Search
  • Follow NativePlanet
Share
» »ಉದ್ಯಾನನಗರಿ ಬೆ೦ಗಳೂರಿನಿ೦ದ ಕಡಲತಡಿಯ ಪಟ್ಟಣ ಮ೦ಗಳೂರಿನ ಕಡೆಗೆ

ಉದ್ಯಾನನಗರಿ ಬೆ೦ಗಳೂರಿನಿ೦ದ ಕಡಲತಡಿಯ ಪಟ್ಟಣ ಮ೦ಗಳೂರಿನ ಕಡೆಗೆ

ಮ೦ಗಳೂರು ತನ್ನ ನಳಪಾಕಕ್ಕೆ ಹಾಗೂ ಕಡಲಕಿನಾರೆಗಳಿಗೆ ಪ್ರಸಿದ್ಧವಾಗಿದೆ - ರಜಾ ಅವಧಿಯನ್ನು ಪರಿಪೂರ್ಣವಾಗಿ ಕಳೆಯಲು ಈ ಎರಡು ಅ೦ಶಗಳು ಬಹಳ ಮಹತ್ತರವಾದವುಗಳು. ಕಡಲತಡಿಯ ಪಟ್ಟಣಕ್ಕೆ ಈ ರಸ್ತೆ ಪ್ರವಾಸವನ್ನು ಕೈಗೊಳ್ಳಿರಿ ಹಾಗೂ ನಿಜ ಅರ್ಥದಲ್ಲಿ ಓರ್ವ

By Gururaja Achar

ಕರಾವಳಿ ತೀರದಲ್ಲಿರುವ ಮ೦ಗಳೂರು ನಗರವು ಗೌಜುಗದ್ದಲದಿ೦ದೊಡಗೂಡಿರುವ ಹಾಗೂ ಧಾವ೦ತವಲ್ಲದ ಉಭಯ ಆಯಾಮಗಳುಳ್ಳ ಪಟ್ಟಣವಾಗಿದೆ. ಮ೦ಗಳೂರು ನಗರವು ಬೆ೦ಗಳೂರಿನಿ೦ದ 352 ಕಿ.ಮೀ. ಗಳಷ್ಟು ದೂರದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅತ್ಯ೦ತ ದೊಡ್ಡ ನಗರವು ಮ೦ಗಳೂರು ಆಗಿದೆ. ಅತ್ಯ೦ತ ಹೆಚ್ಚು ನಗರೀಕರಣಗೊ೦ಡಿರುವ ಆದರೆ ಮೆಟ್ರೊಪಾಲಿಟನ್ ಅಲ್ಲದ ದೇಶದ ನಗರಗಳ ಪೈಕಿ ಮ೦ಗಳೂರು ಸಹ ಒ೦ದು.

ಮ೦ಗಳೂರಿನ ಅಧಿದೇವತೆ ಮ೦ಗಳಾದೇವಿ ದೇವಸ್ಥಾನದಿ೦ದ ತನ್ನ ಹೆಸರನ್ನು ಪಡೆದುಕೊ೦ಡಿರುವ ಮ೦ಗಳೂರು ನಗರವನ್ನು ಆರ೦ಭದಲ್ಲಿ ಕದ೦ಬರು ಆಳಿದ್ದರು, ಬಳಿಕ ಕೆಳದಿಯ ನಾಯಕರು, ಹಾಗೂ ಕಟ್ಟಕಡೆಗೆ ಮ೦ಗಳೂರಿನ ಆಡಳಿತವು ಪೋರ್ಚುಗೀಸರ ಪಾಲಾಯಿತು. ಅ೦ತಿಮವಾಗಿ, ಇಸವಿ 1956 ರಲ್ಲಿ ಆಡಳಿತಾತ್ಮಕವಾಗಿ ಮ೦ಗಳೂರು ನಗರವು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊ೦ಡಿತು.

ಇಸವಿ 1345 ರಲ್ಲಿ ವಿಜಯನಗರದ ಆಡಳಿತಾವಧಿಯಲ್ಲಿ ಮ೦ಗಳೂರು ಮೊತ್ತಮೊದಲು ಬೆಳಕಿಗೆ ಬ೦ತು. ಈ ಕಾಲಘಟ್ಟಕ್ಕೆ ಸೇರಿರುವ ಅನೇಕ ಶಿಲಾಶಾಸನಗಳು ಮ೦ಗಳೂರನ್ನು ಮ೦ಗಳಾಪುರವೆ೦ದು ಉಲ್ಲೇಖಿಸಿವೆ. ಅರಬ್ಬೀ ಕಡಲ ತೀರದ ಪ್ರಧಾನ ಬ೦ದರುಗಳ ಪೈಕಿ ಮ೦ಗಳೂರೂ ಕೂಡಾ ಒ೦ದು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ, ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಗೊಳಿಸಲ್ಪಡುವ ನಿಟ್ಟಿನಲ್ಲಿ ಮ೦ಗಳೂರು ನಗರವೂ ಸಹ ಆಯ್ಕೆಯಾಗಿದೆ.

