Search
  • Follow NativePlanet
Share
» »ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

By Vijay

ಎಲ್ಲರಿಗೂ ತೆರೆದಿರುವ ಅಂದರೆ ಇಲ್ಲಿ ಯಾವುದೆ ಜಾತಿ, ಬೇಧಗಳಿಲ್ಲ. ಯಾವ ಧರ್ಮದವರಾದರೂ ಇರಲಿ ಶ್ರೂದ್ಧೆಯಿಂದ ಇಲ್ಲಿ ಪ್ರವೇಶಿಸಿ ದೇವಿಯ ದರ್ಶನ ಪಡೆಯಬಹುದು. ಅಷ್ಟಕ್ಕೂ ಇವಳು ಎರಡು ರೀತಿಯ ದೇವಿಯಾಗಿ ಪ್ರಸಿದ್ಧಳಾಗಿದ್ದಾಳೆ. ಒಂದು ಅನ್ನಪೂರ್ಣೇಶ್ವರಿಯಾದರೆ ಇನ್ನೊಂದು ದುರ್ಗೆಯಾಗಿ ಜನರನ್ನು ಹರಸುತ್ತಾಳೆ.

ಈ ಪ್ರದೇಶದಲ್ಲೆ ಹೆಚ್ಚು ಜನಪ್ರೀಯ ದೇವಿ ಇವಳಾಗಿದ್ದು ಮುಳ್ಳಕ್ಕಾಲ್ ಅಮ್ಮ, ಮುಳ್ಳಕ್ಕಾಲ್ ರಾಜರಾಜೇಶ್ವರಿ ಎಂದೆಲ್ಲ ಭಕ್ತರಿಂದ ಕರೆಸಿಕೊಳ್ಳುತ್ತಾಳೆ. ಮುಳ್ಳಕ್ಕಾಲ್ ಎಂಬುದು ಅಲಪುಳ ಅಥವಾ ಜನಪ್ರೀಯವಾಗಿ ಕರೆಯಲಾಗುವ ಅಲೆಪ್ಪಿಯಲ್ಲಿರುವ ಪ್ರದೇಶವಾಗಿದ್ದು ಅಲ್ಲಿ ಈ ದೇವಿಯ ದೇವಾಲಯವನ್ನು ಕಾಣಬಹುದಾಗಿದೆ.

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಚಿತ್ರಕೃಪೆ: commons.wikimedia

ಸುಮಾರು ಐದು ನೂರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ಇದಾಗಿದ್ದು ಸಾಕಷ್ಟು ಜನಮನ್ನಣೆಗಳಿಸಿದೆ. ಇಲ್ಲಿ ವಾರ್ಷಿಕವಾಗಿ ವೃಶ್ಚಿಕ ಮಾಸದಲ್ಲಿ ಅಂದರೆ ಅಕ್ಟೋಬರ್-ನವಂಬರ್ ನಲ್ಲಿ ಆಚರಿಸಲಾಗುವ ಉತ್ಸವವು 41 ದಿನಗಳ ಕಾಲ ಅದ್ದೂರಿಯಾಗಿ ಜರುಗುತ್ತದೆ. ಇದನ್ನು ಅಲಪುಳ ಚಿರಪ್ಪು ಅಥವಾ ಅಲೆಪ್ಪಿ ಚಿರಪ್ಪು ಎಂತಲೂ ಸಹ ಕರೆಯುತ್ತಾರೆ.

