Search
  • Follow NativePlanet
Share
» »ಹೈದರಾಬಾದಿನ ವಸ್ತುಸಂಗ್ರಹಾಲಯಗಳು : ಇಂದೂ ಪ್ರಕಟಗೊಳ್ಳುತ್ತಿರುವ ಗತಕಾಲದ ವೈಭವಗಳು

ಹೈದರಾಬಾದಿನ ವಸ್ತುಸಂಗ್ರಹಾಲಯಗಳು : ಇಂದೂ ಪ್ರಕಟಗೊಳ್ಳುತ್ತಿರುವ ಗತಕಾಲದ ವೈಭವಗಳು

By Arshad Hussain

ಹೈದರಾಬಾದ್ ಎಂದಾಕ್ಷಣ ನಿಮ್ಮ ಮನದಲ್ಲಿ ಏನು ಮೂಡಿತು? ಬೆಂಗಳೂರು ಎಂದಾಕ್ಷಣ ವಿಧಾನ ಸೌಧ ಮನದಲ್ಲಿ ಮೂಡಿದ ಹಾಗೆ ಹೈದರಾಬಾದಿಗೆ ಚಾರ್ಮಿನಾರ್. ಇದರ ಹೊರತಾಗಿ ಐತಿಹಾಸಿಕ ಸ್ಥಳವಾಗಿರುವ ಗೋಲ್ಕೊಂಡದ ವಜ್ರದ ಗಣಿಗಳು, ನಿಜಾಮರ ಆಳ್ವಿಕೆಯ ಕುರುಹುಗಳು ಕೋಟೆ ಕೊತ್ತಳಗಳು, ಹೈದರಾಬಾದಿ ಬಿರಿಯಾನಿ, ಫಾಲೋಡಾ,ಫಾಲೂದ, ಮತ್ತು ಮುಖ್ಯವಾಗಿ ಇಲ್ಲಿನ ಜನತೆ ಮಾತನಾಡುವ ವಿಶಿಷ್ಟ ಉಚ್ಚಾಚಾರಣೆಯ ಉರ್ದು ಭಾಷೆ. ಇವೆಲ್ಲವೂ ಹೈದರಾಬಾದಿಗೆ ಬನ್ನಿ ಎಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಹೈದರಾಬಾದ್ ನಗರವೊಂದರಲ್ಲಿಯೇ ಸುಮಾರು ನೂರಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳಿವೆ. ಇವುಗಳಲ್ಲಿ ಕೋಟೆ, ಕೆರೆ, ಗಣಿ, ಪ್ರಾಣಿ ಸಂಗ್ರಹಾಲಯ, ಮತ್ತು ಮುಖ್ಯವಾಗಿ ವಸ್ತು ಸಂಗ್ರಹಾಲಯಗಳಿವೆ. ಸಾಮಾನ್ಯವಾಗಿ ವಸ್ತು ಸಂಗ್ರಹಾಲಯವೆಂದರೆ ನಮಗೆ ಇಲ್ಲದ ಅಸಡ್ಡೆ, ಯಾರಿಗೆ ಬೇಕು ಈ ಓಬಿರಾಯನ ಕಾಲದ ಮಾಹಿತಿ ಎಂದೇ ಆಯ್ಕೆಯ ವಿಷಯದಲ್ಲಿ ವಸ್ತು ಸಂಗ್ರಹಾಲಯಗಳನ್ನು ಎರಡನೆಯ ಆಯ್ಕೆಗೆ ತಳ್ಳುತ್ತೇವೆ. ವಾಸ್ತವದಲ್ಲಿ ಬೇರೆ ನಗರದ ವಸ್ತು ಸಂಗ್ರಹಾಲಯಗಳನ್ನು ಅಲಕ್ಷಿಸಿದರೆ ಹೆಚ್ಚು ನಷ್ಟವಾಗಲಿಕ್ಕಿಲ್ಲ, ಆದರೆ ಹೈದರಾಬಾದಿನ ವಸ್ತುಸಂಗ್ರಹಾಲಯಗಳನ್ನು ತಪ್ಪಿಸಿಕೊಂಡರೆ ಮಾತ್ರ ಚಿತ್ರದುರ್ಗಕ್ಕೆ ಹೋಗೆ ಕೋಟೆ ನೋಡದೆ ಬಂದಂತೆಯೇ ಸರಿ.