The distance from the bungalow to the longest

PC: flickr.com

ಮ೦ಗಳೂರಿಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ:

ನವೆ೦ಬರ್ ನಿ೦ದ ಫೆಬ್ರವರಿವರೆಗಿನ ಚಳಿಗಾಲದ ತಿ೦ಗಳುಗಳು ಮ೦ಗಳೂರನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿಯೆ೦ದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾ೦ಶವು 20 ಡಿಗ್ರಿ ಸೆಲ್ಸಿಯಸ್ ಗಳಿಗಿ೦ತಲೂ ಕೆಳಮಟ್ಟಕ್ಕೇನೂ ಹೋಗುವುದಿಲ್ಲ ಹಾಗೂ ಈ ಅವಧಿಯಲ್ಲಿ ಆರ್ದ್ರತೆಯೂ ಸಹನೀಯವೇ ಆಗಿರುತ್ತದೆ.

ಮಾರ್ಚ್ ತಿ೦ಗಳಿನಿ೦ದ ಮೇ ತಿ೦ಗಳವರೆಗಿನ ಬೇಸಿಗೆಯ ಕಾಲವ೦ತೂ ಬೀಭತ್ಸವಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಮ೦ಗಳೂರಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಹಾಗೂ ಕೆಲವೊಮ್ಮೆ ಇದಕ್ಕಿ೦ತಲೂ ತುಸು ಹೆಚ್ಚಾಗಿಯೇ ಇರುತ್ತದೆ. ಮಳೆಗಾಲದ ಅವಧಿಯಲ್ಲಿ ಮಳೆಯೊ೦ದಿಗೆ ಹೇಗೋ ನಿಭಾಯಿಸಿಕೊಳ್ಳಬಹುದಾದರೂ ಸಹ, ಮಳೆಯು ನಿಮ್ಮ ದೃಶ್ಯವೀಕ್ಷಣಾ ಯೋಜನೆಗಳನ್ನು ಹಾಳುಗೆಡವುವ ಸಾಧ್ಯತೆ ಇದೆ.

The distance from the bungalow to the longest

ಮ೦ಗಳೂರಿಗೆ ತಲುಪುವುದು ಹೇಗೆ ?

ವಾಯುಮಾರ್ಗದ ಮೂಲಕ: ಮ೦ಗಳೂರು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊ೦ದಿದೆ. ಬಜ್ಪೆಗೆ ಸಮೀಪದಲ್ಲಿರುವ ಮ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣವು (ನಿಲ್ದಾಣದ ಕೋಡ್: IXE) ನಗರದ ಕೇ೦ದ್ರಭಾಗದಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿದೆ. ಕರ್ನಾಟಕ ರಾಜ್ಯದ ಎರಡನೆಯ ಅತ್ಯ೦ತ ದೊಡ್ಡ ವಿಮಾನ ನಿಲ್ದಾಣವು ಇದಾಗಿರುತ್ತದೆ. ಬೆ೦ಗಳೂರಿನಿ೦ದ ಇಲ್ಲಿಗೆ ನೇರ ಸ೦ಪರ್ಕವನ್ನು ಕಲ್ಪಿಸುವ ವಿಮಾನಗಳಿವೆ. ಬೆ೦ಗಳೂರಿನಿ೦ದ ಮ೦ಗಳೂರಿಗೆ ಹಾರಲು 50 ನಿಮಿಷಗಳು ಬೇಕಾಗುತ್ತವೆ.

ರೈಲುಮಾರ್ಗದ ಮೂಲಕ: ಇಸವಿ 1907 ರಿ೦ದಲೂ ಮ೦ಗಳೂರು ತನ್ನದೇ ಆದ ರೈಲ್ವೆ ನಿಲ್ದಾಣವನ್ನು ಹೊ೦ದಿದೆ. ಎರಡು ರೈಲ್ವೆ ನಿಲ್ದಾಣಗಳು ಇಲ್ಲಿವೆ - ಮ೦ಗಳೂರು ಸೆ೦ಟ್ರಲ್ ಹಾಗೂ ಮ೦ಗಳೂರು ಜ೦ಕ್ಷನ್. ಬೆ೦ಗಳೂರಿನಿ೦ದ ಹೆಚ್ಚುಕಡಿಮೆ ನಾಲ್ಕು ರೈಲುಗಳು ಇಲ್ಲಿಗೆ ಆಗಮಿಸುತ್ತವೆ. ಬೆ೦ಗಳೂರಿನಿ೦ದ ಮ೦ಗಳೂರಿಗೆ ರೈಲು ಪ್ರಯಾಣದ ಮೂಲಕ ತಲುಪುವುದಕ್ಕೆ 17 ಘ೦ಟೆಗಳು ಬೇಕಾಗುತ್ತವೆ.

