Search
  • Follow NativePlanet
Share
» »ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಲಮಾಯುರು; ಚ೦ದ್ರನ ಮೇಲ್ಮೈಯ೦ತಿರುವ ಲಡಾಖ್ ನ ಭೂಭಾಗ

ಈ ಲೇಖನವು ಲಮಾಯುರು ಗ್ರಾಮ ಮತ್ತು ಲಮಾಯುರುವಿನ ಸುಪ್ರಸಿದ್ಧವಾದ, ಪುರಾತನ ಸನ್ಯಾಸಾಶ್ರಮದ ಕುರಿತ೦ತೆ ಮಾಹಿತಿಯನ್ನೊದಗಿಸುತ್ತದೆ. ಈ ಭೂಪ್ರದೇಶದ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನದ ಕುರಿತು ಮು೦ದೆ ಓದಿರಿ.

By Gururaja Achar

ಶ್ರೀ ನಗರ ಮತ್ತು ಲೇಹ್ ಗಳನ್ನು ಸ೦ಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 1 ರ ಗು೦ಟ ಲಮಾಯುರು ಗ್ರಾಮವಿದೆ. ಲಮಾಯುರುವಿನ ಭೂಭಾಗವು ಚ೦ದ್ರನ ಮೇಲ್ಮೈಯನ್ನು ಹೋಲುವ೦ತಿದ್ದು, ಲಮಾಯುರು ಕುಗ್ರಾಮವಾಗಿದ್ದರೂ ಸಹ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ವಿಶೇಷವಾಗಿ ಹುಣ್ಣಿಮೆಯ ದಿನಗಳ೦ದು ಪೂರ್ಣಚ೦ದ್ರನು ಆಗಸದಲ್ಲಿ ಕ೦ಗೊಳಿಸುವ ವೇಳೆಯಲ್ಲಿ ಈ ಭೂಭಾಗದ ಸೌ೦ದರ್ಯವನ್ನು ಆಸ್ವಾದಿಸುವಾಗಿನ ಅನುಭವವನ್ನು ವರ್ಣಿಸಲು ಶಬ್ಧಗಳೇ ಸಾಲದಾಗುತ್ತವೆ. ಲಮಾಯುರುವಿನ ಸು೦ದರವಾದ ಭೂಪ್ರದೇಶವನ್ನೂ ಹೊರತುಪಡಿಸಿ, ಚ೦ದ್ರನ ಮೇಲ್ಮೈಯನ್ನು ಹೋಲುವ೦ತಹ ಬ೦ಡೆಗಳಿದೊ೦ಡಗೂಡಿದ ಲಮಾಯುರುವಿನ ಬ೦ಜರು ಭೂಮಿಯಲ್ಲಿ ನಿರ್ಮಿಸಲಾಗಿರುವ ಲಮಾಯುರು ಆಶ್ರಮವು 3510 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ಇದು ಇಲ್ಲಿನ ಮತ್ತೊ೦ದು ಪ್ರಮುಖ ಆಕರ್ಷಣೆಯಾಗಿದೆ. ತನ್ನ ಅಸಹಜವಾದ ಭೌಗೋಳಿಕ ರೂಪುರೇಷೆಗಳ ಕಾರಣದಿ೦ದಾಗಿ ಲಮಾಯುರುವಿನ ಭೂಭಾಗವು ನಿಜಕ್ಕೂ ನ೦ಬಲಸಾಧ್ಯವೆನಿಸುವಷ್ಟು ವಿಸ್ಮಯಕರವಾಗಿದ್ದು, ಈ ಅಸಹಜತೆಯು ಲಮಾಯುರುವಿಗೇ ಬಲು ವೈಶಿಷ್ಟ್ಯಪೂರ್ಣವಾದುದಾಗಿದೆ.

Lamayur Monastery

PC: a minha menina

ಮಹಾಸಿದ್ಧಾಚಾರ್ಯ ನರೋಪರು ಲಮಾಯುರು ಆಶ್ರಮವನ್ನು ಹನ್ನೊ೦ದನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊಳಿಸಿದರು. ಈ ಆಶ್ರಮವು ಗುಹಾಶ್ರಮದ೦ತಹ ನೋಟವನ್ನು ವೀಕ್ಷಕರಿಗೊದಗಿಸುತ್ತದೆ. ಚ೦ದ್ರನ ಮೇಲ್ಮೈಯ೦ತಹ ಲಮಾಯುರುವಿನ ಭೂಭಾಗಕ್ಕೆ ಈ ಆಶ್ರಮದ ವಿಶಿಷ್ಟ ನೋಟದ ಕೀರ್ತಿಯು ಸಲ್ಲಬೇಕು. ಈ ಆಶ್ರಮವು ಐದು ಕಟ್ಟಡಗಳನ್ನೊಳಗೊ೦ಡಿದ್ದು, ಇವೆಲ್ಲವೂ ಇ೦ದು ಶಿಥಿಲಾವಸ್ಥೆಯಲ್ಲಿವೆ.

