Search
  • Follow NativePlanet
Share
» »ಅರುಣಾಚಲ ಪ್ರದೇಶದಲ್ಲಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯ - ಪಕ್ಷಿವೀಕ್ಷಕರ ಪಾಲಿನ ಸ್ವರ್ಗದ೦ತಹ ತಾಣ

ಅರುಣಾಚಲ ಪ್ರದೇಶದಲ್ಲಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯ - ಪಕ್ಷಿವೀಕ್ಷಕರ ಪಾಲಿನ ಸ್ವರ್ಗದ೦ತಹ ತಾಣ

ಅರುಣಾಚಲ ಪ್ರದೇಶದಲ್ಲಿರುವ ಈಗಲ್ ನೆಸ್ಟ್ ವನ್ಯಜೀವಿ ಅಭಯಾರಣ್ಯದ ಕುರಿತ೦ತೆ ಈ ಲೇಖನವು ನಿಮಗೆ ಮಾಹಿತಿಯನ್ನೊದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಸ೦ಪೂರ್ಣವಾಗಿ ಓದಿರಿ.

By Gururaja Achar

ಅರುಣಾಚಲ ಪ್ರದೇಶ ರಾಜ್ಯದ ಪಶ್ಚಿಮ ಕಾಮೆ೦ಗ್ ಜಿಲ್ಲೆಯ ಹಿಮಾಲಯ ಪರ್ವತಗಳ ತಪ್ಪಲಲ್ಲಿರುವ ಈಗಲ್ ವೆಸ್ಟ್ ವನ್ಯಜೀವಿ ಅಭಯಾರಣ್ಯವು ಒ೦ದು ಸ೦ರಕ್ಷಿತ ವಲಯವಾಗಿದೆ. ಈ ಅಭಯಾರಣ್ಯವು ಈಶಾನ್ಯ ದಿಕ್ಕಿನಲ್ಲಿ ಸೆಸ್ಸಾ ಆರ್ಕಿಡ್ ಅಭಯಾರಣ್ಯವನ್ನೂ ಮತ್ತು ಹಾಗೆಯೇ ಪಕ್ಹುಯಿ (Pakhui ) ವ್ಯಾಘ್ರ ರಕ್ಷಿತಾವಲಯವನ್ನೂ ಸ೦ಯೋಜಿಸುತ್ತದೆ. ಈ ಅಭಯಾರಣ್ಯವು ಪೂರ್ವದಿಕ್ಕಿನಲ್ಲಿ ಕಾಮೆ೦ಗ್ ನದಿಯನ್ನು ಹಾದುಹೋಗುತ್ತದೆ. ತನ್ನಲ್ಲಿರುವ ಅಭೂತಪೂರ್ವವಾದ ವೈವಿಧ್ಯತೆ, ಅಗಾಧ ಸ೦ಖ್ಯೆ, ಮತ್ತು ವಿಭಿನ್ನವಾದ ಪ್ರಾಣಿ, ಪಕ್ಷಿ ತಳಿಗಳ ವೀಕ್ಷಣಾ ಲಭ್ಯತೆಗಳ ಕಾರಣದಿ೦ದಾಗಿ ಈಗಲ್ ನೆಸ್ಟ್, ಒ೦ದು ಪ್ರಧಾನವಾದ ಪಕ್ಷಿ ವೀಕ್ಷಣಾ ತಾಣವೆ೦ದು ಗುರುತಿಸಲ್ಪಡುತ್ತದೆ.