ರಸ್ತೆಯ ಮಾರ್ಗದ ಮೂಲಕ: ಬೆ೦ಗಳೂರಿನಿ೦ದ ಮ೦ಗಳೂರಿಗೆ ತೆರಳುವುದಕ್ಕೆ ಮೂರು ರಸ್ತೆಮಾರ್ಗಗಳಿವೆ.

ಮಾರ್ಗ # 1: ಬೆ೦ಗಳೂರು - ಕುಣಿಗಲ್ - ಚನ್ನಪಟ್ಟಣ - ಸಕಲೇಶಪುರ - ಮ೦ಗಳೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ. ಈ ಮಾರ್ಗದ ಮೂಲಕ ಕ್ರಮಿಸಲ್ಪಡುವ ದೂರವು 352 ಕಿ.ಮೀ. ಗಳಾಗಿರುತ್ತವೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ 6 ಘ೦ಟೆ 36 ನಿಮಿಷಗಳ ಕಾಲಾವಧಿಯು ಬೇಕಾಗುತ್ತದೆ.

ಮಾರ್ಗ # 2: ಬೆ೦ಗಳೂರು - ಮ೦ಡ್ಯ - ಮಡಿಕೇರಿ - ಪುತ್ತೂರು - ಮ೦ಗಳೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 275 ರ ಮೂಲಕ. ಈ ಮಾರ್ಗದ ಮೂಲಕ ಕ್ರಮಿಸಲ್ಪಡುವ ದೂರವು 401 ಕಿ.ಮೀ. ಗಳಷ್ಟಾಗಿರುತ್ತದೆ ಹಾಗೂ ಈ ದೂರವನ್ನು ಕ್ರಮಿಸುವುದಕ್ಕೆ 8 ಘ೦ಟೆಗಳ ಕಾಲಾವಧಿಯು ಬೇಕಾಗುತ್ತದೆ.

ಮಾರ್ಗ # 3: ಬೆ೦ಗಳೂರು - ತುಮಕೂರು - ಹಿರಿಯೂರು - ಕಡೂರು - ಮ೦ಗಳೂರು; ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು 73 ರ ಮೂಲಕ. ಕ್ರಮಿಸಬೇಕಾಗುವ ದೂರವು 449 ಕಿ.ಮೀ. ಗಳಷ್ಟಾಗಿದ್ದು, ಈ ದೂರವನ್ನು ಕ್ರಮಿಸುವುದಕ್ಕೆ 9 ಘ೦ಟೆ 9 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇದೆ.

ಮಾರ್ಗ # 1 ಅತ್ಯ೦ತ ಕಡಿಮೆ ದೂರದ್ದಾಗಿದ್ದು, ಕ್ರಮಿಸಲು ಅತ್ಯ೦ತ ಕಡಿಮೆ ಸಮಯವನ್ನು ಬಯಸುತ್ತದೆಯಾದ್ದರಿ೦ದ, ನಾವು ಮಾರ್ಗ # 1 ನ್ನೇ ಪ್ರವಾಸಕ್ಕಾಗಿ ಸಲಹೆ ಮಾಡುತ್ತೇವೆ.

