Search
  • Follow NativePlanet
Share
» »ಒತ್ತಡ ಕರಗಿತು, ಬೇಸರ ಮರೆಯಿತು!

ಒತ್ತಡ ಕರಗಿತು, ಬೇಸರ ಮರೆಯಿತು!

ಕೇರಳದ ವಯನಾಡ್ ಜಿಲ್ಲೆಯಲ್ಲಿರುವ ಕುರುವಾ ದ್ವೀಪವು ಪ್ರಕೃತಿಯು ಬಿಡಿಸಿದ ಅತಿ ಸುಂದರ ಚಿತ್ರಗಳಲ್ಲೊಂದಾದ ರಮಣೀಯ ನಿಸರ್ಗಧಾಮವಾಗಿದ್ದು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತದೆ

By Vijay

ನೋಡಿದ ಕ್ಷಣದಲ್ಲೆ ನಿಮ್ಮ ಮನದಲ್ಲಿ "ಅಬ್ಬಾ ಎಷ್ಟು ಸುಂದರ ಕುರುವಾ, ಈಗಲೆ ಬಂದು ಬಿಡುವಾ" ಎಂದೆನಿಸದೆ ಇರಲಾರದು. ಇದರ ಮಹಿಮೆಯೆ ಹಾಗೆ. ಎಲ್ಲೆಂದರಲ್ಲಿ ದಟ್ಟವಾದ ಗಿಡ-ಮರಗಳು, ಸ್ವಲ್ಪವೂ ಜನವಾಸವಿಲ್ಲದ ಕಾಡು ಗಾಂಭೀರ್ಯತೆ. ಹಕ್ಕಿ-ಪಕ್ಷಿಗಳ ಚಿಲಿಪಿಲಿಯ ಕಲರವದ ಜೊತೆ ಕಿವಿಗಡುಚಿಕ್ಕುವ ಕೀಟಗಳ ಆರ್ತನಾದ, ಆಗಾಗ ಬಂದು ತಬ್ಬಿಕೊಳ್ಳುವ ಗಾಳಿ.

ಯಾರ ಹಂಗೂ ಇಲ್ಲದೆ, ನಗರದ ಗದ್ದಲಗಳ ಭಂಗವೂ ಇಲ್ಲದೆ ಪ್ರಕೃತಿಯ ಮಡಿಲಿನಲಿ ಸ್ವೇಚ್ಛೆಯಿಂದ ವಿಹರಿಸಬಯಸುವವರಿಗೆ ಕುರುವಾ ದ್ವೀಪ ಹೇಳಿ ಮಾಡಿಸಿದ ಅತ್ಯದ್ಭುತ ಹಾಗೂ ಸುಂದರ ನೈಸರ್ಗಿಕ ತಾಣ. ಮೂಲತಃ ಕುರುವಾ ಹಲವು ದ್ವೀಪಗಳ ಸಮೂಹ. ನಡುಗಡ್ಡೆಗಳು ಒಂದೆಡೆ ಮೇಳೈಸಿರುವ ಪ್ರಕೃತಿ ಸಹಜ ಒಡಮೂಡಿದ ತಾಣ.

ನೀವು ಪ್ರಕೃತಿಯ ನಿಶ್ಕಲ್ಮಶ ಪ್ರೀತಿಯನ್ನು ಆಸ್ವಾದಿಸುವವರಾಗಿದ್ದರೆ, ಅದರ ಅಗಾಧತೆಯನ್ನು ಹಾಗೂ ಸೂಕ್ಷ್ಮತೆಯನ್ನು ಅರಿಯುವವರಾಗಿದ್ದರೆ, ಅದರ ಗಾಂಭೀರ್ಯತೆಗೆ ಗೌರವ ನೀಡುವವರಾಗಿದ್ದರೆ ಹಾಗೂ ಅದರ ಸೌಂದರ್ಯವನ್ನು ವರ್ಣಿಸುವವರಾಗಿದ್ದರೆ, ಕುರುವಾ ದ್ವೀಪಗಳಿಗೊಮ್ಮೆ ಭೇಟಿ ನೀಡಲೇಬೇಕು.

