Search
  • Follow NativePlanet
Share
» »ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

ಪ್ರೀತಿ ಸಾರುವ ಈ ಪ್ರೇಮ ಮಂದಿರವನ್ನು ನೋಡಲೇಬೇಕು ಕಣ್ರಿ!

By Vijay

ಸಂಸ್ಕೃತದಲ್ಲಿ "ವಸುದೈವ ಕುಟುಂಬಕಂ" ಎಂಬ ಹೇಳಿಕೆಯಿದೆ. ಇದರ ಅರ್ಥ ವಿಶ್ವವೆ ಒಂದು ಕುಟುಂಬವಿದ್ದಂತೆ. ಯಾವುದೆ ಬೇಧ-ಭಾವಗಳಿಲ್ಲದೆ, ಮತ್ಸರ-ಅಸೂಯೆಗಳಿಲ್ಲದೆ ವಿಶ್ವದಲ್ಲಿರುವ ಸರ್ವರೂ ಒಂದೆ, ಒಂದು ಕುಟುಂಬದವರಿದ್ದಂತೆ ಎಂದು ಸಾರುತ್ತದೆ ಭಾರತದ ಸನಾತನ ಧರ್ಮ. ಇದರಿಂದಲೆ ಸಾಕು ಭಾರತ ಎಂತಹ ಒಂದು ಶ್ರೇಷ್ಠ ಹಾಗೂ ಪುಣ್ಯ ಭೂಮಿ ಎಂದು.

ಇಂದಿನ ಹೊಲಸುತನ, ರಾಜಕೀಯ, ಮೋಸತನ, ಭ್ರಷ್ಟತನ ಎಂತಹ ದುಷ್ಟತನವೆ ಇರಲಿ ಅದನ್ನೊಮ್ಮೆ ಪಕ್ಕಕಿಡಿ. ಮೂಲತಃ ನಮ್ಮ ಪೂರ್ವಜರಾದ ಋಷಿ-ಮುನಿಗಳು ಪ್ರತಿಯೊಬ್ಬ ಮನುಷ್ಯನಿಗೆ ತಿಳಿ ಹೇಳಿದ್ದು ಭ್ರಾತೃತ್ವವೆ ಹೊರತು ಬೇರೇನೂ ಅಲ್ಲ. ಎಲ್ಲರೂ ತಮ್ಮ ತಮ್ಮೊಳಗೆ ಭ್ರಾತೃತ್ವವನ್ನು ಬೆಳೆಸಿಕೊಂಡು ಪ್ರೀತಿಯನ್ನು ಹಂಚಿಕೊಂಡು ಬದುಕಿದರೆ ಜೀವನವೆಂಬುದು ಅಮೃತದ ಹನಿಯಂತಾಗುತ್ತದಲ್ಲವೆ?

ಇಂತಹ ಉಪದೇಶವನ್ನು ಭಾರತದಲ್ಲಿ ಆಗಿ ಹೋದ ಇಂದಿಗೂ ಭಕ್ತರ ಮನದಲ್ಲಿ ಜೀವಂತವಾಗಿರುವ ಅನೇಕ ಸಾಧು ಸಂತರು ಮಾಡಿದ್ದಾರೆ. ಪ್ರತಿಯೊಬ್ಬರೂ ಅರಿಷಡ್ವರ್ಗಗಳನ್ನು ತ್ಯಜಿಸಿ ನಿಷ್ಕಲ್ಮಶವಾದ ಪ್ರೀತಿಯನ್ನು ತೋರುವ ಮೂಲಕ ಜಗತ್ತಿನಲ್ಲಿ ಶಾಂತಿ, ನೆಮ್ಮದಿಗಳುಂಟಾಗುವಂತೆ ಮಾಡಬಹುದು.