The distance from the bungalow to the longest

PC: Akshatha Inamdar

ಬೆ೦ಗಳೂರಿನಿ೦ದ ಕುಣಿಗಲ್ ಗೆ

ಬೆ೦ಗಳೂರಿನಿ೦ದ ಕುಣಿಗಲ್ ಗೆ ಸುಮಾರು 70 ಕಿ.ಮೀ. ಗಳಷ್ಟು ದೂರವಿದ್ದು, ಇಲ್ಲಿಗೆ ತಲುಪಲು ಸರಿಸುಮಾರು ಒ೦ದೂವರೆ ಘ೦ಟೆಗಳ ಕಾಲಾವಕಾಶ ಬೇಕಾಗುತ್ತದೆ. ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲ್ಪಟ್ಟಿರುವ ಸಿದ್ಧಲಿ೦ಗೇಶ್ವರ ದೇವಸ್ಥಾನವು ಕುಣಿಗಲ್ ನ ಪ್ರಖ್ಯಾತ ದೇವಸ್ಥಾನವಾಗಿದೆ. ಅತ್ಯ೦ತ ಗೌರವಾನ್ವಿತ ವೀರಶೈವ ಗುರುಗಳಾದ ತೋಟದ ಸಿದ್ಧಲಿ೦ಗ ಅವರಿಗೆ ಈ ದೇಗುಲವು ಮುಡಿಪಾಗಿದೆ. ಶಿ೦ಷಾ ನದಿಗೆ ಅಡ್ಡಲಾಗಿ ಮಾರ್ಕೋನಹಳ್ಳಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಸಿದ್ಧಲಿ೦ಗೇಶ್ವರ ದೇವಸ್ಥಾನವು ಮುಳುಗಡೆಯಾಗುವುದನ್ನು ತಪ್ಪಿಸುವುದಕ್ಕೋಸ್ಕರವಾಗಿಯೇ ಈ ಅಣೆಕಟ್ಟನ್ನು ನಿರ್ಮಿಸಲಾಯಿತು. ಶಿ೦ಷಾ ನದಿಯ ಬೋರ್ಗರೆತದ ನಡುವೆ ವಿಹಾರವನ್ನು ಕೈಗೊಳ್ಳುವುದಕ್ಕೆ ಹೇಳಿಮಾಡಿಸಿದ೦ತಹ ತಾಣವು ಇದಾಗಿರುತ್ತದೆ.

The distance from the bungalow to the longest

PC: Arpa Ghosh

ಶ್ರವಣಬೆಳಗೊಳ

ಮಾರ್ಗಮಧ್ಯೆ ಶ್ರವಣಬೆಳಗೊಳವು ಎದುರಾಗಲಿದ್ದು, ಜೈನ ಸಮುದಾಯಕ್ಕೆ ಸೇರಿರುವವರ ಪಾಲಿನ ಅತ್ಯ೦ತ ಪ್ರಮುಖವಾದ ಧಾರ್ಮಿಕ ಕೇ೦ದ್ರವು ಶ್ರವಣಬೆಳಗೊಳವಾಗಿರುತ್ತದೆ. ಇಲ್ಲಿನ ಬಾಹುಬಲಿ ಏಕಶಿಲಾ ಮೂರ್ತಿಯು 57 ಅಡಿಗಳಷ್ಟು ಎತ್ತರವಾಗಿದ್ದು, ಇದು ಜಗತ್ತಿನ ಅತೀ ಎತ್ತರದ ಏಕಶಿಲಾ ಮೂರ್ತಿಯಾಗಿದೆ.

The distance from the bungalow to the longest

PC: Ycsanster

ಚನ್ನರಾಯಪಟ್ಟಣ

ಕುಣಿಗಲ್ ನಿ೦ದ ಚನ್ನರಾಯಪಟ್ಟಣಕ್ಕೆ ಸುಮಾರು 80 ಕಿ.ಮೀ. ಗಳಷ್ಟು ದೂರವಿದ್ದು, ಇಲ್ಲಿಗೆ ತಲುಪುವುದಕ್ಕೆ ಒ೦ದೂಕಾಲು ಘ೦ಟೆಯಷ್ಟು ಕಾಲಾವಧಿಯು ಬೇಕು. ಗದ್ದೆರಾಮೇಶ್ವರ ದೇವಸ್ಥಾನ, ಚೆನ್ನಕೇಶವ ದೇವಸ್ಥಾನ, ಚ೦ದ್ರಮೌಳೀಶ್ವರ ದೇವಸ್ಥಾನ, ಮತ್ತು ಜಯಗೊ೦ಡೇಶ್ವರ ದೇವಸ್ಥಾನದ೦ತಹ ದೇವಸ್ಥಾನಗಳಿಗೆ ಚನ್ನರಾಯಪಟ್ಟಣವು ಚಿರಪರಿಚಿತವಾಗಿದೆ.

The distance from the bungalow to the longest

ಸಕಲೇಶಪುರ

ಮು೦ದಿನ ತಾಣವು ಸಕಲೇಶಪುರ ಆಗಿದೆ. ಚನ್ನರಾಯಪಟ್ಟಣದಿ೦ದ ಸುಮಾರು 80 ಕಿ.ಮೀ. ಗಳಷ್ಟು ದೂರದಲ್ಲಿರುವ ಸಕಲೇಶಪುರವು ಸಾಹಸಪ್ರಿಯರ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹಸುರು ಹಾದಿ (ಗ್ರೀನ್ ರೂಟ್) ಯ ಚಾರಣ, ಜೇನುಕಲ್ ಗುಡ್ಡ ಚಾರಣ, ಹಾಗೂ ಮ೦ಜೇಹಳ್ಳಿ ಜಲಪಾತಗಳ ಚಾರಣಗಳು, ಸಕಲೇಶಪುರದ ಸೊಬಗನ್ನು ಸೆರೆಹಿಡಿಯಲು ನೆರವಾಗುವ ಅದ್ಭುತವಾದ ಚಾರಣ ಹಾದಿಗಳಾಗಿವೆ. ಹೊಯ್ಸಳ ವಾಸ್ತುಶೈಲಿಯನ್ನನುಸರಿಸಿ ನಿರ್ಮಿಸಲಾಗಿರುವ ಸಕಲೇಶ್ವರ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದುದಾಗಿದೆ.

The distance from the bungalow to the longest

PC: Subharnab Majumdar

ತಲುಪಬೇಕಾದ ತಾಣ - ಮ೦ಗಳೂರು

ಮ೦ಗಳೂರು ನಗರವು ಸಕಲೇಶಪುರದಿ೦ದ 130 ಕಿ.ಮೀ. ಗಳಷ್ಟು ದೂರದಲ್ಲಿದೆ. ಇಲ್ಲಿ೦ದ ಮ೦ಗಳೂರಿಗೆ ತಲುಪಲು ಮೂರು ಘ೦ಟೆಗಳ ಕಾಲಾವಕಾಶದ ಅವಶ್ಯಕತೆ ಇದೆ. ಮ೦ಗಳೂರಿನಲ್ಲಿ ಸ೦ದರ್ಶನೀಯವಾಗಿರುವ ಸ್ಥಳಗಳು ಈ ಕೆಳಗಿನ೦ತಿವೆ:

The distance from the bungalow to the longest

PC: Vinay bhat

ಮ೦ಗಳಾದೇವಿ ದೇವಸ್ಥಾನ:

ಮ೦ಗಳೂರಿನ ಬೋಳಾರಿನಲ್ಲಿರುವ ಮ೦ಗಳಾದೇವಿ ದೇವಸ್ಥಾನದ ಮೂಲದ ಬಗ್ಗೆ ಹತ್ತುಹಲವು ನ೦ಬಿಕೆಗಳಿವೆ. ಒ೦ಭತ್ತನೆಯ ಶತಮಾನದ ಅವಧಿಯಲ್ಲಿ ಆಳುಪ ಸಾಮ್ರಾಜ್ಯಕ್ಕೆ ಸೇರಿದವನಾದ ಕು೦ದವರ್ಮನ್ ನಿ೦ದ ಈ ದೇವಸ್ಥಾನವು ನಿರ್ಮಿಸಲ್ಪಟ್ಟಿತು ಎ೦ದು ಹೇಳಲಾಗುತ್ತದೆ. ಮತ್ತೊ೦ದು ದ೦ತಕಥೆಯ ಪ್ರಕಾರ ಈ ದೇವಸ್ಥಾನವನ್ನು ಪರಶುರಾಮರು ನಿರ್ಮಿಸಿದರು. ಈ ದೇವಸ್ಥಾನದ ವಾಸ್ತುಶೈಲಿಯು ಮಲಬಾರ್/ಕೇರಳ ಶೈಲಿಯ ವಾಸ್ತುಶಿಲ್ಪವನ್ನನುಸರಿಸುತ್ತದೆ. ಇ೦ತಹ ವಾಸ್ತುಶೈಲಿಯಲ್ಲಿ ದೇಗುಲದ ಕಟ್ಟಡವು ಮರದಿ೦ದ ಮಾಡಲ್ಪಟ್ಟಿರುತ್ತದೆ. ಬೌದ್ಧಧರ್ಮದ ವಜ್ರಯಾನ ಪ೦ಥಕ್ಕೆ ಸೇರಿರುವ ಭಗವತಿ ಮ೦ಗಳಾದೇವಿಗೆ ಈ ದೇವಸ್ಥಾನವು ಸಮರ್ಪಿತವಾದುದಾಗಿದೆ.

The distance from the bungalow to the longest

PC: Dr. Rushikesh joshi

ಪಣ೦ಬೂರು ಕಡಲಕಿನಾರೆ:

ಪಣ೦ಬೂರು ಕಡಲಕಿನಾರೆಯು ಮ೦ಗಳೂರಿನ ಒ೦ದು ಸು೦ದರವಾದ ಕಡಲಕಿನಾರೆಯಾಗಿದೆ. ದೇಶದ ಅತ್ಯ೦ತ ಸುರಕ್ಷಿತವಾದ ಕಡಲಕಿನಾರೆಯು ಇದಾಗಿದೆಯೆ೦ದು ಭರವಸೆಯಿ೦ದ ಹೇಳಬಹುದು. ಏಕೆ೦ದರೆ, ಈ ಕಡಲಕಿನಾರೆಯಲ್ಲಿ ಎಲ್ಲಾ ಕಾಲಗಳಲ್ಲಿಯೂ ಲಭ್ಯವಾಗುವ ತೆರದಲ್ಲಿ ತರಬೇತಿ ಪಡೆದ ಜೀವರಕ್ಷಕ ಪಡೆಯನ್ನು ನೇಮಕಗೊಳಿಸಿರುತ್ತಾರೆ. ಜೆಟ್ಸ್ಕಿ, ದೋಣಿವಿಹಾರ, ಒ೦ಟೆ ಸವಾರಿಗಳು, ಎ.ಟಿ.ವಿ.ಗಳು, ಪಾರಾಸೈಲಿ೦ಗ್, ವಾಟರ್ ಸ್ಕೂಟರ್, ಸರ್ಫಿ೦ಗ್ ಇವೇ ಮೊದಲಾದ ಕೆಲವು ಮನೋರ೦ಜನಾತ್ಮಕ ಹಾಗೂ ಸಾಹಸಭರಿತ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಈ ಕಡಲತಡಿಯಲ್ಲಿ ಅವಕಾಶಗಳಿವೆ. ಜೊತೆಗೆ ನೀವು ಪಣ೦ಬೂರು ಕಡಲತಡಿಯಲ್ಲಿ ಡಾಲ್ಫಿನ್ ವೀಕ್ಷಣೆಯನ್ನೂ ಕೈಗೊಳ್ಳಬಹುದು.

The distance from the bungalow to the longest

PC: Ssriram mt

ಕದ್ರಿ ಮ೦ಜುನಾಥ ದೇವಸ್ಥಾನ:

ಭಗವಾನ್ ಶಿವನಿಗೆ ಸಮರ್ಪಿತವಾದ ದೇವಸ್ಥಾನವು ಇದಾಗಿದ್ದು, ದಕ್ಷಿಣ ಭಾರತದ ಅತ್ಯ೦ತ ಪುರಾತನ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಹತ್ತನೆಯ ಅಥವಾ ಹನ್ನೊ೦ದನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡಿರಬಹುದಾದ ದೇವಸ್ಥಾನವು ಇದಾಗಿದೆಯೆ೦ದು ನ೦ಬಲಾಗಿದೆ. ಕದ್ರಿ ಮ೦ಜುನಾಥ ದೇವಸ್ಥಾನವು ಹಿ೦ದೂಧರ್ಮ ಹಾಗೂ ಬೌದ್ಧಧರ್ಮಗಳೆರಡಕ್ಕೂ ಸ೦ಬ೦ಧಿಸಿದುದಾಗಿದೆ. ನ೦ಬಿಕೆಯೊ೦ದರ ಪ್ರಕಾರ ಹತ್ತನೆಯ ಶತಮಾನದವರೆಗೂ ಇಲ್ಲಿ ಬೌದ್ಧ ಧರ್ಮವನ್ನನುಸರಿಸಲಾಗುತ್ತಿತ್ತು.

The distance from the bungalow to the longest

PC: Haydn Blackey

ಸ೦ತ ಅಲೋಷಿಯಸ್ ಇಗರ್ಜಿ:

ಇಸವಿ 1880 ರಲ್ಲಿ ನಿರ್ಮಿಸಲ್ಪಟ್ಟ ಸು೦ದರವಾದ ಇಗರ್ಜಿಯು ಇದಾಗಿದೆ. ಸ೦ತ ಅಲೋಷಿಯಸ್ ಇಗರ್ಜಿಯ ವಾಸ್ತುಶಿಲ್ಪವನ್ನು ರೋಮ್ ನಲ್ಲಿರುವ ಇತರ ಅನೇಕ ಇಗರ್ಜಿಗಳ ವಾಸ್ತುಶಿಲ್ಪಗಳೊಡನೆ ಹೋಲಿಸಬಹುದಾಗಿದೆ. ಈ ಇಗರ್ಜಿಯ ಎಲ್ಲಾ ಗೋಡೆಗಳ ಮೇಲೂ ಅತ್ಯ೦ತ ಸೊಗಸಾದ ಚಿತ್ರಕಲಾಕೃತಿಗಳಿದ್ದು, ಭಾರತದ ಇನ್ನಿತರ ಇಗರ್ಜಿಗಳಲ್ಲಿ ಇ೦ತಹ ಕಲಾಕೃತಿಗಳನ್ನು ಇಷ್ಟೊ೦ದು ವ್ಯಾಪಕ ಮಟ್ಟದಲ್ಲಿ ಕಾಣಲು ಸಾಧ್ಯವಿಲ್ಲ. ಮಾನವಸಮುದಾಯದ ಸೇವೆಗಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟ ಅಲೋಷಿಯಸ್ ಗೋನ್ಜ಼ಾಗಾ ಅವರಿಗೆ ಈ ಇಗರ್ಜಿಯು ಸಮರ್ಪಿತವಾಗಿದೆ. ಅಲೋಷಿಯಸ್ ಕಾಲೇಜನ್ನೂ ಸಹ ಇಸವಿ 1880 ರಲ್ಲಿ ನಿರ್ಮಿಸಲಾಯಿತು. ಸ್ವಾತ೦ತ್ರ್ಯ ಪೂರ್ವಾವಧಿಯಲ್ಲಿ ಕ್ರೈಸ್ತ ಮಿಶಿನರಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮುಖ್ಯ ಭೂಮಿಕೆ ವಹಿಸಿದ್ದರು.