ನಯನಮನೋಹರ

ನಯನಮನೋಹರ

ಕೇರಳವು ಸಾಕಷ್ಟು ನಯನಮನೋಹರ ಪ್ರವಾಸಿ ತಾಣಗಳಿಗೆ ಮನೆಯಾಗಿದೆ. ಅದರಲ್ಲಿ ವಯನಾಡ್ ಸಹ ಒಂದು ಅತ್ಯದ್ಭುತ ಪ್ರವಾಸಿ ತಾನವಾಗಿದೆ. ಕರ್ನಾಟಕದಿಂದಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ವಯನಾಡ್ ಗೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Sudheesh S

ನವದಂಪತಿಗಳು

ನವದಂಪತಿಗಳು

ಅದರಲ್ಲೂ ವಿಶೇಷವಾಗಿ ಬೆಂಗಳೂರಿನಿಂದ ಹಾಗೂ ಈಗ ತಾನೆ ಮದುವೆಯಾದ ದಂಪತಿಗಳು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಯನಾಡ್ ಗೆ ಭೇಟಿ ನೀಡುತ್ತಾರೆ. ವಯನಾಡ್ ಪಶ್ಚಿಮಘಟ್ಟಗಳ ಅಗಾಧ ವನಸಿರಿಯಿಂದ, ಜಲಧಾರೆಗಳಿಂದ ಹಾಗೂ ಕಡಿಮೆ ಜನಜಂಗುಳಿಯಿಂದ ಕೂಡಿರುವುದರಿಂದ ಸಾಕಷ್ಟು ಜನಪ್ರೀಯತೆಗಳಿಸಿದೆ.

ಚಿತ್ರಕೃಪೆ: Vijay S

ಘಮ ಘಮ ಸುವಾಸನೆ

ಘಮ ಘಮ ಸುವಾಸನೆ

ಇಲ್ಲಿರುವ ಚಹಾ ತೋಟಗಳು, ಕಾಫಿ ಎಸ್ಟೇಟುಗಳು ಘಮ ಘಮ ಸುವಾಸನೆಯೊಂದಿಗೆ ಕಣಿವೆ ಪರ್ವತಗಳ ಅಗಾಧ ಸೌಂದರ್ಯತೆಯನ್ನು ಅನಾವರಣ ಮಾಡುತ್ತವೆ. ಕಾಡುಗಳಿಂದ ತುಂಬಿದ ವಯನಾಡ್ ಜಿಲ್ಲೆಯಲ್ಲಿ ಭೇಟಿ ನೀಡಬಹುದದ ಅನೇಕ ಅದ್ಭುತ ಸ್ಥಳಗಳಿವೆ. ಅದರಲ್ಲೊಂದಾಗಿದೆ ಕುರುವಾ ದ್ವೀಪಗಳು.

ಚಿತ್ರಕೃಪೆ: Kmkutty

ಪ್ರಸನ್ನತೆಯ ಭಾವ

ಪ್ರಸನ್ನತೆಯ ಭಾವ

ಕುರುವಾ ಮೂಲತಃ ದ್ವೀಪಗಳ ಸಮೂಹವಾಗಿದ್ದು ಒಂದು ಆಕರ್ಷಕ ಹಾಗೂ ಮನಸ್ಸಿಗೆ ಪ್ರಸನ್ನತೆಯನ್ನುಂಟು ಮಾಡುವ ಸುಂದರ ಸ್ಥಳವಾಗಿದೆ. ಎಲ್ಲೆಡೆ ಪ್ರಶಾಂತಮಯ ನೀರು, ನೀರಿನ ಮೇಲೆ ಬೀದಿರಿನ ಬಾಂಬೂಗಳಿಂದ ಮಾಡಲಾದ ದೋಣಿಯ ಸಂಚಾರ, ಅಲ್ಲಲ್ಲಿ ಸಿಗುವ ಚಿಕ್ಕ ಪುಟ್ಟ ನಡುಗಡ್ಡೆಗಳು. ಇವೆಲ್ಲವೂ ಕುರುವಾದ ವೈಶಿಷ್ಟ್ಯತೆ.

