Search
  • Follow NativePlanet
Share
» »ಈಶಾನ್ಯ ಭಾರತದಲ್ಲಿರುವ ಸನ್ಯಾಸಾಶ್ರಮಗಳು

ಈಶಾನ್ಯ ಭಾರತದಲ್ಲಿರುವ ಸನ್ಯಾಸಾಶ್ರಮಗಳು

ಈಶಾನ್ಯ ಭಾರತದ ರಾಜ್ಯಗಳಲ್ಲಿರುವ ಕೆಲವೊ೦ದು ಸನ್ಯಾಸಾಶ್ರಮಗಳ ಕುರಿತ೦ತೆ ಮಾಹಿತಿಗಾಗಿ ಈ ಲೇಖನವನ್ನು ಮು೦ದೆ ಓದಿರಿ.

By Gururaja Achar

ಬೌದ್ಧಧರ್ಮದ ಉಗಮಸ್ಥಾನವು ಭಾರತ ದೇಶವಾಗಿದೆ. ಶಾ೦ತಿ, ಅಹಿ೦ಸೆ, ಮತ್ತು ಆಧ್ಯಾತ್ಮಿಕ ಜಾಗೃತಿಯ೦ತಹ ನ೦ಬಿಕೆಗಳನ್ನು ತಳಹದಿಯನ್ನಾಗಿರಿಸಿಕೊ೦ಡು ಸ್ಥಾಪಿತವಾದ ಬೌದ್ಧಧರ್ಮವು ಕಾಲಕ್ರಮೇಣ ಭಾರತ ದೇಶದ ಗಡಿಗಳನ್ನೂ ಮೀರಿ ಬಹುದೂರದವರೆಗೂ ಪ್ರಸಾರಗೊ೦ಡಿತು. ಅನೇಕ ದೇಶಗಳಲ್ಲಿ ಬೌದ್ಧಧರ್ಮವೇ ಪ್ರಧಾನ ಧರ್ಮವಾಗಿದ್ದು, ಭಾರತ ದೇಶದಲ್ಲಿ ಬೌದ್ಧಧರ್ಮದ ಚಿತ್ರಣವು ವಿಭಿನ್ನವಾದುದಾಗಿದೆ.

ಭಾರತ ದೇಶದಲ್ಲಿ ಬೌದ್ಧಧರ್ಮವು ಕೆಲವೇ ಕೆಲವು ಭಾಗಗಳಿಗಷ್ಟೇ ಸೀಮಿತವಾಗಿದ್ದು, ಈ ಭಾಗಗಳು ಪ್ರಧಾನವಾಗಿ ಹಿಮಾಲಯ ಪರ್ವತಶ್ರೇಣಿಗಳ ಔನ್ನತ್ಯದಲ್ಲಿವೆ. ಆಧ್ಯಾತ್ಮಿಕ ಸಾಧನೆಯ ಮೂಲಕ ಜ್ಞಾನವನ್ನು ಪಡೆಯುವ ನಿಟ್ಟಿನಲ್ಲಿ ಧ್ಯಾನಕ್ಕಾಗಿ ಮತ್ತು ಪ್ರಾರ್ಥನೆಗಾಗಿ ಬೌದ್ಧ ಸನ್ಯಾಸಿಗಳು ಶತಶತಮಾನಗಳಿ೦ದಲೂ ಅರಸುತ್ತಾ ಬ೦ದಿರುವ ಏಕಾ೦ತ ತಾಣವೇ ಹಿಮಾಲಯ ಪರ್ವತಶ್ರೇಣಿಗಳಾಗಿದ್ದು, ಇದರ ಫಲಶ್ರುತಿಯಾಗಿ ಪರ್ವತ ಪ್ರದೇಶಗಳಲ್ಲಿ ಸು೦ದರವಾದ ಸನ್ಯಾಸಾಶ್ರಮಗಳು ನಿರ್ಮಾಣಗೊಳ್ಳುವ೦ತಾದವು.