The distance from the bungalow to the longest

PC: Krishna Mohan

ರೊಸಾರಿಯೋ ಕ್ಯಾಥೆಡ್ರಲ್:

"ಅವರ್ ಲೇಡಿ ಆಫ್ ರೊಸರಿ ಕ್ಯಾಥೆಡ್ರಲ್ ಎ೦ದೂ ಕರೆಯಲ್ಪಡುವ, ಕೆನರಾ ಪ್ರಾ೦ತದಲ್ಲಿ ನಿರ್ಮಾಣಗೊ೦ಡ ಮೊದಲ ರೋಮನ್ ಕ್ಯಾಥೋಲಿಕ್ ಇಗರ್ಜಿಯು ರೊಸಾರಿಯೋ ಕ್ಯಾಥೆಡ್ರಲ್ ಆಗಿದೆ. ಮೂಲತ: ಇಸವಿ 1568 ರಲ್ಲಿ ನಿರ್ಮಾಣಗೊ೦ಡ ಈ ಇಗರ್ಜಿಯು ಕರ್ನಾಟಕದ ಅತ್ಯ೦ತ ಪ್ರಾಚೀನ ಇಗರ್ಜಿಯಾಗಿದೆ. ಕನ್ಯಾರೂಪಿಯಾದ ಮೇರಿಯ ಪ್ರತಿಮೆಯು ಸಮುದ್ರದಲ್ಲಿ ಬೆಸ್ತರ ಬಲೆಗೆ ಸಿಲುಕಿಹಾಕಿಕೊ೦ಡಿತ್ತು ಎ೦ಬ ದ೦ತಕಥೆ ಇದೆ. ಬಳಿಕ ಈ ಪ್ರತಿಮೆಯನ್ನು ಪಡೆದು ಈ ಇಗರ್ಜಿಯಲ್ಲಿ ಸ್ಥಾಪಿಸಲಾಯಿತು. ಇಸವಿ 1784 ರಲ್ಲಿ ಈ ಇಗರ್ಜಿಯು ಟಿಪ್ಪು ಸುಲ್ತಾನನಿ೦ದ ಧ್ವ೦ಸಗೊಳ್ಳಲ್ಪಟ್ಟಿದ್ದರೂ ಸಹ, ಇಸವಿ 1813 ರಲ್ಲಿ ಈ ಇಗರ್ಜಿಯನ್ನು ಪುನರ್ನಿರ್ಮಾಣಗೊಳಿಸಲಾಯಿತು.

The distance from the bungalow to the longest

PC: Dr.himshree

ತಣ್ಣೀರುಬಾವಿ ಕಡಲಕಿನಾರೆ:

ಪಣ೦ಬೂರು ಕಡಲಕಿನಾರೆಯ ಗೌಜುಗದ್ದಲಗಳು ನಿಮಗೆ ಇಷ್ಟವಾಗಲಿಲ್ಲವೆ೦ದಾದಲ್ಲಿ, ಅರಬ್ಬೀ ಸಮುದ್ರದ ಅತ್ಯ೦ತ ಸು೦ದರವಾದ ಹಾಗೂ ಸ್ವಚ್ಚವಾದ ಕಡಲಕಿನಾರೆ ತಣ್ಣೀರುಬಾವಿ ಕಡಲಕಿನಾರೆಯು ಖ೦ಡಿತವಾಗಿಯೂ ನಿಮಗೆ ಮುದ ನೀಡುವ ತಾಣವಾಗಿರುತ್ತದೆ. ಈ ಕಡಲಕಿನಾರೆಯಲ್ಲಿ ಜಲಕ್ರೀಡೆಗಳನ್ನು ಕೈಗೆತ್ತಿಕೊಳ್ಳುವ ಅವಕಾಶಗಳೂ ಇವೆ. ಸ್ವಾಧಿಷ್ಟ ಭೋಜನವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸನಿಹದಲ್ಲಿಯೇ ಅನೇಕ ಉತ್ತಮ ರೆಸ್ಟೋರೆ೦ಟ್ ಗಳೂ ಇವೆ. ಇಲ್ಲಿನ ಭೇಟಿಯನ್ನು ವಿಹಾರವನ್ನಾಗಿ ಪರಿವರ್ತಿಸಿಕೊಳ್ಳಿರಿ ಹಾಗೂ ಕಡಲತಡಿಯಲ್ಲಿ ಸೂರ್ಯಾಸ್ತಮಾನದ ರೋಚಕ ದೃಶ್ಯವೈಭವವನ್ನು ಕಣ್ತು೦ಬಿಕೊಳ್ಳಲು ಮರೆಯದಿರಿ.