ಚಿತ್ರಕೃಪೆ: Vinayaraj

ಮೈಮರೆಯುವಿರಿ!

ಮೈಮರೆಯುವಿರಿ!

ಒಂದೊಮ್ಮೆ ಈ ತಾಣಕ್ಕೆ ಭೇಟಿ ನೀಡಿದರೆ ಸಾಕು, ಆ ಪ್ರಕೃತಿ ಮತೆಯು ನಿಮ್ಮನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾಳೆಂದರೆ ನಿಮ್ಮ ಮನದ ಮೂಲೆ ಮೂಲೆಯಲ್ಲಿಯೂ ಸಹ ಅಡಗಿ ಕುಳಿತಿರುವ ಒತ್ತಡಗಳು, ಬೇಸರಗಳು ಮಂಗಮಾಯವಾಗಿ ಬಿಡುತ್ತವೆ.

ಚಿತ್ರಕೃಪೆ: Vinayaraj

ಆ ಭಗವಂತನಿಗೆ

ಆ ಭಗವಂತನಿಗೆ

ಮನುಷ್ಯ ಜನ್ಮ ನೀಡಿ ಈ ಮಧುರಾಮೃತ ಘಳಿಗೆಯನ್ನು ಪಂಚೇಂದ್ರಿಯಗಳ ಮೂಲಕ ಪರಿಪೂರ್ಣವಾಗಿ ಆಸ್ವಾದಿಸುವಂತೆ ಮಾಡಿರುವ ಆ ಭಗವಂತನಿಗೆ ಅನಂತ ಅನಂತ ಧನ್ಯವಾದಗಳನ್ನು ಹೇಳೆ ಬೇಕೆಂಬ ಆಧ್ಯಾತ್ಮಿಕ ಭಾವ ನಿಮ್ಮಲ್ಲಿ ಮೂಡದೆ ಇರಲಾರದು.

ಚಿತ್ರಕೃಪೆ: Vinayaraj

ಕೃತಜ್ಞ

ಕೃತಜ್ಞ

ಅಲ್ಲದೆ ನಾವೇಷ್ಟೆ ಕೃತಘ್ನರಾದರೂ ನಿಸ್ವಾರ್ಥತೆಯಿಂದ ಕೂಡಿರುವ ಆ ಪ್ರಕೃತಿ ಮಾತೆಯು ತನ್ನ ಸಂತಾನರಾದ ಸಕಲ ಜೀವ ರಾಶಿಗಳಿಗೂ ಸಹ ಅನುಕೂಅಲವಾಗುವಂತೆ ತನ್ನ ಸೇವೆಯನ್ನು ನಿರಂತರವಾಗಿ ನೀಡುತ್ತಿರುವುದನ್ನು ಗಮನಿಸಿದಾಗ ಇನ್ನು ಮುಂದಾದರೂ ಆ ಪ್ರಕೃತಿಗೆ ನಾವು ಕೃತಜ್ಞರಾಗಿರಬೇಕೆಂದು ಅನಿಸುತ್ತದೆ.

ಚಿತ್ರಕೃಪೆ: Rameshng

ವಿಶಾಲ ತಾಣ

ವಿಶಾಲ ತಾಣ

ಈ ಕುರುವಾ ದ್ವೀಪಗಳು ಸ್ಥಳೀಯವಾಗಿ ಬರಿ ಕುರುವಾ ದ್ವೀಪ ಎಂದಷ್ಟೆ ಕರೆಯಲ್ಪಡುತ್ತದೆ. ಸುಮಾರು 950 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಇದು ವ್ಯಾಪಿಸಿದ್ದು ಯಾವುದೆ ರೀತಿಯ ಜನವಸತಿಯಿಂದ ಕೂಡಿಲ್ಲದೆ ಇರುವುದು ಇದರ ಮತ್ತೊಂದು ವಿಶೇಷತೆ.