ಉತ್ಸವದ ಕೊನೆಯ ಹನ್ನೊಂದು ದಿನಗಳು ಅತ್ಯಂತ ಅದ್ಭುತವಾಗಿರುತ್ತದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ. ಅಲ್ಲದೆ ಈ ಸಂದರ್ಭವು ಅಲೆಪ್ಪಿಗೆ ಭೇಟಿ ನೀಡಲೂ ಸಹ ಪ್ರಶಸ್ತವಾಗಿರುವುದರಿಂದ ಪ್ರವಸಿಗರ ಹಿಂಡೆ ಅಲೆಪ್ಪಿಗೆ ಭೇಟಿ ನೀಡಿರುತ್ತದೆ. ಅಂಥದ್ದರಲ್ಲಿ ಕೇರಳದ ಶ್ರೀಮಂತ ಪರಮ್ಪರೆ ಸಾರುವ ಈ ಉತ್ಸವದ ಕಳೆಯೂ ಸೇರಿ ಒಂದು ವಿಭಿನ್ನ ಲೋಕವೆ ಇಲ್ಲಿ ಸೃಷ್ಟಿಯಾಗಿರುತ್ತದೆ.

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಮುಳ್ಳಕ್ಕಾಲ್ ಉತ್ಸವ, ಚಿತ್ರಕೃಪೆ: Akhilan

ದೇವಾಲಯದ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ರೋಚಕ ಕಥೆಗಳಿವೆ. ಒಂದರ ಪ್ರಕಾರ, ಥೆಕ್ಕುಮ್ಕೂರು ಪ್ರಾಂತ್ಯದ ರಾಜನ ಆಸ್ಥಾನದಿಂದ ಗಡಿಪಾರಾದ ಸೈನಿಕರು ದೇವಿಯ ವಿಗ್ರಹದೊಂದಿಗೆ ಮಲ್ಲಿಗೆ ಗಿಡಗಳಿದ್ದ ಈ ತೋಟಕ್ಕೆ ಬಂದು ನೆಲೆಸಿದರು. ಅವರಿಟ್ಟ ದೇವಿಯ ವಿಗ್ರಹವು ಅಲ್ಲೆ ಗಟ್ಟಿಯಾಗಿ ನೆಲೆಯೂರಿ ಈ ದೇವಾಲಯದ ನಿರ್ಮಾಣಕ್ಕೆ ಕಾರಣವಯಿತು.

ಇನ್ನೊಂದು ಕಥೆಯ ಪ್ರಕಾರ, ಟಿಪ್ಪು ಸುಲ್ತಾನನು ಮಲಬಾರ್ ಪ್ರದೇಶವನ್ನು ಆಕ್ರಮಿಸಿದಾಗ ಅಲ್ಲಿದ್ದ ನಂಬೂದಿರಿ ಬ್ರಾಹ್ಮಣರು ತಾವು ಪೂಜಿಸುತ್ತಿದ್ದ ಅನ್ನಪೂರ್ಣೇಶ್ವರಿಯ ವಿಗ್ರಹವನ್ನು ತೆಗೆದುಕೊಂಡು ತಮ್ಮ ನೆಲೆ ಬಿಟ್ಟು ಮಲ್ಲಿಗೆಯ ತೊಟವಿದ್ದ ಈ ಸ್ಥಳಕ್ಕೆ ಬಂದು ಇಲ್ಲಿಯೆ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮಲ್ಲಿಗೆಯ ತೋಟದಲ್ಲಿದ್ದುದರಿಂದ ಇವಳಿಗೆ ಮುಳ್ಳಕ್ಕಾಲ್ ಭಗವತಿ ಎಂದು ಕರೆಯಲಾಯಿತು.

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಚಿತ್ರಕೃಪೆ: Ajeshunnithan

ಮುಳ್ಳ ಎಂದರೆ ಮಲಯಾಳಂನಲ್ಲಿ ಮಲ್ಲಿಗೆ ಎಂದರ್ಥ. 1961 ರವರೆಗೂ ಇದು ಅನ್ನಪೂರ್ಣೇಶ್ವರಿಯ ವಿಗ್ರಹವನ್ನು ಹೊಂದಿತ್ತು. ಒಮ್ಮೆ ಪೂಜೆ ನಡೆಯುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಹಟಾತ್ತನೆ ಗರ್ಭಗೃಹ ಪ್ರವೇಶಿಸಿ ದೇವಿಯ ವಿಗ್ರಹವನ್ನು ಮುಟ್ಟಿದನು. ಇದ್ದಕ್ಕಿದ್ದಂತೆ ಆ ವಿಗ್ರಹದಲ್ಲಿ ಸೀಳುಗಳು ಮೂಡಿಬಂದವು.