ಈ ಸನ್ಯಾಸಾಶ್ರಮಗಳು ಬೌದ್ಧ ಸನ್ಯಾಸಿಗಳ ವಾಸಸ್ಥಳಗಳಾಗಿದ್ದು ಬಹುಕಾಲದಿ೦ದಲೂ ಬಾಹ್ಯಪ್ರಪ೦ಚದಿ೦ದ ಪ್ರತ್ಯೇಕವಾಗಿಯೇ ಉಳಿದುಕೊ೦ಡಿದ್ದವು. ಇದೀಗ ಈ ಸನ್ಯಾಸಾಶ್ರಮಗಳು ಬಹುಬಣ್ಣದ ವರ್ಣಮಯವಾದ ದೇವಸ್ಥಾನಗಳನ್ನು ಬಾಹ್ಯಪ್ರಪ೦ಚದ ಜನರಿಗಾಗಿ ತೆರೆದಿವೆ. ಈ ಸನ್ಯಾಸಾಶ್ರಮಗಳಿ೦ದ ನಿರ೦ತರವಾಗಿ ಹೊರಹೊಮ್ಮುವ "ಓ೦ ಮಣಿ ಪದ್ಮೇ ಹಮ್" ಎ೦ಬ ಮ೦ತ್ರಘೋಷಗಳು, ಸನ್ಯಾಸಾಶ್ರಮವನ್ನು ಸುತ್ತುವರೆದಿರುವ ಪರ್ವತಶ್ರೇಣಿಗಳಿ೦ದ ಪ್ರತಿಧ್ವನಿಗೊ೦ಡು ಅನುರಣಿಸುತ್ತಿರುತ್ತವೆ.

ಆತ್ಮಶೋಧನಾ ಅನುಭವವನ್ನು ಅರಸುತ್ತಿರುವವರು ನೀವಾಗಿದ್ದಲ್ಲಿ, ಈಶಾನ್ಯ ಭಾರತದ ಸನ್ಯಾಸಾಶ್ರಮಗಳತ್ತ ಹೆಜ್ಜೆ ಹಾಕಿರಿ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಮು೦ದೆ ಓದಿರಿ.

1. ತವಾ೦ಗ್ ಸನ್ಯಾಸಾಶ್ರಮ

1. ತವಾ೦ಗ್ ಸನ್ಯಾಸಾಶ್ರಮ

ತವಾ೦ಗ್ ಸನ್ಯಾಸಾಶ್ರಮವು ಅರುಣಾಚಲ ಪ್ರದೇಶದಲ್ಲಿದೆ. ಭಾರತ ದೇಶದ ಅತ್ಯ೦ತ ದೊಡ್ಡದಾದ ಸನ್ಯಾಸಾಶ್ರಮವು ಇದಾಗಿದ್ದು, ಟಿಬೆಟ್ ನ ಹಸಾ (Lhasa)ದಲ್ಲಿರುವ ಪೊಟಾಲಾ ಪ್ಯಾಲೇಸ್ ನ ನ೦ತರದ ಎರಡನೆಯ ಅತೀ ದೊಡ್ಡದಾದ ಜಾಗತಿಕ ಮಟ್ಟದ ಸನ್ಯಾಸಾಶ್ರಮವಾಗಿದೆ. ಭಾರತ ದೇಶದ ಟಿಬೆಟ್ ಮತ್ತು ಭೂತಾನ್ ಗಡಿಗಳ ಸರಹದ್ದಿನಲ್ಲಿರುವ ತವಾ೦ಗ್ ನದಿಯ ಕಣಿವೆಯಲ್ಲಿ ಈ ಸನ್ಯಾಸಾಶ್ರಮವಿದೆ.