ಚಿತ್ರಕೃಪೆ: Vinayaraj

ಸಸ್ಯ ಸಂಕುಲವೂ!

ಸಸ್ಯ ಸಂಕುಲವೂ!

ಈ ಕಾರಣದಿಂದಾಗಿಯೆ ಇಲ್ಲಿ ಅತಿ ಶ್ರೀಮಂತ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲವನ್ನು ಯಥೇಚ್ಚವಾಗಿ ಕಾಣಬಹುದು. ಅಪರೂಪವಾದಂತಹ ಜಲಚರಗಳು, ಕೀಟಲೋಕ ಹಾಗೂ ವಿಶೇಷವಾದ ಬಲು ಎತ್ತರದ ಗಿಡ ಮ್ರಗಳು ನಿಮ್ಮನ್ನು ಗಂಭೀರತೆಯಿಂದ ಸ್ವಾಗತಿಸುತ್ತವೆ.

ಚಿತ್ರಕೃಪೆ: Vinayaraj

ಮನಮೋಹಕ

ಮನಮೋಹಕ

ಅಲ್ಲಲ್ಲಿ ಶಾಖೆಗಳಾಗಿ ಹರಿದಿರುವ ನೀರು, ಆ ನೀರಿನ ಮೇಲ್ಮೈಗಳಲ್ಲಿ ಪಸರಿಸಿರುವ ನೀರಿನ ಹಸಿರು ಹಾಗೂ ನಡುಗಡ್ಡೆಯ ಭೂ ಮೇಲ್ಮೈ ಮೇಲೆ ಬೆಳೆದಿರುವ ಮರಗಳ ರೆಂಬೆಗಳು ನೀರಿನೊಂದಿಗೆ ಸರಸವಾಡುತ್ತಿರುವ ಪರಿ ಹಾಗೂ ನೀರೊಳಗೆ ನಿರಾಯಾಸದಿಂದ ವಿಹರಿಸುತ್ತಿರುವ ಮೀನುಗಳು, ಒಂದು ಮಾದಕ ಲೋಕವನ್ನೆ ಸೃಷ್ಟಿ ಮಾಡಿ ಬಿಡುತ್ತವೆ.

ಚಿತ್ರಕೃಪೆ: Rameshng

ರೋಮಾಂಚಕ

ರೋಮಾಂಚಕ

ಇದರ ಇನ್ನೊಂದು ಹೆಗ್ಗಳಿಕೆ ಎಂದರೆ ಜನನಿಬಿಡತೆಯಿಂದ ಪ್ರತ್ಯೇಕವಾಗಿರುವುದು. ಇಲ್ಲಿ ಸುತ್ತಾಡುವಾಗ ಹತ್ತಿರದಲ್ಲಿ ಯಾವುದಾದರೂ ಜನವಸತಿ ಪ್ರದೇಶವಿರಬಹುದೆಂಬ ಅನುಮಾನ ಸ್ವಲ್ಪವೂ ಬರದ ಹಾಗೆ ಮಾಡುವ ಇಲ್ಲಿನ ಪರಿಸರ ಯಾವುದೋ ದೂರದರಣ್ಯದಲ್ಲಿ ಅನ್ವೇಷಣೆ ಮಾಡುತ್ತಿರುವೆವು ಎಂಬ ರೋಮಾಂಚಕವಾದ ಭಾವವನ್ನು ಮೂಡಿಸುತ್ತದೆ.

