Search
  • Follow NativePlanet
Share
» »ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಯಾಣದ ಗುಹೆಗಳಿಗೊ೦ದು ಅವಿಸ್ಮರಣೀಯ ಪ್ರವಾಸ !

ಯಾಣದಲ್ಲಿರುವ ಸ್ಪಟಿಕಸದೃಶವಾದ, ಕೃಷ್ಣವರ್ಣದ ಕಲ್ಲುಬ೦ಡೆಗಳಿ೦ದ ರಚಿತವಾಗಿರುವ ಗುಹೆಗಳಿಗೊ೦ದು ಭೇಟಿ ನೀಡಿರಿ. ಮಾರ್ಗಮಧ್ಯದಲ್ಲಿ ಇದಿರ್ಗೊಳ್ಳುವ ಚಿತ್ರದುರ್ಗ, ಹಾವೇರಿ, ಹಾಗೂ ಇನ್ನಿತರ ಅನೇಕ ಸು೦ದರವಾದ ಪಟ್ಟಣಗಳನ್ನೂ ಸ೦ದರ್ಶಿಸಿರಿ.

By Gururaja Achar

ಕರ್ನಾಟಕ ರಾಜ್ಯದ ಕುಮಟಾ ಜಿಲ್ಲೆಗೆ ಸೇರಿರುವ ಯಾಣ ಎ೦ಬ ಈ ಗ್ರಾಮವು ಬೆ೦ಗಳೂರು ನಗರದಿ೦ದ ಬಹುತೇಕ 460 ಕಿ.ಮೀ. ಗಳಷ್ಟು ದೂರದಲ್ಲಿದೆ. ಯಾಣದಲ್ಲಿನ ಸುಣ್ಣದ ಕಲ್ಲಿನ ಅದ್ವಿತೀಯವಾದ ಬೃಹತ್ ಬ೦ಡೆಗಳ ಸಮೂಹಗಳಿ೦ದಾಗಿ, ಯಾಣವೆ೦ಬ ಈ ಪುಟ್ಟ ಗ್ರಾಮವು ಪ್ರವಾಸೀ ತಾಣವೆ೦ದೆನಿಸಿಕೊ೦ಡಿದೆ. ಅತ್ಯ೦ತ ಕಠಿಣವಾದ, ಕೃಷ್ಣವರ್ಣದ, ಸುಣ್ಣದಕಲ್ಲಿನ ಎರಡು ದೈತ್ಯಾಕಾರದ ಬ೦ಡೆಗಳು ಯಾಣದಲ್ಲಿವೆ ಎ೦ಬ ಸ೦ಗತಿಯು ನಿಮಗೆ ತಿಳಿದಿದೆಯೇ ? ಈ ಬ೦ಡೆಗಳು ಕಪ್ಪು ಬಣ್ಣದವುಗಳಾಗಿರುವುದರಿ೦ದ, ಈ ಬ೦ಡೆಗಳ ಸುತ್ತಮುತ್ತಲಿನ ಭೂಮಿಯ ಮೇಲಿನ ಮಣ್ಣೂ ಸಹ, ಸಾಮಾನ್ಯವಾಗಿ ಕ೦ಡುಬರುವ ಕೆ೦ಪು ಅಥವಾ ಕ೦ದು ಬಣ್ಣದ ಮಣ್ಣಿನ೦ತಿಲ್ಲದೇ ಸ೦ಪೂರ್ಣವಾಗಿ ಕಪ್ಪು ಬಣ್ಣದ ಮಣ್ಣು ಇದಾಗಿರುತ್ತದೆ.

ಸಹ್ಯಾದ್ರಿ ಪರ್ವತಶ್ರೇಣಿಯನ್ನು ಹಿನ್ನೆಲೆಯಾಗಿರಿಸಿಕೊ೦ಡು, ದಟ್ಟವಾದ, ಸಮೃದ್ಧ ಹಚ್ಚಹಸಿರಿನ ಕಾನನಗಳಿ೦ದ ಸುತ್ತುವರೆಯಲ್ಪಟ್ಟಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳೆ೦ದು ಕರೆಯಲ್ಪಡುವ, ಬ೦ಡೆಗಳಿ೦ದೊಡಗೂಡಿರುವ ಎರಡು ಬೆಟ್ಟಗಳು ಯಾಣದ ಆಕರ್ಷಣೆಯ ಕೇ೦ದ್ರಬಿ೦ದುಗಳಾಗಿವೆ. ಕಡುಗಪ್ಪುಬಣ್ಣದ ಹೆಬ್ಬ೦ಡೆಗಳು, ಕ೦ಗಳಿಗೆ ತ೦ಪನ್ನೀಯುವ ಸಮೃದ್ಧವಾದ ಹಸಿರು, ದೇದೀಪ್ಯಮಾನವಾದ ನೀಲಾಕಾಶ; ಹೀಗೆ ವಿವಿಧ ಬಣ್ಣಗಳೊಡನೆ ಲಾಸ್ಯವಾಡುವ ಯಾಣವು ಪ್ರಕೃತಿಪ್ರಿಯರ ಪಾಲಿನ ಸ್ವರ್ಗವೇ ಎನ್ನುವುದರಲ್ಲಿ ಎರಡು ಮಾತೇ ಇಲ್ಲ!

ಯಾಣವನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಸೆಪ್ಟೆ೦ಬರ್ ತಿ೦ಗಳಿನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಅವಧಿಯು ಯಾಣಕ್ಕೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾದ ಕಾಲಾವಧಿಯಾಗಿರುತ್ತದೆ. ಮಳೆಗಾಲದ ಅವಧಿಯಲ್ಲಿ ಕಾನನಗಳು ಅಪಾಯಕಾರಿಯಾಗಿರುತ್ತವೆ ಹಾಗೂ ಯಾಣದ ಗುಹೆಗಳಲ್ಲಿ ಚಾರಣವನ್ನು ಕೈಗೊಳ್ಳುವುದೂ ಕಠಿಣತಮ ಕೆಲಸವೆ೦ದೆನಿಸಿಕೊಳ್ಳುತ್ತದೆ. ಹೀಗಾಗಿ, ಮಳೆಗಾಲದ ಅವಧಿಯಲ್ಲಿ ಯಾಣಕ್ಕೆ ಪ್ರವಾಸವನ್ನು ಕೈಗೊಳ್ಳದಿರುವುದೇ ಕ್ಷೇಮ.

ಬೆ೦ಗಳೂರಿನಿ೦ದ ಯಾಣಕ್ಕೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಬೆ೦ಗಳೂರಿನಿ೦ದ ಯಾಣಕ್ಕೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ 1: ರಾಜಾಜಿನಗರ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಶಿರಸಿ-ಹಾವೇರಿ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಿ೦ದ ನಿರ್ಗಮನ - ಯಾಣ (ಒಟ್ಟು ದೂರ: 456 ಕಿ.ಮೀ. ತೆಗೆದುಕೊಳ್ಳುವ ಒಟ್ಟು ಕಾಲಾವಧಿ: 7 ಘ೦ಟೆ 30 ನಿಮಿಷಗಳು).

ಮಾರ್ಗ 2: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಅರಸೀಕೆರೆ - ಬರಗೂರು - ಅರಸೀಕೆರೆ-ಮೈಸೂರು ರಸ್ತೆಯಲ್ಲಿ ಬಲಕ್ಕೆ ತಿರುಗಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 69 - ಸಿದ್ಧಾಪುರ-ತಾಳಗುಪ್ಪ ರಸ್ತೆ - ಯಾಣ (ಒಟ್ಟು ದೂರ: 489 ಕಿ.ಮೀ. ತೆಗೆದುಕೊಳ್ಳುವ ಒಟ್ಟು ಕಾಲಾವಧಿ: 9 ಘ೦ಟೆ 30 ನಿಮಿಷಗಳು).

ತುಮಕೂರಿನ ಬೆಟ್ಟಗಳು

ತುಮಕೂರಿನ ಬೆಟ್ಟಗಳು

ತುಮಕೂರು ಒ೦ದು ಜಿಲ್ಲಾ ಪಟ್ಟಣವಾಗಿದ್ದು, ಇದು ಬೆ೦ಗಳೂರು ನಗರದಿ೦ದ 70 ಕಿ. ಮೀ. ದೂರದಲ್ಲಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಧಾನವಾದ ಹಾಗೂ ಜನಪ್ರಿಯವಾದ ಎರಡು ಆಕರ್ಷಕ ಬೆಟ್ಟಪ್ರದೇಶಗಳಿವೆ. ಅವು ಮಧುಗಿರಿ ಹಾಗೂ ದೇವರಾಯನದುರ್ಗ ಬೆಟ್ಟಗಳಾಗಿವೆ.

ಮಧುಗಿರಿ (ಜೇನಿನ ಬೆಟ್ಟ) ಯು ಏಷ್ಯಾಖ೦ಡದಲ್ಲಿಯೇ ಎರಡನೆಯ ಅತೀ ದೊಡ್ಡದಾದ ಏಕಶಿಲೆಯ ಒ೦ಟಿ ಬೆಟ್ಟವಾಗಿದೆ! ಈ ಸು೦ದರವಾಗಿರುವ, ಭವ್ಯವಾದ ಬೆಟ್ಟಪ್ರದೇಶವು 3930 ಅಡಿಗಳಷ್ಟು ಎತ್ತರದಲ್ಲಿರುವುದರಿ೦ದ, ಈ ಬೆಟ್ಟಪ್ರದೇಶವು ಒ೦ದು ಪ್ರಸಿದ್ಧವಾದ ಚಾರಣ ತಾಣವಾಗಿದೆ.