ಇದರಿಂದ ವಿಚಲಿತರಾದ ಅರ್ಚಕರು ದೈವಪ್ರಶ್ನೆಯನ್ನು ಹಾಕಿ ನೋಡಿದಾಗ ತಿಳಿದುಬಂದ ವಿಚಾರವೆಂದರೆ ದೇವಿಗೆ ಹೊಸದಾದ ವಿಗ್ರಹ ಬೇಕಾಗಿದೆ ಎಂಬುದು. ಆ ಕಾರಣದಿಂದಾಗಿ 1962 ಜುಲೈ16 ರಂದು ನಾಲ್ಕು ಅಡಿಗಳಷ್ಟು ಎತ್ತರದ ರಾಜರಾಜೇಶ್ವರಿಯ ವಿಗ್ರಹವನ್ನು ಇಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.

ಎಲ್ಲರಿಗೂ ತೆರೆದಿರುವ ಮುಳ್ಳಕ್ಕಾಲ್ ದುರ್ಗಾ!

ಮುಳ್ಳಕ್ಕಾಲ್ ಪರಿಸರ, ಚಿತ್ರಕೃಪೆ: Robert Helvie

ಅಂದಿನಿಂದ ಈ ದೇವಿಯು ಮುಳ್ಳಕ್ಕಾಲ್ ರಾಜರಾಜೇಶ್ವರಿ ಅಥವಾ ಮುಳ್ಳಕ್ಕಾಲ್ ದುರ್ಗಾದೇವಿ ಎಂದೆ ಪ್ರಸಿದ್ಧಳಾಗಿದ್ದಾಳೆ. ಹಿಂದೆ ಅನ್ನಪೂರ್ಣೇಶ್ವರಿಯ ವಿಗ್ರಹವಿದ್ದಾಗಲೆ ಈ ದೇವಾಲಯದ ಹತ್ತಿರದಲ್ಲಿರುವ ಬಾಹ್ಮಣನೋರ್ವನ ಮನೆಯಿಂದ ತರಲಾಗುತ್ತಿದ್ದ ಕಪ್ಪು ಉದ್ದಿನ ಬೇಳೆಯಿಂದ ಮಾಡಲಾದ ವಡೆಯನ್ನು ನೈವೇದ್ಯವಾಗಿ ದೇವಿಗೆ ಸಮರ್ಪಿಸಲಾಗುತ್ತಿತ್ತು.

ಬೆಳಿಗ್ಗೆ ಸರಸ್ವತಿ, ಮಧ್ಯಾಹ್ನ ಲಕ್ಷ್ಮಿ ರಾತ್ರಿ ದುರ್ಗೆ!

ಆ ಆಚರಣೆಯು ಇಂದಿಗೂ ಪ್ರಚಲಿತದಲ್ಲಿದ್ದು ರಾಜರಾಜೇಶ್ವರಿ ದೇವಿಗೆ ರಾತ್ರಿಯ ಪೂಜೆ ವೇಳೆಗೆ ಕಪ್ಪು ಉದ್ದಿನಿಂದ ಮಾಡಲಾದ ವಡೆಯನ್ನೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಈ ದೇವಾಲಯವನ್ನು ತಲುಪುವುದು ಸುಲಭವಾಗಿದ್ದು ಅಲೆಪ್ಪಿ ನಗರ ಕೇಂದ್ರದಿಂದ ಸಾಕಷ್ಟು ಬಾಡಿಗೆ ಆಟೋಗಳು ಹಾಗೂ ಕಾರುಗಳು ಇಲ್ಲಿಗೆ ತೆರಳಲು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X