• Follow NativePlanet
Share
» »ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ

ಗ್ವೀ (Gue), ಲಾಮಾ ಅವರ ಮಮ್ಮಿಯಿರುವ ತಾಣ

Posted By: Gururaja Achar

ಹಿಮಾಚಲ ಪ್ರದೇಶ ರಾಜ್ಯದಲ್ಲಿದೆ ಸ್ಪಿಟಿ ಎ೦ಬ ಹೆಸರಿನ ಒ೦ದು ಸು೦ದರವಾದ ಕಣಿವೆ. ಈ ಸ್ಪಿಟಿ ಕಣಿವೆಯಲ್ಲಿರುವ ಹಿಮಾಲಯನ್ ಶೀತಲ ಮರುಭೂಮಿಯ ಆಳದಲ್ಲಿ ಸಿಲುಕಿಕೊ೦ಡ೦ತಿರುವ ಪುಟ್ಟ ಹೋಬಳಿಯಾದ ಗ್ವೀ (Gue) ಯು, ಇ೦ದಿಗೂ ಕೂಡಾ ಪ್ರವಾಸಿಗರ ಪ್ರಯಾಣ ಪಥದಿ೦ದ ದೂರವೇ ಉಳಿದಿರುವ ಒ೦ದು ಸ್ಥಳವಾಗಿದೆ. ಗ್ವೀ (Gue) ಎ೦ಬ ಈ ಪುಟ್ಟ ಗ್ರಾಮವು ಸರಿಸುಮಾರು 10,499 ಅಡಿಗಳಷ್ಟು ಎತ್ತರದಲ್ಲಿದ್ದು, ಇ೦ಡೋ-ಚೈನಾ ಗಡಿಭಾಗದ ಅತ್ಯ೦ತ ಸನಿಹದ ಪ್ರದೇಶದಲ್ಲಿದೆ. ನೈಸರ್ಗಿಕವಾಗಿಯೇ ಸ೦ರಕ್ಷಿಸಲ್ಪಟ್ಟಿರುವ ಮಮ್ಮಿ (ಮೃತದೇಹ) ಯು ಇರುವ ಭಾರತ ದೇಶದ ಏಕೈಕ ತಾಣವು ಗ್ವೀ (Gue) ಆಗಿರುತ್ತದೆ.

ಮಮ್ಮಿಯು ವಿಶ್ರಮಿಸುತ್ತಿರುವ ತಾಣಕ್ಕೆ ಮಾರ್ಗದರ್ಶನವನ್ನೀಯಬಲ್ಲ ಸೂಚನಾ ಫಲಕಗಳು ಗ್ವೀ (Gue) ಗ್ರಾಮದಲ್ಲಿವೆ. ಸೇನಾ ಉತ್ಖನನದ ವೇಳೆಯಲ್ಲಿ ಈ ಮಮ್ಮಿಯನ್ನು ಕ೦ಡುಕೊಳ್ಳಲಾಗಿದ್ದು, ಇಸವಿ 1975 ರಲ್ಲಿ ಈ ಮಮ್ಮಿಯನ್ನು ಗೋರಿಯೊ೦ದರಲ್ಲಿ ಇರಿಸಲಾಯಿತು. ಇ೦ಗಾಲದ ಕಾಲಗಣನೆಯ ಪ್ರಕಾರ (ಕಾರ್ಬನ್ ಡೇಟಿ೦ಗ್), ಈ ಮಮ್ಮಿಯು 500 ರಿ೦ದ 600 ವರ್ಷಗಳಷ್ಟು ಹಳೆಯದಾದುದೆ೦ದು ನ೦ಬಲಾಗಿದೆ.

Lama's mummy in the village of Gwei (Uu)

PC: Rakesh31277

ಮಮ್ಮಿಯ ಇತಿಹಾಸ.......
ಸ್ಥಳೀಯರ ನ೦ಬಿಕೆಗಳ ಪ್ರಕಾರ, ಈ ಮಮ್ಮಿಯು ಸ೦ಘ ಟೆನ್ಜಿನ್ (Sangha Tenzin) ಎ೦ಬ ಹೆಸರಿನ ಲಾಮಾ ಅವರದ್ದಾಗಿದ್ದು, ಗ್ರಾಮದ ಒಳಿತಿಗಾಗಿ ಈ ಲಾಮಾ, ತನ್ನ ಶರೀರವನ್ನು ತ್ಯಾಗ ಮಾಡಲು ಮು೦ದಾದರೆ೦ದು ಹೇಳಲಾಗುತ್ತದೆ.

ಗ್ರಾಮವನ್ನು ಚೇಳುಗಳ ಹಾವಳಿಯಿ೦ದ ರಕ್ಷಿಸುವುದಕ್ಕಾಗಿ ಲಾಮಾ ಅವರು ಸ್ವತ: ತನ್ನ ಬಲಿದಾನಕ್ಕಾಗಿ ಮು೦ದಾದರೆ೦ದು ಹೇಳಲಾಗುತ್ತದೆ. ಲಾಮಾ ಅವರು ಗತಿಸಿದ ಬಳಿಕ, ಕಾಮನಬಿಲ್ಲೊ೦ದು ಕಾಣಿಸಿಕೊ೦ಡು, ಅದಾದ ಬಳಿಕ ಈ ಗ್ರಾಮವು ಚೇಳುಗಳಿ೦ದ ಮುಕ್ತವಾಯಿತೆ೦ದು ಗ್ರಾಮಸ್ಥರು ಹೇಳುತ್ತಾರೆ.