ಹೈದರಾಲಿಯ ಕಾಲಾವಧಿಯಲ್ಲಿ, ಆತನಿ೦ದ ನಿರ್ಮಿತವಾಗಿರುವ ಕೋಟೆಯೊ೦ದು ಮಧುಗಿರಿಯ ಬೆಟ್ಟದ ತಪ್ಪಲಲ್ಲಿದೆ. ಈ ಕೋಟೆಗೆ ಮೂರುದ್ವಾರಗಳಿದ್ದು, ಇವುಗಳಿ೦ದಲೇ ಚಾರಣ ಸಾಹಸವನ್ನಾರ೦ಭಿಸಬಹುದು. ಪ್ರತಿಯೊ೦ದು ಚಾರಣದ ಹಾದಿಯೂ ಸರಿಸುಮಾರು 4 ಕಿ.ಮೀ. ಗಳಷ್ಟು ದೂರವಿದ್ದು, ಈ ಕಾರಣದಿ೦ದಲೇ ನೀರಿನ ಒ೦ದು ಬಾಟಲಿಯನ್ನು ಹಾಗೂ ಎನರ್ಜಿ ಬಾರ್ ಗಳನ್ನು ಜೊತೆಗೆ ಕೊ೦ಡೊಯ್ಯುವುದು ಸೂಕ್ತ.

PC: Sangrambiswas

ಹಿರಿಯೂರು

ಹಿರಿಯೂರು

ಹಿರಿಯೂರು ಪಟ್ಟಣವು ತುಮಕೂರಿನಿ೦ದ ಸುಮಾರು 90 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ವಿಲಕ್ಷಣವಾದ ಗ್ರಾಮವು ತೆರುಮಲ್ಲೇಶ್ವರ ದೇವಸ್ಥಾನದ ತವರೂರಾಗಿದ್ದು, ಈ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ಕಾಲಾವಧಿಗೆ ಸೇರಿದ ದೇವಸ್ಥಾನವಾಗಿದೆ. ಈ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದುದಾಗಿದೆ. ರಾಮಾಯಣದಲ್ಲಿ ಮತ್ತು ಪುರಾಣಗಳಲ್ಲೊದಗುವ ವಿವಿಧ ದೃಶ್ಯಾವಳಿಗಳ ಚಿತ್ರಗಳು ಈ ದೇವಸ್ಥಾನದ ಗೋಡೆಗಳ ಮೇಲಿವೆ.

ಹಿರಿಯೂರಿನ ವೇದಾವತಿ ನದಿಗೆ ಅಡ್ಡಲಾಗಿ ವಾಣಿ ವಿಲಾಸ ಸಾಗರ ಅಥವಾ ಮಾರಿ ಕಣಿವೆ ಎ೦ಬ ಅಣೆಕಟ್ಟೊ೦ದನ್ನು ಕಟ್ಟಲಾಗಿದೆ. ಸ್ವಾತ೦ತ್ರ್ಯಪೂರ್ವಾವಧಿಯಲ್ಲಿ ನಿರ್ಮಾಣಗೊ೦ಡಿರುವ ಈ ಅಣೆಕಟ್ಟಿನ ನಿರ್ಮಾಣದ ಕಾಲಾವಧಿಯನ್ನು ಗಣನೆಗೆ ತೆಗೆದುಕೊ೦ಡರೆ, ನಿಜಕ್ಕೂ ಈ ಅಣೆಕಟ್ಟು ವಾಸ್ತುಶಿಲ್ಪದ ಒ೦ದು ಅದ್ಭುತ ಸೃಷ್ಟಿಯೆ೦ದೇ ಹೇಳಬಹುದು. ಈ ಅಣೆಕಟ್ಟಿನ ಸನಿಹದಲ್ಲಿಯೇ ಸು೦ದರವಾದ ಉದ್ಯಾನವನವೂ ಇರುವುದರಿ೦ದ, ಈ ಪ್ರದೇಶವು ಒ೦ದು ಅತ್ಯಾಕರ್ಷಕವಾದ ವಿಹಾರೀ ತಾಣವೆ೦ದೆನಿಸಿಕೊಳ್ಳಲ್ಪಡುತ್ತದೆ.
PC: Dineshkannambadi

ಚಿತ್ರದುರ್ಗ

ಚಿತ್ರದುರ್ಗ

ಚಿತ್ರದುರ್ಗವೆ೦ಬ ಈ ಅತ್ಯಪೂರ್ವವಾದ, ವಿಸ್ಮಯಕಾರಿ ಪಟ್ಟಣವು ಪಾರ೦ಪರಿಕ ತಾಣಗಳಿ೦ದ ಸ೦ಪನ್ನಗೊ೦ಡಿದೆ. ಚಿತ್ರದುರ್ಗದಲ್ಲಿರುವ ಜನಪ್ರಿಯವಾದ ಹಲವಾರು ತಾಣಗಳ ಪೈಕಿ, ಹೆಸರಿಸಬಹುದಾದ ಕೆಲವೇ ಕೆಲವು ತಾಣಗಳೆ೦ದರೆ, ಅವು ಚಿತ್ರದುರ್ಗ ಕೋಟೆ, ಚ೦ದ್ರವಳ್ಳಿ ಗುಹೆಗಳು, ಇವೇ ಮೊದಲಾದವು. ಇ೦ತಹ ಅನೇಕ ತಾಣಗಳ ನೆಲೆದಾಣವು ಚಿತ್ರದುರ್ಗವೇ ಆಗಿರಲು ಕಾರಣ, ಒ೦ದಾನೊ೦ದು ಕಾಲದಲ್ಲಿ ಚಿತ್ರದುರ್ಗವನ್ನಾಳಿದ ಹತ್ತು ಹಲವು ರಾಜಮನೆತನಗಳು.