ಚಿತ್ರಕೃಪೆ: Rameshng

ವಿಶೇಷ ಮರಗಳು

ವಿಶೇಷ ಮರಗಳು

ಇಲ್ಲಿ ಕಂಡುಬರುವ ಅಪರೂಪದ ಹಕ್ಕಿಗಳು, ಅವು ನೀರಿನಲ್ಲಿ ಬೇಟೆಯಾಡುವ ಪರಿ ಎಲ್ಲವನ್ನು ಗಮನಿಸುವಾಗ ನಮ್ಮನ್ನು ನಾವೆ ಮರೆತು ಹೋಗಿರುತ್ತೇವೆ. ಅಲ್ಲದೆ ಇಲ್ಲಿರುವ ಗಿಡ ಮರಗಳೆ ಒಂದು ರೀತಿಯ ವಿಶೇಷ ಆಕರ್ಷಣೆ. ಕೆಲ ನಡುಗಡ್ಡೆಗಳಲ್ಲಿ ಕಂಡುಬರುವ ಅಗಾಧ ಎತ್ತರದ ಅತಿ ಪುರಾತನ ಮರಗಳು ಆಂಗ್ಲದ ಎವಿಲ್ ಡೆಡ್ ಎಂಬ ಹಾರರ್ ಚಿತ್ರದ ಕಾಡಿನ ಸನ್ನಿವೇಶಗಳನ್ನು ನೆನಪಿಸುವಂತಿವೆ.

ಚಿತ್ರಕೃಪೆ: Vinayaraj

ಖುಶಿ ನೀಡುತ್ತವೆ

ಖುಶಿ ನೀಡುತ್ತವೆ

ಇಲ್ಲಿ ಗಮನಸೆಳೆವ ಮತ್ತೊಂದು ಅಂಶವೆಂದರೆ ಬಿದಿರುಗಳಿಂದ ನಿರ್ಮಿಸಲಾದ ಚಿಕ್ಕ ಸೇತುವೆಗಳು. ದಟ್ಟ ಕಾನನದ ಮಧ್ಯೆ ಅವಿತು ಕುಳಿತಿರುವಂತೆ ಕಂಡುಬರುವ ಈ ಚಿಕ್ಕ ಸೇತುವೆ ಏನೋ ಒಂದು ರೀತಿಯ ಕೌತ್ಕತೆಯನ್ನು ಮೂಡಿಸುತ್ತದೆ. ಈ ಸ್ಥಳದಲ್ಲೆ ಸ್ವಲ್ಪ ಸಮಯ ಕಳೆಬೇಕೆಮ್ದು ಮನ ಹಂಬಲಿಸುತ್ತದೆ.

ಚಿತ್ರಕೃಪೆ: Challiyan

ನಿಶ್ಚಿಂತೆಯಿಂದ

ನಿಶ್ಚಿಂತೆಯಿಂದ

ಸೊಂಪಾಗಿ ಬೆಳೆದ ಗಿಡ ಮರಗಳ, ಪೊದೆಗಳ ಮಧ್ಯದಲ್ಲಿ ಹಾಯಾಗಿ ಯಾವ ಚಿಂತೆಯೂ ಇಲ್ಲದೆ ಸುಖ ಸುಮ್ಮನೆ ತಿರುಗಾಡಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಿದು. ಇಲ್ಲಿನ ಪ್ರಶಾಂತತೆ "ಓ ಮನಸೆ...ರಿಲ್ಯಾಕ್ಸ್ ಪ್ಲೀಸ್" ಎನ್ನುತ್ತಿರುತ್ತದೆ.

ಚಿತ್ರಕೃಪೆ: Vinayaraj

ಮೂರು ಘಂಟೆ!

ಮೂರು ಘಂಟೆ!

ಹಲವು ನಡುಗಡ್ಡೆಗಳನ್ನು ಇಲ್ಲಿ ನೋಡಬಹುದಾಗಿದ್ದು ಒಂದೊಂದು ನಡುಗಡ್ಡೆಗಳನ್ನು ಅನ್ವೇಷಿಸಲು ಕನಿಷ್ಠ ಮೂರು ಘಂಟೆಗಳಷ್ಟು ಸಮಯ ಬೇಕೆ ಬೇಕು. ಆದರೆ ನೆನಪಿರಲಿ ಕುರುವಾ ಅನ್ನು ಪ್ರವೇಶಿಸುವುದು ಸುಲಭವಲ್ಲ. ಅದಕ್ಕಾಗಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಾಗಿರುವುದು ಕಡ್ಡಾಯ.