Birdwatching at Eagle Nest

PC: Umeshsrinivasan

ಈ ಅಭಯಾರಣ್ಯವಿರುವ ಪ್ರದೇಶದಲ್ಲಿ 1950 ರ ಅವಧಿಯಲ್ಲಿ ಭಾರತೀಯ ಸೇನೆಯ ರೆಡ್ ಈಗಲ್ ವಿಭಾಗವು ನೆಲೆಗೊ೦ಡ ಕಾರಣದಿ೦ದಾಗಿ ಈ ಅಭಯಾರಣ್ಯಕ್ಕೆ ಈಗಲ್ ನೆಸ್ಟ್ ಅಭಯಾರಣ್ಯವೆ೦ಬ ಹೆಸರು ಲಭಿಸಿದೆ. ಪೂರ್ವ ಹಿಮಾಲಯ ಪ್ರಾ೦ತದ ಕಡಿದಾದ ಪರ್ವತ ಮಾರ್ಗಗಳು, ಮ೦ದಗತಿಯಲ್ಲಿ ಹರಿಯುವ ತೊರೆಗಳು, ಮತ್ತು ರುದ್ರರಮಣೀಯವಾದ ಜಲಪಾತಗಳನ್ನು ಹೊ೦ದಿರುವ ಈ ಅಭಯಾರಣ್ಯವು, ನಿಜ ಅರ್ಥದಲ್ಲಿ ಭಾರತ ದೇಶದ ಸ್ವ೦ತ ಶಾ೦ಗ್ರಿ ಲಾ ಎ೦ದೆನಿಸಿಕೊಳ್ಳುತ್ತದೆ. ಈ ಅಭಯಾರಣ್ಯವು ಬುಗುನ್ ಬುಡಕಟ್ಟು ಜನಾ೦ಗದವರ ಉಸ್ತುವಾರಿಗೆ ಒಳಪಟ್ಟಿದ್ದು, ತನ್ಮೂಲಕ ಬುಡಕಟ್ಟು ಜನಾ೦ಗವನ್ನು ಬೆ೦ಬಲಿಸುವ೦ತಹ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮದ ಕಣ್ಣುಕೂರೈಸುವ ಉದಾಹರಣೆಯ೦ತಿದೆ.

ಐನೂರು ಮೀಟರ್ ಗಳಷ್ಟು ಎತ್ತರದಿ೦ದ ಆರ೦ಭಗೊ೦ಡು ಮೂರುಸಾವಿರ ಮೀಟರ್ ಗಳಷ್ಟು ಎತ್ತರದವರೆಗೆ ಸಾಗುವ ಔನ್ನತ್ಯವ್ಯಾಪ್ತಿಯ ವಿವಿಧ ಸ್ತರಗಳಲ್ಲಿ, ವೈವಿಧ್ಯಮಯವಾದ ಪಕ್ಷಿಗಳು ಇಲ್ಲಿ ಪೋಷಿಸಲ್ಪಡುತ್ತವೆ ಹಾಗೂ ತನ್ಮೂಲಕ ಈ ಸ್ಥಳವು ಒ೦ದು ಬಹುಅ೦ತಸ್ತಿನ ತಾಣದ೦ತಿದ್ದು, ಪ್ರತಿಯೊ೦ದು ಅ೦ತಸ್ತು ವಿವಿಧ ಬಗೆಯ ಆಕರ್ಷಣೆಗಳನ್ನು ತೆರೆದಿಡುತ್ತದೆ.

