Search
  • Follow NativePlanet
Share
» »ಮುಂಬೈನ ಐದು ಪ್ರಮುಖ ಗಣಪತಿಗಳು

ಮುಂಬೈನ ಐದು ಪ್ರಮುಖ ಗಣಪತಿಗಳು

ಭಾರತವು ಸಾಕಷ್ಟು ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿರುವ ದೇಶ. ಸರ್ವ ಧರ್ಮಿಯರು ಬಾಳುವ ಈ ದೇಶದಲ್ಲಿ ಹಬ್ಬ ಹರಿದಿನಗಳಿಗೇನೂ ಕಮ್ಮಿ ಇಲ್ಲ. ಯಾವ ಧರ್ಮಗಳ ಪ್ರಮುಖ ಹಬ್ಬಗಳೇನೆ ಇರಲಿ ಎಲ್ಲವೂ ಅತ್ಯಂತ ವಿಜೃಂಭಣೆ ಹಾಗೂ ಸಡಗರದಿಂದ ಈ ನಮ್ಮ ಕರ್ಮ ಭೂಮಿಯಲ್ಲಿ ಆಚರಿಸಲ್ಪಡುತ್ತವೆ. ಅಂತೆಯೆ ಕೆಲವು ಹಬ್ಬಗಳು ಕೋಮು ಸೌಹಾರ್ದತೆಯನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿವೆ.

ಮುಸ್ಲಿಮ್ ಧರ್ಮದವರ ಈದ್ ಹಬ್ಬವಾಗಲಿ, ಕ್ರಿಶ್ಚಿಯನ್ನರ ಕ್ರಿಸ್ಮಸ್ ಆಗಲಿ ಎಲ್ಲ ಹಬ್ಬಗಳಲ್ಲೂ ಇತರೆ ಧರ್ಮದವರೂ ಸಹ ಒಂದೆ ಹುಮ್ಮಸ್ಸು, ಉತ್ಸಾಹಗಳಿಂದ ಪಾಲ್ಗೊಂಡು ಭಾತೃತ್ವವನ್ನು ಎತ್ತಿ ತೋರುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಂತೆ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿಯನ್ನೂ ಸಹ ಅತಿ ವಿಜೃಂಭಣೆ ಹಾಗೂ ಸಡಗರಗಳಿಂದ ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ ಹೀಗೆ ಹಲವು ರಾಜ್ಯಗಳು ಗಣೇಶ ಚತುರ್ಥಿಯನ್ನು ಆಚರಿಸುವ ದೃಷ್ಟಿಯಿಂದ ಮಂಚೂಣಿಯಲ್ಲಿವೆ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ ರಾಜ್ಯ ಅತಿ ಪ್ರಮುಖ ರಾಜ್ಯವಾಗಿದೆ. ಸಾರ್ವಜನಿಕವಾಗಿ ಆಚರಿಸಲ್ಪಡುವ ಗಣೇಶ ಉತ್ಸವಗಳು ಈ ಹಬ್ಬದ ಪ್ರಮುಖ ಆಕರ್ಷಣೆಗಳು. ಮೇಲೆ ಉಲ್ಲೇಖಿಸಲಾದ ಎಲ್ಲಾ ರಾಜ್ಯಗಳಲ್ಲಿರುವ ಬಹುತೇಕ ಎಲ್ಲ ಪಟ್ಟಣಗಳಲ್ಲಿ ಸಾರ್ವಜನಿಕ ಗಣೇಶ ಉತ್ಸವಗಳನ್ನು ಆಚರಿಸಲಾಗುತ್ತದೆ.

ಐದರಿಂದ ಹನ್ನೊಂದು ದಿನಗಳವರೆಗೆ ನಡೆಯುವ ಈ ಉತ್ಸವಗಳು ಪ್ರತಿ ದಿನವೂ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದ್ದು, ಎಲ್ಲರನ್ನು ಚುಂಬಕದಂತೆ ಆಕರ್ಷಿಸುತ್ತವೆ. ಅಷ್ಟೆ ಏಕೆ, ಈ ಉತ್ಸವಗಳ ಉಸ್ತುವಾರಿಯನ್ನು ಹೊತ್ತ ಸಂಘಗಳು/ಮಂಡಳಿಗಳು ಸ್ಪರ್ಧೆಗಳನ್ನೂ ಸಹ ಅಯೊಜಿಸಿರುತ್ತಾರೆ. ಇಂತಹ ಸ್ಪರ್ಧೆಗಳಲ್ಲಿ ಯಾವುದೆ ಧರ್ಮ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.