ಚಿತ್ರಕೃಪೆ: Vinayaraj

ಪ್ರಾಣಿಗಳು ಬಹಳ

ಪ್ರಾಣಿಗಳು ಬಹಳ

ಅಲ್ಲದೆ ಮಳೆಗಾಲದಲ್ಲಿ ಈ ಸ್ಥಳವು ಸಾಕಷ್ಟು ಸಂಖ್ಯೆಯಲ್ಲಿ ಕಾಡು ಪ್ರಾಣಿಗಳಿಂದ ತುಂಬಿರುತ್ತದೆ. ಹಾಗಾಗಿ ಅಪಾಯ ಒಡ್ಡಬಹುದಾದ ಸ್ಥಳ ಇದಾಗಿರುವುದರಿಂದ ಸಾಕಷ್ಟು ಮುಂಜಾಗ್ರತೆವಹಿಸುವುದು ಕಡ್ಡಾಯ.

ಚಿತ್ರಕೃಪೆ: Sudheesh S

ಕಾಡುಗಳಲ್ಲೆ ನಡೆಯಿರಿ

ಕಾಡುಗಳಲ್ಲೆ ನಡೆಯಿರಿ

ಮಿಕ್ಕಂತೆ ಈ ನಡುಗಡ್ಡೆಗಳ ಸಮೂಹವು ಎಲ್ಲ ದಿಕ್ಕುಗಳಿಂದಲೂ ನೀರಿನಿಂದ ಆವೃತವಾಗಿರುತ್ತದೆ. ನಡೆಯಬೇಕೆಂದರೆ ನಡುಗಡ್ಡೆಯ ಭೂಮಿಯ ಮೇಲೆ ಗಿಡ ಮರಗಳ ರಾತ್ರಿ ನೆನಪಿಸುವಂತಹ ನೆರಳಿನಲ್ಲಿ ನಡೆಯಬೇಕು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಚಿಕ್ಕ ಪುಟ್ಟ ಕುಟಿರಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಅಲ್ಲಲ್ಲಿ, ಬೆಂಚುಗಳನ್ನು ಕೂರಲೆಂದು ಹಾಕಲಾಗಿದೆ.

ಚಿತ್ರಕೃಪೆ: Rameshng

ಮಾನಂತವಾಡಿ

ಮಾನಂತವಾಡಿ

ಕುರುವಾ ದ್ವಿಪವು ಪನಮರಂ ಹಾಗೂ ಮಾನಂತವಾಡಿ ನದಿಗಳು ಸಂಗಮ ಹೊಂದಿರುವ ಹಾಗೂ ಆ ಸಂಗಮವಾಗಿ ಹರಿದ ನದಿಯು ಕೊನೆಗೆ ಕಬಿನಿ ನದಿಯಲ್ಲಿ ಸೇರಿ ಹೋಗುವ ಪ್ರದೇಶದಲ್ಲಿ ರೂಪಗೊಂಡಿರುವುದರಿಂದ ಎಲ್ಲೆಡೆ ಅಗಾಧ ಪ್ರಮಾಣದ ನೀರಿನಿಂದ ಆವೃತವಾಗಿದೆ.

