Search
  • Follow NativePlanet
Share
» »ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!

ಇಲ್ಲಿಯವರೆಗೆ ಯಾರಿಗೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ..!

ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಉಂಟೇ ಎಂದು ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ಪ್ರವಾಸ ಪ್ರಿಯರಿಗೆ ಇಂತಹ ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಖಂಡಿತ ಇರುತ್ತದೆ. ಹಾಗಾಗಿ ಇಂದು ನಾವು ನಿಮಗೆ ಅಂತಹ ನಿಗೂಢ ಸ್ಥಳವೊಂದರ ಬಗ್ಗೆ ಹೇಳಲಿದ್ದೇವೆ. ಅಂದಹಾಗೆ ಆ ಸ್ಥಳ ಇರುವುದು ಬಹಳ ದೂರದಲ್ಲೇನು ಇಲ್ಲ. ಬಿಹಾರದಲ್ಲಿದೆ. ಬಿಹಾರದ ನಳಂದ ಎಂಬ ಜಿಲ್ಲೆಯಲ್ಲಿ ರಾಜ್ ಗಿರ್ ಎಂಬ ಪಟ್ಟಣವಿದೆ.

ಈ ರಾಜ್ ಗಿರ್ ನಲ್ಲಿ ಸೋನ್ ಭಂಡಾರ್ ಅಥವಾ ಸ್ವರ್ಣ್ ಭಂಡಾರ್ ಎಂಬ ಸುಪ್ರಸಿದ್ಧ ಗುಹೆಗಳಿವೆ. ಈ ಗುಹೆಗಳ ವಿಶೇಷತೆಯೆಂದರೆ ಇಲ್ಲಿಯವರೆಗೆ ಯಾರೂ ಈ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ವಿಶೇಷವೆಂದರೆ ಹತ್ತಲ್ಲ, ಇಪ್ಪತ್ತಲ್ಲ ಸಾವಿರಾರು ಬಾರಿ ಪ್ರಯತ್ನಿಸಿದರೂ ಇಂದಿಗೂ ಯಾರಿಗೂ ಗುಹೆಯೊಳಗಿನ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಕೆಲವರು ಈ ಗುಹೆಗಳ ಬಾಗಿಲಿನ ಹಿಂದೆ ನಿಧಿಯಿದೆ ಎಂದು ಹೇಳುತ್ತಾರೆ. ಹಾಗಾದರೆ ನಿಜಕ್ಕೂ ಆ ಗುಹೆಯೊಳಗೆ ಏನಿದೆ?, ಏಕೆ ಆ ಗುಹೆಗಳ ಬಾಗಿಲನ್ನು ತೆರೆಯಲು ಸಾಧ್ಯವಾಗಿಲ್ಲ? ಹೀಗೆ ಮುಂತಾದ ವಿಷಯಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿ...

bhandarcaves-1-1660730763.jpg

ಈ ಗುಪ್ತ ನಿಧಿ ಯಾರಿಗೆ ಸೇರಿದ್ದು?

ರಾಜ್ ಗಿರ್ ಬಿಹಾರ ರಾಜ್ಯದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಪ್ರಾಚೀನ ಕಾಲದಲ್ಲಿ ಮಗಧದ ರಾಜಧಾನಿಯಾಗಿತ್ತು. ಅಲ್ಲದೆ, ಭಗವಾನ್ ಬುದ್ಧನು ಮಗಧದ ಚಕ್ರವರ್ತಿ ಬಿಂಬಿಸಾರಗೆ ಉಪದೇಶವನ್ನು ನೀಡಿದ್ದು ಇಲ್ಲಿಯೇ. ವಿಶೇಷವಾಗಿ ರಾಜ್ ಗಿರ್ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳು ಮತ್ತು ಸೋನ್ ಭಂಡಾರ್ ಗುಹೆಗಳಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸೋನ್ ಭಂಡಾರ್'ನಲ್ಲಿ ಗುಪ್ತ ನಿಧಿ ಇದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿಯವರೆಗೆ ಯಾರಿಗೂ ಇದನ್ನು ಹುಡುಕಲು ಸಾಧ್ಯವಾಗಿಲ್ಲ. ಈ ನಿಧಿಯು ಮೌರ್ಯ ದೊರೆ ಬಿಂಬಿಸಾರನದ್ದು ಎಂದು ಹೇಳಲಾಗುತ್ತದೆ, ಆದರೂ ಕೆಲವರು ಇದನ್ನು ಹಿಂದಿನ ಮಗಧ ಚಕ್ರವರ್ತಿ ಜರಸಂಘನದ್ದು ಎಂದೂ ಹೇಳುತ್ತಾರೆ.