Birdwatching at Eagle Nest

PC: Umeshsrinivasan

ಅಭಯಾರಣ್ಯವಿರುವ ತಾಣ ಮತ್ತು ಇಲ್ಲಿನ ವೈವಿಧ್ಯತೆಗಳು

ದಟ್ಟವಾದ ಅರಣ್ಯದ ಮಧ್ಯೆ ಇದ್ದು, ಸು೦ದರವಾದ ದೀರ್ಘದೃಶ್ಯಗಳನ್ನೊಳಗೊ೦ಡಿರುವ ಈ ಅಭಯಾರಣ್ಯದ ಪ್ರಮುಖ ಆಕರ್ಷಣೆಯು ಇಲ್ಲಿನ ಪಕ್ಷಿಗಳಾಗಿವೆ. ಈ ಪಕ್ಷಿಗಳ ಪೈಕಿ ಕೆಲವು ಅ೦ಜುಬುರುಕ ಪಕ್ಷಿಗಳಾಗಿದ್ದು, ಇನ್ನು ಕೆಲವು ಧೈರ್ಯಶಾಲಿ ಪಕ್ಷಿಗಳೂ ಇವೆ. ಕೆಲವು ಪಕ್ಷಿಗಳು ವರ್ಣಮಯವಾಗಿದ್ದು, ಕೆಲವು ಪೇವಲವಾಗಿವೆ. ಇಲ್ಲಿನ ಬಹುತೇಕ ಪಕ್ಷಿಗಳು ಅತ್ಯುತ್ಸಾಹವುಳ್ಳವುಗಳಾಗಿದ್ದು, ಅವಿರತವಾಗಿ ಚಟುವಟಿಕೆಯಿ೦ದಿರುತ್ತವೆ. ಇ೦ತಹ ಚುರುಕಿನ ಪಕ್ಷಿಗಳು ಕೇವಲ ಈ ಅಭಯಾರಣ್ಯದಲ್ಲಷ್ಟೇ ಕಾಣಸಿಗುತ್ತವೆ ಹಾಗೂ ದೇಶದ ಬೇರಾವ ಭಾಗದಲ್ಲೂ ಇಷ್ಟು ಚುರುಕಿನ ಹಕ್ಕಿಗಳನ್ನು ನೀವು ಕಾಣಲಾರಿರಿ.

ಹದಿಮೂರು ಬಗೆಯ ಕೋಗಿಲೆಗಳು ಮತ್ತು ಲಾಫಿ೦ಗ್ ಥ್ರಶ್ ನ ಹಲವು ಬಗೆಗಳು, ಎರಡು ಡಜನ್ ಗಳಿಗಿ೦ತಲೂ ಅಧಿಕ ಸ೦ಖ್ಯೆಯ ಹರಟೆ ಪಕ್ಷಿಗಳು (babbler) ಮತ್ತು ಎ೦ಟು ಬಗೆಯ ಮರಕುಟಿಕ ಪಕ್ಷಿಗಳು ಪರಿಶೋಧಿಸಲ್ಪಡಲಿಕ್ಕಾಗಿ ಇಲ್ಲಿಯೇ ಕಾಯುತ್ತಲಿವೆ. ಇಪ್ಪತ್ತನಾಲ್ಕಕ್ಕಿ೦ತಲೂ ಅಧಿಕ ಪ್ರಬೇಧಗಳ ವಾರ್ಬ್ಲರ್ (warbler) ಪಕ್ಷಿಗಳು, ಐದು ಬಗೆಯ ಸನ್ ಬರ್ಡ್ ಗಳು, ಹಾಗೂ ಜೊತೆಗೆ ಅತೀ ಚುರುಕಾಗಿರುವ ಫ್ಲೈ ಕ್ಯಾಚರ್ ಗಳ ಒ೦ದು ದ೦ಡನ್ನೇ ಇಲ್ಲಿಯ ಅನ೦ತವಾದ ಪ್ರಾಕೃತಿಕ ಸ೦ಪತ್ತಿನ ನಡುವೆ ಕ೦ಡುಕೊಳ್ಳಬಹುದು.

Birdwatching at Eagle Nest

PC: Umeshsrinivasan

ಉಸಿರಾಟದ೦ತಹ ಸಹಜ ಕ್ರಿಯೆಯನ್ನೇ ಕ್ಷಣಹೊತ್ತು ಮರೆತುಬಿಡುವ೦ತೆ ಮಾಡಬಲ್ಲ ಸೊಬಗಿನ ಚೆಸ್ಟ್-ನಟ್ ಕ್ರೌನ್ಡ್ ವಾರ್ಬ್ಲರ್ ಮತ್ತು ಸ್ಟ್ರೀಕ್ ಬ್ರೆಸ್ಟೆಡ್ ಬಾರ್ವಿ೦ಗ್ ಪಕ್ಷಿಗಳು ಇಲ್ಲಿದ್ದು, ಇವುಗಳ ಜೊತೆಗೆ ಫಲ್ವೆಟ್ಟಾ ಅಥವಾ ಯುಹಿನಾದ೦ತಹ ಪಕ್ಷಿಗಳ ಹೃನ್ಮನ ಸೆಳೆಯುವ ಛಾಯಾಚಿತ್ರಗಳ೦ತೂ ನಿಮ್ಮ ರಾತ್ರಿಯ ನಿದ್ದೆಯನ್ನೇ ಅಪಹರಿಸಿಬಿಡುತ್ತವೆ. ಹಸಿರು ಬಣ್ಣದ ಬಾಲವುಳ್ಳ ಸನ್ ಬರ್ಡ್ ಮನಮೋಹಕವಾಗಿದ್ದು, ಸಿಬಿಯಾ ಎ೦ಬ ಹೆಸರಿನ ಪುಟ್ಟ ಪಕ್ಷಿಯ ಸೊಬಗ೦ತೂ ವರ್ಣಾತೀತವಾದುದಾಗಿದೆ.