ಚಿತ್ರಕೃಪೆ: Samadolfo

ತಿಂಡಿ ತಿನಿಸುಗಳಿರಲಿ

ತಿಂಡಿ ತಿನಿಸುಗಳಿರಲಿ

ನಿಮಗೆ ಅನುಕೂಲವಾಗುವಂತಹ ಕೆಲವು ಸೂಚನೆಗಳೆಂದರೆ ನೀವು ಒಬ್ಬರೊ ಅಥವಾ ಸ್ನೇಹಿತರೊಂದಿಗೊ ಇಲ್ಲವೆ ಕುಟುಂಬದೊಂದಿಗೆ ಕುರುವಾ ದ್ವೀಪಕ್ಕೆ ಭೇಟಿ ನೀಡಿದ್ದಾಗ ನಿಮ್ಮ ಜೊತೆ ಕುಡಿಯುವ ನೀರು ಹಾಗೂ ತಿಂಡಿ ತಿನಿಸುಗಳನ್ನು ಕೊಂಡೊಯ್ಯಲು ಮರೆಯಬೇಡಿ. ಏಕೆಂದರೆ ಇಲ್ಲಿ ಯಾವುದೆ ರೀತಿಯ ಉಪಹಾರಗೃಹವಾಗಲಿ ಅಥವಾ ಅಂಗಡಿಗಳಾಗಲಿ ಇಲ್ಲವೆ ಇಲ್ಲ.

ಚಿತ್ರಕೃಪೆ: Johnson aj

ಸ್ವಚ್ಛವಾಗಿಡಿ

ಸ್ವಚ್ಛವಾಗಿಡಿ

ಎರಡನೇಯದಾಗಿ ಇದು ಕಲ್ಮಶರಹಿತ ಶುದ್ಧ ಪರಿಸರ ಹೊಂದಿರುವ ತಾಣವಾಗಿರುವುದರಿಂದ ಪ್ಲ್ಯಾಸ್ಟಿಕ್ ಮುಂತಾದ ಕಸಗಳನ್ನು ಇಲ್ಲಿ ದಯವಿಟ್ಟು ಎಸೆಯಬೇಡಿ. ಸ್ವರ್ಗ ಸದೃಶ ತಾಣವಾಗಿರುವುದರಿಂದ ಕ್ಯಾಮೆರಾಗಳನ್ನು ಕೊಂಡೊಯ್ಯಲು ಮರೆಯದಿರಿ. ನಿಮ್ಮ ಬಳಿ ಇಲ್ಲವೆಂದರೂ ಸ್ನೇಹಿತರಿಂದ ಬಾಡಿಗೆಯ ರೂಪದಲ್ಲಾದರೂ ಪಡೆದು ಒಯ್ಯಿರಿ. ಏಕೆಂದರೆ ಅಷ್ಟು ಅದ್ಭುತ ಚಿತ್ರಗಳನ್ನು ಇಲ್ಲಿ ಕ್ಲಿಕ್ಕಿಸಬಹುದು.

ಚಿತ್ರಕೃಪೆ: Vengolis

ಸುರಕ್ಷಿತ ಸ್ಥಳದಲ್ಲಿ ಮಾತ್ರ ಸುತ್ತಾಡಿ

ಸುರಕ್ಷಿತ ಸ್ಥಳದಲ್ಲಿ ಮಾತ್ರ ಸುತ್ತಾಡಿ

ನಡುಗಡ್ಡೆಗಳು ದಟ್ಟ ಅರಣ್ಯಗಳಿಂದ ಕೂಡಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಇದ್ದೆ ಇರುತ್ತದೆ. ಹಾಗಾಗಿ ಅರಣ್ಯ ಇಲಾಖೆಯಿಂದ ಸೂಚಿಸಲಾದ ಪಥದ ಮಾರ್ಗದಲ್ಲೆ ಸಂಚರಿಸುತ್ತ ಪ್ರಕೃತಿಯನ್ನು ಆನಂದಿಸಿ. ಮಳೆಗಾಲದಲ್ಲಿ ಕೊಡೆಗಳಿರಲಿ. ಏಕೆಂದರೆ ಕುಟಿರಗಳ ಸಂಖ್ಯೆ ಸಾಕಷ್ಟಿಲ್ಲ. ಸುರಕ್ಷತೆಯ ಸೂಚನಾ ಫಲಕಗಳನ್ನು ಗಮನವಿಟ್ಟು ಪಾಲಿಸಿ.