ಮುಂಬೈ ನಗರದಲ್ಲಂತೂ ಸಾವಿರಾರು ಸಂಖ್ಯೆಗಳಲ್ಲಿ ಸಾರ್ವಜನಿಕ ಗಣೇಶಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲದೆ ಇಲ್ಲಿನ ಕೆಲ ಸಾರ್ವಜನಿಕ ಗಣೇಶ ಸಂಘಗಳು ವಿಶ್ವ ವಿಖ್ಯಾತಿಯನ್ನೂ ಸಹ ಗಳಿಸಿವೆ. ಇವುಗಳನ್ನು ನೋಡಲೆಂದೆ ವಿದೇಶಿ ಪ್ರವಾಸಿಗರು ಮುಂಬೈಗೆ ಬರುತ್ತಾರೆಂದರೆ ಆಶ್ಚರ್ಯವಾಗದೆ ಇರಲಿಕ್ಕಿಲ್ಲ.

ಸಾರ್ವಜನಿಕ ಗಣೇಶ ಎಂದರೇನು? ಹೇಗೆ ಚಾಲ್ತಿಯಲ್ಲಿ ಬಂತು?

ಹಿಂದೆ ಮಹಾರಾಷ್ಟ್ರದಲ್ಲಿ ಶಿವಾಜಿಯ ಕಾಲದಲ್ಲೆ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ಇದೆ ನಂತರ ಪೇಶ್ವಗಳ ಕಾಲದಲ್ಲೂ ಮುಂದುವರೆದು, ಅವರ ಪತನದ ನಂತರ ಇದು ತನ್ನ ಮೆರುಗನ್ನು ಕಳೆದುಕೊಂಡು ಖಾಸಗಿಯಾಗಿ ಮಾತ್ರ ಆಚರಿಸಲ್ಪಡಹತ್ತಿತು.

1893 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಾಲ ಗಂಗಾಧರನಾಥ ತಿಲಕರು, ಭಾರತೀಯರೆಲ್ಲರನ್ನು ಯಾವುದೆ ಜಾತಿ, ಮತ, ಧರ್ಮ ಬೇಧವಿಲ್ಲದೆ ಒಗ್ಗೂಡಿಸಿ ಬ್ರೀಟಿಷರ ವಿರುದ್ಧ ಶಾಂತಿಯಿಂದ ಹೋರಾಡಲು ಗಣೇಶ ಚತುರ್ಥಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವಲ್ಲಿ ಪ್ರಮುಖ ಪಾತ್ರವಹಿಸಿ ಮತ್ತೆ ಜನಪ್ರಿಯಗೊಳಿಸಿದರು. ಇಂದಿಗೂ ಸಹ ಈ ಉತ್ಸವ ಭಾರತದ ಸಾಕಷ್ಟು ಪಟ್ಟಣಗಳಲ್ಲಿ ಮುಂದುವರೆಯುತ್ತ ಬಂದಿವೆ.

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಆಯಾಯ ಸಂಘದವರು ಅಲಂಕೃತವಾದ, ವಿಶಿಷ್ಟವಾದ ತಾತ್ಕಾಲಿಕ ಮಂಟಪಗಳನ್ನು ನಿರ್ಮಿಸುತ್ತಾರೆ. ನಂತರ ಅದರಲ್ಲಿ ಗಣೇಶನ ವಿಗ್ರಹವನ್ನು ಡೊಳ್ಳು, ನಗಾರಿ ಮುಂತಾದವುಗಳನ್ನು ಬಾರಿಸುತ್ತ ಸಡಗರದಿಂದ ತೆರೆದ ವಾಹನಗಳಲ್ಲಿ ತೆಗೆದುಕೊಂಡು ಬಂದು ಪ್ರತಿಷ್ಠಾಪಿಸಲಾಗುತ್ತದೆ.

ನಂತರದ ಹನ್ನೊಂದು ದಿನಗಳ ಕಾಲ ಗಣೇಶನನ್ನು ಅತ್ಯಂತ ಸಡಗರ ಹಾಗೂ ಭಕ್ತಿ ಶೃದ್ಧೆಗಳಿಂದ ಪೂಜಿಸಲಾಗುತ್ತದೆ. ಗಣೇಶನು ಸಾರ್ವಜನಿಕರಿಗೆ ಮುಕ್ತವಾಗಿರುವುದರಿಂದ ಯಾರು ಬೇಕಾದರೂ ಬಂದು ದರುಶನ/ಪ್ರಸಾದ ಪಡೆಯಬಹುದು. ಬೇಕಿದ್ದರೆ ಕಾಣಿಕೆಗಳನ್ನು ಅರ್ಪಿಸಬಹುದು. ಮತ್ತೊಂದು ವಿಶೇಷವೆಂದರೆ ಮಂಟಪಗಳ ಅದ್ಭುತ ಅಲಂಕಾರ ಹಾಗೂ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹಗಳ ಅಂದ ಚೆಂದಗಳಕ್ಕನುಸಾರವಾಗಿ ಬಹುಮಾನಗಳನ್ನೂ ಸಹ ವಿತರಿಸಲಾಗುತ್ತದೆ.

