Search
  • Follow NativePlanet
Share
» »ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

By Vijay

ಶ್ರವಣಬೆಳಗೊಳವು ಹಾಸನ ಜಿಲ್ಲೆಯಲ್ಲಿರುವ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಪ್ರಮುಖವಾಗಿರುವ ಪ್ರವಾಸಿ ತಾಣ. ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ 58'8" ಅಡಿಗಳಷ್ಟು ಎತ್ತರದ ಬಾಹುಬಲಿಯ ಮೂರ್ತಿಯಿರುವುದೆ ಈ ತಾಣದ ಪ್ರಮುಖ ಆಕರ್ಷಣೆ ಅಲ್ಲದೆ ಜೈನರ ಪ್ರಮುಖ ಧಾರ್ಮಿಕ ಕೇಂದ್ರವೂ ಆಗಿದೆ ಶ್ರವಣಬೆಳಗೊಳ, ಇತೆರೆ ಹಲವರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ.

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಬಾಹುಬಲಿ ಅಥವಾ ಗೊಮಟೇಶ್ವರನ ಪ್ರತಿಮೆ
ಚಿತ್ರಕೃಪೆ: romana klee

ಶ್ರವಣಬೆಳಗೊಳದ ಗೊಮ್ಮಟ ಪ್ರತಿಮೆ:

ಜೈನ ಧರ್ಮದವರಿಗೆ ಪೂಜ್ಯನಾದ ಗೊಮ್ಮಟನ ಬೃಹತ್ ಏಕ ಶಿಲಾ ಪ್ರತಿಮೆಯು ಶ್ರವಣಬೆಳಗೊಳದಲ್ಲಿದೆ. ಈ ಪ್ರತಿಮೆಯು ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಏಕಶಿಲಾ ಪ್ರತಿಮೆಗಳ ಪೈಕಿ ಒಂದಾಗಿದ್ದು ಸುಮಾರು 58 ಅಡಿಗಳಷ್ಟು ಎತ್ತರವಿದೆ. ಶ್ರವಣ ಬೆಳಗೊಳದಲ್ಲಿರುವ ವಿಂಧ್ಯಗಿರಿ ಎಂಬ ಬೆಟ್ಟದ ಮೇಲೆ ಗೊಮ್ಮಟನ ಈ ಪ್ರತಿಮೆಯನ್ನು ಗ್ರಾನೈಟು ಕಲ್ಲಿನಲ್ಲಿ ಕಡೆಯಲಾಗಿದ್ದು ನೋಡಲು ಆಕರ್ಷಕವಾಗಿದೆ. ಕೆತ್ತನೆಯ ಸೂಕ್ಷ್ಮತೆಯು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಕ್ರಿ.ಶ.973 ರಲ್ಲಿ ಚಾವುಂಡರಾಯನು ಅರಿಷ್ಟ ನೇಮಿ ಎಂಬ ಶಿಲ್ಪಿಯಿಂದ ಈ ಪ್ರತಿಮೆಯ ನಿರ್ಮಾಣ ಮಾಡಿದನೆನ್ನುತ್ತದೆ ಇತಿಹಾಸ.

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಬಾಹುಬಲಿ ಪ್ರತಿಮೆಯಿರುವ ವಿಂಧ್ಯ ಬೆಟ್ಟ
ಚಿತ್ರಕೃಪೆ: Sissssou

ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಾಚಾರಿಯ ಶಿಷ್ಯನೆ೦ದೂ ಸಹ ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ " ಎಂಬಾತನು ಈ ಪ್ರತಿಮೆಯನ್ನು ಕಡೆದನು ಎನ್ನಲಾಗಿದೆ. ಈ ಪ್ರತಿಮೆಯಿರುವ ವಿಂಧ್ಯಗಿರಿ ಬೆಟ್ಟ ತಲುಪಲು ಸುಮಾರು 700 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ವಿಶೇಷವೆಂದರೆ ಹತ್ತಲಾಗದವರಿಗೆ ಡೋಲಿ ಅಥವಾ ಪಲ್ಲಕ್ಕಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿರುವುದನ್ನು ಕಾಣಬಹುದು.

