Search
  • Follow NativePlanet
Share
» »ಮಧುಚಂದ್ರದ ಸಿಹಿ ಮತ್ತಷ್ಟು ಸವಿ..ಸವಿ..ಸವಿ ಇಲ್ಲಿ!

ಮಧುಚಂದ್ರದ ಸಿಹಿ ಮತ್ತಷ್ಟು ಸವಿ..ಸವಿ..ಸವಿ ಇಲ್ಲಿ!

By Vijay

ವಿವಾಹ ಬಂಧನಕ್ಕೊಳಗಾದ ನವದಂಪತಿಗಳಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಪ್ರೀತಿಯನ್ನು ಹಂಚಿಕೊಳ್ಳಲು ಏಕಾಂತ ಸಮಯದ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಅಂತಹ ಸಮಯವನ್ನು ಸುಂದರವಾದ, ಹಿತಕರವಾದ ವಾತಾವರಣವಿರುವ, ನಗರದ ಗೌಜು ಗದ್ದಲಗಳಿಂದ ದೂರವಿರುವ, ಉತ್ಸಾಹ, ಚೈತನ್ಯಗಳನ್ನು ಬಡಿದೆಬ್ಬಿಸುವ, ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಸ್ಥಳಗಳಲ್ಲಿ ಕಳೆಯುವುದೆಂದರೆ.....ಆಹಾ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ. ಜೇನಿನ ಹನಿಯನ್ನು ಸವಿದಷ್ಟೆ ಆನಂದ. ಆದ್ದರಿಂದಲೆ ನವದಂಪತಿಗಳು ಮೊದಲ ಬಾರಿ ಹೊರಡುವ ಪ್ರವಾಸವನ್ನು ಪ್ರೀತಿಯಿಂದ ಮಧುಚಂದ್ರ ಅಥವಾ ಹನಿಮೂನ್ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಹನಿಮೂನ್ ಆಚರಿಸಲು ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿ ಯವರೆಗೆ ಸಾಕಷ್ಟು ಪ್ರವಾಸಿ ತಾಣಗಳನ್ನು ಕಾಣಬಹುದು. ಈ ಲೇಖನದಲ್ಲಿ ದಕ್ಷಿಣ ಭಾರತದ ಕೆಲವು ಸುಪ್ರಸಿದ್ಧ, ಅತಿ ಜನಪ್ರಿಯವಾಗಿರುವ ಮಧುಚಂದ್ರದ ತಾಣಗಳ ಕುರಿತು ತಿಳಿಸಲಾಗಿದೆ. ಇದರರ್ಥ ಇಲ್ಲಿ ಕೇವಲ ಹನಿಮೂನ್ ಆಚರಿಸಲು ಮಾತ್ರವೇ ಹೊರಡಬೇಕೆಂದೆನಿಲ್ಲ. ಈ ಸ್ಥಳಗಳು ತನ್ನಲ್ಲಿರುವ ಸಹಜ ಪ್ರಕೃತಿ ಸೌಂದರ್ಯದಿಂದ ಮಕ್ಕಳಿಂದ ಹಿಡಿದು ಹಿರಿಯರ ಮನಸ್ಸನ್ನೂ ಸಹ ಕದಿಯುತ್ತವೆ. ನೀವು ಈಗಾಗಲೆ ಮದುವೆಯಾಗಿದ್ದರೂ ಪರವಾಗಿಲ್ಲ ಬೇಕಾದಾಗೊಮ್ಮೆ ಪತ್ನಿ ಅಥವಾ ಪತಿಯ ಸಮೇತ ಈ ತಾಣಗಳಿಗೆ ಭೇಟಿ ನೀಡಿ ಮತ್ತೊಮ್ಮೆ ಮಧುಚಂದ್ರವನ್ನೂ ಸಹ ಆಚರಿಸಬಹುದು.

