Search
  • Follow NativePlanet
Share
» »ಕರ್ನಾಟಕದ ಈ ಧಾಮಗಳಿಗೆಂದಾದರೂ ಭೇಟಿ ನೀಡಿದ್ದೀರಾ?

ಕರ್ನಾಟಕದ ಈ ಧಾಮಗಳಿಗೆಂದಾದರೂ ಭೇಟಿ ನೀಡಿದ್ದೀರಾ?

ಕರ್ನಾಟಕದಲ್ಲಿರುವ ಅದೆಷ್ಟೊ ವನ್ಯಜೀವಿಧಾಮಗಳು ಅಷ್ಟೊಂದು ಹೆಸರುವಾಸಿಯಾಗಿಲ್ಲವಾದರೂ ತಮ್ಮ ವಿಶೇಷತೆಗಳಿಂದಾಗಿ ಅಪಾರವಾಗಿ ಜನಮನ್ನಣೆಗಳಿಸುಬಹುದಾದಂತಹ ತಾಣಗಳಾಗಿವೆ

By Vijay

ಈ ವನ್ಯಜೀವಿಧಾಮಗಳ ಕುರಿತು ಎಂದಾದರೂ ಕೇಳಿದ್ದೀರಾ? ಕೇಳಿದ್ದೆ ಆದಲ್ಲಿ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ಇಲ್ಲವೆಂದಾದಲ್ಲಿ ಒಂದೊಮ್ಮೆ ಬಿಡುವು ಮಾಡಿಕೊಂಡು ಖಂಡಿತವಾಗಿಯೂ ಈ ಅಪರೂಪದ ವನ್ಯಜೀವಿಧಾಮಗಳಿಗೊಂದು ಭೇಟಿ ನೀಡಲು ಮನಸ್ಸು ಮಾಡಿ. ನಿಜವಾಗಿಯೂ ಈ ಭೇಟಿ ನಿಮ್ಮ ಸುಂದರ ಅನುಭವಗಳಲ್ಲೊಂದಾಗುತ್ತದೆ.

ಈ ಲೇಖನದಲ್ಲಿ ತಿಳಿಸಲಾಗಿರುವ ಕೆಲವು ಅದ್ಭುತ ಎನ್ನಬಹುದಾದ ವನ್ಯಜೀವಿಧಾಮಗಳು ಕರ್ನಾಟಕದಲ್ಲೆ ಇರುವ ನಿಸರ್ಗಧಾಮಗಳೂ ಹೌದು. ಹಸಿರಿನ ವನಸಿರಿಯಿಂದ ಕಂಗೊಳಿಸುವ ಈ ಧಾಮಗಳು ನಗರಗಳಿಂದ ಸಾಕಷ್ಟು ದೂರದಲ್ಲಿ ನಿಸರ್ಗದ ಕಲ್ಮಶರಹಿತ ಪರಿಸರದಲ್ಲಿ ಪ್ರಕೃತಿ ಮಾತೆಯ ಮಡಿಲಿನಲ್ಲಿ ನೆಲೆಸಿವೆ.

ಈ ಎಲ್ಲ ಧಾಮಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು ಸಾವಿರಾರು ಜೀವಿಗಳಿಗೆ ಆಶ್ರಯ ನೀಡಿರುವ ಅದ್ಭುತ ತಾಣಗಳಾಗಿವೆ. ಕೇವಲ ವಿಜ್ಞಾನಿಗಳು, ಸಂಶೋಧಕರು ಅಥವಾ ಅಧ್ಯಯನಕಾರರಿಗೆಂದು ಮಾತ್ರವಲ್ಲದೆ ನಿಸರ್ಗಪ್ರಿಯ ಪ್ರವಾಸಿಗರಿಗೂ ಸಹ ಸಾಕಷ್ಟು ಆಕರ್ಷಣೀಯವಾಗಿವೆ.

