Search
  • Follow NativePlanet
Share
» »ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು

ಪವಿತ್ರ ನದಿ ತಟಗಳು ಹಾಗೂ ಪುಣ್ಯ ಕ್ಷೇತ್ರಗಳು

By Vijay

ಸನಾತನ ಹಿಂದೂ ಪದ್ಧತಿಯಲ್ಲಿ ಮನುಷ್ಯನು ತಾನು ಜನ್ಮ ಪಡೆಯಲು ಆಶ್ರಯ ಒದಗಿಸಿದ ಮತ್ತು ಬದುಕಲು ಅವಶ್ಯಕವಾಗಿರುವ ನೀರು, ಆಹಾರ, ಗಾಳಿ ಒದಗಿಸಿದ ಪ್ರಕೃತಿಯ ಕುರಿತು ಆದರ, ಗೌರವ ಹಾಗೂ ಸದ್ಭಾವನೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ. ಅದಕ್ಕೆಂದೆ ಕೆಲವು ವಿಶೇಷ ಕಾರ್ಯಗಳಲ್ಲಿ ಮನುಷ್ಯನು ತೊಡಗಿಕೊಳ್ಳುವ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಅದಕ್ಕೆ ಸಂಬಂಧಿಸಿದ ಶ್ಲೋಕಗಳನ್ನು ಹೇಳುತ್ತ ಪ್ರಾರ್ಥಿಸಬೇಕೆಂದು ಹಿಂದುತ್ವ ಸಾರುತ್ತದೆ.

ಉದಾಹರಣೆಗೆ ಸ್ನಾನ ಮಾಡುವಾಗ ಹಿಂದೂ ಸಂಪ್ರದಾಯದ ಏಳು ಪವಿತ್ರ ನದಿಗಳನ್ನು ಕುರಿತು ಪ್ರಾರ್ಥಿಸುವುದು. ಆ ಸಂಸ್ಕೃತ ಶ್ಲೋಕವು ಈ ರೀತಿಯಾಗಿದೆ : "ಗಂಗಾ ಚ ಯಮುನೆ ಚೈವ ಗೋದಾವರಿ ಸರಸ್ವತಿ, ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು". ಇದರ ಅರ್ಥವಿಷ್ಟೆ, "ನಾನು ಸ್ನಾನ ಮಾಡಬೇಕೆಂದಿರುವ ಈ ನೀರಿನಲ್ಲಿ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಹಾಗೂ ಕಾವೇರಿ ಈ ಏಳು ಪವಿತ್ರ ನದಿಗಳನ್ನು ಆಹ್ವಾನಿಸ ಬಯಸುತ್ತೇನೆ ಹಾಗೂ ನನ್ನನ್ನು ಆಶೀರ್ವದಿಸು ಎಂದು ಪ್ರಾರ್ಥಿಸುತ್ತೇನೆ."

ವಿಶೇಷ ಲೇಖನ : ಕರ್ನಾಟಕದಲ್ಲಿ ಹರಿದಿರುವ ಸುಂದರ ನದಿಗಳ ಪ್ರವಾಸ

ಹೌದು, ಮೇಲೆ ಹೇಳಿದ ಈ ಏಳು ನದಿಗಳನ್ನು ಭಾರತದ ಅಥವಾ ಹಿಂದೂಗಳು ನಂಬಿರುವ ಹಾಗೆ ಏಳು ಪುಣ್ಯ ನದಿಗಳೆನ್ನಲಾಗಿದೆ. ನಂಬಿಕೆಯಂತೆ ಈ ನದಿಗಳು ಮನುಷ್ಯನ ಪಾಪ ಕರ್ಮಾದಿಗಳನ್ನು ನಾಶಪಡಿಸುವ ಶಕ್ತಿ ಹೊಂದಿವೆ. ಈ ನದಿಗಳು ಹರಿದಿರುವ ತಟಗಳಲ್ಲಿ ಇಂದು ಕೆಲವು ಪುಣ್ಯ ಕ್ಷೇತ್ರಗಳನ್ನು ಕಾಣಬಹುದಾಗಿದೆ. ಈ ಕ್ಷೇತ್ರಗಳು ತೀರ್ಥ ಯಾತ್ರಾ ಕ್ಷೇತ್ರಗಳಾಗಿಯೂ ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದ ಸ್ಥಳಗಳಾಗಿವೆ. ಹಿಂದೂ ಧರ್ಮಿಯರಲ್ಲಿ ಬಹುತೇಕರು ತಮ್ಮ ಜೀವಿತಾವಧಿಯಲ್ಲಿ ಈ ನದಿ ಕ್ಷೇತ್ರಗಳಲ್ಲೊಂದಾದರೂ ಸ್ಥಳಕ್ಕೆ ಪ್ರವಾಸ ಹೊರಡಲು ಖಂಡಿತವಾಗಿಯೂ ಬಯಸೆ ಬಯಸುತ್ತಾರೆ.

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ಈ ಪವಿತ್ರ ನದಿಗಳ ಹಾಗೂ ಅವುಗಳ ತಟದಲ್ಲಿ ನೆಲೆಸಿರುವ ಪುಣ್ಯ ಕ್ಷೇತ್ರಗಳ ಧಾರ್ಮಿಕ ಪ್ರವಾಸವನ್ನು ಈ ಲೇಖನದ ಮೂಲಕ ಮಾಡಿ. ಅವಕಾಶ ಒದಗಿ ಬಂದಾಗ ಈ ಕ್ಷೇತ್ರಗಳಿಗೆ ಭೇಟಿ ನೀಡಲು ಮರೆಯದಿರಿ. ಇಲ್ಲಿ ಇನ್ನೊಂದು ವಿಚಾರವೆಂದರೆ ಸಿಂಧು ನದಿಯು ಪ್ರಸ್ತುತ ಪಾಕಿಸ್ತಾನದಲ್ಲಿ ಹರಿದಿರುವುದರಿಂದ ಪೆನಿನ್ಸುಲಾ ಭಾರತದ ಎರಡನೇಯ ದೊಡ್ಡ ನದಿಯಾದ ಕೃಷ್ಣಾ ನದಿಯನ್ನು ಪವಿತ್ರ ನದಿಗಳಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ.

ಗಮನಿಸಿ : ಸರಸ್ವತಿ ನದಿಯ ಕುರಿತು ಗೊಂದಲ ಹಾಗೂ ಸಿಂಧು ನದಿ ಪಾಕಿಸ್ತಾನದಲ್ಲಿರುವುದರಿಂದ ಅವುಗಳ ಕುರಿತು ಮಾಹಿತಿ ಇಲ್ಲಿ ತಿಳಿಸಲಾಗಿಲ್ಲ.

