Search
  • Follow NativePlanet
Share
» »ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಮೈಸೂರು ನಗರವು ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಹೈಟೆಕ್ ಸಿಟಿ ಬೆಂಗಳೂರಿನ ನೈರುತ್ಯ ದಿಕ್ಕಿಗೆ ಸುಮಾರು 140 ಕಿ.ಮೀ ಗಳ ಅಂತರದಲ್ಲಿದೆ. ಮೊದಲಿಗೆ ಮೈಸೂರು ರಾಜ್ಯವೆ ಆಗಿದ್ದುದರಿಂದ ಇಂದಿಗೂ ಕೂಡ ಹತ್ತು ಹಲವು ವೈಭವೋಪೇತ ಆಕರ್ಷಣೆಗಳನ್ನು ಹೊಂದಿದ್ದು, ಪ್ರಸ್ತುತ ಒಂದು ಭೇಟಿ ನೀಡಲೇಬೇಕಾದ ಉತ್ತಮ ಪ್ರವಾಸಿ ತಾಣವಾಗಿ ಬಹುಜನರ ಮನಸ್ಸನ್ನು ಗೆದ್ದಿದೆ.

ನೀವು ಮೈಸೂರಿಗೆ ಹೊಸಬರಾಗಿದ್ದರೆ ಅಥವಾ ಮೊದಲಬಾರಿಗೆ ಪ್ರವಾಸ ಹೊರಡಬೇಕೆಂದಿದ್ದರೆ ಇಲ್ಲವೆ ಆವಾಗಾವಾಗ ಭೇಟಿ ನೀಡುತ್ತಿದ್ದರೂ ಸವಿಸ್ತಾರವಾದ ಪ್ರವಾಸಿ ಆಕರ್ಷಣೆಗಳ ಕುರಿತು ಅಷ್ಟೊಂದು ಗೊತ್ತಿಲ್ಲದಿದ್ದರೆ ಈ ಲೇಖನವನ್ನೊಮ್ಮೆ ಓದಿ ಹಾಗು ಮೈಸೂರು ಭೇಟಿಯ ಸುಂದರವಾದ ಅನುಭವವನ್ನು ಪಡೆಯಿರಿ.

ಮೈಸೂರು ಅರಮನೆ: ಮೊದಲನೇಯ ಪ್ರಮುಖ ಆಕರ್ಷಣೆ

ನಗರದ ಅತಿ ಪ್ರತಿಷ್ಠಿತ ಹೆಗ್ಗುರುತು ಇದಾಗಿದೆ. ನಗರದ ಕೇಂದ್ರಭಾಗದಲ್ಲಿರುವ ಈ ಭವ್ಯ ಅರಮನೆಯು ಮೈಸೂರು ಸಿಟಿ ರೈಲು ಜಂಕ್ಷನ್ ನಿಂದ ಕೇವಲ 2 ಕಿ.ಮೀ ದೂರದಲ್ಲಿದ್ದು ಐರ್‌‌‌‌‌‌‌ವಿನ್ ರಸ್ತೆ ನಂತರ ಸಯ್ಯಾಜಿ ರಾವ್ ರಸ್ತೆಯ ಮುಖಾಂತರ ಇದನ್ನು ಸುಲಭವಾಗಿ ತಲುಪಬಹುದು. ಈ ಅರಮನೆಯು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5.30 ರ ವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ. ಅರಮನೆಯ ಭೇಟಿ ಸಂತೃಪ್ತತೆಯನ್ನು ತರಬೇಕೆಂದರೆ ಕನಿಷ್ಠ ಎರಡು ಘಂಟೆಯನ್ನಾದರೂ ಇದಕ್ಕೆ ಮೀಸಲಿಡಬೇಕು.

ಇದರ ಆವರಣದಲ್ಲಿ ಹಲವಾರು ದೇವಾಲಯಗಳು, ಉದ್ಯಾನ, ಆನೆ ಸವಾರಿ ಎಲ್ಲವೂ ಲಭ್ಯ. ಇವುಗಳನ್ನು ದಿನದಲ್ಲಿ ಅನುಭವಿಸಬಹುದಾದರೆ ರಾತ್ರಿಯ ವೇಳೆಯಲ್ಲಿ ಹೊರಗಿನಿಂದ ಅರಮನೆಯು ಸುಸಜ್ಜಿತವಾಗಿ ಪ್ರಕಾಶಮಾನವಾಗಿ ಬೆಳುಗುತ್ತಿರುವುದನ್ನು ಪ್ರತಿ ಭಾನುವಾರ ರಾತ್ರಿ 7 ರಿಂದ 8 ಘಂಟೆಯವರೆಗೆ ವೀಕ್ಷಿಸಬಹುದು.

ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಬೃಂದಾವನ ಉದ್ಯಾನ : ಎರಡನೇಯ ಪ್ರಮುಖ ಆಕರ್ಷಣೆ

ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ ಈ ಕೆ.ಆರ್.ಎಸ್ ಡ್ಯಾಮ್ ಅಥವಾ ಬೃಂದಾವನ್ ಗಾರ್ಡನ್. ಅರಮನೆ ಪ್ರದೇಶದಿಂದ ಇದು ಸುಮಾರು 20 ಕಿ.ಮೀ ದೂರದಲ್ಲಿದ್ದು ಮುಟ್ಟಲು ಸರಿ ಸುಮಾರು 45 ನಿಮಿಷಗಳಿಂದ ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು ತೆಗೆದುಕೊಳ್ಳುತ್ತದೆ. ಅರಮನೆ ಬಳಿಯಿರುವ ಬಸ್ ನಿಲ್ದಾಣದಿಂದ ಉದ್ಯಾನಕ್ಕೆ ಸಾಕಷ್ಟು ಬಸ್ಸುಗಳು ದೊರಕುತ್ತವೆ.

ಉದ್ಯಾನವು ಬೃಹತ್ತಾಗಿದ್ದು ಹಾಯಾಗಿ ವಿಹರಿಸಲು ಏನಿಲ್ಲವೆಂದರೂ ಸುಮಾರು ಎರಡು ಘಂಟೆಗಳಷ್ಟು ಸಮಯ ತಗಲಬಹುದು. ನೋಡಲು ನಯನ ಮನೋಹರವಾಗಿರುವ ಈ ಉದ್ಯಾನವು ಸಂಜೆಯ ಸಮಯದಲ್ಲಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಪ್ರಕಾಶಮಾನವಾಗಿ ಬೆಳಗುತ್ತದೆ. ಹಬ್ಬ ಹರಿದಿನ ಅಥವಾ ವಿಶೇಷ ಸಂದರ್ಭಗಳಲ್ಲಿ ಈ ಉದ್ಯಾನವನ್ನು ಸಾಮಾನ್ಯ ದಿನಗಳಿಗಿಂತ ರಾತ್ರಿ ಸಮಯದಲ್ಲಿ ದೀಪಾಲಂಕಾರವನ್ನು 7 ರಿಂದ 8.30 ರ ವರೆಗೆ ಬೆಳಗಿಸಲಾಗುತ್ತದೆ.

ಪ್ರವೇಶಿಸಿದಾಗ ಉದ್ಯಾನದ ಮಧ್ಯದಿಂದ ಪ್ರವೇಶಗೊಳ್ಳುವುದರಿಂದ ಎರಡು ಬದಿಯಲ್ಲೂ ಸಾಕಷ್ಟು ದೊಡ್ಡದಾಗಿದ್ದು ಕೊನೆ ಕೊನೆಯಲ್ಲಿ ಆಕರ್ಷಣೆಗಳು ಹುದುಗಿವೆ. ಉದ್ಯಾನದ ದಕ್ಷಿಣ ತುದಿಯು ಅತಿ ಎತ್ತರದ ತಾಣವಾಗಿದ್ದು ಬೃಂದಾವನ್ ಗಾರ್ಡನ್ನಿನ ವಿಹಂಗಮ ನೋಟವನ್ನು ಒದಗಿಸುತ್ತದೆ. ಇನ್ನು ಉತ್ತರ ದಿಕ್ಕಿನ ಕೊನೆಯಲ್ಲಿ ಬಹು ಬೇಡಿಕೆಯ ಸಂಗೀತ ಕಾರಂಜಿಯು ಸ್ಥಿತವಾಗಿದೆ.

ನಿಮಗೆಲ್ಲ ಆನಂದವು ಒಟ್ಟಿಗೆ ಬೇಕಾದರೆ ಉದ್ಯಾನಕ್ಕೆ ನಿಮ್ಮ ಭೇಟಿಯನ್ನು ಸಂಜೆ ಐದು ಘಂಟೆಯವೆಳೆಗೆ ಪ್ರವೇಶಿಸುವ ಹಾಗೆ ಮೊದಲೆ ಯೋಜಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ಮೈಸುಡಲಾರದ ಬೆಳಕಿನಲ್ಲಿ ಉದ್ಯಾನವನ್ನೂ ನೋಡಬಹುದು, ಸಾಯಂಕಾಲದಲ್ಲಿ ಸಂಗೀತಮಯ ಕಾರಂಜಿಯನ್ನು ಸವಿಯುತ್ತ ಪ್ರಕಾಶಿಸುತ್ತಿರುವ ಉದ್ಯಾನದ ನೋಟವನ್ನೂ ಆನಂದಿಸಬಹುದು.

ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಚಾಮುಂಡಿ ಬೆಟ್ಟ : ಮೂರನೇಯ ಪ್ರಮುಖ ಆಕರ್ಷಣೆ

ನಗರದಿಂದ 30 ರಿಂದ 40 ನಿಮಿಷಗಳಷ್ಟು ಪ್ರಯಾಣಾವಧಿಯಷ್ಟು ದೂರದಲ್ಲಿದೆ ಈ ಚಾಮುಂಡಿ ಬೆಟ್ಟ. ನಗರ ಕೇಂದ್ರದಿಂದ ಬಸ್ಸು ಅಥವಾ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಈ ಬೆಟ್ಟದ ತುದಿಗೆ ಸುಲಭವಾಗಿ ತಲುಪಬಹುದು. ಬೆಟ್ಟದ ಮೇಲಿರುವ ದೇವಾಲಯದ ಪ್ರಮುಖ ದೇವತೆ ಚಾಮುಂಡೇಶ್ವರಿ ದೇವಿ. ಆದ್ದರಿಂದ ಇದನ್ನು ಚಾಮುಂಡಿ ಬೆಟ್ಟ ಎಂದು ಕರೆಯಲಾಗುತ್ತದೆ. ದೇವಾಲಯದಿಂದ 500 ಮೀಟರುಗಳ ಅಂತರದಲ್ಲಿ ವಾಹನ ನಿಲುಗಡೆಯ ಸ್ಥಳವಿದೆ.

ದೇವಾಲಯ ತೆರೆದಿರುವ ಸಮಯ ಬೆಳಿಗ್ಗೆ 7.30 ಮಧ್ಯಾಹ್ನ 2 pm, 3.30 pm ನಿಂದ 6 pm,7.30 pm ನಿಂದ 9 pm ವರೆಗೆ. ಈ ದೇವಾಲಯದಿಂದ ಮೈಸೂರು ನಗರಕ್ಕೆ ಕೊನೆಯ ಬಸ್ಸಿನ ಸಮಯ ರಾತ್ರಿ 9 ಘಂಟೆಗಿರುತ್ತದೆ.

ಮೈಸೂರು ಮೃಗಾಲಯ : ನಾಲ್ಕನೇಯ ಪ್ರಮುಖ ಆಕರ್ಷಣೆ

ದಕ್ಷಿಣ ಭಾರತದಲ್ಲೆ ಬಹು ಪ್ರಖ್ಯಾತಿ ಪಡೆದ ಮೃಗಾಲಯ ಇದಾಗಿದೆ. ಮೈಸೂರು ಅರಮನೆ ಪ್ರದೇಶದಿಂದ ಅಲ್ಬರ್ಟ್ ವಿಕ್ಟರ್ ರಸ್ತೆ, ಮಿರ್ಜಾ ರಸ್ತೆ ಹಾಗು ಕೊನೆಯದಾಗಿ ಬೆಂಗಳೂರು - ಮೈಸೂರು ರಸ್ತೆಯ ಮಾರ್ಗವಾಗಿ ಸುಮಾರು 1.5 ಕಿ.ಮೀ ಪಯಣಿಸಿ ಮೈಸೂರು ಮೃಗಾಲಯಕ್ಕೆ ಸುಲಭವಾಗಿ ತಲುಪಬಹುದು. ಜೊತೆಯಲ್ಲಿ ಮಕ್ಕಳಿದ್ದರೆ ಈ ಮೃಗಾಲಯವನ್ನು ಖಂಡಿತವಾಗಿ ಮಿಸ್ ಮಾಡಬಾರದು. ಭಾರತದಲ್ಲೆ ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಮೃಗಾಲಯಗಳಲ್ಲಿ ಇದೂ ಕೂಡ ಒಂದು. ವೈವಿಧ್ಯಮಯ ಪ್ರಾಣಿ ಸಂಪತ್ತನ್ನು ವೀಕ್ಷಿಸಬಹುದಾಗಿದ್ದು ಸುತ್ತಾಡಲು ಸುಮಾರು ಎರಡು ಘಂಟೆಗೂ ಅಧಿಕ ಸಮಯವನ್ನು ತೆಗೆದುಕೊಳ್ಳಬಹುದು.