ಗುಹೆಯನ್ನು ನಿರ್ಮಿಸಿದ್ದು ಜೈನ ಮುನಿಗಳು

ಸೋನ್‌ ಭಂಡಾರ್ ಗುಹೆಗಳು ಪ್ರಾಚೀನ ಕಾಲದಲ್ಲಿ ಚಿನ್ನದ ನಿಧಿಗಳನ್ನಿಡಲು ನೆಲೆಯಾಗಿತ್ತು ಎಂದು ನಂಬಲಾಗಿದೆ. ಗುಹೆಗಳ ಗೋಡೆಗಳ ಒಳಗೆ ಚಿನ್ನವನ್ನಿಡಲಾಗಿದೆ ಎಂದು ಜನರು ಹೇಳುತ್ತಾರೆ. ಗುಹೆಯೊಳಗೆ ನಿಧಿ ಇಟ್ಟಿರುವ ಮಾರ್ಗವೂ ಇದೆ ಎಂದು ಹೇಳಲಾಗುತ್ತದೆ. ಆದರೆ ಯಾರೂ ಇದನ್ನು ಕಂಡುಹಿಡಿಯಲಾಗಿಲ್ಲ. ಅಲ್ಲದೆ, ಇಲ್ಲಿ ಲಿಖಿತ ಶಾಸನಗಳಿವೆ. ಗುಹೆಯ ಪ್ರವೇಶದ್ವಾರದಲ್ಲಿರುವ ಬಂಡೆಯ ಮೇಲೆ ಗುಪ್ತ ಭಾಷೆಯಲ್ಲಿ ಬರೆಯಲಾದ ಶಾಸನದ ಪ್ರಕಾರ, ಈ ಗುಹೆಗಳನ್ನು ವೈರದೇವ ಎಂಬ ಜೈನ ಮುನಿಯಿಂದ ನಿರ್ಮಿಸಲಾಗಿದೆ. 319 ರಿಂದ 180 ಬಿಸಿಇ ವರೆಗಿನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಗುಹೆಗಳನ್ನು ನಿರ್ಮಿಸಲಾಯಿತು.

ಒಂದು ಗುಹೆಯು ಕೋನ್ ಆಕಾರದ ಛಾವಣಿ ಹೊಂದಿದ್ದು, ಚೌಕಾಕಾರದ ಆಕಾರದಲ್ಲಿದೆ. ಇದರ ಪ್ರವೇಶದ್ವಾರವು ಭಾರತದ ಮೊದಲ ಕೃತಕ ಗುಹೆ ಬಾರ್ಬರ್ ಗುಹೆಗಳನ್ನು ನೆನಪಿಸುತ್ತದೆ. ಮುಖ್ಯ ಗುಹೆಯ ಪಕ್ಕದಲ್ಲಿರುವ ಎರಡನೇ ಗುಹೆಯು ಹೆಚ್ಚಾಗಿ ನಾಶವಾಗಿದೆ. ಆದರೆ ಇದು ಕೆಲವು ಸುಂದರವಾದ ಜೈನ ಉಬ್ಬುಶಿಲ್ಪಗಳನ್ನು ಹೊಂದಿದೆ. ಈ ಗುಹೆಯು ಕ್ರಿ.ಶ.3 ಮತ್ತು 4ನೇ ಶತಮಾನದಷ್ಟು ಹಿಂದಿನದು. ಆ ಸಮಯದಲ್ಲಿ ಜೈನ ಮುನಿ ವೈರಾದೇವನು ಜೈನ ತಪಸ್ವಿಗಳ ವಾಸಸ್ಥಾನವಾಗಿ ಈ ಗುಹೆಗಳನ್ನು ನಿರ್ಮಿಸಿದನೆಂದು ಒಂದು ಗುಹೆಯೊಳಗೆ ಕಂಡುಬರುವ ಶಾಸನಗಳು ಹೇಳುತ್ತವೆ.