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಗಂಗಾ ನದಿ : ಸ್ವರ್ಗದಿಂದ ಧರೆಗಿಳಿದ ಗಂಗಾ ದೇವಿಯು ಇವಳಾಗಿದ್ದಾಳೆ. ಶಿವನು ಸ್ವರ್ಗದಿಂದ ಭೂಮಿಗೆ ಬಂದು ಹರಿಯುವಂತೆ ಆದೇಶಿಸಿದ ಗಂಗೆಯು ಇವಳೆ. ಹೆಚ್ಚು ಪ್ರಚಲಿತದಲ್ಲಿರುವ ಕಥೆಯಂತೆ, ಹಿಂದೆ ಕಪಿಲ ಮಹರ್ಷಿಗಳು ಕಠಿಣವಾದ ತಪ್ಪಸ್ಸನ್ನಾಚರಿಸುತ್ತಿದ್ದಾಗ, ಸಾಗರ ಎಂಬ ರಾಜನ 60,000 ಮಕ್ಕಳು ಸಾಕಷ್ಟು ಭಂಗ ತರಲು ಪ್ರಯತ್ನಿಸಿದರು. ಇದರಿಂದ ಕೋಪಗೊಂಡ ಮಹರ್ಷಿಗಳು ತಮ್ಮ ತಪಶಕ್ತಿಯಿಂದ ಆ ಎಲ್ಲ ಮಕ್ಕಳು ಭಸ್ಮವನ್ನಾಗಿ ಮಾಡಿದರು. ನಂತರ ಮಕ್ಕಳು ಮೋಕ್ಷ ಪಡೆಯದೆ ಪರಿತಪಿಸತೊಡಗಿದರು. ಇವರ ವಂಶದವನೆ ಆದ ಭಗೀರಥ ಮಹಾರಾಜನ ಕನಸ್ಸಿನಲ್ಲಿ ಬಂದು ತಮ್ಮ ವ್ಯಥೆಯನ್ನು ವ್ಯಕ್ತಪಡಿಸಿ, ಸ್ವರ್ಗದಲ್ಲಿರುವ ಗಂಗೆಯಲ್ಲಿ ತಮ್ಮ ಭಸ್ಮವನ್ನು ವಿಸರ್ಜಿಸಿದಾಗ ಮೋಕ್ಷ ದೊರೆಯುವುದಾಗಿಯೂ ಹಾಗೂ ಅದನ್ನು ದೊರಕಿಸುವಂತೆ ಮಾಡೆಂದು ಹಲುಬಿಕೊಂಡರು.

ಚಿತ್ರಕೃಪೆ: wikipedia

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಭಗೀರಥನು ತಮ್ಮ ಪೂರ್ವಜರಿಗೆ ಮೋಕ್ಷ ದೊರಕಿಸಿಕೊಡಲೇಬೇಕೆಂದು ನಿಶ್ಚಯಿಸಿ ಅತ್ಯಂತ ಕಠಿಣವಾದ ತಪಸ್ಸನ್ನಾಚರಿಸಿ ಶಿವನನ್ನು ಪ್ರಸನ್ನಗೊಳಿಸಿದನು. ಶಿವನನ್ನು ಕುರಿತು ತನ್ನ ಪ್ರಾರ್ಥನೆ ಮಾಡಿ, ಗಂಗೆಯು ಭೂಮಿಯಲ್ಲಿ ಹರಿಯಬೇಕೆಂದೂ ಹಾಗೂ ಅವಳ ರಭಸದಿಂದ ಭೂಮಿಯಲ್ಲಿ ಜಲಪ್ರಳಯ ಉಂಟಾಗುವ ಸಂಭವ ಇರುವುದರಿಂದ ಶಿವನೆ ಸ್ವತಃ ತನ ಜಟೆಯಲ್ಲಿ ಅವಳನ್ನು ಬಂಧಿಸಿಟ್ಟುಕೊಳ್ಳಬೇಕೆಂದು ಪ್ರಾರ್ಥಿಸಿದನು. ಶಿವನು ಹಾಗೆಯೆ ಮಾಡಿ ಗಂಗೆಯನ್ನು ಭೂಮಿಯಲ್ಲಿ ಹರಿಯಲು ಕೇಳಿದನು. ಈ ಘಟನೆಯಲ್ಲಿ ಭಗೀರಥ ಮಹಾರಾಜನ ಪಾತ್ರ ಮಹತ್ವವಾಗಿದ್ದರಿಂದ ಹಿಮಾಲಯದಿಂದ ಉದ್ಭವವಾಗುವ ಗಂಗೆಯನ್ನು ಭಾಗೀರಥಿ ಎಂದು ಕರೆಯಲಾಗಿದ್ದು ನಂತರ ಅದು ಗಂಗಾ ನದಿಯಾಗಿ ಹರಿಯುತ್ತದೆ. ಇಂದಿಗೂ ಪ್ರತಿ ವರ್ಷ ಮೇ ಅಂತ್ಯದಲ್ಲಿ ಅಥವಾ ಜೂನ್ ಪ್ರಾರಂಭದಲ್ಲಿ ಅಂಗೆಯ ಧರೆಗಿಳಿದ ಅಂದರೆ ಅವತಾರವೆತ್ತಿದ ಆಚರಣೆಯನ್ನು ಉತ್ತರ ಭಾರತದಲ್ಲಿ ವಿಶೇಷವಾಗಿ ವಾರಣಾಸಿಯಲ್ಲಿ ಆಚರಿಸಲಾಗುತ್ತದೆ. ಅಲ್ಲದೆ ಪ್ರತಿನಿತ್ಯ ಗಂಗೆಗೆ ಗೌರವ ಸೂಚಕವಾಗಿ ಗಂಗಾ ಆರತಿಯನ್ನೂ ಸಹ ಮಾಡಲಾಗುತ್ತದೆ.

ಚಿತ್ರಕೃಪೆ: Pro2

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಗಂಗೆಯು ಮೊದಲಿಗೆ ಉತ್ತರಾಖಂಡದ ಗಂಗೋತ್ರಿಯ ಬಳಿ ಇರುವ ಗೌಮುಖ/ಗೋಮುಖದಿಂದ ತಾಜಾ ನೀರಿನ ತೊರೆಯಾಗಿ ಕೆಳಗೆ ಹರಿಯಲು ಪ್ರಾರಂಭಿಸುತ್ತಾಳೆ. ಈ ಸಂದರ್ಭದಲ್ಲಿ ಈ ನದಿಯನ್ನು ಭಾಗೀರಥಿ ನದಿ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Atarax42

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪಂಚ ಪ್ರಯಾಗಗಳ ಪೈಕಿ ದೇವಪ್ರಯಾಗವೂ ಒಂದು. ದೇವಪ್ರಯಾಗದಲ್ಲಿ ಭಾಗೀರಥಿ ನದಿಯು ಅಲಕನಂದಾ ನದಿಯೊಂದಿಗೆ ಸಂಗಮಗೊಂಡು ಮುಂದೆ ಹರಿಯಲು ಪ್ರಾರಂಭಿಸುತ್ತಾಳೆ. ಅಂದರೆ ಸ್ಪಷ್ಟವಾಗಿ ಹೇಳಬೇಕೆಂದರೆ ದೇವಪ್ರಯಾಗದಿಂದ ಭಾಗೀರಥಿ ನದಿಯು ಗಂಗಾ ನದಿ ಎಂಬ ಅಧಿಕೃತ ಹೆಸರು ಪಡೆದು ಮುಂದೆ ಹರಿಯಲಾರಂಭಿಸುತ್ತಾಳೆ.

ಚಿತ್ರಕೃಪೆ: Vvnataraj

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ದೇವಪ್ರಯಾಗ್ : ಉತ್ತರಾಖಂಡ ರಾಜ್ಯದ ತೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗವು ಪಂಚ ಪ್ರಯಾಗಗಳ ಪೈಕಿ ಒಂದಾದ ಸ್ಥಳವಾಗಿದೆ. ಇಲ್ಲಿ ಭಾಗೀರಥಿ ಹಾಗೂ ಅಲಕನಂದಾ ನದಿಗಳು ಸಂಗಮಗೊಂಡು ಮುಂದೆ ಗಂಗಾ ನದಿಯಾಗಿ ಹರಿಯುತ್ತದೆ. ಹೀಗಾಗಿ ಹಿಂದು ಧರ್ಮಿಯರಿಗೆ ಈ ಸಂಗಮ ಸ್ಥಳವು ಬಹಳ ಪವಿತ್ರವಾಗಿದೆ. ಇಲ್ಲಿ ಕೆಲವು ದೇವಸ್ಥಾನಗಳಿದ್ದರೂ ಪ್ರಮುಖವಾಗಿ ಭೇಟಿ ನೀಡಲ್ಪಡುವ ದೇವಸ್ಥಾನವೆಂದರೆ ರಘುನಾಥ ದೇವಾಲಯ. ಇದು ರಾಮನಿಗೆ ಮುಡಿಪಾದ ದೇವಾಲಯವಾಗಿದೆ.

