Search
  • Follow NativePlanet
Share
» »ಮಂಗಳೂರಿನ ಈ ದೇವಾಲಯಗಳು ಗೊತ್ತೆ?

ಮಂಗಳೂರಿನ ಈ ದೇವಾಲಯಗಳು ಗೊತ್ತೆ?

By Vijay

ಕರ್ನಾಟಕದ ಬಂದರು ನಗರಿ ಹಾಗೂ ಅದ್ಭುತ ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿರುವ ಸುಂದರ ಜಿಲ್ಲೆ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆ. ನಿಮ್ಗಿದು ಗೊತ್ತೆ ಬಹು ಹಿಂದೆ ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಇದು ಕೆನರಾ ಜಿಲ್ಲೆ ಎಂದೆ ಕರೆಯಲ್ಪಡುತ್ತಿತ್ತು.

ನಂತರ ಈ ಕೆನರಾ ಜಿಲ್ಲೆಯನ್ನು ಬ್ರಿಟೀಷರು ಸುಲಲಿತವಾದ ಆಡಳಿತ ನಿರ್ವಹಿಸಲೆಂದು ತಮಗನುಕೂಲವಾಗುವಂತೆ ಇದನ್ನು ನಾರ್ತ್ ಕೆನರಾ ಹಾಗೂ ಸೌತ್ ಕೆನರಾ ಎಂದು ವಿಭಜಿಸಿದರು. ನಾರ್ತ್ ಕೆನರಾ ಬಾಂಬೆ ಪ್ರಾಂತ್ಯಕ್ಕೆ ಒಳಪಟ್ಟರೆ, ಸೌತ್ ಕೆನರಾ ಮದ್ರಾಸ್ ಪ್ರಾಂತ್ಯದ ಅಧೀನದಲ್ಲಿತ್ತು.

ಮಂಗಳೂರಿನ ಅದ್ಭುತ ಪ್ರವಾಸಿ ಕೇಂದ್ರಗಳು!

ನಂತರ ಭಾಷಾವಾರು ಪ್ರಾಂತ್ಯಗಳಾದ ನಂತರ ಕರ್ನಾಟಕ ರಾಜ್ಯಕ್ಕೆ ಒಳಪಟ್ಟ ಈ ಜಿಲ್ಲೆಗಳು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಾಗಿ ಗುರುತಿಸಿಕೊಂಡವು. ಮಂಗಳೂರು ಆಡಳಿತಾತ್ಮಕ ಕೇಂದ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಒಮ್ಮೊಮ್ಮೆ ಮಂಗಳೂರು ಜಿಲ್ಲೆ ಎಂತಲೂ ಕರೆಯುತ್ತಾರೆ.

ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಮಂಗಳೂರು ತನ್ನಲ್ಲಿರುವ ಕೆಲವು ಧಾರ್ಮಿಕ ಆಕರ್ಷಣೆಗಳಾದ ವಿಶಿಷ್ಟ ದೇವಾಲಯಗಳಿಗೂ ಸಹ ಹೆಸರುವಾಸಿಯಾಗಿದೆ. ಪ್ರಸ್ತುತ ಲೇಖನವು ಮಂಗಳೂರಿನಲ್ಲಿ ಸ್ಥಿತವಿರುವ ಕೆಲವು ವಿಶಿಷ್ಟ ದೇವಾಲಯಗಳ ಕುರಿತು ತಿಳಿಸುತ್ತದೆ. ಸಮಯ ಸಿಕ್ಕರೆ, ಖಂಡಿತ ಒಮ್ಮೆ ಭೇಟಿ ನೀಡಿ.

