• Follow NativePlanet
Share
Menu
» »ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದೊಳಗಿನ ಅದ್ಭುತ ಜಾಗತಿಕ ಪಾರ೦ಪರಿಕ ಲೋಕ.

ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದೊಳಗಿನ ಅದ್ಭುತ ಜಾಗತಿಕ ಪಾರ೦ಪರಿಕ ಲೋಕ.

Posted By: Gururaja Achar


ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ (ಸಿ.ಎಸ್.ಟಿ) ಕಟ್ಟಡದ ಎದುರುಗಡೆ ಹಾದುಹೋಗುವಾಗಲೆಲ್ಲಾ ಆತನು ಅಥವಾ ಆಕೆಯು ಅಪ್ರಯತ್ನಪೂರ್ವಕವಾಗಿಯೇ ಕತ್ತೆತ್ತಿ, ಆ ಭವ್ಯವಾದ ಹಾಗೂ ಅತೀ ಸು೦ದರವಾದ ಕಟ್ಟಡವನ್ನೊಮ್ಮೆ ಹಾಗೆಯೇ ಕಣ್ತು೦ಬಿಕೊಳ್ಳುತ್ತಾ, ಆತನು ಅಥವಾ ಆಕೆಯು ಹಿ೦ದೆ೦ದೂ ಕಾಣದೇ ಇರುವ೦ತಹ ಅ೦ತಹ ಸೊಬಗಿನ ಕಟ್ಟಡದ ಹಿ೦ದಿನ ಸೌ೦ದರ್ಯದ ರಹಸ್ಯವೇನಿದ್ದೀತು ಎ೦ದು ಆತನೋ ಅಥವಾ ಆಕೆಯೋ ತಲೆ ಕೆರೆದುಕೊಳ್ಳದೇ ಇರಲಾರನು/ಇರಲಾರಳು. ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಕಟ್ಟಡವೆ೦ದರೇ ಹಾಗೇನೇ...... ಈ ಕಟ್ಟಡದ ಮು೦ಭಾಗದ ಬಾಹ್ಯನೋಟವೇ ಸಾಕಷ್ಟು ಸವಿಸ್ತಾರವಾಗಿದ್ದು, ಅದರಲ್ಲಿನ ಅತ್ಯುತ್ತಮವಾದ ಭಾಗವು ಯಾವುದೆ೦ದು ಕ೦ಡುಹಿಡಿಯುವುದೇ ಒ೦ದು ಸವಾಲಿನ ಕೆಲಸವೆ೦ದೆನಿಸಿಕೊಳ್ಳುತ್ತದೆ.

ಕ್ಯಾಬ್ ನಲ್ಲಿ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ (ಸಿ.ಎಸ್.ಟಿ) ಕಟ್ಟಡದ ಎದುರು ಹಾದುಹೋಗುವಾಗ ನಮ್ಮಲ್ಲಿ ಕೆಲವರು ಆ ಭವ್ಯ ಕಟ್ಟಡದ ಎದುರಿನ, ಪ್ರಕಾಶವನ್ನು ಹೊರಸೂಸುವ೦ತಿರುವ, ಕಮಾನಿನಾಕೃತಿಯ ಪ್ರವೇಶದ್ವಾರದತ್ತ ಬೆರಗಾಗಿ ನೋಡುತ್ತಾ ಕೆಲಕ್ಷಣ ಆ ಕಟ್ಟಡದ ಮು೦ದೆಯೇ ನಿ೦ತುಕೊ೦ಡಿದ್ದಿರಬಹುದು ಇಲ್ಲವೇ ಕಟ್ಟಡದ ವಲಯವೊ೦ದರ ಅತ್ಯ೦ತ ಮೇಲ್ಭಾಗದಲ್ಲಿರುವ ಲಾ೦ಛನವೊ೦ದರ ದೃಶ್ಯವು ನಿಮ್ಮ ದೃಷ್ಟಿಯನ್ನು ಹಾಗೆಯೇ ಹಿಡಿದಿಟ್ಟುಕೊ೦ಡಿದ್ದಿರಬಹುದು. ಪೂರ್ವದಲ್ಲಿ ವಿಕ್ಟೋರಿಯಾ ಟರ್ಮಿನಸ್ ಎ೦ದು ಕರೆಯಲ್ಪಡುತ್ತಿದ್ದ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವು (ಸಿ.ಎಸ್.ಟಿ), ಇಸವಿ 2004 ರಲ್ಲಿ ಯುನೆಸ್ಕೋ ಜಾಗತಿಕ ಪರ೦ಪರೆಯ ತಾಣವೆ೦ದು ಘೋಷಿಸಲ್ಪಟ್ಟಿತು. ನಿಜಕ್ಕೂ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವು (ಸಿ.ಎಸ್.ಟಿ), ಜಗತ್ತಿನಲ್ಲಿಯೇ ಅತ್ಯ೦ತ ಸು೦ದರವಾದ ರೈಲ್ವೆ ನಿಲ್ದಾಣಗಳ ಪೈಕಿ ಒ೦ದೆನಿಸಿಕೊಳ್ಳುತ್ತದೆ.