ಚಿತ್ರಕೃಪೆ: Wilson44691

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಹರಿದ್ವಾರ : ಗಂಗೆಯು ಹಿಮಾಲಯದಿಂದ ತನ್ನ ಪಥವನ್ನು ಪ್ರ್ರರಂಭಿಸಿ ಹಲವು ತೀರ್ಥ ಕ್ಷೇತ್ರಗಳಲ್ಲಿ ಹರಿಯುತ್ತ ಕೊನೆಯದಾಗಿ ಬಂಗಾಳ ಬಳಿಯಿರುವ ಗಂಗಾ ಡೆಲ್ಟಾ (ನದಿ ಮುಖಜ ಭೂಮಿಯ) ಮೂಲಕ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸೇರುತ್ತದೆ. ಇದರ ಪಥದಲ್ಲಿ ಬರುವ ಅತಿ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ ಹರಿದ್ವಾರ.

ಚಿತ್ರಕೃಪೆ: Anshul Dabral

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಹರಿದ್ವಾರವು ಒಂದು ಪ್ರಾಚೀನ ನಗರವಾಗಿದ್ದು ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದೆ. ಪವಿತ್ರ ಗಂಗಾನದಿಯು ಗಂಗೋತ್ರಿ (ಗೋಮುಖ )ಯಲ್ಲಿ ಉದ್ಭವಗೊಂಡು 253 ಕಿ.ಮೀ ಗಳಷ್ಟು ಕ್ರಮಿಸಿ ಉತ್ತರ ಭಾರತದಲ್ಲಿ ಹರಿದ್ವಾರದ ಮೂಲಕ ಪ್ರಥಮವಾಗಿ ಪ್ರವೇಶಿಸುತ್ತದೆ. ಆದ್ದರಿಂದಲೆ ಈ ನಗರವನ್ನು ಗಂಗಾದ್ವಾರಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Livefree2013

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪೌರಾಣಿಕವಾಗಿ ಹಾಗೂ ಗರುಡ ಪುರಾಣದ ಪ್ರಕಾರ, ಹರಿದ್ವಾರವು ಏಳು ಅತಿ ಪವಿತ್ರ ನಗರಗಳ ಪೈಕಿ ಒಂದಾಗಿದೆ. ಗರುಡ ಪುರಾಣದಲ್ಲಿ ಈ ನಗರವನ್ನು ಮಾಯಾ ಎನ್ನಲಾಗಿದೆ. ಇನ್ನುಳಿದಂತೆ ಇರುವ ಇತರೆ ಆರು ಪವಿತ್ರ ಕ್ಷೇತ್ರಗಳೆಂದರೆ ಅಯೋಧ್ಯಾ, ಮಥುರಾ, ಕಾಶಿ (ವರಾಣಾಸಿ), ಉಜ್ಜಯಿನಿ, ದ್ವಾರಕಾ, ಕಂಚಿ. ಪೌರಾಣಿಕ ಕಥೆಯ ಪ್ರಕಾರ, ಸಮುದ್ರ ಮಂಥನದಿಂದ ಉತ್ಪನ್ನವಾದ ಅಮೃತವನ್ನು ಗರುಡನು ಒಯ್ಯುತ್ತಿರುವಾಗ ಅದರ ನಾಲ್ಕು ಹನಿಗಳು ನಾಲ್ಕು ವಿವಿಧ ಸ್ಥಳಗಳಲ್ಲಿ ಬಿದ್ದವು. ಹರಿದ್ವಾರವೂ ಸಹ ಆ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಮಿಕ್ಕ ಮೂರು ಸ್ಥಳಗಳೆಂದರೆ ಉಜ್ಜಯಿನಿ, ನಾಶಿಕ್ ಹಾಗೂ ಪ್ರಯಾಗ್ (ಅಲಹಾಬಾದ್).

ಚಿತ್ರಕೃಪೆ: Barry Silver

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಈ ಒಂದು ಘಟನೆಯಿಂದಲೆ ಕುಂಭ ಮೇಳವು ಜಾರಿಗೆ ಬಂದಿತೆನ್ನಲಾಗುತ್ತದೆ. ಅಂತೆಯೆ ಪ್ರತಿ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಕುಂಭ ಉತ್ಸವವು ಆಯೋಜನೆಗೊಳ್ಳುತ್ತದೆ. ಹರಿದ್ವಾರದಲ್ಲಿ ಅಮೃತ ಬಿದ್ದ ಸ್ಥಳವನ್ನು ಹರ್ ಕಿ ಪೌರಿ ಎಂದು ಕರೆಯಲಾಗುತ್ತದೆ. ಹಿಂದೆ ಹರಿದ್ವಾರವನ್ನು ಕಪಾಲಿಸ್ಥಾನ, ಗಂಗಾದ್ವಾರ ಹಾಗೂ ಮಾಯಾಪುರಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು. ಪವಿತ್ರ ಚಾರ್ ಧಾಮ್ (ನಾಲ್ಕು ಧಾಮಗಳು) ಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿಗಳಿಗೆ ಪ್ರವೇಶ ದ್ವಾರವಾಗಿದೆ ಹರಿದ್ವಾರ. ಶೈವರು ಇದನ್ನು ಹರದ್ವಾರ ಎಂತಲೂ ವೈಷ್ಣವರು ಹರಿದ್ವಾರ ಎಂತಲೂ ಇದನ್ನು ಸಂಭೋದಿಸುತ್ತಾರೆ.

ಚಿತ್ರಕೃಪೆ: Jay Galvin

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ರಿಷಿಕೇಶ : ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಪ್ರತಿವರ್ಷ ಲಕ್ಷಾಂತರ ಭಕ್ತ ಮಹಾಶಯರು ರಿಷಿಕೇಶಕ್ಕೆ ಭೇಟಿ ನೀಡಿ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುತ್ತಾರೆ. ಹಿಮಾಲಯ ಪರ್ವತ ಶ್ರೇಣಿಗಳನ್ನು ಕಣ್ತುಂಬಿಕೊಳ್ಳುತ್ತಾರೆ.

ಚಿತ್ರಕೃಪೆ: Fred Hsu

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ಗಂಗಾ ನದಿಯಲ್ಲಿ ಮುಳುಗೇಳುತ್ತಾರೆ. ಹಿಮಾಲಯದ ಪಾದ ತಳದಲ್ಲಿ ರಿಷಿಕೇಶ ನೆಲೆ ನಿಂತಿರುವುದರಿಂದ ಹಿಂದೂ ಭಕ್ತರಿಗೆ ಇಲ್ಲಿ ಭಕ್ತಿ ಶ್ರದ್ದೆ ಹೆಚ್ಚು. ಈ ಸ್ಥಳ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪುರಾತನವಾದ ದೇವಸ್ಥಾನ ಹಾಗೂ ಆಶ್ರಮಗಳಿಂದ. ಹಲವಾರು ಯೋಗ ಮತ್ತು ಧ್ಯಾನ ಕೇಂದ್ರಗಳು ಇಲ್ಲಿದ್ದು ಅನುಭವಿ ಯೋಗ ಗುರುಗಳು ಇಲ್ಲಿ ತರಬೇತಿ ನೀಡುತ್ತಾರೆ.

