Search
  • Follow NativePlanet
Share
» »ಪಾರ್ವತಿಯ ಕಳೆದುಹೋದ ಮಣಿ ಹೊರತಂದ "ಶೇಷಣ್ಣ"

ಪಾರ್ವತಿಯ ಕಳೆದುಹೋದ ಮಣಿ ಹೊರತಂದ "ಶೇಷಣ್ಣ"

By Vijay

ಇಲ್ಲಿ ಶೇಷನಾಗನನ್ನು ಪ್ರೀತಿಯಿಂದ ಶೇಷಣ್ಣನೆನ್ನಲಾಗಿದೆ. ಪಾರ್ವತಿಯ ಮಣಿಯನ್ನು ಹೊರತಂದ ಪ್ರಸಂಗ ಈ ಸ್ಥಳಕ್ಕೆ ಅಂಟಿಕೊಂಡಿದೆ. ಪ್ರತೀತಿಯಂತೆ ತೀವ್ರವಾದ ಪ್ರವಾಹದಿಂದ ಮನುಕುಲ ನಿರ್ಮಾಣವಾಗಿ ಮತ್ತೆ ಮನು ರಾಜನು ಮನುಕುಲದ ನಿರ್ಮಾಣ ಮಾಡುತ್ತಾನೆ. ಹಾಗೆ ಮನುಕುಲವನ್ನು ಆತ ಪ್ರಥಮ ಬಾರಿಗೆ ನಿರ್ಮಾಣ ಮಾಡಿದ ಸ್ಥಳವೆ ಮಣಿಕರಣ ಎಂದು ಭಾವಿಸಲಾಗಿದೆ ಹಾಗೂ ಇದೊಂದು ಧಾರ್ಮಿಕ ಆಕರ್ಷಣೆಯುಳ್ಳ ಸ್ಥಳವಾಗಿಯೂ ಹೆಸರುವಾಸಿಯಾಗಿದೆ.

ಕುಲ್ಲು-ಮನಾಲಿ ಸರ್ಕ್ಯೂಟ್ ಪ್ರವಾಸ ಮಾಡಿ ನೋಡಿ!

ಮಣಿಕರಣವಿರುವುದು ಹಿಮಾಚಲ ಪ್ರದೇಶ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣವಾದ ಕುಲ್ಲು ಜಿಲ್ಲೆಯಲ್ಲಿ. ಕುಲು-ಮನಾಲಿಗೆ ಭೆಟಿ ನೀಡುವ ಪ್ರವಾಸಿಗರು ಮಣಿಕರಣಕ್ಕೆ ಭೇಟಿ ನೀಡದೆ ತೆರಳಲಾರರು. ಕುಲ್ಲುವಿನಿಂದ ಮಣಿಕರಣ 42 ಕಿ.ಮೀ ಗಳಷ್ಟು ದೂರವಿದೆ. ಇನ್ನೊಂದು ವಿಶೇಷವೆಂದರೆ ಮಣಿಕರಣ ಹಿಂದುಗಳಲ್ಲದೆ ಹಾಗೂ ಸಿಖ್ಖರಿಗೂ ಸಹ ಪವಿತ್ರ ಯಾತ್ರಾ ಕ್ಷೇತ್ರವಾಗಿದೆ.

ಪಾರ್ವತಿಯ ಕಳೆದುಹೋದ ಮಣಿ ಹೊರತಂದ

ಚಿತ್ರಕೃಪೆ: Aman Gupta

ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲದೆ ತನ್ನಲ್ಲಿರುವ ನೈಸರ್ಗಿಕವಾಗಿ ರೂಪಿತವಾಗಿರುವ ಬಿಸಿ ನೀರಿನ ತೊರೆಯಿಂದಾಗಿಯೂ ಪ್ರವಾಸಿಗರಲ್ಲಿ ಸಾಕಷ್ಟು ಕುತೂಹಲ ಕೆರಳಿಸುತ್ತದೆ ಮಣಿಕರಣ. ಮೊದಲೆ ಸದಾ ತಂಪಾಗಿರುವ ಪ್ರದೇಶ, ಅದರ ಮೇಲೆ ಮತ್ತಷ್ಟು ಹಿತವೆನಿಸುವಂತಹ ಬಿಸಿ ನೀರು! ಇದೊಂದು ಪ್ರಕೃತಿಯ ವಿಸ್ಮಯವೆ ಸರಿ.