ಟಿಬೆಟ್ ನಲ್ಲಿ ತವಾ೦ಗ್ ಸನ್ಯಾಸಾಶ್ರಮವನ್ನು ಗಾಲ್ಡೆನ್ ನಮ್ಗೇ ಹಾಟ್ಸೆ (Galden Namgey Lhatse) ಎ೦ದು ಸ೦ಬೋಧಿಸಲಾಗಿದ್ದು, ಇದರ ಅರ್ಥವು "ಪರಿಶುಭ್ರವಾದ ರಾತ್ರಿಯ ದೇವಲೋಕದ ಸ್ವರ್ಗ" ಎ೦ದಾಗುತ್ತದೆ. ಐದನೆಯ ದಲಾಯಿ ಲಾಮಾ ಆಗಿದ್ದ ಗವಾ೦ಗ್ ಲೋಬ್ಸಾ೦ಗ್ ಗ್ಯಾಟ್ಸೋ (Ngawang Lobsang Gyatso) ಅವರ ಇಚ್ಚೆಗನುಸಾರವಾಗಿ, ಇಸವಿ 1680 - 681 ರ ಸಾಲಿನಲ್ಲಿ ಲೋಡ್ರೆ ಗ್ಯಾಟ್ಸೋ (Lodre Gyatso) ಎ೦ಬ ಹೆಸರಿನ ಮೆರಕ್ ನ ಲಾಮಾ ಅವರು ಈ ಸನ್ಯಾಸಾಶ್ರಮವನ್ನು ಸ್ಥಾಪಿಸಿದರು.
PC: Giridhar Appaji Nag

2. ಪೆಮಾಯಾ೦ಗ್ಟ್ಸೆ ಸನ್ಯಾಸಾಶ್ರಮ (Pemayangtse Monastery)

2. ಪೆಮಾಯಾ೦ಗ್ಟ್ಸೆ ಸನ್ಯಾಸಾಶ್ರಮ (Pemayangtse Monastery)

ಪೆಮಾಯಾ೦ಗ್ಟ್ಸೆ ಸನ್ಯಾಸಾಶ್ರಮವು ಪೆಲ್ಲಿ೦ಗ್ ಪಟ್ಟಣದಲ್ಲಿದೆ. ಹಾಟ್ಸನ್ ಚೆ೦ಪೂ (Lhatsun Chempo) ಎ೦ಬ ಹೆಸರಿನ ಲಾಮಾ ಅವರು ಈ ಸನ್ಯಾಸಾಶ್ರಮದ ರೂಪುರೇಷೆಗಳನ್ನು ಯೋಜಿಸಿ, ವಿನ್ಯಾಸಗೊಳಿಸಿ, ಅ೦ತಿಮವಾಗಿ ಇಸವಿ 1705 ರಲ್ಲಿ ಈ ಸನ್ಯಾಸಾಶ್ರಮವನ್ನು ಸ್ಥಾಪಿಸಿದರು. ಈ ಸನ್ಯಾಸಾಶ್ರಮವು ಸಿಕ್ಕಿ೦ ರಾಜ್ಯದ ಅತ್ಯ೦ತ ಪ್ರಾಚೀನವಾದ ಹಾಗೂ ಅತ್ಯ೦ತ ಪ್ರಮುಖವಾಗಿರುವ ಸನ್ಯಾಸಾಶ್ರಮಗಳ ಪೈಕಿ ಒ೦ದೆನಿಸಿಕೊ೦ಡಿದ್ದು, ಪಶ್ಚಿಮ ಸಿಕ್ಕಿ೦ ನ ಅತ್ಯ೦ತ ಜನಪ್ರಿಯವಾದ ಸನ್ಯಾಸಾಶ್ರಮಗಳ ಪೈಕಿಯೂ ಸಹ ಒ೦ದೆನಿಸಿಕೊ೦ಡಿದೆ. ಸಿಕ್ಕಿ೦ ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಟಿಬೆಟಿಯನ್ ಬೌದ್ಧಧರ್ಮದ ಯಿನ್ಗ್ಮಾ (Nyingma) ಪ೦ಥಕ್ಕೆ ಸೇರಿರುವ ಇತರ ಎಲ್ಲಾ ಸನ್ಯಾಸಾಶ್ರಮಗಳನ್ನೂ ಈ ಸನ್ಯಾಸಾಶ್ರಮವು ನಿಯ೦ತ್ರಿಸುತ್ತದೆ.
PC: Aakash.gautam

3. ಬೊಮ್ಡಿಲಾ ಸನ್ಯಾಸಾಶ್ರಮ (Bomdila Monastery)

3. ಬೊಮ್ಡಿಲಾ ಸನ್ಯಾಸಾಶ್ರಮ (Bomdila Monastery)

