. ಇದರಿಂದ ಸರ್ವ ದೇವತೆಗಳಲ್ಲಿ ಭಯ ಮನೆ ಮಾಡಿ, ದಿಕ್ಕು ತೋಚದಂತಾಯಿತು. ಏಕೆಂದರೆ ರಾವಣ ಅಮರ ಹಾಗೂ ಅಜೇಯನಾದರೆ ಲೋಕ ನಾಶ ಖಂಡಿತ ಎಂಬುದು ಅವರ ಚಿಂತೆಯಾಗಿತ್ತು. ಒದಗಿಬಂದ ಈ ಸಂಕಷ್ಟ ಸ್ಥಿತಿಯನ್ನು ವಿವರಿಸಲು ದೇವತೆಗಳು ವಿಷ್ಣುವಿನ ಮೊರೆ ಹೋದರು ಹಾಗೂ ಉಪಾಯದ ಕುರಿತು ಯೋಚಿಸಿದರು. ದೇವಾಲಯ ಆವರಣದಲ್ಲಿ ನೆರೆದಿರುವ ಯಾತ್ರಿಕರು/ಪ್ರವಾಸಿಗರು.

ಚಿತ್ರಕೃಪೆ: Iramuthusamy

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಉಪಾಯದ ಭಾಗವಾಗಿ ಗಣೇಶನು ದನಗಾಹಿ ಹುಡುಗನಾಗಿ ವೇಷಧರಿಸಿಕೊಂಡು ಭೂಮಿಗೆ ಬಂದಿಳಿದ. ಇತ್ತ ವಿಷ್ಣು ಸೂರ್ಯನನ್ನು ಮರೆಯಾಗುವಂತೆ ಮಾಡಿ ಸಂಧ್ಯಾಕಾಲವಾದ ಪರಿಣಾಮ ಉಂಟುಮಾಡಿದ. ಸಂಧ್ಯಾ ಕಾಲದ ವಿಧಿ ವಿಧಾನಗಳನ್ನು ಯಾವಾಗಲೂ ಚಾಚು ತಪ್ಪದೆ ಮಾಡುತ್ತಿದ್ದ ರಾವಣ ಸಂಜೆಯಾಗಿರುವುದನ್ನು ಕಂಡು ಗೋಕರ್ಣದ ಸಮೀಪದ ಸ್ಥಳವೊಂದರಲ್ಲಿ ಕೆಳಗಿಳಿದು ತನ್ನ ಕಾರ್ಯ ಪೂರ್ಣಗೊಳಿಸಬೇಕೆನ್ನುವುದರ ಕುರಿತು ಯೋಚಿಸುವಾಗ ದನಗಾಹಿ ರೂಪದ ಗಣೇಶ ಅಲ್ಲಿಗೆ ಬರುತ್ತಿದುದನ್ನು ಕಂಡು ಅವನನ್ನು ಕರೆದು ಆತ್ಮ ಲಿಂಗವನ್ನು ಅವನ ಕೈಗೆ ನೀಡಿ ತಾನು ಮರಳುವವರೆಗೂ ಇಲ್ಲಿ ಕಾಯುತ್ತಿದ್ದು ಈ ಲಿಂಗವನ್ನು ಕೆಳಗಿಡುವಂತಿಲ್ಲ ಎಂದು ಕೇಳಿಕೊಂಡನು.

ಚಿತ್ರಕೃಪೆ: Rojypala

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಆ ಹುಡುಗ ಇದಕ್ಕೆ ಒಪ್ಪಿ, ತಾನೂ ಸಹ ಮೂರು ಬಾರಿ ಕೂಗುತ್ತೇನೆ. ಅಷ್ಟರಲ್ಲಿಯೂ ಮರಳದಿದ್ದರೆ ಈ ಆತ್ಮಲಿಂಗವನ್ನು ಇಲ್ಲೆ ಇಟ್ಟು ಹೊರಡುತ್ತೇನೆ ಎಂದು ಹೇಳಿದ. ನಂತರ ರಾವಣ ತನ್ನ ಕಾರ್ಯದಲ್ಲಿ ನಿರತನಾಗಿರುವಾಗ ಗಣೇಶ ಅವನನ್ನು ಕುರಿತು "ಇದರ ಭಾರ ನನ್ನಿಂದ ತಡೆಯಲಾಗುತ್ತಿಲ್ಲ ಬೇಗ ಬಾ" ಎಂದು ಮೂರು ಬಾರಿ ಕೂಗಿ ಕೊನೆಗೆ ರಾವಣ ಇನ್ನೇನು ಬರಬೇಕೆನ್ನುವಾಗ ಆ ಆತ್ಮಲಿಂಗವನ್ನು ಅಲ್ಲಿಯೆ ಇಟ್ಟು ತೆರಳಿದ.