ಹಾಗಾದರೆ ಕರ್ನಾಟಕದಲ್ಲಿ ಅಷ್ಟೊಂದು ಹೆಸರುವಾಸಿಯಲ್ಲದ ಯಾವೆಲ್ಲ ಸುಂದರ ವನ್ಯಜೀವಿಧಾಮಗಳಿವೆ ಹಾಗೂ ಅವು ಎಲ್ಲೆಲ್ಲಿ ನೆಲೆಸಿವೆ ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯಿರಿ. ಬಿಡುವಾದಾಗ ಯಾವುದಾದರೊಂದು ವನ್ಯಜೀವಿಧಾಮಕ್ಕೆ ಭೇಟಿ ನೀಡಿ ಅದ್ಭುತ ಪ್ರವಾಸಿ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಕಾಳಿ ಹುಲಿ ಸಂರಕ್ಷಿತ ಪ್ರದೇಶ

ಕಾಳಿ ಹುಲಿ ಸಂರಕ್ಷಿತ ಪ್ರದೇಶ

ಕಪ್ಪು ಚಿರತೆ, ಬಂಗಾಳ ಹುಲಿ ಹಾಗೂ ಇನ್ನೂ ವಿಶಿಷ್ಟ ಬಗೆಯ ಜೀವಿಗಳನ್ನು ಒಂದೆಡೆ ನೋಡುವ ಬಯಕೆ ಇದೆಯೆ? ಹಾಗಿದ್ದಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಇರುವ ಅಣಶಿ ವನ್ಯಜೀವಿ ಧಾಮಕ್ಕೊಮ್ಮೆ ಭೇಟಿ ನೀಡಿ. ಕಾಳಿ ನದಿಯಿಂದಾವೃತವಾಗಿರುವ ಈ ಸುಂದರ ಕಾಡು ರೋಮಾಂಚನಕಾರಿ ಅನುಭವ ನೀಡುತ್ತದೆ.

ಚಿತ್ರಕೃಪೆ: Ms.Mulish

ಬಂಗಾಳ ಹುಲಿಗಳು

ಬಂಗಾಳ ಹುಲಿಗಳು

ದಾಂಡೇಲಿ ಅಭಯಾರಣ್ಯದ ಒಂದು ಭಾಗವನ್ನು ವಿಭಜಿಸಿ ಅದನ್ನು ಅಣಶಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿತ್ತು. ತದನಂತರ ಬಂಗಾಳ ಹುಲಿಗಳನ್ನು ಸಂರಕ್ಷಿಸಿ ಬೆಳೆಸುವ ನಿಮಿತ್ತದಿಂದ 2015 ರಲ್ಲಿ ಇದನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ಇದೊಂದು ಅದ್ಭುತ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Amoghavarsha

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರದ ನೈರುತ್ಯಕ್ಕೆ ಸುಮಾರು 95 ಕಿ.ಮೀ ದೂರದಲ್ಲಿರುವ ಪ್ರಖ್ಯಾತ ಕುದುರೆಮುಖ ತಾಣವು ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೂ ಸಹ ಹ್ಸರುವಾಸಿಯಾಗಿದೆ. ಈ ಅಗಾಧ ಅಭಯಾರಣ್ಯವು ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ವ್ಯಾಪಿಸಿದೆ.

ಚಿತ್ರಕೃಪೆ: Nabeelhut

ನಯನಮನೋಹರ

ನಯನಮನೋಹರ

ಪಶ್ಚಿಮ ಘಟ್ಟಗಳಲ್ಲಿ ವ್ಯಾಪಿಸಿರುವ ಈ ಅಭಯಾರಣ್ಯವು ನಯನಮನೋಹರ ದೃಶ್ಯಗಳಿಗೆ ಹಾಗೂ ನಿತ್ಯಹರಿದ್ವರ್ಣದ ಕಾಡುಗಳಿಗಾಗಿ ಹೆಸರುವಾಸಿಯಾಗಿದ್ದು ಅನೇಕ ಬಗೆಯ ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕ ಆಶ್ರಯ ತಾಣವಾಗಿದೆ. ನಿರ್ದಿಷ್ಟ ಋತುಗಳಲ್ಲಿ ಈ ತಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: CK Photography