ಇನ್ನು ವಯಸ್ಸಾದವರಿಗೆ ಅಥವಾ ಬೇಗನೆ ನೋಡಬೇಕೆಂದಿದ್ದರೆ ಬ್ಯಾಟರಿ ಚಾಲಿತ ವಾಹನದ ಆಯ್ಕೆ ಇಲ್ಲಿರುತ್ತದೆ. ಮಂಗಳವಾರವನ್ನು ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲೂ ತೆರೆದಿರುವ ಮೃಗಾಲಯದ ವೇಳೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರ ವರೆಗೆ. ಗಮನದಲಿಡಬೇಕಾದ ಒಂದು ಸಂಗತಿಯೆಂದರೆ ಬೆಳಿಗ್ಗೆ11 ರಿಂದ ಮಧ್ಯಾಹ್ನ 3 ರ ನಡುವಿನ ಸಮಯದಲ್ಲಿ ಸ್ವಲ್ಪ ತಾಪಮಾನ ಹೆಚ್ಚಿರುವುದರಿಂದ ಬಹು ಮಟ್ಟಿಗೆ ಪ್ರಾಣಿ ಪಕ್ಷಿಗಳು ನಿದ್ದೆಗಿಳಿದಿರುತ್ತವೆ ಅಥವಾ ವಿಶ್ರಮಿಸಿರುತ್ತವೆ. ಆದ್ದರಿಂದ ಭೇಟಿ ನೀಡುವುದಿದ್ದರೆ ಬೆಳಿಗ್ಗೆ11 ರ ಮುಂಚೆ ಅಥವಾ ಮಧ್ಯಾಹ್ನ 3 ರ ನಂತರ ನೀಡಬಹುದು. ಈ ಸಮಯದಲ್ಲಿ ಪ್ರಾಣಿಗಳ ನಿರಂತರ ಚಲನ ವಲನಗಳನ್ನು ಕಾಣಬಹುದು.

ಮೈಸೂರಿನಲ್ಲಿ ನೋಡಲೇಬೇಕಾದ ಆಕರ್ಷಣೆಗಳು

ಇನ್ನುಳಿದಂತೆ ಇನ್ನೂ ಹತ್ತು ಹಲವು ಇತರೆ ಪ್ರವಾಸಿ ಆಕರ್ಷಣೆಗಳನ್ನು ಮೈಸೂರಿನಲ್ಲಿ ಕಾಣಬಹುದು. ಅವುಗಳ ಸಂಕ್ಷೀಪ್ತ ನೋಟ.

ಜಗನ್ಮೋಹನ ಅರಮನೆ:

ಮೈಸೂರು ನಗರ ಬಸ್ ನಿಲ್ದಾಣಕ್ಕೆ ಅತಿ ಹತ್ತಿರದಲ್ಲಿರುವ ಈ ಅರಮನೆಯನ್ನು ಯಾರಿಗಾದರು ಕೇಳಿ ನಡೆದುಕೊಂಡೆ ತಲುಪಬಹುದು. ವಾಸ್ತುಶಿಲ್ಪದ ಜೊತೆಗೆ ಇದರ ಪ್ರಮುಖ ಅಕರ್ಷಣೆ ಆರ್ಟ್ ಗ್ಯಾಲರಿ. ಇಲ್ಲಿ ಮೈಸೂರಿನ ಪ್ರಖ್ಯಾತ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ರೈಲ್ವೆ ಮ್ಯೂಸಿಯಂ:

ಇದು ಭಾರತದಲ್ಲಿರುವ ಪುರಾತನ ಹಾಗು ಎರಡನೇಯ ದೊಡ್ಡ ರೈಲು ಸಂಗ್ರಹಾಲಯವಾಗಿದೆ. ರೈಲು ನಿಲ್ದಾಣದಿಂದ ಅಣತೆ ದೂರದಲ್ಲಿರುವ ಈ ಸಂಗ್ರಹಾಲಯದ ಪ್ರವೇಶ ದ್ವಾರವು ಕೆ.ಆರ್.ಎಸ್ ರಸ್ತೆಯಲ್ಲಿದೆ. ಊಗಿ ಬಂಡೆ ಯಂತ್ರ, ಮೈಸೂರಿನ ಅರಸರ ಕುಟುಂಬವು ಉಪಯೋಗಿಸುತ್ತಿದ್ದ ವೈಭವದ ರೈಲು ಬೋಗಿಗಳು ಇಲ್ಲಿ ಪ್ರದರ್ಶಿತವಾಗಿರುವುದನ್ನು ಇಲ್ಲಿ ಕಾಣಬಹುದು. ಪುಟಾಣಿ ಟ್ರೈನಂತೂ ಮಕ್ಕಳಿಗೆ ಎಲ್ಲಿಲ್ಲದ ಆನಂದವನ್ನು ತರುತ್ತದೆ. ಮ್ಯೂಸಿಯ್ಂ ಸಮಯ: ಬೆಳಿಗ್ಗೆ 10 ರಿಂದ ಸಂಜೆ 5.30 ರ ವರೆಗೆ. ಯಾವುದೆ ಪ್ರವೇಶ ಶುಲ್ಕವಿಲ್ಲ.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿ ಆಶ್ರಮ:

ಅವಧೂತ ದತ್ತ ಪೀಠ ಎಂದು ಕರೆಯಲಾಗುವ ಈ ಆಶ್ರಮವು ಭಾರತದಲ್ಲೆ ದೊಡ್ಡದಾದ ಬೊನ್ಸಾಯಿ ಉದ್ಯಾನವನ್ನು ಹೊಂದಿದೆ. ಈ ಆಶ್ರಮವು ಮೈಸೂರಿನಲ್ಲಿರುವ ಊಟಿ ರಸ್ತೆ (ನಂಜನಗೂಡು ರಸ್ತೆ) ಯ ಮೇಲೆ ನೆಲೆಸಿದೆ. ಸಮಯವಿದ್ದರೆ ಇಲ್ಲಿಗೆ ತೆರಳಿ ಬೊನ್ಸಾಯಿ ತೋಟದ ಆನಂದವನ್ನು ಸವಿಯಬಹುದು.

ಅಲ್ಲದೆ ಸಯ್ಯಾಜಿರಾವ್ ರಸ್ತೆ ಹಾಗು ಝಾನ್ಸಿ ಲಕ್ಷ್ಮಿ ಬಾಯಿ (ಜೆ.ಎಲ್.ಬಿ ರಸ್ತೆ) ರಸ್ತೆಯ ಮೇಲೆ ಒಮ್ಮೆ ಪ್ರಯಾಣಿಸಿದರೆ ಹತ್ತು ಹಲವಾರು ಸಾಂಪ್ರದಾಯಿಕ ಸ್ಮಾರಕಗಳು ನಿಮ್ಮ ಕಣ್ಮನಗಳನ್ನು ಸೆಳೆಯುತ್ತದೆ. ಶಾಪಿಂಗ್ ಮಾಡಲು ಇಷ್ಟವಿದ್ದಲ್ಲಿ ಸಯ್ಯಾಜಿ ರಾವ್ ರಸ್ತೆಯ ಮೇಲಿರುವ ಕಾವೇರಿ ಆರ್ಟ್ಸ್ ಆಂಡ್ ಕ್ರಾಫ್ಟ್ಸ್ ಎಂಪೋರಿಯಂ (ಕೆ.ಆರ್.ಆಸ್ಪತ್ರೆಯ ಎದುರಿಗೆ) ಗೆ ಭೇಟಿ ನೀಡಬಹುದು.

ಮೈಸೂರಿನ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಇಲ್ಲಿ ಖರಿದಿಸಬಹುದು. ಅಲ್ಲದೆ ದೇವರಾಜ್ ಅರಸ್ ರಸ್ತೆಯಲ್ಲಿರುವ ದೇವಾರಾಜ ಮಾರುಕಟ್ಟೆಗೂ ಭೇಟಿ ನೀಡಬಹುದು. ಇದು 100 ವರ್ಷಕ್ಕೂ ಹಳೆಯದಾದ ಪ್ರಖ್ಯಾತ ಮಾರುಕಟ್ಟೆಯಾಗಿದೆ. ಹಾಗಾದರೆ ಮತ್ತೇಕೆ ತಡ ನಿಮ್ಮ ನೆಕ್ಸ್ಟ್ ವಿಕೆಂಡ್ ಟ್ರಿಪ್ ನಲ್ಲಿ ಮೈಸೂರಿಗೆ ಹೋಗಿ ಇವೆಲ್ಲವುಗಳ ಸುಂದರ ಅನುಭವವನ್ನಿ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಪ್ರಯಾಣ ಸುಖಕರವಾಗಲಿ.

Read more about: mysore tourist spots
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X