ಪಾರ್ವತಿಯ ಕಳೆದುಹೋದ ಮಣಿ ಹೊರತಂದ

ಚಿತ್ರಕೃಪೆ: Harminder singh saini

ಹಿಂದು ದಂತಕಥೆಯ ಪ್ರಕಾರ, ಒಮ್ಮೆ ಶಿವ-ಪಾರ್ವತಿಯರು ಲೋಕಾಭಿರಾಮವಾಗಿ ಸುತ್ತಾಡುತ್ತಿರುವಾಗ ಈ ಸ್ಥಳಕ್ಕೆ ಬಂದರು ಹಾಗೂ ಇಲ್ಲಿನ ಸೌಂದರ್ಯಕ್ಕೆ ಮಾರು ಹೋದ ಅವರು ಕೆಲ ಸಮಯ ನೆಲೆಸಬೆಕೆಂದು ನಿರ್ಧರಿಸಿದರು. ಈ ರೀತಿಯಾಗಿ ಅವರು 1100 ವರ್ಷಗಳ ಸಮಯ ನೆಲೆಸಿದ್ದರೆಂಬೆ ಪ್ರತೀತಿಯಿದೆ. ಈ ಮಧ್ಯದಲ್ಲಿ ಇಲ್ಲಿನ ನೀರಿನ ಕೊಳದಲ್ಲಿ ಪಾರ್ವತಿ ತನ್ನ ಮಣಿಯನ್ನು ಕಳೆದುಕೊಂಡಳು.

ಪಾರ್ವತಿಯ ಕಳೆದುಹೋದ ಮಣಿ ಹೊರತಂದ

ಚಿತ್ರಕೃಪೆ: Raahul95

ಬೇಸರಗೊಂಡ ಅವಳು ಶಿವನಿಗೆ ಅದನ್ನು ತೆಗೆದುಕೊಡುವಂತೆ ವಿನಂತಿಸಿದಳು. ಈ ಪ್ರಕಾರವಾಗಿ ಶಿವನು ತನ್ನ ದೂತರಿಗೆ ಆಜ್ಞೆ ಮಾಡಿದರೂ ಅವರಿಂದ ತರಲಾಗಲಿಲ್ಲ. ಇದರಿಂದ ಕುಪಿತನಾದ ಶಿವ ಮೂರನೇಯ ಕಣ್ಣನ್ನು ತೆರೆದನು. ಲೋಕನಾಶಕವಾಗುವುದು ತಡೆಯಬೇಕೆಂಬ ಉದ್ದೇಶದಿಂದ ನೀರಿನ ಕೊಳದಲ್ಲಿದ್ದ ಶೇಷನಾಗನಿಗೆ ಉಳಿದ ದೇವರುಗಳಿಂದ ವಿನಂತಿ ಹೋಯಿತು. ಹಾಗಾಗಿ ಶೇಷನಾಗನು ತನ್ನೆಲ್ಲ ಬಲದಿಂದ ಬುಸುಗುಟ್ಟಿದನು.

ಪಾರ್ವತಿಯ ಕಳೆದುಹೋದ ಮಣಿ ಹೊರತಂದ

ಗುರುದ್ವಾರಾ, ಚಿತ್ರಕೃಪೆ: Tegbains

ಅದರ ತೀವ್ರತೆ ಎಷ್ಟಿತ್ತೆಂದರೆ, ನೀರೆಲ್ಲ ಬಿಸಿ ಬಿಸಿಯಾಗಿ ಕುದಿಯುತ್ತ ಅದರೊಳಗಿದ್ದ ಎಲ್ಲ ರೀತಿಯ ಕಲ್ಲುಗಳು ಮೇಲೆಳಲಾರಂಭಿಸಿದವು. ಪಾರ್ವತಿ ಕಳೆದುಕೊಂಡಿದ್ದ ಮಣಿಯೂ ಸಹ ಮೇಲೆ ಬಂತು ಈ ರೀತಿಯಾಗಿ ಮಣಿ ಮತ್ತೆ ಪಾರ್ವತಿಗೆ ದೊರಕಿ ಸ್ಥಳವು ಪ್ರಶಾಂತವಾಯಿತು ಹಾಗೂ ಇದಕ್ಕೆ ಮಣಿಕರಣ ಎಂಬ ಹೆಸರು ಬಂದಿತು. ಹೀಗಾಗಿ ಇಂದಿಗೂ ಇಲ್ಲಿ ಕುದಿಯುವ ನೀರಿನ ಬುಗ್ಗೆಯನ್ನು ಕಾಣಬಹುದು.