ಚಿತ್ರಕೃಪೆ: Ajay Tallam

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಹಿಂದೂ ಪುರಾಣ ಕಥೆ ರಾಮಾಯಣದ ಪ್ರಕಾರ, ರಾವಣನ ಸಂಹಾರ ಮಾಡಿದ ನಂತರ ಶ್ರೀರಾಮ ಇದೇ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತನಂತೆ. ಇದೇ ಸ್ಥಳದಲ್ಲಿ ಲಕ್ಷ್ಮಣನೂ ಕೂಡ ಸೇತುವೆಯ ಮೂಲಕ ಗಂಗಾ ನದಿಯನ್ನು ದಾಟಿದ ಕಥೆಯಿದೆ. ಹೀಗಾಗಿಯೇ ಇಲ್ಲಿ ಲಕ್ಷ್ಮಣ ಜೂಲಾ ಎಂಬ ತೂಗು ಸೇತುವೆಯನ್ನು ಕಾಣಬಹುದು.

ಚಿತ್ರಕೃಪೆ: Enric Bach

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಇಲ್ಲಿರುವ ಕುಂಜಾಪುರಿ ದೇವಸ್ಥಾನ ಸತಿ ದೇವತೆಗೆ ಅರ್ಪಿತವಾಗಿದ್ದು ಶಿವಾಲಿಕ ಪ್ರದೇಶದ 13 ಪ್ರಮುಖ ಭಕ್ತಿಕ್ಷೇತ್ರಗಳಲ್ಲಿ ಇದೂ ಕೂಡ ಒಂದು. ದಂತ ಕಥೆಗಳು ಹೇಳುವಂತೆ ಶಿವ ಪರಮಾತ್ಮ ಸತಿ ದೇವತೆಯ ದೇಹವನ್ನು ಕೈಲಾಸಕ್ಕೆ ಕೊಂಡೊಯ್ಯುವಾಗ ದೇಹದ ಮೇಲಿನ ಭಾಗ ಇಲ್ಲಿ ಬಿದ್ದುಬಿಡುತ್ತದೆ. ದೇಹದ ಭಾಗ ಬಿದ್ದ ಈ ಜಾಗದಲ್ಲಿ ದೇವಸ್ಥಾನ ಕಟ್ಟಲಾಗಿದೆ.

ಚಿತ್ರಕೃಪೆ: Ryan

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಶ್ರೀ ಬಾಬಾ ವಿಶುದ್ದಾನಂದಜಿಯಿಂದ ಸ್ಥಾಪಿಸಲ್ಪಟ್ಟ ಕಾಳಿ ಕಂಬ್ಲಿವಾಲೆ ಪಂಚಾಯತಿ ಕ್ಷೇತ್ರ ಕೂಡ ಮತ್ತೊಂದು ಪ್ರಮುಖ ಆಕರ್ಷಣೆ. ಇದರ ಪ್ರಮುಖ ಕಚೇರಿ ರಿಷಿಕೇಶದಲ್ಲಿದ್ದು ಇದರ ಶಾಖೆಗಳು ಗಡ್ವಾಲ್ ನ ತುಂಬ ಹರಡಿಕೊಂಡಿವೆ. ಪ್ರವಾಸಿಗರಿಗಾಗಿ ಇಲ್ಲಿ ವಸತಿ ವ್ಯವಸ್ಥೆಯೂ ಇದೆ. ಸ್ವಾಮಿ ಶಿವಾನಂದರು ಸ್ಥಾಪಿಸಿದ ಮತ್ತೊಂದು ಆಶ್ರಮ ಶಿವಾನಂದಗೂ ಕೂಡ ಭೇಟಿ ನೀಡಬಹುದು. ಹಿಮಾಲಯದ ತಪ್ಪಲಿನಲ್ಲಿ ಗಂಗಾ ನದಿಯ ದಂಡೆಯ ಮೇಲಿದೆ ಈ ಆಶ್ರಮ.

ಚಿತ್ರಕೃಪೆ: Ken Wieland

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ರಿಷಿಕೇಶ್ ತಲುಪಲು, ವಿಮಾನದ ಮೂಲಕ ಪ್ರಯಾಣಿಸುವವರು 18 ಕಿಲೋ ಮೀಟರ್ ದೂರದ ಡೆಹ್ರಾಡೂನ್ ನ ಜಾಲಿ ಗ್ರ್ಯಾಂಟ್ ವಿಮಾನನಿಲ್ದಾಣದಿಂದ ಪ್ರಯಾಣಿಸಬೇಕು. ರಿಷಿಕೇಶದಲ್ಲಿಯೇ ರೈಲು ನಿಲ್ದಾಣವಿದ್ದು ಇಲ್ಲಿಂದ ದೆಹಲಿ, ಮುಂಬೈ, ಕೊಟದ್ವಾರ್ ಮತ್ತು ಡೆಹ್ರಾಡೂನ್ ಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ, ಡೆಹ್ರಾಡೂನ್ ಮತ್ತು ಹರಿದ್ವಾರ್ ದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಗಳಿವೆ.

ಚಿತ್ರಕೃಪೆ: Fred Hsu

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ವಾರಣಾಸಿ : ಗಂಗಾ ನದಿಯು ಹರಿದಿರುವ ಪಥದಲ್ಲಿ ಬರುವ ಮತ್ತೊಂದು ಪ್ರಖ್ಯಾತ ತೀರ್ಥ ಕ್ಷೇತ್ರವೆಂದರೆ ವಾರಣಾಸಿ. ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ. ಮಹಾ ಹಾಗೂ ಭಾರತದ ಅತಿ ಪವಿತ್ರ ನದಿಯಾದ ಗಂಗೆಯ ತಟದಲ್ಲಿ ನೆಲೆಸಿರುವ ವಾರಣಾಸಿಯು ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ಪಡೆದಿರುವ ಪ್ರಮುಖ ಧಾರ್ಮಿಕ ನಗರವಾಗಿದೆ.

ಚಿತ್ರಕೃಪೆ: Davi1974d

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಅಲ್ಲದೆ ಹಿಂದೂ ಧರ್ಮದಲ್ಲಿ ಹೇಳಲಾಗಿರುವ ಏಳು ಪವಿತ್ರ ನಗರಗಳ (ಸಪ್ತ ಪುರಿ) ಪೈಕಿ ವಾರಣಾಸಿಯು ಅತಿ ಪ್ರಮುಖವಾಗಿದೆ. ಹಿಂದೂ ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡುವುದು ಅತಿ ಉತ್ತಮವಾದ ಆಯ್ಕೆ ಎಂದೆ ಹೇಳಬಹುದು.

ಚಿತ್ರಕೃಪೆ: Angusmclellan

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗಿರುವಂತೆ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ. ಅಲ್ಲದೆ, ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವಂತೆ ಈ ಕ್ಷೇತ್ರವು ಶಿವನ ಅತ್ಯಂತ ನೆಚ್ಚಿನ ತಾಣವಾಗಿದೆ. ಆದುದರಿಂದಲೊ ಏನೊ ಇಲ್ಲಿ ಆಧ್ಯಾತ್ಮಿಕತೆಯ ಕಂಪು ನಗರದ ತುಂಬೆಲ್ಲ ಪಸರಿಸಿರುವುದನ್ನು ಭೇಟಿ ನೀಡಿದ ಸಂದರ್ಭದಲ್ಲಿ ಅನುಭವಿಸಬಹುದಾಗಿದೆ.

ಚಿತ್ರಕೃಪೆ: Ken Wieland

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಇಂದಿಗೂ ಸಹ ಸಾಕಷ್ಟು ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲಿ ನಿತ್ಯ ಜರುಗುತ್ತಿರುತ್ತವೆ. ಪ್ರತಿಯೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕಾಶಿಯ ಮಹಾರಾಜ ಕಾಶಿ ನರೇಶನ ಪೂಜೆಯು ಒಂದು ಭಾಗವಾಗಿರುವುದನ್ನು ಗಮನಿಸಬಹುದು. ಈ ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೇವಾಲಯಗಳನ್ನು ನೋಡಬಹುದಾಗಿದ್ದು ಕಾಶಿ ವಿಶ್ವನಾಥನ ದೇವಾಲಯ ಮೊದಲ ಪ್ರಮುಖ ದೇವಾಲಯವಾಗಿದೆ. ಲಿಂಗರೂಪಿ ವಿಶ್ವನಾಥನ ದರುಶನ ಪಡೆಯಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರುತ್ತಾರೆ.