ವಿಷ್ಣುವಿನ ದೇವಾಲಯ

ವಿಷ್ಣುವಿನ ದೇವಾಲಯ

ಮಂಗಳೂರಿನಲ್ಲಿರುವ ವಿಷ್ಣುವಿನ ಅವತಾರವಾದ ಶ್ರೀ ವೆಂಕಟರಮಣನಿಗೆ ಮುಡಿಪಾದ ದೇವಾಲಯ ಇದಾಗಿದೆ. ಮಂಗಳೂರಿನ ದೊಂಗರ್ಕೇರಿ ಎಂಬಲ್ಲಿ ಈ ದೇವಾಲಯವಿದ್ದು ಸಾಕಷ್ಟು ಜನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ವೈಕುಂಠ ಏಕಾದಶಿಯ ಹಬ್ಬವನ್ನು ಇಲ್ಲಿ ಬಲು ಆದ್ದೂರಿಯಾಗಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Ganeshrao53

ಕಟ್ಟಿಗೆ ಛಾವಣಿ

ಕಟ್ಟಿಗೆ ಛಾವಣಿ

ಈಗಿನ ದೇವಾಲಯಗಳಂತಿರದೆ ಹಳೆಯ ರೀತಿಯಲ್ಲಿ ನಿರ್ಮಿತವಗಿರುವ ಈ ದೇವಾಲಯ ವಿಶಿಷ್ಟವಾಗಿದ್ದು ಬಹು ಜನರ ಗಮನಸೆಳೆಯುತ್ತದೆ.

ಚಿತ್ರಕೃಪೆ: Ganeshrao53

ಔದುಂಬರ ವೃಕ್ಷ

ಔದುಂಬರ ವೃಕ್ಷ

ಮಂಗಳೂರಿನಲ್ಲಿರುವ ಶಿವನಿಗೆ ಮುಡಿಪಾದ ಉಮಾಮಹೇಶ್ವರಿ ದೇವಾಲಯ ಸಾಕಷ್ಟು ಹೆಸರುವಾಸಿಯಾಗಿದೆ. ಈ ದೇವಾಲಯದಾವರಣದಲ್ಲಿರುವ ಔದುಂಬರ ವೃಕ್ಷದ ಉಪಸ್ಥಿತಿ ದತ್ತಾತ್ರೇಯನ ಸನ್ನಿಧಾನಕ್ಕೆ ಹೆಚ್ಚಿನ ಕಳೆ ತಂದಿದೆ. ಹಾಗಾಗಿ ಈ ದೇವಾಲಯದಲ್ಲಿರುವ ದತ್ತಾತ್ರೇಯನ ಸನ್ನಿಧಿಯೂ ಸಹ ಸಾಕಷ್ಟು ಭಕ್ತರಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Ganeshrao53

ಸುಪ್ರಸಿದ್ಧ

ಸುಪ್ರಸಿದ್ಧ

ಮಂಗಳೂರಿನ ಕದ್ರಿ ಎಂಬಲ್ಲಿರುವ ಶಿವನಿಗೆ ಮುಡಿಪಾದ ದೇವಾಲಯವು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಮೂಲತಃ ವಜ್ರಾಯಣ ಬೌದ್ಧರಿಂದ ಈ ದೇವಾಲಯ ನಿರ್ಮಿಸಲಾಗಿತ್ತಾದರೂ ನಂತರ ಬೌದ್ಧ ಧರ್ಮದ ಪ್ರಭಾವ ಕ್ಷಿಣಿಸಿದ ನಂತರ ಇದನ್ನು ಮಂಜುನಾಥ ದೇವಾಲಯವನ್ನಾಗಿ ಪರಿವರ್ತಿಸಲಾಯಿತೆನ್ನಲಾಗಿದೆ.