ಇದನ್ನೂ ಓದಿರಿ: ಭಾರತದ ಅತ್ಯದ್ಭುತ ರೋಮಾಂಚಕ ಸ್ಥಳಗಳು

ಊಟಿ:

ಊಟಿ:

ಉದಕಮಂಡಲಂ ಎಂತಲೂ ಕರೆಯಲಾಗುವ ಊಟಿಯು "ಗಿರಿಧಾಮಗಳ ರಾಣಿ" ಎಂಬ ಬಿರುದನ್ನು ಪಡೆದಿದ್ದು ಹನಿಮೂನ್ ಆಚರಿಸಲು ಒಂದು ಉತ್ಕೃಷ್ಟವಾದ ತಾಣವಾಗಿದೆ. 1800 ರ ಸಮಯದಲ್ಲಿ ಬ್ರಿಟೀಷರಿಂದ ಅನ್ವೇಷಿಸಲ್ಪಟ್ಟ ಈ ಭವ್ಯ ಗಿರಿಧಾಮವು ಅಕ್ಷರಶಃ ನಿಲ್ಗಿರಿಯ ನೀಲಿ ಪರ್ವತಗಳಿಂದ ಸುತ್ತುವರೆದಿದ್ದು ಅತ್ಯಂತ ಹಿತಕರವಾದ ವಾತಾವರಣ ಹಾಗು ಮನಮೋಹಕ ಪ್ರಾಕೃತಿಕ ನೋಟಗಳನ್ನು ಕರುಣಿಸುತ್ತದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಈ ತಾಣವು ಸಮುದ್ರಮಟ್ಟದಿಂದ 2,623 ಮೀ ಎತ್ತರದಲ್ಲಿ ನೆಲೆಸಿದ್ದು ವಿಮಾನ, ರೈಲು ಹಾಗು ರಸ್ತೆಯ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದು. 100 ಕಿ.ಮೀ ದೂರವಿರುವ ಕೋಯಮತ್ತೂರು ಹತ್ತಿರದ ವಾಯು ನೆಲೆಯಾಗಿದ್ದು, ಮೆಟ್ಟುಪಾಳಯಂ ನಿಂದ ನಾಲ್ಕು ಘಂಟೆಗಳ ಟಾಯ್ ಟ್ರೈನ್ ಮೂಲಕ ಇಲ್ಲಿಗೆ ತಲುಪಬಹುದು.

ತಾಪಮಾನ:

ಬೇಸಿಗೆಯಲ್ಲಿ ಗರಿಷ್ಠ: 25C ಕನಿಷ್ಠ: 10C

ಚಳಿಗಾಲದಲ್ಲಿ: ಗರಿಷ್ಠ: 21C ಕನಿಷ್ಠ: 5C

ಚಿತ್ರಕೃಪೆ: Edukeralam

ಮುನ್ನಾರ್:

ಮುನ್ನಾರ್:

ಕೇರಳದ ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನಲ್ಲಿರುವ ಮುನ್ನಾರ್ ಗಿರಿಧಾಮವು ದಕ್ಷಿಣ ಭಾರತದ ಸುಂದರ ಗಿರಿಧಾಮಗಳ ಪೈಕಿ ಒಂದಾಗಿದೆ. ಮುನ್ನಾರ್ ಎಂದರೆ ಮೂರು ನದಿಗಳೆಂಬ ಅರ್ಥವಿದ್ದು ಮದುರಪುಳಾ, ಕುಂಡಲಾ ಹಾಗು ನಲ್ಲತಣಿ ಎಂಬ ಹೆಸರಿನ ಮೂರಿ ನೀರಿನ ತೊರೆಗಳು ಇಲ್ಲಿ ಸಮಾಗಮವಾಗಿವೆ. ಮುನ್ನಾರ್ ಪ್ರಮುಖವಾಗಿ ಕಣ್ಣನ್ ದೇವನ್ ಬೆಟ್ಟಕ್ಕೆ ಹೆಸರುವಾಸಿಯಾಗಿದ್ದು ಆ ಹೆಸರಿನ ಚಹಾ ಕೂಡ ನಿಮ್ಮೆಲ್ಲರಿಗು ತಿಳಿದಿರಬಹುದು. ಮಧುರ ಮನೋಹರವಾದ ಪ್ರಕೃತಿ ನೋಟ, ಹಿತಕರವಾದ ವಾತಾವರಣ ಹೊಂದಿರುವ ಮುನ್ನಾರ್ ಭೇಟಿ ನಿಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುವುದು ಖಂಡಿತ.