ಚಿತ್ರಕೃಪೆ: Rameshng

ದೂರವಿರಿ

ದೂರವಿರಿ

ಕೆಲ ನಡುಗಡ್ಡೆಗಳನ್ನು ಸುತ್ತುವರೆದಿರುವ ನದಿಗಳಲ್ಲಿ ಪ್ರಭಾವಶಾಲಿ ಸೆಳೆತಗಳಿವೆ. ಸುಳಿಗಳುಂಟಾಗುತ್ತವೆ. ಅಂತಹ ಸ್ಥಳಗಳನ್ನು ಫೆನ್ಸಿಂಗ್ ಮೂಲಕ ಪ್ರವೇಶಿಸದಂತೆ ತಡೆಯಲಾಗಿದೆ. ಆ ಕಾರಣ ಅಂತಹ ಸ್ಥಳಗಳಲ್ಲಿ ಯಾವುದೆ ರೀತಿಯ ಸಾಹಸಗಳು ಬೇಡ.

ಚಿತ್ರಕೃಪೆ: Rameshng

ಈಜಲು ಪ್ರಶಸ್ತ

ಈಜಲು ಪ್ರಶಸ್ತ

ಈಜಲು ಇಷ್ಟಪಡುವವರಿಗೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗಿದ್ದು ಆ ಸ್ಥಳಗಳನ್ನು ಬಿಟ್ಟು ಬೇರೆಲ್ಲೂ ಈಜಲು ಹೋಗದಿರುವುದು ಉತ್ತಮ. ಪ್ರವೇಶಿಸಲು ನಿರ್ದಿಷ್ಟ ಶಲ್ಕಗಳನ್ನು ವಿಧಿಸಲಾಗಿದ್ದು ಅವರವರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಚಿತ್ರಕೃಪೆ: Vinayaraj

ನೆನಪಿನಲ್ಲಿಡಿ

ನೆನಪಿನಲ್ಲಿಡಿ

ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ದ್ವೀಪಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ ಅಂದರೆ ಜೂನ್ ನಿಂದ ನವಂಬರ್ ಸಮಯ. ಕರಾರುವಕ್ಕಾದ ಸಮಯವನ್ನು ಆಯಾ ಸಂದರ್ಭದಲ್ಲಿ ಪ್ರದೇಶದಲ್ಲಿ ಮಳೆಯಾಗಿ ನೀರಿನ ಪ್ರಮಾಣವನ್ನು ಗಮನಿಸಿ ಘೋಷಿಸಲಾಗುತ್ತದೆ. ಮಿಕ್ಕಂತೆ ಉಳಿದ ಸಮಯದಲ್ಲಿ ಪ್ರವೇಶಿಸಬಹುದು.

ಚಿತ್ರಕೃಪೆ: നിരക്ഷരൻ

ಎಷ್ಟು ದೂರ

ಎಷ್ಟು ದೂರ

ಕುರುವಾ ದ್ವೀಪವು ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 40 ಕಿ.ಮೀ ಹಾಗೂ ಮಾನಂತವಾಡಿಯಿಂದ 15 ಕಿ.ಮೀ ಗಳಷ್ಟು ದೂರದಲ್ಲಿದೆ. ಕಲ್ಪೆಟ್ಟಾದಲ್ಲಿರುವ ಅರಣ್ಯ ಇಲಾಖೆಯಿಂದ ಕುರುವಾ ದ್ವಿಪಕ್ಕೆ ಪ್ರವೇಶಿಸಲು ಅನುಮತಿ ಪತ್ರ ಪಡೆಯತಕ್ಕದ್ದು. ಕಲ್ಪೆಟ್ಟಾಗೆ ತೆರಳಲು ಬೆಂಗಳೂರಿನಿಂದ ಬಸ್ಸುಗಳು ದೊರೆಯುತ್ತವೆ. ಕಲ್ಪೆಟ್ಟಾ ಹಾಗೂ ಮಾನಂತವಾಡಿಯಿಂದ ಕುರುವಾ ದ್ವೀಪಕ್ಕೆ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Stalinsunnykvj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X