ಮೈಸೂರು

ಮೈಸೂರು

ಮೈಸೂರು ಜಿಲ್ಲೆಯ ಹುಣಸೂರಿನ ವ್ಯಾಪ್ತಿಯಲ್ಲಿ ಬರುವ ಅರಬಿತಿಟ್ಟು ವನ್ಯಧಾಮದ ಅಷ್ಟೊಂದಾಗಿ ಬಹುತೇಕರಿಗೆ ತಿಳಿದಿಲ್ಲ. ಇದು ಚಿಕ್ಕ ಕಾಡು ಪ್ರದೇಶವಾಗಿದ್ದರೂ ಸಹ ವಿಶಿಷ್ಟವಾಗಿದೆ. ನವಿಲು ಹಾಗೂ ಮುಂಗುಸಿಗಳಿಗೆ ಹೇಳಿ ಮಾಡಿಸಿದ ಕಾಡಾಗಿದೆ. ಸ್ಥಳಪುರಾಣದಂತೆ ಬಲು ಹಿಂದೆ ಅರೇಬಿಯಾ ದೇಶದಿಂದ ಕಳ್ಳನೊಬ್ಬ ಈ ಕಾಡಿನಲ್ಲಿ ವಾಸಿಸುತ್ತಿದ್ದನಂತೆ. ಆತ ದೃಷ್ಟ ಶ್ರೀಮಂತರನ್ನು ಸುಲಿಗೆ ಮಾಡಿ ಬಡವರಿಗೆ ಸಹಾಯ ಮಾಡುತ್ತಿದ್ದನಂತೆ. ಹಾಗಾಗಿ ಇದಕ್ಕೆ ಅರಬಿತಿಟ್ಟು ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Kabir

ಬೆಳಗಾವಿ

ಬೆಳಗಾವಿ

ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯಿರುವ ಭೀಮ್ಗಡ್ ಅರಣ್ಯ ಪ್ರದೇಶವು ಸಾಕಷ್ಟು ಅದ್ಭುತವಾದ ತಾಣವಾಗಿದೆ. ಈ ಅಭಯಾರಣ್ಯದಲ್ಲಿ ವ್ರೌಟನ್ ಮುಕ್ತ ಬಾಲದ ಬಾವಲಿಗಳನ್ನು ನೋಡಬಹುದಾಗಿದೆ. ಈ ರೀತಿಯ ಬಾವಲಿಗಳು ಭಾರತದಲ್ಲಿ ಕಂಡುಬರುವ ಏಕೈಕ ಸ್ಥಳ ಇದಾಗಿದ್ದು ಭೀಮ್ಗಡಿನ ಬಾರಾಪೆಡೆ ಗುಹೆಗಳಲ್ಲಿ ಇವುಗಳ ಸಂತತಿಯಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಜೀವಿಗಳು ಇವಾಗಿವೆ. ಇತ್ತೀಚೆಗೆ ಮೇಘಾಲಯದಲ್ಲೂ ಸಹ ಇವುಗಳ ಸಂತತಿ ಕಂಡುಬಂದಿದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Kalyanvarma

ಮಂಡ್ಯ

ಮಂಡ್ಯ

ಮಂಡ್ಯ, ಚಾಮರಾಜನಗರ ಹಾಗೂ ರಾಮನಗರಗಳಲ್ಲಿ ವ್ಯಾಪಿಸಿರುವ ವನ್ಯಜೀವಿಧಾಮ ಇದಾಗಿದ್ದು ಪ್ರಮುಖವಾಗಿ ಕಾವೇರಿ ನದಿಗೆ ಆಶ್ರಯ ನೀಡಿದ ತಾಣವಾಗಿದೆ. ಒಂದು ಸಾವಿರಕ್ಕೂ ಅಧಿಕ ಚ.ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಅಭಯಾರಣ್ಯದಲ್ಲಿ ಕರಡಿ, ಚಿರತೆ, ಜಿಂಕೆ, ಆನೆ, ಮಲಬಾರ್ ದೊಡ್ಡ ಅಳಿಲು ಹೀಗೆ ಹಲವಾರು ಪ್ರಾಣಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Ashwin Kumar