ಚಿತ್ರಕೃಪೆ: Ekabhishek

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಅಲ್ಲದೆ ಹಿಂದೂ ಧರ್ಮದಲ್ಲಿ ವ್ಯಕ್ತಿಯ ಸಾವಿನ ನಂತರದಲ್ಲಿ ನಿರ್ವಹಿಸಲಾಗುವ ಕರ್ಮಾಚರಣೆಗಳು ಇಲ್ಲಿರುವ ಹಲವಾರು ಘಾಟ್ (ನದಿ ದಂಡೆಗಳು) ಪ್ರದೇಶಗಳಲ್ಲಿ ವಿಧ್ಯುಕ್ತವಾಗಿ ಜರುಗುತ್ತಿರುವುದನ್ನು ನೋಡಬಹುದು. ವಾರಣಾಸಿಯನ್ನು ಸಂಚಾರದ ಪ್ರಮುಖ ಮೂರು ಮಾಧ್ಯಮಗಳಾದ ವಾಯುಯಾನ, ರೈಲು ಮಾರ್ಗ ಹಾಗೂ ರಸ್ತೆ ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Arian Zwegers

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಅಲಹಾಬಾದ್ /ಪ್ರಯಾಗ್ : ಹಿಂದಿನ ಕಾಲದಲ್ಲಿ ಅಲಹಾಬಾದ್ ಪ್ರಯಾಗ್ ಎಂದು ಕಲೆಯಲ್ಪಡುತ್ತಿತ್ತು. ಇದರ ಬಗ್ಗೆ ಭಾರತದ ಧರ್ಮಗ್ರಂಥಗಳಲ್ಲಿ, ಅಂದರೆ ವೇದಗಳಲ್ಲಿ, ರಾಮಾಯಣ ಮತ್ತು ಮಹಾಭಾರತದಂಥ ಗ್ರಂಥಗಳಲ್ಲಿ ಉಲ್ಲೇಖವಿದೆ. ಮೂರು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಗಳ ತ್ರಿವೇಣಿ ಸಂಗಮವನ್ನು ಅಲಹಾಬಾದ್ ನಲ್ಲಿದೆ. ಆದ್ದರಿಂದ ಇಲ್ಲಿ ನಡೆಯುವ ಕುಂಭ ಮೇಳವು ಅತ್ಯಂತ ಪ್ರಖ್ಯಾತಿಗಳಿಸಿದೆ. ಸಾಕಷ್ಟು ಧಾರ್ಮಿಕ ಆಚರಣೆಗಳಿಗೆ, ಹಬ್ಬಗಳಿಗೆ ಸಂಗಮ ಕೇಂದ್ರ ಬಿಂದುವಾಗಿದೆ.

ಚಿತ್ರಕೃಪೆ: Lokankara

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಸದ್ಯ ಅಲಹಾಬಾದ್ ಉತ್ತರ ಭಾರತದ ದೊಡ್ಡ ತೀರ್ಥ ಯಾತ್ರಾ ಸ್ಥಳವೆಂದೇ ಹೆಸರುವಾಸಿಯಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮನು ಒಮ್ಮೆ ಪ್ರಕೃಷ್ಟ ಯುದ್ಧಕ್ಕೆ ಅಲಹಾಬಾದ್ ನನ್ನೇ ಆಯ್ಕೆ ಮಾಡಿದ್ದನಂತೆ. ಅದರ ಪಾವಿತ್ರ್ಯತೆಗೆ ಅನುಗುಣವಾಗಿ ಅದನ್ನು 'ತೀರ್ಥರಾಜ' ಎಂದು ನಾಮಕರಣ ಮಾಡಿದ್ದನಂತೆ. ತ್ರಿವೇಣಿ ಸಂಗಮದ ಸ್ಥಳ.

ಚಿತ್ರಕೃಪೆ: Puffino

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಯಮುನಾ ನದಿ : ಉತ್ತರಾಖಂಡ ರಾಜ್ಯದ ಗಡ್ವಾಲ್ ವಿಭಾಗದ ಉತ್ತರಕಾಶಿ ಎಂಬ ಜಿಲ್ಲೆಯ ಉತ್ತರಕಾಶಿ ಪಟ್ಟಣದಿಂದ ಉತ್ತರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿರುವ ಯಮುನೋತ್ರಿ ಎಂಬಲ್ಲಿಂದ ಈ ಪವಿತ್ರ ಯಮುನಾ ನದಿಯು ಉಗಮಗೊಂಡು ಹರಿಯುತ್ತದೆ. ಹಿಂದು ನಂಬಿಕೆಯ ಛೋಟಾ ಚಾರ್ ಧಾಮ್ ಯಾತ್ರೆಯಲ್ಲಿ ಒಂದಾಗಿದೆ ಯಮುನೋತ್ರಿ. ಮಿಕ್ಕ ಮೂರು ಧಾಮಗಳೆಂದರೆ ಕೇದಾರನಾಥ, ಬದರಿನಾಥ ಹಾಗೂ ಗಂಗೋತ್ರಿ. ಇಲ್ಲಿ ಯಮುನೋತ್ರಿ ದೇವಿಗೆ ಮುಡಿಪಾದ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Atarax42

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

1376 ಕಿ.ಮೀ ಗಳಷ್ಟು ಉದ್ದದ ಪಥವನ್ನು ಕ್ರಮಿಸುವ ಈ ನದಿಯು ದೆಹಲಿ, ಹರ್ಯಾಣದ ಮೂಲಕ ಹರಿದು ಕೊನೆಗೆ ಉತ್ತರ ಪ್ರದೇಶದ ಅಲಹಾಬಾದಿನಲ್ಲಿ ಗಂಗೆಯೊಂದಿಗೆ ಸೇರಿ ತ್ರಿವೇಣಿ ಸಂಗಮವಾಗುತ್ತದೆ. ಇಲ್ಲಿ ಸರಸ್ವತಿಯಿ ಕಣ್ಣಿಗೆ ಕಾಣುವುದಿಲ್ಲ ಬದಲು ಗುಪ್ತಗಾಮಿನಿಯಾಗಿ ಅಂದರೆ ಪಾತಾಳದಲ್ಲಿ ಹರಿದು ಗಂಗೆ ಹಾಗೂ ಯಮುನೆಯೊಂದಿಗೆ ಸಂಗಮಿಸಿದ್ದಾಳೆನ್ನಲಾಗಿದೆ. ಇದು ತನ್ನ ಪಾಥದಲ್ಲಿ ನೊಯ್ಡಾ, ಮಥುರಾ, ಆಗ್ರಾ, ಫಿರೋಜಾಬಾದ್, ಎಟಾವಾ, ಕಲ್ಪಿ ಹಾಗೂ ಹಮೀರಪುರಗಳಂತಹ ಪಟ್ಟಣಗಳ ಮೂಲಕ ಹರಿಯುತ್ತದೆ. ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಯಮುನಾ ನದಿಯ ತಟದ ಮೇಲೆ ನೆಲೆಸಿದೆ.