ಅಂತೆಯೆ ಎಲ್ಲ ಸಂಘಗಳು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಮಂಟಪಗಳನ್ನು ವಿಶಿಷ್ಟವಾಗಿಯೂ, ಅನನ್ಯವಾಗಿಯೂ ನಿರ್ಮಿಸುವಲ್ಲಿ ಪ್ರಯತ್ನ ಪಡುತ್ತಾರೆ. ಪಟ್ಟಣದ ಆಯಾ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶನನ್ನು ನೋಡಲು ತೆರಳುವುದೆ ಒಂದು ಅದ್ಭುತವಾದ ಪ್ರವಾಸ. ಹಾಗಾದರೆ ಬನ್ನಿ, ಈ ಲೇಖನ್ದ ಮೂಲಕ ಮುಂಬೈ ನಗರದ ಅತಿ ಪ್ರಮುಖ ಐದು ಗಣೇಶರುಗಳ ದರುಶನ ನಾವು ಮಾಡೋಣವೆ.

ಲಾಲ್ ಬಾಗ್ ಚಾ ರಾಜಾ

ಲಾಲ್ ಬಾಗ್ ಚಾ ರಾಜಾ

ಮುಂಬೈ ನಗರದ ಅತಿ ಪ್ರತಿಷ್ಠಿತ ಹಾಗೂ ಅದ್ದೂರಿ ಸಾರ್ವಜನಿಕ ಗಣೇಶ ಇದಾಗಿದೆ. ಈ ಗಣಪನ ದರುಶನ ಕೋರಿ ಕಿ.ಮೀ ಗಳು ಗಟ್ಟಲೆ ಸಾಲಾಗಿ ಜನ ನಿಲ್ಲುತ್ತಾರೆ ಎಂದರೆ ನೀವೆ ಉಹಿಸಿ ಎಷ್ಟೊಂದು ಮಹತ್ವ ಪಡೆದ ಗಣೇಶನಾಗಿದ್ದಾನೆ ಇತನು ಎಂದು. ಈ ಸಂಘವು 1935 ರಿಂದಲೆ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸುತ್ತ ಬಂದಿದೆ. ಮುಖ್ಯವಾಗಿ ಎರಡು ಸಾಲುಗಳಿರುತ್ತವೆ. ನವಸ್ ಹಾಗೂ ಸಾಮಾನ್ಯ ಸಾಲು. ನವಸ್ ನಲ್ಲಿರುವವರು ಗಣೇಶನ ಅತಿ ಹತ್ತಿರಕ್ಕೆ ತೆರಳಬಹುದಾಗಿದ್ದು, ಸಾಮಾನ್ಯ ಸಾಲು ಹತ್ತು ಮೀ ಅಂತರದಲ್ಲಿ ಗಣೇಶನ ದರುಶನ ಪಡೆಯುವ ಹಾಗಿರುತ್ತದೆ. ಸಾಮಾನ್ಯ ಸಾಲಿನಲ್ಲಿ ಐದು ಘಂಟೆಗಳಷ್ಟು ಕಾಯಬೇಕಾಗಿದ್ದು, ನವಸ್ ಸಾಲಿನಲ್ಲಿ ಏನಿಲ್ಲವೆಂದರೂ 15 ರಿಂದ 20 ಘಂಟೆಗಳಷ್ಟು ಕಾಯಬೇಕು.

ಸ್ಥಳ: ಕೇಂದ್ರ ಮುಂಬೈ ಭಾಗದ ಅಂಬೇಡ್ಕರ್ ರಸ್ತೆಯಲ್ಲಿರುವ ಲಾಲ್ ಬಾಗ್ ಮಾರುಕಟ್ಟೆ.