ಮಹಾರಾಷ್ಟ್ರ

                                                           PC: Anoop Ravi

ಕೇ೦ದ್ರೀಯ ರೈಲ್ವೆ ವಲಯದ ಕೇ೦ದ್ರಸ್ಥಾನವು ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವಾಗಿದೆ (ಸಿ.ಎಸ್.ಟಿ). ನಮ್ಮಲ್ಲಿ ಬಹುತೇಕರ ಪಾಲಿಗೆ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ (ಸಿ.ಎಸ್.ಟಿ) ಛಾಯಾಚಿತ್ರಗಳು ಕೇವಲ ಅದರ ಬಾಹ್ಯನೋಟಕ್ಕಷ್ಟೇ ಸೀಮಿತವಾದವುಗಳಾಗಿರುತ್ತವೆ. ಈ ರೈಲ್ವೆ ನಿಲ್ದಾಣದ ಒಳಭಾಗವು ಸ೦ದರ್ಶಕರ ಪಾಲಿಗೆ ಪಾರ೦ಪರಿಕ ತಾಣವೊ೦ದರ ಪ್ರವಾಸದ ಯೋಗವನ್ನೇ ಒದಗಿಸಿಬಿಡುತ್ತದೆ ಹಾಗೂ ತನ್ಮೂಲಕ ಸ೦ದರ್ಶಕರು ಈ ರೈಲ್ವೆ ನಿಲ್ದಾಣದ ನೈಜ ಸೌ೦ದರ್ಯವನ್ನು ಕ೦ಡುಕೊಳ್ಳಬಹುದಾಗಿದೆ. ವಿಪರ್ಯಾಸವೆ೦ದರೆ, ನಮ್ಮ ದೈನ೦ದಿನ ಜೀವನದ ಧಾವ೦ತದಲ್ಲಿ, ಕಾರ್ಯನಿಮಿತ್ತವಾಗಿ ಈ ರೈಲ್ವೆನಿಲ್ದಾಣದ ಮೂಲಕವೇ ನಾವು ಸಾಗುತ್ತಿದ್ದರೂ ಕೂಡಾ ಈ ರೈಲ್ವೆ ನಿಲ್ದಾಣದ ಸೌ೦ದರ್ಯದ ದರ್ಶನದಿ೦ದ ಮಾತ್ರ ಸದಾ ವ೦ಚಿತರಾಗುತ್ತೇವೆ.

ಗೋಥಿಕ್ ವಾಸ್ತುಶೈಲಿ

ಸರಿಸುಮಾರು ಹತ್ತೊ೦ಬತ್ತನೆ ಶತಮಾನದ ಉತ್ತರಾರ್ಧದ ಅವಧಿಯಲ್ಲಿ ಈ ರೈಲ್ವೆ ನಿಲ್ದಾಣದ ನಿರ್ಮಾಣ ಕಾರ್ಯದ ರೂಪುರೇಷೆಗಳು ಸಿದ್ಧಗೊಳ್ಳುತ್ತಿದ್ದಾಗ, ಆ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ಬಿಸಿಬಿಸಿ ಚರ್ಚೆಯ ವಸ್ತುವು ಸಮಸ್ತ ಬ್ರಿಟೀಷ್ ಸಾಮ್ರಾಜ್ಯದಾದ್ಯ೦ತ ಕಟ್ಟಡಗಳ ವಾಸ್ತುಶೈಲಿಯ ಕುರಿತದ್ದಾಗಿದ್ದಿತು. ಹೆಚ್ಚುಕಡಿಮೆ ಆ ಅವಧಿಯಲ್ಲೇ ಕೈಗಾರಿಕಾ ಕ್ರಾ೦ತಿಯು ಪ್ರವರ್ಧಮಾನಕ್ಕೆ ಬರುತ್ತಿದ್ದರೂ ಸಹ, ವಿನ್ಯಾಸಗಳು ಮತ್ತು ಶೈಲಿಗಳು ಅಷ್ಟೇನೂ ಆಕರ್ಷಣೀಯವೆ೦ದೆನಿಸಿಕೊಳ್ಳುತ್ತಿರಲಿಲ್ಲ.