ಈ ರೀತಿಯಾಗಿ, ಸಹೋದರತ್ವವನ್ನು ಹುರುದುಂಬಿಸುವ, ಪ್ರೀತಿಯನ್ನು ಸಾರುವ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ಸ್ಮಾರಕವಾಗಿ ಕಂಗೊಳಿಸುತ್ತದೆ ಈ ಲೇಖನದಲ್ಲಿ ತಿಳಿಸಲಾಗಿರುವ ಪ್ರೇಮ ಮಂದಿರ ಅಥವಾ ಪ್ರೀತಿಯ ದೇವಾಲಯ. ಹಾಗಾದರೆ ಬನ್ನಿ, ಈ ಸುಂದರ ಹಾಗೂ ಅನನ್ಯ ಶಿಲ್ಪಕಲೆಯ ದೇವಾಲಯದ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.

ಉತ್ತರ ಪ್ರದೇಶದಲ್ಲಿ

ಉತ್ತರ ಪ್ರದೇಶದಲ್ಲಿ

ಈ ಸುಂದರ, ನಯನ ಮನೋಹರ, ವಿಶಾಲ ಹಾಗೂ ಆಕರ್ಷಕವಾದ ದೇವಾಲಯವು ಉತ್ತರ ಪ್ರದೇಶ ರಾಜ್ಯದ ಮಥುರಾನಲ್ಲಿರುವ ಬೃಂದಾವನ/ವೃಂದಾವನದಲ್ಲಿದೆ. ಈ ದೇವಾಲಯವನ್ನು ಪ್ರೇಮ ಮಂದಿರ ಎಂತಲೆ ಕರೆಯಲಾಗುತ್ತದೆ.

ಚಿತ್ರಕೃಪೆ: Biswarup Ganguly

ಪ್ರೇಮ ಮಂದಿರ

ಪ್ರೇಮ ಮಂದಿರ

ಪ್ರೇಮ ಮಂದಿರದಲ್ಲಿ ಪ್ರಮುಖವಾಗಿ ವಿಷ್ಣುವಿನ ಎರಡು ಅವತಾರಗಳನ್ನು ಕಾಣಬಹುದು. ಒಂದು ರಾಧಾ-ಕೃಷ್ಣ ಹಾಗೂ ಎರಡು ಸೀತಾ-ರಾಮರದ್ದು. ಹೌದು, ಈ ದೇವಾಲಯದ ಪ್ರಧಾನ ದೇವರುಗಳು ಇವರಿಬ್ಬರೆ. ಕೃಷ್ಣನ ನಿಷ್ಕಲ್ಮಶ ಪ್ರೀತಿ ಹಾಗೂ ರಾಮನ ಸಾತ್ವಿಕ ಗುಣ ಎಲ್ಲೆಡೆ ಪಸರಿಸಲಿ ಎಂಬ ಸದುದ್ದೇಶದಿಂದ ಈ ದೇವಾಲಯದ ನಿರ್ಮಾಣ ಮಾಡಲಾಗಿದೆ.

ಚಿತ್ರಕೃಪೆ: Bhavishya Goel

ಹನ್ನೆರಡು ಎಕರೆಗಳಷ್ಟು

ಹನ್ನೆರಡು ಎಕರೆಗಳಷ್ಟು

ಸುಮಾರು 12 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಅತ್ಯಂತ ಸುಂದರವಾಗಿ ಕಂಗೊಳಿಸುವಂತೆ ಕಟ್ಟಲಾಗಿರುವ ಈ ಅದ್ಭುತ ದೇವಾಲಯವು ತನ್ನ ಅತ್ಯಂತ ಆಕರ್ಷಕವಾದ ವಾಸ್ತುಶೈಲಿ ಹಾಗೂ ಕಣ್ಮನಸೆಳೆಯುವಂತಹ ಶಿಲ್ಪಕಲೆಗಳಿಂದ ನೋಡುಗರನ್ನು ಒಂದೆ ಕ್ಷಣದಲ್ಲಿ ಭಾವ ಪರವಶರಾಗುವಂತೆ ಮಾಡಿ ಬಿಡುತ್ತದೆ.