ಗಣೇಶಗಲ್ಲಿ ಮುಂಬೈಚಾ ರಾಜಾ:

ಗಣೇಶಗಲ್ಲಿ ಮುಂಬೈಚಾ ರಾಜಾ:

ಪ್ರಮುಖ ಸಾರ್ವಜನಿಕ ಗಣೇಶರ ಪೈಕಿ ಒಂದಾಗಿದೆ ಗಣೇಶ ಗಲ್ಲಿ (ಓಣಿ)ಯಲ್ಲಿರುವ ಮುಂಬೈಚಾ ರಾಜಾ ಗಣೇಶ. ಪ್ರತಿ ವರ್ಷವೂ ಅದ್ದೂರಿಯಾಗಿ ಇತನಿಗೆ ಮಂಟಪವನ್ನು ನಿರ್ಮಿಸಲಾಗುತ್ತದೆ. ಮಂಟಪದ ವಿನ್ಯಾಸವು ಯಾವುದಾದರೂ ಜನಪ್ರೀಯ ಸ್ಥಳದ ಪ್ರತಿಕೃತಿಯಾಗಿರುತ್ತದೆ. 1928 ರಲ್ಲಿ ಗಿರಣಿ ಕೆಲಸಗಾರರ ಒಳಿತಿಗಾಗಿ ಈ ಸಾರ್ವಜನಿಕ ಗಣೇಶವನ್ನು ಇರಿಸಲಾಯಿತು ನಂತರ ಆ ಕಾರ್ಯವೂ ಇಂದಿಗೂ ಮುಂದುವರೆದಿದೆ. (ಸಾಂದರ್ಭಿಕ ಚಿತ್ರ)

ಸ್ಥಳ: ಕೇಂದ್ರ ಮುಂಬೈ ಭಾಗ, ಗಣೇಶ ಗಲ್ಲಿ.

ಖೇತವಾಡಿ ಗಣರಾಜ:

ಖೇತವಾಡಿ ಗಣರಾಜ:

ಪ್ರಶಸ್ತಿ ಪುರಸ್ಕೃತ ಖೇತವಾಡಿ ಗಣರಾಜನ ವಿಗ್ರಹವನ್ನು ಮುಂಬೈನ ಅತಿ ಸುಂದರ ಗಣೇಶನ ವಿಗ್ರಹಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ. 1959 ರಿಂದ ಸಾರ್ವಜನಿಕವಾಗಿ ಮಂಟಪವನ್ನು ಸ್ಥಾಪಿಸಲಾಯಿತು. ವಿಶೇಷತೆಯೆಂದರೆ 2000 ರಲ್ಲಿ ಪ್ರಥಮ ಬಾರಿಗೆ ಭಾರತದಲ್ಲೆ ಅತಿ ಎತ್ತರ ಎನ್ನಬಹುದಾದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಈ ಗಣೇಶನು ಹೆಸರುವಾಸಿಯಾದನು. ನಿಜವಾದ ಬಂಗಾರದ ಆಭರಣದಿಂದ ಗಣೇಶನನ್ನು ಅಲಂಕರಿಸಲಾಗುತ್ತದೆ. ಒಂದೊಮ್ಮೆ ನಿಜವಾದ ವಜ್ರಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು. (ಸಾಂದರ್ಭಿಕ ಚಿತ್ರ)

ಸ್ಥಳ: 12 ನೇಯ ರಸ್ತೆ, ಖೇತವಾಡಿ, ಗಿರ್ಗಾಂವ್, ದಕ್ಷಿಣ ಮುಂಬೈ

ಚಿತ್ರಕೃಪೆ: rohit gowaikar

ಜಿ ಎಸ್ ಬಿ ಸೇವಾ ಕಿಂಗ್ಸ್ ಸರ್ಕಲ್:

ಜಿ ಎಸ್ ಬಿ ಸೇವಾ ಕಿಂಗ್ಸ್ ಸರ್ಕಲ್:

ಮುಂಬೈನ ಜಿ ಎಸ್ ಬಿ ಸೇವಾ ಸರ್ಕಲ್ ನ ಗಣೇಶನನ್ನು ಪ್ರೀತಿಯಿಂದ ಮುಂಬೈನ ಗೋಲ್ಡ್ ಗಣೇಶ (ಬಂಗಾರದ ಗಣೇಶ) ಎಂದೆ ಕರೆಯಲಾಗುತ್ತದೆ. ಏಕೆಂದರೆ ಈ ಸಾರ್ವಜನಿಕ ಗಣೇಶನು ಕೇಜಿ ಗಟ್ಟಲೆ ಪರಿಶುದ್ಧ ಬಂಗಾರದಿಂದ ಅಲಂಕರಿಸಿಕೊಂಡಿರುತ್ತಾನೆ. ನಗರದ ಅತಿ ಶ್ರೀಮಂತ ಗಣೇಶ ಮಂಡಳಿ ಎಂದು ಖ್ಯಾತಿ ಪಡೆದಿರುವ ಈ ಸಾರ್ವಜನಿಕ ಗಣೇಶ ಮಂಡಳಿಯು 1954 ರಲ್ಲಿ ಕರ್ನಾಟಕ ಮೂಲದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರಿಂದ ಸ್ಥಾಪಿಸಲ್ಪಟ್ಟಿದೆ. (ಸಾಂದರ್ಭಿಕ ಚಿತ್ರ)