ತಾಪಮಾನ:

ಬೇಸಿಗೆ: 15.2C - 25.2C

ಚಳಿಗಾಲ: 0C - 10C

ಚಿತ್ರಕೃಪೆ: Bimal K C

ಕೊಡಗು:

ಕೊಡಗು:

ರಮಣೀಯ ತಾಣವಾದ ಕರ್ನಾಟಕದ ಕೊಡಗು ಗಿರಿಧಾಮವು ದೇಶದ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿ ರಾರಾಜಿಸುತ್ತಿದೆ. ಪಶ್ಚಿಮ ಘಟ್ಟಗಳ ಮನಮೋಹಕ ಹಿನ್ನಿಲೆಯಲ್ಲಿ ಸ್ಥಿತವಿರುವ ಕೊಡಗು ಪ್ರವಾಸಿಗರಿಗೆ ಅಥವಾ ನವದಂಪತಿಗಳಿಗೆ ಒಂದು ಅಲೌಕಿಕ ಆನಂದದ ಅನುಭೂತಿಯನ್ನು ಕರುಣಿಸುತ್ತದೆ. ರಜೆಯನ್ನು ಪರಿಣಾಮಕಾರಿಯಾಗಿ ಕಳೆಯಲು ಹಲವಾರು ರಿಸಾರ್ಟುಗಳು ಹಾಗು ಹೋಟೆಲುಗಳು ಇಲ್ಲಿ ಲಭ್ಯವಿದೆ. ಮೆಟ್ಟಿಲುಗಳ ಮಾದರಿಯಲ್ಲಿರುವ ಬೆಟ್ಟಗಳು, ಕೆರೆ ತೊರೆಗಳು, ಕಾಫಿ ತೋಟಗಳು, ಕಣಿವೆಗಳನ್ನು ಒಳಗೊಂಡಿರುವ ಕೊಡಗು ವಿರಾಜಪೇಟೆ, ಮಡಿಕೇರಿ ಹಾಗು ಸೋಮವಾರಪೇಟೆಗಳೆಂಬ ಮೂರು ತಾಲೂಕುಗಳನ್ನು ಹೊಂದಿದೆ.

ತಾಪಮಾನ:

ಬೇಸಿಗೆ: 22C - 40C

ಚಳಿಗಾಲ: 11C - 28C

ಚಿತ್ರಕೃಪೆ: Harikrish.h

ಕೊಡೈಕೆನಲ್:

ಕೊಡೈಕೆನಲ್:

ತಮಿಳುನಾಡಿನ ಪಶ್ಚಿಮ ಘಟ್ಟದ ಪಳನಿ ಪರ್ವತ ಶ್ರೇಣಿಗಳ ಮಧ್ಯೆ ನೆಲೆಸಿರುವ ಕೊಡೈಕೆನಲ್ ಗಿರಿಧಾಮವು ದಕ್ಷಿಣ ಭಾರತದ ಸುಂದರ ಗಿರಿಧಾಮಗಳ ಪೈಕಿ ಒಂದಾಗಿದೆ. ಸಮುದ್ರಮಟ್ಟದಿಂದ 2100 ಮೀ ಎತ್ತರದಲ್ಲಿರುವ ಈ ಮನಮೋಹಕ ಗಿರಿಧಾಮ ಪ್ರದೇಶವು ಮತ್ತೊಂದು ಪ್ರಖ್ಯಾತ ಧಾರ್ಮಿಕ ನಗರಿ ಮದುರೈನಿಂದ 120 ಕಿ.ಮೀ ದೂರದಲ್ಲಿ ನೆಲೆಸಿದೆ. ಛಾಯಾಗ್ರಾಹಕ ಸ್ನೇಹಿ ಭೂದೃಶ್ಯಾವಳಿಗಳನ್ನು ಹೊಂದಿರುವ ಈ ಗಿರಿಧಾಮ ತಾಣದ ಪ್ರಮುಖ ಆಕರ್ಷಣೆಯೆಂದರೆ ನಕ್ಷತ್ರ ಆಕಾರದ ಸುಂದರವಾದ ಕೆರೆ. ಈ ಕೆರೆಯಲ್ಲಿ ಹಾಯಾಗಿ ದೋಣಿ ಸವಾರಿ ಮಾಡುತ್ತ ಸುತ್ತಮುತ್ತಲಿನ ಸುಂದರ ಪರಿಸರದ ಅನುಭವವನ್ನು ಸವಿಯಬಹುದು.

