Search
  • Follow NativePlanet
Share
» »ಕರ್ನಾಟಕದ ಐತಿಹಾಸಿಕ ಹಿಂದು ದೇವಾಲಯಗಳು!

ಕರ್ನಾಟಕದ ಐತಿಹಾಸಿಕ ಹಿಂದು ದೇವಾಲಯಗಳು!

By Vijay

ಹಲವಾರು ಐತಿಹಾಸಿಕ ದೇವಾಲಯಗಳು, ಸ್ಮಾರಕಗಳನೊಳಗೊಂಡ ಭಾರತದ ಪ್ರಸಿದ್ಧ ರಾಜ್ಯಗಳ ಪೈಕಿ ಕರ್ನಾಟಕವೂ ಸಹ ಒಂದು. ಸಾವಿರ ಸಾವಿರ ವರ್ಷಗಳ ಇತಿಹಾಸವಿರುವ ಅನೇಕ ಹಿಂದು ದೇವಾಲಯಗಳನ್ನು ಕರ್ನಾಟಕದಲ್ಲೂ ಸಹ ಕಾಣಬಹುದು.

ಕರ್ನಾಟಕದಲ್ಲೆ ಇರುವ ಶಿವನ ಅತಿ ಪ್ರಾಚೀನ ದೇವಾಲಯಗಳು

ಈ ದೇವಾಲಯಗಳು ಇಂದು ಅದ್ಭುತ ಪ್ರವಾಸಿ ಆಕರ್ಷಣೆಗಳಾಗಿ ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ ಸುಂದರ ತಾಣಗಳಾಗಿವೆ. ಅಲ್ಲದೆ ನಮ್ಮ ಗತ ವೈಭವ, ವಾಸ್ತುಶೈಲಿ ಹಾಗೂ ಆಕರ್ಷಕ ಶಿಲ್ಪಕಲೆಗಳನ್ನು ಎತ್ತಿ ತೋರಿಸುವ ಮನಮೋಹಕ ಪ್ರವಾಸಿ ಕೇಂದ್ರಗಳಾಗಿವೆ.

ಪ್ರಸ್ತುತ ಲೇಖನವು ಕರ್ನಾಟಕದ ಕೆಲವು ಭಾಗಗಳಲ್ಲಿ ಕಂಡುಬರುವ ಕೆಲವು ಅಪರೂಪದ ಹಾಗೂ ಪ್ರಾಚೀನವಾದ ಹಿಂದು ದೇವಾಲಯಗಳ ಕುರಿತು ತಿಳಿಸುತ್ತದೆ. ಈ ದೇವಾಲಯಗಳು ಧಾರ್ಮಿಕ ಮಹತ್ವ ಹೊಂದಿರುವುದಲ್ಲದೆ ತಮ್ಮ ಸುಂದರ ಕೆತ್ತನೆಗಳಿಗಾಗಿಯೂ ಹೆಸರುವಾಸಿಯಾಗಿವೆ. ಅಲ್ಲದೆ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳಾಗಿಯೂ ಜನರ ಗಮನ ಸೆಳೆಯುತ್ತವೆ.

ಹೊಸಹೊಳಲು

ಹೊಸಹೊಳಲು

ಹೊಯ್ಸಲ ವಾಸ್ತುಶೈಲಿ ಹೊಂದಿರುವ ಅದ್ಭುತ ಕೆತ್ತನೆಗಳಿಂದ ಕೂಶಿರುವ ಆಕರ್ಷಕ ದೇವಾಲಯ ಇದಾಗಿದೆ. 1250 ರ ಸಮಯದಲ್ಲಿ ಹೊಯ್ಸಳ ದೊರೆ ವೀರ ಸೋಮೇಶ್ವರನಿಂದ ನಿರ್ಮಿಸಲ್ಪಟ್ಟ ಈ ದೇವಾಲಯವು ಲಕ್ಷ್ಮೀನಾರಾಯಣನಿಗೆ ಮುಡಿಪಾದ ದೇವಾಲಯವಾಗಿದೆ. ಪ್ರಸ್ತುತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಈ ಪುರಾತನ ದೇವಾಲಯವನ್ನು ಕಾನಬಹುದಾಗಿದೆ. ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ.