2014 ರ ವಿನ್ಯಾಸ: ಪ್ರಸ್ತುತ ವರ್ಷ ಈ ಮಂಡಳಿಯು ವಜ್ರ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದರಿಂದ ವೈಜಯಂತಿಮಾಲಾ ಎಂಬ ಮಾಲೆಯ ವಿನ್ಯಾಸ ಮಾಡಿದ್ದಾರೆ. ಮೂಲಗಳ ಪ್ರಕಾರ, ಮುದ್ಗಲ್ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಈ ಮಾಲೆಯು ದೊಡ್ಡ ಹಾಗೂ ಚಿಕ್ಕ ಗಣೇಶ ವಿಗ್ರಹಗಳನ್ನು ಒಳಗೊಂಡಿರುತ್ತದೆ. ಅದು ಕೂಡ ಚಿನ್ನ ಹಾಗೂ ಬೆಳ್ಳಿಯ ಸಮೇತ.

ಸ್ಥಳ: ಜಿ ಎಸ್ ಬಿ ಸ್ಪೊರ್ಟ್ಸ್ ಕ್ಲಬ್, ಎಸ್ ಎನ್ ಡಿ ಟಿ ಮಹಿಳಾ ಕಾಲೇಜು ಹತ್ತಿರ, ಕಿದ್ವಾಯಿ ರಸ್ತೆ, ಕಿಂಗ್ಸ್ ಸರ್ಕಲ್, ಮಾತುಂಗಾ, ಮುಂಬೈ.

ಚಿತ್ರಕೃಪೆ: Schröder+Schömbs PR _ Brands | Media | Lifestyl

ಅಂಧೇರಿ ಚಾ ರಾಜಾ:

ಅಂಧೇರಿ ಚಾ ರಾಜಾ:

ಮುಂಬೈನ ಮತ್ತೊಂದು ಪ್ರಮುಖ ಹಾಗೂ ಮುಖ್ಯವಾದ ಸಾರ್ವಜನಿಕ ಗಣೇಶನೆಂದರೆ ಅಂಧೇರಿ ಚಾ ರಾಜಾ. ದಕ್ಷಿಣ ಮುಂಬೈಗೆ ಲಾಲ್ ಬಾಗ್ ಚಾ ರಾಜಾ ಹೇಗೆ ಮಹತ್ವವೊ ಅದೇ ರೀತಿಯಲ್ಲಿ ಮುಂಬೈನ ಉಪನಗರಗಳಿಗೆ ಅಂಧೇರಿ ರಾಜಾ ಮಹತ್ವ ಪಡೆದ ಸಾರ್ವಜನಿಕ ಗಣೇಶನಾಗಿದ್ದಾನೆ. ಈ ಉತ್ಸವ ಮಂಡಳಿಯು ಕಾರ್ಖಾನೆ ನೌಕರರಿಂದ 1966 ರಲ್ಲಿ ಸ್ಥಾಪಿಸಲ್ಪಟ್ಟಿತು. (ಸಾಂದರ್ಭಿಕ ಚಿತ್ರ)

ಸ್ಥಳ: ವೀರ ದೇಸಾಯಿ ರಸ್ತೆ, ಅಜಾದ್ ನಗರ, ಅಂಧೇರಿ, ಮುಂಬೈ

ಅದ್ದೂರಿ ಗಣೇಶ ಉತ್ಸವ:

ಅದ್ದೂರಿ ಗಣೇಶ ಉತ್ಸವ:

ಮುಂಬೈನ ಒಂದು ಸಾರ್ವಜನಿಕ ಗಣೇಶ ಉತ್ಸವ ಮಂಡಳಿ.

ಅದ್ದೂರಿ ಗಣೇಶ ಉತ್ಸವ:

ಅದ್ದೂರಿ ಗಣೇಶ ಉತ್ಸವ:

ಮುಂಬೈನ ಒಂದು ಸಾರ್ವಜನಿಕ ಗಣೇಶ ಉತ್ಸವ ಮಂಡಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X