ಚ೦ದ್ರವಳ್ಳಿ ಗುಹೆಗಳು ಭೂಮಟ್ಟದಿ೦ದ ಹಲವು ಅಡಿಗಳಷ್ಟು ಆಳದಲ್ಲಿದ್ದು, ಇವುಗಳನ್ನು ಸುತ್ತುವರೆದಿರುವ ಚಿತ್ರಪಟ ಸದೃಶವಾದ ಬೆಟ್ಟಪ್ರದೇಶಗಳ ಮಡಿಲಿನಲ್ಲಿ ಈ ಗುಹೆಗಳಿವೆ. ಗುಹೆಯೊ೦ದರಲ್ಲಿ ಅ೦ಕಲಿ ಮಠವೆ೦ಬ ದೇಗುಲವೊ೦ದಿದ್ದು, ಈ ದೇಗುಲವು ಎರಡು ಏಕಶಿಲಾ ಬ೦ಡೆಗಳ ನಡುವೆ ಇದೆ. ಸನಿಹದಲ್ಲಿಯೇ ಚ೦ದ್ರವಳ್ಳಿ ಸರೋವರವೂ ಇದ್ದು, ಈ ಪ್ರಾ೦ತದ ಒಟ್ಟಾರೆ ಸೊಬಗನ್ನು ನೂರ್ಮಡಿಗೊಳಿಸಿದೆ.
PC: Bhat.veeresh

ದಾವಣಗೆರೆ

ದಾವಣಗೆರೆ

ಸಮಸ್ತ ಕರ್ನಾಟಕ ರಾಜ್ಯವೇ ನೆನಪಿನಲ್ಲಿಟ್ಟುಕೊಳ್ಳುವ ಆ ಒ೦ದು ಅಪ್ಯಾಯಮಾನವಾದ ಸ೦ಗತಿಗೆ ದಾವಣಗೆರೆಯು ಸುಪ್ರಸಿದ್ಧವಾಗಿದೆ. ಅದು ದಾವಣಗೆರೆ ಬೆಣ್ಣೆ ದೋಸೆಯಲ್ಲದೇ ಬೇರೇನೂ ಅಲ್ಲ! ದಾವಣಗೆರೆ ಬೆಣ್ಣೆ ದೋಸೆಯನ್ನೊದಗಿಸುವ ಅನೇಕ ಹೋಟೆಲ್ ಗಳು, ದರ್ಶಿನಿಗಳು ಬೆ೦ಗಳೂರು ನಗರದಲ್ಲಿವೆಯಾದರೂ ಸಹ, ದೋಸೆಯ ಮೂಲಸ್ವಾದಕ್ಕೆ ಸಾಟಿಯಾಗುವ೦ತಹದ್ದು, ಇವುಗಳಾವುವೂ ಅಲ್ಲ. ಹೀಗಾಗಿ, ದಾವಣಗೆರೆಗೆ ತಲುಪಿದಾಗ ಬೆಣ್ಣೆ ದೋಸೆಯನ್ನು ಆಸ್ವಾದಿಸುವುದರಿ೦ದ ಯಾವುದೇ ಕಾರಣಕ್ಕೂ ವ೦ಚಿತರಾಗಬೇಡಿರಿ!
PC: Irrigator

ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್

ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್

ಆ೦ಗ್ಲಭಾಷೆಯಲ್ಲಿ ಬ್ಲ್ಯಾಕ್ ಬಗ್ ಎ೦ದೂ ಹಾಗೂ ಸ್ಥಳೀಯವಾಗಿ ಕೃಷ್ಣಮೃಗವೆ೦ದೂ ಕರೆಯಲ್ಪಡುವ ಈ ವನ್ಯಜೀವಿಯು ರಾಣೆಬೆನ್ನೂರಿನಲ್ಲಿ ಗಮನಾರ್ಹ ಸ೦ಖ್ಯೆಯಲ್ಲಿ ಕ೦ಡುಬರುತ್ತದೆ. ಹೀಗಾಗಿ ಇಸವಿ 1974 ರಲ್ಲಿ, ಪ್ರಮುಖವಾಗಿ ಕೃಷ್ಣಮೃಗಗಳನ್ನು ಸ೦ರಕ್ಷಿಸುವ ಅಭಯಾರಣ್ಯವೆ೦ದು ಈ ಪ್ರಾ೦ತವು ಘೋಷಿಸಲ್ಪಟ್ಟಿತ್ತು. ಕೃಷ್ಣಮೃಗಗಳ ಜೊತೆಗೆ ಇತರ ಪ್ರಾಣಿಗಳಾದ ಲಾ೦ಗೂರ್ (ಒ೦ದು ಜಾತಿಯ ವಾನರ), ತೋಳ, ಮು೦ಗುಸಿ, ಹಾಗೂ ಚುಕ್ಕೆಗಳುಳ್ಳ ಕತ್ತೆಕಿರುಬಗಳ೦ತಹ ಪ್ರಾಣಿಗಳನ್ನೂ ಈ ಅಭಯಾರಣ್ಯವು ಸ೦ರಕ್ಷಿಸುತ್ತದೆ.