ಚಿತ್ರಕೃಪೆ: KuwarOnline

ವೃಂದಾವನ ನಗರದಲ್ಲಿ

ವೃಂದಾವನ ನಗರದಲ್ಲಿ

ಮಥುರಾ ಜಿಲ್ಲೆಯಲ್ಲಿರುವ ಪವಿತ್ರ ಧಾರ್ಮಿಕ ಯಾತ್ರಾ ಕೇಂದ್ರವಾದ ವೃಂದಾವನದ ರಮಣ ರೇತಿ ಎಂಬಲ್ಲಿ ಸ್ಥಿತವಿರುವ ಈ ಮಂದಿರವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು ಮಥುರಾಗೆ ಭೇಟಿ ನೀಡುವ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡದೆ ತೆರಳಲಾರರು.

ಚಿತ್ರಕೃಪೆ: आशीष भटनागर

ಬ್ರಿಜ್ ಜನ್ಮಭೂಮಿ!

ಬ್ರಿಜ್ ಜನ್ಮಭೂಮಿ!

ಕೃಷ್ಣನ ಜನ್ಮಸ್ಥಳವಾದ ವೃಂದಾವನವು ಮಥುರಾ ನಗರದಿಂದ ಕೇವಲ ಹನ್ನೊಂದು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು ಮಥುರಾದಿಂದ ಇಲ್ಲಿಗೆ ಬರಲು ಸಾಕಷ್ಟು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು, ರಿಕ್ಷಾಗಳು ದೊರೆಯುತ್ತವೆ. ಇನ್ನೂ ಮಥುರಾ ಅಗ್ರಾ ಹಾಗೂ ದೆಹಲಿಗೆ ಸನೀಹವಾಗಿದ್ದು ಉತ್ತಮ ರಸ್ತೆ ಸಂಪರ್ಕ ಹಾಗೂ ರೈಲು ಮಾರ್ಗಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Parfen Rogozhin

ಜಗದ್ಗುರು ಶ್ರೀ ಕೃಪಾಲು ಜೀ ಮಹಾರಾಜರು

ಜಗದ್ಗುರು ಶ್ರೀ ಕೃಪಾಲು ಜೀ ಮಹಾರಾಜರು

ಈ ಸುಂದರವಾದ ಪ್ರೇಮ ಮಂದಿರವು ರಸಿಕ ಸಂತ ಜಗದ್ಗುರು ಶ್ರೀ ಕೃಪಾಲು ಜೀ ಮಹಾರಾಜ ಅವರಿಂದ ವೃಂದಾವನದ ಪುಣ್ಯ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದ್ದು ಅವರು ಈ ಸ್ಮಾರಕವನ್ನು ಲೋಕಕ್ಕೆಂದೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ಚಿತ್ರಕೃಪೆ: Biswarup Ganguly

ಸದುದ್ದೇಶ

ಸದುದ್ದೇಶ

ಪ್ರೀತಿ-ಭ್ರಾತೃತ್ವವನ್ನೆ ಸಾರುವ ಈ ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬನೂ ಅದರಿಂದ ಪ್ರಭಾವಿತನಾಗಿ ಎಲ್ಲೆಡೆಯೂ ಅದನ್ನೆ ಪಸರಿಸುವಂತಹ ಗುಣವನ್ನು ಹೊಂದಲಿ ಹಾಗೂ ಈ ರೀತಿಯಾಗಿ ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಪ್ರಖರವಾಗಿ ಸರ್ವ ದಿಕ್ಕಿನಲ್ಲೂ ಪ್ರೀತಿ-ಶಾಂತಿಗಳು ಶಾಶ್ವತವಾಗಿ ನೆಲೆಸಲಿ ಎಂಬುದು ಈ ದೇವಾಲಯ ನಿರ್ಮಾಣದ ಹಿಂದಿರುವ ಸದುದ್ದೇಶವಾಗಿದೆ.