ಮಹಾಸೀರ್ ಮೀನು

ಮಹಾಸೀರ್ ಮೀನು

ಇನ್ನೂ ಇಲ್ಲಿ ಹರಿದಿರುವ ಕಾವೇರಿ ನದಿ ನೀರಿನಲ್ಲೂ ಅನೇಕ ಬಗೆಯ ಜಲಚರಗಳನ್ನು ಕಾಣಬಹುದಾಗಿದೆ. ಮಗ್ಗರ್ ಮೊಸಳೆ, ವಿವಿಧ ರೀತಿಯ ನೀರಿನ ಹಾವುಗಳು, ಕಪ್ಪೆಗಳು, ಆಮೆಗಳು ಹಾಗೂ ಬಲು ಜನಪ್ರೀಯವಾದ ಮಹಾಸೀರ್ ಮೀನುಗಳನ್ನು ಈ ಕಾಡಿನ ನದಿ ನೀರಿನಲ್ಲಿ ಕಾಣಬಹುದು.

ಚಿತ್ರಕೃಪೆ: N. A. Naseer

ಕರಡಿಗಳು

ಕರಡಿಗಳು

ದಾರೋಜಿ ಸ್ಲಾತ್ ಬೇರ್ ಸ್ಯಾಂಕ್ಚುರಿ ಎಂದು ಕರೆಯಲ್ಪಡುವ ಇದು ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿದೆ. ಜೇನು ತಿನ್ನುವ ಭಾರತಕ್ಕೆ ಮಾತ್ರವೆ ಸೀಮಿತವಾದ ವಿಶಿಷ್ಟ ಕಪ್ಪು ಕರಡಿಗಳ ಸಂರಕ್ಷಣೆಗಾಗಿ ಮೀಸಲಾದ ವನ್ಯಜೀವಿಧಾಮ ಇದಾಗಿದೆ. ಬಳ್ಳಾರಿ ನಗರಕೇಂದ್ರದಿಂದ 50 ಕಿ.ಮೀ ಹಾಗೂ ಪ್ರಖ್ಯಾತ ಪ್ರವಾಸಿ ತಾಣವಾದ ಹಮ್ಪಿಯಿಂದ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿ ಈ ಧಾಮವಿದೆ.

ಚಿತ್ರಕೃಪೆ: L. Shyamal

ಮೈದನಹಳ್ಳಿ

ಮೈದನಹಳ್ಳಿ

ಮೊದ ಮೊದಲು ಮೈದನಹಳ್ಳಿ ಎಂದೆ ಕರೆಯಲ್ಪಡುತ್ತಿದ್ದ ಪ್ರಸ್ತುತ ಜಯಮಂಗಲಿ ಎಂದು ಕರೆಯಲ್ಪಡುವ ಈ ವನ್ಯಜೀವಿಧಾಮವು ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶವಾಗಿದೆ. ತುಮಕೂರಿನ ಮಧುಗಿರಿ ಬಳಿಯಿರುವ ಈ ತಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೃಷ್ಣಮೃಗಗಳನ್ನು ನೋಡಬಹುದಾಗಿದೆ.

ಚಿತ್ರಕೃಪೆ: Soumitra ghosh

ಮೇಲುಕೋಟೆ

ಮೇಲುಕೋಟೆ

ಮಂಡ್ಯ ಜಿಲ್ಲೆಯಲ್ಲಿರುವ ಅದ್ಭುತ ವನ್ಯಜೀವಿಧಾಮ ಇದಾಗಿದೆ. ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಬಳಿ ಈ ಅರಣ್ಯ ಪ್ರದೇಶ ಇರುವುದರಿಂದ ಇದನ್ನು ಮೇಲುಕೋಟೆ ವನ್ಯಜೀವಿಧಾಮ ಎಂದು ಹೆಸರಿಸಲಾಗಿದೆ. ಬೂದು ಬಣ್ಣದ ತೋಳಗಳ ಸಂರಕ್ಷಣೆಯ ತಾಣ ಇದಾಗಿದೆ.