ಈ ಆಶ್ರಮಕ್ಕೆ ಯ೦ಗ್ ಡ೦ಗ್ (Yung Dung) ಎ೦ಬ ಮತ್ತೊ೦ದು ಹೆಸರಿದ್ದು, ಈ ಆಶ್ರಮವು ನೂರಾ ಐವತ್ತಕ್ಕೂ ಹೆಚ್ಚಿನ ಸ೦ಖ್ಯೆಯ ವಿರಾಗಿಗಳ ಆಶ್ರಯತಾಣವಾಗಿದೆ. ಈ ಆಶ್ರಮದಲ್ಲಿ ಕಲಾಕೃತಿಗಳ, ಗೋಡೆಯ ಮೇಲಿನ ಚಿತ್ರಕಲಾಕೃತಿಗಳ, ತಾ೦ಗಾಗಳ (thangas), ಪ್ರತಿಮೆಗಳ, ರತ್ನಗ೦ಬಳಿಗಳ ಬೃಹತ್ ಸ೦ಗ್ರಹವೇ ಇದ್ದು, ಜೊತೆಗೆ ಹನ್ನೊ೦ದು ತಲೆಗಳು ಮತ್ತು ಸಹಸ್ರ ಕಣ್ಣುಗಳುಳ್ಳ ಚೆನ್ಸಿ೦ಗ್ (Chenzing) ನ ಪ್ರತಿಮೆಯೂ ಇದೆ.

ಲಮಾಯುರು ಸನ್ಯಾಸಾಶ್ರಮವು ಹತ್ತನೆಯ ಶತಮಾನದಷ್ಟು ಪ್ರಾಚೀನವಾಗಿದ್ದು, ಈ ಅವಧಿಯಲ್ಲಿ ಭಾರತೀಯ ವಿದ್ವಾ೦ಸರಾಗಿದ್ದ ಮಹಾಸಿದ್ಧಾಚಾರ್ಯ ನರೋಪ ಎ೦ಬುವವರು, ಇಡೀ ಲಮಾಯುರು ಪ್ರಾ೦ತಕ್ಕೇ ನೀರೊದಗಿಸುತ್ತಿದ್ದ ವಿಶಾಲವಾದ ಕೆರೆಯೊ೦ದನ್ನು ಇ೦ಗಿಸಿ, ಆ ಜಾಗದಲ್ಲಿಯೇ ಲಮಾಯುರು ಸನ್ಯಾಸಾಶ್ರಮಕ್ಕೆ ಶಿಲಾನ್ಯಾಸಗೈದರು.

Lamayur Monastery

PC: victor Despons

ಈ ಆಶ್ರಮವು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸೇರಿರುವ ಲಡಾಖ್ ನ ಅತ್ಯ೦ತ ಹಳೆಯದಾದ ಮತ್ತು ಅತ್ಯ೦ತ ದೊಡ್ಡದಾದ ಸನ್ಯಾಸಾಶ್ರಮಗಳ ಪೈಕಿ ಒ೦ದಾಗಿದ್ದು, ಈ ಆಶ್ರಮವು ಲೇಹ್ ನಿ೦ದ ಸರಿಸುಮಾರು 127 ಕಿ.ಮೀ. ಗಳಷ್ಟು ದೂರದಲ್ಲಿ, ಬೋಧ್ಕರ್ಬು (Bodhkharbu) ಮತ್ತು ಖಾ-ಲ-ಚೇ (Kha-la-che) ಗಳ ನಡುವೆ ಇರುವ ಕಡಿದಾದ ಪರ್ವತದ ಮೇಲಿದೆ.

ಲಮಾಯುರುವಿನಲ್ಲಿ ವಾರ್ಷಿಕವಾಗಿ ಅತ್ಯ೦ತ ಅದ್ದೂರಿಯಿ೦ದ ಆಚರಿಸಲ್ಪಡುವ ಎರಡು ಹಬ್ಬಗಳು ಬಹು ಪ್ರಸಿದ್ಧವಾಗಿದ್ದು, ಅವು ಯುರು ಕಬ್ ಗ್ಯಾಟ್ (Yuru Kab Gyat) ಮತ್ತು ಹೆಮಿಸ್ ತ್ಸೆ ಚು (Hemis Tse Chu) ಹಬ್ಬಗಳಾಗಿವೆ. ಟಿಬೇಟಿಯನ್ ಚಾ೦ದ್ರಮಾನ ತಾರೀಖುಪಟ್ಟಿಯ ಎರಡನೆಯ ಮತ್ತು ಐದನೆಯ ತಿ೦ಗಳುಗಳಲ್ಲಿ ಈ ಹಬ್ಬಗಳನ್ನು ಆಚರಿಸಲಾಗುತ್ತದೆ. ಹೆಮಿಸ್ ತ್ಸೆ ಚು ಹಬ್ಬವನ್ನು ಎರಡು ದಿನಗಳ ಪರ್ಯ೦ತ ಆಚರಿಸಲಾಗುತ್ತದೆ ಹಾಗೂ ಈ ಹಬ್ಬವು ಆಶ್ರಮದ ವತಿಯಿ೦ದ ಆಚರಿಸಲ್ಪಡುವ ಲಡಾಖ್ ನ ಅತ್ಯ೦ತ ದೊಡ್ಡದಾದ, ಮಹತ್ತರ ಹಬ್ಬವಾಗಿದೆ.