bandarcaves-2-1660730772.jpg

ನಿಧಿಯನ್ನು ಹಸ್ತಾಂತರಿಸಿದ ಬಿಂಬಿಸಾರನ ಹೆಂಡತಿ

ಸೋನ್‌ ಭಂಡಾರ್ ಗುಹೆಗಳು ಮೂಲತಃ ವೈಭರ್ ಬೆಟ್ಟಗಳ ತಪ್ಪಲಿನಲ್ಲಿರುವ ಎರಡು ಕೃತಕ ಗುಹೆ ರಚನೆಗಳ ಗುಂಪಾಗಿದ್ದು, ಇದು ಕ್ರಿಸ್ತಪೂರ್ವ 3 ನೇ ಅಥವಾ 4 ನೇ ಶತಮಾನದಷ್ಟು ಹಿಂದಿನದಾಗಿದೆ. ರಾಜ ಬಿಂಬಿಸಾರ ತನ್ನ ನಿಧಿಯನ್ನು ಇಡಲು ಈ ಗುಹೆಗಳನ್ನು ಬಳಸುತ್ತಿದ್ದನೆಂದು ಜನರು ನಂಬುತ್ತಾರೆ. ಆದರೆ ಯಾವಾಗ ಬಿಂಬಿಸಾರನನ್ನು ಅವನ ಮಗ ಅಜಾತಶತ್ರು ಜೈಲಿಗೆ ಹಾಕಿದನೋ ಆ ನಂತರ ಬಿಂಬಿಸಾರನ ಹೆಂಡತಿ ಬಿಂಬಿಸಾರನ ಆದೇಶದಂತೆ ಈ ಗುಹೆಯಲ್ಲಿ ರಾಜ್ಯದ ಸಂಪತ್ತನ್ನು ಬಚ್ಚಿಡಲು ನಿರ್ಧರಿಸಿದಳು. ಮೂಲಗಳ ಪ್ರಕಾರ, ಗುಪ್ತ ರಾಜ ಬಿಂಬಿ ಸಾರ ಅತ್ಯಂತ ಶ್ರೀಮಂತ ರಾಜನಾಗಿದ್ದನು. ಆದರೆ ಬೌದ್ಧಧರ್ಮಕ್ಕೆ ಸೇರ್ಪಡೆಯಾದ ನಂತರ, ಅವನು ಎಲ್ಲಾ ಲೌಕಿಕ ವಿಷಯಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡನು. ಹೆಚ್ಚುವರಿ ಸಂಪತ್ತನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ನೀಡಲು ಪ್ರಾರಂಭಿಸಿದನು. ಇದು ಅವನ ಮಗ ಅಜಾತ ಶತ್ರುವಿಗೆ ಹಿಡಿಸಲಿಲ್ಲ. ಮಗನ ದುಷ್ಟ ಉದ್ದೇಶಗಳ ಬಗ್ಗೆ ತಿಳಿದ ರಾಜನ ಹೆಂಡತಿ ಸಂಪತ್ತನ್ನು ಜೈನ ಸನ್ಯಾಸಿ ವೈರ ದೇವನಿಗೆ ಹಸ್ತಾಂತರಿಸಲು ನಿರ್ಧರಿಸಿದಳು.

ಸಂಪತ್ತನ್ನು ಮಾಂತ್ರಿಕ ಬೀಗದಿಂದ ಮುಚ್ಚಿದ್ದು ಇವರೇ

ಗುಹೆಯೊಳಗೆ ಸಂಪತ್ತನ್ನೆಲ್ಲ ಇಟ್ಟು ಮಾಂತ್ರಿಕ ಬೀಗದಿಂದ ಮುಚ್ಚಿದ್ದು ವೈರ ದೇವ ಮುನಿಗಳೇ. ಅನೇಕ ಶತಮಾನಗಳಿಂದ ಈ ಮಾಂತ್ರಿಕ ಕೋಡ್ ಅನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದರೂ, ಯಾರೂ ಯಶಸ್ವಿಯಾಗಲಿಲ್ಲ. ಗೋಡೆಗಳ ಒಳಗೆ ಒಂದು ಶಾಸನವನ್ನು ಡಿಕೋಡ್ ಮಾಡಲು ಸಾಧ್ಯವಾದರೆ, ಅವರು ಪಾಸ್ವರ್ಡ್ ಅನ್ನು ಭೇದಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ವಿಶೇಷ ಅಕ್ಷರಶೈಲಿಯಲ್ಲಿ ಮಾಡಿದ ಈ ಶಾಸನವು ತುಂಬಾ ಸಂಕೀರ್ಣವಾಗಿದೆ. ವಿಜ್ಞಾನಿಗಳು ಮತ್ತು ಸಂಶೋಧಕರು ಸಹ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ.

19-1426747100-sonbhandarcaves1-1660730781.jpg

ಹೀಗಿದೆ ನೋಡಿ ಸೋನ್ ಭಂಡಾರ್ ಗುಹೆಯೊಳಗೆ...