ಚಿತ್ರಕೃಪೆ: Bikashrd

ದೊಡ್ಡಗದ್ದವಳ್ಳಿ

ದೊಡ್ಡಗದ್ದವಳ್ಳಿ

ಹಾಸನ ಜಿಲ್ಲೆಯಲ್ಲಿರುವ ದೊಡ್ಡಗದ್ದವಳ್ಳಿ ಗ್ರಾಮದಲ್ಲಿ ಕಂಡುಬರುವ ಪ್ರಾಚೀನ ಲಕ್ಷ್ಮಿ ದೇವಾಲಯ ಇದಾಗಿದೆ. ತನ್ನ ಅತ್ಯಾಕರ್ಷಕ ವಾಸ್ತುಶೈಲಿ ಹಾಗೂ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿದೆ. ಹಾಸನದಿಂದ ಬೇಲೂರಿಗೆ ತೆರಳುವ ಮಾರ್ಗದಲ್ಲಿ ಸುಮಾರು ಹದಿನಾರು ಕಿ.ಮೀ ಗಳಷ್ಟು ದೂರದಲ್ಲಿ ದೊಡ್ಡಗದ್ದವಳ್ಳಿ ಗ್ರಾಮ ಸಿಗುತ್ತದೆ.

ಚಿತ್ರಕೃಪೆ: Bikashrd

ಯಾರಿಂದ?

ಯಾರಿಂದ?

ಕ್ರಿ.ಶ. 1114 ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟ ಅದ್ಭುತ ಲಕ್ಷ್ಮಿ ದೇವಾಲಯ ಇದಾಗಿದೆ. ಕರ್ನಾಟಕದಲ್ಲಿ ಹೊಯ್ಸಳ ವಾಸ್ತುಶೈಲಿಯಲ್ಲಿ ಪ್ರಪ್ರಥಮವಾಗಿ ನಿರ್ಮಿಸಲ್ಪಟ್ಟ ದೇವಾಲಯಗಳ ಪೈಕಿ ಇದೂ ಒಂದಾಗಿ ಗುರುತಿಸಲ್ಪಡುತ್ತದೆ. ಒಮ್ಮೆ ಭೇಟಿ ಮಾಡಲೇಬೇಕಾದ ದೇವಾಲಯ ಇದಾಗಿದೆ.

ಚಿತ್ರಕೃಪೆ: Bikashrd

ಭದ್ರಾವತಿ

ಭದ್ರಾವತಿ

ಮಲೆನಾಡ ಸುಂದರಿ ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಪಟ್ಟಣ ಎಂದೆ ಖ್ಯಾತಿಗಳಿಸಿದ ಭದ್ರಾವತಿಯಲ್ಲಿ ಈ ಪುರಾತನ ದೇವಾಲಯವನ್ನು ಕಾನಬಹುದಾಗಿದೆ. ವಿಷ್ಣುವಿನ ನರಸಿಂಹನ ಅವತಾರಕ್ಕೆ ಮುಡಿಪಾದ ಈ ದೇವಾಲಯ ಹೊಯ್ಸಳರಿಂದ ಹದಿಮೂರನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಭಾರತೀಯ ಪುರಾತತ್ವ ಇಲಾಖೆಯ ಕರ್ನಾಟಕದ ವಿಭಾಗದಿಂದ ಈ ಸ್ಮಾರಕವು ಸಂರಕ್ಷಿಸಲ್ಪಟ್ಟಿದ್ದು ಇಂದು ಐತಿಹಾಸಿಕ ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಜನರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Dineshkannambadi

ಮೈಸೂರು

ಮೈಸೂರು

ಮೈಸೂರಿನ ಮೈಸೂರು ಅರಮನೆಯ ಆವರಣದಲ್ಲಿರುವ ಈ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ತನ್ನ ಅದ್ಭುತ ಗೋಪುರದಿಂದ ಜನರ ಗಮನ ಸೆಳೆಯುತ್ತದೆ. ಲಕ್ಷ್ಮಿರಮಣಸ್ವಾಮಿ ಅಂದರೆ ವಿಷ್ಣುವಿಗೆ ಮುಡಿಪಾದ ದೇವಾಲಯ ಇದಾಗಿದ್ದು ಮೈಸೂರು ಅರಮನೆಯ ಆವರಣದಲ್ಲಿರುವ ಕೆಲವು ಆಕರ್ಷಕ ದೇವಾಲಯಗಳಲ್ಲಿ ಇದೂ ಸಹ ಒಂದಾಗಿದೆ.