ಚಿತ್ರಕೃಪೆ: Rojypala

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಇದರಿಂದ ಬೇಸರ ಹಾಗೂ ಕೊಪಗೊಂಡ ರಾವಣ ಹಲವು ಬಾರಿ ಆ ಆತ್ಮಲಿಂಗವನ್ನು ಹೊರತೆಗೆಯಲು ಪ್ರಯತ್ನಿಸಿದನಾದರೂ ಸಫಲನಾಗಲಿಲ್ಲ. ಕೊನೆಗೆ ಅದನ್ನು ನಾಶಪಡಿಸುವ ದೃಷ್ಟಿಯಿಂದ ಬಲ ಪ್ರಯೋಗ ಮಾಡಿದಾಗ ಕೆಲವು ಚೂರುಗಳು ಅಲ್ಲಲ್ಲಿರುವ ಕೆಲವು ಸ್ಥಳಗಳಲ್ಲಿ ಬಿದ್ದವು. ಆ ಸ್ಥಳಗಳೆ ಇಂದು ಸುರತ್ಕಲ್ ನ ಸದಾಶಿವ ದೇವಾಲಯ, ಗುಣೇಶ್ವರ, ಸಜ್ಜೇಶ್ವರ, ಧಾರೇಶ್ವರ ಹಾಗೂ ಕೊನೆಯದಾಗಿ ಆತ್ಮಲಿಂಗದ ಹೊರ ಕವಚ ಬಿದ್ದಿರುವ ಮೃದೇಶ್ವರ. ಈ ಮೃದೇಶ್ವರವೆ ಕಾಲ ಕಳೆದಂತೆ ಬಾಯಿಂದ ಬಾಯಿಗೆ ಹರಡಿ ಮುರುಡೇಶ್ವರವಾಯಿತು.

ಚಿತ್ರಕೃಪೆ: Rojypala

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಇಂದು ಮುರುಡೇಶ್ವರದಲ್ಲಿ ಕಂದುಕ ಬೆಟ್ಟದ ಮೇಲೆ ಶಿವನ ದೇವಾಲಯ ಸಂಕೀರ್ಣ, ರಾಜಗೋಪುರ ಹಾಗೂ ಅಪ್ರತಿಮ ಸೌಂದರ್ಯದ ಶಿವನ ಪ್ರತಿಮೆಯಿರುವುದನ್ನು ಕಾಣಬಹುದು. ರಾಜಗೋಪುರ ಹೆಸರಿಗೆ ತಕ್ಕ ಹಾಗೆಯೆ ರಾಜ ಕಳೆಯಿಂದ ಕೂಡಿರುವುದನ್ನು ಕಾಣಬಹುದು. ಇಂದು ನೋಡುತ್ತಿರುವ ದೇವಾಲಯ, ರಾಜಗೋಪುರವನ್ನು ಪ್ರಖ್ಯಾತ ಉದ್ಯಮಿ ಹಾಗೂ ಜನಾನುರಾಗಿ ಗಣ್ಯ ವ್ಯಕ್ತಿಯಾದ ಶ್ರೀ ಆರ್. ಎನ್ ಶೆಟ್ಟಿ ಅವರು ನಿರ್ಮಿಸಿದ್ದಾರೆ. ಮುರುಡೇಶ್ವರ ದೇವಸ್ಥಾನದ ಗರ್ಭಗೃಹದಿಂದ ಹೊರಬರುವ ದಾರಿ.

ಚಿತ್ರಕೃಪೆ: Iramuthusamy

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಇಲ್ಲಿನ ಕಡಲ ತೀರವು ಸಾಕಷ್ಟು ಸುಂದರವಾಗಿದ್ದು ಅದ್ಭುತವಾಗಿ ಸಮಯ ಕಳೆಯಲು ಹೇಳಿ ಮಾಡಿಸಿದಂತಿದೆ. ಗೋವಾದಲ್ಲಿರುವಂತೆ ವಿವಿಧ ಜಲ ಕ್ರೀಡಾ ಪರಿಕರಗಳು ಇನ್ನೂ ಇಲ್ಲಿ ಬರಬೇಕಾಗಿವೆ. ಮಿಕ್ಕಂತೆ ದೋಣಿ ಸವಾರಿ, ಕಡಲ ತೀರ ಬದಿಯ ವಿಹಾರಿ ಸ್ಥಳಗಳು, ಚಿಕ್ಕ ಪುಟ್ಟ ವ್ಯಾಪಾರ ಮಳಿಗೆಗಳು, ಉಪಹಾರಗೃಹಗಳು ಸಾಕಷ್ಟಿವೆ.