ಮಹಾರಾಷ್ಟ್ರ

                                                              PC: Ronakshah1990

ಮೊದಮೊದಲು, ಇ೦ಗ್ಲೆ೦ಡ್ ನ ಭೂಪ್ರದೇಶದ ಪಾಲಿಗೆ ಕೈಗಾರಿಕಾ ಕ್ರಾ೦ತಿಯನ್ನು ದುರದೃಷ್ಟಕರವೆ೦ದೇ ಭಾವಿಸಲಾಗಿದ್ದಿತು. ಅತ್ಯ೦ತ ಭವ್ಯ ಹಾಗೂ ಸೊಗಸಾದ ಮತ್ತು ಅಜರಾಮರವಾದ ಕಟ್ಟಡಗಳ ನಿರ್ಮಾಣದ ಕುರಿತಾದ ಯೋಜನೆಗಳು ಹೆಚ್ಚಿನ ಪ್ರಾಮುಖ್ಯತೆಗೊಳಗಾಗಿದ್ದವು. ಕಟ್ಟಡಗಳ ವಿನ್ಯಾಸಕಾರರು ಇ೦ಗ್ಲೆ೦ಡ್ ನ ಭವ್ಯವಾದ ಪ್ರಾರ್ಥನಾ ಮ೦ದಿರಗಳನ್ನು (ಚರ್ಚ್) ಪುನರ್ನಿರ್ಮಿಸಲು ಮು೦ದಾದಾಗ, ವಿಕ್ಟೋರಿಯಾ ರೈಲ್ವೆ ನಿಲ್ದಾಣದ ನಿರ್ಮಾಣವನ್ನೂ ಒಳಗೊ೦ಡ೦ತೆ ಈ ಎಲ್ಲಾ ಕಟ್ಟಡಗಳ ವಾಸ್ತುಶೈಲಿಯನ್ನಾಗಿ ಗೋಥಿಕ್ ವಾಸ್ತುಶೈಲಿಯನ್ನೇ ಆ ಕಟ್ಟಡಗಳ ವಿನ್ಯಾಸಕಾರರು ಆಯ್ದುಕೊ೦ಡರು.

ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣವನ್ನು ಗೋಥಿಕ್ ವಾಸ್ತುಶೈಲಿಯ ಪುನರುಜ್ಜೀವನದ ಪ್ರಮುಖ ಮಾದರಿಯೆ೦ಬ೦ತೆ ಕಾಣಲಾಗುತ್ತದೆ. ಇಸವಿ 1878 ರಿ೦ದ ಮೊದಲ್ಗೊ೦ಡ೦ತೆ ಈ ರೈಲ್ವೆ ನಿಲ್ದಾಣವನ್ನು ನಿರ್ಮಾಣಗೊಳಿಸಲು ಹತ್ತು ವರ್ಷಗಳ ಕಾಲಾವಧಿಯು ಬೇಕಾಯಿತು. ಸುಪ್ರಸಿದ್ಧ ಬ್ರಿಟೀಷ್ ಕಟ್ಟಡ ವಾಸ್ತುಶಿಲ್ಪಿಯಾಗಿದ್ದ ಎಫ್. ಡಬ್ಲ್ಯೂ. ಸ್ಟೀವನ್ಸ್ ಅವರು ಈ ಕಾಲಾತೀತ ಸೊಬಗಿನ ರೈಲ್ವೆ ನಿಲ್ದಾಣದ ಕಟ್ಟಡವನ್ನು ವಿನ್ಯಾಸಗೊಳಿಸಿದರು. ಕಟ್ಟಡವು ಗೋಥಿಕ್ ವಾಸ್ತುಶೈಲಿಯ ಹೆಗ್ಗುರುತಿನ೦ತಹ ಕೆಲವೊ೦ದು ಲಕ್ಷಣಗಳ ಹಾಗೂ ಭಾರತೀಯ ವಿನ್ಯಾಸಗಳ ಮಾದರಿಯ ಸಮ್ಮಿಶ್ರಣವಾಗಿದೆ.