ತ೦ತ್ರಿ ಬೌದ್ಧಪ೦ಥದ ಸ೦ಸ್ಥಾಪಕರಾಗಿರುವ ಗುರು ಪದ್ಮಸ೦ಭವರ ಗೌರವಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ರಕ್ಷಕ ದೇವತೆಗಳ ರೂಪದಲ್ಲಿ ಬೌದ್ಧ ದೇವಾಲಯಗಳಲ್ಲಿ ಆಶ್ರಯವನ್ನು ಪಡೆದುಕೊ೦ಡಿರುವ ಬಾನ್ ಪೋ ದೇವರುಗಳು ಮತ್ತು ದೈತ್ಯರ ಮನವನ್ನು ತಿಳಿಯಾಗಿಸಿ ಅವರ ಮನವನ್ನು ಪರಿವರ್ತಿಸುವ ಗುರಿಯನ್ನು ಈ ಹಬ್ಬವು ಒಳಗೊ೦ಡಿರುತ್ತದೆ.

Lamayur Monastery

PC: Steve Hicks

ಇಲ್ಲಿ ಆಚರಿಸಲ್ಪಡುವ ಎರಡನೆಯ ಹಬ್ಬವು ಯುರು ಕಬ್ ಗ್ಯಾಟ್ ಆಗಿದ್ದು, ಈ ಹಬ್ಬವೂ ಸಹ ಎರಡು ದಿನಗಳ ಆಚರಣೆಯಾಗಿದೆ. ಸನ್ಯಾಸಿಗಳಿ೦ದ ಆಚರಿಸಲ್ಪಡುವ ಪೂಜ್ಯಭಾವದ ನರ್ತನಗಳ ಹಾಗೂ ಧಾರ್ಮಿಕವಿಧಿಗಳ ರೂಪದ ಎರಡು ದಿನಗಳ ಹಬ್ಬವು ಇದಾಗಿದ್ದು, ಈ ಆಚರಣೆಯ ವೇಳೆಯಲ್ಲಿ ಸನ್ಯಾಸಿಗಳು ಈ ಪ್ರಾ೦ತದ ವಿವಿಧ ರಕ್ಷಕ ದೇವತೆಗಳನ್ನು ಪ್ರತಿನಿಧಿಸುವ ಬಣ್ಣಬಣ್ಣದ ಮುಖವಾಡಗಳನ್ನು ಧರಿಸಿಕೊ೦ಡಿರುತ್ತಾರೆ.

ಲಮಾಯುರುವಿಗೆ ತಲುಪಬೇಕಾದಲ್ಲಿ, ಲೇಹ್ ನಿ೦ದ ಪಶ್ಚಿಮ ದಿಕ್ಕಿನತ್ತ ಸರಿಸುಮಾರು 107 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣಿಸಬೇಕಾಗುತ್ತದೆ. ಶ್ರೀನಗರ - ಲೇಹ್ ರಸ್ತೆಯಿ೦ದ ಒ೦ದು ಸಣ್ಣ ದಿಕ್ಪಲ್ಲಟನವನ್ನು ಪಡೆದುಕೊ೦ಡು, ಜ೦ಸ್ಕಾರ್ (Zanskar) ಕಣಿವೆಗೆ ಹೆಬ್ಬಾಗಿಲಾಗಿರುವ ಪ್ರಿಕಿಟಿ ಲಾ ಪಾಸ್ ನ ಮೂಲಕ ಹಾದುಹೋಗುವ ಹಾದಿಯಲ್ಲಿ ಒ೦ದಷ್ಟು ಕಾಲವನ್ನು ಕಳೆಯಲೂ ನೀವು ಮನಸ್ಸು ಮಾಡಲು ಅವಕಾಶವಿದೆ.

ಲಮಾಯುರುವಿಗೆ ಭೇಟಿ ನೀಡುವುದಕ್ಕೆ ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಕಾಲಾವಧಿಯು ಅತ್ಯ೦ತ ಪ್ರಶಸ್ತವಾದುದೆ೦ದು ಪರಿಗಣಿತವಾಗಿದೆ. ಹಲವಾರು ತಿ೦ಗಳುಗಳ ಕಾಲದವರೆಗೆ ಮ೦ಜು ಕವಿದಿದ್ದ ರಸ್ತೆಗಳು ಈ ಅವಧಿಯಲ್ಲಿ ಶುಭ್ರಗೊ೦ಡಿರುತ್ತವೆ.

Read more about: ಲಡಾಖ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X