ಚಿತ್ರಕೃಪೆ: Laxminarasimh

ಮಂಜುನಾಥನಾಗಿ

ಮಂಜುನಾಥನಾಗಿ

ಹತ್ತು ಅಥವಾ ನಂತರದ ಶತಮಾನದಲ್ಲಿ ನಿರ್ಮಿತವಾದ ಈ ದೇವಾಲಯವು ಪ್ರಶುರಾಮರಿಂದ ಸ್ಥಾಪಿತವೆನ್ನಲಾಗುತ್ತದೆ. ಶಿವನು ಪರಶುರಾಮರಿಗೆ ಮಂಜುನಾಥನ ರೂಪದಲ್ಲಿ ದರ್ಶನ ನೀಡಿ ಇಲ್ಲಿ ನೆಲೆಸಿದನೆಂಬ ಪ್ರತೀತಿಯಿದೆ. ಮಂಗಳೂರಿನ ಕದ್ರಿ ಎಂಬ ಚಿಕ್ಕ ಗುಡ್ಡವೊಂದರ ಮೇಲೆ ಸ್ಥಿತವಿರುವ ಈ ದೇವಾಲಯ ನಗರದ ಜನಪ್ರೀಯ ದೇವಾಲಯಗಳಲ್ಲೊಂದಾಗಿದೆ.

ಚಿತ್ರಕೃಪೆ: Vaikoovery

ಪವಿತ್ರ ಏಳು ಕಲ್ಯಾಣಿಗಳು

ಪವಿತ್ರ ಏಳು ಕಲ್ಯಾಣಿಗಳು

ಶಿವನು ಮಂಜುನಾಥನಾಗಿ ಇಲ್ಲಿ ನೆಲೆಸಿದ ನಂತರ ಶಿವನಿಗೆ ಮುಡಿಪಾದ ಸಪ್ತಕೋಟಿ ಮಂತ್ರಗಳು ಶಿವನ ಆದೇಶದಂತೆ ಪ್ರಸ್ತುತ ಸಪ್ತ ತೀರ್ಥಗಳಾಗಿವೆ ಎಂದು ಇಲ್ಲಿ ಕಂಡುಬರುವ ಏಳು ಕೊಳಗಳಾಗಿವೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Vaikoovery

ಕುದ್ರೋಳಿ

ಕುದ್ರೋಳಿ

ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಒಂದಾಗಿದೆ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಾಲಯ. ಮಂಗಳೂರಿನ ಕುದ್ರೋಳಿ ಎಂಬ ಪ್ರದೇಶದಲ್ಲಿ ಶಿವನಿಗೆ ಮುಡಿಪಾದ ಈ ದೇವಾಲಯವಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರವೆ ಕುದ್ರೋಳಿ.

ಚಿತ್ರಕೃಪೆ: Karunakar Rayker

ಕ್ರಾಂತಿಪುರುಷ

ಕ್ರಾಂತಿಪುರುಷ

ಕಾರಣಿಕ ಕ್ಷೇತ್ರವೆಂದೇ ಹೆಸರುಗಳಿಸಿರುವ ಕುದ್ರೋಳಿಯಲ್ಲಿ ಸ್ಥಿತವಿರುವ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವು ಕ್ರಾಂತಿಪುರುಷ ಎಂದೆ ಕರೆಯಲಾಗುವ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡಿದ್ದು ನಗರದಲ್ಲಿರುವ ಪ್ರಮುಖ ದೇವಾಲಯಗಳ ಪೈಕಿ ಒಂದಾಗಿದೆ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ.

ಚಿತ್ರಕೃಪೆ: Premkudva

ಬೋಲಾರಾ

ಬೋಲಾರಾ

ಮಂಗಳೂರಿನ ಬೋಲಾರಾ ಪ್ರದೇಶದಲ್ಲಿ ಒಂಭತ್ತನೆಯ ಶತಮಾನದ ಈ ಪುರಾತನ ದೇವಾಲಯವಿದೆ. ಈ ದೇವಿಯಿಂದಲೆ ನಗರಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಕನ್ಯಾಮಣಿಗಳು ಭಕ್ತಿಯಿಂದ ಈ ದೇವಿಯನ್ನು ಬೇಡಿ, ವೃತವನ್ನು ಆಚರಿಸಿದರೆ ತಾವು ಅಪೇಕ್ಷಿಸಿದಂತಹ ಪತಿಯು ದೊರಕುತ್ತಾನೆ ಎಂಬ ನಂಬಿಕೆಯಿದೆ. ಮಂಗಳೂರಿನಲ್ಲಿದ್ದಾಗ ಭೇಟಿ ನೀಡಲೇಬೇಕಾದ ದೇವಸ್ಥಾನ ಇದಾಗಿದೆ. ಇದೆ ಮಂಗಳಾದೇವಿಯ ದೇವಾಲಯ.