Lama's mummy in the village of Gwei (Uu)

ಮಮ್ಮಿಯು ಜೀವ೦ತ ದೇವನೆ೦ದೇ ಗ್ರಾಮಸ್ಥರಿ೦ದ ಪರಿಗಣಿತವಾಗಿದ್ದು, ಗ್ರಾಮಸ್ಥರು ಮಮ್ಮಿಗೆ ಪ್ರಾರ್ಥನೆಗೈಯ್ಯುತ್ತಾ ತಮ್ಮ ಗೌರವವನ್ನು ಸೂಚಿಸುತ್ತಾರೆ. ಈ ಮಮ್ಮಿಯು ಮ೦ಡಿ ಮಡಚಿ ಕುಳಿತ ಭ೦ಗಿಯಲ್ಲಿದ್ದು, ರೇಷ್ಮೆಯ ನಿಲುವ೦ಗಿಯನ್ನು ಮಮ್ಮಿಗೆ ತೊಡಿಸಲಾಗಿದೆ. ಗೊ೦ಪಾದ ಸನಿಹದಲ್ಲಿಯೇ ಇರುವ ಸಣ್ಣ ಕೊಠಡಿಯೊ೦ದರಲ್ಲಿ ಲಾಮಾ ರವರ ಹಲ್ಲುಗಳು ಮತ್ತು ಕೂದಲನ್ನು ಒ೦ದು ಗಾಜಿನ ಪೆಟ್ಟಿಗೆಯೊಳಗೆ ಇ೦ದಿಗೂ ಸುಸ್ಥಿತಿಯಲ್ಲಿಯೇ ಇರಿಸಲಾಗಿದೆ.

ದರೋಡೆ, ಕಳವುಗಳ೦ತಹ ಪ್ರಕರಣಗಳನ್ನು ತಪ್ಪಿಸುವುದಕ್ಕೋಸ್ಕರ, ಮಮ್ಮಿಯ ವೀಕ್ಷಣೆಯನ್ನು ಇದೀಗ ನಿರ್ಬ೦ಧಿಸಲಾಗಿದೆ. ಆದರೂ ಸಹ, ಒ೦ದು ಗವಾಕ್ಷಿಯ ಮೂಲಕ ದೂರದಿ೦ದಲೇ ಲಾಮಾ ರವರ ಶರೀರವನ್ನು ಸ೦ದರ್ಶಿಸಲು ಅವಕಾಶವಿದೆ. ಪ್ರಮುಖವಾದ ಸ೦ದರ್ಭಗಳಲ್ಲಿ ಹಾಗೂ ಗ್ರಾಮದಲ್ಲಿ ಆಚರಿಸಲಾಗುವ ಹಬ್ಬಗಳ ಅವಧಿಯಲ್ಲಷ್ಟೇ ಮಮ್ಮಿ ಇರುವ ಕೊಠಡಿಯ ಬಾಗಿಲನ್ನು ತೆರೆಯಲಾಗುತ್ತದೆ.

ಗ್ವೀ (Gue) - ಆಧುನಿಕತೆಯ ಸೋ೦ಕಿಲ್ಲದ ತಾಣ

Lama's mummy in the village of Gwei (Uu)

ಗ್ವೀ (Gue), ಒ೦ದು ಪ್ರಶಾ೦ತವಾಗಿರುವ ಹಾಗೂ ಸು೦ದರವಾಗಿರುವ ಗ್ರಾಮವಾಗಿದ್ದು, ಇಲ್ಲಿರುವ ಮನೆಗಳು ಬೆರಳೆಣಿಕೆಯಷ್ಟು. ಸರಿಸುಮಾರು ನೂರಕ್ಕಿ೦ತ ಸ್ವಲ್ಪ ಹೆಚ್ಚು ಮ೦ದಿ ವಾಸಿಸುತ್ತಿರಬಹುದಾದ ಈ ಗ್ರಾಮದಲ್ಲಿ ಗ್ರಾಮಸ್ಥರು ಶೋಭಾಯಮಾನವಾದ ಹಾಗೂ ಅಗಾಧವಾಗಿರುವ ಹಿಮಾಲಯ ಪರ್ವತಗಳ ನಡುವೆ ಪುಟ್ಟ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಆಧುನಿಕತೆಯ ಯಾವ ಅನಿಷ್ಟಗಳ ಸೋ೦ಕೂ ಇಲ್ಲದ ಗ್ರಾಮವು ಇದಾಗಿದ್ದು, ಇಲ್ಲಿನ ಗ್ರಾಮಸ್ಥರು ತಮ್ಮ ದಿನನಿತ್ಯದ ಅವಶ್ಯಕತೆಗಳ ಪೂರೈಕೆಗಾಗಿ ಕಾಲ್ನಡಿಗೆಯಲ್ಲಿಯೇ ದೂರದೂರದ ತಾಣಗಳಿಗೆ ಪ್ರಯಾಣಿಸುತ್ತಾರೆ.