ಈ ಜಗತ್ತಿನ ಪ್ರತಿ ಸ್ಥಳವೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಆದರೆ ಇತಿಹಾಸದ ಕುರುಹುಗಳನ್ನು ಉಳಿಸಿಕೊಳ್ಳುವ ಮೂಲಕ ಈ ಸ್ಥಳಗಳನ್ನು ಹಿಂದಿನ ದಿನಗಳ ವೈಭವವೂ ಉಳಿದುಕೊಳ್ಳುತ್ತದೆ. ಹೈದರಾಬಾದಿನ ಐತಿಹಾಸಿಕ ಸ್ಥಳಗಳನ್ನು ಪ್ರಾಚ್ಯವಸ್ತು ಇಲಾಖೆ ಆದಷ್ಟೂ ಚೆನ್ನಾಗಿ ಉಳಿಸಿಕೊಂಡು ಬಂದಿರುವ ಪರಿ ಶ್ಲಾಘನೀಯವಾಗಿದೆ. ವಸ್ತು ಸಂಗ್ರಹಾಲಯಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದು ಖಂಡಿತವಾಗಿಯೂ ನೋಡಲೇಬೇಕಾದ ಸ್ಥಳಗಳಾಗಿವೆ. ಬನ್ನಿ, ಈ ಪ್ರಮುಖ ಸ್ಥಳಗಳ ಬಗ್ಗೆ ಅರಿಯೋಣ:

1. ಸಾಲಾರ್ ಜಂಗ್ ಮ್ಯೂಸಿಯಂ

ಮೊಗಲ್ ಚಕ್ರವರ್ತಿ ಔರಂಗಜೇಬನ ಖಡ್ಗ, ಜಹಾಂಗೀರನ ಕುಸುರಿ ಹೊಂದಿದ ಕಟ್ಟಿ ಮತ್ತು ನಮ್ಮ ಮೈಸೂರು ಹುಲಿ ಟಿಪ್ಪೂ ಸುಲ್ತಾನನ ಬಟ್ಟೆಗಳ ಸಂಗ್ರಹ, ಮೊದಲಾದ ಇತಿಹಾಸ ಪ್ರಮುಖ ವಸ್ತುಗಳನ್ನು ಇಲ್ಲಿ ಕಾಪಿಡಲಾಗಿದೆ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ನಿರ್ಮಿಸಲಾದ ಈ ವಸ್ತುಸಂಗ್ರಹಾಲಯ ಕೇವಲ ಹೈದರಾಬಾದ್ ಮಾತ್ರವಲ್ಲ, ಇಡೀ ಭಾರತದಲ್ಲಿಯೇ ಅತಿ ಸುಂದರ ಮತ್ತು ಪ್ರಮುಖವಾದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ ಸಂಗ್ರಹಿಸಲಾಗಿರುವ ವಸ್ತುಗಳಲ್ಲಿ ಬಹುತೇಕ ವಿಶ್ವದಲ್ಲಿ ಲಭ್ಯವಿರುವ ಏಕಮಾತ್ರ ವಸ್ತುಗಳಾಗಿವೆ. ಕಳೆದ ಶತಮಾನದಲ್ಲಿ ನಿರ್ಮಿಸಿಲಾದ ವಸ್ತುಗಳು ಇಂದಿಗೂ ತಮ್ಮ ಮೂಲ ಸ್ಥಿತಿಯಲ್ಲಿವೆ ಹಾಗೂ ನಿರ್ಮಾಣ ಸ್ಥಿತಿಯಲ್ಲಿದ್ದಷ್ಟೇ ನಿಖರವಾಗಿ ಕಾರ್ಯನಿರ್ವಹಿಸುತ್ತಿವೆ. ನಿಜಾಮರು ಬಳಸುತ್ತಿದ್ದ ಕುರಾನ್ ಪ್ರತಿಗಳು, ಶತಮಾನಕ್ಕೂ ಹಿಂದಿನ ಕುಶಲಕಲೆಗಳು, ವರ್ಣಚಿತ್ರಗಳು, ಚಿನ್ನದ ಮತ್ತು ವಜ್ರಖಚಿತ ಆಭರಣಗಳು, ಯುದ್ಧ ಸಾಮಾಗ್ರಿಗಳು ಮೊದಲಾದ ಹಲವಾರು ವಸ್ತುಗಳು ಇಲ್ಲಿನ ಒಟ್ಟು ನಲವತ್ತು ಕೋಣೆಗಳಲ್ಲಿ ಅತ್ಯುತ್ತಮ ಸುರಕ್ಷಾ ವ್ಯವಸ್ಥೆಯೊಂದಿಗೆ ಪ್ರದರ್ಶಿಸಲ್ಪಟ್ಟಿವೆ. ಈ ನಲವತ್ತು ಕೋಣೆಗಳು ಈ ವಸ್ತುಸಂಗ್ರಹಾಲಯವನ್ನು ಭಾರತದ ಅತಿ ದೊಡ್ಡ ವಸ್ತುಸಂಗ್ರಹಾಲಯವಾಗಿಸಿವೆ. ಎಲ್ಲಾ ವಸ್ತುಗಳನ್ನು ಲೆಕ್ಕ ಹಾಕಿದರೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನ ವಸ್ತುಗಳು ಇಲ್ಲಿವೆ.