ಚಿತ್ರಕೃಪೆ: Ssriram mt

ರಘೋತ್ತಮ ತೀರ್ಥರು

ರಘೋತ್ತಮ ತೀರ್ಥರು

ಗೋವಾದಲ್ಲಿ ಕೇಂದ್ರ ಮಠವನ್ನು ಹೊಂದಿರುವ ದ್ವೈತ ಸಂಪ್ರದಾಯದ ಗೋಕರ್ನ ಪಾರ್ಥಕಾಳಿ ಮಠವು ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ಒಂದು ಶಾಖೆಯನ್ನು ಹೊಂದಿದೆ. ಈ ಮಠದ ಮೂಲ ಸ್ಥಾಪಕರ ಕುರಿತು ಸಂಶೋಧನೆ ಇನ್ನೂ ನಿಖರವಾಗಿ ಮಾಡಬೇಕಾಗಿದೆಯಾದರೂ ಸದ್ಯದ ಇತಿಹಾಸದ ಮೂಲಕ ತಿಳಿದುಬರುವ ವಿಷಯವೆಂದರೆ, ಶ್ರೀ ರಘೋತ್ತಮ ತೀರ್ಥರು ಇದರ ಸಂಸ್ಥಾಪಕರು ಎಂದು ಹೇಳಲಾಗುತ್ತದೆ. ಮೂರನೇಯ ಪೀಠಾಧಿಪತಿಗಳಾಗಿದ್ದ ಜೀವೋತ್ತಮರ ನಂತರ ಇದು ಜೀವೋತ್ತಮ ಮಠ ಎಂತಲೂ ಸಹ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Ganeshrao53

ಭಗವತಿ ದೇವಾಲಯ

ಭಗವತಿ ದೇವಾಲಯ

ಮಂಗಳೂರು ನಗರದ ಹೃದಯ ಭಾಗದಲ್ಲಿ ಸ್ಥಿತವಿರುವ ಹಂಪನಕಟ್ಟ ಪ್ರದೇಶದಿಂದ ಅತಿ ಸನಿಹಕ್ಕೆ ಸ್ಥಿತವಿರುವ ಕುದ್ರೋಳಿ ಭಗವತಿ ದೇವಾಲಯವು ಸಾಕಷ್ಟು ವಿಶೇಷವೆನಿಸಿದೆ. ಚಿರುಂಬಾ ಭಗವತಿ ದೇವಿಗೆ ಮುಡಿಪಾದ ವಿಶಿಷ್ಟ ವಿನ್ಯಾಸದ ಈ ಆಕರ್ಷಕ ದೇವಸ್ಥಾನವು ಕರ್ನಾಟಕ ಹಾಗೂ ಕೇರಳದ ಶಿಲ್ಪಿಗಳ ಕೊಡುಗೆಯನ್ನು ಹೊಂದಿದೆ. ಸುಮಾರು 800 ವರ್ಷಗಳಷ್ಟು ಪುರಾತನವಾದ ಈ ದೇವಾಲಯ ಎರಡು ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಸ್ಥಿತವಿದೆ.

ಚಿತ್ರಕೃಪೆ: Anup256j

ಉಲ್ಲಾಳ

ಉಲ್ಲಾಳ

ವಿಷ್ಣು-ಶಿವರ ಪ್ರತೀಕವಾಗಿ ಕಾಣಲಾಗುವ ಮುತ್ತಪ್ಪನ ದೇವಾಲಯವು ಮಂಗಳೂರಿನ ಉಲ್ಲಾಳದ ಬಳಿ ಸ್ಥಿತವಿದೆ. ಮೂಲತಃ ಕೇರಳದಲ್ಲಿ ಸಾಕಷ್ಟು ಜನಪ್ರೀಯವಾಗಿರುವ ಮುತ್ತಪ್ಪನ ದೇವಾಲಯದಂತೆಯೆ ಹಾಗೂ ಅಲ್ಲಿನ ಜನರ ಸಂಸ್ಕೃತಿಯ ಪ್ರಭಾವ ಇಲ್ಲಿ ಸ್ವಲ್ಪ ಮಟ್ಟಿಗೆ ಬೀರಿರುವುದರಿಂದ ಈ ವಿಶೇಷ ದೇವಾಲಯವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Madhushree.R