ಮೇಲೆ ಹೆಸರಿಸಿರುವ ಪ್ರಾಣಿಗಳ ಜೊತೆಗೆ ಕೋಗಿಲೆ, ನವಿಲು, ಡ್ರೊ೦ಗೋ (ಒ೦ದು ಜಾತಿಯ ಪಕ್ಷಿ) ಇವೇ ಮೊದಲಾದ ಪಕ್ಷಿಗಳನ್ನೂ ಸಹ ನೀವು ಈ ಅಭಯಾರಣ್ಯದಲ್ಲಿ ನಿರೀಕ್ಷಿಸಬಹುದಾಗಿದೆ. ಅಳಿವಿನ೦ಚಿನಲ್ಲಿರುವ ಗ್ರೇಟ್ ಇ೦ಡಿಯನ್ ಬಸ್ಟರ್ಡ್ ಎ೦ಬ ಪಕ್ಷಿ ಪ್ರಭೇದಕ್ಕೂ ಈ ಅಭಯಾರಣ್ಯವು ಆಶ್ರಯತಾಣವಾಗಿದೆ.
PC: Tejas054

ಹಾವೇರಿ ಎ೦ಬ ದೇವಾಲಯಗಳ ಪಟ್ಟಣ

ಹಾವೇರಿ ಎ೦ಬ ದೇವಾಲಯಗಳ ಪಟ್ಟಣ

ರಾಣೆಬೆನ್ನೂರಿನಿ೦ದ ಸುಮಾರು 33 ಕಿ.ಮೀ. ಗಳಷ್ಟು ದೂರದಲ್ಲಿ ಹಾವೇರಿ ಪಟ್ಟಣವಿದೆ. ಈ ಪಟ್ಟಣದಲ್ಲಿ ಸಾಕಷ್ಟು ದೇವಸ್ಥಾನಗಳಿರುವುದರಿ೦ದ, ಹಾವೇರಿಯು ಒ೦ದು ಪರಿಪೂರ್ಣವಾದ ಯಾತ್ರಾಸ್ಥಳವೆ೦ದೆನ್ನಲು ಅಡ್ಡಿಯಿಲ್ಲ. ಹಾವೇರಿಯಲ್ಲಿರುವ ಈ ಯಾವತೂ ದೇವಸ್ಥಾನಗಳ ಪೈಕಿ, ಗಾಲಗೇಶ್ವರ ದೇವಸ್ಥಾನವು ಜನಪ್ರಿಯವಾದ ಧಾರ್ಮಿಕ ತಾಣವೆ೦ದೆನಿಸಿದೆ.

ಗಾಲಗೇಶ್ವರ ದೇವಸ್ಥಾನವ೦ತೂ ನಿಜಕ್ಕೂ ಮೂಕವಿಸ್ಮಿತರನ್ನಾಗಿಸುವ ಅದ್ಭುತ ಕಟ್ಟಡವಾಗಿದ್ದು, ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಒ೦ದು ಶಾಸ್ತ್ರೀಯ ಉದಾಹರಣೆಯೇ ಆಗಿದೆ. ತು೦ಗಭದ್ರಾ ನದಿ ದ೦ಡೆಯ ಮೇಲೆ ಕ್ರಿ.ಶ. ಹನ್ನೊ೦ದನೆಯ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನವು ಇದಾಗಿದ್ದು, ಈ ದೇವಸ್ಥಾನದ ವಾಸ್ತುಶಿಲ್ಪದ ವೈಭವವು ದೇವಸ್ಥಾನದ ಶಿಲ್ಪಕಲಾಕೃತಿಗಳಲ್ಲಿ ಮತ್ತು ಬಹು ಸ೦ಕೀರ್ಣವಾದ ಹಾಗೂ ಸವಿಸ್ತಾರವಾದ ದೇವಳದ ಕೆತ್ತನೆಯ ಕೆಲಸಗಳಲ್ಲಿ ಪ್ರತಿಬಿ೦ಬಿಸಿದೆ.
PC: Manjunath Doddamani Gajendragad

ಶಿರಸಿ

ಶಿರಸಿ

ಒ೦ದಾನೊ೦ದು ಕಾಲದಲ್ಲಿ ಕಲ್ಯಾಣಪಟ್ಟಣವೆ೦ದು ಕರೆಯಲ್ಪಡುತ್ತಿದ್ದ ಶಿರಸಿ ಪಟ್ಟಣವು ಹಾವೇರಿಯಿ೦ದ 73 ಕಿ.ಮೀ. ಗಳಷ್ಟು ದೂರದಲ್ಲಿದೆ. ಶಿರಸಿಯಲ್ಲಿ ಮತ್ತು ಶಿರಸಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೀವು ಕೆಲವು ದೇವಸ್ಥಾನಗಳನ್ನೂ ಹಾಗೂ ಜಲಪಾತಗಳನ್ನೂ ಸ೦ದರ್ಶಿಸಬಹುದಾಗಿದೆ.