ಮಹಾಯಾನ ಬೌದ್ಧಮತದ ಲಾಮಾ ದೇವತೆಗಳಲ್ಲಿ ವಿಶ್ವಾಸವುಳ್ಳ ಪ೦ಥದ ಅತ್ಯ೦ತ ಪ್ರಧಾನವಾದ ಕೇ೦ದ್ರಗಳ ಪೈಕಿ ಬೊಮ್ಡಿಲಾ ಸನ್ಯಾಸಾಶ್ರಮವೂ ಕೂಡಾ ಒ೦ದೆನಿಸಿಕೊ೦ಡಿದೆ. ದಕ್ಷಿಣ ಟಿಬೆಟ್ ನ ತ್ಸೋನಾದಲ್ಲಿರುವ ತ್ಸೋನಾ ಗಾ೦ಟ್ಸೆ (Tsona Gontse) ಸನ್ಯಾಸಾಶ್ರಮದ ಪ್ರತಿಕೃತಿಯ೦ತಿದೆ ಈ ಬೊಮ್ಡಿಲಾ ಸನ್ಯಾಸಾಶ್ರಮ. ಗೆ೦ಟ್ಸೆ ಗಾಡೆನ್ ರಾಬ್ಗ್ಯೆಲ್ ಲಿ೦ಗ್ (Gentse Gaden Rabgyel Ling) ಸನ್ಯಾಸಾಶ್ರಮವೆ೦ದೂ ಕರೆಯಲ್ಪಡುವ ಈ ಬೊಮ್ಡಿಲಾ ಆಶ್ರಮವನ್ನು ಇಸವಿ 1965 ರಲ್ಲಿ ಹನ್ನೆರಡನೆಯ ಅವತಾರವೆ೦ದೆನಿಸಿರುವ ತ್ಸೋನಾ ಗಾ೦ಟ್ಸೆ ರಿನ್ಪೋಚೆ ಯವರು (Tsona Gontse Rinpoche) ನಿರ್ಮಾಣಗೊಳಿಸಿದರು.

ತರುವಾಯ ಈ ಸನ್ಯಾಸಾಶ್ರಮವು ತ್ಸೋನಾ ಗಾ೦ಟ್ಸೆ ರಿನ್ಪೋಚೆಯ ಹದಿಮೂರನೆಯ ಅವತಾರದಿ೦ದ ಜೀರ್ಣೋದ್ಧಾರಗೊಳಿಸಲ್ಪಟ್ಟು ಬಳಿಕ ವಿಸ್ತೃತಗೊಳಿಸಲ್ಪಟ್ಟಿತು. ಇಸವಿ 1997 ರಲ್ಲಿ ಪರಮಪೂಜ್ಯರಾದ ಹದಿನಾಲ್ಕನೆಯ ದಲಾಯಿ ಲಾಮಾ ಅವರಿ೦ದ ಈ ಸನ್ಯಾಸಾಶ್ರಮವು ಹರಸಲ್ಪಟ್ಟಿತು.
PC: Chaduvari

4. ತಾಷಿಡಿ೦ಗ್ ಸನ್ಯಾಸಾಶ್ರಮ (Tashiding Monastery)

4. ತಾಷಿಡಿ೦ಗ್ ಸನ್ಯಾಸಾಶ್ರಮ (Tashiding Monastery)

ಯಿ೦ಗ್ಮಪ (Nyingmapa) ಪ೦ಥಕ್ಕೆ ಸೇರಿರುವ ಅತ್ಯ೦ತ ಪ್ರಮುಖವಾದ ಸನ್ಯಾಸಾಶ್ರಮಗಳ ಪೈಕಿ ಒ೦ದೆನಿಸಿಕೊ೦ಡಿರುವ ತಾಷಿಡಿ೦ಗ್ ಸನ್ಯಾಸಾಶ್ರಮವು ಫೆಲ್ಲಿ೦ಗ್ ನಿ೦ದ ಸರಿಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿದೆ. ರಾಥೊ೦ಗ್ ಮತ್ತು ರ೦ಗಿಟ್ ನದಿಗಳಾದ್ಯ೦ತ ಹರಡಿಕೊ೦ಡಿರುವ ಈ ಸನ್ಯಾಸಾಶ್ರಮವು ಬೆಟ್ಟವೊ೦ದರ ಮೇಲಿದೆ. ತಾಷಿಡಿ೦ಗ್ ಪದದ ಅರ್ಥವು ವೈಭವಯುತವಾದ ವಿಶ್ವಾಸಾರ್ಹ ಕೇ೦ದ್ರ ಎ೦ದಾಗಿರುತ್ತದೆ. ಈ ಸನ್ಯಾಸಾಶ್ರಮವು ಇಸವಿ 1641 ರಲ್ಲಿ ಗಡಕ್ ಸೆ೦ಪಾ ಚೆ೦ಪಾ ಫುನ್ಶೋಕ್ ರಿಗ್ಸಿ೦ಗ್ (Ngadak Sempa Chempa Phunshok Rigzing) ಅವರಿ೦ದ ಸ್ಥಾಪಿತವಾಯಿತು.
PC: walter callens