ಚಿತ್ರಕೃಪೆ: Ekabhishek

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಮಥುರಾ : ಉತ್ತರ ಪ್ರದೇಶ ರಾಜ್ಯದಲ್ಲಿರುವ ಮಥುರಾ ಪಟ್ಟಣವು ಯಮುನಾ ನದಿಯ ತಟದ ಮೇಲೆ ನೆಲೆಸಿರುವ ಪ್ರಖ್ಯಾತ ತೀರ್ಥ ಕ್ಷೇತ್ರವಾಗಿದೆ. ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು ಶ್ರೀಕೃಷ್ಣ ಭಗವಾನನ ಜನ್ಮ ಸ್ಥಳವಾಗಿರುವುದರಿಂದ ಸಾಕಷ್ಟು ಪಾವಿತ್ರ್ಯತೆ ಪಡೆದಿದೆ. ಮಥುರಾ ಆಗ್ರಾ ಹಾಗೂ ದೆಹಲಿಗಳಿಂದ ಕ್ರಮವಾಗಿ 57 ಮತ್ತು 162 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಈ ಎರಡೂ ನಗರಗಳಿಂದ ಬಸ್ಸುಗಳ ಸಾಕಷ್ಟು ಅನುಕೂಲವಿದೆ.

ಚಿತ್ರಕೃಪೆ: Hemant Shesh

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಗೋದಾವರಿ : ಹಿಂದೂಗಳು ನಡೆದುಕೊಳ್ಳುವ ಏಳು ಪವಿತ್ರ ನದಿಗಳ ಪೈಕಿ ಒಂದಾಗಿರುವ ಗೋದಾವರಿಯು ದೇಶದ ಎರಡನೇಯ ಅತಿ ಉದ್ದದ (1465 ಕಿ.ಮೀ) ಪಥ ಹೊಂದಿರುವ ನದಿಯಾಗಿದೆ. ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ನಾಶಿಕ್ ಪಟ್ಟಣದ ಬಳಿ ಉಗಮಗೊಳ್ಳುವ ಈ ನದಿಯು ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳ ಮೂಲಕ ಹರಿದು ಕೊನೆಯದಾಗಿ ಪೂರ್ವ ಭಾರತದ ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸೇರುತ್ತದೆ.

ಚಿತ್ರಕೃಪೆ: Adityamadhav83

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ನಾಶಿಕ್ : ಮಹಾರಾಷ್ಟ್ರದ ನಾಶಿಕ್ ಕುಂಭ ಮೇಳ ನಡೆಸಲ್ಪಡುವ ಪವಿತ್ರ ಸ್ಥಳಗಳ ಪೈಕಿ ಒಂದಾಗಿದೆ. ನಾಶಿಕ್ ಪಟ್ಟಣದಲ್ಲಿ ಹರಿದಿರುವ ಗೋದಾವರಿ ನದಿ ತಟದಲ್ಲಿ ನೆಲೆಸಿರುವ ಕಾಲಾರಾಮ ದೇವಸ್ಥಾನ ಒಂದು ಪ್ರಖ್ಯಾತ ತೀರ್ಥ ಯಾತ್ರಾ ಕೇಂದ್ರವಾಗಿದೆ. ರಾಮನಿಗೆ ಮುಡಿಪಾದ ಈ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಐತಿಹ್ಯದ ಪ್ರಕಾರ, ಈ ಒಂದು ಸ್ಥಳದಲ್ಲಿಯೆ ರಾಮ 14 ವರ್ಷ ವನವಾಸದಲ್ಲಿ ಅಲೆದಾಡುತ್ತಿದ್ದಾಗ ನಾಶಿಕ್‌ ಪಟ್ಟಣದ ಸಮೀಪದಲ್ಲಿನ ತಪೋವನದಲ್ಲಿ ಇಳಿದುಕೊಂಡಿದ್ದ ಎನ್ನಲಾಗುತ್ತದೆ. ಅಲ್ಲದೆ ಈ ಒಂದು ಪ್ರದೇಶದಲ್ಲೆ, ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದನಂತೆ.

ಚಿತ್ರಕೃಪೆ: Ekabhishek

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ತ್ರ್ಯಂಬಕೇಶ್ವರ : ತ್ರಿಂಬಕೇಶ್ವರ ಎಂತಲೂ ಕರೆಯಲ್ಪಡುವ ಈ ತಾಣವು ನಾಶಿಕ್ ಪಟ್ಟಣದಿಂದ ಕೇವಲ 30 ಕಿ.ಮೀ ದೂರದಲ್ಲಿದ್ದು ಇದರ ಬಳಿಯೆ ಗೋದಾವರಿ ನದಿಯ ಉಗಮ ಸ್ಥಳವು ಸ್ಥಿತವಿದೆ. ಇದೊಂದು ಪ್ರಖ್ಯಾತ ತೀರ್ಥ ಯಾತ್ರಾ ಕೇಂದ್ರಗಳ ಪೈಕಿ ಒಂದಾಗಿದೆ. ಏಕೆಂದರೆ ಭಾರತದಲ್ಲಿ ಕಾಣಬಹುದಾದ ಪವಿತ್ರ 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಗೋದಾವರಿ ನದಿ ತಟದಲ್ಲಿ ನೆಲೆಸಿರುವ ತ್ರಿಂಬಕೇಶ್ವರವೂ ಸಹ ಒಂದಾಗಿದೆ. ಹೀಗಾಗಿ ಶಿವ ಭಕ್ತ ಮಹಾಪೂರವೆ ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಹರಿದುಬರುತ್ತದೆ.

ಚಿತ್ರಕೃಪೆ: Girishkap

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಬಾಸರ : ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯಲ್ಲಿರುವ ಗೋದಾವರಿ ನದಿ ತಟದ ಬಾಸರ ಕ್ಷೇತ್ರವು ಒಂದು ಜನಪ್ರೀಯ ಯಾತ್ರಾ ಕೇಂದ್ರವಾಗಿದೆ. ಏಕೆಂದರೆ ಇಡೀ ಭಾರತದಲ್ಲೆ ಎಲ್ಲಿಯೂ ಕಾಣಲಾಗದ ಸರಸ್ವತಿ ದೇವಿಗೆಂದೆ ಮುಡಿಪಾದ ದೊಡ್ಡ ದೇವಾಲಯ ಈ ಕ್ಷೇತ್ರದಲ್ಲಿದೆ.

ಚಿತ್ರಕೃಪೆ: RameshSharma

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಭದ್ರಾಚಲಂ : ಭದ್ರಾಚಲಂ ಭಾರತದ ದಕ್ಷಿಣ ಭಾಗದ ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ ಹಾಗೂ ಪ್ರಬುದ್ಧ ತೀರ್ಥ ಕ್ಷೇತ್ರ. ಗೋದಾವರಿ ನದಿಯ ತಟದ ಮೇಲೆ ನೆಲೆಸಿರುವ ಭದ್ರಾಚಲಂ ನಗರವು ದೇಶದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದೆ, ಏಕೆಂದರೆ ಈ ಪ್ರದೇಶವನ್ನು ಶ್ರೀ ರಾಮ ಹಾಗೂ ಆತನ ಧರ್ಮ ಪತ್ನಿ ಸೀತೆಯು ನೆಲೆಸಿದ್ದ ನಿವಾಸ ಸ್ಥಾನ ಎಂದು ಹೇಳಲಾಗುತ್ತದೆ. ಶ್ರೀ ರಾಮನ ಹೆಸರಿನಿಂದಾಗಿಯೇ ಭದ್ರಾಚಲಂ ಹಿಂದುಗಳ ಪಾಲಿಗೆ ಪ್ರಸಿದ್ಧ ಯಾತ್ರಾ ಸ್ಥಳವೆನಿಸಿದೆ.