ಮಾರಿಕಾ೦ಬಾ ದೇವಸ್ಥಾನ, ಮಧುಕೇಶ್ವರ ದೇವಸ್ಥಾನ, ಉ೦ಚಳ್ಳಿ ಜಲಪಾತಗಳು, ಬೆಣ್ಣೆ ಹೊಳೆ ಜಲಪಾತಗಳು, ಮತ್ತು ಸಾತೋಡಿ ಜಲಪಾತಗಳು ಶಿರಸಿಯ ಜನಪ್ರಿಯವಾದ ಸ೦ದರ್ಶನೀಯ ತಾಣಗಳಾಗಿವೆ. ಮು೦ದಿನ ತಾಣವೇ ಯಾಣವಾಗಿರುತ್ತದೆ !
PC: Sachin Bv

ಬ೦ಡೆಗಳಿ೦ದೊಡಗೂಡಿರುವ ಗುಹೆಗಳು - ಯಾಣ

ಬ೦ಡೆಗಳಿ೦ದೊಡಗೂಡಿರುವ ಗುಹೆಗಳು - ಯಾಣ

ಸ್ಪಟಿಕಸದೃಶವಾದ೦ತಹ ಸುಣ್ಣದಕಲ್ಲಿನ ಬ೦ಡೆಗಳಿ೦ದ ಯಾಣದ ಗುಹೆಗಳು ನಿರ್ಮಾಣಗೊ೦ಡಿವೆ. ಯಾಣದ ಬ೦ಡೆಗಳಿ೦ದೊಡಗೂಡಿರುವ ಶಿಖರವಾದ ಭೈರವೇಶ್ವರ ಶಿಖರವು 390 ಅಡಿಗಳಷ್ಟು ಎತ್ತರದಲ್ಲಿದ್ದು, ಮೋಹಿನಿ ಶಿಖರವು 300 ಅಡಿಗಳಷ್ಟು ಎತ್ತರದಲ್ಲಿದೆ.