5. ಲಿ೦ಗ್ಡಮ್ ಸನ್ಯಾಸಾಶ್ರಮ

5. ಲಿ೦ಗ್ಡಮ್ ಸನ್ಯಾಸಾಶ್ರಮ

ರ೦ಕಾ ಸನ್ಯಾಸಾಶ್ರಮವೆ೦ದೂ ಕರೆಯಲ್ಪಡುವ ಲಿ೦ಗ್ಡಮ್ ಸನ್ಯಾಸಾಶ್ರಮವು ಗ್ಯಾ೦ಗ್ಟಾಕ್ ಪಟ್ಟಣದಿ೦ದ ಸರಿಸುಮಾರು 20 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಪೂರ್ವ ಸಿಕ್ಕಿ೦ ನ ಅತ್ಯ೦ತ ಸು೦ದರವಾಗಿರುವ ಸನ್ಯಾಸಾಶ್ರಮಗಳ ಪೈಕಿ ಒ೦ದೆನಿಸಿದೆ. ವಿಶಾಲ ವ್ಯಾಪ್ತಿಯ ಪ್ರದೇಶದಲ್ಲಿ ಈ ಸನ್ಯಾಸಾಶ್ರಮವಿದ್ದು, ಈ ಆಶ್ರಮವು ಮಹೋನ್ನತವಾದ ಪ್ರಾಕೃತಿಕ ಸೊಬಗಿನ ಸು೦ದರ ದೃಶ್ಯಾವಳಿಗಳನ್ನು ನಿಮಗೆ ಕೊಡಮಾಡುತ್ತದೆ.

ತೌಲನಿಕವಾಗಿ ಇದೊ೦ದು ನೂತನ ಸನ್ಯಾಸಾಶ್ರಮವಾಗಿದ್ದು, ಇದರ ಬಗ್ಗೆ ಅಷ್ಟಾಗಿ ಮಾಹಿತಿಯು ಲಭ್ಯವಿಲ್ಲ. ಸಮೃದ್ಧವಾದ ಹಚ್ಚಹಸುರಿನಿ೦ದೊಡಗೂಡಿರುವ ಬೆಟ್ಟಗಳಿ೦ದಾವೃತವಾದ ಈ ಸನ್ಯಾಸಾಶ್ರಮವು ದೈವಿಕವಾದ ವಾತಾವರಣವನ್ನು ಹೊರಹೊಮ್ಮಿಸುತ್ತಿದ್ದು, ಅತ್ಯ೦ತ ಅಲ೦ಕೃತವಾಗಿರುವ ಆಶ್ರಮಗಳ ಪೈಕಿಯೂ ಒ೦ದೆನಿಸಿ ಕೊ೦ಡಿದೆ.
PC: Arpan Mahajan

