Search
  • Follow NativePlanet
Share
» »ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಕಟೀಲು ಶ್ರೀಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಮಂಗಳೂರಿನಿಂದ ಸುಮಾರು 26 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಅನುಕೂಲಕರವಾಗಿದೆ

By Vijay

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.

ಶ್ರೀಕ್ಷೇತ್ರದ ದಂತಕಥೆ

ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಮಹಾಜ್ಞಾನಿಯಾದ ಜಬಲಿ ಮಹರ್ಷಿ ಜನರ ಕಷ್ಟಗಳನ್ನು ತನ್ನ ದಿವ್ಯ ದೃಷ್ಟಿಯಲ್ಲಿ ಕಂಡನು. ಅವರ ಮೇಲಿನ ಕನಿಕರದಿಂದ ಅವರನ್ನು ನೋವುಗಳಿಂದ ಮುಕ್ತಿಗೊಳಿಸುವ ನಿರ್ಧಾರವನ್ನು ಕೈಗೊಂಡರು. ಅದಕ್ಕಾಗಿ ಒಂದು ಯಜ್ಞವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸಿದರು.

ಕಾಮಧೇನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ, ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಆತನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ನಂದಿನಿಯು ಜಬಲಿ ಮಹರ್ಷಿ ಜತೆಗೆ ಭೂಲೋಕಕ್ಕೆ ಹೋಗಲು ಅತ್ಯಂತ ನಿಷ್ಠುರದಿಂದ ನಿರಾಕರಿಸಿದಳು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಚಿತ್ರಕೃಪೆ: Premnath Kudva

ಅವಳ ನಿರಾಕರಣೆಗೆ ಮುಖ್ಯ ಕಾರಣ ಭೂಲೋಕವು ಪಾಪಿಗಳ ಲೋಕವಾಗಿರುವುದಾಗಿಯೂ ಆದ್ದರಿಂದ ತಾನೆಂದೂ ಅಲ್ಲಿ ಕಾಲಿಡುವುದಿಲ್ಲವೆಂದು ಹೇಳಿದಳು. ಆದರೂ ಜಬಲಿ ಮಹರ್ಷಿಗಳು ಆಕೆಯ ಮನವೊಲಿಸಲು ಸಾಕಷ್ಟು ಪರಿಪರಿಯಾಗಿ ಬೇಡಿಕೊಂಡರು. ಭೂಮಿಯಲ್ಲಿಹ ಜನರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ಬಗ್ಗೆಯೂ ಆಕೆಯೂ ಬಂದು ಅವರ ನೋವನ್ನು ನೀಗಿಸಲು ಸಹಕರಿಸುವಂತೆಯೂ ಕೇಳಿಕೊಂಡರು.

ಆದರೆ ಜಬಲಿ ಮಹರ್ಷಿಯ ಮಾತಿಗೆ ಜಪ್ಪೆನ್ನದೇ ನಂದಿನಿಯು ತನ್ನದೇ ಹಠ ಹಿಡಿಕೊಂಡಳು. ಇದರಿಂದ ಕೋಪಗೊಂಡ ಜಬಲಿ ಮಹರ್ಷಿಯು ಭೂಲೋಕಕ್ಕೆ ಬರಲೊಪ್ಪದ ನಂದಿನಿಯು ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತರು. ಶಾಪಕ್ಕೊಳಗಾದ ನಂದಿನಿಯು ಚಿಂತೆಗೀಡಾಗಿ ಮಹರ್ಷಿ ಜಬಲಿಗೆ ಕರುಣೆ ಮಾಡಿ ಶಾಪ ಹಿಂತೆಗೆದುಕೊಳ್ಳಬೇಕು ಬೇಡಿಕೊಂಡಳು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ

ಚಿತ್ರಕೃಪೆ: Shailesh CAPTCHA

ಆಗ ಜಬಲಿ ಮಹರ್ಷಿಯು ನಿರಂತರವಾಗಿ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ ಎಂದು ಹೇಳಿದರು. ನಂದಿನಿಯು ಅನಂತರ ದೇವಿಯನ್ನು ಪ್ರಾರ್ಥಿಸಲು, ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು.

ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು. ಅದರಂತೆ ಕಟೀಲಿನ ಕನಕ ಗಿರಿಯಿಂದ ನಂದಿನಿ ನದಿಯ ರೂಪದಲ್ಲಿ ಹರಿದಳು. ಈ ನದಿಯ ದಂಡೆಯ ಮೇಲೆ ಜಬಲಿ ಮಹರ್ಷಿಯು ಯಜ್ಞ ಯಾಗಾದಿಗಳನ್ನು ನಡೆಸಿದ ನಂತರ ಎಲ್ಲೆಡೆ ಸಮೃದ್ಧ ಮಳೆಯಾಗಿ ಆ ಜನರಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭ್ಯುದಯ ಹೊಂದಿದರು.

ರೋಮಾಂಚನಗೊಳಿಸುವ ಸಾಗರ ಮಾರಿಕಾಂಬಾ ದೇವಿ ಜಾತ್ರೆ

ಹಾಗಾಗಿ ಕಟೀಲು ನಂದಿನ ತಟದ ಮೇಲೆ ನೆಲೆಸಿರುವ ದುರ್ಗಾಪರಮೇಶ್ವರಿಯು ಸಕಲ ಭಕ್ತರನ್ನು ಹರಸುವ ಶ್ರೀಕ್ಷೇತ್ರವಾಗಿ ಹೆಸರುವಾಸಿಯಾಯಿತು. ಪ್ರಸ್ತುತ ಕಟೀಲು ಶ್ರೀಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಮಂಗಳೂರಿನಿಂದ ಸುಮಾರು 26 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಅನುಕೂಲಕರವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X