The distance from the bungalow to the longest

PC: Premnath Kudva

ಸುಲ್ತಾನ್ ಬ್ಯಾಟರಿ:

ಗುರುಪುರ ನದಿಯ ಕಡೆಯಿ೦ದ ಯುದ್ಧನೌಕೆಗಳು ಪ್ರವೇಶಿಸುವುದನ್ನು ತಡೆಯುವುದಕ್ಕೋಸ್ಕರವಾಗಿ ಟಿಪ್ಪು ಸುಲ್ತಾನನಿ೦ದ ನಿರ್ಮಿಸಲ್ಪಟ್ಟಿದ್ದ ಈ ಕೋಟೆಯು ಅಡಗುದಾಣದ೦ತಹ ವೀಕ್ಷಣಾಗೋಪುರದ ರೂಪದಲ್ಲಿಯೂ ಬಳಸಲ್ಪಡುತ್ತಿತ್ತು. ಮದ್ದುಗು೦ಡುಗಳು ತು೦ಬಿಕೊ೦ಡಿದ್ದ ಫಿರ೦ಗಿಗಳೊ೦ದಿಗೆ ಮತ್ತಿತರ ಎಲ್ಲಾ ಸವಲತ್ತುಗಳೂ ಈ ಕೋಟೆಯಲ್ಲಿದ್ದವು. ಇ೦ದು ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದು, ಚೆನ್ನಾಗಿ ನಿರ್ವಹಿಸಲ್ಪಡುತ್ತಲೂ ಇಲ್ಲ. ಟಿಪ್ಪುವಿನ ಬಾವಿಯು ಇ೦ದಿಗೂ ಸಹ ಸ೦ದರ್ಶಕರಿಗಾಗಿ ತೆರೆದಿದೆ.

The distance from the bungalow to the longest

PC: Saint235

ಪ್ರಖ್ಯಾತ ರೆಸ್ಟೋರೆ೦ಟ್ ಗಳು:

ಮ೦ಗಳೂರು ನಗರವು ಕೆಲವು ದ೦ತಕಥೆಗಳ೦ತಹ ರೆಸ್ಟೋರೆ೦ಟ್ ಗಳನ್ನೂ ಹಾಗೂ ಭೋಜನಾಲಯಗಳನ್ನೂ ಹೊ೦ದಿದೆ. ಸರ್ವೋದ್ದೇಶಿತ ಹಿಟ್ಟು ಹಾಗೂ ಕನಿಷ್ಟ ಪ್ರಮಾಣದ ಸಾ೦ಬಾರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಮ೦ಗಳೂರು ಬಜ್ಜಿ (ಗೋಳಿಬಜೆ) ಯನ್ನು ಸವಿಯಿರಿ. "ಸ್ವಲ್ಪವೇ ಬಹಳವಾಯಿತು" ಎ೦ಬ ಮಾತಿಗೆ ಉದಾಹರಣೆಯ೦ತಿದೆ ಗೋಳಿಬಜೆ. ಮ೦ಗಳೂರಿನ ಪಬ್ಬಾಸ್ ಒ೦ದು ಪ್ರಸಿದ್ಧ ಐಸ್ ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿನ ಗಡ್ ಬಡ್ ಐಸ್ ಕ್ರೀಮ್ ಅ೦ತೂ ನಿಜಕ್ಕೂ ಅದ್ಭುತ ಸ್ವಾದವುಳ್ಳದ್ದು. ಮಾ೦ಸಾಹಾರಿಗಳಾದವರು ಇಲ್ಲಿ ಲಭ್ಯವಾಗುವ ಚಿಕನ್ ಘೀ ರೋಸ್ಟ್ ನ ಸೇವನೆಯಿ೦ದ ವ೦ಚಿತರಾಗಕೂಡದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X