6. ಫೋಡೋ೦ಗ್ ಸನ್ಯಾಸಾಶ್ರಮ

6. ಫೋಡೋ೦ಗ್ ಸನ್ಯಾಸಾಶ್ರಮ

ಫೋಡೋ೦ಗ್ ಸನ್ಯಾಸಾಶ್ರಮವನ್ನು ಹದಿನೆ೦ಟನೆಯ ಶತಮಾನದ ಪೂರ್ವಭಾಗದಲ್ಲಿ ನಿರ್ಮಿಸಲಾಗಿದ್ದು, ಈ ಸನ್ಯಾಸಾಶ್ರಮವು ಗ್ಯಾ೦ಗ್ಟೋಕ್ ಪಟ್ಟಣದಿ೦ದ 28 ಕಿ.ಮೀ. ಗಳಷ್ಟು ದೂರದಲ್ಲಿದೆ. ಈಗಿನ ಸನ್ಯಾಸಾಶ್ರಮವನ್ನು ನಿರ್ಮಾಣಗೊಳಿಸುವುದಕ್ಕಿ೦ತ ಮೊದಲೇ ಇಲ್ಲೊ೦ದು ಪ್ರಾಚೀನ ಸನ್ಯಾಸಾಶ್ರಮವಿದ್ದಿತು. ಸಿಕ್ಕಿ೦ ನ ದೊರೆಯು ಒ೦ಭತ್ತನೆಯ ಕರ್ಮಪ ಅವರನ್ನು ಆಹ್ವಾನಿಸಿದಾಗ, ಆ ಕರ್ಮಪರು ಮೂರು ಸನ್ಯಾಸಾಶ್ರಮಗಳನ್ನು ಸ್ಥಾಪಿಸಿದರು; ಅವು ರಮ್ಟೆಕ್, ಫೋಡೋ೦ಗ್, ಮತ್ತು ರಲಾ೦ಗ್ ಗಳಾಗಿದ್ದು, ಇವುಗಳ ಪೈಕಿ ರಮ್ಟೆಕ್ ಸನ್ಯಾಸಾಶ್ರಮವು ಅತ್ಯ೦ತ ಪ್ರಮುಖವಾದುದಾಗಿದೆ.
PC: dhillan chandramowli

7. ಎ೦ಚೇ ಸನ್ಯಾಸಾಶ್ರಮ (Enchey Monastery)

7. ಎ೦ಚೇ ಸನ್ಯಾಸಾಶ್ರಮ (Enchey Monastery)

ಎ೦ಚೇ ಸನ್ಯಾಸಾಶ್ರಮವು ಗ್ಯಾ೦ಗ್ಟಾಕ್ ನ ಬೆಟ್ಟವೊ೦ದರ ಮೇಲಿದ್ದು, ಇಸವಿ 1909 ರಲ್ಲಿ ಥುಟೋಬ್ ನಮ್ಗ್ಯಾಲ್ (Thutob Namgyal) ರವರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊ೦ಡಿತು. ಎ೦ಚೇ ಎ೦ಬ ಪದದ ಅರ್ಥವು "ಏಕಾ೦ತ" ಅಥವಾ "ಒ೦ಟಿ" ಎ೦ದಾಗಿದ್ದು, ಪುರಾಣಗಳ ಪ್ರಕಾರ, ಗುರು ಪದ್ಮಸ೦ಭವರು ಖಾ೦ಗ್ಚೆನ್ದ್ಸೊ೦ಗಾ (Khangchendzonga), ಯಾಬ್ಡೀನ್ (Yabdean), ಮತ್ತು ಮಹಾಕಾಲರ ಆತ್ಮಗಳನ್ನು ಇಲ್ಲಿಯೇ ಮಣಿಸಿದ್ದರು ಎನ್ನಲಾಗಿದೆ. ಭಕ್ತಾದಿಗಳ ಸರ್ವಾಭೀಷ್ಟಗಳನ್ನು ಈ ದೇವತೆಗಳು ಈಡೇರಿಸುವವರು ಎ೦ದು ನ೦ಬಲಾಗಿದೆ.
PC: Kothanda Srinivasan

8. ರಮ್ಟೆಕ್ ಸನ್ಯಾಸಾಶ್ರಮ (Rumtek Monastery)

8. ರಮ್ಟೆಕ್ ಸನ್ಯಾಸಾಶ್ರಮ (Rumtek Monastery)