ಚಿತ್ರಕೃಪೆ: Yogesa

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಕಡಲ ತೀರದಲ್ಲಿ ಆನಂದದಿಂದ ಸಮಯ ಕಳೆಯುತ್ತಿರುವ ಸಂದರ್ಶಿಕರು.

ಚಿತ್ರಕೃಪೆ: Foliate08

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಸೌಮ್ಯ ಹಾಗೂ ಪ್ರಶಾಂತತೆಯಿಂದ ಕೂಡಿರುವ ರುದ್ರಮಯ ಮುರುಡೇಶ್ವರ ಕಡಲ ತೀರ.

ಚಿತ್ರಕೃಪೆ: RNM

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ತೆಂಗಿನ ಮರಗಳಿಂದ ಆವರಿಸಿರುವ ಮುರುಡೇಶ್ವರ ಗ್ರಾಮದ ಒಂದು ಪಾಕ್ಷಿಕ ನೋಟ.

ಚಿತ್ರಕೃಪೆ: Pradeep717

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ದೇವಾಲಯದಾರನದಲ್ಲಿರುವ ಕೃಷ್ಣಾರ್ಜುನರ ರಥದ ಶಿಲ್ಪಕಲೆ.

ಚಿತ್ರಕೃಪೆ: Prashant Sahu

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ವ್ಯಾಸ ಮಹರ್ಷಿಗಳು ಗಣೇಶನಿಗೆ ಮಹಾಭಾರತವನ್ನು ಹೇಳುತ್ತಿರುವ ಪ್ರಸಂಗದ ಕೆತ್ತನೆ, ಮುರುಡೇಶ್ವರದ ಶಿವ ದೇವಾಲಯ ಆವರಣದಲ್ಲಿ.

ಚಿತ್ರಕೃಪೆ: Yogesa

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರದ ನಂತರ ಸಮಯವಿದ್ದರೆ ಖಂಡಿತವಾಗಿಯೂ ಇನ್ನೊಂದು ಸುಂದರ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಅದೆ ಕರ್ನಾಟಕದ ಮತ್ತೊಂದು ಪ್ರವಾಸ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣ. ಮುರುಡೇಶ್ವರದಿಂದ ಕೇವಲ 77 ಕಿ.ಮೀ ಗಳಷ್ಟು ದೂರದಲ್ಲಿರುವ ಗೋಕರ್ಣವನ್ನು ಕೊಚ್ಚಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಾಗುತ್ತ ಕುಮಟಾ, ಹೊನ್ನಾವರದ ಮೂಲಕ ಸುಲಭವಾಗಿ ತಲುಪಬಹುದು. ಗೋಕರ್ಣವೂ ಸಹ ಸುಂದರ ಕಡಲ ಕಿನಾರೆಗಳುಳ್ಳ ಒಂದು ಕೌಟುಂಬಿಕ ಹಾಗೂ ಧಾರ್ಮಿಕ ಯಾತ್ರಾ ತಾಣವಾಗಿದೆ.

ಚಿತ್ರಕೃಪೆ: Nechyporuk Iuliia

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಕಡಲ ತೀರಗಳ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Infoayan

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಗೋಕರ್ಣದಲ್ಲಿ ಶಿವನು ಮಹಾಬಲೇಶ್ವರನಾಗಿ ನೆಲೆಸಿದ್ದು ಅಸಂಖ್ಯಾತ ಭಕ್ತರು ಶಿವನ ದರುಶನಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗವು ರಾವಣನಿಂದ ತಂದಿದುದಾಗಿದೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Sbblr geervaanee

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಕ್ಷೇತ್ರದಲ್ಲಿ ಮಹಾಬಲೇಶ್ವರನ ದೇವಾಲಯ ಹೊರತುಪಡಿಸಿ ಮಹಾ ಗಣಪತಿ ದೇವಾಲಯ , ಭದ್ರಕಾಳಿ ದೇವಾಲಯ, ವರದರಾಜ ದೇವಾಲಯ ಮತ್ತು ವೆಂಕಟರಮಣ ದೇವಾಲಯಗಳನ್ನೂ ಸಹ ಕಾಣಬಹುದು. ಗೋಕರ್ಣದಲ್ಲಿರುವ ಶ್ರೀ ಸೀತಾ ರಾಮ ಲಕ್ಷ್ಮಣ ದೇವಾಲಯ.

ಚಿತ್ರಕೃಪೆ: Miran Rijavec

ಮುರುಡೇಶ್ವರ ಶಿವನ ಭೇಟಿ:

ಮುರುಡೇಶ್ವರ ಶಿವನ ಭೇಟಿ:

ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಹಾಫ್ ಮೂನ್ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಕಡಲ ತೀರಗಳಾಗಿವೆ.

ಚಿತ್ರಕೃಪೆ: Andy Wright

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X