ಯಾವದನ್ನೂ ತಪ್ಪಿಸಿಕೊಂಡರೂ ತಪ್ಪಿಸಿಕೊಳ್ಳಲೇಬಾರದ ಆಕರ್ಷಣೆ ಎಂದರೆ ಇಲ್ಲಿನ ಮಿಲಿಟರಿ ಕವಾಯತು ನಡೆಯುವ ಗಡಿಯಾರ. ಪ್ರತಿ ಘಂಟೆಗೊಮ್ಮೆ ಚಿಕ್ಕ ಗೊಂಬೆಗಳು ಮೆರವಣಿಗೆ ಹೋಗುವ ಮತ್ತು ಸಿಪಾಯಿ ಘಂಟೆ ಹೊಡೆಯುವ ಅಂದಿನ ತಂತ್ರಜ್ಞಾನ ನಿಮ್ಮನ್ನು ಬೆಕ್ಕಸ ಬೆರಗಾಗಿಸುವುದು ಖಚಿತ.

2. ತೆಲಂಗಾಣ ಸ್ಟೇಟ್ ಆರ್ಕಿಯಾಲಜಿ ಮ್ಯೂಸಿಯಮ್

ಹೈದರಾಬಾದ್ ನಗರದಲ್ಲಿರುವ ಇದು ಅತ್ಯಂತ ಹಳೆಯ ಆರ್ಖಿಯಾಲಜಿ ಅಥವಾ ಪ್ರಾಕ್ತನಶಾಸ್ತ್ರ ವಸ್ತುಸಂಗ್ರಹಾಲಯವಾಗಿದೆ. ೧೯೩೦ರಲ್ಲಿ ಹೈದರಾಬಾದಿನ ನಿಜಾಮದ ನಿರ್ದೇಶನದ ಪ್ರಕಾರ ಇಲ್ಲಿ ಉತ್ಖತನ ನಡೆಸಿದಾಗ ಹಲವಾರು ಐತಿಹಾಸಿಕ ವಸ್ತುಗಳು ಪತ್ತೆಯಾಗಿತ್ತು. ಇವುಗಳನ್ನು ಆದಷ್ಟೂ ತಮ್ಮ ಮೂಲ ಸ್ಥಿತಿಯಲ್ಲಿರುವಂತೆ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಈ ಪ್ರದೇಶವನ್ನು ಆಳಿದ ನಿಜಾಮರು ಮತ್ತು ಅವರಿಗಿಂತಲೂ ಹಿಂದೆ ಆಳ್ವಿಕೆ ನಡೆಸಿದ್ದ ಕಾಕತೀಯರ ಕಾಲದ ವಸ್ತುಗಳು ಇಲ್ಲಿ ಸಿಕ್ಕಿವೆ. ಇವುಗಳಲ್ಲಿ ಹಲವು ಸಾವಿರಾರು ವರ್ಷ ಹಿಂದಿನ ಬುದ್ಧನ ಕಾಲಕ್ಕೆ ಸಂಬಂಧಿಸಿವೆ. ಇನ್ನೂ ಕೆಲವು ಪುರಾತನ ಈಜಿಪ್ಟ್ ನ ಮಮ್ಮಿಗಳು, ಕಂಚಿನ ಪ್ರತಿಮೆಗಳು ಮತ್ತು ಬೌದ್ಧ ಸ್ತೂಪಗಳು ಇಲ್ಲಿನ ಸಂಗ್ರಹದಲ್ಲಿದ್ದು ಇವು ಹೇಗೆ ಇಲ್ಲಿ ಬಂದವು ಎಂದು ನೋಡುಗರನ್ನು ಚಕಿತರಾಗಿಸುತ್ತವೆ. ಈ ಕಾರಣಕ್ಕಾಗಿ ಈ ಸ್ಥಳಕ್ಕೆ ನಿತ್ಯವೂ ನೂರಾರು ಇತಿಹಾಸ ವಿದ್ಯಾರ್ಥಿಗಳ ಸಹಿತ ಆಸಕ್ತರು ಆಗಮಿಸುತ್ತಾರೆ.