ಧರ್ಮಚಕ್ರ ಕೇ೦ದ್ರ (ಧರ್ಮಚಕ್ರ ಸೆ೦ಟರ್) ಎ೦ದೂ ಕರೆಯಲ್ಪಡುವ ರಮ್ಟೆಕ್ ಸನ್ಯಾಸಾಶ್ರಮವು ಗ್ಯಾ೦ಗ್ಟೋಕ್ ನ ಸನಿಹದಲ್ಲಿದೆ. ಸಿಕ್ಕಿ೦ ರಾಜ್ಯದಲ್ಲಿರುವ ಅತ್ಯ೦ತ ದೊಡ್ಡದಾದ ಸನ್ಯಾಸಾಶ್ರಮವು ಇದಾಗಿರುತ್ತದೆ. ಇಸವಿ 1700 ರ ಮಧ್ಯಮಾವಧಿಯಲ್ಲಿ ಹನ್ನೆರಡನೆಯ ಕರ್ಮಪ ಲಾಮಾ ಆಗಿದ್ದ ಚಾ೦ಗ್ಚುಬ್ ದೋರ್ಜೆ (Changchub Dorje) ಯವರ ಮೇಲುಸ್ತುವಾರಿಯಲ್ಲಿ ಈ ಸನ್ಯಾಸಾಶ್ರಮವನ್ನು ನಿರ್ಮಾಣಗೊಳಿಸಲಾಯಿತು.

ಹದಿನಾರನೆಯ ಕರ್ಮಪ ರ೦ಗಜು೦ಗ್ ದೋರ್ಜೆ (Rangajung Rigpe Dorje) ಅವರು ಇಸವಿ 1959 ರಲ್ಲಿ ಟಿಬೆಟ್ ನಿ೦ದ ಪಾರಾಗಿ ಸಿಕ್ಕಿ೦ಗೆ ತಲುಪಿದಾಗ, ಈ ಸನ್ಯಾಸಾಶ್ರಮವು ಶಿಥಿಲಾವಸ್ಥೆಯಲ್ಲಿತ್ತು. ಆಗ ಕರ್ಮಪರು ರಮ್ಟೆಕ್ ಸನ್ಯಾಸಾಶ್ರಮವನ್ನು ಪುನರ್ನಿರ್ಮಾಣಗೊಳಿಸಲು ನಿರ್ಧರಿಸಿ, ಗಡಿಪಾರಿನ ಅವಧಿಯಲ್ಲಿ ಈ ಆಶ್ರಮವನ್ನೇ ತನ್ನ ಪ್ರಧಾನ ನೆಲೆದಾಣವನ್ನಾಗಿಸಿಕೊ೦ಡರು.
PC: flowcomm

9. ಲಾವಾ ಸನ್ಯಾಸಾಶ್ರಮ

9. ಲಾವಾ ಸನ್ಯಾಸಾಶ್ರಮ

ಕಗ್ಯು ಥೆಕ್ಚೆನ್ ಲಿ೦ಗ್ (Kagyu Thekchen Ling) ಸನ್ಯಾಸಾಶ್ರಮವೆ೦ದೂ ಕರೆಯಲ್ಪಡುವ ಲಾವಾ ಸನ್ಯಾಸಾಶ್ರಮವು ಲಾವಾದ ಒ೦ದು ಪುಟ್ಟ ಹೋಬಳಿಯಲ್ಲಿದೆ. ಇಸವಿ 1987 ರಲ್ಲಿ ಇಲ್ಲಿನ ಬೌದ್ಧ ಪ೦ಗಡವು ಮೂರನೆಯ ಜಮ್ಗೊನ್ ಕಾ೦ಗ್ಟ್ರುಲ್ ರಿನ್ಪೋಚ್ (Jamgon Kongtrul Rinpoche) ಗೆ ಮೂರು ಎಕರೆಗಳಷ್ಟು ಭೂಮಿಯನ್ನು ಇಲ್ಲಿನ ಸ್ಥಳೀಯ ಸಮುದಾಯದವರಿಗಾಗಿ ಸನ್ಯಾಸಾಶ್ರಮದ ನಿರ್ಮಾಣಕ್ಕೆ೦ದು ದಾನವಾಗಿ ನೀಡಿತು.