ನೀವು ಸೋನ್‌ ಭಂಡಾರ್ ಗುಹೆಯೊಳಗೆ ಪ್ರವೇಶಿಸಿದಾಗ 10. 4 ಮೀಟರ್ ಉದ್ದ, 5 2 ಮೀಟರ್ ಅಗಲ ಮತ್ತು 1. 5 ಮೀಟರ್ ಎತ್ತರದ ಕೋಣೆಯನ್ನು ನೋಡುತ್ತೀರಿ. ಈ ಕೋಣೆ ನಿಧಿಯನ್ನು ಕಾಪಾಡುವ ಸೈನಿಕರದ್ದಾಗಿತ್ತು. ಈ ಕೋಣೆ ಹಿಂದಿನ ಬಾಗಿಲು ನಿಧಿ ಇರುವ ಕೋಣೆಯನ್ನು ತೆರೆದುಕೊಳ್ಳುತ್ತದೆ. ಆದರೆ ಈ ಮಾರ್ಗದ ಬಾಗಿಲನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿದೆ. ಈ ಮೊದಲೇ ಹೇಳಿದಂತೆ ಇದನ್ನು ತೆರೆಯಲು ಯಾರೂ ಅದರ ಪಾಸ್ ವರ್ಡ್ ಅನ್ನು ಇನ್ನೂ ಕಂಡುಹಿಡಿದಿಲ್ಲ. ಹಾಗಾಗಿ ಇಲ್ಲಿಯವರೆಗೆ ಈ ಬಾಗಿಲು ಇನ್ನೂ ಮುಚ್ಚೇ ಇದೆ. ಮೊಘಲರು ಮತ್ತು ಬ್ರಿಟಿಷರು ಗುಹೆಯಿಂದ ಸಂಪತ್ತನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಒಮ್ಮೆ ಬ್ರಿಟಿಷರು ಈ ಬಂಡೆಯನ್ನು ಮುರಿದು ಕ್ಯಾನನ್‌ನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದರು. ಆದರೆ ಅವರು ಅದನ್ನು ಒಡೆಯಲು ಸಾಧ್ಯವಾಗಲಿಲ್ಲ. ಇನ್ನೂ ಬಂಡೆಯ ಮೇಲೆ ನೀವು ಫಿರಂಗಿ ದಾಳಿಯ ಗುರುತುಗಳನ್ನು ನೋಡಬಹುದು.

bandarcaves-41-1660730789.jpg

ಸುಂದರವಾದ ಶಾಸನಗಳು

ಗುಹೆಯೊಳಗೆ ಈ ನಿಧಿ ಇರುವ ರಹಸ್ಯದ ಬಾಗಿಲನ್ನು ಹೊರುಪಡಿಸಿ ಒಳಗಿನ ಗೋಡೆಗಳನ್ನು ಚೆನ್ನಾಗಿ ಪಾಲಿಶ್ ಮಾಡಲಾಗಿದೆ. ಜೊತೆಗೆ ಸುಂದರವಾದ ಶಾಸನಗಳನ್ನು ಹೊಂದಿದೆ. ಸೋನ್‌ ಭಂಡಾರ್ ಗುಹೆಗಳು ಭಾರತದಲ್ಲಿರುವ ಕೆಲವೇ ಕೆಲವು ರಾಕ್ ಕಟ್ ಗುಹೆಗಳಲ್ಲಿ ಒಂದಾಗಿದೆ.

ಸೋನ್‌ ಭಂಡಾರ್ ನೋಡಲು ಹೋಗುವುದು ಹೇಗೆ?

ಇಲ್ಲಿ ಚಿನ್ನದ ಸಂಪತ್ತು ಇಂದಿಗೂ ನಿಗೂಢವಾಗಿಯೇ ಗುಹೆಯೊಳಗೇ ಉಳಿದಿದೆ. ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಈ ನಿಗೂಢ ಗುಹೆಯನ್ನು ನೋಡಲು ಬರುತ್ತಾರೆ. ಮೀಟರ್ ಇಲ್ಲದ ಆಟೋಗಳು, ಟ್ಯಾಕ್ಸಿಗಳು ಮತ್ತು ನಿಯಮಿತ ಬಿಎಸ್ಆರ್'ಟಿಸಿ ಬಸ್ ಸೇವೆಗಳು ರಾಜ್‌ಗಿರ್‌'ನ ಎಲ್ಲಾ ಭಾಗಗಳಿಂದ ಸೋನ್‌ ಭಂಡಾರ್ ಗುಹೆಗಳಿಗೆ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X