3. ನಿಜಾಮ್ ಮಯೂಸಿಯಂ:

ಹೆಸರೇ ಸೂಚಿಸುವಂತೆ ಇದು ನಿಜಾಮರ ವಸ್ತುಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವಾಗಿದೆ. ರಾಜ ಮಹಾರಾಜರ ಕಾಲದಲ್ಲಿ ಅವರಿಗೆ ಲಭಿಸುತ್ತಿದ್ದ ಉಡುಗೊರೆಗಳು ಅವರು ಬಳಸುತ್ತಿದ್ದ ವಸ್ತುಗಳು ಮೊದಲಾದವುಗಳನ್ನು ಇಲ್ಲಿ ಅತ್ಯುತ್ತಮವಾಗಿ ಸಂರಕ್ಷಿಸಿಡಲಾಗಿದೆ. ೨೦೦೦ ನೇ ಇಸವಿಯಲ್ಲಿ ಪ್ರಾರಂಭವಾದ ಈ ಸಂಗ್ರಹಾಲಯ ವಾಸ್ತವದಲ್ಲಿ ನಿಜಾಮರ ಹಳೆಯ ಅರೆಯಮನೆಯಾಗಿತ್ತು. ಇದನ್ನು ಪುರಾನಿ ಹವೇಲಿ ಅಥವಾ ಹಳೆಯ ಅರಮನೆ ಎಂದು ಕರೆಯುತ್ತಿದ್ದರು. ಇಲ್ಲಿ ನಿಜಾಮರಿಗೆ ಸಂಬಂಧಿಸಿದ ಸಾವಿರಕ್ಕೂ ಹೆಚ್ಚಿನ ವಸ್ತುಗಳಿವೆ. ಉಲ್ಲೇಖಿಸಬಹುದಾದ ಪ್ರಮುಖ ವಸ್ತುಗಳು ಎಂದರೆ ಚಿನ್ನದ ಊಟದ ಡಬ್ಬಿ, ವಜ್ರ ಖಚಿತ ಖಡ್ಗ, ಗಾಜಿನ ವರ್ಣಚಿತ್ರಗಳು, ಆಭರಣ ಪೆಟ್ಟಿಗೆಗಳು, ಬೆಳ್ಳಿಯ ಲೋಟಗಳು, ಮತ್ತು ಸುಗಂಧವನ್ನು ಸಂಗ್ರಹಿಸಲಾಗುತ್ತಿದ್ದ ಸುಂದರ ಬಾಟಲಿಗಳು. ಅಷ್ಟೇ ಅಲ್ಲ ನಿಜಾಮರು ಅಂದು ಬಳಸುತ್ತಿದ್ದ ವೈಭವಯುತ ಕಾರುಗಳು ಸಹಾ ಇಲ್ಲಿವೆ. ಶತಮಾನಕ್ಕೂ ಹಿಂದಿನ ಉಡುಗೊರೆಗಳು, ಆರನೆಯ ನಿಜಾಮರ ಸುಂದರ ಬಟ್ಟೆಗಳ ಸಂಗ್ರಹ, ವಿಜಯದ ಸಂಕೇತ ತಿಳಿಸುತ್ತಿದ್ದ ಭೇರಿಗಳು ಮೊದಲಾದ ಹಲವು ವಸ್ತುಗಳು ಇಲ್ಲಿವೆ.