ಚಿತ್ರಕೃಪೆ: Kanthmss

ಕೊಲ್ಲೂರು

ಕೊಲ್ಲೂರು

ಉಡುಪಿ ಬಳಿಯ ಕೊಲ್ಲೂರಿಗೆ ಹತ್ತಿರದಲ್ಲಿರುವ ಮೂಕಾಂಬಿಕಾ ವನ್ಯಜೀವಿಧಾಮ ಇದಾಗಿದೆ. ಪ್ರಸಿದ್ಧ ಕೊಲ್ಲೂರಿನ ಮೂಕಾಂಬಿಕೆಯ ದೇವಾಲಯದ ಪ್ರಸಿದ್ಧತೆಯಿಂದಾಗಿ ಈ ಅಭಯಾರಣ್ಯಕ್ಕೆ ಮೂಕಾಂಬಿಕಾ ವನ್ಯಜೀವಿಧಾಮ ಎಂಬ ಹೆಸರನ್ನಿಡಲಾಗಿದೆ. ಶರಾವತಿ ವನ್ಯಜೀವಿಧಾಮದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಈ ಅರಣ್ಯದಲ್ಲಿ ವಿಶಿಷ್ಟ ಬಗೆಯ ಗಿಡ-ಮರಗಳು ಹಾಗೂ ವಿಶೇಷವಾಗಿ ಕೇನ್ ಆಮೆಗಳು ಕಂಡುಬರುತ್ತವೆ.

ಚಿತ್ರಕೃಪೆ: T. R. Shankar Raman

ಲಿಂಗನಮಕ್ಕಿ ಜಲಾಶಯ

ಲಿಂಗನಮಕ್ಕಿ ಜಲಾಶಯ

ಶರಾವತಿ ಜಲಾನಯನ ಪ್ರದೇಶದ ಒಂದು ಭಾಗವು ಶರಾವತಿ ವನ್ಯಜೀವಿಧಾಮ ಎಂದು ಘೋಷಿಸಲ್ಪಟ್ಟಿದೆ. ಲಿಂಗನಮಕ್ಕಿ ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕಾಡು ನಿತ್ಯಹರಿದ್ವರ್ಣದ ಮರಗಳಿಂದ ಸಂಪದ್ಭರಿತವಾಗಿದೆ.

ಚಿತ್ರಕೃಪೆ: Prakashmatada

ಹೆಗ್ಗಡದೇವನಕೋಟೆ

ಹೆಗ್ಗಡದೇವನಕೋಟೆ

ಮೈಸೂರಿನ ಹೆಗ್ಗಡದೇವನಕೋಟೆ ತಾಲೂಕಿನಲ್ಲಿರುವ ನುಗು ವನ್ಯಜೀವಿಧಾಮವು ಒಂದು ಪುಟ್ಟ ಅರಣ್ಯ ಪ್ರದೇಶವಾಗಿದ್ದು, ನುಗು ಜಲಾಶಯದಿಂದ ಸುತ್ತುವರೆದಿದೆ. ಇದನ್ನು ಇನ್ನೂ ಪ್ರವಾಸೋದ್ಯಮಕ್ಕೆಂದು ಮುಕ್ತಗೊಳಿಸಲಾಗಿಲ್ಲ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nicke.me

ಹಾವೇರಿ

ಹಾವೇರಿ

ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ರಾಣೇಬೆನ್ನೂರು ಬಯಲು ಸೀಮೆಯ ಪ್ರದೇಶದಲ್ಲಿ ಈ ವನ್ಯಜೀವಿಧಾಮವಿದೆ. ಪ್ರಮುಖವಾಗಿ ಇದು ನೀಲಗಿರಿ ಮರಗಳಿಂದ ಕೂಡಿರುವುದು ವಿಶೇಷವಾಗಿದೆ. ಅಲ್ಲದೆ ಇಲ್ಲಿಯೂ ಸಹ ವಿಶೇಷವಾಗಿ ಕೃಷ್ಣಮೃಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಚಿತ್ರಕೃಪೆ: TomFawls

ಶಿವಮೊಗ್ಗ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಬದಿಯಲ್ಲಿ ಸ್ಥಿತವಿರುವ ಶೆಟ್ಟಿಹಳ್ಳಿ ವನ್ಯಜೀವಿಧಾಮ ಇದಾಗಿದೆ. ಇದು ಪ್ರಮುಖವಾಗಿ ವಿವಿಧ ಬಗೆಯ ನೀರು ಹಕ್ಕಿಗಳು ಹಾಗೂ ನೀರುನಾಯಿಗಳ ವೀಕ್ಷಣೆಗೆ ಬಲು ಹೆಸರುವಾಸಿಯಾದ ಸ್ಥಳವಾಗಿದೆ. ಮಂಡಗದ್ದೆ ಪಕ್ಷಿಧಾಮವೂ ಸಹ ಈ ವನ್ಯಜೀವಿಧಾಮದ ಒಂದು ಭಾಗವಾಗಿದೆ.