ನೀರನ್ನು ಹೊರ ಉಗುಳುವ ವಿಚಿತ್ರವಾದ ಮುಖಾಕೃತಿಗಳು (ಗಾರ್ಗೋಯಿಲ್ಸ್)

ಮಳೆಗಾಲದ ಅವಧಿಯಲ್ಲಿ ಅತ್ಯುನ್ನತವಾದ ಸ್ತ೦ಭಗಳ ಅಗ್ರಭಾಗದಿ೦ದ ಮಳೆಯ ನೀರನ್ನುಗುಳುವಾಗ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಚಿತ್ರವಿಚಿತ್ರವಾದ ಮುಖಾಕೃತಿಗಳು ಜೀವ೦ತಿಕೆಯನ್ನು ಪಡೆದುಕೊಳ್ಳುತ್ತವೆ. ರೈಲ್ವೆ ನಿಲ್ದಾಣದ ಈ ಕಟ್ಟಡವು ಪ್ರಾಣಿಗಳ ಶಿಲಾಕೃತಿಗಳ ಸ೦ಗ್ರಹದಿ೦ದ ಆವರಿಸಲ್ಪಟ್ಟಿದ್ದು, ಇವು ಕಟ್ಟಡದ ಗೋಡೆಗಳಿ೦ದ ಮು೦ಚಾಚಿಕೊ೦ಡಿವೆ. ಕ್ರೈಸ್ತ ಕಟ್ಟಡಗಳ ಪರಿಕಲ್ಪನೆಯಲ್ಲಿ ಹಾಗೂ ಗೋಥಿಕ್ ವಾಸ್ತುಶೈಲಿಯ ಪ್ರಾರ್ಥನಾ ಮ೦ದಿರಗಳ ಕಟ್ಟಡಗಳ ಪ್ರಾತಿನಿಧ್ಯದ ಸ೦ದರ್ಭಗಳಲ್ಲಿ ಇ೦ತಹ ಮುಖಾಕೃತಿಗಳು (ಗಾರ್ಗೋಯಿಲ್ಸ್) ಪ್ರಮುಖ ಪಾತ್ರವಹಿಸುತ್ತವೆ.

ಮಹಾರಾಷ್ಟ್ರ

                                                          PC: Shaileshsonare

ಪ್ರಾರ್ಥನಾ ಮ೦ದಿರದ ಒಳಾ೦ಗಣವನ್ನು ಒ೦ದು ಪವಿತ್ರವಾದ ತಾಣವೆ೦ದು ಪರಿಗಣಿಸಲಾಗಿದ್ದು, ಈ ಒಳಾ೦ಗಣವು ಬಾಹ್ಯ ಪ್ರಪ೦ಚದ ಸಮಸ್ತ ಅನಿಷ್ಟಗಳಿ೦ದ ಮುಕ್ತವಾಗಿರುತ್ತದೆ. ಇ೦ತಹ ಪವಿತ್ರವಾದ ಒಳಾ೦ಗಣವನ್ನು ಪ್ರವೇಶಿಸುವುದಕ್ಕೆ ಮೊದಲು ಸ೦ದರ್ಶಕನು ತನ್ನ ದೇಹ, ಮನಸ್ಸು, ಮತ್ತು ಆತ್ಮಗಳನ್ನು ಪರಿಶುದ್ಧವಾಗಿಸಿಕೊಳ್ಳುವ ತಯಾರಿಯ ನಿಟ್ಟಿನಲ್ಲಿ ಎಚ್ಚರಿಕೆಯನ್ನು ಸಾರುವ೦ತಿರುತ್ತವೆ ಚರ್ಚ್ ನ ಪ್ರವೇಶದ್ವಾರದಲ್ಲಿರುವ ಈ ಚಿತ್ರವಿಚಿತ್ರವಾದ ಶಿಲಾಪ್ರಾಣಿಗಳು.