ಚಿತ್ರಕೃಪೆ: Adityamadhav83

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಅಂತರ್ವೇದಿ : ಆಂಧ್ರಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯ ಸಖಿನೇಟಿಪಲ್ಲಿ ತಾಲೂಕಿನಲ್ಲಿ ಗೋದಾವರಿ ತಟದ ಮೇಲೆ ನಲೆಸಿರುವ ಅಂತರ್ವೇದಿ ಎಂಬ ಕ್ಷೇತ್ರವು ಧಾರ್ಮಿಕ ಪ್ರಾಮುಖ್ಯತೆ ಪಡೆದಿದೆ. ಇದನ್ನು ನರಸಿಂಹಕ್ಷೇತ್ರ ಎಂತಲೂ ಸಹ ಕರೆಯಲಾಗುತ್ತದೆ. ವಸಿಷ್ಠ ಗೋದಾವರಿ (ಗೋದಾವರಿಯ ಉಪನದಿ) ನದಿ ತಟದ ಮೇಲೆ ನೆಲೆಸಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಅಂತರ್ವೇದಿಯು ಹೆಸರುವಾಸಿಯಾಗಿದೆ. ಈ ಕ್ಷೇತ್ರ ಎಷ್ಟು ಪವಿತ್ರವಾಗಿದೆ ಎಂದರೆ "ಭಗವಂತನ ಅನುಗ್ರಹದಿಂದ ಇದನ್ನು ಎರಡನೆಯ ವಾರಣಾಸಿ" ಎಂದೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: { pranav }

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ನರ್ಮದಾ : ಏಳು ಪವಿತ್ರ ನದಿಗಳ ಪೈಕಿ ಒಂದಾಗಿರುವ, ರೇವಾ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ನರ್ಮದಾ ನದಿಯು ಸಂಪೂರ್ಣವಾಗಿ ಭಾರತದಲ್ಲೆ ಹರಿಯುವ ನದಿಗಳ ಪೈಕಿ ನಾಲ್ಕನೇಯ ಅತಿ ಉದ್ದದ (1312 ಕಿ.ಮೀ) ನದಿಯಾಗಿದೆ ಹಾಗೂ ಭಾರತದಲ್ಲಿ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಹರಿಯುವ ಕೇವಲ ಮೂರು ಪ್ರಮುಖ ನದಿಗಳ ಪೈಕಿ ಒಂದಾಗಿದೆ. ಇದರ ಉಗಮ ಸ್ಥಾನವು ಮಧ್ಯಪ್ರದೇಶ ರಾಜ್ಯದ ಅನುಪ್ಪುರ ಜಿಲ್ಲೆಯ ಅಮರಕಂಟಕ ಎಂಬಲ್ಲಿರುವ ನರ್ಮದಾ ಕುಂಡ.

ಚಿತ್ರಕೃಪೆ: Ssriram mt

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಓಂಕಾರೇಶ್ವರ : 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿರುವ ಓಂಕಾರೇಶ್ವರವು ನರ್ಮದಾ ನದಿಯ ತಟದಲ್ಲಿದೆ. ಈ ಕ್ಷೇತ್ರವನ್ನು ಮಾಂಧತಾ ಅಥವಾ ಶಿವಪುರಿ ಎಂತಲೂ ಕರೆಯಲಾಗುತ್ತದೆ. ಮೂಲತಃ ಇದೊಂದು ॐ ಆಕಾರದಲ್ಲಿರುವ ನರ್ಮದಾ ನದಿಯಲ್ಲಿ ರುಪಗೊಂಡಿರುವ ದ್ವೀಪವಾಗಿದೆ. ಇಲ್ಲಿ ಪ್ರಣವನಾದ ಓಂಕಾರಕ್ಕೆ ಸಂಬಂಧಿಸಿದ ಶಿವನಿಗೆ ಮುಡಿಪಾದ ಓಂಕಾರೇಶ್ವರ ಹಾಗೂ ಅಮರೇಶ್ವರ ಎಂಬ ಎರಡು ದೇವಸ್ಥಾನಗಳಿವೆ. ಮಧ್ಯಪ್ರದೇಶ ರಾಜ್ಯದ ಖಾಂಡ್ವಾ ಜಿಲ್ಲೆಯಲ್ಲಿರುವ ಈ ತೀರ್ಥ ಕ್ಷೇತ್ರಕ್ಕೆ ಶಿವನ ದರ್ಶನ ಕೋರಿ ಸಾಕಷ್ಟು ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Bernard Gagnon

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಮಾಹೇಶ್ವರ/ಮಹೇಶ್ವರ : ರೋಚಕವಾದ ದಂತ ಕಥೆ, ಮಹಾಭಾರತದಲ್ಲಿ ಉಲ್ಲೇಖ, ನೂರಾರು ಮಂದಿರಗಳ ಉಪಸ್ಥಿತಿಯಿರುವ, ಸೀರೆಗಳಿಗೆ ವಿಶಿಷ್ಟವಾಗಿ ಹೆಸರಾಗಿರುವ ಮಹೇಶ್ವರ, ಮಧ್ಯ ಪ್ರದೇಶ ರಾಜ್ಯದ ಒಂದು ಅದ್ಭುತ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಐತಿಹಾಸಿಕವಾಗಿಯೂ ಹೆಸರುವಾಸಿಯಾದ ಮಹೇಶ್ವರ ಪಟ್ಟಣವು ಖರಗೋನ್ ಜಿಲ್ಲೆಯಲ್ಲಿದೆ. ಇಲ್ಲಿರುವ ಘಾಟುಗಳಲ್ಲಿ ಪ್ರಮುಖವಾದವುಗಳೆಂದರೆ ಅಹಿಲ್ಯಾ ಘಾಟ್, ಪೇಶ್ವಾ ಘಾಟ್, ಮಹಿಳಾ ಘಾಟ್ ಹಾಗೂ ಫನ್ಸೆ ಘಾಟ್. ಸಹಸ್ರಾರ್ಜುನ, ರಾಜೇಶ್ವರಿ, ಬಾಣೇಶ್ವರ ಮಹಾದೇವ, ಅನಂತ ನಾರಾಯಣ, ಭವಾನಿ ಮಾತಾ ಮಂದಿರ, ರಾಮಕೃಷ್ಣ ಮಂದಿರ, ಜ್ವಾಲೇಶ್ವರ ಮಂದಿರ ಹೀಗೆ ಹಲವು ದೇವಾಲಯಗಳನ್ನು ಕಾಣಬಹುದು.

ಚಿತ್ರಕೃಪೆ: Lukas Vacovsky

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಕಾವೇರಿ : ಹಿಂದಿನಿಂದಲೂ ಸನಾತನ ಹಿಂದೂ ಧರ್ಮದಲ್ಲಿ ನೀರಿಗೆ ಅಪಾರವಾದ ಮಹತ್ವ ನೀಡಲಾಗಿರುವುದನ್ನು ಕಾಣಬಹುದು. ಕೇವಲ ದೈಹಿಕ ಕಲ್ಮಶ ಮಾತ್ರವಲ್ಲದೆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳನ್ನೂ ಸಹ ನೀರು ತೊಳೆಯಬಲ್ಲುದು ಎಂದು ನಂಬಲಾಗಿದೆ. ಕಾವೇರಿಯು ಕರ್ನಾಟಕ ಭಾಗದ ಗಂಗೆಯಂತೆ ಪಾವಿತ್ರ್ಯತೆ ಹೊಂದಿರುವ ನದಿಯಾಗಿದೆ. ಕರ್ನಾಟಕದ ಜೀವ ನದಿ ಎಂತಲೂ ಸಹ ಕರೆಯಲ್ಪಡುವ ಕಾವೇರಿಯು ಭಾರತದ ಏಳು ಪವಿತ್ರ ನದಿಗಳ ಪೈಕಿ ಒಂದಾಗಿದೆ. ಕೊಡಗಿನಲ್ಲಿರುವ ತಲಕಾವೇರಿಯು ಇದರ ಉಗಮ ಸ್ಥಾನ ಎಂದು ಪರಿಗಣಿಸಲ್ಪಟ್ಟಿದೆ.