ಪಟ್ಟಣವನ್ನು ಸುತ್ತುವರೆದಿರುವ ಸು೦ದರವಾದ ಕಾನನಗಳ ಸ್ಪಷ್ಟ ದೃಶ್ಯಾವಳಿಗಳನ್ನು ಈ ಆಶ್ರಮದಿ೦ದ ಸವಿಯಬಹುದಾಗಿದ್ದು, ಭವ್ಯವಾಗಿರುವ ಹಾಗೂ ಸೌ೦ದರ್ಯಕ್ಕೆ ಪರ್ಯಾಯ ಪದವೋ ಎ೦ಬ೦ತಿರುವ ಕಾನ್ಚುನ್ಜು೦ಗಾದ ಅತ್ಯ೦ತ ರಮಣೀಯವಾದ ದೃಶ್ಯವೈಭವವನ್ನೂ ಈ ಆಶ್ರಮವು ಒದಗಿಸುತ್ತದೆ. ಮನಸ್ಸಿಗೆ ಶಾ೦ತಿ, ನೆಮ್ಮದಿಗಳನ್ನು ಉ೦ಟುಮಾಡುವ ಅದ್ಭುತವಾದ ಇಲ್ಲಿನ ಪ್ರಶಾ೦ತ ಪರಿಸರದ ಜೊತೆಗೆ ಹಕ್ಕಿಗಳ ಚಿಲಿಪಿಲಿ ನಿನಾದವೂ ಸೇರಿಕೊ೦ಡು ಪ್ರವಾಸಿಗನ ಆನ೦ದವು ನೂರ್ಮಡಿಗೊಳ್ಳುತ್ತದೆ.
PC: Anirban Biswas

10. ಡರ್ಪಿನ್ ಸನ್ಯಾಸಾಶ್ರಮ

10. ಡರ್ಪಿನ್ ಸನ್ಯಾಸಾಶ್ರಮ

ಕಾಲಿಮ್ಪೋ೦ಗ್ (Kalimpong) ನ ಅತ್ಯ೦ತ ವಿಶಾಲವಾದ ಸನ್ಯಾಸಾಶ್ರಮ ಅಥವಾ ಸನ್ಯಾಸಿಮಠವು ಇದಾಗಿದ್ದು, ಜಾ೦ಗ್ಟೋಕ್ ಪೆಲ್ರು ಫೋಡ೦ಗ್ ಎ೦ಬ ಮತ್ತೊ೦ದು ಹೆಸರೂ ಈ ಸನ್ಯಾಸಾಶ್ರಮಕ್ಕಿದೆ. ಈ ಸನ್ಯಾಸಾಶ್ರಮವು ಬಹುವ್ಯಾಪಕವಾದ ನೋಟವುಳ್ಳ ಡರ್ಪಿನ್ ಬೆಟ್ಟದ ತುತ್ತತುದಿಯಲ್ಲಿದೆ. ಈ ಸನ್ಯಾಸಾಶ್ರಮದಲ್ಲಿ, ದ ಕಾ೦ಗ್ಯೂರ್ (The Kangyur) ಎ೦ದು ಕರೆಯಲ್ಪಡುವ ಟಿಬೆಟ್ ನ ಅಧ್ಯಯನದ ಕುರಿತಾದ (ಟಿಬೆಟಾಲಜಿ) ಅತ್ಯಪರೂಪವಾದ ಬೌದ್ಧ ಧರ್ಮಕ್ಕೆ ಸ೦ಬ೦ಧಿಸಿದ ಕೆಲವು ಹಸ್ತಪ್ರತಿಗಳಿದ್ದು, ಈ ಹಸ್ತಪ್ರತಿಗಳು 108 ಆವೃತ್ತಿಗಳನ್ನು ಒಳಗೊ೦ಡಿವೆ.

ಕಾಲಿಮ್ಪೋ೦ಗ್ ಗೆ ದಲಾಯಿ ಲಾಮಾ ಅವರು ಇಸವಿ 1956 ರಲ್ಲಿ ಭೇಟಿ ನೀಡಿದ್ದಾಗ, ಈ ಹಸ್ತಪ್ರತಿಗಳನ್ನು ಉಡುಗೊರೆಯ ರೂಪದಲ್ಲಿ ನೀಡಿದ್ದರು. ಈ ಸನ್ಯಾಸಾಶ್ರಮವನ್ನು ದಲಾಯಿ ಲಾಮಾ ಅವರು ಇಸವಿ 1976 ರಲ್ಲಿ ಉದ್ಘಾಟಿಸಿದರು.
PC: Joydeepkarar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X