ಚಿತ್ರಕೃಪೆ: Officialamit

ಎಲ್ಲ ರೀತಿಯಿಂದಲೂ

ಎಲ್ಲ ರೀತಿಯಿಂದಲೂ

ಇದೊಂದು ಭಾರತದಲ್ಲಿ ಕಂಡುಬರುವ ಏಕೈಕ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಭಾರತದ ಸನಾತನಧರ್ಮದ ಆಯಾಮಗಳನ್ನು ಪ್ರೋತ್ಸಾಹಿಸುವ ಹಾಗೂ ಅಗಾಧ ಶಿಲ್ಪಕಲೆಯಿಂದ ಜನರನ್ನು ಚುಂಬಕದಂತೆ ಸೆಳೆವ ಸ್ಮಾರಕ ದೇವಾಲಯವಾಗಿದೆ.

ಚಿತ್ರಕೃಪೆ: आशीष भटनागर

ಹೀಗೆ ಸಾಗಿತು

ಹೀಗೆ ಸಾಗಿತು

ಒಂದೊಮ್ಮೆ ವೃಂದಾವನದಲ್ಲಿ ಕೃಪಾಲು ಮಹಾರಾಜರಿಂದ ನಡೆಯುತ್ತಿದ್ದ ಪ್ರವಚನದ ಸಂದರ್ಭದಲ್ಲಿ ನೆರೆದಿದ್ದ ಭಕ್ತಸಾಗರವು ಜಗದ್ಗುರುವನ್ನು ಕುರಿತು, ಈ ಜೀವನದಲ್ಲಿ ಶಾಶ್ವತ ಆನಂದ ಪಡೆಯಲು ಕೃಷ್ಣನ ಭಕ್ತಿಯಲ್ಲಿ ತನ್ಮಯವಾಗುವುದು ಅವಶ್ಯಕವಾಗಿದ್ದು ಅಂತಹ ಒಂದು ಭಕ್ತಿಯನ್ನು ಮಾಡಲು ಅನುಕೂಲಕರವಾದ ಒಂದು ಪವಿತ್ರ ಆಲಯದ ನಿರ್ಮಾಣದ ಕುರಿತು ಪ್ರಾರ್ಥಿಸಿದ್ದುದು ಈ ದೇವಾಲಯ ನಿರ್ಮಾಣಕ್ಕೆ ನಾಂದಿಯಾಯಿತು.

ಚಿತ್ರಕೃಪೆ: Rishabh gaur

ಪೂರ್ಣಗೊಂಡಿದ್ದು

ಪೂರ್ಣಗೊಂಡಿದ್ದು

ಈ ದೇವಾಲಯ ಸ್ಮಾರಕ ರಚನೆಗೆ ಅಡಿಪಾಯದ ಶಂಖು ಸ್ಥಾಪನೆಯನ್ನು 14 ಜನವರಿ 2001 ರಂದು ನೆರವೇರಿಸಲಾಯಿತು. ತದನಂತರ ಇದರ ನಿರ್ಮಾಣ ಕಾರ್ಯವು ಬಲು ಮುತುವರ್ಜಿಯಿಂದ ಸಾಗಿತು ಹಾಗೂ ಕೊನೆಯದಾಗಿ ಇದು ಪೂರ್ಣಗೊಂಡು ಉದ್ಘಾಟನೆಯಾದ ಸಮಯ 17 ಫೆಬ್ರುವರಿ 2012 ರಂದು.

ಚಿತ್ರಕೃಪೆ: KuwarOnline

ಆಕರ್ಷಿಸಿತು!

ಆಕರ್ಷಿಸಿತು!

2012 ರಲ್ಲಿ ಲೋಕಾರ್ಪಣೆಯಾದ ಈ ಪ್ರೇಮ ಮಂದಿರವು ದಿನ ಕಳೆದಂತೆ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯತೊಡಗಿತು. ಇಂದು ವೃಂದಾವನದ ಬಲು ಆಕರ್ಷಕ ಸ್ಮಾರಕ ದೇವಾಲಯ ರಚನೆಯಾಗಿ ಭಕ್ತರ ಹೃದಯ ಕಮಲದಲ್ಲಿ ಅಚ್ಚಳಿಯದಂತೆ ನೆಲೆಸಿದೆ.

ಚಿತ್ರಕೃಪೆ: Ani725

ಎಷ್ಟು ನೋಡಿದರೂ ಕಮ್ಮಿ!