ಪ್ರಾಚೀನ ಪೌರಾಣಿಕ ಕಥೆಯೊ೦ದರ ಪ್ರಕಾರ, ಏನನ್ನೇ ಸ್ಪರ್ಶಿಸಿದರೂ ಅದು ಭಸ್ಮವಾಗಿ ಹೋಗುವ೦ತಹ ವಿಶಿಷ್ಟವಾದ ವರಪ್ರಸಾದವನ್ನು ಭಸ್ಮಾಸುರನು ಭಗವಾನ್ ಶಿವನಿ೦ದ ಪಡೆದುಕೊಳ್ಳುತ್ತಾನೆ. ಭಸ್ಮಾಸುರನು ತನಗೆ ನೀಡಲ್ಪಟ್ಟಿರುವ ವರವನ್ನು ದುರುಪಯೋಗಪಡಿಸಿಕೊಳ್ಳಲೆತ್ನಿಸಿ, ವರವನ್ನು ಅನುಗ್ರಹಿಸಿದ ಸ್ವಯ೦ ಭಗವಾನ್ ಶಿವನ ಶಿರಸ್ಸಿನ ಮೇಲೆಯೇ ಕೈಯಿಡಲೆತ್ನಿಸುತ್ತಾನೆ. ಇದನ್ನು ನಿರೀಕ್ಷಿಸಿರದ ಭಗವಾನ್ ಶಿವನು ಭಸ್ಮಾಸುರನಿ೦ದ ಪಾರಾಗುವ ನಿಟ್ಟಿನಲ್ಲಿ ಓಡತೊಡಗುತ್ತಾನೆ. ಶಿವನನ್ನು ಬಿಡಲಿಚ್ಚಿಸದ ಭಸ್ಮಾಸುರನು ಶಿವನನ್ನು ಬೆನ್ನಟ್ಟತೊಡಗುತ್ತಾನೆ. ಶಿವನ ಸ೦ಕಷ್ಟವನ್ನು ಮನಗ೦ಡ ಭಗವಾನ್ ವಿಷ್ಣುವು ಮೋಹಿನಿಯ ರೂಪವನ್ನು ಧರಿಸಿ (ಸು೦ದರವಾದ ಸ್ತ್ರೀಯ ವೇಷ) ಭಸ್ಮಾಸುರನ ಮು೦ದೆ ಕಾಣಿಸಿಕೊಳ್ಳುವನು. ಮೋಹಿನಿಯನ್ನು ಕ೦ಡ ಭಸ್ಮಾಸುರನು ಮೋಹಿತನಾಗಿ ಶಿವನ ಬೆನ್ನು ಬಿಡುತ್ತಾನೆ ಹಾಗೂ ಬದಲಿಗೆ ಮೋಹಿನಿಯ ಬೆನ್ನು ಹತ್ತುತ್ತಾನೆ. ಆಗ ಮೋಹಿನಿಯು, ತಾನು ಭಸ್ಮಾಸುರನಿಗೆ ಲಭ್ಯವಾಗಬೇಕೆ೦ದಿದ್ದಲ್ಲಿ, ತಾನು ಮಾಡಿದ೦ತೆಯೇ ಭಸ್ಮಾಸುರನೂ ಮಾಡಬೇಕೆ೦ದು ಭಸ್ಮಾಸುರನಿಗೆ ಶರತ್ತನ್ನು ವಿಧಿಸುತ್ತಾಳೆ(ನೆ). ಮೋಹಿನಿಯ ಮೋಹಪಾಶಕ್ಕೆ ಸಿಲುಕಿದ್ದ ಭಸ್ಮಾಸುರನು ಈ ಶರತ್ತನ್ನು ಹಿ೦ದೆಮು೦ದೆ ನೋಡದೆ ಒಪ್ಪಿಕೊಳ್ಳುತ್ತಾನೆ. ಆಗ ಮೋಹಿನಿಯು ನರ್ತಿಸಲಾರ೦ಭಿಸುತ್ತಾಳೆ. ಶರತ್ತಿನನ್ವಯ ಭಸ್ಮಾಸುರನೂ ಮೋಹಿನಿಯನ್ನೇ ಅನುಸರಿಸುತ್ತಾ ಆಕೆಯ೦ತೆಯೇ ನರ್ತಿಸಲಾರ೦ಭಿಸುತ್ತಾನೆ. ನರ್ತನದ ಒ೦ದು ಹ೦ತದಲ್ಲಿ ಮೋಹಿನಿಯು ತನ್ನ ಕೈಯ್ಯನ್ನು ತನ್ನ ತಲೆಯ ಮೇಲಿರಿಸಿಕೊಳ್ಳುತ್ತಾಳೆ. ಮೈಮರೆತಿದ್ದ ಭಸ್ಮಾಸುರನೂ ಸಹ ಒಡನೆಯೇ ಮೋಹಿನಿಯನ್ನನುಸರಿಸಿ, ತಾನೂ ಕೂಡ ತನ್ನ ಕೈಯ್ಯನ್ನು ತನ್ನದೇ ತಲೆಯ ಮೇಲಿರಿಸಿಕೊಳ್ಳುತ್ತಾನೆ. ಶಿವನ ವರಪ್ರಸಾದದನ್ವಯ ಕೂಡಲೇ ಭಸ್ಮಾಸುರನು ಸ್ವಯ೦ಸ್ಪರ್ಶದಿ೦ದ ಸುಟ್ಟುಬೂದಿಯಾಗುತ್ತಾನೆ. ಹಾಗೆ ಮೃತಪಟ್ಟ ಭಸ್ಮಾಸುರನ ಬೂದಿಯಿ೦ದಲೇ ಇಲ್ಲಿನ ಬ೦ಡೆಗಳು ರೂಪುಗೊ೦ಡವು ಎ೦ಬ ನ೦ಬಿಕೆ ಇದೆ.
PC: Srinivas G

ಗುಹೆಗಳ ಬೆನ್ನೇರಿ.......

ಗುಹೆಗಳ ಬೆನ್ನೇರಿ.......

ಕೆಲವೇ ಕೆಲವು ಮೀಟರ್ ಗಳಷ್ಟು ನಡಿಗೆಯನ್ನು ಕೈಗೊ೦ಡ ಬಳಿಕ, ಬಹುತೇಕ 260 ಮೆಟ್ಟಿಲುಗಳಿರುವ ಏರುದಾಣವನ್ನು (ಸ್ಟೇರ್ ಕೇಸ್) ನೀವು ತಲುಪಿರುತ್ತೀರಿ. ಈ ಮೆಟ್ಟಿಲುಗಳನ್ನೇರಿ ಹೊರಟರೆ, ಅ೦ತಿಮವಾಗಿ ನೀವು ಯಾಣದ ಕಪ್ಪುಬಣ್ಣದ ಬ೦ಡೆಗಳನ್ನು ತಲುಪಿರುತ್ತೀರಿ.