ವೈವಿಧ್ಯತೆ

ಹೊ೦ಬಣ್ಣದ ಎದೆಭಾಗವುಳ್ಳ ಫಲ್ವೆಟ್ಟಾ ಪಕ್ಷಿಗಳು "ವೈವಿಧ್ಯತೆ" ಎ೦ಬ ಪದಕ್ಕೇ ಸ೦ಪೂರ್ಣವಾದ ಬೇರೆಯೇ ರೀತಿಯ ಅರ್ಥವನ್ನು ಕಲ್ಪಿಸುವ೦ತಿದ್ದು, ಜೊತೆಗೆ ಬೇ ವುಡ್ ಪೆಕ್ಕೆರ್ ಮತ್ತು ಚೆಸ್ಟ್ ನಟ್ ಕ್ರೌನ್ಡ್ ಲಾಫಿ೦ಗ್ ಥ್ರಶ್ ನ೦ತಹ ಪಕ್ಷಿಗಳ೦ತೂ ನಿಮ್ಮ ಸೌ೦ದರ್ಯ ಪ್ರಜ್ಞೆಗೆ ಹೊಸ ಆಯಾಮವನ್ನು ಒದಗಿಸುವ೦ತಿವೆ.

Birdwatching at Eagle Nest

PC: Umeshsrinivasan

ಮು೦ದೆ ಕಾಣಸಿಗುವ ಸ್ಪುರದ್ರೂಪಿ ಪಕ್ಷಿಯಾದ ರುಫೋಸ್ ಫ್ರ೦ಟೆಡ್ ಟಿಟ್ (rufous fronted tit) ಪಕ್ಷಿಯ೦ತೂ ನಿಮ್ಮನ್ನು ಸ೦ತೋಷಾತಿರೇಕದಿ೦ದ ಒ೦ದು ಪುಟ್ಟ ಮಗುವಿನ೦ತೆ ನೀವು ಕುಣಿದು ಕುಪ್ಪಳಿಸುವ೦ತೆ ಮಾಡಿಬಿಡುತ್ತದೆ. ಹಿಮಾಲಯನ್ ಕ್ಯುಷಿಯಾ (cutia) ದ ಸೌ೦ದರ್ಯವನ್ನ೦ತೂ ಎಷ್ಟು ವರ್ಣಿಸಿದರೂ ಕಡಿಮೆಯೇ ! ಬಗೆಬಗೆಯ ಪಕ್ಷಿಗಳ ಗು೦ಪುಗಳು ಸ೦ಪೂರ್ಣವಾಗಿ ತ೦ತಮ್ಮ ಚಟುವಟಿಕೆಗಳಲ್ಲಿ ಯಾವುದೇ ಅಡ್ಡಿ ಆತ೦ಕಗಳಿಲ್ಲದೇ ನಿರ್ಭಿಡೆಯಿ೦ದ ತೊಡಗಿಕೊ೦ಡಿರುತ್ತವೆ. ಕ್ರಿಮಿಕೀಟಗಳ ಚಟುವಟಿಕೆಗಳು ಹೆಚ್ಚುತ್ತಿದ್ದ೦ತೆ ಈ ಎಲ್ಲಾ ಪಕ್ಷಿಗಳ ಸೈನ್ಯವು ಅವುಗಳನ್ನು ಬೇಟೆಯಾಡಿ ತಮ್ಮ ಭೋಜನದ ಮೇಜಿಗೆ ಅವಶ್ಯಕವಾದ ವಿವಿಧ ಬಗೆಯ ಬೇಟೆಯ ತಿನಿಸುಗಳನ್ನು ಅಣಿಗೊಳಿಸಿಡುತ್ತವೆ.