ಚಿತ್ರಕೃಪೆ: Arununnikrishnan089

ಬೇಲೂರು

ಬೇಲೂರು

ಹಾಸನ ಜಿಲ್ಲೆಯ ಬೇಲೂರು ಕರ್ನಾಟಕದ ಅತ್ಯಂತ ಹೆಸರುವಾಸಿಯಾದ ಐತಿಹಾಸಿಕ ತಾಣಗಳಲ್ಲೊಂದಾಗಿದೆ. ಇಲ್ಲಿರುವ ದೇವಾಲಯಗಳು ತಮ್ಮ ಅತ್ಯಾಕರ್ಷಕ ಶಿಲ್ಪಕಲೆಗಳಿಂದಾಗಿ ವಿಶ್ವವಿಖ್ಯಾತವಾಗಿವೆ. ಅಂತಹ ಅದ್ಭುತ ಕಲೆಗಳಿಂದ ಕೂಡಿದ ಬೇಲೂರಿನ ಚೆನ್ನಕೇಶವನ ದೇವಾಲಯವೂ ಸಹ ಒಂದು. ಮೂಲತಃ ವಿಜಯನಾರಾಯಣ ದೇವಸ್ಥಾನ ಎಂದು ಕರೆಯಲ್ಪಡುತ್ತಿದ್ದ ಚೆನ್ನಕೇಶವನ ದೇವಾಲಯವು ಹೊಯ್ಸಳ ದೊರೆ ವಿಷ್ಣುವರ್ಧನನಿಂದ ಯಗಚಿ ನದಿಯ ತಟದಲ್ಲಿ ನಿರ್ಮಿಸಲ್ಪಟ್ಟಿದೆ ಹಾಗೂ ತನ್ನ ಕೆತ್ತನೆಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Bikashrd

ಕರಿಘಟ್ಟ

ಕರಿಘಟ್ಟ

ದ್ವೀಪ ಪಟ್ಟಣವಾದ ಶ್ರೀರಂಗಪಟ್ಟಣದ ಹೊರವಲಯದಲ್ಲಿ ಕೆಲವು ಕಿ.ಮೀ ಗಳಷ್ಟು ದೂರದಲ್ಲಿ ಕರಿಘಟ್ಟ ಎಂಬ ಚಿಕ್ಕ ಗುಡ್ಡವೊಂದಿದೆ. ಈ ಗುಡ್ಡದ ಮೇಲೆ ನೆಲೆಸಿರುವ ವಿಷ್ಣುವಿನ ದೇವಾಲಯವು ಸಾಕಷ್ಟು ಗಮನ ಸೆಳೆಯುತ್ತದೆ. ಕರಿಗಿರಿವಾಸ, ಶ್ರೀನಿವಾಸ ಎಂದೆಲ್ಲ ಕರೆಯಲ್ಪಡುವ ಈ ಶ್ರೀನಿವಾಸನ ದೇವಾಲಯ ಒಂದೊಮ್ಮೆ ಭೇಟಿ ಮಾಡಲೇಬೇಕಾದ ದೇವಸ್ಥಾನವಾಗಿದೆ.

ಚಿತ್ರಕೃಪೆ: Akashbalakrishna

ಬಾದಾಮಿ

ಬಾದಾಮಿ

ಶಾಖಾಂಬರಿ, ವನಶಂಕರಿ ಎಂದೆಲ್ಲ ಗುರುತಿಸಿಕೊಳ್ಳುವ ಶಕ್ತಿ ಸ್ವರೂಪಿಣಿಯಾದ ಶ್ರೀ ಬನಶಂಕರಿ ಅಮ್ಮನವರ ಪುರಾತನ ದೇಗುಲವು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಚೋಳಚಗುಡ್ಡ ಎಂಬಲ್ಲಿದೆ. ಪ್ರತಿ ವರ್ಷ ಜನವರಿಯಂದು ಜರುಗುವ ಬಾದಾಮಿ ಜಾತ್ರೆಯು ಸಾಕಷ್ಟು ಹೆಸರುವಾಸಿಯಾಗಿದ್ದು ಉತ್ತರ ಕರ್ನಾಟಕದ ಬಹುತೇಕ ಭಾಗಗಳಿಂದ ಭಕ್ತಾದಿಗಳು ಈ ಐತಿಹಾಸಿಕ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: G41rn8