ಪಾರ್ವತಿಯ ಕಳೆದುಹೋದ ಮಣಿ ಹೊರತಂದ

ಚಿತ್ರಕೃಪೆ: John Hill

ಇದರ ಬಿಸಿ ಎಷ್ಟಿದೆ ಎಂದರೆ ಅಕ್ಕಿಯು ಅನ್ನವಾಗಬಲ್ಲದು. ಅಲ್ಲದೆ ಇದರಲ್ಲಿ ಔಷಧೀಯ ಗುಣವೂ ಸಹ ಇದೆ ಎನ್ನಲಾಗಿದೆ. ಇನ್ನೂ ಸಿಖ್ಖರ ನಂಬಿಕೆಯಂತೆ, ಒಂದೊಮ್ಮೆ ಸಿಖ್ಖರ ಮೊದಲ ಗುರುವಾದ ಗುರುನಾನಕರು ತಮ್ಮ ಶಿಷ್ಯನಾದ ಮರ್ದನ ಎಂಬಾತನೊಂದಿಗೆ ಇಲ್ಲಿಗೆ ಬಂದಿದ್ದರು. ಹಸಿವಾಗಿದ್ದ ಅವರಿಗೆ ತಿನ್ನಲು ಸ್ಥಳೀಯರು ರೋಟಿ ಅಥವಾ ಚಪಾತಿ ಮಾಡಿಕೊಳ್ಳಲು ಹಿಟ್ಟನ್ನು ಕೊಟ್ಟರು.

ಆದರೆ ಅಲ್ಲಿ ಯಾವುದೆ ರೀತಿಯಾಗಿ ಬೆಂಕಿಯನ್ನು ಹಚ್ಚಲು ಸಾಮಗ್ರಿಗಳಿಲ್ಲದೆ ಹೋದಾಗ ನಾನಕರು ಶಿಷ್ಯನಿಗೆ ಅಲ್ಲಿದ್ದ ಒಂದು ನಿರ್ದಿಷ್ಟ ಕಲ್ಲನ್ನು ಎತ್ತಲು ಹೇಳಲು ಅದರ ಕೆಳಗೆ ಬಿಸಿ ನೀರು ಇರುವುದು ಕಂಡಿತು. ನಂತರ ನಾನಕರು ಶಿಷ್ಯನಿಗೆ ಹಿಟ್ಟನ್ನು ರೋಟಿಯಾಗಿ ಲಟ್ಟಿಸಿ ನೀರಲ್ಲಿ ಹಾಕಿ ದೇವರನ್ನು ಪ್ರಾರ್ಥಿಸು ಎಂದು ಕೇಳಿದರು.

ಒಮ್ಮೆ ಭೇಟಿ ಸಾಕು, ಸದಾ ನೆನಪಿರುತ್ತದೆ ಮನಾಲಿ

ಅದರಂತೆ ಶಿಷ್ಯನು ಮಾಡಿದಾಗ ಎಲ್ಲ ಲಟಿಸಿದ ಚಪಾತಿಗಳು ನೀರಲ್ಲಿ ಮುಳುಗಿದವು. ನಾನಕರು ಶಿಷ್ಯನಿಗೆ ಮತ್ತೆ ಸಮಾಧಾನ ಪಡಿಸುತ್ತ ನನ್ನ ಪಾಲಿಗೆ ಬರುವ ಪ್ರತಿ ಚಪಾತಿಯಲ್ಲಿ ಒಂದು ಚಪಾತಿಯನ್ನು ದಾನವಾಗಿ ಕೊಡುತ್ತೇನೆಂದು ಭಗವಂತನನ್ನು ಪ್ರಾರ್ಥಿಸು ಎಂದರು. ಅದರಂತೆ ಮಾಡಿದಾಗ ಎಲ್ಲ ಚಪಾತಿಗಳು ಸ್ವಲ್ಪವೂ ಮುದುಡದೆ ಪೂರ್ಣ ಪ್ರಮಾಣದಲ್ಲಿ ಬೆಂದು ನೀರಿನ ಮೇಲೆ ತೇಲತೊಡಗಿದವು.

ಕುಲ್ಲುಗೆ ಹೋಗಬೇಕೆ? ಇಲ್ಲಿ ತಿಳಿಯಿರಿ

ಹಾಗಾಗಿ ಈ ಸ್ಥಳವು ಸಿಖ್ಖರ ಪಾಲಿಗೂ ಸಹ ಸಾಕಷ್ಟು ಮಹತ್ವ ಪಡೆದಿದ್ದು ಸಿಖ್ಖರೂ ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ಇನ್ನೊಂದು ಸ್ಥಳ ಪುರಾಣದ ಪ್ರಕಾರ ಮಣಿಕರಣ ಭೇಟಿ ಮಾಡಿದರೆ ತೀರ್ಥ ಯಾತ್ರೆ ಸಂಪೂರ್ಣ ಎನ್ನಲಾಗುತ್ತದೆ ಹಾಗೂ ಕಾಶಿಗೆ ಹೋಗಲಾರದವರು ಇಲ್ಲಿಗೆ ಭೇಟಿ ನೀಡಿದರೂ ಸಾಕು ಕಾಶಿಯ ಭೇಟಿಯಷ್ಟೆ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X