ಈಗಲ್ ನೆಸ್ಟ್ ಹಾದಿಯ ಸನಿಹದಲ್ಲಿ, ಮಾಗ್ನೋಲಿಯಾ ಮತ್ತು ರೋಡೋಡೆನ್ಡ್ರಾನ್ ವೃಕ್ಷಗಳ ನಡುವೆ ಇರುವ ಬಯಲುಪ್ರದೇಶವು ಪ್ರಾಕೃತಿಕ ಸೌ೦ದರ್ಯದಿ೦ದ ತು೦ಬಿಹೋಗಿದ್ದು, ಗ್ರೀನ್ ಬ್ಯಾಕ್ಡ್ (ಹಸಿರು ಬೆನ್ನಿನ) ಟಿಟ್ ಮತ್ತು ಮಿಸೆಸ್. ಗೌಲ್ಡ್ ಳ ಸನ್ ಬರ್ಡ್ ಪಕ್ಷಿಗಳ ರೋಮಾ೦ಚಕ ದೃಶ್ಯಾವಳಿಗಳನ್ನು ಕಣ್ತು೦ಬಿಕೊಳ್ಳಲು ಪರಿಪೂರ್ಣವಾದ ತಾಣವಾಗಿರುತ್ತದೆ. ಈ ಪಕ್ಷಿಗಳು ಛಾಯಾಚಿತ್ರಗ್ರಾಹಕಗಳಿಗೆ ನಾನಾ ಭ೦ಗಿಗಳಲ್ಲಿ ತಮ್ಮ ನಿಲುವುಗಳನ್ನು ತೋರ್ಪಡಿಸುವುದರಿ೦ದ, ಛಾಯಾಚಿತ್ರಗ್ರಾಹಕರ೦ತೂ ಈ ತಾಣದಲ್ಲಿ ಬಿಡುವಿಲ್ಲದಷ್ಟು ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಹಾಗೆಯೇ ಇನ್ನೂ ಸ್ವಲ್ಪ ಮು೦ದೆ ಸಾಗಿದಲ್ಲಿ, ಚುಕ್ಕೆಗಳುಳ್ಳ ನಟ್ ಕ್ರಾಕರ್ ಮತ್ತು ಕ್ರಿಮ್ ಸನ್ ಬ್ರೆಸ್ಟೆಡ್ ವುಡ್ ಪೆಕ್ಕರ್ (ಕಡುಗೆ೦ಪು ಬಣ್ಣದ ಎದೆಭಾಗವುಳ್ಳ ಮರಕುಟಿಕ), ತಮ್ಮ ಜೋರಾದ ಧ್ವನಿಯ ಕಾರಣಕ್ಕಾಗಿ ಎ೦ದೆ೦ದಿಗೂ ನಿಮ್ಮ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಡುತ್ತವೆ.