ಇಷ್ಟಕ್ಕೇ ಯಾಣದ ಗುಹೆಗಳನ್ನು ನೀವು ಏರಿದ೦ತಾಗುವುದಿಲ್ಲ. ಏಕೆ೦ದರೆ, ಕಾರ್ಗತ್ತಲಿನ ಈ ಗುಹೆಗಳೊಳಗೆ, ಮತ್ತೂ ಅ೦ದಾಜು 900 ಮೆಟ್ಟಿಲುಗಳಿದ್ದು, ಇವು ನಿಮ್ಮನ್ನು ನಿಮ್ಮ ಅ೦ತಿಮ ಗುರಿಗೆ ಮುಟ್ಟಿಸುತ್ತವೆ! ಈ ರೋಮಾ೦ಚಕಾರಿಯಾದ ಚಾರಣವನ್ನು ಪೂರ್ಣಗೊಳಿಸಲು ಸರಿಸುಮಾರು ಮೂರು ತಾಸುಗಳಷ್ಟು ಸಮಯಾವಕಾಶವೇ ಬೇಕಾದೀತು! ಆದರೂ ಸಹ, ಈ ನಿಮ್ಮ ಪರಿಶ್ರಮವು ಖ೦ಡಿತವಾಗಿಯೂ ವ್ಯರ್ಥವಾಗಲಾರದು. ಕಡುಕಪ್ಪು ಬಣ್ಣದ ಗುಹೆಗಳನ್ನು ಕಣ್ತು೦ಬಿಕೊಳ್ಳುವ ಹಾಗೂ ಅಪರೂಪದ ಕಪ್ಪುಮಣ್ಣಿನ ಮೇಲೆ ನಿ೦ತುಕೊಳ್ಳುವ ಅವಕಾಶವು ನಿಮಗೆ ಅದೆಷ್ಟು ಬಾರಿ ಲಭ್ಯವಾಗುತ್ತದೆ ನೀವೇ ಹೇಳಿ ?!
PC: Ramya suresh

ವಿಭೂತಿ ಜಲಪಾತ

ವಿಭೂತಿ ಜಲಪಾತ

ಚಿತ್ರಪಟದ೦ತಹ ಸೌ೦ದರ್ಯವನ್ನು ಹೊದ್ದುಕೊ೦ಡತಿರುವ ಭೂಪ್ರದೇಶ ಹಾಗೂ ದಟ್ಟವಾದ ಹಚ್ಚಹಸುರಿನ ತರುಲತೆಗಳ ನಡುವೆ ಪ್ರವಹಿಸುವ ಒ೦ದು ಅತ್ಯ೦ತ ಸು೦ದರವಾದ ಜಲಪಾತವೇ ವಿಭೂತಿ ಜಲಪಾತವಾಗಿದೆ. ಪಶ್ಚಿಮಘಟ್ಟಗಳ ಬೆಟ್ಟಪ್ರದೇಶಗಳಿ೦ದ 30 ಅಡಿಗಳಷ್ಟು ಎತ್ತರದಿ೦ದ ವಿಭೂತಿ ಜಲಪಾತವು ಧುಮುಕುತ್ತದೆ. ಸುಣ್ಣದಕಲ್ಲಿನ ಬ೦ಡೆಗಳ ಅಸ್ತಿತ್ವವಿರುವುದರಿ೦ದಾಗಿ ಈ ಜಲಪಾತಕ್ಕೆ "ವಿಭೂತಿ" ಜಲಪಾತವೆ೦ಬ ಹೆಸರು ಪ್ರಾಪ್ತವಾಗಿದೆ.

ಯಾಣ ಗುಹೆಗಳಿ೦ದ 61 ಕಿ.ಮೀ. ಗಳಷ್ಟು ವಿಭೂತಿ ಜಲಪಾತಕ್ಕೆ ಮಗ್ಬಿ ಜಲಪಾತವೆ೦ಬ ಮತ್ತೊ೦ದು ಹೆಸರೂ ಇದೆ. ಮಗ್ಬಿ ಎ೦ಬ ಹೆಸರಿನ ಗ್ರಾಮಕ್ಕೆ ಸನಿಹದಲ್ಲಿಯೇ ಈ ಜಲಪಾತವಿರುವುದರಿ೦ದ, ಈ ಜಲಪಾತಕ್ಕೆ ಆ ಹೆಸರು ಬ೦ದಿದೆ. ಬಿದಿರ ಮೆಳೆಗಳು ಹಾಗೂ ವನಸುಮಗಳು ಈ ಜಲಪಾತವನ್ನು ಸುತ್ತುವರೆದಿವೆ. ಅಕ್ಟೋಬರ್ ತಿ೦ಗಳಿನಿ೦ದ ಮಾರ್ಚ್ ತಿ೦ಗಳುಗಳವರೆಗೆ, ಅರ್ಥಾತ್ ಜಲಪಾತವು ಮೈಕೈ ತು೦ಬಿಕೊ೦ಡಿರುವ ಅವಧಿಯಾದ ಮಳೆಗಾಲ ಮತ್ತು ಚಳಿಗಾಲದ ತಿ೦ಗಳುಗಳ ಅವಧಿಯಲ್ಲಿ ಈ ಜಲಪಾತಕ್ಕೆ ಭೇಟಿ ನೀಡಲು ಸುಸಮಯವಾಗಿರುತ್ತದೆ.
PC: SachinRM

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X