ಚಿತ್ರಕೃಪೆ: Eric Kilby

ವಿಶಿಷ್ಟ

ವಿಶಿಷ್ಟ

ಕರ್ನಾಟಕದಲ್ಲಿ ನವಿಲೆಗೆಂದೆ ಮುಡಿಪಾದ ಎರಡು ಧಾಮಗಳಿದ್ದು ಅದರಲ್ಲೊಂದಾಗಿದೆ ಹಾವೇರಿ ಜಿಲ್ಲೆಯ ಬಂಕಾಪುರ ನವಿಲುಧಾಮ. ಭಾರತದಲ್ಲೆ ನವಿಲಿನ ಸಂರಕ್ಷಣೆಗೆಂದು ಘೋಷಿಸಲಾದ ಎರಡನೇಯ ಧಾಮ ಇದಾಗಿದ್ದು ಸಾಕಷ್ಟು ಮಾನ್ಯತೆ ಪಡೆದ ತಾಣವಾಗಿದೆ. ಬಂಕಾಪುರ ಕೋಟೆಯ ಸುತ್ತಲೂ ಈ ಧಾಮವು ವ್ಯಾಪಿಸಿದ್ದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನವಿಲುಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ವಿವಿಧ ಬಗೆಯ ಇತರೆ ಪಕ್ಷಿಗಳೂ ಸಹ ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Manjunath Doddamani Gajendragad

ನವಿಲುಧಾಮ

ನವಿಲುಧಾಮ

ಇದು ಕರ್ನಾಟಕದಲ್ಲಿರುವ ಇನ್ನೊಂದು ನವಿಲುಧಾಮ. ಕೇವಲ ನವಿಲುಗಳು ಮಾತ್ರವಲ್ಲದೆ ಇತರೆ ಹಲವಾರು ಪ್ರಬೇಧಗಳ ಪಕ್ಷಿಗಳನ್ನು ವಿಶೇಷವಾಗಿ ಹಳದಿ ಕೊರಳು ಪಟ್ಟಿಯ ಬುಲ್ ಬುಲ್ ಪಕ್ಷಿಗಳನ್ನು ಹೆಚ್ಚಾಗಿ ಇಲ್ಲಿ ಕಾಣಬಹುದಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ನವಿಲುಧಾಮವು ಮಂಡ್ಯದಿಂದ 65 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Monchr

ಗೋಕಾಕ್

ಗೋಕಾಕ್

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಘಟಪ್ರಭಾ ವನ್ಯಜೀವಿಧಾಮವು ಒಂದು ಆಕರ್ಷಕ ನಿಸರ್ಗಧಾಮವಾಗಿದ್ದು ಐರೋಪ್ಯ ರಾಷ್ಟ್ರಗಳಿಂದ ವಲಸೆ ಬರುವ ಹಕ್ಕಿಗಳಿಗೆ ಪ್ರಜನನಕ್ಕೆಂದು ಅದ್ಭುತ ಆಶ್ರಯ ತಾಣವಾಗಿ ಗಮನಸೆಳೆಯುತ್ತದೆ. ಇದೊಂದು ಮೂಲತಃ ಪಕ್ಷಿಧಾಮವಾಗಿದ್ದು ಧೂಪದಳ ಎಂಬಲ್ಲಿ ನಿರ್ಮಿತ ಆಣೆಕಟ್ಟೆಯಿಂದ ಉಂಟಾದ ಹಿನ್ನೀರಿನಿಂದ ಸುತ್ತುವರೆದಿದೆ. ಪ್ರಮುಖವಾಗಿ ಕ್ರೇನ್ ಹಾಗೂ ಯುರೋಪ್ ದೇಶಗಳ ಕೊಕ್ಕರೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Soloneying

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X