ಕದ್ರಿ

ಕದ್ರಿ

ಮಂಗಳೂರಿನ ಕದ್ರಿಯಲ್ಲಿರುವ ದುರ್ಗಾ ಪರಮೇಶ್ವರಿ ಸನ್ನಿಧಾನವೂ ಸಹ ಚಿಕ್ಕದಾಗಿದ್ದರೂ ಬಲು ಚೊಕ್ಕದಾಗಿರುವ ದೇವಿಯ ಆಲಯವಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಉತ್ಸವಗಳು ಜರುಗುತ್ತವೆ.

ಚಿತ್ರಕೃಪೆ: Vaikoovery

ವಿ ಟಿ ರಸ್ತೆ

ವಿ ಟಿ ರಸ್ತೆ

ಗೋಪಾಲಸ್ವಾಮಿ ದೇವಸ್ಥಾನ, ಇಸ್ಕಾನ್ ರಾಧಾ ಕೃಷ್ಣ ಮಂದಿರವಿದೆಯಾದರೂ ಮಂಗಳೂರಿನ ವಿ ಟಿ ರಸ್ತೆಯ ಕೃಷ್ಣ ಮಂದಿರವು ಹಳೆಯದಾದ ದೇವಾಲಯವಾಗಿದ್ದು ಮೊದಲಿನಿಂದಲೂ ಸಾಕಷ್ಟು ಜನಪ್ರೀಯತೆಗಳಿಸಿರುವ ದೇವಾಲಯವಾಗಿದೆ.

ಚಿತ್ರಕೃಪೆ: Ganeshrao53

ವಿಶೇಷ

ವಿಶೇಷ

ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮಿ ಹಾಗೂ ಜ್ಞಾನ ಬುದ್ಧಿಗಳಿಗೆ ಅಧಿನಾಯಕನಾದ ಗಣೇಶನು ಒಂದೆಡೆ ನೆಲೆಸಿರುವ ತುಸು ಅಪರೂಪವೆಂದೆ ಹೇಳಬಹುದಾದ ಲಕ್ಷ್ಮಿ ಗಣಪತಿ ದೇವಾಲಯವನ್ನು ಮಂಗಳೂರು ನಗರದಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Ganeshrao53

ಗೌಡ ಸಾರಸ್ವತ

ಗೌಡ ಸಾರಸ್ವತ

ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆ ಹೊಂದಿರುವ ಶಕ್ತಿ ದೇವಿಯ ದೇವಾಲಯ ಇದಾಗಿದೆ. ಮಂಗಳೂರು ನಗರದಲ್ಲಿರುವ ಅತಿ ಪುರಾತನ ದೇವಾಲಯಗಳಲ್ಲೊಂದಾದ ಮಹಾಮಾಯಾ ಅಮ್ಮನವರ ದೇವಾಲಯ ಇದಾಗಿದ್ದು ಗೋವಾದಲ್ಲಿ ನೆಲೆಸಿದ್ದ ಗೌಡ ಸಾರಸ್ವತ ಸಮುದಾಯದ ಹಿರಿಯ ಪೂರ್ವಿಕರು ಹದಿನಾರನೇಯ ಶತಮಾನದಲ್ಲಿ ಇಲ್ಲಿಗೆ ವಲಸೆ ಬಂದು ಅಮ್ಮನವರ ಈ ದೇವಾಲಯ ಪ್ರತಿಷ್ಠಾಪಿಸಿದ್ದಾರೆ. ನಂತರ ಕಾಶಿ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ 2000 ರಲ್ಲಿ ಇದನ್ನು ಪುನರ್ ಪ್ರತಿಷ್ಠಾಪಿಸಲಾಗಿದೆ.