ತಾಪಮಾನ:

ಬೇಸಿಗೆ: 20C - 11C

ಚಳಿಗಾಲ: 17C - 8C

ಚಿತ್ರಕೃಪೆ: Noblevmy

ತೆಕಡಿ:

ತೆಕಡಿ:

ಕೇರಳದ ಇಡುಕ್ಕಿ ಜಿಲ್ಲೆಯ ಮತ್ತೊಂದು ರೋಮಾಂಚಕ ತಾಣ ತೆಕಡಿ. ಪಶ್ಚಿಮ ಘಟ್ಟಗಳ ಮನಮೋಹಕ ನೋಟ, ಹಿತಕರವಾದ ವಾತಾವರಣ ಹೊಂದಿರುವ ಈ ಪ್ರದೇಶದ ಪ್ರಮುಖ ಆಕರ್ಷಣೆ ಪೆರಿಯಾರ್ ಅಭಯಾರಣ್ಯ. ಇದನ್ನು ಭಾರತದಲ್ಲಿ ಕಂಡುಬರುವ ಸುಂದರವಾದ ಅಭಯಾರಣ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ಚಿಕ್ಕ ಪುಟ್ಟ ಬೆಟ್ಟಗಳ ಸುಂದರವಾದ ಭೂದೃಶ್ಯಾವಳಿಗಳನ್ನು ಹೊಂದಿರುವ ತೆಕಡಿಯು ಹಾಯಾಗಿ ವಿಹಾರ ಮಾಡುತ್ತ, ಸುಂದರವಾದ ಪರಿಸರದ ಆನಂದ ಸವಿಯುತ್ತ ಸಮಯ ಕಳೆಯಲು ಆದರ್ಶಪ್ರಾಯ ತಾಣವಾಗಿದೆ. ತೆಕಡಿ ಕೆರೆಯ ದೋಣಿ ಸವಾರಿಯು ಒಂದು ಅದ್ಭುತವಾದ ಅನುಭೂತಿಯನ್ನು ಕರುಣಿಸುತ್ತದೆ.

ತಾಪಮಾನ:

11C-27C

ಚಿತ್ರಕೃಪೆ: Jonathanawhite

ವಯನಾಡ್ : ಶಾಂತ ಕಣಿವೆ

ವಯನಾಡ್ : ಶಾಂತ ಕಣಿವೆ

ಪಶ್ಚಿಮ ಘಟ್ಟದ ತುಸು ಎತ್ತರದ ಸುಂದರ ಪ್ರದೇಶದಲ್ಲಿ ನೆಲೆಸಿರುವ ವಯನಾಡ್ ಒಂದು ಆದರ್ಶಮಯ ಹನಿಮೂನ್ ತಾಣವಾಗಿದೆ. ಮಂಜಿನ ಗುಂಗಿನಲ್ಲಿ ಮರೆಯಾದ ನಯನ ಮನೋಹರ ಬೆಟ್ಟಗಳಿಂದ ಸುತ್ತುವರೆದಿರುವ ಈ ಪ್ರದೇಶವು ಒಂದು ಅನನ್ಯವಾದ ಭೂಪ್ರದೇಶವನ್ನು ಹೊಂದಿದೆ. ಎಡಕಲ್ ಗುಹೆಗಳು ಹಾಗು ಪೂಕೋಟ್ ಕೆರೆ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಈ ಪ್ರದೇಶವು ಉತ್ತರಕ್ಕೆ ಕೊಡಗು, ದಕ್ಷಿಣಕ್ಕೆ ಮಲಪ್ಪುರಂ ಜಿಲ್ಲೆ, ಪೂರ್ವಕ್ಕೆ ತಮಿಳುನಾಡಿನ ನಿಲ್ಗಿರಿ ಪರ್ವತಗಳು ಹಾಗು ಕರ್ನಾಟಕದ ಮೈಸೂರಿನಿಂದ ಸುತ್ತುವರೆದಿದೆ. ವಯನಾಡಿನ ಆಡಳಿತ ಕೇಂದ್ರ ಕಲ್ಪೆಟ್ಟಾವು ಕೇರಳದ ಇತರೆ ಪ್ರಮುಖ ನಗರಗಳಿಂದ ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Nitin Pai

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X