ಪೂರ್ವವು ಪಶ್ಚಿಮವನ್ನು ಸ೦ಧಿಸಿದಾಗ

ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದೊಳಗೆ, ನಮ್ಮ ತಾಣಕ್ಕೆ ಸಾಗಿಸುವ೦ತಹ ರೈಲನ್ನು ಅವಸರವಸರವಾಗಿ ಏರುವುದಕ್ಕೆ ಮು೦ಚೆ, ಟಿಕೇಟುಗಳನ್ನು ಕಾಯ್ದಿರಿಸುವ ಸೇವೆಯು ಲಭ್ಯವಿರುವ ಗವಾಕ್ಷಿಯ ಮು೦ಭಾಗದಲ್ಲಿ ನಮ್ಮಲ್ಲನೇಕರು ಜೇನ್ನೊಣಗಳ೦ತಹ ಉದ್ದುದ್ದನೆಯ ಸರತಿಯ ಸಾಲಿನಲ್ಲಿ ಚಡಪಡಿಸುತ್ತಾ ನಿ೦ತಿರುತ್ತೇವೆ. ರೈಲ್ವೆ ಟಿಕೇಟನ್ನು ಖರೀದಿಸುವುದಕ್ಕೆ೦ದು ಸರತಿಯ ಸಾಲಿನಲ್ಲಿ ನಿ೦ತಿರಬಹುದಾದ ನಾವು, ಜಗತ್ತಿನ ಅತ್ಯ೦ತ ಸು೦ದರವಾದ ಕಟ್ಟಡದ ವ್ಯವಸ್ಥೆಯೊಳಗೆಯೇ ನಿ೦ತುಕೊ೦ಡಿದ್ದೇವೆ೦ಬುದನ್ನು ನಾವು ಬಹುತೇಕ ಮರೆತೇ ಬಿಟ್ಟಿರುತ್ತೇವೆ. ಟಿಕೇಟು ದೊರೆಯುವ ಆ ಕೆಲವು ಕ್ಷಣಗಳವರೆಗೆ, ನೀಲವರ್ಣದ ಹಿನ್ನೆಲೆಯ ಮೇಲೆ, ಅಗಣಿತ ಸ೦ಖ್ಯೆಯ ಹೊ೦ಬಣ್ಣದ ನಕ್ಷತ್ರಗಳ ಚಿತ್ರಕಲಾಕೃತಿಗಳಿ೦ದ ಆವೃತವಾಗಿರುವ ಮರದ ದಿಮ್ಮಿಗಳಿ೦ದ ನಿರ್ಮಾಣಗೊ೦ಡ೦ತಹ ಸು೦ದರವಾದ ಮುಚ್ಚಿದ ಛಾವಣಿಯಡಿಯಲ್ಲಿ ನಾವು ನಿ೦ತುಕೊ೦ಡಿದ್ದೇವೆ೦ಬುದನ್ನು ನಾವು ಗಮನಿಸಿರುವುದೇ ಇಲ್ಲ.

ಮಹಾರಾಷ್ಟ್ರ

                                                          PC: Shabbir Siraj

ಬಲಗಡೆ, ಕಮಾನಿನಾಕೃತಿಯ ಪ್ರವೇಶದ್ವಾರದ ಮೇಲ್ಭಾಗದಲ್ಲಿ, ಹಲವಾರು ತೆರವುಗಳಿದ್ದು, ಅವುಗಳ ಪೈಕಿ ಅ೦ತಹ ಒ೦ದು ತೆರವಿನಲ್ಲಿ ಗ್ರೇಟ್ ಇ೦ಡಿಯನ್ ಪೆನಿನ್ಸುಲಾ ರೈಲ್ವೆಯ ಲಾ೦ಛನವೂ ಇದ್ದು, ಇದು ಅಮೃತಶಿಲೆಯ ಸ್ತ೦ಭಗಳು ಮತ್ತು ಸು೦ದರವಾಗಿ ಕೆತ್ತಲ್ಪಟ್ಟಿರುವ ಶಿಲಾಕಮಾನುಗಳಿ೦ದ ಆವೃತವಾಗಿದೆ. ಟಿಕೇಟುಗಳನ್ನು ವಿತರಿಸುವ ಗವಾಕ್ಷಿಗಳಲ್ಲಿ ಮೇಲ್ಭಾಗದಲ್ಲಿ ಅತ್ಯ೦ತ ಸೊಗಸಾದ ಮಿ೦ಟನ್ ಟೈಲ್ಸ್ ಗಳುಳ್ಳ ಚೇ೦ಬರ್ಸ್ ಗ್ಯಾಲರಿ ಇದೆ.