ಚಿತ್ರಕೃಪೆ: Ganeshrao53

ಶಕ್ತಿ

ಶಕ್ತಿ

ನವರಾತ್ರಿ, ರಥಯಾತ್ರೆ, ಫಾಲ್ಗುಣ ಶುದ್ಧ ಪಾಡ್ಯ ಹೀಗೆ ಹಲವಾರು ಪೂಜೆಗಳು ಈ ದೇವಿ ದೇವಾಲಯದಲ್ಲಿ ಬಲು ಆದರ, ವಿಜೃಂಭಣೆ, ಭಕ್ತಿ ಶೃದ್ಧೆಗಳಿಂದ ನೆರವೇರುತ್ತದೆ. ಸಾಕಷ್ಟು ಪ್ರಸಿದ್ಧ ಪಡೆದಿರುವ ಈ ಮಹಾಯಮಾಯ ದೇವಾಲಯವನ್ನು ಕುಡ್ತೇರಿ ಮಹಾಮಾಯಾ ದೇವಸ್ಥಾನ ಎಂತಲೆ ಕರೆಯುತ್ತಾರೆ.

ಚಿತ್ರಕೃಪೆ: Ganeshrao53

ಆಂಜನೇಯ

ಆಂಜನೇಯ

ಆಂಜನೇಯನಿಗೆ ಮುಡಿಪಾದ, ಸಾಕಷ್ಟು ಮಹತ್ವ ಪಡೆದಿರುವ ಮುಖ್ಯಪ್ರಾಣ ದೇವರ ಈ ಆಂಜನೇಯ ದೇವಾಲಯವು ಮಂಗಳೂರಿನಲ್ಲಿದ್ದು ಸಾಕಷ್ಟು ಗಮನಸೆಳೆಯುತ್ತದೆ.

ಚಿತ್ರಕೃಪೆ: Ganeshrao53

ರಥ ಬೀದಿ

ರಥ ಬೀದಿ

ಮಂಗಳೂರಿನಲ್ಲಿರುವ ಕಾರ್ ಸ್ಟ್ರೀಟ್ ಅಥವಾ ರಥ ಬೀದಿ ಬಹಳವೆ ಪ್ರಸಿದ್ಧವಾದ ಸ್ಥಳವಾಗಿದೆ. ಇಲ್ಲಿ ಹತ್ತು ಹಲವು ದೇವಾಲಯಗಳನ್ನು ಕಾಣಬಹುದಾದ ಸುಂದರ ಸ್ಥಳವಾಗಿದೆ. ಇಲ್ಲಿರುವ ಹಲವು ದೇವಾಲಯಗಳ ಪೈಕಿ ಅಪರೂಪದ ಜೊತೆ ಎಂದು ಹೆಳಬಹುದಾದ ದೇವಾಲಯ ಇದಾಗಿದೆ. ಕಾಳಿಕಾ ದೇವಿಯು ಅಂಬೆ ಅಥವಾ ಅಂಬಾ ಮಾತೆಯಾಗಿ ಹಾಗೂ ಜೊತೆಯಲ್ಲಿ ವಿನಾಯಕ ನೇಲೆಸಿರುವ ದೇವಾಲಯ ಇದಾಗಿದೆ.

ಚಿತ್ರಕೃಪೆ: Ganeshrao53

ಬಜ್ಪೆ

ಬಜ್ಪೆ

ಮಂಗಳೂರಿನ ಬಜ್ಪೆಯಲ್ಲಿ ವಿಷ್ಣುವಿನ ಅವತಾರವೆನ್ನಲಾಗುವ ವಿಠೋಬನ ದೇವಾಲಯವಿದ್ದು ಸಾಕಷ್ಟು ಜನ ಭಕ್ತರನ್ನು ಈ ಅಪರೂಪದ ದೇವಾಲಯ ಆಕರ್ಷಿಸುತ್ತದೆ.

ಚಿತ್ರಕೃಪೆ: Ganeshrao53

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X