4. ಸಿಟಿ ಮ್ಯೂಸಿಯಂ

ನಿಜಾಮ್ ಮ್ಯೂಸಿಯಂ ನೋಡಿದ ಬಳಿಕ ಪುರಾನಿ ಹವೇಲಿಯಲ್ಲಿಯೇ ಇರುವ ಚಿಕ್ಕದಾದರೂ ಐತಿಹಾಸಿಕ ಮಹತ್ವವುಳ್ಳ ಇನ್ನೊಂದು ವಸ್ತು ಸಂಗ್ರಹಾಲಯವನ್ನು ನೋಡಲು ಮರೆಯದಿರಿ. ೨೦೧೨ರಲ್ಲಿ ಕಡೆಯ ನಿಜಾಮರ ಮೊಮ್ಮಗರಿಂದ ಉದ್ಘಾಟನೆಗೊಂಡ ಈ ಕಟ್ಟಡ ಅಂದಿನಿಂದ ಸಾವಿರಾರು ಜನರನ್ನು ಆಕರ್ಷಿಸಿದೆ. ಮೊದಲ ವಸ್ತು ಸಂಗ್ರಹಾಲಯದಲ್ಲಿದ್ದಷ್ಟು ವಸ್ತುಗಳು ಇಲ್ಲಿ ಇಲ್ಲದಿದ್ದರೂ ಅಲ್ಲಿ ಇಲ್ಲದ ಕೆಲವು ಪ್ರಮುಖ ವಸ್ತುಗಳು ಇಲ್ಲಿವೆ. ಪ್ರಮುಖವಾಗಿ, ಟೆರ್ರಾ ಕೋಟಾ ಆಕೃತಿಗಳು, ಹಳೆಯ ನಾಣ್ಯಗಳು, ಸಾವಿವ ವರ್ಷಕ್ಕೂ ಪುರಾತನ ಮಡಕೆಗಳು ಮತ್ತು ಭೂಗತ ಪಳೆಯುಳಿಕೆಗಳು ಆಸಕ್ತಿ ಹುಟ್ಟಿಸುತ್ತವೆ. ಅಲ್ಲದೆ ಮಧ್ಯಯುಗದ ಹಲವು ವಸ್ತುಗಳು ಸಹಾ ಇಲ್ಲಿವೆ.

5. ಬಿರ್ಲಾ ಸೈನ್ಸ್ ಮಯೂಸಿಯಮ್

ನೂರಾ ಅರವತ್ತು ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಡೈನೋಸಾರ್ ನೋಡುವ ಅವಕಾಶ ಬಂದರೆ ತಪ್ಪಸಿಕೊಳ್ಳುತ್ತೀರೇನು? ಹೌದು, ಈ ಯುಗದ ಹಲವಾರು ಪಳೆಯುಳಿಕೆಗಳನ್ನು ಬಿರ್ಲಾ ವಿಜ್ಞಾನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ೧೯೮೫ರಲ್ಲಿ ಪ್ರಾರಂಭಗೊಂಡ ಈ ಕೇಂದ್ರ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಆಸಕ್ತಿ ಹುಟ್ಟಿಸುವ ಹಲವಾರು ವಸ್ತುಗಳನ್ನು ಹೊಂದಿದೆ. ಆದರೆ ಎಲ್ಲಕ್ಕಿಂತ ಹೆಚ್ಚಿನ ಆಕರ್ಷಣೆಯ ವಸ್ತುವೆಂದರೆ ಇಲ್ಲಿ ಸ್ಥಾಪಿಸಲಾಗಿರುವ ತಾರಾಯಲ ಅಥವಾ ಪ್ಲಾನೆಟೇರಿಯಂ. ಇದು ಆಧುನಿಕ ಉಪಕರಣಗಳಿಂದ ಸಜ್ಜಾಗಿದ್ದು ತಾರಾಲೋಕದ ಬಗ್ಗೆ ಹಲವಾರು ಆಸಕ್ತಿಕರ ಪ್ರದರ್ಶನಗಳನ್ನು ನೀಡುತ್ತಾ ಖಗೋಳ ವಿಜ್ಞಾನದ ಬಗ್ಗೆ ಮಾಹಿತಿ ನೀಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಇದು ಆಕರ್ಷಣೆಯ ಕೇಂದ್ರವಾಗಿದ್ದು ರಜಾದಿನಗಳಲ್ಲಿ ಇಲ್ಲಿ ಸಾವಿರಾರು ಮಕ್ಕಳು ಆಗಮಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X