Search
  • Follow NativePlanet
Share
» »ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

By Vijay

ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಬಳಿಯಿರುವ ಕೋಲಾರ ಪಟ್ಟಣವು ಸಾಕಷ್ಟು ಪ್ರವಾಸಿ ತಾಣಗಳನ್ನು ಅದರಲ್ಲೂ ವಿಶೇಷವಾಗಿ ಧಾರ್ಮಿಕ ಆಕರ್ಷಣೆಗಳನ್ನು ಹೊಂದಿರುವ ಸುಂದರ ನಗರವಾಗಿದೆ. ಕೋಲಾರಮ್ಮನ ದೇವಾಲಯವಾಗಿರಬಹುದು, ದಕ್ಷಿಣ ಕಾಶಿ ಕ್ಷೇತ್ರ ಅಂತರಗಂಗೆಯಾಗಿರಬಹುದು ಎಲ್ಲವೂ ಕುತೂಹಲ ಕೆರಳಿಸುವ ತಾಣಗಳಾಗಿವೆ.

ನಿಮಗಿಷ್ಟವಾಗಬಹುದಾದ : ಕೋಲಾರಿನ ಚಿನ್ನದಂತಹ ಆಕರ್ಷಣೆಗಳು

ಇಂತಹ ಹಲವು ತಾಣಗಳ ಪೈಕಿ ಈ ಜಿಲ್ಲೆಯ ಒಂದು ಹಳ್ಳಿಯಲ್ಲಿರುವ ಶಿವನಿಗೆ ಮುಡಿಪಾದ ದೇವಾಲಯವೊಂದು ಎಲ್ಲರ ಗಮನಸೆಳೆಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ದೇವಾಲಯದ ವಿಶೇಷತೆಗಳೆ ಹಾಗಿವೆ. ಕಣ್ಣು ಹಾಯಿಸಿದಷ್ಟು ಎಲ್ಲೆಡೆ ಕಾಣುವ ಶಿವಲಿಂಗಗಳು, ಅಗಾಧ ಎತ್ತರದ ಬಸವ, ಸುತ್ತಮುತ್ತಲಿನ ಸುಶ್ರಾವ್ಯವಾದ ಪರಿಸರ ಈ ತಾಣಕ್ಕೆ ವಿಶೇಷ ಮೆರುಗನ್ನು ನೀಡಿವೆ.

ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

ಚಿತ್ರಕೃಪೆ: Pponnada

ಹೌದು, ಆ ವಿಶೇಷ ತಾಣವೆ ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿಯಲ್ಲಿರುವ ಕೋಟಿಲಿಂಗೇಶ್ವರ ದೇವಾಲಯ. ಬೆಂಗಳೂರಿನಿಂದ 65 ಕಿ.ಮೀ ದೂರವಿರುವ ಕೋಲಾರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಕಮ್ಮಸಂದ್ರದಿಂದ ಸುಮಾರು ಐದು ಕಿ.ಮೀ ದೂರದಲ್ಲಿ ಈ ದೇವಾಲಯವಿದ್ದು ಸಾಕಷ್ಟು ವಾಹನಗಳು ಕೋಲಾರ ನಗರಕೇಂದ್ರ ಹಾಗೂ ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ದೊರೆಯುತ್ತವೆ.

ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

ಚಿತ್ರಕೃಪೆ: Mithila

ಸುತ್ತಮುತ್ತಲು ಸ್ವಚ್ಛ ಹಸಿರಿನಿಂದ ಆವರಿಸಿರುವ ಈ ದೇವಾಲಯದ ಪ್ರಮುಖ ಆಕರ್ಷಣೆಗಳೆಂದರೆ ಎಂದರೆ ದೈತ್ಯಾಕಾರದ ಶಿವಲಿಂಗ ಹಾಗೂ ಬಸವನ ಪ್ರತಿಮೆಗಳು. ಶಿವಲಿಂಗವು ಪ್ರಪಂಚದಲ್ಲೆ ಕಂಡುಬರುವ ಅತಿ ದೊಡ್ಡ ಶಿವಲಿಂಗಗಳ ಪೈಕಿ ಒಂದಾಗಿದ್ದು 108 ಅಡಿಗಳಷ್ಟು ಎತ್ತರವಿದೆ. ಇನ್ನೂ ಇದಕ್ಕೆ ಜೊತೆಯಾಗಿ ಬಸವನ ಪ್ರತಿಮೆಯು 35 ಅಡಿಗಳಷ್ಟು ಎತ್ತರವಿದೆ.

ನಿಮಗಿಷ್ಟವಾಗಬಹುದಾದ : ವಿವಿಧ ಆಕರ್ಷಕ ಶಿವಲಿಂಗಗಳು

ಅಷ್ಟೆ ಅಲ್ಲ, ಈ ಎರಡೂ ರಚನೆಗಳಿಗೆ ಮತ್ತಷ್ಟು ಇಂಬು ನೀಡುವಂತೆ ಇವುಗಳ ಸುತ್ತಮುತ್ತಲು ವಿವಿಧ ಗಾತ್ರ, ಆಕಾರಗಳ ಶಿವಲಿಂಗಗಳನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವುದನ್ನು ಎಲ್ಲೆಡೆ ಕಾಣಬಹುದು. ಸುಮಾರು ಹದಿನೈದು ಎಕರೆಗಳಷ್ಟು ವಿಸ್ತಾರವಾದ ಭೂಮಿಯಲ್ಲಿ ಸುಮಾರು ನೂರು ಲಕ್ಷ ಸಂಖ್ಯೆಯಲ್ಲಿ ಶಿವಲಿಂಗಗಳನ್ನು ನೆಡಲಾಗಿದೆ. ಅಂತೆಯೆ ಇದು ಕೋಟಿಲಿಂಗೇಶ್ವರ ತಾಣವಾಗಿ ಹೆಸರುವಾಸಿಯಾಗಿದೆ.

ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

ಚಿತ್ರಕೃಪೆ: Nicolas Mirguet

ಸ್ವಾಮಿ ಸಾಂಬ ಶಿವ ಮೂರ್ತಿ ಎಂಬ ಗುರುಗಳಿಂದ ನಿರ್ಮಿತವಾದ ಈ ದೇವಾಲಯದಲ್ಲಿ ಮೊದಲಬಾರಿಗೆ ಶಿವಲಿಂಗವನ್ನು ಅಕ್ಟೋಬರ್ 10, 1980 ರಂದು ಪ್ರತಿಷ್ಠಾಪಿಸಲಾಯಿತು. ನಂತರದ ದಿನಗಳಿಂದ ದಿನ ನಿತ್ಯ ಭೇಟಿ ನೀಡುವ ಸಾಕಷ್ಟು ಭಕ್ತಾದಿಗಳಿಂದ ಒಂದೊಂದರಂತೆ ಶಿವಲಿಂಗಗಳು ಪ್ರತಿಷ್ಠಾಪನೆಗೊಂಡು ಇಂದು ನೂರು ಲಕ್ಷದವರೆಗೆ ಶಿವಲಿಂಗಗಳಿರುವುದನ್ನು ಕಾಣಬಹುದು.

ಪ್ರತಿ ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ ಈ ದೇವಾಲಯಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಎಲ್ಲೆಡೆಯಿಂದ ಆಗಮಿಸಿ ಭೇಟಿ ನೀಡುತ್ತಾರೆ. ಕೇವಲ ಕೋಟಿಲಿಂಗೇಶನಲ್ಲದೆ ಈ ದೇವಾಲಯ ಆವರಣದಲ್ಲಿ ವಿಷ್ಣು, ಬ್ರಹ್ಮ, ಗಣೇಶ, ವೆಂಕಟರಮಣಸ್ವಾಮಿ, ರಾಮ, ಲಕ್ಷ್ಮಣ, ಸೀತೆ ಹೀಗೆ ಹಲವು ದೇವತೆಗಳ ದೇಗುಲಗಳೂ ಸಹ ಇರುವುದನ್ನು ಕಾಣಬಹುದು.

ಲಕ್ಷ ಲಕ್ಷ ಶಿವಲಿಂಗಗಳ ಕೋಟಿಲಿಂಗೇಶ್ವರ

ಚಿತ್ರಕೃಪೆ: Mithila

ಇನ್ನೊಂದು ವಿಷಯವೆಂದರೆ ಈ ದೇವಾಲಯದ ಆವರಣದಲ್ಲಿ ಎರಡು ದೊಡ್ಡ ನಾಗಲಿಂಗದ ಮರಗಳಿದ್ದು ಆ ಮರಗಳು ಅರಿಷಿಣದ ದಾರಗಳಿಂದ ಆವರಿಸಿರುವುದನ್ನು ಗಮನಿಸಬಹುದು. ನಂಬಿಕೆಯಂತೆ ಕನ್ಯಾಮಣಿಗಳು ಭಕ್ತಿಯಿಂದ ಈ ಶಿವನನ್ನು ಪೂಜಿಸಿ ಅರಿಷಿಣದ ದಾರ ಈ ಗಿಡಗಳಿಗೆ ಕಟ್ಟಿದರೆ ಅವರಿಗೆ ಉತ್ತಮವಾದ ಸಂಬಂಧ ದೊರೆಯುತ್ತದೆಂದು ಹೇಳಲಾಗುತ್ತದೆ.

ನಿಮಗಿಷ್ಟವಾಗಬಹುದಾದ : ಮರುಳು ಮಾಡುವ ಮುರುಡೇಶ್ವರ ಪ್ರವಾಸ

ದೇವಾಲಯ ಆವರಣದಲ್ಲಿ ವಿಶ್ರಾಂತಿಗೃಹವಿದ್ದು ಬೇಕಾದರೆ ಭಕ್ತಾದಿಗಳು ಇಲ್ಲಿ ಉಚಿತವಾಗಿ ತಂಗಬಹುದು. ಅಲ್ಲದೆ ಈ ದೇವಾಲಯದ ವತಿಯಿಂದ ಹಿಂದಿನಿಂದಲೂ ಸಾಮೂಹಿಕ ಮದುವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇಂದಿಗೂ ಇಲ್ಲಿ ಮದುವೆಗಳು ಅತ್ಯಲ್ಪ ಶುಲ್ಕದಲ್ಲಿ ನಡೆಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೇವಾಲಯ ಆಡಳಿತ ಮಂಡಳಿಯನ್ನು ಸಮ್ಪರ್ಕಿಸಬಹುದು.

ಇನ್ನೂ ಬೆಂಗಳೂರಿನಿಂದ 65 ಕಿ.ಮೀ ದೂರವಿರುವ ಕೋಲಾರಕ್ಕೆ ಬೆಂಗಳೂರಿನಿಂದ ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ನಿರಂತರವಾಗಿ ದೊರೆಯುತ್ತವೆ. ಅಲ್ಲದೆ ಕೋಲಾರವು ರೈಲು ನಿಲ್ದಾಣ ಹೊಂದಿದ್ದು ಬೆಂಗಳೂರಿನಿಂದ ಬಂಗಾರಪೇಟೆಗೆ ಹಾಗೂ ಚಿಕ್ಕಬಳ್ಳಾಪುರದಿಂದ ಶ್ರೀನಿವಾಸಪುರಕ್ಕೆ ಹೋಗುವ ರೈಲುಗಳು ಈ ಮಾರ್ಗವಾಗಿ ಹೋಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X