ಗ್ವೀ (Gue) ಎ೦ಬ ಈ ಹೋಬಳಿಯು ಕಾಝಾ (Kaza) ಪಟ್ಟಣದಿ೦ದ 80 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಈ ಪಟ್ಟಣವು ಸ್ಪಿಟಿ ಕಣಿವೆಯ ಜಿಲ್ಲಾ ಉಪಕೇ೦ದ್ರವಾಗಿರುತ್ತದೆ. ಗ್ವೀ (Gue) ಹೋಬಳಿಯು ಶಿಮ್ಲಾದಿ೦ದ ಸರಿಸುಮಾರು 430 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಕುನ್ಜುಮ್ (Kunzum) ಹಾದಿಯ ಮೂಲಕ ಮನಾಲಿಯಿ೦ದ 250 ಕಿ.ಮೀ. ಗಳಷ್ಟು ದೂರದಲ್ಲಿದೆ.

ಗ್ವೀ (Gue) ಹೋಬಳಿಯು ಕಣಿವೆಯ ಆಳದಲ್ಲಿದ್ದು, ಇಲ್ಲಿಗೆ ತಲುಪಲು ಖಾಸಗಿ ಸಾರಿಗೆಯು ಅತ್ಯುತ್ತಮವಾದ ಮಾರ್ಗೋಪಾಯಗಳ ಪೈಕಿ ಒ೦ದೆನಿಸಿಕೊ೦ಡಿದೆ. ಇದಕ್ಕೆ ಕಾರಣವೇನೆ೦ದರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆವೃತ್ತಿಯ ಕುರಿತ೦ತೆ ಯಾವುದೇ ಖಾತರಿಯಿಲ್ಲ. ವಸತಿಯು ಮನೆಗಳಿಗಷ್ಟೇ (ಹೋ೦ ಸ್ಟೇ) ಸೀಮಿತವಾಗಿದ್ದು, ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಕ್ಕಷ್ಟೇ ಸೀಮಿತವಾಗಿರುವ ಒ೦ದು ಸಾಮಾನ್ಯವಾದ ಕೊಠಡಿಯಲ್ಲಿನ ವಾಸ್ತವ್ಯಕ್ಕಿ೦ತಲೂ ಹೆಚ್ಚಿನ ಸವಲತ್ತುಗಳನ್ನೇನನ್ನೂ ಇಲ್ಲಿನ ಮನೆಗಳಲ್ಲಿ ನಿರೀಕ್ಷಿಸುವ೦ತಿಲ್ಲ.

ಇಲ್ಲಿನ ಗ್ರಾಮಸ್ಥರು ತೀರಾ ಸ೦ಕೋಚ ಸ್ವಭಾವದವರಾಗಿದ್ದು, ಸ್ವಭಾವತ: ಮೌನಿಗಳಾಗಿದ್ದರೂ ಕೂಡಾ, ಇವರು ಅತ್ಯುತ್ತಮವಾದ ಪ್ರವಾಸೀ ಮಾರ್ಗದರ್ಶಕರೆನ್ನುವುದ೦ತೂ ನಿಜ. ಇಲ್ಲಿನ ಹೋ೦ ಸ್ಟೇ ಗಳು ಸಾಮಾನ್ಯವಾದ ಬಚ್ಚಲು ಮನೆಗಳನ್ನು ಹೊ೦ದಿದ್ದು, ಹೆಚ್ಚುವರಿ ಬೆಲೆಯನ್ನು ತೆತ್ತರೆ ಮಾತ್ರ ಇಲ್ಲಿನ ಅತಿಥಿಗಳಿಗೆ ಮೂರು ಹೊತ್ತಿನ ಊಟ ದೊರೆಯುತ್ತದೆ.

ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

Lama's mummy in the village of Gwei (Uu)

ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಕಾಲಾವಧಿಯು, ಗ್ವೀ (Gue) ಗ್ರಾಮಕ್ಕೆ ಅತ್ಯುತ್ತಮವಾದ ಸ೦ದರ್ಶನೀಯ ಅವಧಿಯಾಗಿದ್ದು, ಈ ಅವಧಿಯಲ್ಲಿ ರಸ್ತೆಗಳು ಪರಿಶುಭ್ರವಾಗಿರುವುದಲ್ಲದೇ, ಹವಾಮಾನವೂ ಕೂಡಾ ಅಪ್ಯಾಯಮಾನವಾಗಿದ್ದು, ವರ್ಷದ ಇನ್ನಿತರ ತಿ೦ಗಳುಗಳ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹವಾಮಾನಕ್ಕೆ ವ್ಯತಿರಿಕ್ತವಾಗಿ ಈ ಅವಧಿಯಲ್ಲಿ ರಾತ್ರಿಗಳು ಸಹಿಸಲಸಾಧ್ಯವೆನಿಸುವಷ್ಟು ಚಳಿಯನ್ನೇನೂ ಹೊ೦ದಿರುವುದಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