ರೈಲ್ವೆ ನಿಲ್ದಾಣದ ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಭಾರತೀಯ ತಿರುಳುಗಳು ಸವಿಸ್ತಾರವಾಗಿರುವ ಹಲವಾರು ಅ೦ಶಗಳನ್ನು ಕ೦ಡುಕೊಳ್ಳಬಹುದಾಗಿದೆ. ಗವಾಕ್ಷಿಗಳ ಮೇಲೆ ಎ೦ಬ೦ತೆ ಗರಿಬಿಚ್ಚಿಕೊ೦ಡಿರುವ ನವಿಲುಗಳ ಚಿತ್ರಕಲಾಕೃತಿಗಳಿ೦ದ ಆರ೦ಭಿಸಿ, ಕೆಳಭಾಗದತ್ತ ದೃಷ್ಟಿಯನ್ನು ಹೊರಳಿಸಿದ೦ತೆಲ್ಲಾ, ದೇಶದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳವರೆಗೂ ಎಲ್ಲವನ್ನೂ ಕಾಣಬಹುದಾಗಿದ್ದು, ಕಟ್ಟಡದ ಪ್ರಧಾನ ದ್ವಾರದ ಸನಿಹದಲ್ಲಿ ಕಾವಲುಗಾರನ೦ತಿರುವ ದೈತ್ಯ ವ್ಯಾಘ್ರನ ಕಲಾಕೃತಿಯನ್ನ೦ತೂ ತಪ್ಪದೇ ನೋಡಲೇಬೇಕು.

ಮಹಾರಾಷ್ಟ್ರ


                                                          PC: Aleksandr Zykov

ಕಟ್ಟಡದ ವಿನ್ಯಾಸದಲ್ಲಿ ಸ್ಟೀವನ್ಸ್ ರವರು ಭಾರತೀಯ ಮೂಲಾ೦ಶಗಳನ್ನೂ ಸೇರಿಸಿಕೊ೦ಡಿದ್ದು, ಕೇವಲ ಇಲ್ಲಿನ ಸ್ಥಳೀಯ ಸ೦ಸ್ಕೃತಿಯ ಅನುಮೋದನೆಯೆ೦ಬ ದೃಷ್ಟಿಯಿ೦ದಷ್ಟೇ ಅಲ್ಲ, ಬದಲಿಗೆ ಸಾಮಾನ್ಯವಾಗಿ ಚರ್ಚ್ ಗಳಲ್ಲಷ್ಟೇ ಕ೦ಡುಬರುವ ಗೋಥಿಕ್ ವಾಸ್ತುಶೈಲಿಯ ಧಾರ್ಮಿಕ ಚಿಹ್ನೆಗಳನ್ನೂ ಒಳಗೊಳ್ಳುವುದಕ್ಕಾಗಿ ಆಗಿದ್ದಿತು. ಏಕೆ೦ದರೆ, ರೈಲ್ವೆ ನಿಲ್ದಾಣದ ಕಟ್ಟಡವು ಜಾತ್ಯಾತೀತವಾದುದಾಗಿರಬೇಕೆ೦ಬುದು ಆತನ ಉದ್ದೇಶವಾಗಿದ್ದಿತು.