ಚಿತ್ರಕೃಪೆ: Ashwin Kumar

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ತಲಕಾವೇರಿ : ಹಿಂದೂಗಳಿಗೆ ತಲಕಾವೇರಿಯು ಪವಿತ್ರ ಯಾತ್ರಾಸ್ಥಳ. ಬ್ರಹ್ಮಗಿರಿ ಬೆಟ್ಟದಲ್ಲಿರುವ ಇದು ಕಾವೇರಿಯ ಮೂಲ ಎಂದ ಪರಿಗಣಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 1276 ಮೀಟರು ಎತ್ತರದಲ್ಲಿದೆ. ಸದ್ಯ ಇಲ್ಲೊಂದು ಕೆರೆಯಿದ್ದು, ಇಲ್ಲಿ ಕಾವೇರಿಯ ಜನ್ಮವಾಗಿದೆ ಎಂದು ನಂಬಲಾಗಿದೆ. ನದಿಯಿಂದ ಕೆರೆಗೆ ನೀರು ಹರಿಯುತ್ತದೆ. ನಂತರದಲ್ಲಿ ನೀರು ಕೆಳಗೆ ಹರಿದು ಸ್ವಲ್ಪ ದೂರದಲ್ಲಿರುವ ಹರಿಯುವ ನೀರಿನ ಮೂಲವನ್ನು ಸೇರುತ್ತದೆ. ಇದರಲ್ಲಿ ವಿಶೇಷ ದಿನಗಳಲ್ಲಿ ಸ್ನಾನ ಮಾಡುವುದು ಪವಿತ್ರ ಎಂದು ನಂಬಲಾಗಿದೆ.

ಚಿತ್ರಕೃಪೆ: GoDakshin

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ತಿರುಮಕೂಡಲ ನರಸೀಪುರ : ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ತ್ರಿಮಕೂಟ ಎಂಬ ಸಂಸ್ಕೃತ ಪದದಿಂದ ಕಾಲ ಉರುಳಿದಂತೆ ತಿರುಮಕೂಡಲ ನರಸೀಪುರ ಎಂಬ ಹೆಸರು ಬಂದಿದೆ. ಅದರಂತೆ ಇಲ್ಲಿ ಕಾವೇರಿ, ಕಬಿನಿ (ಕಪಿಲಾ) ಹಾಗೂ ಸ್ಫಟಿಕ ಸರೋವರ (ಗುಪ್ತಗಾಮಿನಿ) ಒಂದಕ್ಕೊಂದು ಸಂಗಮಗೊಂಡು ಈ ಕ್ಷೇತ್ರವನ್ನು ಪವಿತ್ರವನ್ನಾಗಿಸಿದೆ. ಇಲ್ಲಿ ಗುಪ್ತಗಾಮಿನಿಯು ರಹಸ್ಯಮಯವಾಗಿದ್ದು ಕಣ್ಣಿಗೆ ಗೋಚರಿಸುವುದಿಲ್ಲ.

ಚಿತ್ರಕೃಪೆ: romana klee

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಕೃಷ್ಣ: ಮಹಾರಾಷ್ಟ್ರದ ಪ್ರಖ್ಯಾತ ಪ್ರವಾಸಿ ತಾಣ ಮಹಾಬಳೇಶ್ವರದ ಬಳಿ ಈ ನದಿಯು ಉಗಮಗೊಂಡು ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹರಿದು ಕೊನೆಗೆ ಬಂಗಾಳ ಕೊಲ್ಲಿಯಲ್ಲಿ ಸೇರುತ್ತದೆ. ಪ್ರತಿ ರಾಜ್ಯಗಳಲ್ಲೂ ಈ ನದಿಯ ತಟಗಳ ಮೇಲೆ ಕೆಲವು ಜನಪ್ರೀಯ ತೀರ್ಥ ಯಾತ್ರಾ ಕೇಂದ್ರಗಳಿರುವುದನ್ನು ನೋಡಬಹುದು.

ಚಿತ್ರಕೃಪೆ: Bhanutpt

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಅಮರರಾಮ : ಪಂಚರಾಮ ಕ್ಷೇತ್ರಗಳ ಪೈಕಿ ಒಂದಾಗಿರುವ ಅಮರರಾಮವು ಕೃಷ್ಣಾ ನದಿಯ ತಟದ ಮೇಲೆ ನೆಲೆಸಿರುವ ಒಂದು ಪುಣ್ಯ ಕ್ಷೇತ್ರವಾಗಿದೆ. ಆಂಧ್ರದ ಗುಂಟೂರು ಜಿಲ್ಲೆಯ ಅಮರಾವತಿ ಪಟ್ಟಣದಲ್ಲಿ ಅಮರಲಿಂಗೇಶ್ವರನಾಗಿ ಶಿವಲಿಂಗವು ಪ್ರತಿಷ್ಠಾಪಿಸಲ್ಪಟ್ಟಿದೆ. ಕಥೆಯ ಪ್ರಕಾರ, ಇಂದ್ರನು ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ. ಗುಂಟೂರಿನಿಂದ ಈ ದೇವಸ್ಥಾನಕ್ಕೆ ತೆರಳುವುದು ಸುಲಭವಾಗಿದೆ. ಸಾಕಷ್ಟು ಬಸ್ಸುಗಳು ದೇವಸ್ಥಾನದವರೆಗೂ ದೊರೆಯುತ್ತವೆ. ದೇವಸ್ಥಾನ ಸಂಕೀರ್ಣದಲ್ಲಿ ಮುಖ್ಯ ದೇಗುಲವಲ್ಲದೆ ಇತರೆ ಸನ್ನಿಧಿಗಳೂ ಸಹ ಇವೆ.

ಚಿತ್ರಕೃಪೆ: RameshSharma

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಪವಿತ್ರ ನದಿಗಳು, ಪುಣ್ಯ ಕ್ಷೇತ್ರಗಳು:

ಶ್ರೀಶೈಲಂ : ಕೃಷ್ಣಾ ನದಿ ತಟದಲ್ಲಿ ನೆಲೆಸಿರುವ ಶ್ರೀಶೈಲಂ, ದೇಶದ 12 ಪವಿತ್ರ ಜ್ಯೋತಿರ್ಲಿಂಗ ಧಾಮಗಳ ಪೈಕಿ ಒಂದಾಗಿದ್ದು ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಪ್ರಖ್ಯಾತಿ ಪಡೆದಿದೆ. ಈ ಪ್ರಮುಖ ದೇವಸ್ಥಾನದ ಹೊರತಾಗಿ ಇಲ್ಲಿ ಹೇಮರೆಡ್ಡಿ ಮಲ್ಲಮನ ದೇವಸ್ಥಾನ ಹಾಗೂ 12 ನೇಯ ಶತಮಾನದ ಪ್ರಸಿದ್ಧ ಕವಿಯತ್ರಿ ಹಾಗೂ ವಚನಗಾರ್ತಿಯಾಗಿದ್ದ ಕರ್ನಾಟಕದ ಅಕ್ಕಮಹಾದೇವಿಯ ಗುಹೆಗಳನ್ನು ನೋಡಬಹುದಾಗಿದೆ. ಈ ಎರಡೂ ಪವಿತ್ರ ಸ್ಥಳಕ್ಕೆ ದರುಶನ ಕೋರಿಯೂ ಸಾಕಷ್ಟು ಭಕ್ತಾದಿಗಳು ಸುತ್ತಮುತ್ತಲಿನ ಸ್ಥಳಗಳಿಂದ ಇಲ್ಲಿಗೆ ಆಗಮಿಸುತ್ತಾರೆ.

ಚಿತ್ರಕೃಪೆ: Zeman

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X