ಎಷ್ಟು ನೋಡಿದರೂ ಕಮ್ಮಿ!

ಉತ್ಸವ ಸಂದಭಗಳಲ್ಲಿ ಅದರಲ್ಲೂ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಇದನ್ನು ಪ್ರಕಾಶದಿಂದ ಅಲಂಕರಿಸಲಾದ ನೋಟವನ್ನು ನೋಡಿದಾಗ ಅದನ್ನು ಎಂದಿಗೂ ಮರೆಯುವಂತಿಲ್ಲ. ಅಷ್ಟೊಂದು ಸೊಗಸಾಗಿ ಹಾಗೂ ಪ್ರಕಶಮಾನವಾಗಿ ಈ ಸುಂದರ ರಚನೆ ಕಂಗೊಳಿಸುತ್ತದೆ.

ಚಿತ್ರಕೃಪೆ: Biswarup Ganguly

ಇಟಾಲಿಯನ್ ಮಾರ್ಬಲ್

ಇಟಾಲಿಯನ್ ಮಾರ್ಬಲ್

ಈ ದೇವಾಲಯ ನಿರ್ಮಾಣದಲ್ಲಿ ಬಳಸಲಾದ ಎಲ್ಲ ಮಾರ್ಬಲ್ಲುಗಳು ಇಟಾಲಿಯನ್ ಮಾರ್ಬಲ್ಲುಗಳು ಹಾಗೂ ದೇವಾಲಯದ ಒಂದೊಂದಿ ಚಿಕ್ಕ ಚಿಕ್ಕ ಭಾಗಗಳನ್ನು ಬಲು ಮುತುವರ್ಜಿವಹಿಸಿ ನಿರ್ಮಿಸಲಾಗಿದೆ. ಸಾಕಷ್ಟು ಸೂಕ್ಷ್ಮತೆಯ ವಿವರಗಳ ಆಧುನಿಕ ಗಣಕಯಂತ್ರಗಳ ಸಹಾಯವನ್ನು ಬಳಸಿಕೊಂಡು ನಿರ್ಮಿಸಲಾಗಿದೆ.

ಚಿತ್ರಕೃಪೆ: Biswarup Ganguly

ಆಧುನಿಕತೆ ಬಳಸಲಾಗಿದೆ

ಆಧುನಿಕತೆ ಬಳಸಲಾಗಿದೆ

ದೇವಾಲಯದ ಒಂದೊಂದು ಗೋಡೆಗಳಲ್ಲಿಯೂ ಕೆತ್ತಲಾದ ಅತಿ ಸುಂದರ ಮನಮೋಹಕ ಕಲಾಕೃತಿಗಳನ್ನು ಸಾಕಷ್ಟು ಗಮನಹರಿಸಿ ನಿರ್ಮಿಸಲಾಗಿದೆ. ಹಾಗಾಗಿ ದೇವಾಲಯದ ಪ್ರತಿ ರಚನೆಯಲ್ಲೂ ಅತ್ಯದ್ಭುತವಾದ ಶ್ರೀಮಂತ ಕಲೆಯನ್ನು ನೋಡಬಹುದಾಗಿದೆ. ತಾಂರಿಕ ಕೌಶಲ್ಯತೆಗೆ ಅದ್ಭುತ ಸಾಕ್ಷಿಯಾಗಿ ಈ ದೇವಾಲಯ ಮಾದರಿಯಾಗಿ ಕಂಡುಬರುತ್ತದೆ.

ಚಿತ್ರಕೃಪೆ: KuwarOnline

ಉದ್ಯಾನಗಳು

ಉದ್ಯಾನಗಳು

ಕೇವಲ ದೇವಾಲಯ ರಚನೆ ಅಷ್ಟೆ ಅಲ್ಲ, ಅದ್ರ ಸುತ್ತಮುತ್ತಲಿನ ಪ್ರದೇಶವೂ ಸಾಕಷ್ಟು ನಯನಮನೋಹರವಾಗಿ, ಸುಂದರ ಅನುಭೂತಿ ನೀಡುವಂತೆ ನಿರ್ಮಿಸಲಾಗಿದೆ. ಎಲ್ಲೆಡೆ ಸ್ವಚ್ಛತೆಯು ಮನಸ್ಸನ್ನು ನಿರ್ಮಲಗೊಳಿಸುತ್ತದೆ.