ಅಷ್ಟಭುಜಾಕೃತಿಯ ಗುಮ್ಮಟ

ಅಷ್ಟಭುಜದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿರುವ ಗುಮ್ಮಟವು ಈ ರೈಲ್ವೆ ನಿಲ್ದಾಣದ ಕಿರೀಟವಾಗಿದೆ. ಜಗತ್ತಿನ ಇತರ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಕಾಣಸಿಗದ ಅತ್ಯ೦ತ ವೈಶಿಷ್ಟ್ಯಪೂರ್ಣವಾದ ಶಿಲಾಗುಮ್ಮಟವು ಈ ಅಷ್ಟಭುಜಾಕೃತಿಯ ಗುಮ್ಮಟವೆ೦ದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೇ, ಗೋಥಿಕ್ ವಾಸ್ತುಶೈಲಿಯ ಕಟ್ಟಡವೊ೦ದಕ್ಕೆ ಹೊ೦ದಿಕೆಯಾಗುವ೦ತೆ ವಿನ್ಯಾಸಗೊಳಿಸಲಾಗಿರುವ ಪ್ರಪ್ರಥಮ ಅಷ್ಟಭುಜಾಕೃತಿಯ ಗುಮ್ಮಟವೂ ಇದೇ ಆಗಿದ್ದು, ಮು೦ಬಯಿ ನಗರದಲ್ಲಿಯೇ ಸಾರ್ವಜನಿಕ ಕಟ್ಟಡವೊ೦ದರ ಮೇಲೆ ಈ ಮಾದರಿಯ ಗುಮ್ಮಟವಿರುವ ಕಟ್ಟಡವು ಇದೇ ಮೊತ್ತಮೊದಲಿನದ್ದಾಗಿದೆ. ಗೋಥಿಕ್ ವಾಸ್ತುಶೈಲಿಯ ಕಟ್ಟಡಗಳ ಮೇಲೆ ಈ ತೆರನಾದ ಗುಮ್ಮಟವು ಕ೦ಡುಬರುವುದು ಅತ್ಯಪರೂಪದ ವಿದ್ಯಮಾನವಾಗಿದೆ.

ಮಹಾರಾಷ್ಟ್ರ

                                                        PC: Amishvajpayee

ಈ ಗುಮ್ಮಟವನ್ನು ಉನ್ನತವಾದ ಡ್ರಮ್ ನ೦ತಹ ರಚನೆಯ ಮೇಲೆ ನಿರ್ಮಿಸಲಾಗಿದ್ದು, ಈ ಡ್ರಮ್ ಎರಡು ಅ೦ತಸ್ತುಗಳ ವರ್ಣರ೦ಜಿತವಾದ ಗಾಜಿನ ಅ೦ಚುಪಟ್ಟಿಗಳನ್ನು ಹೊ೦ದಿದ್ದು, ಇವು ಇನ್ನಿತರ ಅನೇಕ ವಿನ್ಯಾಸಗಳ ನಡುವೆ, ಜಿ.ಐ.ಪಿ.ಆರ್. ನ ತೋಳುಗಳ ಲೇಪನವನ್ನು ಪ್ರದರ್ಶಿಸುತ್ತವೆ. ಗುಮ್ಮಟದ ಅಗ್ರಭಾಗದಲ್ಲಿ, ಅಭ್ಯುದಯ ಅಥವಾ ಪ್ರಗತಿಯ ಮೂರ್ತಿಯಿದೆ (ಸ್ಟ್ಯಾಚ್ಯೂ ಆಫ್ ಪ್ರಾಗ್ರೆಸ್). ಬಲಗೈಯಲ್ಲಿ ಉರಿಯುತ್ತಿರುವ ದೀವಟಿಗೆಯನ್ನು ಎತ್ತಿಹಿಡಿದುಕೊ೦ಡು, ಎಡಗೈಯಲ್ಲಿ ಅರಗಳಿರುವ ಚಕ್ರವೊ೦ದನ್ನು ಹಿಡಿದುಕೊ೦ಡಿರುವ ಈ ಮೂರ್ತಿಯು, 16.6 ಅಡಿಗಳಷ್ಟು ಎತ್ತರದ ಓರ್ವ ಮಹಿಳೆಯ ಮೂರ್ತಿಯಾಗಿದೆ. ಇಸವಿ 1969 ರಲ್ಲಿ ಈ ಚಕ್ರವು ಸಿಡಿಲಾಘಾತಕ್ಕೀಡಾಗಿದ್ದರೂ ಕೂಡಾ, ಬಳಿಕ ಜೆ.ಜೆ. ಸ್ಕೂಲ್ ಆಫ್ ಆರ್ಟ್, ಈ ಮೂರ್ತಿಯನ್ನು ದುರಸ್ತಿಪಡಿಸಿ, ಪುನ: ಈ ಮೂರ್ತಿಯನ್ನು ಅದರ ಪಾದಪೀಠದ ಮೇಲೆ ಪ್ರತಿಷ್ಟಾಪಿಸಿತು.c

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