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಪ್ರತಿಮೆಯತ್ತ ಕೊಂಡೊಯ್ಯುವ ಮೆಟ್ಟಿಲುಗಳು
ಚಿತ್ರಕೃಪೆ: cotaro70s

ಜೈನರ ಈ ಪುಣ್ಯ ಕ್ಷೇತ್ರದಲ್ಲಿ ಸಾಕಷ್ಟು ಜೈನ ಮಠಗಳು, ಬಸದಿಗಳನ್ನು ನೋಡಬಹುದಾಗಿದೆ. ಪ್ರಾಚೀನವಾದ ಹಾಗೂ ಪ್ರವಾಸಿ ಆಕರ್ಷಣೆಗಳಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯನ್ನೂ ಸಹ ಇಲ್ಲಿ ದರ್ಶಿಸಬಹುದಾಗಿದೆ. ಹಿಂದೂಗಲಿಗೆ ಹೇಗೆ ಕಾಶಿ ಪವಿತ್ರವಾಗಿದೆಯೊ ಅದೇ ರೀತಿಯಲ್ಲಿ ಜೈನರಿಗೂ ಸಹ ಇದು ಪವಿತ್ರ ಕ್ಷೇತ್ರವಾಗಿದ್ದು "ಜೈನರ ಕಾಶಿ" ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುತ್ತದೆ. ಮತ್ತೊಂದು ವಿಶೇಷವೆಂದರೆ ಇಲ್ಲಿನ ಗೊಮ್ಮಟ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕವನ್ನು ಏರ್ಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜೈನ ಭಕ್ತಾದಿಗಳು ದೇಶದೆಲ್ಲೆಡೆಯಿಂದ ಇಲ್ಲಿಗೆ ಬರುತ್ತಾರೆ.

ತಲುಪುವ ಬಗೆ:

ಶ್ರವಣಬೆಳಗೊಳವನ್ನು ಬೆಂಗಳೂರಿನಿಂದ ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ ಮಾರ್ಗವಾಗಿ ಒಟ್ಟು 144 ಕಿ.ಮೀ ಕ್ರಮಿಸಿ ತಲುಪಬಹುದು. ಯಾವುದೆ ರೈಲು ನಿಲ್ದಾಣಗಳಿಲ್ಲ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ. ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು.

ಗೊಮ್ಮಟ ನೆಲೆನಿಂತಿರುವ ಜೈನರ ಪುಣ್ಯ ಕ್ಷೇತ್ರ

ಶ್ರವಣಬೆಳಗೊಳ ನಗರದ ಮಧ್ಯದಲ್ಲಿರುವ ಕಲ್ಯಾಣಿ
ಚಿತ್ರಕೃಪೆ: Ilya Mauter

ವಸತಿ ವ್ಯವಸ್ಥೆ : ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳ ವ್ಯವಸ್ಥೆಯಿದ್ದು, ವಸತಿ ಗೃಹಗಳ ಮುಖ್ಯ ಕಛೇರಿ ಬಸ್ ನಿಲ್ಧಾಣದ ಪಕ್ಕದಲ್ಲಿರುವ ವಿದ್ಯಾನಂದ ನಿಲಯದ ಹಿಂಬದಿಯಲ್ಲಿದೆ.

ಶ್ರವಣಬೆಳಗೊಳದ ಹತ್ತಿರವಿರುವ ಪ್ರವಾಸಿ ಸ್ಥಳಗಳು: ಬೇಲೂರು (ಸುಮಾರು 80 ಕಿಮೀ), ಹಳೇಬೀಡು (ಸುಮಾರು 60 ಕಿಮೀ), ಯಡಿಯೂರು (ಸುಮಾರು 40 ಕಿಮೀ), ಆದಿ ಚುಂಚನಗಿರಿ (ಸುಮಾರು 25 ಕಿಮೀ), ಮೈಸೂರು (ಸುಮಾರು 80 ಕಿಮೀ), ಶ್ರೀರಂಗಪಟ್ಟಣ (ಸುಮಾರು 65 ಕಿಮೀ), ಮೇಲುಕೋಟೆ(ಸುಮಾರು 50 ಕಿಮೀ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X