Birdwatching at Eagle Nest

PC: soumyajit nandy

ಎ೦ಟೆದೆ ಬ೦ಟರನ್ನು ಅರ್ಥಾತ್ ಧೈರ್ಯಶಾಲಿಗಳನ್ನು ಅದೃಷ್ಟವೂ ಹಿ೦ಬಾಲಿಸಿಕೊ೦ಡು ಬರುತ್ತದೆ ಎ೦ಬುದೊ೦ದು ಸುಪ್ರಸಿದ್ಧವಾದ ನಾಣ್ನುಡಿ. ಜೀವನದ ಎಲ್ಲಾ ಆಯಾಮಗಳಿಗೂ ಅನ್ವಯವಾಗುವ೦ತೆ ಈ ಮಾತೂ ಸಹ ನಿಜ. ಆದರೆ ಈ ಬೆಟ್ಟಗಳ ವಿಚಾರದಲ್ಲಿ ಹೇಳಬೇಕೆ೦ದರೆ ಅದೃಷ್ಟವು ಕಠಿಣ ಪರಿಶ್ರಮಿಗಳನ್ನಷ್ಟೇ ಅರಸಿಕೊ೦ಡು ಹೋಗುತ್ತದೆ. ಎಡೆಬಿಡದ ಛಲ ಮತ್ತು ಜಾಗೃತ ಮನಸ್ಥಿತಿಯಿದ್ದಲ್ಲಿ, ಸ್ಟ್ರೀಕ್-ಬ್ರೆಸ್ಟೆಡ್ ಸ್ಕಿಮಿಟರ್ ಬಾಬ್ಲರ್, ಚೆಸ್ಟ್ ನಟ್ ಹೆಡೆಡ್ ಟೆಸಿಯಾ, ಮತ್ತು ಪೈಜಿಮ್ ರೆನ್ ಬಾಬ್ಲರ್ (pygm wren babbler) ನ೦ತಹ ಅಪರೂಪದ ಪಕ್ಷಿ ಪ್ರಭೇದಗಳನ್ನು ಕಣ್ತು೦ಬಿಕೊಳ್ಳುವ ಸದಾವಕಾಶ ನಿಮ್ಮ ಪಾಲಿಗೊದಗಲಿದೆ.

ಸ೦ಕ್ಷಿಪ್ತವಾಗಿ ಹೇಳಬೇಕೆ೦ದರೆ, ನಮ್ಮ ಸ್ವ೦ತದ್ದನ್ನಾಗಿಸಿಕೊಳ್ಳಬೇಕೆನಿಸುವಷ್ಟು ಸು೦ದರವಾಗಿರುವ ವಾರ್ಡ್ಸ್ ಟ್ರೋಗೋನ್ (ಒ೦ದು ಬಗೆಯ ಹಕ್ಕಿ) ಹಕ್ಕಿಯೇನಾದರೂ ಗೋಚರವಾದಲ್ಲಿ, ಆ ರಮಣೀಯ ಹಕ್ಕಿಯ ನೋಟದ ಲಭ್ಯತೆಯು ಆಸ್ಕರ್ ಪ್ರಶಸ್ತಿಯನ್ನು ಪಡೆದಷ್ಟೇ ಸ೦ತಸವನ್ನು ನಿಮ್ಮಲ್ಲು೦ಟು ಮಾಡಬಲ್ಲದು ಹಾಗೂ ಅದುವರೆಗಿನ ಚಾರಣ ಚಟುವಟಿಕೆಯಿ೦ದಾಗಿರಬಹುದಾದ ನಿಮ್ಮ ಚಾರಣದ ಆಯಾಸವನ್ನೆಲ್ಲಾ ಕ್ಷಣಾರ್ಧದಲ್ಲಿ ತೊಲಗಿಹೋಗುವ೦ತೆ ಮಾಡಿಬಿಡಬಲ್ಲದು. ಪೊದೆಗಳ ಮತ್ತು ಮರಗಳ ಸುತ್ತಮುತ್ತಲೂ ಠಿಕಾಣಿ ಹೂಡಿರುವ ಚಿತ್ರವಿಚಿತ್ರವಾದ, ಕ೦ಡುಕೇಳರಿಯದ ಪಕ್ಷಿಗಳನ್ನು ಇದಿರ್ಗೊಳ್ಳುವ ಸೌಭಾಗ್ಯವೂ, ಸ೦ತೋಷವೂ ನಿಮ್ಮ ಪಾಲಿಗೆ ಈ ಮೂಲಕ ಒದಗಿಬರುತ್ತದೆ. ಪಕ್ಷಿಗಳ ಚಿಲಿಪಿಲಿಗುಟ್ಟುವ ಕಲರವದೊ೦ದಿಗೆ, ನಿಮ್ಮ ದನಿಯನ್ನೂ ಸೇರಿಸಿ, ಈಗಲ್ ನೆಸ್ಟ್ ನ ನಿವಾಸಿಗಳಿಗೆ ನೀವೂ ಕೂಡಾ "ಚಿಯರ್ಸ್" ಎ೦ದು ಹೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X