Search
  • Follow NativePlanet
Share
» »ಅಪರೂಪದ ಹರಿಹರೇಶ್ವರ ದೇಗುಲ

ಅಪರೂಪದ ಹರಿಹರೇಶ್ವರ ದೇಗುಲ

ಜವಳಿ ಉದ್ಯಮಕ್ಕೆ ಹೆಸರಾದ ದಾವಣಗೆರೆ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಕೈಗಾರಿಕೆಗಳಿಗೆ ಹೆಸರಾದ ಈ ಜಿಲ್ಲೆ ಪ್ರವಾಸೋದ್ಯಮಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

By Divya

ಜವಳಿ ಉದ್ಯಮಕ್ಕೆ ಹೆಸರಾದ ದಾವಣಗೆರೆ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಕೈಗಾರಿಕೆಗಳಿಗೆ ಹೆಸರಾದ ಈ ಜಿಲ್ಲೆ ಪ್ರವಾಸೋದ್ಯಮಕ್ಕೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲಿ ಹರಿಹರೇಶ್ವರ ದೇವಾಲಯವೂ ಒಂದು. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಈ ದೇಗುಲದಿಂದಲೇ ಈ ಊರಿಗೆ ಹರಿಹರ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಹರಿಹರ ನಗರದ ಹೃದಯ ಭಾಗದಲ್ಲೇ ಇದೆ. 1224ರಲ್ಲಿ ಹೊಯ್ಸಳರ ದೊರೆ 2ನೇ ನರಸಿಂಹನ ದಂಡನಾಯಕ ಪೊಲ್ವಾಳನು ಈ ದೇವಸ್ಥಾನವನ್ನು ನಿರ್ಮಿಸಿದನು ಎಂದು ಶಾಸನ ಸಾರುತ್ತದೆ.

ದಾವಣಗೆರೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Harihareshwar Tourism

PC: wikipedia.org

ಗುಡಿಯೊಳಗೆ
ಇಲ್ಲಿ ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿಕೊಂಡ ಮೂರ್ತಿಯಾಗಿದೆ. ಕಪ್ಪು ಬಣ್ಣದ ಕಲ್ಲಿನ ಮೂರ್ತಿಯಾದ ಹರಿಹರೇಶ್ವರ ಮೂರ್ತಿಯು ಸುಮಾರು ಏಳು ಅಡಿ ಎತ್ತರವಿದೆ. ಈ ಮೂರ್ತಿಯ ಎದುರು ನಂದಿ ವಿಗ್ರಹವಿಲ್ಲ. ಬದಲಿಗೆ ಇಲ್ಲೇ ಬಲಭಾಗದಲ್ಲಿರುವ ಚಿಕ್ಕ ಶಿವನ ಗುಡಿಯ ಎದುರು ಇರುವುದನ್ನು ನೋಡಬಹುದು. ಇದರೊಟ್ಟಿಗೆ ರಾಮೇಶ್ವರ ಗುಡಿಯೂ ಇದೆ. ದೇವಸ್ಥಾನದ ಮುಂಭಾಗದಲ್ಲಿ ಎರಡು ಆಕರ್ಷಕ ದೀಪಸ್ತಂಭಗಳಿವೆ. ಇವುಗಳ ಬುಡದಲ್ಲಿ ಪುಟ್ಟದಾದ ನಂದಿ ಮೂರ್ತಿಯನ್ನು ಕೆತ್ತಲಾಗಿದೆ.

ದೇಗುಲದ ರಚನೆ
ದೇವಾಲಯದ ಕೆತ್ತನೆ ಹಾಗೂ ವಾಸ್ತುಶಿಲ್ಪಗಳು ಬಹಳ ಸೊಗಸಾಗಿವೆ. ನೇರವಾಗಿ ಹಾಗೂ ತಲೆಕೆಳಗಾಗಿ ಕಾಣಿಸುವಂತಹ ಕಂಬಗಳು, ಗರ್ಭಗುಡಿ, ನವರಂಗ, ವಿಶಾಲವಾದ ಮುಖಮಂಟಪ ಹಾಗೂ ಮುಖಮಂಟಪದಲ್ಲಿಯೇ 60 ಸೂಕ್ಷ್ಮ ಕಲಾಕೃತಿಯ ಕಂಬಗಳಿವೆ. ಈ ದೇವಾಲಯದಲ್ಲಿ ಮುಖಮಂಟಪವೇ ಸುಖನಾಸಿಯಾಗಿರುವುದು ವಿಶೇಷ.

ದೇವಾಲಯದ ಎಡ ಹಾಗೂ ಬಲಭಾಗದಿಂದ ನವರಂಗಕ್ಕೆ ಹೋಗಲು ಎರಡು ದ್ವಾರಗಳಿವೆ. ಈ ಎರಡು ದ್ವಾರದಲ್ಲೂ ಸುಂದರವಾಗಿರುವ ಎರಡು ಚಿಕ್ಕ ಮುಖಮಂಟಪ ಇರುವುದನ್ನು ಕಾಣಬಹುದು. ಕೆಲವು ಪ್ರಮುಖ ಕಾರಣಗಳಿಗಾಗಿ ನವರಂಗಕ್ಕೆ ಹೋಗಲು ಇರುವ ದ್ವಾರಗಳನ್ನು ಮುಚ್ಚಲಾಗಿದೆ. ದೇವಸ್ಥಾನದ ಎದುರಿನಿಂದ ನೋಡಿದರೆ ಗತಕಾಲದ ಸುಂದರ ಐತಿಹಾಸವು ಕಣ್ಮುಂದೆ ಬಂದಂತಾಗುತ್ತದೆ.

Harihareshwar Tourism

PC: wikipedia.org

ಇತಿಹಾಸ
ಸ್ಥಳ ಪುರಾಣದ ಪ್ರಕಾರ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿಹರರು ಜೊತೆಗೂಡಿ ಸಂಹಾರ ಮಾಡಿದರು ಎಂದು ಹೇಳಲಾಗುತ್ತದೆ. ಈ ದೇವಾಲಯದ ಪಕ್ಕದಲ್ಲೇ ಒಂದು ಉದ್ಭವ ಗಣಪತಿಯಿದೆ. ಇದು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತದೆ ಎನ್ನಲಾಗುತ್ತದೆ.

ಬೆಂಗಳೂರಿನಿಂದ 279 ಕಿ.ಮೀ. ವ್ಯಾಪ್ತಿಯಲ್ಲಿ ಈ ದೇಗುಲವಿದೆ. ದಾವಣಗೆರೆಯ ನಗರದಲ್ಲಿ ಉತ್ತಮ ಗುಣಮಟ್ಟದ ಹೋಟೆಲ್‍ಗಳ ವ್ಯವಸ್ಥೆ ಇರುವುದರಿಂದ, ವಸತಿ ವ್ಯವಸ್ಥೆಗೆ ಯಾವುದೇ ತೊಂದರೆ ಉಂಟಾಗದು. ಇಲ್ಲಿಯ ಹತ್ತಿರದ ಆಕರ್ಷಕ ದೇಗುಲವೆಂದರೆ ಶ್ರೀ ರಾಘವೇಂದ್ರ ಸ್ವಾಮಿ ಮಠ, 108 ಲಿಂಗೇಶ್ವರ ಸ್ವಾಮಿ ದೇವಸ್ಥಾನ, ವಿಠ್ಠಲ ಮಂದಿರ, ನಾರಾಯಣ ಆಶ್ರಮ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ.

ದಾವಣಗೆರೆ ತಲುಪುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Read more about: davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X