ಚಿತ್ರಕೃಪೆ: KuwarOnline

ಕಾರಂಜಿಗಳು

ಕಾರಂಜಿಗಳು

ವಿಶಾಲ ಉದ್ಯಾನಗಳು, ಎಲ್ಲೆಡೆ ನಳ ನಳಿಸುವ ಮನಸ್ಸಿಗೆ ತಂಪನ್ನೀಯುವ ಹಸಿರು, ಶಿಸ್ತುಬದ್ಧವಾದ ವಿನ್ಯಾಸ, ಆಕರ್ಷಕ ಕಲಾಕೃತಿಗಳು, ನೀರಿನ ಕಾರಂಜಿಗಳು ಭೇಟಿ ನೀಡಿದವರ ಮನ ಪುಳಕಿತಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಈ ಒಂದು ರಚನೆಯು ವೃಂದಾವನದಲ್ಲಿ ನೋಡಲೇಬೇಕಾದ ಆಕರ್ಷಣೆಯಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: KuwarOnline

ಕೃಪಾಲು ಪರಿಷತ್

ಕೃಪಾಲು ಪರಿಷತ್

ಪ್ರಸ್ತುತ ಈ ದೇವಾಲಯದ ಸಕಲ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ ಅಂತಾರಾಷ್ಟ್ರೀಯ ಲಾಭರಹಿತ ಶೈಕ್ಷಣಿಕ, ಆಧ್ಯಾತ್ಮಿಕ ಕೇಂದ್ರವಾದ ಜಗದ್ಗುರು ಕೃಪಾಲು ಪರಿಷತ್ ಎಂಬ ಟ್ರಸ್ಟ್.

ಚಿತ್ರಕೃಪೆ: KuwarOnline

ಜಗದ್ಗುರು

ಜಗದ್ಗುರು

ಕೃಪಾಲು ಜಗದ್ಗುರು ಮಹಾರಾಜರು ಕೃಷ್ಣನ ಭಕ್ತಿಯ ಗಾನದಲ್ಲಿ, ನೆರೆದ ಭಕ್ತಸಾಗರ. ಪ್ರೇಮ ಮಂದಿರದಲ್ಲಿ ನಿರ್ಮಿಸಲಾಗಿರುವ ದೃಶ್ಯಚಿತ್ರ.

ಚಿತ್ರಕೃಪೆ: T.sujatha

ವೃಂದಾವನದಲ್ಲಿ

ವೃಂದಾವನದಲ್ಲಿ

ಕೃಷ್ಣನು ಪ್ರಾಣ ಸಂಕಟದ ಮಳೆಯ ಆರ್ಭಟದಿಂದ ತನ್ನ ಜನರನ್ನು ಕಾಪಾಡಲು ತೋರಿದ ಪವಾಡ, ಗೋವರ್ಧನ ಗಿರಿಯನ್ನೆ ತನ್ನ ಒಂದೆ ಬೆರಳಿನಲ್ಲಿ ಎತ್ತಿ ಹಿಡಿದಿದ್ದು.

ಚಿತ್ರಕೃಪೆ: Biswarup Ganguly

ಮನಕದಿಯುವ ಸೊಬಗು

ಮನಕದಿಯುವ ಸೊಬಗು

ಈ ಪ್ರೇಮ ಮಂದಿರವನ್ನು ವಿವಿಧ ಬಣ್ಣಗಳ ಪ್ರಕಾಶಗಳಿಂದ ಸಾಮಾನ್ಯವಾಗಿ ಅಲಂಕರಿಸಲಾಗುತ್ತದೆ. ಈ ವಿಶೇಷ ಬಣ್ಣಗಳಿಂದಲೆ ಇದು ಸಾಕಷ್ಟು ಪ್ರವಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: T.sujatha

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X