ಅಮರಗೋಳ

ಅಮರಗೋಳ

ಧಾರವಾಡ ಜಿಲ್ಲೆಯ ಅಮರಗೋಳ ಎಂಬ ಹಳ್ಳಿಯಲ್ಲಿರುವ ಪುರಾತನ ಬನಶಂಕರಿ ದೇವಾಲಯ ಇದಾಗಿದೆ. ಹದಿಮೂರನೇಯ ಶತಮಾನದಲ್ಲಿ ನಗರ ವಾಸ್ತುಶಿಲಿಯಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಧಾರವಾಡ-ಹುಬ್ಬಳ್ಳಿ ಮಾರ್ಗದಲ್ಲಿ ಬರುವ ಅಮರಗೋಳ ಎಂಬ ಹಳ್ಳಿಯಲ್ಲಿದ್ದು ಹುಬ್ಬಳ್ಳಿಯಿಂದ ಒಂಭತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಈ ದೇವಾಲಯದ ಹತ್ತಿರ ಸುರಪ್ಸಿದ್ಧ ಶಿಲ್ಪಿ ಅಮರ ಶಿಲ್ಪಿ ಜಕಣಾರಿಯಿಂದ ನಿರ್ಮಿಸಲ್ಪಟ್ಟ ಶಂಕರನಾರಾಯಣನ ದೇಗುಲವಿರುವುದನ್ನೂ ಸಹ ಕಾಣಬಹುದಾಗಿದೆ.

ಚಿತ್ರಕೃಪೆ: Siddharth Pujari

ಹಳಸಿ

ಹಳಸಿ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಳಸಿ ಎಂಬ ಹಳ್ಳಿಯಲ್ಲಿ ಈ ಪ್ರಾಚೀನ ದೇವಾಲಯವಿದೆ. ಕದಂಬರ ರಾಜಧಾನಿಯಾಗಿದ್ದ ಹಳಸಿಯು ಖಾನಾಪುರದಿಂದ 14 ಕಿ.ಮೀ ಹಾಗೂ ಕಿತ್ತೂರಿನಿಂದ 25 ಕಿ.ಮೀ ಗಳಷ್ಟು ದೂರದಲ್ಲಿದೆ. ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಈ ಪುರಾತನ ದೇವಾಲಯವು ಐದನೇಯ ಶತಮಾನದಲ್ಲಿ ನಿರ್ಮಿತವಾದ ಅದ್ಭುತ ದೇವಾಲಯ ಎಂದೆ ಹೇಳಲಾಗಿದೆ.

ಚಿತ್ರಕೃಪೆ: Manjunath Doddamani Gajendragad

ವರಾಹಸ್ವಾಮಿ

ವರಾಹಸ್ವಾಮಿ

ಅಳಿದುಳಿದ ಕದಂಬ ವಾಸ್ತುಶೈಲಿಗೆ ಅತ್ಯಂತ ಮಾದರಿ ಉದಾಹರಣೆಯಾಗಿರುವ ಈ ದೇವಾಲಯವು ವಿಷ್ಣುವಿನ ಅವತಾರವಾದ ವರಾಹಸ್ವಾಮಿಯು ಲಕ್ಷ್ಮಿಯೊಂದಿಗೆ ನೆಲೆಸಿರುವ ದೇವಾಲಯವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸುವ ದೇವಾಲಯವಾಗಿ ಪ್ರವಾಸಿಗರ ಗಮನಸೆಳೆಯುತ್ತದೆ.

ಚಿತ್ರಕೃಪೆ: Manjunath Doddamani Gajendragad

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X